Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 22 ಮಾರ್ಚ್

ಆರ್ಥೊಡಾಕ್ಸ್ ಪಂಚಾಂಗ · ಮಾರ್ಚ್ 9 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 22 ಮಾರ್ಚ್ 2027

ಸೋಮವಾರ · ಮಹಾ ಉಪವಾಸದ ಎರಡನೆಯ ವಾರ · ಸ್ವರ 1

ಹಬ್ಬಗಳು ಮತ್ತು ಸಂತರು

The Holy Forty Martyrs of Sebaste († c.320): Cyrion, Candidus, Domnus, Hesychius, Iraclius, Smaragdus, Eunoicus, Valentus, Vivian, Claudius, Priskus, Theodulus, Eutichius, John, Xanthus, Ilian, Sisinius, Angius, Aetius, Flavius, Dometian, Gaius, Leontius, Athanasius, Cyrill, Sakerdonus, Nicholas, Valerius, Philoctimon, Seberian, Chudionus, Aglaius, and Meliton

ಮಹಾ ಉಪವಾಸ ಕಾಲ

ಉಪವಾಸ: ಎಣ್ಣೆಯೊಂದಿಗೆ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಉದಯಕಾಲದ ಪ್ರಾರ್ಥನೆ: ಸುವಾರ್ತೆ (ಹುತಾತ್ಮರು)

ಲೂಕ 21:12–19

12ಆದರೆ ಇವೆಲ್ಲಾ ನಡೆಯುವುದಕ್ಕಿಂತ ಮುಂಚೆ ಅವರು ನಿಮ್ಮನ್ನು ಹಿಡಿದು ಸಭಾಮಂದಿರಗಳ ಮತ್ತು ಸೆರೆಮನೆಯ ಅಧಿಕಾರಿಗಳ ವಶಕ್ಕೆ ಕೊಟ್ಟು, ನನ್ನ ಹೆಸರಿನ ನಿಮಿತ್ತವಾಗಿ ಅರಸುಗಳ ಮುಂದೆಯೂ ಅಧಿಪತಿಗಳ ಮುಂದೆಯೂ ಕರೆದುಕೊಂಡುಹೋಗಿ ಹಿಂಸೆಪಡಿಸುವರು. 13ಇದು ಸಾಕ್ಷಿಹೇಳುವುದಕ್ಕೆ ನಿಮಗೆ ಅನುಕೂಲವಾಗುವುದು. 14ಆದುದರಿಂದ ಏನು ಉತ್ತರ ಕೊಡಬೇಕೆಂಬ ವಿಷಯದಲ್ಲಿ ನೀವು ಮುಂದಾಗಿ ಯೋಚಿಸುವುದಿಲ್ಲವೆಂದು ನಿಮ್ಮ ಮನಸ್ಸಿನಲ್ಲಿ ನಿಶ್ಚಯಮಾಡಿಕೊಳ್ಳಿರಿ. 15ಏಕೆಂದರೆ ನಿಮ್ಮ ವಿರೋಧಿಗಳೆಲ್ಲರೂ ಎದುರು ನಿಲ್ಲುವುದಕ್ಕೂ ಎದುರು ಮಾತನಾಡುವುದಕ್ಕೂ ಆಗದಂಥ ಬಾಯನ್ನೂ, ಬುದ್ಧಿಯನ್ನೂ ನಾನೇ ನಿಮಗೆ ಕೊಡುತ್ತೇನೆ. 16ಆದರೆ ತಂದೆತಾಯಿಗಳೂ, ಅಣ್ಣತಮ್ಮಂದಿರೂ, ಬಂಧುಬಾಂಧವರೂ. ಸ್ನೇಹಿತರೂ ನಿಮ್ಮನ್ನು ಅವರಿಗೆ ಒಪ್ಪಿಸಿಕೊಡುವರು ಮತ್ತು ನಿಮ್ಮಲ್ಲಿ ಕೆಲವರನ್ನು ಕೊಲ್ಲಿಸುವರು. 17ಇದಲ್ಲದೆ ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು. 18ಆದರೂ ನಿಮ್ಮದೊಂದು ತಲೆಕೂದಲಾದರೂ ನಾಶವಾಗುವುದಿಲ್ಲ. 19ನೀವು ಸೈರಣೆಯಿಂದ ನಿಮ್ಮ ಪ್ರಾಣಗಳನ್ನು ಪಡೆದುಕೊಳ್ಳುವಿರಿ.

ಆರನೆಯ ತಾಸು

ಯೆಶಾ 4:2–5:7

2ಆ ದಿನದಲ್ಲಿ ಯೆಹೋವನು ದಯಪಾಲಿಸಿದ ಬೆಳೆಯಿಂದ ಇಸ್ರಾಯೇಲರಲ್ಲಿ ಉಳಿದವರಿಗೆ ಸೌಂದರ್ಯವೂ, ಮಹಿಮೆಯೂ ಉಂಟಾಗುವವು. ದೇಶದಿಂದ ಫಲವೂ, ಉನ್ನತಿಯೂ, ಭೂಷಣವೂ ಲಭಿಸುವುದು. 3ಆಗ ಚೀಯೋನಿನಲ್ಲಿ ಉಳಿದವರು, ಯೆರೂಸಲೇಮಿನಲ್ಲಿ ಉಳಿದವರು ಮತ್ತು ಯೆರೂಸಲೇಮಿನಲ್ಲಿ ವಾಸಿಸುವರೆಂದು ದಾಖಲೆಗೊಂಡ ಪ್ರತಿಯೊಬ್ಬ ಮನುಷ್ಯನು ಪರಿಶುದ್ಧನೆಂದು ಕರೆಯಲ್ಪಡುವನು. 4ಆಗ ಕರ್ತನಾದ ಯೆಹೋವನು ನ್ಯಾಯತೀರ್ಪಿನ ಆತ್ಮದಿಂದಲೂ, ದಹಿಸುವ ಆತ್ಮದಿಂದಲೂ ಚೀಯೋನಿನ ಸ್ತ್ರೀಯರ ಕಲ್ಮಷವನ್ನೂ ಮತ್ತು ಯೆರೂಸಲೇಮಿನ ರಕ್ತದ ಕಲೆಯನ್ನು ತೊಳೆದುಬಿಡುವನು. 5ಆಮೇಲೆ ಯೆಹೋವನು ಚೀಯೋನ್ ಪರ್ವತದ ಪ್ರತಿಯೊಂದು ವಾಸಿಸುವ ಸ್ಥಳದ ಮೇಲೆಯೂ, ಅಲ್ಲಿ ನಡೆಯುವ ಸಭೆಗಳ ಮೇಲೆಯೂ, ಹಗಲಲ್ಲಿ ಹೊಗೆಯನ್ನೂ, ಮೇಘವನ್ನೂ, ಇರುಳಲ್ಲಿ ಪ್ರಜ್ವಲಿಸುವ ಅಗ್ನಿಯ ಪ್ರಕಾಶವನ್ನೂ ಉಂಟುಮಾಡುವನು. ಈ ಮಹಿಮೆಯು ಎಲ್ಲಾ ಕಡೆಯು ಆವರಿಸಿರುವುದು. 6ಅದು ಹಗಲಿನ ಬಿಸಿಲಿನಲ್ಲಿ ನೆರಳನ್ನೂ, ಸಣ್ಣ ದೊಡ್ಡ ಮಳೆಗಳಲ್ಲಿ ಆಶ್ರಯವನ್ನೂ ಕೊಡುವ ಗುಡಾರವಾಗಿರುವುದು. 5:1ನನ್ನ ಪ್ರಿಯನಾದವನ ಬಗ್ಗೆ ಮತ್ತು ಅವನ ತೋಟವನ್ನೂ ಕುರಿತು ಒಂದು ಗೀತೆಯನ್ನು ಹಾಡುವೆನು. ಕೇಳಿರಿ, ಫಲವತ್ತಾದ ಗುಡ್ಡದ ಮೇಲೆ ನನ್ನ ಅತಿಪ್ರಿಯನಿಗೆ ದ್ರಾಕ್ಷಿಯ ತೋಟವಿತ್ತು. 2ಅವನು ಅದನ್ನು ಅಗೆದು, ಕಲ್ಲುಗಳನ್ನು ತೆಗೆದುಹಾಕಿ, ಒಳ್ಳೆಯ ದ್ರಾಕ್ಷಿಯ ಸಸಿಗಳನ್ನು ನೆಟ್ಟು, ಮಧ್ಯದಲ್ಲಿ ಗೋಪುರವನ್ನು ಕಟ್ಟಿ, ದ್ರಾಕ್ಷಿಯ ತೊಟ್ಟಿಯನ್ನು ಕೊರೆಯಿಸಿ, ತೋಟವು ಒಳ್ಳೆಯ ಸಿಹಿ ದ್ರಾಕ್ಷಿಯ ಹಣ್ಣನ್ನು ಕೊಡುವುದೆಂದು ಎದುರುನೋಡುತ್ತಿರಲು, ಅದು ಹುಳಿ ಹಣ್ಣನ್ನು ಕೊಟ್ಟಿತು. 3ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಜನರೇ, ಈಗ ನನಗೂ, ನನ್ನ ದ್ರಾಕ್ಷಿಯ ತೋಟಕ್ಕೂ ನ್ಯಾಯತೀರಿಸಿರಿ. 4ನನ್ನ ದ್ರಾಕ್ಷಿಯ ತೋಟದಲ್ಲಿ ಹಿಂದೆ ನಾನು ಮಾಡಿದ್ದಕ್ಕಿಂತಲೂ ಇನ್ನೂ ಹೆಚ್ಚಾಗಿ ಇನ್ನೇನು ಮಾಡಬೇಕಾಗಿತ್ತು? ಅದು ಒಳ್ಳೆಯ ದ್ರಾಕ್ಷಿಯ ಫಲವನ್ನು ಕೊಡುವುದೆಂದು ನಾನು ನಿರೀಕ್ಷಿಸುತ್ತಿರಲು, ಅದು ಹುಳಿ ಹಣ್ಣನ್ನು ಏಕೆ ಕೊಟ್ಟಿತು? 5ನನ್ನ ದ್ರಾಕ್ಷಿಯ ತೋಟವನ್ನು ಏನು ಮಾಡುವೆನು ಎಂದು ಈಗ ನಿಮಗೆ ತಿಳಿಸುತ್ತೇನೆ. ಅದರ ಮುಳ್ಳು ಬೇಲಿಯನ್ನು ಕೀಳುವೆನು. ದನಗಳು ಅದನ್ನು ಮೇಯ್ದುಬಿಡುವುದು. ಅದರ ಗೋಡೆಯನ್ನು ಕೆಡವಿ ಹಾಕುವೆನು. ಅದು ಜನರ ತುಳಿದಾಟಕ್ಕೆ ಈಡಾಗುವುದು. 6ಅದನ್ನು ಹಾಳುಮಾಡುವೆನು. ದ್ರಾಕ್ಷಿಯ ತೋಟವನ್ನು ಯಾರೂ ಕುಡಿ ಕತ್ತರಿಸಿ ಅಗೆಯುವುದಿಲ್ಲ. ಅದರಲ್ಲಿ ಮುಳ್ಳುಕಳೆ ಬೆಳೆಯುವುದು. ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಅಪ್ಪಣೆ ಕೊಡುವೆನು. 7ಸೇನಾಧೀಶ್ವರನಾದ ಯೆಹೋವನ ದ್ರಾಕ್ಷಿಯ ತೋಟವು ಇಸ್ರಾಯೇಲರ ಮನೆಯೇ, ಯೆಹೂದದ ಜನವೇ, ಆತನ ಇಷ್ಟದ ಗಿಡ. ಆತನು ನ್ಯಾಯವನ್ನು ನಿರೀಕ್ಷಿಸಲು ನರಹತ್ಯೆ, ನೀತಿಯನ್ನು ನಿರೀಕ್ಷಿಸಿಲು ಗೋಳಾಟವೂ ಸಿಕ್ಕಿತ್ತು.

ಸಂಧ್ಯಾ ಪ್ರಾರ್ಥನೆ: ವಾಚನ

ಆದಿ 3:21–4:7

21ಯೆಹೋವ ದೇವರು ಆದಾಮನಿಗೂ ಅವನ ಹೆಂಡತಿಗೂ ಚರ್ಮದ ಅಂಗಿಗಳನ್ನು ಮಾಡಿ ತೊಡಿಸಿದನು. 22ಯೆಹೋವ ದೇವರು “ಈ ಮನುಷ್ಯನು ಒಳ್ಳೆಯದರ ಮತ್ತು ಕೆಟ್ಟದ್ದರ ಬೇಧವನ್ನರಿತು ನಮ್ಮಲ್ಲಿ ಒಬ್ಬನಂತಾದನಲ್ಲಾ? ಇದರಿಂದ ಇವನು ಕೈಚಾಚಿ ಜೀವವೃಕ್ಷದ ಫಲವನ್ನು ಸಹ ತಿಂದು ಶಾಶ್ವತವಾಗಿ ಬದುಕುವವನಾಗಬಾರದು” ಎಂದು ಆಜ್ಞಾಪಿಸಿದನು. 23ಆದ್ದರಿಂದ ಯೆಹೋವನು ಅವನನ್ನು ಸೃಷ್ಟಿಸಿದ ಮಣ್ಣಿನ ಭೂಮಿಯನ್ನೇ ವ್ಯವಸಾಯ ಮಾಡುವುದಕ್ಕಾಗಿ ಅವನನ್ನು ಏದೆನ್ ತೋಟದಿಂದ ಹೊರಗೆ ಕಳುಹಿಸಿ ಬಿಟ್ಟನು. 24ಹೀಗೆ ಆತನು ಮನುಷ್ಯನನ್ನು ಹೊರಗೆ ಹಾಕಿ, ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವುದಕ್ಕೆ, ಏದೆನ್ ವನದ ಪೂರ್ವ ದಿಕ್ಕಿನಲ್ಲಿ ಕೆರೂಬಿಯರನ್ನೂ, ಎಲ್ಲಾ ಕಡೆಯಲ್ಲಿ ಧಗಧಗಿಸುತ್ತಾ ಉರಿಯುವ ಜ್ವಾಲೆಯ ಕತ್ತಿಯನ್ನು ಇರಿಸಿದನು. 4:1ಆದಾಮನು ತನ್ನ ಹೆಂಡತಿಯಾದ ಹವ್ವಳನ್ನು ಸಂಗಮಿಸಲು ಆಕೆ ಗರ್ಭಿಣಿಯಾಗಿ ಕಾಯಿನನನ್ನು ಹೆತ್ತು, “ನಾನು ಯೆಹೋವನ ಅನುಗ್ರಹದಿಂದ ಗಂಡು ಮಗುವನ್ನು ಪಡೆದಿದ್ದೇನೆ” ಎಂದು ಹೇಳಿದಳು. 2ತರುವಾಯ ಅವನ ತಮ್ಮನಾದ ಹೇಬೆಲನನ್ನು ಹೆತ್ತಳು. ಹೇಬೆಲನು ಕುರಿಕಾಯುವವನಾದನು. ಕಾಯಿನನು ವ್ಯವಸಾಯಗಾರನಾದನು. 3ಕಾಲಾಂತರದಲ್ಲಿ ಕಾಯಿನನು ಹೊಲದ ಬೆಳೆಯಲ್ಲಿ ಕೆಲವನ್ನು ತಂದು ಯೆಹೋವನಿಗೆ ಕಾಣಿಕೆಯಾಗಿ ಸಮರ್ಪಿಸಿದನು. 4ಹೇಬೆಲನು ಹಾಗೆಯೇ ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು ಕಾಣಿಕೆಯಾಗಿ ತಂದು ಅವುಗಳ ಕೊಬ್ಬನ್ನು ಹೋಮ ಮಾಡಿದನು, ಯೆಹೋವನು ಹೇಬೆಲನನ್ನೂ ಅವನ ಕಾಣಿಕೆಯನ್ನು ಮೆಚ್ಚಿಕೊಂಡನು. 5ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ. ಆದ್ದರಿಂದ ಕಾಯಿನನು ಬಹು ಕೋಪಗೊಂಡನು, ಅವನ ಮುಖವು ಸಿಟ್ಟಿನಿಂದ ಕಳೆಗುಂದಿತು. 6ಆಗ ಯೆಹೋವನು ಕಾಯಿನನಿಗೆ, “ನೀನು ಕೋಪಗೊಂಡಿದ್ದೇಕೆ? 7ನಿನ್ನ ಮುಖವು ಕಳೆಗುಂದಲು ಕಾರಣವೇನು? ನೀನು ತಲೆ ತಗ್ಗಿಸಲು ಕಾರಣವೇನು? ನೀನು ಒಳ್ಳೆಯ ಕೆಲಸ ಮಾಡಿದ್ದರೆ ನಿನ್ನ ತಲೆಯು ಎತ್ತಲ್ಪಡುವುದಲ್ಲವೇ? ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಿಲಲ್ಲಿ ಹೊಂಚಿಕೊಂಡಿರುವುದು, ಅದು ನಿನ್ನನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದು. ಆದರೆ ನೀನು ಅದನ್ನು ಹಿಡಿತದಲ್ಲಿ ಇರಿಸಿಕೊಳ್ಳಬೇಕು” ಎಂದು ಹೇಳಿದನು.

ಸಂಧ್ಯಾ ಪ್ರಾರ್ಥನೆ: ವಾಚನ

ಜ್ಞಾನೋ 3:34–4:22

34ಯಾರು ಧರ್ಮವನ್ನು ತಿರಸ್ಕರಿಸುವರೋ ಅವರನ್ನು ಆತನು ತಿರಸ್ಕರಿಸುವನು. ದೀನರಿಗಾದರೋ ತನ್ನ ಕೃಪೆಯನ್ನು ಅನುಗ್ರಹಿಸುವನು. 35ಜ್ಞಾನವಂತರು ಸನ್ಮಾನಕ್ಕೆ ಬಾಧ್ಯರಾಗುವರು, ಜ್ಞಾನಹೀನರಿಗಾಗುವ ಬಹುಮಾನವು ಅವಮಾನವೇ. 4:1ಮಕ್ಕಳೇ, ತಂದೆಯ ಉಪದೇಶವನ್ನು ಕೇಳಿರಿ, ವಿವೇಕವನ್ನು ಗ್ರಹಿಸುವಂತೆ ಕಿವಿಗೊಡಿರಿ. 2ನಾನು ನಿಮಗೆ ಸುಬೋಧೆಯನ್ನು ಮಾಡುವೆನು, ನನ್ನ ಉಪದೇಶವನ್ನು ಬಿಡಬೇಡಿರಿ. 3ನಾನೂ ನನ್ನ ತಂದೆಗೆ ಅಧೀನನಾದ ಮಗನೂ, ತಾಯಿಯ ದೃಷ್ಟಿಗೆ ಕೋಮಲನಾದ ಏಕಪುತ್ರನೂ ಆಗಿದ್ದೆನು. 4ಆಗ ತಂದೆಯು ನನಗೆ ಬೋಧಕನಾಗಿ ಹೀಗೆಂದನು, “ನಿನ್ನ ಮನಸ್ಸು ನನ್ನ ಮಾತುಗಳನ್ನು ಹಿಡಿದುಕೊಳ್ಳಲಿ, ನನ್ನ ಆಜ್ಞೆಯನ್ನು ಕೈಕೊಂಡು ಸುಖವಾಗಿ ಬಾಳು. 5ಜ್ಞಾನವನ್ನು ಪಡೆ, ವಿವೇಕವನ್ನು ಸಂಪಾದಿಸು, ಮರೆಯಬೇಡ, ನನ್ನ ಮಾತುಗಳಿಗೆ ಅಸಡ್ಡೆ ತೋರಿಸಬೇಡ. 6ಜ್ಞಾನವನ್ನು ಬಿಡದಿದ್ದರೆ ಅದು ನಿನ್ನನ್ನು ಕಾಪಾಡುವುದು, ಪ್ರೀತಿಸಿದರೆ, ಅದು ನಿನ್ನನ್ನು ಕಾಯುವುದು. 7ಜ್ಞಾನವನ್ನು ಪಡೆಯಬೇಕೆಂಬುದೇ ಜ್ಞಾನಬೋಧೆಯ ಪ್ರಥಮಪಾಠ, ನಿನ್ನ ಎಲ್ಲಾ ಸಂಪತ್ತಿನಿಂದಲೂ ವಿವೇಕವನ್ನು ಪಡೆ. 8ಜ್ಞಾನವೆಂಬಾಕೆಯು ಶ್ರೇಷ್ಠಳು ಎಂದು ನೀನು ಭಾವಿಸಿದರೆ ಆಕೆಯು ನಿನ್ನನ್ನು ಉನ್ನತಿಗೆ ತರುವಳು, ಆಕೆಯನ್ನು ಅಪ್ಪಿಕೊಂಡರೆ ನಿನ್ನನ್ನು ಘನಪಡಿಸುವಳು. 9ಆಕೆಯು ನಿನ್ನ ತಲೆಗೆ ಅಂದದ ಪುಷ್ಪಮಾಲೆಯನ್ನು ಇಟ್ಟು, ಸುಂದರ ಕಿರೀಟವನ್ನು ನಿನಗೆ ಒಪ್ಪಿಸುವಳು.” 10ಕಂದಾ, ಗಮನಿಸಿ ನನ್ನ ಮಾತುಗಳನ್ನು ಕೇಳು, ಕೇಳಿದರೆ, ನಿನ್ನ ಜೀವಮಾನದ ವರ್ಷಗಳು ಹೆಚ್ಚುವವು. 11ನಾನು ಜ್ಞಾನಮಾರ್ಗವನ್ನು ಉಪದೇಶಿಸಿ, ಧರ್ಮಮಾರ್ಗದಲ್ಲಿ ನಿನ್ನನ್ನು ನಡೆಸುವೆನು. 12ನೀನು ನಡೆಯುವಾಗ ನಿನ್ನ ಹೆಜ್ಜೆಗೆ ಅಡ್ಡಿಯಾಗುವುದಿಲ್ಲ, ಓಡಿದರೆ ಮುಗ್ಗರಿಸುವುದಿಲ್ಲ. 13ಸದುಪದೇಶವನ್ನು ಗ್ರಹಿಸಿಕೋ, ಸಡಿಲಬಿಡಬೇಡ, ಅದನ್ನು ಕಾಪಾಡಿಕೋ, ಅದೇ ನಿನ್ನ ಜೀವವು. 14ದುಷ್ಟರ ಮಾರ್ಗದಲ್ಲಿ ಸೇರಬೇಡ, ಕೆಟ್ಟವರ ದಾರಿಯಲ್ಲಿ ನಡೆಯಬೇಡ. 15ಅದಕ್ಕೆ ದೂರವಾಗಿರು, ಅದರಲ್ಲಿ ನಡೆಯಬೇಡ, ಅದರಿಂದ ಹಿಂತಿರುಗಿ ಮುಂದೆ ನಡೆ. 16ಕೇಡುಮಾಡದಿದ್ದರೆ ಅವರಿಗೆ ನಿದ್ರೆಬಾರದು; ಯಾರನ್ನಾದರೂ ಎಡವಿಬೀಳಿಸದಿದ್ದರೆ ಅವರ ನಿದ್ರೆಗೆ ಭಂಗವಾಗುವುದು. 17ದುಷ್ಟತನವೇ ಅವರ ಆಹಾರ; ಬಲಾತ್ಕಾರವೇ ಅವರ ದ್ರಾಕ್ಷಾರಸ ಪಾನ. 18ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ. 19ದುಷ್ಟರ ಮಾರ್ಗವೋ ಕತ್ತಲಿನಂತಿದೆ; ತಾವು ಯಾವುದಕ್ಕೆ ಎಡವಿಬಿದ್ದೆವೆಂದು ಅವರಿಗೆ ಗೊತ್ತಾಗದು. 20ಕಂದಾ, ನನ್ನ ಮಾತುಗಳನ್ನು ಆಲಿಸು, ನನ್ನ ನುಡಿಗಳಿಗೆ ಕಿವಿಗೊಡು. 21ನಿನ್ನ ದೃಷ್ಟಿಯು ಅವುಗಳ ಮೇಲೆ ತಪ್ಪದಿರಲಿ, ಅವುಗಳನ್ನು ನಿನ್ನ ಹೃದಯದೊಳಗೆ ಇಟ್ಟುಕೋ. 22ಅವುಗಳನ್ನು ಹೊಂದುವವರಿಗೆ ಅವು ಜೀವವು, ದೇಹಕ್ಕೆಲ್ಲಾ ಅವೇ ಆರೋಗ್ಯವು.

ಸಂಧ್ಯಾ ಪ್ರಾರ್ಥನೆ: ವಾಚನ (ಹುತಾತ್ಮರು)

ಯೆಶಾ 43:9–14

9ಎಲ್ಲಾ ಜನಾಂಗಗಳು ಒಟ್ಟಿಗೆ ಬರಲಿ, ಸಕಲದೇಶೀಯರು ನೆರೆಯಲಿ, ಇವರ ದೇವರುಗಳಲ್ಲಿ ಯಾರು ಈ ಸಂಗತಿಯನ್ನು ಮುಂತಿಳಿಸಬಲ್ಲರು? ನಡೆದ ಸಂಗತಿಗಳನ್ನು ಯಾರು ವಿವರಿಸಾರು? ತಾವು ಸತ್ಯವಂತರೆಂದು ಸ್ಥಾಪಿಸಿಕೊಳ್ಳುವುದಕ್ಕೆ ಸಾಕ್ಷಿಗಳನ್ನು ಕರೆದುತರಲಿ. ಆ ಸಾಕ್ಷಿಗಳು ಇವರ ಮಾತನ್ನು ಕೇಳಿ ‘ಇದು ನಿಜ’ ಎಂದು ಹೇಳಲಿ. 10ಯೆಹೋವನ ಮಾತೇನೆಂದರೆ, ‘ನೀವು ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕನು. ನೀವು ನನ್ನನ್ನು ತಿಳಿದು ನಂಬಿ, ನನ್ನನ್ನೇ ದೇವರು ಎಂದು ಗ್ರಹಿಸುವ ಹಾಗೆ ಇದನ್ನು ನಡೆಸಿದೆನು. ನನಗಿಂತ ಮೊದಲು ಯಾವ ದೇವರೂ ಇರಲಿಲ್ಲ, ನನ್ನ ಅನಂತರದಲ್ಲಿಯೂ ಇರುವುದಿಲ್ಲ. 11ನಾನೇ, ನಾನೇ ಯೆಹೋವನು, ನನ್ನ ಹೊರತು ಯಾವ ರಕ್ಷಕನೂ ಇಲ್ಲ. 12ನಾನೇ ರಕ್ಷಣೆಯನ್ನು ಮುಂತಿಳಿಸಿ ನೆರವೇರಿಸಿ ಪ್ರಕಟಿಸಿದ್ದೇನೆ, ನಿಮ್ಮಲ್ಲಿ ಅನ್ಯದೇವರು ಯಾರೂ ಇರಲಿಲ್ಲವಲ್ಲ; ನೀವೇ ನನ್ನ ಸಾಕ್ಷಿಗಳು, ನಾನೊಬ್ಬನೇ ದೇವರು. 13ಹೌದು, ಇಂದಿನಿಂದ ನಾನೇ ದೇವರು. ನನ್ನ ಕೈಯಿಂದ ಬಿಡಿಸಬಲ್ಲವರು ಯಾರೂ ಇಲ್ಲ. ನನ್ನ ಕೆಲಸಕ್ಕೆ ಯಾರು ಅಡ್ಡಿ ಬರುವರು?’” ಎಂಬುದೇ ಯೆಹೋವನ ಮಾತು. 14ನಿಮ್ಮ ವಿಮೋಚಕನೂ, ಇಸ್ರಾಯೇಲರ ಸದಮಲಸ್ವಾಮಿಯೂ ಆದ ಯೆಹೋವನು ಹೀಗೆನ್ನುತ್ತಾನೆ, “ನಾನು ನಿಮಗೋಸ್ಕರ ದೂತನನ್ನು ಬಾಬಿಲೋನಿಗೆ ಕಳುಹಿಸಿ, ಕಸ್ದೀಯರನ್ನೆಲ್ಲಾ ತಮ್ಮ ವಿನೋದದ ಹಡಗುಗಳ ಮೇಲೆ ಪಲಾಯನ ಮಾಡುವಂತೆ ಅಟ್ಟಿಬಿಡುವೆನು.

ಸಂಧ್ಯಾ ಪ್ರಾರ್ಥನೆ: ವಾಚನ (ಹುತಾತ್ಮರು)

ಈ ಅನುವಾದದಲ್ಲಿ ಇಲ್ಲ

ಸಂಧ್ಯಾ ಪ್ರಾರ್ಥನೆ: ವಾಚನ (ಹುತಾತ್ಮರು)

ಈ ಅನುವಾದದಲ್ಲಿ ಇಲ್ಲ

ಪತ್ರಿಕೆ (ಹುತಾತ್ಮರು)

ಇಬ್ರಿ 12:1–10

1ಆದಕಾರಣ ಇಷ್ಟು ಸಾಕ್ಷಿಗಳ ದೊಡ್ಡ ಗುಂಪು ಮೇಘದಂತೆ ನಮ್ಮ ಸುತ್ತಲು ಇರುವುದರಿಂದ ನಮಗೆ ಅಭ್ಯಂತರಪಡಿಸುವ ಎಲ್ಲಾ ಭಾರವನ್ನೂ, ಸುಲಭವಾಗಿ ಮುತ್ತಿಕೊಳ್ಳುವ ಪಾಪವನ್ನು ಸಹ ನಾವು ತೆಗೆದಿಟ್ಟು, ನಂಬಿಕೆಯನ್ನು ಹುಟ್ಟಿಸುವಾತನೂ ಅದನ್ನು ಪರಿಪೂರ್ಣಗೊಳಿಸುವಾತನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸಹನೆಯಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅಪಮಾನವನ್ನು ಅಲಕ್ಷ್ಯಮಾಡಿ, ಶಿಲುಬೆಯ ಮರಣವನ್ನು ಸಹಿಸಿಕೊಂಡು, ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನನಾಗಿದ್ದಾನೆ. 3ನೀವು ಮನಗುಂದಿದವರಾಗಿ ಬೇಸರಗೊಳ್ಳದಂತೆ ಯೇಸುವನ್ನು ಕುರಿತು ಯೋಚಿಸಿರಿ. ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು. 4ನೀವು ಪಾಪಕ್ಕೆ ವಿರೋಧವಾಗಿ ಹೋರಾಡುವುದರಲ್ಲಿ ರಕ್ತವನ್ನು ಸುರಿಸುವಷ್ಟು ಹೋರಾಡಲಿಲ್ಲವಲ್ಲ. 5ಮಕ್ಕಳಿಗೆ ಹೇಳುವಂತೆ ನಿಮಗೆ ಹೇಳಿದ ಎಚ್ಚರಿಕೆಯ ಮಾತುಗಳನ್ನು ಮರೆತುಬಿಟ್ಟಿದ್ದೀರೋ? ಅದೇನೆಂದರೆ, “ನನ್ನ ಮಗನೇ, ಕರ್ತನ ಶಿಕ್ಷೆಯನ್ನು ಕಡೆಗಣಿಸಬೇಡ. ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.” 6ಏಕೆಂದರೆ ಕರ್ತನು ಯಾರನ್ನು ಪ್ರೀತಿಸುತ್ತಾನೋ ಅವರನ್ನು ಶಿಕ್ಷಿಸುತ್ತಾನೆ. ತಾನು ಮಗನಂತೆ ಸ್ವೀಕರಿಸುವ ಪ್ರತಿಯೊಬ್ಬನನ್ನು ದಂಡಿಸುತ್ತಾನೆ ಎಂಬುದಾಗಿದೆ. 7ನಿಮ್ಮ ಶಿಸ್ತಿಗಾಗಿಯೇ, ನಿಮಗೆ ಶಿಕ್ಷೆಯಾಗುತ್ತದೆಂದು ಅದನ್ನು ಸಹಿಸಿಕೊಳ್ಳಿರಿ. ದೇವರು ನಿಮ್ಮನ್ನು ಮಕ್ಕಳೆಂದು ನಡೆಸುತ್ತಾನೆ. ಯಾಕೆಂದರೆ ತಂದೆಯಿಂದ ಶಿಕ್ಷೆ ಹೊಂದದ ಮಗನೆಲ್ಲಿದ್ದಾನೆ? 8ಎಲ್ಲರೂ ಪಾಲುಗಾರರಬೇಕಾದ ಶಿಕ್ಷೆಯು ನಿಮಗುಂಟಾಗದಿದ್ದರೆ ನೀವು ಹಾದರದಿಂದ ಹುಟ್ಟಿದವರೇ ಹೊರತು ಆತನ ಮಕ್ಕಳಲ್ಲ. 9ಇದು ಮಾತ್ರವಲ್ಲದೆ ನಮ್ಮನ್ನು ಶಿಕ್ಷಿಸಿದ ಲೌಕಿಕ ತಂದೆಗಳನ್ನು ನಾವು ಸನ್ಮಾನಿಸಿತ್ತೇವಲ್ಲ. ನಮ್ಮ ಆತ್ಮಗಳಿಗೆ ತಂದೆಯಾಗಿರುವಾತನಿಗೆ ನಾವು ಇನ್ನೂ ಹೆಚ್ಚಾಗಿ ಅಧೀನರಾಗಿ ಜೀವಿಸಬೇಕಲ್ಲವೇ? 10ನಮ್ಮ ಲೌಕಿಕ ತಂದೆಗಳು ಮನಸ್ಸಿಗೆ ಸರಿದೋರಿದಂತೆ ಕೆಲವು ಕಾಲ ಮಾತ್ರ ನಮ್ಮನ್ನು ಶಿಕ್ಷಿಸಿದರು. ಆದರೆ ದೇವರು ತನ್ನ ಪರಿಶುದ್ಧತೆಯಲ್ಲಿ ನಾವು ಪಾಲುಗಾರರಾಗಬೇಕೆಂದು ನಮ್ಮ ಹಿತಕ್ಕಾಗಿಯೇ ಶಿಕ್ಷಿಸುತ್ತಾನೆ.

ಸುವಾರ್ತೆ (ಹುತಾತ್ಮರು)

ಮತ್ತಾ 20:1–16

1“ಪರಲೋಕ ರಾಜ್ಯವು ತನ್ನ ದ್ರಾಕ್ಷಾತೋಟಕ್ಕೆ ಕೂಲಿಯಾಳುಗಳನ್ನು ಗೊತ್ತುಮಾಡಲು ಬೆಳಗ್ಗೆ ಹೊರಟ ಒಬ್ಬ ತೋಟದ ಯಜಮಾನನಿಗೆ ಹೋಲಿಕೆಯಾಗಿದೆ. 2ಅವನು ದಿನಕ್ಕೆ ಒಂದು ಬೆಳ್ಳಿ ನಾಣ್ಯದಂತೆ ಕೂಲಿಯಾಳುಗಳೊಂದಿಗೆ ಒಪ್ಪಂದ ಮಾಡಿದ ನಂತರ ಅವರನ್ನು ದ್ರಾಕ್ಷಾತೋಟಕ್ಕೆ ಕಳುಹಿಸಿದನು. 3ಅವನು ಪುನಃ ಸುಮಾರು ಒಂಭತ್ತು ಗಂಟೆಗೆ ಸಂತೆಯ ಸ್ಥಳಕ್ಕೆ ಹೋಗಿ ಕೆಲಸವಿಲ್ಲದೆ ಸುಮ್ಮನೇ ನಿಂತಿದ್ದ ಬೇರೆ ಕೆಲವರು ಕೂಲಿಯಾಳುಗಳನ್ನು ಕಂಡು, 4ಅವರಿಗೆ, ‘ನೀವು ಸಹ ನನ್ನ ದ್ರಾಕ್ಷಾತೋಟಕ್ಕೆ ಹೋಗಿರಿ; ನಿಮಗೆ ಸರಿಯಾದ ಕೂಲಿಯನ್ನು ಕೊಡುತ್ತೇನೆ’ ಅಂದನು. ಆಗ ಅವರು ಕೆಲಸಕ್ಕೆ ಹೋದರು. 5ಅವನು ಪುನಃ ಸುಮಾರು ಹನ್ನೆರಡು ಗಂಟೆಗೆ ಮತ್ತು ಮೂರು ಗಂಟೆಗೆ ಹೋಗಿ ಅದೇ ಪ್ರಕಾರ ಮಾಡಿದನು. 6ಮತ್ತೊಂದು ಸಾರಿ ಸಾಯಂಕಾಲ ಐದು ಗಂಟೆಗೆ ಅವನು ಹೋಗಿ ಬೇರೆ ಕೆಲವರು ಸುಮ್ಮನೇ ನಿಂತಿರುವುದನ್ನು ಕಂಡು ಅವರನ್ನು, ‘ದಿನವೆಲ್ಲಾ ಇಲ್ಲಿ ಸುಮ್ಮನೇ ನಿಂತಿರುವುದೇಕೆ?’ ಎಂದು ಕೇಳಿದನು. 7ಅವರು ಅವನಿಗೆ, ‘ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ’ ಎಂದರು, ಆಗ ಅವನು ಅವರಿಗೆ, ‘ನೀವು ಸಹ ನನ್ನ ದ್ರಾಕ್ಷಾತೋಟಕ್ಕೆ ಹೋಗಿರಿ’ ಅಂದನು. 8ಸಂಜೆಯಾದಾಗ ದ್ರಾಕ್ಷಾತೋಟದ ಯಜಮಾನನು ತನ್ನ ಮೇಲ್ವಿಚಾರಕನಿಗೆ, ‘ಆ ಕೂಲಿಯಾಳುಗಳನ್ನು ಕರೆದು ಕಡೆಗೆ ಬಂದವರಿಂದ ಪ್ರಾರಂಭಿಸಿ ಮೊದಲು ಬಂದವರ ತನಕ ಕೂಲಿ ಕೊಡು’ ಎಂದು ಹೇಳಿದನು. 9ಆಗ ಸಾಯಂಕಾಲ ಐದು ಗಂಟೆಗೆ ಬಂದು ಕೆಲಸ ಮಾಡಿದವರು ಬಂದಾಗ, ಪ್ರತಿಯೊಬ್ಬನಿಗೂ ಒಂದೊಂದು ಬೆಳ್ಳಿ ನಾಣ್ಯ ಸಿಕ್ಕಿತು. 10ಮೊದಲು ಬಂದವರು ಬಂದಾಗ ತಮಗೆ, ಹೆಚ್ಚು ದೊರೆಯುವುದೆಂದು ನೆನಸಿದರು. ಆದರೆ ಅವರಿಗೂ ಒಂದೊಂದು ಬೆಳ್ಳಿ ನಾಣ್ಯ ಸಿಕ್ಕಿತು. 11ಅವರು ಅದನ್ನು ತೆಗೆದುಕೊಂಡು ತೋಟದ ಯಜಮಾನನಿಗೆ ವಿರುದ್ಧವಾಗಿ ಗುಣಗುಟ್ಟಿ, 12‘ಕಡೆಗೆ ಬಂದ ಇವರು ಒಂದು ಗಂಟೆ ಮಾತ್ರ ಕೆಲಸ ಮಾಡಿದ್ದಾರೆ. ನಾವು ದಿನವೆಲ್ಲಾ ಬಿಸಲಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಆದರೆ ನೀನು ಅವರನ್ನು ನಮಗೆ ಸಮನಾಗಿ ಮಾಡಿದ್ದೀಯೆ’ ಅಂದರು. 13ಅದಕ್ಕೆ ಯಜಮಾನನು ಅವರಲ್ಲಿ ಒಬ್ಬನಿಗೆ, ‘ಸ್ನೇಹಿತನೇ ನಾನು ನಿನಗೆ ಅನ್ಯಾಯ ಮಾಡಲಿಲ್ಲ. ನೀನು ನನ್ನ ಸಂಗಡ ಒಂದು ಬೆಳ್ಳಿಯ ನಾಣ್ಯಕ್ಕೆ ಒಪ್ಪಂದ ಮಾಡಿಕೊಳ್ಳಲಿಲ್ಲವೆ? 14ನಿನ್ನ ಕೂಲಿಯನ್ನು ತೆಗೆದುಕೊಂಡು ಹೋಗು ನಿನಗೆ ಕೊಟ್ಟಂತೆ ಕಡೆಗೆ ಬಂದವರಿಗೂ ಕೊಡುವುದು ನನ್ನ ಇಷ್ಟ. 15ನನ್ನ ಸ್ವಂತ ಸೊತ್ತನ್ನು ನನ್ನ ಇಷ್ಟದಂತೆ ಮಾಡಲು ನನಗೆ ಅಧಿಕಾರವಿಲ್ಲವೋ? ನಾನು ಉದಾರಿಯಾಗಿರುವುದಕ್ಕೆ ನೀನೇಕೆ ಹೊಟ್ಟೆಕಿಚ್ಚುಪಟ್ಟುಕೊಳ್ಳುವಿ?’ ಎಂದು ಹೇಳಿದನು. 16ಹೀಗೆ ಕಡೆಯವರು ಮೊದಲಿನವರಾಗುವರು ಮೊದಲಿನವರು ಕಡೆಯವರಾಗುವರು” ಎಂದು ಹೇಳಿದನು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 9 ಮಾರ್ಚ್ ಎಂದರೆ ನಾಗರಿಕ ಪಂಚಾಂಗದ 22 ಮಾರ್ಚ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು