ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 24 ಮಾರ್ಚ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 24 ಮಾರ್ಚ್ 2027
ಬುಧವಾರ · ಪವಿತ್ರ ವಾರ
ಹಬ್ಬಗಳು ಮತ್ತು ಸಂತರು
ಪವಿತ್ರ ವಾರದ ಬುಧವಾರ
ವಾರದ ದಿನ · ಆರಾಧನಾ ಬಣ್ಣ: ನೇರಳೆ
ದಿನದ ವಾಚನಗಳು
ಮೊದಲನೆಯ ವಾಚನ
4ಬಳಲಿಹೋದವರನ್ನು ಮಾತುಗಳಿಂದ ಸುಧಾರಿಸುವುದಕ್ಕೆ ನಾನು ಬಲ್ಲವನಾಗುವಂತೆ ಕರ್ತನಾದ ಯೆಹೋವನು ಶಿಕ್ಷಿತರ ನಾಲಿಗೆಯನ್ನು ನನಗೆ ದಯಪಾಲಿಸಿದ್ದಾನೆ. ಮುಂಜಾನೆಯಿಂದ ಮುಂಜಾನೆಗೆ ನನ್ನನ್ನು ಎಚ್ಚರಿಸಿ ಶಿಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಎಚ್ಚರಗೊಳಿಸುತ್ತಾನೆ. 5ಕರ್ತನಾದ ಯೆಹೋವನು ನನ್ನ ಕಿವಿಯನ್ನು ತೆರೆದಿದ್ದಾನೆ. ನಾನು ಎದುರು ಬೀಳಲಿಲ್ಲ, ವಿಮುಖನಾಗಲೂ ಇಲ್ಲ. 6ನಾನು ಹೊಡೆಯುವವರಿಗೆ ಬೆನ್ನುಕೊಟ್ಟು, ಕೂದಲು ಕೀಳುವವರಿಗೆ ಗಡ್ಡವನ್ನು ಒಡ್ಡಿದೆನು. ಉಗುಳಿಸಿಕೊಳ್ಳುವ ಅವಮಾನಕ್ಕೆ ನನ್ನ ಮುಖವನ್ನು ಮರೆಮಾಡಿಕೊಳ್ಳಲಿಲ್ಲ. 7ಕರ್ತನಾದ ಯೆಹೋವನು ನನಗೆ ಸಹಾಯಮಾಡುವನು. ಆದಕಾರಣ ನಾನು ನಾಚಿಕೆಯಿಂದ ಕೊರಗಲಿಲ್ಲ; ನನ್ನ ಮುಖವನ್ನು ಕಗ್ಗಲ್ಲಿನಂತೆ ಗಟ್ಟಿಮಾಡಿಕೊಂಡಿದ್ದೇನೆ. ಆಶಾಭಂಗಪಡಲಾರನೆಂದು ನನಗೆ ಗೊತ್ತು. 8ನನ್ನ ನೀತಿ ನಿರ್ಣಯಿಸುವಾತನು ಸಮೀಪದಲ್ಲಿದ್ದಾನೆ. ನನ್ನೊಡನೆ ಯಾರು ವ್ಯಾಜ್ಯವಾಡುವರು? ನಾವಿಬ್ಬರು ನ್ಯಾಯಾಸನದ ಮುಂದೆ ನಿಂತುಕೊಳ್ಳುವ. ನನಗೆ ಪ್ರತಿಕಕ್ಷಿಯು ಯಾರು? ಅವನು ನನ್ನ ಬಳಿಗೆ ಬರಲಿ. 9ಆಹಾ, ಕರ್ತನಾದ ಯೆಹೋವನು ನನಗೆ ಸಹಾಯಮಾಡುವನು. ನನ್ನನ್ನು ಅಪರಾಧಿ ಎಂದು ನಿರ್ಣಯಿಸುವವನು ಯಾರು? ಇಗೋ, ಅವರೆಲ್ಲರೂ ಹಳೆಯ ವಸ್ತ್ರದಂತಾಗುವರು. ಅವರನ್ನು ನುಸಿಯು ತಿಂದುಬಿಡುವುದು.
ಪ್ರತಿವಚನ ಕೀರ್ತನೆ
ಕೀರ್ತ 69:7–9, 20–21, 30, 32–33
7ನಿನಗೋಸ್ಕರವಾಗಿ ನಿಂದೆಗೆ ಒಳಗಾದೆನಲ್ಲಾ; ನಾಚಿಕೆಯು ನನ್ನ ಮುಖವನ್ನು ಕವಿದಿದೆ. 8ನನ್ನ ಅಣ್ಣತಮ್ಮಂದಿರಿಗೆ ಅಪರಿಚಿತನಂತಾದೆನು; ಒಡಹುಟ್ಟಿದವರಿಗೆ ಪರದೇಶಿಯಂತೆ ಇದ್ದೇನೆ. 9ನಿನ್ನ ಆಲಯದ ಅಭಿಮಾನವು ನನ್ನನ್ನು ಬೆಂಕಿಯಂತೆ ದಹಿಸಿದೆ. ನಿನ್ನನ್ನು ದೂಷಿಸುವವರ ದೂಷಣೆಗಳು ನನ್ನ ಮೇಲೆ ಬಂದಿವೆ. 20ನಿಂದೆಯಿಂದ ನಿರಾಶೆಗೊಂಡು ಕುಂದಿಹೋಗಿದ್ದೇನೆ. ಕರುಣಾಳುಗಳನ್ನು ನಿರೀಕ್ಷಿಸಿದೆ; ದೊರೆಯಲಿಲ್ಲ. ಸಂತೈಸುವವರನ್ನು ಹಾರೈಸಿದೆ; ಸಿಕ್ಕಲಿಲ್ಲ. 21ನನಗೆ ಉಣ್ಣುವುದಕ್ಕೆ ಕಹಿಯಾದ ವಸ್ತುವನ್ನೂ, ಬಾಯಾರಿದಾಗ, ಹುಳಿ ದ್ರಾಕ್ಷಾರಸವನ್ನೂ ಕೊಟ್ಟರು. 30ನಾನು ಸಂಕೀರ್ತಿಸುತ್ತಾ ದೇವರ ನಾಮವನ್ನು ಕೊಂಡಾಡುವೆನು; ಕೃತಜ್ಞತಾಸ್ತುತಿಯಿಂದ ಘನಪಡಿಸುವೆನು. 32ದೀನರು ಇದನ್ನು ನೋಡಿ ಹರ್ಷಿಸುವರು. ದೇವದರ್ಶನವನ್ನು ಅಪೇಕ್ಷಿಸುವವರೇ, ನಿಮ್ಮ ಆತ್ಮವು ಉಜ್ಜೀವಿಸಲಿ. 33ಯೆಹೋವನು ಬಡವರ ಮೊರೆಗೆ ಲಕ್ಷ್ಯಕೊಡುವನು; ಸೆರೆಯಲ್ಲಿರುವ ತನ್ನವರನ್ನು ತಿರಸ್ಕರಿಸುವುದಿಲ್ಲ.
ಸುವಾರ್ತೆ
14ಆ ಮೇಲೆ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನೆಂಬುವವನು ಮುಖ್ಯಯಾಜಕರ ಬಳಿಗೆ ಹೋಗಿ, 15“ನಾನು ಆತನನ್ನು ಹಿಡಿಯಲು ನಿಮಗೆ ಸಹಾಯಮಾಡಿದರೆ ನನಗೆ ಏನು ಕೊಡುತ್ತೀರಿ?” ಅಂದನು. ಅವರು ಅವನಿಗೆ ಮೂವತ್ತು ಬೆಳ್ಳಿನಾಣ್ಯಗಳನ್ನು ತೂಗಿ ಕೊಟ್ಟರು. 16ಅಂದಿನಿಂದ ಅವನು ಆತನನ್ನು ಹಿಡಿದುಕೊಡುವುದಕ್ಕಾಗಿ ಸಂದರ್ಭ ಹುಡುಕುತ್ತಿದ್ದನು. 17ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಪಸ್ಕದ ಊಟಮಾಡುವುದಕ್ಕೆ ನಾವು ನಿನಗೆ ಎಲ್ಲಿ ಸಿದ್ಧಮಾಡಬೇಕನ್ನುತ್ತೀ” ಎಂದು ಕೇಳಿದರು. 18ಆತನು, “ನೀವು ಪಟ್ಟಣದೊಳಕ್ಕೆ ನಾನು ಸೂಚಿಸಿದವನ ಬಳಿಗೆ ಹೋಗಿ ಅವನಿಗೆ, ‘ನನ್ನ ಕಾಲ ಸಮೀಪವಾಯಿತು, ನಾನು ನಿನ್ನ ಮನೆಯಲ್ಲಿ ನನ್ನ ಶಿಷ್ಯರ ಸಂಗಡ ಪಸ್ಕಹಬ್ಬ ಮಾಡುತ್ತೇನೆ’ ಎಂಬುದಾಗಿ ಗುರುವು ಹೇಳುತ್ತಿದ್ದಾನೆ ಎಂದು ಹೇಳಿರಿ” ಅಂದನು. 19ಶಿಷ್ಯರು ಯೇಸು ತಮಗೆ ಅಪ್ಪಣೆಕೊಟ್ಟಂತೆಯೇ ಮಾಡಿ ಪಸ್ಕದ ಭೋಜನವನ್ನು ತಯಾರಿಸಿದರು. 20ಸಂಜೆಯಾದಾಗ ಆತನು ಹನ್ನೆರಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತುಕೊಂಡನು. 21ಅವರು ಊಟಮಾಡುತ್ತಿರುವಾಗ ಆತನು, “ನಿಮಗೆ ಸತ್ಯವಾಗಿ ಹೇಳುತ್ತೇನೆ ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡಿದುಕೊಡುವನು” ಅಂದನು. 22ಆಗ ಅವರು ಬಹಳ ದುಃಖಪಟ್ಟು, “ಕರ್ತನೇ, ನಾನಲ್ಲವಲ್ಲಾ?” ಎಂದು ಪ್ರತಿಯೊಬ್ಬರು ಕೇಳತೊಡಗಿದರು. 23ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಬಟ್ಟಲಲ್ಲಿ ನನ್ನ ಸಂಗಡ ಕೈ ಅದ್ದಿದವನೇ ನನ್ನನ್ನು ಹಿಡಿದುಕೊಡುವವನು. 24ಮನುಷ್ಯಕುಮಾರನು ಆತನ ವಿಷಯವಾಗಿ ಬರೆದಿರುವ ಹಾಗೆ ಹೊರಟುಹೋಗುತ್ತಾನೆ; ಆದರೆ ಯಾವನು ಮನುಷ್ಯಕುಮಾರನನ್ನು ಹಿಡಿದುಕೊಡುವನೋ ಅವನ ಗತಿಯನ್ನು ಏನೆಂದು ಹೇಳಲಿ. ಆ ಮನುಷ್ಯನು ಹುಟ್ಟದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು” ಅಂದನು. 25ಆಗ ಆತನನ್ನು ಹಿಡಿದುಕೊಡಬೇಕೆಂದಿದ್ದ ಯೂದನು, “ಗುರುವೇ, ನಾನೋ?” ಎಂದು ಕೇಳಲು ಯೇಸು ಅವನಿಗೆ, “ನೀನೇ ಹಾಗೆ ಹೇಳಿದ್ದೀ” ಎಂದು ಹೇಳಿದನು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು