ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಏಪ್ರಿಲ್ 2027 › 5 ಏಪ್ರಿಲ್
ಆರ್ಥೊಡಾಕ್ಸ್ ಪಂಚಾಂಗ · ಮಾರ್ಚ್ 23 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 5 ಏಪ್ರಿಲ್ 2027
ಸೋಮವಾರ · ಮಹಾ ಉಪವಾಸದ ನಾಲ್ಕನೆಯ ವಾರ · ಸ್ವರ 3
ಹಬ್ಬಗಳು ಮತ್ತು ಸಂತರು
Martyr Nikon in Sicily and his 199 Disciples († 251)
ಮಹಾ ಉಪವಾಸ ಕಾಲ
ಕಟ್ಟುನಿಟ್ಟಿನ ಉಪವಾಸ (ಒಣ ಆಹಾರ: ರೊಟ್ಟಿ, ತರಕಾರಿ, ಹಣ್ಣು)
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಆರನೆಯ ತಾಸು
24ಸೇನಾಧೀಶ್ವರನಾದ ಯೆಹೋವನು ಆಣೆಯಿಟ್ಟು ಹೇಳುವುದೇನೆಂದರೆ, “ನಾನು ಸಂಕಲ್ಪಿಸಿದ್ದೇ ನೆರವೇರುವುದು, ಉದ್ದೇಶಿಸಿದ್ದೇ ಖಂಡಿತವಾಗಿ ನಿಲ್ಲುವುದು. 25ಅಶ್ಶೂರ್ಯರನ್ನು ನನ್ನ ದೇಶದಲ್ಲಿ ಮುರಿದು, ನನ್ನ ಬೆಟ್ಟಗಳ ಮೇಲೆ ತುಳಿದುಬಿಡುವೆನು. ಆಗ ಅವರು ಹೂಡಿದ ನೊಗವು ನನ್ನ ಜನರಿಂದ ತೊಲಗಿ, ಹೊರಿಸಿದ ಹೊರೆಯು ನನ್ನ ಜನರ ಹೆಗಲ ಮೇಲಿನಿಂದ ದೂರವಾಗುವುದು. 26ಇದೇ ಲೋಕದಲ್ಲೆಲ್ಲಾ ನೆರವೇರಬೇಕಾದ ನನ್ನ ಉದ್ದೇಶ, ಇದೇ ಜನಾಂಗಗಳ ಮೇಲೆಲ್ಲಾ ಚಾಚಿದ ನನ್ನ ಕೈ. 27ಏಕೆಂದರೆ ಸೇನಾಧೀಶ್ವರನಾದ ಯೆಹೋವನು ಉದ್ದೇಶಿಸಿದ್ದಾನೆ, ಅದನ್ನು ಯಾರು ವ್ಯರ್ಥಪಡಿಸುವರು? ಆತನ ಕೈ ಚಾಚಿದೆ, ಹಿಂದಕ್ಕೆ ತಳ್ಳುವವರು ಯಾರು?” ಎಂಬುದೇ. 28ಅರಸನಾದ ಆಹಾಜನು ಮರಣ ಹೊಂದಿದ ವರ್ಷದಲ್ಲಿ ಈ ದೈವೋಕ್ತಿಯು ಬಂದಿತು: 29ಎಲೈ, ಎಲ್ಲಾ ಫಿಲಿಷ್ಟಿಯರೇ, ನಿಮ್ಮನ್ನು ಹೊಡೆದ ಕೋಲು ಮುರಿದುಹೋಯಿತೆಂದು ಉಲ್ಲಾಸಗೊಳ್ಳದಿರಿ; ಏಕೆಂದರೆ ನಾಗರ ಹಾವಿನ ಸಂತಾನದಿಂದ ವಿಷಸರ್ಪವು ಉಂಟಾಗುವುದು. ಅದರ ಸಂತತಿಯು ಹಾರುವ ಸರ್ಪವೇ. 30ಬಡವರಲ್ಲಿ ಹಿರಿಯ ಮಕ್ಕಳು ಆಹಾರವನ್ನು ಕಂಡುಕೊಳ್ಳುವರು. ದಿಕ್ಕಿಲ್ಲದವರೂ ನಿರ್ಭಯವಾಗಿ ಮಲಗಿಕೊಳ್ಳುವರು. ಆದರೆ ನಿಮ್ಮ ಸಂತಾನವನ್ನೋ ಕ್ಷಾಮದಿಂದ ಸಾಯಿಸುವೆನು, ನಿಮ್ಮಲ್ಲಿ ಉಳಿದವರನ್ನು (ಆ ಸರ್ಪವೇ) ಕ್ಷಾಮವು ಕೊಲ್ಲುವುದು. 31ಪುರದ್ವಾರವೇ, ಗೋಳಾಡು! ಪಟ್ಟಣವೇ, ಕೂಗು! ಎಲ್ಲಾ ಫಿಲಿಷ್ಟಿಯರೇ, ಕರಗಿ ಹೋಗುವಿರಿ! ಉತ್ತರದಿಂದ ಹೊಗೆಯು ಬರುತ್ತದೆ. ಆ ವ್ಯೂಹದಲ್ಲಿ ಹಿಂದೆ ಬೀಳುವವರು ಯಾರೂ ಇಲ್ಲ. 32ಹೀಗಿರಲು ಜನಾಂಗಗಳ ರಾಯಭಾರಿಗಳಿಗೆ ಏನು ಉತ್ತರ ಕೊಡಬೇಕೆಂದರೆ ಯೆಹೋವನು ಚೀಯೋನನ್ನು ಸ್ಥಾಪಿಸಿದ್ದಾನೆ, ಬಾಧೆಪಟ್ಟ ಆತನ ಜನರು ಅದನ್ನು ಆಶ್ರಯಿಸಿಕೊಳ್ಳುವರು ಎಂಬುದೇ.
ಸಂಧ್ಯಾ ಪ್ರಾರ್ಥನೆ: ವಾಚನ
21ಅದರ ಸುವಾಸನೆಯು ಯೆಹೋವನಿಗೆ ಗಮಗಮಿಸಲು ಆತನು ಹೃದಯದೊಳಗೆ, “ಮನುಷ್ಯರ ಹೃದಯದ ಆಲೋಚನೆ ಚಿಕ್ಕಂದಿನಿಂದಲೇ ಕೆಟ್ಟದ್ದು, ಆದರೂ ನಾನು ಇನ್ನು ಮೇಲೆ ಅವರ ನಿಮಿತ್ತವಾಗಿ ಭೂಮಿಯನ್ನು ಶಪಿಸುವುದಿಲ್ಲ. ನಾನು ಎಲ್ಲಾ ಜೀವಿಗಳನ್ನೂ ಈಗ ನಾಶಮಾಡಿದಂತೆ ಇನ್ನು ಮೇಲೆ ನಾಶ ಮಾಡುವುದಿಲ್ಲ. 22ಭೂಮಿಯು ಇರುವವರೆಗೆ ಬಿತ್ತುವ ಕಾಲವೂ ಕೊಯ್ಯುವ ಕಾಲವೂ ಚಳಿಯೂ, ಮಳೆಯೂ, ಬೇಸಿಗೆ ಕಾಲವೂ, ಹಿಮಕಾಲವೂ, ಹಗಲೂ, ಇರುಳೂ ಇವುಗಳ ಕ್ರಮ ನಿಂತುಹೋಗುವುದಿಲ್ಲ” ಎಂದನು. 9:1ದೇವರು ನೋಹನನ್ನೂ, ಅವನ ಮಕ್ಕಳನ್ನೂ ಆಶೀರ್ವದಿಸಿ ಅವರಿಗೆ, “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ. 2ಭೂಮಿಯ ಮೇಲಿರುವ ಎಲ್ಲಾ ಮೃಗಗಳೂ, ಆಕಾಶದ ಎಲ್ಲಾ ಪಕ್ಷಿಗಳೂ, ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳೂ, ಸಮುದ್ರದ ಮೀನುಗಳೂ ನಿಮಗೆ ಹೆದರುವವು. ನಾನು ಅವುಗಳನ್ನೆಲ್ಲಾ ನಿಮ್ಮ ಸ್ವಾಧೀನಕ್ಕೆ ಕೊಟ್ಟಿದ್ದೇನೆ. 3ಭೂಮಿಯ ಮೇಲೆ ಚಲಿಸುವ ಎಲ್ಲಾ ಕ್ರಿಮಿಕೀಟಗಳೂ ನಿಮಗೆ ಆಹಾರವಾಗಿರುವವು. ನಾನು ನಿಮ್ಮ ಆಹಾರಕ್ಕೆ ಹಸಿರುಪಲ್ಯಗಳನ್ನು ನಿಮಗೆ ಕೊಟ್ಟಂತೆ ಇವುಗಳನ್ನೂ ಕೊಟ್ಟಿದ್ದೇನೆ. 4ಆದರೆ ಮಾಂಸವನ್ನು ಅದರ ಜೀವಸತ್ವವಾದ ರಕ್ತದೊಂದಿಗೆ ನೀವು ತಿನ್ನಬಾರದು. ಏಕೆಂದರೆ ರಕ್ತದಲ್ಲಿ ಜೀವ ಇದೆ. 5ಇದಲ್ಲದೆ ನಿಮ್ಮ ರಕ್ತ ಸುರಿಸಿ ಜೀವ ತೆಗೆಯುವವನಿಗೆ ಮುಯ್ಯಿತೀರಿಸುವೆನು. ಮೃಗವಾಗಿದ್ದರೆ, ಅದಕ್ಕೂ ಮುಯ್ಯಿತೀರಿಸುವೆನು. ಮನುಷ್ಯನಾಗಿದ್ದರೆ, ಹತನಾದವನು ಅವನ ಸಹೋದರನಾದುದರಿಂದ ಅವನಿಗೂ ಮುಯ್ಯಿ ತೀರಿಸುವೆನು. ನರಹತ್ಯವು ಸಹೋದರ ಹತ್ಯವಲ್ಲವೇ? 6ದೇವರು ಮನುಷ್ಯರನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದ್ದರಿಂದ ಯಾರು ಮನುಷ್ಯನ ರಕ್ತವನ್ನು ಸುರಿಸುತ್ತಾನೋ ಅವನ ರಕ್ತವನ್ನು ಮನುಷ್ಯನೇ ಸುರಿಸುವನು. 7ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಭೂಮಿಯ ಮೇಲೆ ನಿಮಗೆ ಬಹುಸಂತಾನವಾಗಲಿ” ಎಂದು ಹೇಳಿದನು.
ಸಂಧ್ಯಾ ಪ್ರಾರ್ಥನೆ: ವಾಚನ
19ಧರ್ಮನಿರತನಿಗೆ ಜೀವ, ಅಧರ್ಮಾಸಕ್ತನಿಗೆ ಮರಣ. 20ವಕ್ರಹೃದಯರು ಯೆಹೋವನಿಗೆ ಅಸಹ್ಯರು, ಸನ್ಮಾರ್ಗಿಗಳು ಆತನ ದಯೆಗೆ ಪಾತ್ರರು. 21ದುಷ್ಟನಿಗೆ ದಂಡನೆ ಖಂಡಿತ, ಶಿಷ್ಟವಂಶಕ್ಕೆ ರಕ್ಷಣೆ. 22ಹಂದಿಯ ಮೂಗಿಗೆ ಚಿನ್ನದ ಮೂಗುತಿಯು ಹೇಗೋ, ಅವಿವೇಕಳಿಗೆ ಸೌಂದರ್ಯವು ಹಾಗೆ. 23ಸಜ್ಜನರ ಆಶೆಯು ಮಂಗಳಾಸ್ಪದ, ದುರ್ಜನರ ನಿರೀಕ್ಷೆಯು ರೋಷಾಸ್ಪದ. 24ಒಬ್ಬನು ತನ್ನ ಧನವನ್ನು ಚೆಲ್ಲಿದರೂ ಅವನಿಗೆ ವೃದ್ಧಿ, ಮತ್ತೊಬ್ಬನು ನ್ಯಾಯವಾದದ್ದನ್ನು ಬಿಗಿಹಿಡಿದರೂ ಅವನಿಗೆ ಬಡತನ. 25ಉದಾರಿಯು ಪುಷ್ಟನಾಗುವನು, ನೀರು ಹಾಯಿಸುವವನಿಗೆ ನೀರು ಸಿಕ್ಕುವುದು. 26ಧಾನ್ಯವನ್ನು ಬಿಗಿಹಿಡಿಯುವವನ ಮೇಲೆ ಜನರ ಶಾಪ, ಮಾರುವವನ ತಲೆಯ ಮೇಲೆ ಆಶೀರ್ವಾದ. 27ಧರ್ಮಕ್ಕೆ ಆತುರಪಡುವವನಿಗೆ ದಯೆ, ಕೇಡನ್ನು ಹುಡುಕುವವನಿಗೆ ಕೇಡೇ. 28ಧನವನ್ನೇ ನಂಬಿದವನು ಬಿದ್ದುಹೋಗುವನು, ಸದ್ಧರ್ಮಿಯು ಕುಡಿಯ ಹಾಗೆ ಚಿಗುರುವನು. 29ತನ್ನ ಕುಟುಂಬವನ್ನು ಬಾಧಿಸುವವನಿಗೆ ಗಾಳಿಯೇ ಗಂಟು, ಮೂರ್ಖನು ಜ್ಞಾನವಂತನ ಅಧೀನದಲ್ಲಿ ಬಿದ್ದಿರುವನು; 30ಧರ್ಮಾತ್ಮನ ಫಲ ಜೀವವೃಕ್ಷ, ಜ್ಞಾನಿಯು ಆತ್ಮಗಳನ್ನು ಆಕರ್ಷಿಸುವನು. 31ಶಿಷ್ಟನು ಭೂಮಿಯಲ್ಲಿ ತನ್ನ ಕ್ರಿಯಾಫಲವನ್ನು ಅನುಭವಿಸುವಲ್ಲಿ, ದುಷ್ಟನೂ, ಪಾಪಿಯೂ ದಂಡನೆಯನ್ನು ಅನುಭವಿಸುವರು ಎಂದು ಹೇಳಬೇಕಾಗಿಲ್ಲ. 12:1ತಿಳಿವಳಿಕೆಯನ್ನು ಪ್ರೀತಿಸುವವನು ಶಿಕ್ಷಣವನ್ನು ಪ್ರೀತಿಸುತ್ತಾನೆ, ಮೂರ್ಖನು ಗದರಿಕೆಯನ್ನು ದ್ವೇಷಿಸುತ್ತಾನೆ. 2ಯೆಹೋವನು ಒಳ್ಳೆಯವನಿಗೆ ದಯೆತೋರಿಸುವನು, ಕುಯುಕ್ತಿಯುಳ್ಳವನನ್ನು ಕೆಟ್ಟವನೆಂದು ನಿರ್ಣಯಿಸುವನು. 3ಯಾರೂ ದುಷ್ಟತನದಿಂದ ಸ್ಥಿರನಾಗನು, ಶಿಷ್ಟನು ಯಾವಾಗಲೂ ದೃಢಮೂಲನೇ. 4ಗುಣವತಿಯಾದ ಸ್ತ್ರೀಯು ಪತಿಯ ತಲೆಗೆ ಕಿರೀಟ, ಮಾನ ಕಳೆಯುವವಳು ಪತಿಯ ಎಲುಬಿಗೆ ಕ್ಷಯ. 5ಶಿಷ್ಟರ ಉದ್ದೇಶ ನ್ಯಾಯ, ದುಷ್ಟರ ಆಲೋಚನೆ ಮೋಸ. 6ಕೆಟ್ಟವರ ಮಾತು ರಕ್ತಕ್ಕೆ ಹೊಂಚು, ಯಥಾರ್ಥವಂತರ ನುಡಿ ಪ್ರಾಣರಕ್ಷಣೆ.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 23 ಮಾರ್ಚ್ ಎಂದರೆ ನಾಗರಿಕ ಪಂಚಾಂಗದ 5 ಏಪ್ರಿಲ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು