ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮೇ 2027 › 26 ಮೇ
ಆರ್ಥೊಡಾಕ್ಸ್ ಪಂಚಾಂಗ · ಮೇ 13 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 26 ಮೇ 2027
ಬುಧವಾರ · ಪಾಸ್ಕದ ನಾಲ್ಕನೆಯ ವಾರ · ಸ್ವರ 3
ಹಬ್ಬಗಳು ಮತ್ತು ಸಂತರು
ಪಂಚಾಶತ್ತಮದ ಮಧ್ಯಹಬ್ಬ
ಉಪವಾಸದ ದಿನ
ಮೀನಿಗೆ ಅನುಮತಿ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಸಂಧ್ಯಾ ಪ್ರಾರ್ಥನೆ: ವಾಚನ
2ಹೊರಟುಬಂದ ಬಹು ದೇಶಗಳವರು, “ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ ಹೋಗೋಣ, ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು” ಎಂದು ಹೇಳುವರು. ಏಕೆಂದರೆ ಚೀಯೋನಿನಿಂದ ಧರ್ಮೋಪದೇಶವೂ, ಯೆರೂಸಲೇಮಿನಿಂದ ಯೆಹೋವನ ವಾಕ್ಯವೂ ಹೊರಡುವವು. 3ಆತನು ಬಹು ರಾಷ್ಟ್ರದವರ ವ್ಯಾಜ್ಯಗಳನ್ನು ವಿಚಾರಿಸುವನು, ಪ್ರಬಲ ಜನಾಂಗಗಳಿಗೆ ನ್ಯಾಯತೀರಿಸುವನು. ಅವರೋ ತಮ್ಮ ಕತ್ತಿಗಳನ್ನು ಕುಲುಮೆಗೆ ಹಾಕಿ ಗುಳಗಳನ್ನಾಗಿಯೂ, ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು. ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು. ಇನ್ನು ಯುದ್ಧಾಭ್ಯಾಸವು ನಡೆಯುವುದೇ ಇಲ್ಲ. 5ಅನ್ಯಜನಾಂಗಗಳು ತಮ್ಮ ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತವೆ. ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತದವರೆಗೆ ನಡೆಯುವೆವು. 6:2ಬೆಟ್ಟಗಳೇ ಯೆಹೋವನ ವ್ಯಾಜ್ಯವನ್ನು ಕೇಳಿರಿ. ಭೂಮಿಯ ಶಾಶ್ವತವಾದ ಅಸ್ತಿವಾರಗಳೇ, ಕಿವಿಗೊಡಿರಿ. ಯೆಹೋವನಿಗೆ ಆತನ ಪ್ರಜೆಯ ಮೇಲೆ ವ್ಯಾಜ್ಯವಿದೆ. ಆತನು ಇಸ್ರಾಯೇಲಿನೊಂದಿಗೆ ವಿವಾದಿಸುತ್ತಾನೆ.” 3“ನನ್ನ ಪ್ರಜೆಯೇ, ನಾನು ನಿನಗೇನು ಮಾಡಿದೆನು? ನಿನ್ನನ್ನು ಯಾವ ವಿಷಯದಲ್ಲಿ ಬೇಸರಗೊಳಿಸಿದೆನು? ನನ್ನ ಮೇಲೆ ಸಾಕ್ಷಿಹೇಳು. 4ನಾನು ನಿನ್ನನ್ನು ಐಗುಪ್ತದೇಶದೊಳಗಿಂದ ಪಾರುಮಾಡಿ ದಾಸತ್ವದಿಂದ ಬಿಡಿಸಿದೆನು. ಮೋಶೆಯನ್ನೂ, ಆರೋನನನ್ನೂ ಮತ್ತು ಮಿರ್ಯಾಮಳನ್ನೂ ನಿನಗೆ ನಾಯಕರನ್ನಾಗಿ ಕಳುಹಿಸಿದೆನು. 5ನನ್ನ ಜನರೇ, ಮೋವಾಬಿನ ಅರಸನಾದ ಬಾಲಾಕನು ಕೊಟ್ಟ ಸಲಹೆಯನ್ನೂ ಮತ್ತು ಬೆಯೋರನ ಮಗನಾದ ಬಿಳಾಮನು ಹೇಳಿದ ಉತ್ತರವನ್ನೂ ಜ್ಞಾಪಕಮಾಡಿಕೊಳ್ಳಿರಿ. ಯೆಹೋವನ ಧರ್ಮಕಾರ್ಯಗಳು ನಿಮ್ಮ ಗ್ರಹಿಕೆಗೆ ಬರುವ ಹಾಗೆ ನೀವು ಶಿಟ್ಟೀಮನ್ನು ಬಿಟ್ಟಂದಿನಿಂದ ಗಿಲ್ಗಾಲನ್ನು ಸೇರುವ ತನಕ ನಡೆದದ್ದನ್ನೆಲ್ಲಾ ಸ್ಮರಿಸಿಕೊಳ್ಳಿರಿ. 8ಮನುಷ್ಯನೇ, ಒಳ್ಳೆಯದು ಇಂಥದ್ದೇ ಎಂದು ಯೆಹೋವನು ನಿನಗೆ ತೋರಿಸಿದ್ದಾನಲ್ಲವೇ. ನ್ಯಾಯವನ್ನು ಆಚರಿಸುವುದು, ಕರುಣೆಯಲ್ಲಿ ಆಸಕ್ತನಾಗಿರುವುದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವುದು ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು? 5:4ಆತನು ಯೆಹೋವನ ಬಲವನ್ನೂ, ತನ್ನ ದೇವರಾದ ಯೆಹೋವನ ನಾಮದ ಮಹಿಮೆಯನ್ನೂ ಹೊಂದಿದವನಾಗಿ ನಿಂತು ತನ್ನ ಹಿಂಡನ್ನು ಮೇಯಿಸುವನು. ಆ ಹಿಂಡು ನೆಮ್ಮದಿಯಾಗಿ ನೆಲೆಗೊಂಡಿರುವುದು. ಆತನು ಭೂಮಿಯ ಕಟ್ಟಕಡೆಯವರೆಗೂ ಪ್ರಬಲನಾಗಿರುವನು. 5ಆತನೇ ನಮಗೆ ಸಮಾಧಾನಪ್ರದನು. ಅಶ್ಶೂರ್ಯರು ನಮ್ಮ ದೇಶದಲ್ಲಿ ನುಗ್ಗಿ, ನಮ್ಮ ಅರಮನೆಗಳನ್ನು ತುಳಿದುಹಾಕುವಾಗ, ನಾವು ಅವರಿಗೆ ವಿರುದ್ಧವಾಗಿ ಏಳು ಪಾಲಕರನ್ನು ಹೌದು ಎಂಟು ಪುರುಷಶ್ರೇಷ್ಠರನ್ನು ನೇಮಿಸುವೆವು.
ಸಂಧ್ಯಾ ಪ್ರಾರ್ಥನೆ: ವಾಚನ
1“ಎಲೈ, ಬಾಯಾರಿದ ಸಕಲಜನರೇ, ನೀರಿನ ಬಳಿಗೆ ಬನ್ನಿರಿ, ಹಣವಿಲ್ಲದವನು ಸಹ ಬರಲಿ! ಬನ್ನಿರಿ, ಕೊಂಡುಕೊಳ್ಳಿರಿ, ಊಟ ಮಾಡಿರಿ! ಬಂದು ದ್ರಾಕ್ಷಾರಸವನ್ನೂ, ಹಾಲನ್ನೂ ಹಣಕೊಡದೆ, ಕ್ರಯವಿಲ್ಲದೆ ತೆಗೆದುಕೊಳ್ಳಿರಿ. 12:3ಮತ್ತು ರಕ್ಷಣೆಯೆಂಬ ಬಾವಿಗಳಿಂದ ಉಲ್ಲಾಸದೊಡನೆ ನೀವು ನೀರನ್ನು ಸೇದುವಿರಿ. 4ಆ ದಿನದಲ್ಲಿ ನೀವು ಹೇಳುವುದೇನೆಂದರೆ, “ಯೆಹೋವನಿಗೆ ಕೃತಜ್ಞತಾ ಸ್ತುತಿಮಾಡಿರಿ, ಆತನ ನಾಮದ ಮಹತ್ವವನ್ನು ವರ್ಣಿಸಿರಿ, ಜನಾಂಗಗಳಲ್ಲಿ ಆತನ ಕೃತ್ಯಗಳನ್ನು ಪ್ರಸಿದ್ಧಿಪಡಿಸಿರಿ, ಆತನ ನಾಮವು ಉನ್ನತೋನ್ನತ ಎಂದು ಜ್ಞಾಪಕಪಡಿಸಿರಿ. 55:2ಆಹಾರವಲ್ಲದ್ದಕ್ಕೆ ಹಣವನ್ನು ಏಕೆ ವ್ಯರ್ಥ ಮಾಡುತ್ತೀರಿ? ತೃಪ್ತಿಗೊಳಿಸದ ಪದಾರ್ಥಕ್ಕೆ ನಿಮ್ಮ ದುಡಿತವನ್ನು ವೆಚ್ಚಮಾಡುವುದೇಕೆ? ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ, ಒಳ್ಳೆಯದನ್ನೇ ಉಂಡು ಮೃಷ್ಟಾನ್ನದಲ್ಲಿ ಆನಂದಪಡಿರಿ. 3ಕಿವಿಯನ್ನು ನನ್ನ ಕಡೆಗೆ ತಿರುಗಿಸಿರಿ, ನನ್ನ ಬಳಿಗೆ ಬನ್ನಿರಿ; ಆಲಿಸಿದರೆ ಬದುಕಿ ಬಾಳುವಿರಿ. ನಾನು ದಾವೀದನಿಗೆ ಖಂಡಿತವಾಗಿ ವಾಗ್ದಾನಮಾಡಿದ ಕೃಪಾವರಗಳನ್ನು ನಿಮಗೆ ಕೊಡುತ್ತೇನೆ” ಎಂಬ ಶಾಶ್ವತವಾದ ಒಡಂಬಡಿಕೆಯನ್ನು ನಿಮ್ಮೊಂದಿಗೆ ಮಾಡಿಕೊಳ್ಳುವೆನು. 4ಇಗೋ, ನಾನು ಅವನನ್ನು ಜನಾಂಗಗಳಿಗೆ ಸಾಕ್ಷಿಯನ್ನಾಗಿಯೂ, ನಾಯಕನನ್ನಾಗಿಯೂ ಅಧಿಪತಿಯನ್ನಾಗಿಯೂ ನೇಮಿಸಿದೆನು. 5ಎಲೈ, ಇಸ್ರಾಯೇಲೇ, ಅವನಂತೆ ನೀನೂ ನಿನಗೆ ಗೊತ್ತಿಲ್ಲದ ಜನಾಂಗವನ್ನು ನಿನ್ನ ಅಧೀನಕ್ಕೆ ಕರೆಯುವಿ, ಇಸ್ರಾಯೇಲಿನ ಸದಮಲಸ್ವಾಮಿ ಎನಿಸಿಕೊಳ್ಳುವ ನಿನ್ನ ದೇವರಾದ ಯೆಹೋವನು ನಿನಗೆ ವೈಭವ ಕೊಟ್ಟಿರುವುದನ್ನು ನೋಡಿ ನಿನ್ನನ್ನು ತಿಳಿಯದ ಜನಾಂಗವು ನಿನ್ನ ಆಶ್ರಯಕ್ಕೆ ಓಡಿಬರುವುದು. 6ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ, ಆತನು ಸಮೀಪದಲ್ಲಿರುವಾಗ ಆತನಿಗೆ ಬಿನ್ನಹಮಾಡಿರಿ. 7ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ, ಕೆಡುಕನು ತನ್ನ ದುರಾಲೋಚನೆಗಳನ್ನು ತ್ಯಜಿಸಲಿ; ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ, ಆತನು ಅವನನ್ನು ಕರುಣಿಸುವನು; ನಮ್ಮ ದೇವರನ್ನು ಆಶ್ರಯಿಸಲಿ, ಆತನು ಮಹಾಕೃಪೆಯಿಂದ ಕ್ಷಮಿಸುವನು. 8ಯೆಹೋವನು ಹೀಗೆನ್ನುತ್ತಾನೆ, “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. 9ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ, ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ. 10ಮಳೆಯೂ, ಹಿಮವೂ ಆಕಾಶದಿಂದ ಬಿದ್ದು, ಭೂಮಿಯನ್ನು ತೋಯಿಸಿ, ಹಸರುಗೊಳಿಸಿ ಫಲಿಸುವಂತೆ ಮಾಡಿ, ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಆಹಾರವನ್ನು ಒದಗಿಸಿದ ಹೊರತು ಹೇಗೆ ಆಕಾಶಕ್ಕೆ ಸುಮ್ಮನೆ ಹಿಂದಿರುಗುವುದಿಲ್ಲವೋ, 11ಹಾಗೆಯೇ ನನ್ನ ಬಾಯಿಂದ ಹೊರಟ ಮಾತು, ನನ್ನ ಇಷ್ಟಾರ್ಥವನ್ನು ನೆರವೇರಿಸಿ, ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವುದಿಲ್ಲ. 12ನೀವು ಆನಂದಭರಿತರಾಗಿ ಹೊರಡುವಿರಿ, ಸಮಾಧಾನದಿಂದ ಮೆರವಣಿಗೆಯಾಗಿ ಬರುವಿರಿ; ಬೆಟ್ಟ ಗುಡ್ಡಗಳು ನಿಮ್ಮ ಮುಂದೆ ಜಯಘೋಷ ಮಾಡುವವು. 13ಮುಳ್ಳಿಗೆ ಬದಲಾಗಿ ತುರಾಯಿಯೂ, ದತ್ತೂರಿಗೆ ಪ್ರತಿಯಾಗಿ ಸುಗಂಧವೂ ಬೆಳೆಯುವವು; ಆ ವನವು ಯೆಹೋವನ ನಾಮಸ್ಮರಣೆಗೆ ಶಾಶ್ವತವಾದ ಗುರುತಾಗಿ ಎಂದಿಗೂ ಅಳಿಯದಿರುವುದು.”
ಸಂಧ್ಯಾ ಪ್ರಾರ್ಥನೆ: ವಾಚನ
1ಜ್ಞಾನವೆಂಬಾಕೆಯು ಏಳು ಕಂಬಗಳನ್ನು ಕಡಿದು, ತನ್ನ ಮನೆಯನ್ನು ಕಟ್ಟಿಕೊಂಡಿದ್ದಾಳೆ. 2ಆಕೆ ಪಶುಗಳನ್ನು ಕೊಯಿಸಿ ಪಾನದ್ರವ್ಯಗಳೊಡನೆ ದ್ರಾಕ್ಷಾರಸವನ್ನು ಬೆರಸಿ, ಔತಣವನ್ನು ಸಿದ್ಧಪಡಿಸಿದ್ದಾಳೆ. 3ಆಕೆಯು ತನ್ನ ದಾಸಿಯರನ್ನು ಕಳುಹಿಸಿ, ಪಟ್ಟಣದ ರಾಜಮಾರ್ಗಗಳ ಮುಖ್ಯಸ್ಥಾನಗಳಲ್ಲಿ ಪ್ರಕಟಿಸುತ್ತಾಳೆ. 4ಆಕೆಯು ಬುದ್ಧಿಹೀನರಿಗೆ, “ಮೂಢನಾಗಿರುವವನು ಈ ಕಡೆಗೆ ತಿರುಗಲಿ, 5ಬನ್ನಿರಿ, ನಾನು ಬಡಿಸುವ ಆಹಾರವನ್ನು ಉಣ್ಣಿರಿ, ನಾನು ಬೆರೆಸಿರುವ ದ್ರಾಕ್ಷಾರಸವನ್ನು ಕುಡಿಯಿರಿ. 6ಮೂಢರೇ ಮೂಢತ್ವವನ್ನು ಬಿಟ್ಟು ಬಾಳಿರಿ, ವಿವೇಕಮಾರ್ಗದಲ್ಲಿ ನೆಟ್ಟಗೆ ನಡೆಯಿರಿ” ಎಂದು ಪ್ರಬೋಧಿಸುತ್ತಾಳೆ. 7ಧರ್ಮನಿಂದಕನನ್ನು ಶಿಕ್ಷಿಸುವವನು ತನ್ನನ್ನು ಅವಮಾನಕ್ಕೆ ಗುರಿಮಾಡಿಕೊಳ್ಳುವನು, ಕೆಟ್ಟವನನ್ನು ಗದರಿಸುವವನಿಗೇ ಕಳಂಕವಾಗುವುದು. 8ಧರ್ಮನಿಂದಕನನ್ನು ಗದರಿಸಬೇಡ, ನಿನ್ನನ್ನು ಹಗೆಮಾಡುವನು. ಜ್ಞಾನವಂತನನ್ನು ಗದರಿಸಿದರೆ ನಿನ್ನನ್ನು ಪ್ರೀತಿಸುವನು. 9ಜ್ಞಾನಿಗೆ ಉಪದೇಶಿಸಿದರೆ ಹೆಚ್ಚು ಜ್ಞಾನವನ್ನು ಹೊಂದುವನು, ನೀತಿವಂತನಿಗೆ ಬೋಧಿಸಿದರೆ ಹೆಚ್ಚು ತಿಳಿವಳಿಕೆಯನ್ನು ಪಡೆಯುವನು. 10ಯೆಹೋವನ ಭಯವೇ ಜ್ಞಾನಕ್ಕೆ ಮೂಲವು, ಪರಿಶುದ್ಧ ದೇವರ ತಿಳಿವಳಿಕೆಯೇ ವಿವೇಕವು. 11ನನ್ನಿಂದ ನಿನ್ನ ದಿನಗಳು ಹೆಚ್ಚುವವು, ನಿನ್ನ ಆಯುಷ್ಯದ ವರ್ಷಗಳು ವೃದ್ಧಿಯಾಗುವವು.
ಪತ್ರಿಕೆ
6ಅಪೊಸ್ತಲರು ಅದನ್ನು ತಿಳಿದು ಅಲ್ಲಿಂದ ಓಡಿಹೋಗಿ ಲುಕವೋನ್ಯದಲ್ಲಿದ್ದ ಲುಸ್ತ್ರ ಮತ್ತು ದೆರ್ಬೆ ಎಂಬ ಊರುಗಳಿಗೂ, 7ಅವುಗಳಿಗೆ ಸೇರಿರುವ ಸೀಮೆಗೂ ಹೋಗಿ ಅಲ್ಲಿ ಸುವಾರ್ತೆಯನ್ನು ಸಾರಿದರು. 8ಲುಸ್ತ್ರ ಪಟ್ಟಣದಲ್ಲಿ ಕಾಲುಗಳಲ್ಲಿ ಬಲವಿಲ್ಲದ ಒಬ್ಬ ಮನುಷ್ಯನು ಕುಳಿತಿದ್ದನು. ಅವನು ಹುಟ್ಟುಕುಂಟನಾಗಿದ್ದು, ಅದುವರೆಗೂ ನಡೆಯಲಾರದೆ ಇದ್ದವನು. 9ಪೌಲನು ಆಡುವ ಮಾತುಗಳನ್ನು ಅವನು ಕಿವಿಗೊಟ್ಟು ಕೇಳುತ್ತಿದ್ದನು. ಪೌಲನು ಅವನನ್ನು ದಿಟ್ಟಿಸಿ ನೋಡಿ ವಾಸಿಯಾಗುವುದಕ್ಕೆ ಬೇಕಾದ ನಂಬಿಕೆಯು ಅವನಲ್ಲಿ ಉಂಟೆಂದು ತಿಳಿದು; 10“ನಿನ್ನ ಕಾಲೂರಿ ನೆಟ್ಟಗೆ ನಿಂತುಕೋ” ಎಂದು ಮಹಾಧ್ವನಿಯಿಂದ ಹೇಳಿದನು. ಕೂಡಲೆ ಆ ಮನುಷ್ಯನು ಹಾರಿ ನಡೆದಾಡಿದನು. 11ಪೌಲನು ಮಾಡಿದ್ದನ್ನು ಗುಂಪು ಕೂಡಿದ್ದ ಜನರು ನೋಡಿ; “ದೇವರುಗಳು ಮನುಷ್ಯರ ರೂಪದಿಂದ ನಮ್ಮ ಬಳಿಗೆ ಇಳಿದುಬಂದರು” ಎಂದು ಲುಕವೋನ್ಯ ಭಾಷೆಯಲ್ಲಿ ಕೂಗಾಡಿದರು. 12ಬಾರ್ನಬನನ್ನು ‘ದ್ಯೌಸ್’ ದೇವರೆಂತಲೂ ಪೌಲನು ಪ್ರಮುಖ ಭಾಷಣಕಾರನಾದ್ದರಿಂದ ಅವನನ್ನು ‘ಹೆರ್ಮೆ’ ದೇವರೆಂತಲೂ ಅಂದುಕೊಂಡರು. 13ಊರ ಮುಂದಿದ್ದ ದ್ಯೌಸ್ ದೇವರ ಗುಡಿಯ ಪೂಜಾರಿಯು ಎತ್ತುಗಳನ್ನೂ, ಹೂವಿನ ಹಾರಗಳನ್ನೂ ಊರಬಾಗಿಲಿನ ಹತ್ತಿರಕ್ಕೆ ತಂದು ಜನರೊಂದಿಗೆ ಅವರಿಗೆ ಬಲಿಕೊಡಬೇಕೆಂದಿದ್ದನು. 14ಇದನ್ನು ಕೇಳಿ ಅಪೊಸ್ತಲರಾದ ಬಾರ್ನಬ ಮತ್ತು ಪೌಲರು ತಮ್ಮ ವಸ್ತ್ರಗಳನ್ನು ಹರಿದುಕೊಂಡು ಜನರ ಗುಂಪಿನೊಳಗೆ ನುಗ್ಗಿ ಹೀಗೆಂದು ಕೂಗಿ ಹೇಳಿದರು; 15“ಜನರೇ, ನೀವು ಹೀಗೇಕೆ ಮಾಡುತ್ತೀರೀ? ನಾವೂ ಮನುಷ್ಯರೇ, ನಿಮ್ಮಂಥ ಸ್ವಭಾವವುಳ್ಳವರು. ನೀವು ಈ ವ್ಯರ್ಥವಾದ ಕೆಲಸಗಳನ್ನು ಬಿಟ್ಟುಬಿಟ್ಟು ಭೂಮ್ಯಾಕಾಶಗಳನ್ನೂ, ಸಮುದ್ರವನ್ನೂ, ಅವುಗಳಲ್ಲಿರುವ ಸಮಸ್ತವನ್ನೂ ಸೃಷ್ಟಿಮಾಡಿದ ಜೀವಸ್ವರೂಪನಾದ ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಸುವಾರ್ತೆಯನ್ನು ನಿಮಗೆ ಸಾರಿಹೇಳುವವರಾಗಿದ್ದೇವೆ. 16ಗತಿಸಿಹೋದ ಕಾಲದಲ್ಲಿ ಆತನು ಎಲ್ಲಾ ಜನಾಂಗಗಳನ್ನು ತಮ್ಮ ತಮ್ಮ ಮನಸ್ಸಿಗೆ ತೋಚಿದ ಮಾರ್ಗಗಳಲ್ಲಿ ನಡೆಯುವುದಕ್ಕೆ ಬಿಟ್ಟು ಬಿಟ್ಟನು. 17ಆದರೆ ದೇವರು ತನ್ನ ಅಸ್ತಿತ್ವವನ್ನು ಅರಿತುಕೊಳ್ಳುವಂತೆ ಸುಕೃತ್ಯಗಳ ಮೂಲಕ ಸಾಕ್ಷಿ ನೀಡುತ್ತಲೇ ಬಂದಿದ್ದಾನೆ; ಆಕಾಶದಿಂದ ಮಳೆಯನ್ನೂ ಸಕಾಲಕ್ಕೆ, ಸುಗ್ಗಿಕಾಲಗಳನ್ನೂ ದಯಪಾಲಿಸಿ, ಆಹಾರ ಕೊಟ್ಟು ನಿಮ್ಮ ಮನಸ್ಸುಗಳನ್ನು ಆನಂದದಿಂದ ತುಂಬಿಸಿ, ಉಪಕಾರಮಾಡುತ್ತಾ ಬಂದವನು ಆತನೇ” ಎಂದು ಹೇಳಿದರು. 18ಬಾರ್ನಬ ಮತ್ತು ಪೌಲರು ಈ ಮಾತುಗಳನ್ನು ಹೇಳಿದರೂ ಜನರು ತಮಗೆ ಬಲಿಯರ್ಪಿಸುವುದನ್ನು ತಡೆಯಲು ಆಸಾಧ್ಯವಾಯಿತು.
ಸುವಾರ್ತೆ
14ಹಬ್ಬದ ಮಧ್ಯಕಾಲದಲ್ಲಿ ಯೇಸು ದೇವಾಲಯಕ್ಕೆ ಹೋಗಿ ಬೋಧಿಸತೊಡಗಿದನು. 15ಯೆಹೂದ್ಯರು ಅದಕ್ಕೆ ಆಶ್ಚರ್ಯಪಟ್ಟು, “ಶಾಸ್ತ್ರಭ್ಯಾಸ ಮಾಡದಿರುವ ಈತನಿಗೆ ಶಾಸ್ತ್ರಗಳು ತಿಳಿದಿರುವುದಾದರೂ ಹೇಗೆ?” ಎಂದರು. 16ಅದಕ್ಕೆ ಯೇಸು “ನಾನು ಹೇಳುವ ಬೋಧನೆಯು ನನ್ನದಲ್ಲ. ನನ್ನನ್ನು ಕಳುಹಿಸಿದಾತನದೇ. 17ಯಾರಿಗಾದರೂ ಆತನ ಚಿತ್ತದಂತೆ ನಡೆಯುವುದಕ್ಕೆ ಮನಸ್ಸಿದೆಯೋ ಅವರಿಗೆ ಈ ಬೋಧನೆಯು ದೇವರಿಂದ ಬಂದ್ದದ್ದೋ ಅಥವಾ ನಾನೇ ಮಾತನಾಡುತ್ತೇನೋ ಎಂಬುದು ಗೊತ್ತಾಗುವುದು. 18ತನ್ನಷ್ಟಕ್ಕೆ ತಾನೇ ಮಾತನಾಡುವವನು ತನ್ನ ಸ್ವಂತ ಗೌರವ ಹುಡುಕುತ್ತಾನೆ, ಆದರೆ ತನ್ನನ್ನು ಕಳುಹಿಸಿದಾತನ ಗೌರವನ್ನೇ ಹುಡುಕುವ ಮನುಷ್ಯನೇ ಸತ್ಯವಂತನು; ಆತನಲ್ಲಿ ಕೆಟ್ಟತನವಿಲ್ಲ. 19ಮೋಶೆಯು ನಿಮಗೆ ಧರ್ಮಶಾಸ್ತ್ರವನ್ನು ಕೊಡಲಿಲ್ಲವೇ? ಆದರೂ ನಿಮ್ಮಲ್ಲಿ ಒಬ್ಬನಾದರೂ ಆ ಧರ್ಮಶಾಸ್ತ್ರದಂತೆ ನಡೆಯಲಿಲ್ಲ. ನೀವು ನನ್ನನ್ನು ಕೊಲ್ಲುವುದಕ್ಕೆ ಹುಡುಕುವುದೇಕೆ?” ಎಂದು ಕೇಳಿದನು. 20ಅದಕ್ಕೆ ಆ ಜನರು, “ನಿನಗೆ ದೆವ್ವ ಹಿಡಿದಿದೆ. ನಿನ್ನನ್ನು ಕೊಲ್ಲುವುದಕ್ಕೆ ಯಾರು ಹುಡುಕುತ್ತಿದ್ದಾರೆ?” ಎಂದರು. 21ಯೇಸು ಅವರಿಗೆ “ನಾನು ಒಂದು ಸೂಚಕ ಕಾರ್ಯವನ್ನು ಮಾಡಿದೆನು, ಅದಕ್ಕೆ ನೀವೆಲ್ಲರೂ ಬೆರಗಾಗಿದ್ದೀರಿ. 22ಮೋಶೆಯು ನಿಮಗೆ ಸುನ್ನತಿಯೆಂಬ ನಿಯಮವನ್ನು ನೇಮಿಸಿದನು, (ಅದು ಮೋಶೆಯಿಂದ ಬಂದದ್ದೆಂದು ನಾನು ಹೇಳುವುದಿಲ್ಲ, ಮೂಲಪುರುಷರ ಕಾಲದಿಂದ ಬಂದದ್ದು) ಮತ್ತು ಮನುಷ್ಯನಿಗೆ ಸುನ್ನತಿಯನ್ನು ಸಬ್ಬತ್ ದಿನದಲ್ಲಿಯೂ ಮಾಡುತ್ತೀರಿ. 23ಮೋಶೆಯ ಧರ್ಮಶಾಸ್ತ್ರವನ್ನು ಮೀರಬಾರದೆಂದು ಒಬ್ಬನು ಸಬ್ಬತ್ ದಿನದಲ್ಲಿ ಸುನ್ನತಿಯನ್ನು ಮಾಡಿಸಿಕೊಳ್ಳುವುದಾದರೆ, ನಾನು ಸಬ್ಬತ್ ದಿನದಲ್ಲಿ ಒಬ್ಬ ಮನುಷ್ಯನನ್ನು ಸ್ವಸ್ಥಮಾಡಿದ್ದಕ್ಕೆ ನನ್ನ ಮೇಲೆ ನೀವು ಏಕೆ ಕೋಪಗೊಳ್ಳುತ್ತೀರಿ? 24ತೋರಿಕೆಗೆ ಅನುಸಾರವಾಗಿ ತೀರ್ಪುಮಾಡಬೇಡಿರಿ. ನ್ಯಾಯಬದ್ಧವಾಗಿ ತೀರ್ಪುನ್ನು ಮಾಡಿರಿ” ಎಂದನು. 25ಆಮೇಲೆ ಯೆರೂಸಲೇಮಿನವರಲ್ಲಿ ಕೆಲವರು “ಅವರು ಕೊಲ್ಲಬೇಕೆಂದು ಹುಡುಕುವುದು ಈತನನ್ನೇ ಅಲ್ಲವೇ? 26ನೋಡಿರಿ, ಈತನು ಬಹಿರಂಗವಾಗಿ ಮಾತನಾಡುತ್ತಿದ್ದಾನೆ ಮತ್ತು ಅವರು ಆತನಿಗೆ ಏನೂ ಹೇಳುತ್ತಿಲ್ಲ. ಬಹುಶಃ ಈತನೇ ನಿಜವಾದ ಕ್ರಿಸ್ತನೆಂದು ಅಧಿಕಾರಿಗಳು ತಿಳಿದುಕೊಂಡಿದ್ದಾರೋ? 27ಆದರೆ ಇವನು ಎಲ್ಲಿಂದ ಬಂದವನೆಂದು ನಾವು ಬಲ್ಲೆವು, ಕ್ರಿಸ್ತನು ಬರುವಾಗ ಆತನು ಎಲ್ಲಿಂದ ಬಂದವನೆಂದು ಒಬ್ಬರಿಗೂ ತಿಳಿಯುವುದಿಲ್ಲವೆಂದು ಮಾತನಾಡಿಕೊಳ್ಳುತ್ತಿದ್ದರು.” 28ಯೇಸುವು ಇದನ್ನು ತಿಳಿದು ದೇವಾಲಯದಲ್ಲಿ ಉಪದೇಶ ಮಾಡುವಾಗ, “ನೀವು ನನ್ನನ್ನು ಬಲ್ಲಿರಿ, ನಾನು ಎಲ್ಲಿಂದ ಬಂದವನೆಂದೂ ನೀವು ಬಲ್ಲಿರಿ, ಆದರೂ ನಾನು ನನ್ನಷ್ಟಕ್ಕೆ ನಾನೇ ಬಂದವನಲ್ಲ. ನನ್ನನ್ನು ಕಳುಹಿಸಿದಾತನು ಸತ್ಯವಂತನು. ನೀವು ಆತನನ್ನು ಅರಿತವರಲ್ಲ. 29ಆದರೆ ನಾನು ಆತನನ್ನು ಬಲ್ಲೆನು ಏಕೆಂದರೆ, ನಾನು ಆತನ ಕಡೆಯಿಂದ ಬಂದವನು ಮತ್ತು ಆತನೇ ನನ್ನನ್ನು ಕಳುಹಿಸಿದನು” ಎಂದು ಕೂಗಿ ಹೇಳಿದನು. 30ಇದಕ್ಕಾಗಿ ಆತನನ್ನು ಬಂಧಿಸುವುದಕ್ಕೆ ಪ್ರಯತ್ನಿಸಿದರೂ ಆತನ ಸಮಯ ಇನ್ನೂ ಬಾರದೆ ಇದ್ದ ಕಾರಣ ಯಾರೂ ಆತನ ಮೇಲೆ ಕೈ ಹಾಕಲಿಲ್ಲ.
ಪತ್ರಿಕೆ (ಜಲದ ಆಶೀರ್ವಾದ)
11ಯಾಕೆಂದರೆ ಪವಿತ್ರಗೊಳಿಸುವವನಿಗೂ ಪವಿತ್ರರಾದವರಿಗೂ ಒಬ್ಬಾತನೇ ಮೂಲ ಆತನು ದೇವರೇ. ಈ ಕಾರಣದಿಂದ ಅವರನ್ನು ಪವಿತ್ರಗೊಳಿಸುವಾತನು ಅವರನ್ನು ಸಹೋದರರೆಂದು ಕರೆಯುವುದಕ್ಕೆ ನಾಚಿಕೆಪಡಲಿಲ್ಲ. 12“ನಿನ್ನ ನಾಮಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು. ಸಭಾಮಧ್ಯದಲ್ಲಿ ನಿನ್ನನ್ನು ಕೊಂಡಾಡುವೆನು” ಎಂತಲೂ, 13“ನಾನು ಆತನಲ್ಲಿ ಭರವಸವಿಡುವೆನು” ಎಂತಲೂ, “ಇಗೋ ನಾನು ಮತ್ತು ದೇವರು ನನಗೆ ದಯಪಾಲಿಸಿರುವ ಮಕ್ಕಳೂ ಇದ್ದೇವೆ” ಎಂದೂ ಹೇಳುತ್ತಾನೆ. 14ಇದಲ್ಲದೆ ಮಕ್ಕಳು ರಕ್ತ ಮಾಂಸಧಾರಿಗಳು ಆಗಿರುವುದರಿಂದ ಯೇಸು ಸಹ ಅವರಂತೆಯೇ ಆದನು. ತನ್ನ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ನಾಶಮಾಡುವುದಕ್ಕೂ, 15ಮರಣ ಭಯದಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವುದಕ್ಕೂ ಅವರಂತೆ ರಕ್ತಮಾಂಸಧಾರಿಯಾದನು. 16ನಿಜವಾಗಿಯೂ ಆತನು ದೇವದೂತರಿಗೆ ಸಹಾಯ ಮಾಡುವುದಕ್ಕಾಗಿ ಅಲ್ಲ, ಅಬ್ರಹಾಮನ ಸಂತತಿಯವರಿಗೆ ಸಹಾಯ ಮಾಡುವುದಕ್ಕಾಗಿ ಬಂದನಷ್ಟೆ. 17ಆದುದರಿಂದ ಆತನು ಎಲ್ಲಾ ವಿಷಯಗಳಲ್ಲಿಯೂ ತನ್ನ ಸಹೋದರರಿಗೆ ಸಮಾನನಾಗುವುದು ಅತ್ಯಗತ್ಯವಾಗಿತ್ತು. ಹೀಗೆ ಆತನು ಜನರ ಪಾಪಗಳನ್ನು ನಿವಾರಣೆ ಮಾಡುವುದಕ್ಕಾಗಿ, ದೇವರ ಕಾರ್ಯಗಳಲ್ಲಿ ಕರುಣೆಯೂ, ನಂಬಿಕೆಯೂ, ಉಳ್ಳ ಮಹಾಯಾಜಕನಾದನು. 18ತಾನೇ ಶೋಧಿಸಲ್ಪಟ್ಟು ಬಾಧೆಯನ್ನು ಅನುಭವಿಸಿರುವುದರಿಂದ ಶೋಧಿಸಲ್ಪಡುವವರಿಗೆ ಸಹಾಯಮಾಡಲು ಶಕ್ತನಾಗಿದ್ದಾನೆ.
ಸುವಾರ್ತೆ (ಜಲದ ಆಶೀರ್ವಾದ)
1ಇದಾದ ಮೇಲೆ ಯೆಹೂದ್ಯರ ಒಂದು ಜಾತ್ರೆ ಇದ್ದುದರಿಂದ ಯೇಸು ಯೆರೂಸಲೇಮಿಗೆ ಹೋದನು. 2ಅಲ್ಲಿ ಕುರಿಬಾಗಿಲು ಎಂಬ ಸ್ಥಳದ ಬಳಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಅದನ್ನು ಇಬ್ರಿಯ ಭಾಷೆಯಲ್ಲಿ ಬೇತ್ಸಥಾ ಎಂದು ಕರೆಯುತ್ತಾರೆ. 3ಇವುಗಳಲ್ಲಿ ಅಸ್ವಸ್ಥರೂ, ರೋಗಿಗಳೂ, ಕುರುಡರೂ, ಕುಂಟರೂ, ಪಾರ್ಶ್ವವಾಯು ಪೀಡಿತರು ಮೊದಲಾದ ಅನೇಕ ರೋಗಿಗಳು ಅಲ್ಲಿ ಬಿದ್ದುಕೊಂಡಿರುತ್ತಿದ್ದರು. (ನೀರು ಕಲಕುವುದನ್ನು ಕಾದುಕೊಂಡು ಅಲ್ಲಿ ಬಿದ್ದುಕೊಂಡಿರುತ್ತಿದ್ದರು. ಆಗಾಗ ಒಬ್ಬ ದೂತನು ಬಂದು ಕೊಳದ ನೀರನ್ನು ಕಲಕಿಹೊಗುತ್ತಿದ್ದನು. ಆಗ ಮೊದಲು ಯಾರು ಕೊಳದೊಳಗೆ ಇಳಿಯುತ್ತಿದ್ದರೋ ಅವರ ರೋಗವು ವಾಸಿಯಾಗುತ್ತಿತ್ತು.)
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 13 ಮೇ ಎಂದರೆ ನಾಗರಿಕ ಪಂಚಾಂಗದ 26 ಮೇ. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು