Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮೇ 2027 › 13 ಮೇ

ಆರ್ಥೊಡಾಕ್ಸ್ ಪಂಚಾಂಗ · ಏಪ್ರಿಲ್ 30 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 13 ಮೇ 2027

ಗುರುವಾರ · ಪಾಸ್ಕದ ಎರಡನೆಯ ವಾರ · ಸ್ವರ 1

ಹಬ್ಬಗಳು ಮತ್ತು ಸಂತರು

Holy Apostle James Zebedee, brother of John the Theologian († 44)

ಉಪವಾಸ

ಉಪವಾಸವಿಲ್ಲ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಸಂಧ್ಯಾ ಪ್ರಾರ್ಥನೆ: ವಾಚನ (ಸಂತ ಯಾಕೋಬ)

ಯಾಕೋ 1:1–12

1ದೇವರಿಗೂ ಕರ್ತನಾದ ಯೇಸು ಕ್ರಿಸ್ತನಿಗೂ ದಾಸನಾಗಿರುವ ಯಾಕೋಬನು ಅನ್ಯದೇಶಗಳಲ್ಲಿ ಚದುರಿರುವ ಇಸ್ರಾಯೇಲ್ಯರ ಹನ್ನೆರಡು ಗೋತ್ರದವರಿಗೂ ಬರೆಯುವುದೇನೆಂದರೆ, “ನಿಮಗೆ ಶುಭವಾಗಲಿ.” 2ನನ್ನ ಸಹೋದರರೇ, ನೀವು ನಾನಾವಿಧವಾದ ಕಷ್ಟಗಳನ್ನು ಅನುಭವಿಸುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ತಿಳಿಯಿರಿ. 3ಏಕೆಂದರೆ ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ನಿಮಗೆ ತಾಳ್ಮೆಯನ್ನುಂಟು ಮಾಡುತ್ತದೆಂದು ನೀವು ತಿಳಿಯಿರಿ. 4ಆ ತಾಳ್ಮೆಯು ಸಂಪೂರ್ಣವಾಗಿ ನಿಮ್ಮಲ್ಲಿ ಫಲಿಸಲಿ, ಆಗ ನೀವು ಸರ್ವಸುಗುಣಸಂಪನ್ನರೂ, ಪರಿಪೂರ್ಣರೂ, ಯಾವುದಕ್ಕೂ ಕಡಿಮೆಯಿಲ್ಲದವರೂ ಆಗುವಿರಿ. 5ನಿಮ್ಮಲ್ಲಿ ಯಾರಿಗಾದರು ಜ್ಞಾನದ ಕೊರತೆಯಿರುವುದಾದರೆ ಅವರು ದೇವರನ್ನು ಬೇಡಿಕೊಳ್ಳಲಿ, ಅದು ಅವರಿಗೆ ದೊರಕುವುದು. ಯಾಕೆಂದರೆ ದೇವರು ಹಂಗಿಸದೆ ಎಲ್ಲರಿಗೂ ಉದಾರವಾಗಿ ಕೊಡುವಾತನಾಗಿದ್ದಾನೆ. 6ಆದರೆ ದೇವರ ಬಳಿ ಬೇಡುವವನು ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಂದ ಬೇಡಿಕೊಳ್ಳಲಿ. ಸಂದೇಹಪಡುವವನು ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ಅಲೆಯಂತೆ ಅತ್ತಿತ್ತ ಅಲೆಯುತ್ತಿರುತ್ತಾನೆ. 7ಇಂಥವನು ತಾನು ಕರ್ತನಿಂದ ಬೇಡಿಕೊಂಡಿದ್ದೆಲ್ಲವನ್ನು ಹೊಂದುವೆನೆಂದು ಭಾವಿಸದೆ ಇರಲಿ. 8ಏಕೆಂದರೆ ಅವನು ಎರಡು ಮನಸ್ಸುಳ್ಳವನು, ತನ್ನ ನಡತೆಯಲ್ಲಿ ಚಂಚಲನಾಗಿದ್ದಾನೆ. 9ದೀನಸ್ಥಿತಿಯಲ್ಲಿರುವ ಸಹೋದರನು ತಾನು ಉನ್ನತ ಸ್ಥಿತಿಗೆ ಬಂದೆನೆಂದು ಉಲ್ಲಾಸಪಡಲಿ. 10ಐಶ್ವರ್ಯವಂತನಾದ ಸಹೋದರನು ತಾನು ದೀನಸ್ಥಿತಿಗೆ ಬಂದೆನೆಂದು ಉಲ್ಲಾಸಪಡಲಿ; ಏಕೆಂದರೆ ಐಶ್ವರ್ಯವಂತನು ಹುಲ್ಲಿನ ಹೂವಿನಂತೆ ಗತಿಸಿ ಹೋಗುವನು. 11ಸೂರ್ಯನು ಉದಯಿಸಿದ ಮೇಲೆ ಸುಡುವ ಬಿಸಿಲಿಗೆ ಹುಲ್ಲು ಬಾಡಿ, ಹೂವು ಉದುರಿ ಅದರ ರೂಪದ ಸೊಗಸು ನಾಶವಾಗುತ್ತದೆ; ಹಾಗೆಯೇ ಐಶ್ವರ್ಯವಂತನು ತನ್ನ ಪ್ರಯತ್ನಗಳಲ್ಲಿ ಕುಂದಿಹೋಗುವನು. 12ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು. ಅವನು ಪರಿಶೋಧಿತನಾದ ಮೇಲೆ ಕರ್ತನು ತನ್ನನ್ನು ಪ್ರೀತಿಸುವವರಿಗೆ ವಾಗ್ದಾನಮಾಡಿದಂತೆ ಜೀವದ ಕಿರೀಟವನ್ನು ಹೊಂದುವನು.

ಸಂಧ್ಯಾ ಪ್ರಾರ್ಥನೆ: ವಾಚನ (ಸಂತ ಯಾಕೋಬ)

ಯಾಕೋ 1:13–27

13ಯಾರಾದರೂ ಶೋಧನೆಗೆ ಪ್ರೇರೇಪಿಸಲ್ಪಡುವಾಗ “ಈ ಪ್ರೇರಣೆಯು ತನಗೆ ದೇವರಿಂದ ಉಂಟಾಯಿತೆಂದು” ಹೇಳಬಾರದು. ಏಕೆಂದರೆ ದೇವರು ಕೆಟ್ಟದ್ದಕ್ಕೆ ಪ್ರೇರಣೆ ನೀಡುವವನಲ್ಲ. ಮತ್ತು ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸಿ ಶೋಧಿಸುವುದೂ ಇಲ್ಲ. 14ಆದರೆ ಪ್ರತಿಯೊಬ್ಬನು ತನ್ನ ಸ್ವಂತ ದುರಾಶೆಗಳಿಂದ ಸೆಳೆಯಲ್ಪಟ್ಟು ಮರುಳುಗೊಂಡವನಾಗಿ ಶೋಧಿಸಲ್ಪಡುತ್ತಾನೆ. 15ಆ ಮೇಲೆ ದುರಾಶೆಯು ಗರ್ಭಧರಿಸಿ ಪಾಪವನ್ನು ಹೆರುತ್ತದೆ. ಪಾಪವು ಪೂರ್ಣವಾಗಿ ಬೆಳೆದು ಮರಣವನ್ನು ತರುತ್ತದೆ. 16ನನ್ನ ಪ್ರಿಯ ಸಹೋದರರೇ, ಮೋಸಹೋಗಬೇಡಿರಿ. 17ಎಲ್ಲಾ ಒಳ್ಳೆಯ ವರಗಳು ಮತ್ತು ಪರಿಪೂರ್ಣವಾದ ವರಗಳು ಮೇಲಿನಿಂದ ಬಂದವುಗಳೇ, ಅವು ಸಕಲ ವಿಧವಾದ ಬೆಳಕಿಗೆ ಮೂಲಕರ್ತನಾದ ದೇವರಿಂದ ಇಳಿದು ಬರುತ್ತವೆ; ಆತನು ನೆರಳಿನಂತೆ ಬದಲಾಗುವವನಲ್ಲ, ಚಂಚಲಚಿತ್ತನೂ ಅಲ್ಲ. 18ದೇವರು ತನ್ನ ಸುಚಿತ್ತದ ಪ್ರಕಾರ ಸತ್ಯವಾಕ್ಯದ ಮೂಲಕ ಜೀವಕೊಟ್ಟಿವುದರಿಂದ ನಾವು ಆತನ ಸರ್ವ ಸೃಷ್ಟಿಯಲ್ಲಿ ಪ್ರಥಮ ಫಲವಾದೆವು. 19ನನ್ನ ಪ್ರಿಯ ಸಹೋದರರೇ, ನೀವು ಇದನ್ನು ಚೆನ್ನಾಗಿ ತಿಳಿದುಕೊಳ್ಳಿರಿ, ಪ್ರತಿಯೊಬ್ಬನೂ ಕಿವಿಗೊಡುವುದರಲ್ಲಿ ಚುರುಕಾಗಿಯೂ, ಮಾತನಾಡುವುದರಲ್ಲಿ ನಿಧಾನವಾಗಿಯೂ ಮತ್ತು ಕೋಪಿಸುವುದರಲ್ಲಿ ನಿಧಾನವಾಗಿಯೂ ಇರಲಿ. 20ಏಕೆಂದರೆ ಮನುಷ್ಯನು ಕೋಪಗೊಂಡಾಗ ದೇವರು ಬಯಸುವ ನೀತಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. 21ಆದಕಾರಣ ಎಲ್ಲಾ ನೀಚತನವನ್ನೂ, ಎಲ್ಲಾ ದುಷ್ಟತನವನ್ನೂ ತೆಗೆದುಹಾಕಿ ಮನಸ್ಸಿನೊಳಗೆ ಬೇರೂರಿರುವ ದೇವರ ವಾಕ್ಯವನ್ನು ನಮ್ರತೆಯಿಂದ ಸ್ವೀಕರಿಸಿರಿ. ಅದು ನಿಮ್ಮ ಆತ್ಮಗಳನ್ನು ರಕ್ಷಿಸುವುದಕ್ಕೆ ಸಾಮರ್ಥ್ಯವುಳ್ಳದ್ದಾಗಿರುತ್ತದೆ. 22ದೇವರ ವಾಕ್ಯದ ಪ್ರಕಾರ ನಡೆಯುವವರಾಗಿರಿ, ಅದನ್ನು ಕೇವಲ ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳಬೇಡಿರಿ. 23ಯಾವನಾದರೂ ವಾಕ್ಯವನ್ನು ಕೇಳುವವನಾಗಿದ್ದು ಅದರ ಪ್ರಕಾರ ನಡೆಯದಿದ್ದರೆ ಅವನು ಕನ್ನಡಿಯಲ್ಲಿ ತನ್ನ ಸಹಜ ಮುಖವನ್ನು ನೋಡಿದ ಮನುಷ್ಯನಂತಿರುವನು. 24ಏಕೆಂದರೆ ಇವನು ತನ್ನನ್ನು ತಾನೇ ನೋಡಿ ನಂತರ ತಾನು ಹೀಗಿದ್ದೇನೆಂಬುದನ್ನು ಆ ಕ್ಷಣವೇ ಮರೆತುಬಿಡುವನು. 25ಆದರೆ ಬಿಡುಗಡೆಯನ್ನು ಉಂಟುಮಾಡುವ ಪರಿಪೂರ್ಣವಾದ ಧರ್ಮಶಾಸ್ತ್ರವನ್ನು ಲಕ್ಷ್ಯಕೊಟ್ಟು ಓದಿ, ಮನನ ಮಾಡಿ ಅದನ್ನು ಅನುಸರಿಸುವವನು ವಾಕ್ಯವನ್ನು ಕೇಳಿ ಮರೆತು ಹೋಗದೆ ಅದರ ಪ್ರಕಾರ ನಡೆಯುತ್ತಾ ತನ್ನ ನಡತೆಯಿಂದ, ಕ್ರಿಯೆಗಳಿಂದ ಧನ್ಯನಾಗುವನು. 26ತನ್ನನ್ನು ಸದ್ಭಕ್ತನೆಂದೆಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳದೆ ತನ್ನ ಹೃದಯವನ್ನು ಮೋಸಗೊಳಿಸುವವನಾದರೆ ಅವನ ಭಕ್ತಿಯು ವ್ಯರ್ಥವಾಗಿದೆ. 27ಸಂಕಟದಲ್ಲಿ ಬಿದ್ದಿರುವ ದಿಕ್ಕಿಲ್ಲದವರನ್ನೂ, ವಿಧವೆಯರನ್ನೂ ಪರಾಂಬರಿಸಿ ತನಗೆ ಇಹಲೋಕದ ದೋಷವು ಹತ್ತದಂತೆ ತನ್ನನ್ನು ತಾನು ಕಾಪಾಡಿಕೊಳ್ಳುವುದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ, ನಿರ್ಮಲವೂ ಆಗಿರುವ ಭಕ್ತಿ.

ಸಂಧ್ಯಾ ಪ್ರಾರ್ಥನೆ: ವಾಚನ (ಸಂತ ಯಾಕೋಬ)

ಯಾಕೋ 2:1–13

1ನನ್ನ ಸಹೋದರರೇ, ಮಹಿಮೆಯುಳ್ಳ ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟವರಾದ ನೀವು ಪಕ್ಷಪಾತಿಗಳಾಗಿರಬಾರದು. 2ಹೇಗೆಂದರೆ ಒಬ್ಬ ಮನುಷ್ಯನು ಚಿನ್ನದ ಉಂಗುರಗಳನ್ನು ಮತ್ತು ಉತ್ತಮವಾದ ವಸ್ತ್ರಗಳನ್ನೂ ಹಾಕಿಕೊಂಡು ನಿಮ್ಮ ಸಭೆಯೊಳಗೆ ಬಂದಾಗ ಮತ್ತು ಒಬ್ಬ ಬಡ ಮನುಷ್ಯನು ಕೊಳಕು ಬಟ್ಟೆಗಳನ್ನು ಧರಿಸಿಕೊಂಡು ಬಂದಾಗ, 3ನೀವು ಉತ್ತಮವಾದ ವಸ್ತ್ರಗಳನ್ನು ಧರಿಸಿಕೊಂಡು ಬಂದಿರುವವನನ್ನು ಗೌರವದಿಂದ ನೋಡಿ ಅವನಿಗೆ “ನೀವು ಇಲ್ಲಿ ಈ ಗೌರವ ಆಸನದಲ್ಲಿ ಕುಳಿತುಕೊಳ್ಳಿರಿ” ಎಂತಲೂ, ಆ ಬಡ ಮನುಷ್ಯನಿಗೆ “ನೀನು ಅಲ್ಲಿ ನಿಂತುಕೋ” ಇಲ್ಲವೇ “ಇಲ್ಲಿ ನನ್ನ ಕಾಲ್ಮಣೆಯ ಬಳಿ ಕುಳಿತುಕೋ” ಎಂತಲೂ ಹೇಳಿದರೆ, 4ನೀವು ನಿಮ್ಮ ನಿಮ್ಮಲ್ಲಿ ಭೇದಭಾವ ಮಾಡುವವರಾಗಿದ್ದು, ತಾರತಮ್ಯ ಆಲೋಚನೆಗಳಂತೆ ನಡೆಯುವ ನಿರ್ಧಾರ ಮಾಡುವವರಾಗಿರುತ್ತೀರಿ ಅಲ್ಲವೇ? 5ನನ್ನ ಪ್ರಿಯ ಸಹೋದರರೇ, ಕೇಳಿರಿ ದೇವರು ಈ ಲೋಕದಲ್ಲಿನ ಬಡವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿಯೂ, ತನ್ನನ್ನು ಪ್ರೀತಿಸುವವರಿಗೆ ತಾನು ವಾಗ್ದಾನ ಮಾಡಿದ ರಾಜ್ಯಕ್ಕೆ ಬಾಧ್ಯರಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ? 6ನೀವಾದರೋ ಬಡವರನ್ನು ಅವಮಾನಪಡಿಸಿದ್ದೀರಿ. ನಿಮ್ಮನ್ನು ಬಾಧಿಸಿ ನ್ಯಾಯಸ್ಥಾನದ ಮುಂದೆ ಎಳೆದುಕೊಂಡು ಹೋಗುವವರು ಐಶ್ವರ್ಯವಂತರಲ್ಲವೋ? 7ನೀವು ಕರೆಯಲ್ಪಟ್ಟ ಆ ಶ್ರೇಷ್ಠವಾದ ನಾಮವನ್ನು ದೂಷಿಸುವವರು ಅವರಲ್ಲವೋ? 8ಆದರೂ ಧರ್ಮಶಾಸ್ತ್ರಕ್ಕೆ ಸರಿಯಾಗಿ “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ರಾಜಾಜ್ಞೆಯನ್ನು ನೆರವೇರಿಸುವವರಾದರೆ, ನೀವು ಒಳ್ಳೆಯದನ್ನೇ ಮಾಡುವವರಾಗಿರುವಿರಿ. 9ಒಂದು ವೇಳೆ ಅದನ್ನು ಬಿಟ್ಟು ನೀವು ಪಕ್ಷಪಾತಿಗಳಾಗಿದ್ದರೆ ಪಾಪಮಾಡುವವರಾಗಿದ್ದು ಅಪರಾಧಿಗಳೆಂದು ಧರ್ಮಶಾಸ್ತ್ರದ ಪ್ರಕಾರ ತೀರ್ಮಾನಿಸಲ್ಪಡುತ್ತೀರಿ. 10ಏಕೆಂದರೆ ಯಾರಾದರೂ ಧರ್ಮಶಾಸ್ತ್ರವನ್ನೆಲ್ಲಾ ಕೈಕೊಂಡು ನಡೆದು ಅದರಲ್ಲಿ ಒಂದೇ ಒಂದು ವಿಷಯದಲ್ಲಿ ತಪ್ಪಿದರೆ ಅಂಥವರು ಎಲ್ಲಾ ವಿಷಯಗಳಲ್ಲಿಯೂ ಅಪರಾಧಿಯಾಗಿರುತ್ತಾರೆ. 11ಏಕೆಂದರೆ ವ್ಯಭಿಚಾರ ಮಾಡಬಾರದೆಂದು ಹೇಳಿದವನೇ ನರಹತ್ಯ ಮಾಡಬಾರದೆಂತಲೂ ಹೇಳಿದನು. ಆದಕಾರಣ ನೀನು ವ್ಯಭಿಚಾರಮಾಡದೆ ಇದ್ದರೂ ನರಹತ್ಯ ಮಾಡಿದರೆ ಧರ್ಮಶಾಸ್ತ್ರವನ್ನು ಮೀರಿದವನಾಗಿರುತ್ತಿ. 12ನೀವು ಬಿಡುಗಡೆಯನ್ನುಂಟು ಮಾಡುವ ಧರ್ಮಶಾಸ್ತ್ರದ ಪ್ರಕಾರ ತೀರ್ಪುಹೊಂದುವವರಿಗೆ ತಕ್ಕಂತೆ ಮಾತನಾಡಿರಿ ಮತ್ತು ವಿಧೇಯರಾಗಿರಿ. 13ಏಕೆಂದರೆ ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಪಿನಲ್ಲಿ ಕರುಣೆಯು ತೋರಿಸಲ್ಪಡುವುದಿಲ್ಲ. ಕರುಣೆಯು ನ್ಯಾಯತೀರ್ಪಿನ ಮೇಲೆ ಜಯ ಹೊಂದುತ್ತದೆ.

ಉದಯಕಾಲದ ಪ್ರಾರ್ಥನೆ: ಸುವಾರ್ತೆ

ಯೋಹಾ 21:15–25

15ಅವರ ಊಟವಾದ ಮೇಲೆ ಯೇಸು ಸೀಮೋನ್ ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ಇವರಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತಿಯೋ?” ಎಂದು ಕೇಳಲು ಅವನು “ಹೌದು, ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ” ಎಂದನು. ಆತನು ಅವನಿಗೆ, “ನನ್ನ ಕುರಿಮರಿಗಳನ್ನು ಮೇಯಿಸು” ಎಂದು ಹೇಳಿದನು. 16ಆತನು ತಿರುಗಿ ಎರಡನೆಯ ಸಾರಿ ಅವನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ?” ಎಂದು ಕೇಳಲು, ಅವನು ಹೌದು ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ ಎಂದನು. ಆತನು ಅವನಿಗೆ “ನನ್ನ ಕುರಿಗಳನ್ನು ಪಾಲಿಸು” ಎಂದು ಹೇಳಿದನು. 17ಯೇಸು ಮೂರನೆಯ ಸಾರಿ, “ಯೋಹಾನನ ಮಗನಾದ ಸೀಮೋನನೇ ನೀನು ನನ್ನ ಮೇಲೆ ಮಮತೆ ಇಟ್ಟಿದ್ದಿಯೋ?” ಎಂದು ಕೇಳಿದನು, ಮೂರನೆಯ ಸಾರಿ ಆತನು, “ನನ್ನ ಮೇಲೆ ಮಮತೆ ಇಟ್ಟಿದ್ದೀಯೋ?” ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು, “ಕರ್ತನೇ, ನಿನಗೆ ಎಲ್ಲವೂ ತಿಳಿದಿದೆ. ನಾನು ನಿನ್ನ ಮೇಲೆ ಮಮತೆ ಇಟ್ಟೀದ್ದೇನೆಂದು ನಿನಗೆ ತಿಳಿದಿದೆ” ಎಂದನು. ಆಗ ಅವನಿಗೆ ಯೇಸು “ನನ್ನ ಕುರಿಗಳನ್ನು ಮೇಯಿಸು” ಎಂದನು. 18“ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ಯುವಕನಾಗಿದ್ದಾಗ ನೀನೇ ನಿನ್ನ ಉಡುಪನ್ನು ಧರಿಸಿಕೊಂಡು ಇಷ್ಟಬಂದ ಕಡೆಗೆ ತಿರುಗಾಡುತ್ತಿದ್ದೀ. ಆದರೆ ನೀನು ಮುದುಕನಾದಾಗ ನಿನ್ನ ಕೈಗಳನ್ನು ಚಾಚುವಿ, ಆಗ ಮತ್ತೊಬ್ಬನು ನಿನ್ನ ನಡುವನ್ನು ಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ಹೊತ್ತುಕೊಂಡು ಹೋಗುವನು” ಎಂದು ಹೇಳಿದನು. 19ಅವನು ಎಂಥಾ ಮರಣದಿಂದ ದೇವರನ್ನು ಮಹಿಮೆಪಡಿಸುವನು ಎಂಬುದನ್ನು ಯೇಸು ಈ ಮಾತಿನಿಂದ ಸೂಚಿಸಿದನು. ಆತನು ಇದನ್ನು ಹೇಳಿ ಪೇತ್ರನಿಗೆ “ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. 20ಪೇತ್ರನು ಹಿಂತಿರುಗಿ ನೋಡಿದಾಗ, ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಹಿಂದೆ ಬರುವುದನ್ನು ಕಂಡನು. ಆ ಶಿಷ್ಯನು ಊಟದ ಸಮಯದಲ್ಲಿ ಯೇಸುವಿನ ಎದೆಗೆ ಒರಗಿಕೊಂಡು, “ಕರ್ತನೇ, ನಿನ್ನನ್ನು ಹಿಡಿದುಕೊಡುವವನು ಯಾರು?” ಎಂದು ಕೇಳಿದವನೇ. 21ಇವನನ್ನು ಪೇತ್ರನು ನೋಡಿ ಯೇಸುವಿಗೆ, “ಕರ್ತನೇ, ಇವನ ಬಗ್ಗೆ ಏನು ಹೇಳುತ್ತೀಯಾ?” ಎಂದು ಕೇಳಲು, 22ಯೇಸು ಅವನಿಗೆ “ನಾನು ಬರುವ ತನಕ ಇವನು ಉಳಿದಿರಬೇಕೆಂಬುದು ನನಗೆ ಮನಸ್ಸಾಗಿದ್ದರೆ ಅದರಿಂದ ನಿನಗೇನು? ನೀನು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. 23ಆದುದರಿಂದ ಆ ಶಿಷ್ಯನು ಸಾಯುವುದಿಲ್ಲವೆಂಬ ಮಾತು ಸಹೋದರರಲ್ಲಿ ಹಬ್ಬಿತು. ಆದರೆ ಅವನು ಸಾಯುವುದಿಲ್ಲವೆಂದು ಯೇಸು ಅವನಿಗೆ ಹೇಳಲಿಲ್ಲ. “ನಾನು ಬರುವ ತನಕ ಅವನು ಉಳಿದಿರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು?” ಎಂದು ಮಾತ್ರ ಹೇಳಿದನು. 24ಈ ವಿಷಯವಾಗಿ ಸಾಕ್ಷಿಕೊಟ್ಟು, ಇವುಗಳನ್ನು ಬರೆದ ಶಿಷ್ಯನು ಇವನೇ. ಇವನ ಸಾಕ್ಷಿಯು ಸತ್ಯವೆಂದು ನಾವು ಬಲ್ಲೆವು. 25ಇದಲ್ಲದೆ ಯೇಸುವು ಮಾಡಿದ ಇನ್ನೂ ಬೇರೆ ಅನೇಕ ಸಂಗತಿಗಳು ಸಹ ಇವೆ. ಅವುಗಳನ್ನೆಲ್ಲಾ ಒಂದೊಂದಾಗಿ ಬರೆಯುವುದಾದರೆ, ಆ ಪುಸ್ತಕಗಳು ಲೋಕವೇ ಹಿಡಿಸಲಾರದಷ್ಟಾಗುವುದು ಎಂದು ನಾನು ಭಾವಿಸುತ್ತೇನೆ.

ಪತ್ರಿಕೆ

ಅ. ಕೃ 4:23–31

23ಅವರು ಬಿಡುಗಡೆ ಹೊಂದಿ ಸ್ವಂತ ಜನರ ಬಳಿಗೆ ಹೋಗಿ ಮುಖ್ಯಯಾಜಕರೂ ಹಿರಿಯರೂ ತಮಗೆ ಹೇಳಿದ ಮಾತುಗಳನ್ನೆಲ್ಲಾ ತಿಳಿಸಿದರು. 24ಅವರು ಕೇಳಿ ಏಕಮನಸ್ಸು ಉಳ್ಳವರಾಗಿ ದೇವರನ್ನು ಗಟ್ಟಿಯಾದ ಧ್ವನಿಯಿಂದ ಹೀಗೆ ಪ್ರಾರ್ಥಿಸಿದರು;, “ಕರ್ತನೇ, ಭೂಮ್ಯಾಕಾಶಗಳನ್ನೂ, ಸಮುದ್ರಗಳನ್ನೂ, ಅವುಗಳಲ್ಲಿರುವ ಸಮಸ್ತವನ್ನೂ ಉಂಟುಮಾಡಿದಾತನೇ, 25ನೀನು ಪವಿತ್ರಾತ್ಮನ ಮೂಲಕವಾಗಿ ನಿನ್ನ ಸೇವಕನಾಗಿದ್ದ ನಮ್ಮ ಪಿತೃವಾದ ದಾವೀದನ ಬಾಯಿಂದ, “‘ಅನ್ಯಜನಗಳು ಏಕೆ ಆಕ್ರೋಶಗೊಂಡರು? ಜನಾಂಗಗಳವರು ಏಕೆ ವ್ಯರ್ಥಕಾರ್ಯಗಳನ್ನು ಯೋಚಿಸುವರು? 26ಕರ್ತನಿಗೂ ಆತನು ಅಭಿಷೇಕಿಸಿದವನಿಗೂ ವಿರೋಧವಾಗಿ ಭೂಲೋಕದ ರಾಜರು, ಸನ್ನದ್ಧರಾಗಿ ನಿಂತರು, ಅಧಿಕಾರಿಗಳು ಒಟ್ಟಾಗಿ ಕೂಡಿಕೊಂಡರು’ ಎಂದು ಹೇಳಿಸಿದಿಯಲ್ಲವೇ? 27ಆ ಮಾತಿಗೆ ಅನುಸಾರವಾಗಿಯೇ ಈ ಪಟ್ಟಣದಲ್ಲಿ ಹೆರೋದನೂ, ಪೊಂತ್ಯ ಪಿಲಾತನೂ, ನೀನು ಅಭಿಷೇಕಿಸಿದ ನಿನ್ನ ಪವಿತ್ರ ಸೇವಕನಾದ ಯೇಸುವಿಗೆ ವಿರೋಧವಾಗಿ ಅನ್ಯಜನರೊಡನೆ ಮತ್ತು ಇಸ್ರಾಯೇಲ್ ಜನರೊಡನೆ ಒಟ್ಟಾಗಿ ಸೇರಿಕೊಂಡು, 28ನಿನ್ನ ಕೈಯೂ ನಿನ್ನ ಸಂಕಲ್ಪವೂ ಮೊದಲು ನೇಮಿಸಿದ್ದನ್ನೇ ನಡಿಸಿದರು. 29ಕರ್ತನೇ, ಈಗ ನೀನು ಅವರ ಬೆದರಿಕೆಗಳನ್ನು ನೋಡಿ ನಿನ್ನ ಪವಿತ್ರ ಸೇವಕನಾದ ಯೇಸುವಿನ ಹೆಸರಿನ ಮೂಲಕವಾಗಿ ರೋಗ ಪರಿಹಾರವೂ, ಸೂಚಕಕಾರ್ಯಗಳೂ, ಅದ್ಭುತಕಾರ್ಯಗಳೂ ಜರಗುವಂತೆ 30ನಿನ್ನ ಕೈಚಾಚುತ್ತಿರುವಲ್ಲಿ, ನಿನ್ನ ದಾಸರು, ನಿನ್ನ ವಾಕ್ಯವನ್ನು ಧೈರ್ಯದಿಂದ ಹೇಳುವ ಹಾಗೆ ಅನುಗ್ರಹಿಸು” ಅಂದರು. 31ಹೀಗೆ ಪ್ರಾರ್ಥನೆ ಮಾಡಿದ ಕೂಡಲೇ ಅವರು ನೆರೆದಿದ್ದ ಸ್ಥಳವು ನಡುಗಿತು. ಅವರೆಲ್ಲರು ಪವಿತ್ರಾತ್ಮ ಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಹೇಳತೊಡಗಿದರು.

ಪತ್ರಿಕೆ (ಸಂತ ಯಾಕೋಬ)

ಅ. ಕೃ 12:1–11

1ಆ ಸಮಯದಲ್ಲೇ ಅರಸನಾದ ಹೆರೋದನು ಸಭೆಯವರಲ್ಲಿ ಕೆಲವರನ್ನು ಹಿಂಸೆಪಡಿಸುವುದಕ್ಕೆ ಕೈಹಾಕಿದನು. 2ಯೋಹಾನನ ಅಣ್ಣನಾದ ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು. 3ಇದು ಯೆಹೂದ್ಯರಿಗೆ ಮೆಚ್ಚಿಕೆಯಾಗಿದೆ ಎಂದು ತಿಳಿದು, ಅಷ್ಟಕ್ಕೆ ನಿಲ್ಲದೆ ಪೇತ್ರನನ್ನೂ ಬಂಧಿಸಿದನು. ಆ ಕಾಲದಲ್ಲಿ ಪಸ್ಕಹಬ್ಬ ಅಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬ ನಡೆಯುತ್ತಿತ್ತು. 4ಅವನನ್ನು ಪಸ್ಕ ಹಬ್ಬವಾದ ಮೇಲೆ ಜನರ ಮುಂದೆ ತರಿಸಬೇಕೆಂಬ ಯೋಚನೆಯಿಂದ ಸೆರೆಯಲ್ಲಿ ಹಾಕಿಸಿ ಅವನನ್ನು ಕಾಯಲಿಕ್ಕೆ ನಾಲ್ಕು ನಾಲ್ಕು ಸಿಪಾಯಿಗಳಿದ್ದ ನಾಲ್ಕು ಗುಂಪುಗಳ ವಶಕ್ಕೆ ಕೊಟ್ಟನು. 5ಪೇತ್ರನು ಸೆರೆಮನೆಯೊಳಗೆ ಕಾವಲಲ್ಲಿದ್ದಾಗ, ಸಭೆಯವರು ಅವನಿಗೋಸ್ಕರ ಆಸಕ್ತಿಯಿಂದ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದರು. 6ಹೆರೋದನು ಅವನನ್ನು ಜನರ ಮುಂದೆ ತರಿಸಬೇಕೆಂದಿದ್ದ ದಿನದ ಹಿಂದಿನ ರಾತ್ರಿಯಲ್ಲಿ, ಪೇತ್ರನು ಎರಡು ಸರಪಣಿಗಳಿಂದ ಕಟ್ಟಲ್ಪಟ್ಟವನಾಗಿ, ಇಬ್ಬರು ಸಿಪಾಯಿಗಳ ನಡುವೆ ನಿದ್ದೆಮಾಡುತ್ತಿದ್ದನು. ಕಾವಲುಗಾರರು ಬಾಗಿಲ ಮುಂದೆ ನಿಂತು ಸೆರೆಮನೆಯನ್ನು ಕಾಯುತ್ತಿದ್ದರು. 7ಫಕ್ಕನೆ ಕರ್ತನ ದೂತನು ಪೇತ್ರನೆದುರಿಗೆ ನಿಂತನು; ಅವನಿದ್ದ ಕೋಣೆಯಲ್ಲಿ ಬೆಳಕು ಹೊಳೆಯಿತು. ಅವನು ಪೇತ್ರನ ಪಕ್ಕೆಯನ್ನು ತಟ್ಟಿ ಎಬ್ಬಿಸಿ; “ತಟ್ಟನೆ ಏಳು” ಅಂದನು. ಆಗಲೇ ಅವನ ಕೈಗಳಿಗೆ ಹಾಕಿದ್ದ ಸರಪಣಿಗಳು ಕಳಚಿಬಿದ್ದವು. 8ಆ ದೂತನು ಅವನಿಗೆ; “ನಡುಕಟ್ಟಿಕೊಂಡು, ನಿನ್ನ ಕೆರಗಳನ್ನು ಮೆಟ್ಟಿಕೋ” ಎಂದು ಹೇಳಲು, ಅವನು ಹಾಗೆಯೇ ಮಾಡಿದನು. “ನಿನ್ನ ಮೇಲಂಗಿಯನ್ನು ಹಾಕಿಕೊಂಡು ನನ್ನ ಹಿಂದೆ ಬಾ” ಅಂದನು. 9ಅವನು ಹೊರಗೆ ಬಂದು ಆ ದೂತನ ಹಿಂದೆಯೇ ಹೋಗುತ್ತಾ, ದೂತನ ಮೂಲಕವಾಗಿ ನಡೆದ ಸಂಗತಿ ನಿಜವಾದದ್ದೆಂದು ತಿಳಿಯದೆ ತಾನು ನೋಡಿದ್ದು ಕನಸು ಎಂದು ತಿಳಿದನು. 10ಅವರು ಮೊದಲನೆಯ ಮತ್ತು ಎರಡನೆಯ ಕಾವಲುಗಳನ್ನು ದಾಟಿ, ಪಟ್ಟಣಕ್ಕೆ ಹೋಗುವ ಕಬ್ಬಿಣದ ಬಾಗಿಲಿಗೆ ಬಂದಾಗ ಅದು ತನ್ನಷ್ಟಕ್ಕೆ ತಾನೇ ಅವರಿಗೆ ತೆರೆಯಿತು; ಅವರು ಹೊರಗೆ ಬಂದು ಒಂದು ಬೀದಿಯನ್ನು ದಾಟಿದರು; ಕೂಡಲೇ ಆ ದೂತನು ಅವನನ್ನು ಬಿಟ್ಟು ಹೋದನು. 11ಆಗ ಪೇತ್ರನು ಎಚ್ಚರಗೊಂಡು; “ಕರ್ತನು ತನ್ನ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ, ಯೆಹೂದ್ಯಜನರು ನನಗೆ ಮಾಡಬೇಕೆಂದಿದ್ದ ಕೇಡಿನಿಂದಲೂ, ನನ್ನನ್ನು ಬಿಡಿಸಿದನೆಂದು ನನಗೀಗ ನಿಜವಾಗಿ ತಿಳಿಯಿತು” ಎಂದು ಅಂದುಕೊಂಡನು.

ಸುವಾರ್ತೆ

ಯೋಹಾ 5:24–30

24ನಿಮಗೆ ನಿಜನಿಜವಾಗಿ ಹೇಳುತ್ತೇನೆ ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು ನಿತ್ಯ ಜೀವವನ್ನು ಹೊಂದಿದ್ದಾನೆ, ಅವನು ಖಂಡನೆಗೆ ಗುರಿಯಾಗುವುದಿಲ್ಲ, ಮರಣದಿಂದ ಪಾರಾಗಿ ಜೀವದಲ್ಲಿ ಸೇರಿದ್ದಾನೆ. 25ನಿಮಗೆ ನಿಜನಿಜವಾಗಿ ಹೇಳುತ್ತೇನೆ ಸತ್ತವರು ದೇವಕುಮಾರನ ಸ್ವರವನ್ನು ಕೇಳುವ ಕಾಲ ಬರುತ್ತದೆ, ಅದು ಈಗಾಗಲೇ ಬಂದಿದೆ, ಕೇಳಿದವರು ಬದುಕುವರು. 26ತಂದೆಯು ತಾನು ಹೇಗೆ ಸ್ವತಃ ಜೀವವುಳ್ಳವನಾಗಿದ್ದಾನೋ, ಹಾಗೆಯೇ ಮಗನೂ ಸ್ವತಃ ಜೀವವುಳ್ಳವನಾಗಿರುವಂತೆ ಮಾಡಿದ್ದಾನೆ. 27ಮಗನು ಮನುಷ್ಯಕುಮಾರನಾಗಿರುವುದರಿಂದ ನ್ಯಾಯತೀರ್ಪು ಮಾಡುವ ಅಧಿಕಾರವನ್ನೂ ತಂದೆ ಆತನಿಗೆ ಕೊಟ್ಟಿದ್ದಾನೆ. 28ಅದಕ್ಕೆ ಆಶ್ಚರ್ಯಪಡಬೇಡಿರಿ. ಒಂದು ಕಾಲ ಬರುತ್ತದೆ, ಆಗ ಸಮಾಧಿಗಳಲ್ಲಿರುವವರೆಲ್ಲಾ ಆತನ ಸ್ವರವನ್ನು ಕೇಳಿ, 29ಎದ್ದು ಹೊರಗೆ ಬರುವರು. ಒಳ್ಳೆಯದನ್ನು ಮಾಡಿದವರಿಗೆ ನಿತ್ಯಜೀವಕ್ಕಾಗಿ ಪುನರುತ್ಥಾನವಾಗುವುದು. ಕೆಟ್ಟದ್ದನ್ನು ಮಾಡಿದವರು ಖಂಡನೆಗಾಗಿ ಪುನರುತ್ಥಾನವನ್ನೂ ಹೊಂದುವರು. 30“ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು ತಂದೆಯು ಹೇಳಿದ್ದನ್ನು ನಾನು ಕೇಳಿ ನ್ಯಾಯತೀರಿಸುತ್ತೇನೆ ಮತ್ತು ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ನಾನು ಬಯಸುವುದರಿಂದ ನಾನು ಮಾಡುವ ತೀರ್ಪು ನ್ಯಾಯವಾಗಿದೆ.

ಸುವಾರ್ತೆ (ಸಂತ ಯಾಕೋಬ)

ಲೂಕ 5:1–11

1ಒಮ್ಮೆ ಯೇಸು ಗೆನೆಜರೇತ್ ಸರೋವರದ ದಡದಲ್ಲಿ ನಿಂತಿದ್ದಾಗ ಜನರು ಗುಂಪಾಗಿ ಬಂದು ದೇವರ ವಾಕ್ಯವನ್ನು ಕೇಳುವುದಕ್ಕಾಗಿ ಆತನನ್ನು ಸುತ್ತುವರೆದು ನೂಕಾಡುತ್ತಿದ್ದರು. 2ಯೇಸು ಆ ಸರೋವರದ ದಡದಲ್ಲಿದ್ದ ಎರಡು ದೋಣಿಗಳನ್ನು ಕಂಡನು. ಬೆಸ್ತರು ಅವುಗಳೊಳಗಿಂದ ಹೊರಗೆ ಬಂದು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. 3ಆ ದೋಣಿಗಳಲ್ಲಿ, ಸೀಮೋನನ ದೋಣಿಯನ್ನು ಯೇಸು ಹತ್ತಿ ದಡದಿಂದ ಸ್ವಲ್ಪ ದೂರಕ್ಕೆ ನೂಕಬೇಕೆಂದು ಅವನನ್ನು ಕೇಳಿಕೊಂಡನು. ತರುವಾಯ ಯೇಸು ಕುಳಿತುಕೊಂಡು ದೋಣಿಯೊಳಗಿಂದಲೇ ಆ ಜನರ ಗುಂಪಿಗೆ ಉಪದೇಶಮಾಡಿದನು. 4ಮಾತನಾಡುವುದನ್ನು ಮುಗಿಸಿದ ಮೇಲೆ ಸೀಮೋನನಿಗೆ, “ಆಳವಾದ ಸ್ಥಳಕ್ಕೆ ದೋಣಿಯನ್ನು ನಡೆಸಿ ಮೀನುಹಿಡಿಯಲು ನಿಮ್ಮ ಬಲೆಗಳನ್ನು ಬೀಸಿರಿ” ಎಂದು ಹೇಳಿದನು. 5ಅದಕ್ಕೆ ಸೀಮೋನನು, “ಗುರುವೇ, ನಾವು ರಾತ್ರಿಯೆಲ್ಲಾ ಪ್ರಯತ್ನಪಟ್ಟರೂ ಏನೂ ಸಿಕ್ಕಲಿಲ್ಲ; ಆದರೆ ನಿನ್ನ ಮಾತಿನ ಮೇಲೆ ಬಲೆಗಳನ್ನು ಬೀಸುತ್ತೇವೆ” ಅಂದನು. 6ಅವರು ಬಲೆಗಳನ್ನು ಬೀಸಿದ ಮೇಲೆ ಮೀನುಗಳು ರಾಶಿರಾಶಿಯಾಗಿ ಬಲೆಗೆ ಸಿಕ್ಕಿಕೊಂಡಿದ್ದರ ಪರಿಣಾಮ ಬಲೆಗಳು ಹರಿದುಹೋಗುವಂತ್ತಿದವು. 7ಆಗ ಅವರು ಮತ್ತೊಂದು ದೋಣಿಯಲ್ಲಿದ್ದ ತಮ್ಮ ಸಂಗಡಿಗರನ್ನೂ ಕರೆದು, ನೀವು ಬಂದು ನಮಗೆ ನೆರವಾಗಬೇಕೆಂದು ಸನ್ನೆಮಾಡಿದರು. ಅವರು ಬಂದು ಆ ಎರಡು ದೋಣಿಗಳಲ್ಲಿ ಮೀನುಗಳನ್ನು ತುಂಬಿಸಲು, ಅವು ಮುಳುಗುವ ಹಾಗಾದವು. 8ಸೀಮೋನ್ ಪೇತ್ರನು ಇದನ್ನು ಕಂಡು ಯೇಸುವಿನ ಮೊಣಕಾಲಿಗೆ ಬಿದ್ದು, “ಕರ್ತನೇ, ನಾನು ಪಾಪಾತ್ಮನು; ನನ್ನನ್ನು ಬಿಟ್ಟುಹೋಗು” ಅಂದನು. 9ಏಕೆಂದರೆ ಅವನಿಗೂ ಅವನ ಸಂಗಡ ಇದ್ದವರೆಲ್ಲರಿಗೂ ತಾವು ಹಿಡಿದ ಮೀನುಗಳ ನಿಮಿತ್ತ ಆಶ್ಚರ್ಯಪಟ್ಟಿದ್ದರು. 10ಸೀಮೋನನ ಸಂಗಡಿಗರಾಗಿದ್ದ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೂ ಹಾಗೆಯೇ ಆಶ್ಚರ್ಯಪಟ್ಟರು. ಯೇಸು ಸೀಮೋನನಿಗೆ, “ಅಂಜಬೇಡ, ಇಂದಿನಿಂದ ನೀನು ಮನುಷ್ಯರನ್ನು ಹಿಡಿಯುವ ಬೆಸ್ತನಾಗಿರುವಿ” ಎಂದು ಹೇಳಿದನು. 11ಅವರು ತಮ್ಮ ದೋಣಿಗಳನ್ನು ದಡಕ್ಕೆ ತಂದು ಮತ್ತು ಎಲ್ಲವನ್ನು ಬಿಟ್ಟು ಅಂದಿನಿಂದ ಯೇಸುವನ್ನು ಹಿಂಬಾಲಿಸಿದರು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 30 ಏಪ್ರಿಲ್ ಎಂದರೆ ನಾಗರಿಕ ಪಂಚಾಂಗದ 13 ಮೇ. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು