Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 24 ಮಾರ್ಚ್

ಆರ್ಥೊಡಾಕ್ಸ್ ಪಂಚಾಂಗ · ಮಾರ್ಚ್ 11 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 24 ಮಾರ್ಚ್ 2027

ಬುಧವಾರ · ಮಹಾ ಉಪವಾಸದ ಎರಡನೆಯ ವಾರ · ಸ್ವರ 1

ಹಬ್ಬಗಳು ಮತ್ತು ಸಂತರು

Holy Hierarch Sophronius the Patriarch of Jerusalem (638-644)

ಮಹಾ ಉಪವಾಸ ಕಾಲ

ಕಟ್ಟುನಿಟ್ಟಿನ ಉಪವಾಸ (ಒಣ ಆಹಾರ: ರೊಟ್ಟಿ, ತರಕಾರಿ, ಹಣ್ಣು)

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಆರನೆಯ ತಾಸು

ಯೆಶಾ 5:16–25

16ಸೇನಾಧೀಶ್ವರನಾದ ಯೆಹೋವನೋ ನ್ಯಾಯತೀರಿಸುವುದರಲ್ಲಿ ಉನ್ನತೋನ್ನತನಾಗಿ ಕಾಣಿಸಿಕೊಳ್ಳುವನು. ಪರಿಶುದ್ಧನಾದ ದೇವರು ಧರ್ಮವನ್ನು ನಡೆಸುವುದರಲ್ಲಿ ಪರಿಶುದ್ಧನು ಎಂದು ಅನಿಸಿಕೊಳ್ಳುವನು. 17ಪಟ್ಟಣ ಪ್ರದೇಶಗಳು ಹಾಳಾಗಿ ಪಶುಪಾಲಕರಿಗೆ ಹುಲ್ಲುಗಾವಲುಗಳಾಗುವವು. ಕುರಿಮರಿಗಳು ಅಲ್ಲಿ ಮೇಯುವವು. 18ಅಯ್ಯೋ, ವ್ಯರ್ಥವಾದ ಹಗ್ಗಗಳಿಂದ ಅಪರಾಧ ದಂಡನೆಯನ್ನು, ರಥವನ್ನು ಹಗ್ಗಗಳಿಂದಲೋ ಎಂಬಂತೆ ಪಾಪವನ್ನು ಎಳೆದುಕೊಳ್ಳುತ್ತಾ, 19ನಾವು ಆತನ ಕೆಲಸವನ್ನು ನೋಡುವಂತೆ ಆತನು ತ್ವರೆಯಾಗಿ ಅದನ್ನು ನಡೆಸಲಿ. ಇಸ್ರಾಯೇಲರ ಸದಮಲಸ್ವಾಮಿಯ ಉದ್ದೇಶವನ್ನು ನಾವು ತಿಳಿಯಬೇಕು. ಅದು ಆದಷ್ಟು ಬೇಗ ಬರಲಿ ಎಂದು ನುಡಿಯುವವರ ದುರವಸ್ಥೆಯನ್ನು ಏನು ಹೇಳಲಿ! 20ಅಯ್ಯೋ, ಕೆಟ್ಟದ್ದನ್ನು ಒಳ್ಳೆಯದೆಂದೂ, ಒಳ್ಳೆಯದನ್ನು ಕೆಟ್ಟದೆಂದೂ ಬೋಧಿಸಿ; ಕತ್ತಲನ್ನು ಬೆಳಕೆಂದೂ, ಬೆಳಕನ್ನು ಕತ್ತಲೆಂದೂ ಸಾಧಿಸಿ; ಕಹಿಯನ್ನು ಸಿಹಿಯೆಂದು, ಸಿಹಿಯನ್ನು ಕಹಿ ಎಂದು ಎಣಿಸುವವರ ಗತಿಯನ್ನು ಏನೆಂದು ಹೇಳಲಿ! 21ಅಯ್ಯೋ, ತಮ್ಮನ್ನು ತಾವೇ ಜ್ಞಾನಿಗಳೆಂದೂ, ಸ್ವಂತ ದೃಷ್ಟಿಯಲ್ಲಿ ವಿವೇಕಿಗಳೆಂದೂ ಭಾವಿಸಿಕೊಳ್ಳುವವರ ಗತಿಯನ್ನು ಏನು ಹೇಳಲಿ!. 22ಅಯ್ಯೋ, ಸುರಾಪಾನದಲ್ಲಿ ಶೂರರೂ, ಮದ್ಯಮಿಶ್ರಣದಲ್ಲಿ ಸಾಹಸಿಗಳೂ; 23ಲಂಚಕ್ಕೋಸ್ಕರ ದೋಷಿಗಳನ್ನು ನಿರ್ದೋಷಿಗಳೆಂದು ತೀರ್ಪುಮಾಡಿ, ನ್ಯಾಯವಂತರ ನ್ಯಾಯವನ್ನು ಹಾಳುಮಾಡುವವರ ಗತಿಯನ್ನು ಏನು ಹೇಳಲಿ! 24ಅವರು ಸೇನಾಧೀಶ್ವರನಾದ ಯೆಹೋವನ ಉಪದೇಶವನ್ನು ನಿರಾಕರಿಸಿ, ಇಸ್ರಾಯೇಲರ ಸದಮಲಸ್ವಾಮಿಯ ವಾಕ್ಯವನ್ನು ಅಸಡ್ಡೆ ಮಾಡಿದ್ದರಿಂದ ಅಗ್ನಿಯ ನಾಲಿಗೆಗಳು ಒಣಕೊಳೆಯನ್ನು ನುಂಗಿಬಿಡುವಂತೆಯೂ, ಒಣಹುಲ್ಲು ಬೆಂಕಿಯಲ್ಲಿ ಸುಟ್ಟುಬಿಡುವಂತೆಯೂ, ಅದರ ಬೇರು ಕೊಳೆತು ಹೋಗುವಂತೆಯೂ, ಅದರ ಚಿಗುರು ಧೂಳಿನಂತೆಯೂ ತೂರಿ ಹೋಗುವುದು. 25ಹೀಗಿರಲು ಯೆಹೋವನು ತನ್ನ ಜನರ ಮೇಲೆ ಕೋಪಗೊಂಡು, ಅವರ ಮೇಲೆ ಕೈಯೆತ್ತಿ, ಅವರನ್ನು ಹೊಡೆದುಬಿಡುವನು. ಆಗ ಬೆಟ್ಟಗಳು ನಡಗುವವು. ಹೆಣಗಳು ಬೀದಿಗಳಲ್ಲಿ ಕಸವಾಗಿ ಬಿದ್ದಿರುವವು. ಇಷ್ಟೆಲ್ಲಾ ನಡೆದರೂ ಆತನ ಕೋಪವು ತೀರದೇ ಕೈಯೆತ್ತಿಯೇ ಇರುವುದು.

ಸಂಧ್ಯಾ ಪ್ರಾರ್ಥನೆ: ವಾಚನ

ಆದಿ 4:16–26

16ಆಗ ಕಾಯಿನನು ಯೆಹೋವನ ಸನ್ನಿಧಿಯಿಂದ ಹೊರಟು ಹೋಗಿ ಏದೆನ್ ಪೂರ್ವದಲ್ಲಿದ್ದ ನೋದ್ ಎಂಬ ದೇಶದಲ್ಲಿ ನೆಲೆಸಿದನು. 17ಕಾಯಿನನು ತನ್ನ ಹೆಂಡತಿಯನ್ನು ಸಂಗಮಿಸಲು ಅವಳು ಗರ್ಭಿಣಿಯಾಗಿ ಹನೋಕನನ್ನು ಹೆತ್ತಳು. ಇದಲ್ಲದೆ ಕಾಯಿನನು ಒಂದು ಊರನ್ನು ಕಟ್ಟಿ ಅದಕ್ಕೆ ಹನೋಕ್ ಎಂದು ತನ್ನ ಮಗನ ಹೆಸರಿಟ್ಟನು. 18ಹನೋಕನಿಂದ ಈರಾದನು ಹುಟ್ಟಿದನು. ಈರಾದನು ಮೆಹೂಯಾಯೇಲನನ್ನು ಪಡೆದನು; ಮೆಹೂಯಾಯೇಲನು ಮೆತೂಷಾಯೇಲನನ್ನು ಪಡೆದನು; ಮೆತೂಷಾಯೇಲನು ಲೆಮೆಕನನ್ನು ಪಡೆದನು. 19ಲೆಮೆಕನು ಆದಾ, ಚಿಲ್ಲಾ ಎಂಬ ಇಬ್ಬರು ಹೆಂಡತಿಯರನ್ನು ಮದುವೆ ಮಾಡಿಕೊಂಡನು. 20ಆದಾಳು ಯಾಬಾಲನನ್ನು ಹೆತ್ತಳು; ದನಕರುಗಳನ್ನು ಸಾಕುತ್ತಾ ಗುಡಾರಗಳಲ್ಲಿ ವಾಸಿಸುವವರೆಲ್ಲರ ಮೂಲ ಪುರುಷನು ಇವನೇ. 21ಇವನ ತಮ್ಮನ ಹೆಸರು ಯೂಬಾಲನು; ಇವನು ಕಿನ್ನರಿ ಮತ್ತು ಕೊಳಲುಗಳನ್ನು ನುಡಿಸುವವರ ಮೂಲ ಪುರುಷನು. 22ಚಿಲ್ಲಾ ಎಂಬುವವಳು ತೂಬಲ್ ಕಾಯಿನನನ್ನು ಹೆತ್ತಳು. ಇವನು ಕಬ್ಬಿಣ ಮತ್ತು ತಾಮ್ರದ ಆಯುಧಗಳನ್ನು ಮಾಡುವ ಕುಲುಮೆಗಾರರಿಗೆ ಮೂಲ ಪುರುಷ. ತೂಬಲ್ ಕಾಯಿನನ ತಂಗಿಯ ಹೆಸರು ನಯಮಾ. 23ಲೆಮೆಕನು ತನ್ನ ಹೆಂಡತಿಯರಿಗೆ ಹೀಗೆಂದನು; “ಆದಾ, ಚಿಲ್ಲಾ, ನನ್ನ ಮಾತಿಗೆ ಕಿವಿಕೊಡಿರಿ; ಲೆಮೆಕನ ಹೆಂಡತಿಯರೇ, ನಾನು ಹೇಳುವುದನ್ನು ಗಮನಿಸಿರಿ. ನನಗೆ ಗಾಯ ಮಾಡಿದ ಒಬ್ಬ ಮನುಷ್ಯನನ್ನು ಕೊಂದೆನು; ನನ್ನನ್ನು ಹೊಡೆದ ಒಬ್ಬ ಪ್ರಾಯಸ್ಥನನ್ನು ಹತಮಾಡಿದೆನು. 24ಕಾಯಿನನನ್ನು ಕೊಂದವನಿಗೆ ಏಳರಷ್ಟು ಪ್ರತಿದಂಡನೆ ಬರುವುದಾದರೆ, ಲೆಮೆಕನನ್ನು ಹೊಡೆಯುವವನಿಗೆ ಎಪ್ಪತ್ತೇಳರಷ್ಟಾಗುವುದು ಅಲ್ಲವೇ” ಎಂದನು. 25ಆದಾಮನು ತಿರುಗಿ ತನ್ನ ಹೆಂಡತಿಯನ್ನು ಸಂಗಮಿಸಲು ಆಕೆ ಗಂಡು ಮಗುವನ್ನು ಹೆತ್ತು, “ಕಾಯಿನನು ಕೊಂದು ಹಾಕಿದ ಹೇಬೆಲನಿಗೆ ಬದಲಾಗಿ ದೇವರು ನನಗೆ ಬೇರೊಬ್ಬ ಮಗನನ್ನು ಕೊಟ್ಟನು” ಎಂದು, ಆ ಮಗುವಿಗೆ “ಸೇತ್” ಎಂದು ಹೆಸರಿಟ್ಟಳು. 26ತರುವಾಯ ಸೇತನು ಮಗನನ್ನು ಪಡೆದು ಅವನಿಗೆ, “ಎನೋಷ್” ಎಂದು ಹೆಸರಿಟ್ಟನು. ಜನರು, “ಯೆಹೋವ” ಎಂಬ ಹೆಸರನ್ನು ಹೇಳಿಕೊಂಡು ಆರಾಧಿಸುವುದಕ್ಕೆ ಅಂದಿನಿಂದ ಪ್ರಾರಂಭಿಸಿದರು.

ಸಂಧ್ಯಾ ಪ್ರಾರ್ಥನೆ: ವಾಚನ

ಜ್ಞಾನೋ 5:15–6:3

15ಸ್ವಂತ ಕೊಳದ ನೀರನ್ನು, ಸ್ವಂತ ಬಾವಿಯಲ್ಲಿ ಉಕ್ಕುವ ಜಲವನ್ನು ಮಾತ್ರ ಕುಡಿ. 16ನಿನ್ನ ಒರತೆಗಳು ಬಯಲಿನಲ್ಲಿಯೂ, ನಿನ್ನ ಕಾಲುವೆಗಳು ಬೀದಿಗಳಲ್ಲಿಯೂ ಹರಡಿ ಹರಿಯುವುದು ಹಿತವೇ? 17ಅವು ನಿನಗೊಬ್ಬನಿಗೇ ಹರಿಯಲಿ, ಪರರು ನಿನ್ನೊಂದಿಗೆ ಸೇರಿ ಕುಡಿಯಬಾರದು. 18ನಿನ್ನ ಬುಗ್ಗೆಯು ದೇವರ ಆಶೀರ್ವಾದವನ್ನು ಹೊಂದಲಿ, ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು. 19ಆಕೆ ಮನೋಹರವಾದ ಜಿಂಕೆಯಂತೆಯೂ, ಅಂದವಾದ ದುಪ್ಪಿಯ ಹಾಗೂ ಇರುವಳಲ್ಲಾ, ಆಕೆಯ ಸ್ತನಗಳು ನಿನ್ನನ್ನು ಸರ್ವದಾ ತೃಪ್ತಿಪಡಿಸಲಿ, ಆಕೆಯ ಪ್ರೀತಿಯಲ್ಲೇ ನಿರಂತರವಾಗಿ ಲೀನವಾಗಿರು. 20ಮಗನೇ, ಏಕೆ ಪರಸ್ತ್ರೀಯಲ್ಲಿ ಭ್ರಮೆಗೊಳ್ಳುವಿ, ಅನ್ಯಳ ಎದೆಯನ್ನು ತಬ್ಬಿಕೊಳ್ಳುವುದೇಕೆ? 21ಮನುಷ್ಯನ ಮಾರ್ಗಗಳು ಯೆಹೋವನಿಗೆ ಕಾಣುತ್ತಲೇ ಇವೆ, ಆತನು ಮನುಷ್ಯನ ನಡತೆಯನ್ನೆಲ್ಲಾ ಪರೀಕ್ಷಿಸುವವನಾಗಿದ್ದಾನೆ. 22ದುಷ್ಟನ ದುಷ್ಕೃತ್ಯಗಳೇ ಅವನನ್ನು ಆಕ್ರಮಿಸುವವು, ಅವನ ಪಾಪಪಾಶಗಳೇ ಅವನನ್ನು ಬಂಧಿಸುವವು. 23ಸದುಪದೇಶದ ಕೊರತೆಯಿಂದಲೇ ನಾಶವಾಗುವನು, ತನ್ನ ಅತಿಮೂರ್ಖತನದಿಂದ ಭ್ರಾಂತನಾಗುವನು. 6:1ಮಗನೇ, ನೀನು ನೆರೆಯವನ ಸಾಲಕ್ಕೆ ಹೊಣೆಯಾಗಿದ್ದರೆ, ಪರನೊಂದಿಗೆ ಪ್ರಮಾಣ ಮಾಡಿಕೊಂಡಿದ್ದರೆ, 2ನೀನು ಮಾತುಕೊಟ್ಟು ಪಾಶಕ್ಕೆ ಸಿಕ್ಕಿಕೊಂಡಿದ್ದೀ, ನಿನ್ನ ವಾಗ್ದಾನವು ನಿನ್ನನ್ನು ಹಿಡಿದಿದೆ. 3ಹೀಗಿರಲು, ಮಗನೇ, ನೀನು ನೆರೆಯವನ ಕೈಗೆ ಸಿಕ್ಕಿಕೊಂಡದ್ದರಿಂದ ತಪ್ಪಿಸಿಕೊಳ್ಳುವ ಒಂದು ಕೆಲಸ ಮಾಡು, ನಡೆ, ತ್ವರೆಪಡು, ಆ ನೆರೆಯವನನ್ನು ಅಂಗಲಾಚಿ ಬೇಡಿಕೋ,

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 11 ಮಾರ್ಚ್ ಎಂದರೆ ನಾಗರಿಕ ಪಂಚಾಂಗದ 24 ಮಾರ್ಚ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು