ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 11 ಜುಲೈ
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 11 ಜುಲೈ 2027
ಭಾನುವಾರ · ಸಾಮಾನ್ಯ ಕಾಲದ 15ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 15ನೇ ಭಾನುವಾರ
ಭಾನುವಾರ · ಆರಾಧನಾ ಬಣ್ಣ: ಹಸಿರು
ದಿನದ ವಾಚನಗಳು
ಮೊದಲನೆಯ ವಾಚನ
12ಅನಂತರ ಅಮಚ್ಯನು ಆಮೋಸನಿಗೆ, “ಕಣಿ ಹೇಳುವವನೇ, ಯೆಹೂದ ದೇಶಕ್ಕೆ ಓಡಿಹೋಗು. ಅಲ್ಲಿಯೇ ರೊಟ್ಟಿತಿಂದು ಪ್ರವಾದಿಸು. 13ಆದರೆ ಬೇತೇಲಿನಲ್ಲಿ ಇನ್ನು ಪ್ರವಾದನೆ ಮಾಡಬೇಡ. ಇದು ರಾಜಕೀಯ ಪವಿತ್ರಾಲಯ, ಇದು ಅರಮನೆ” ಎಂದು ಹೇಳಿದನು. 14ಆಮೋಸನು ಅಮಚ್ಯನಿಗೆ ಪ್ರತ್ಯುತ್ತರವಾಗಿ, “ನಾನು ಪ್ರವಾದಿಯಲ್ಲ, ಪ್ರವಾದಿಯ ಮಗನೂ ಅಲ್ಲ. ಆದರೆ ನಾನು ಕುರುಬನು, ಅತ್ತಿಹಣ್ಣುಗಳನ್ನು ಕೂಡಿಸುವವನೂ ಆಗಿದ್ದೇನೆ. 15ಯೆಹೋವನು ನನ್ನನ್ನು ಮಂದೆ ಕಾಯುವವರಿಂದ ತಪ್ಪಿಸಿ, ‘ನೀನು ಹೋಗಿ ನನ್ನ ಜನರಾದ ಇಸ್ರಾಯೇಲರಿಗೆ ಪ್ರವಾದನೆ ಮಾಡು’ ಎಂದು ನನಗೆ ಅಪ್ಪಣೆ ಕೊಟ್ಟನು.
ಪ್ರತಿವಚನ ಕೀರ್ತನೆ
8ಯೆಹೋವ ದೇವರು ಏನು ಹೇಳುತ್ತಾನೋ ಕೇಳುತ್ತೇನೆ. ಆತನು ತನ್ನ ಭಕ್ತಜನರಿಗೆ ಸಮಾಧಾನದ ವಾಕ್ಯವನ್ನು ಹೇಳುತ್ತಾನಲ್ಲಾ. ಅವರಾದರೋ ತಿರುಗಿ ಮೂರ್ಖತನದಲ್ಲಿ ಬೀಳದಿರಲಿ. 9ಭಯಭಕ್ತಿಯುಳ್ಳ ಜನರಿಗೆ ಆತನ ರಕ್ಷಣೆಯು ಹತ್ತಿರವಿರುವುದು ಸತ್ಯ. ಇದರಿಂದ ಆತನ ಮಹಿಮೆ ನಮ್ಮ ದೇಶದಲ್ಲಿ ನೆಲೆಗೊಳ್ಳುವುದು. 10ಆತನ ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆ ಒಂದನ್ನೊಂದು ಕೂಡಿರುವವು; ನೀತಿಯು, ಸಮಾಧಾನವು ಮುದ್ದಿಟ್ಟುಕೊಳ್ಳುವವು. 11ಸತ್ಯತೆಯು ಭೂಮಿಯಿಂದ ಹುಟ್ಟುವುದು; ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವುದು. 12ನಿಜವಾಗಿ ಯೆಹೋವನು ಒಳ್ಳೆಯದನ್ನು ಅನುಗ್ರಹಿಸುವನು; ನಮ್ಮ ದೇಶವು ತನ್ನ ಬೆಳೆ ಕೊಡುವುದು. 13ನೀತಿಯು ಆತನ ಮುಂದೆ ಹೋಗುತ್ತಾ, ನಾವು ಆತನ ಹೆಜ್ಜೆಹಿಡಿದು ನಡೆಯುವಂತೆ ದಾರಿ ಮಾಡುವುದು.
ಎರಡನೆಯ ವಾಚನ
3ನಮ್ಮ ಕರ್ತನಾದ ಯೇಸುಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ, ಆತನು ಪರಲೋಕದಲ್ಲಿನ ಸಕಲ ಆತ್ಮೀಕ ಆಶೀರ್ವಾದಗಳನ್ನು ನಮಗೆ ಕ್ರಿಸ್ತನಲ್ಲಿ ಅನುಗ್ರಹಿಸಿದ್ದಾನೆ. 4ನಾವು ಆತನ ಸನ್ನಿಧಿಯಲ್ಲಿ ಪರಿಶುದ್ಧರೂ ದೋಷವಿಲ್ಲದವರೂ ಆಗಿರಬೇಕೆಂದು, ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ದೇವರು ಕ್ರಿಸ್ತನಲ್ಲಿ ನಮ್ಮನ್ನು ಆರಿಸಿಕೊಂಡನು. 5ದೇವರು ತನ್ನ ದಯಾಪೂರ್ವಕವಾದ ಚಿತ್ತಕ್ಕನುಸಾರವಾಗಿ ಯೇಸು ಕ್ರಿಸ್ತನ ಮೂಲಕ ನಮ್ಮನ್ನು ತನ್ನ ಮಕ್ಕಳನ್ನಾಗಿ ಅಂಗೀಕರಿಸಲು ಪ್ರೀತಿಯಿಂದ ಮೊದಲೇ ಸಂಕಲ್ಪಮಾಡಿದ್ದನು. 6ತನ್ನ ಪ್ರಿಯನಲ್ಲಿಯೇ ನಮಗೆ ಉಚಿತವಾಗಿ ಅನುಗ್ರಹಿಸಿರುವ ತನ್ನ ಮಹಿಮೆಯುಳ್ಳ ಕೃಪೆಯ ಸ್ತುತಿಗಾಗಿ ಇದೆಲ್ಲಾವನ್ನು ಮಾಡಿದನು. 7ಯೇಸುಕ್ರಿಸ್ತನು ನಮಗೋಸ್ಕರ ಸುರಿಸಿದ ರಕ್ತದ ಮೂಲಕ ನಮಗೆ ಆತನ ಕೃಪೆಯ ಐಶ್ವರ್ಯಕ್ಕನುಸಾರವಾಗಿ ಪಾಪ ಕ್ಷಮಾಪಣೆಯೆಂಬ ವಿಮೋಚನೆಯು ಉಂಟಾಯಿತು. 8ಈ ಕೃಪೆಯನ್ನು ಆತನು ಎಲ್ಲಾ ಜ್ಞಾನ ವಿವೇಕಗಳೊಂದಿಗೆ ನಮಗೆ ಹೇರಳವಾಗಿ ಸುರಿಸಿದ್ದಾನೆ. 9ದೇವರು ಆತನಲ್ಲಿ ಮೊದಲೇ ನಿರ್ಣಯಿಸಿಕೊಂಡಿದ್ದ ಕೃಪೆಯುಳ್ಳ ಸಂಕಲ್ಪದ ಪ್ರಕಾರ ತನ್ನ ಚಿತ್ತದ ರಹಸ್ಯವನ್ನು ನಮಗೆ ತಿಳಿಯಪಡಿಸಿದ್ದಾನೆ. 10ಕಾಲವು ಪರಿಪೂರ್ಣವಾದಾಗ, ಆತನು ಭೂಪರಲೋಕಗಳಲ್ಲಿರುವ ಸಮಸ್ತವನ್ನು ಕ್ರಿಸ್ತನಲ್ಲಿ ಒಂದುಗೂಡಿಸುವುದೇ ಆ ಸಂಕಲ್ಪವಾಗಿತ್ತು. 11ಇದಲ್ಲದೆ ತನ್ನ ಚಿತ್ತದ ಉದ್ದೇಶಕ್ಕನುಸಾರವಾಗಿ ಎಲ್ಲಾ ಕಾರ್ಯಗಳನ್ನು ನಡೆಸುವಾತನು ತನ್ನ ಸಂಕಲ್ಪದ ಪ್ರಕಾರ ಮೊದಲೇ ನೇಮಿಸಲ್ಪಟ್ಟವರಾದ ನಮ್ಮನ್ನು ಕ್ರಿಸ್ತನಲ್ಲಿ ತನ್ನ ಸ್ವಕೀಯ ಜನರನ್ನಾಗಿ ಅರಿಸಿಕೊಂಡನು. 12ಕ್ರಿಸ್ತನಲ್ಲಿ ಮೊಟ್ಟ ಮೊದಲು ನಿರೀಕ್ಷೆಯನ್ನಿಟ್ಟ ನಾವು ಆತನ ಮಹಿಮೆಯನ್ನು ಸ್ತುತಿಸುವವರಾಗಿರಬೇಕೆಂದು ಹೀಗೆ ಮಾಡಿದನು. 13ನೀವು ಸಹ ನಿಮ್ಮ ರಕ್ಷಣಾ ಸುವಾರ್ತೆಯ ಸತ್ಯವಾಕ್ಯವನ್ನು ಕೇಳಿ, ಕ್ರಿಸ್ತನಲ್ಲಿ ನಂಬಿಕೆಯಿಟ್ಟು, ವಾಗ್ದಾನಮಾಡಲ್ಪಟ್ಟ ಪವಿತ್ರಾತ್ಮನಿಂದ ಮುದ್ರೆಯನ್ನು ಹೊಂದಿದ್ದೀರಿ. 14ದೇವರು ತನ್ನ ಸ್ವಕೀಯ ಜನರಿಗೆ ವಿಮೋಚನೆಯುಂಟಾಗುತ್ತದೆ ಎಂಬುದಕ್ಕೆ ಪವಿತ್ರಾತ್ಮನು ನಮ್ಮ ಬಾಧ್ಯತೆಗೆ ಸಂಚಕಾರವಾಗಿದ್ದಾನೆ. ಈ ಕಾರಣ ದೇವರಿಗೆ ಮಹಿಮೆಯನ್ನು ಸಲ್ಲಿಸೋಣ.
ಸುವಾರ್ತೆ
7ತಾನು ಆಯ್ಕೆಮಾಡಿಕೊಂಡ ಹನ್ನೆರಡು ಮಂದಿ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದನು. ಕಳುಹಿಸುವಾಗ ಆತನು ಅವರಿಗೆ ದೆವ್ವಗಳ ಮೇಲೆ ಅಧಿಕಾರ ಕೊಟ್ಟು, 8“ಕೋಲು ಹೊರತು ಪ್ರಯಾಣಕ್ಕೆ ಏನೂ ತೆಗೆದುಕೊಂಡು ಹೋಗಬೇಡಿರಿ; ಬುತ್ತಿ, ಚೀಲ, ಸೊಂಟಪಟ್ಟಿಯಲ್ಲಿ ಹಣ ಬೇಡ. 9ಚಪ್ಪಲಿಗಳನ್ನು ಹಾಕಿಕೊಳ್ಳಬಹುದು, ಆದರೆ ಎರಡು ಅಂಗಿಗಳನ್ನು ಧರಿಸಬೇಡಿರಿ” ಎಂದು ಅಪ್ಪಣೆಕೊಟ್ಟನು. 10ಇದಲ್ಲದೆ ಆತನು ಅವರಿಗೆ, “ನೀವು ಎಲ್ಲಿಯಾದರೂ ಒಂದು ಮನೆಗೆ ಹೋದಾಗ ಆ ಸ್ಥಳದಿಂದ ಹೊರಡುವವರೆಗೂ ಅಲ್ಲೇ ಉಳಿದುಕೊಳ್ಳಿರಿ. 11ಮತ್ತು ಯಾವ ಸ್ಥಳದವರಾದರೂ ನಿಮ್ಮನ್ನು ಸೇರಿಸಿಕೊಳ್ಳದೆಯೂ ನೀವು ಹೇಳುವುದನ್ನು ಕೇಳದೆಯೂ ಹೋದರೆ ಆ ಸ್ಥಳದಿಂದ ಹೊರಡುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ; ಅದು ಅವರ ವಿರುದ್ಧ ಸಾಕ್ಷಿಯಾಗಿರಲಿ” ಎಂದು ಹೇಳಿದನು. 12ಅವರು ಹೊರಟು ಹೋಗಿ ಜನರಿಗೆ, “ನೀವು ನಿಮ್ಮ ಪಾಪಗಳನ್ನು ಬಿಟ್ಟು ಮಾನಸಾಂತರ ಹೊಂದಬೇಕು” ಎಂದು ಸಾರಿ ಹೇಳಿದರು. 13ಅನೇಕ ದೆವ್ವಗಳನ್ನು ಬಿಡಿಸಿ ಅನೇಕ ರೋಗಿಗಳಿಗೆ ಎಣ್ಣೆ ಹಚ್ಚಿ ಗುಣಪಡಿಸಿದರು.
ಇಂದಿನ ಸಂತರು
- ಸಂತ ಬೆನೆಡಿಕ್ಟ್, ಮಠಾಧಿಪತಿ
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು