ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 19 ಮಾರ್ಚ್
ಆರ್ಥೊಡಾಕ್ಸ್ ಪಂಚಾಂಗ · ಮಾರ್ಚ್ 6 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 19 ಮಾರ್ಚ್ 2027
ಶುಕ್ರವಾರ · ಮಹಾ ಉಪವಾಸದ ಮೊದಲನೆಯ ವಾರ · ಸ್ವರ 8
ಹಬ್ಬಗಳು ಮತ್ತು ಸಂತರು
42 Martyrs of Ammoria in Phrygia († c. 845): Theodore, Constantine, Aetius, Theophilus, Basoes, Callistus, and others
ಮಹಾ ಉಪವಾಸ ಕಾಲ
ಕಟ್ಟುನಿಟ್ಟಿನ ಉಪವಾಸ (ಒಣ ಆಹಾರ: ರೊಟ್ಟಿ, ತರಕಾರಿ, ಹಣ್ಣು)
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಆರನೆಯ ತಾಸು
1ಇಗೋ, ಕರ್ತನೂ, ಸೇನಾಧೀಶ್ವರನೂ ಆಗಿರುವ ಯೆಹೋವನೆಂಬ ನಾನು ಯೆರೂಸಲೇಮಿನಿಂದಲೂ, ಯೆಹೂದದಿಂದಲೂ ಜೀವನಕ್ಕೆ ಆಧಾರವಾದ ಅನ್ನಪಾನಗಳನ್ನೆಲ್ಲಾ ತೆಗೆದುಬಿಡುವೆನು. 2ಇದಲ್ಲದೆ ಶೂರ, ಯುದ್ಧಭಟರು, ನ್ಯಾಯಾಧಿಪತಿ, ಪ್ರವಾದಿ, ಶಕುನದವ, ಹಿರಿಯ, 3ಪಂಚಾಶತಾಧಿಪತಿ, ಘನವಂತನು, ಆಲೋಚನಾಪರನು, ತಾಂತ್ರಿಕನು ಮತ್ತು ವಾಕ್ಚಾತುರ್ಯವುಳ್ಳವನು ಆಗಿರುವ ಇವರೆಲ್ಲರನ್ನು ತೊಲಗಿಸಿಬಿಡುವೆನು. 4ನಾನು, “ಬಾಲಕರನ್ನು ಪ್ರಭುಗಳನ್ನಾಗಿ ಆ ದೇಶಕ್ಕೆ ನೇಮಿಸುವೆನು, ಬಾಲಕರು ಅದನ್ನು ಆಳುವರು. 5ಪ್ರಜೆಗಳು ಪರಸ್ಪರ ವಿರೋಧಿಗಳಾಗಿ, ಒಬ್ಬರನೊಬ್ಬರು ಹಿಂಸಿಸುವರು, ಬಾಲಕರು ಹಿರಿಯರ ಮೇಲೆಯೂ, ನೀಚನು ಘನವಂತನ ಜೊತೆಯಲ್ಲಿ ಸೊಕ್ಕಿನಿಂದ ವರ್ತಿಸುವರು. 6ಆ ದಿನದಲ್ಲಿ ಒಬ್ಬನು ತನ್ನ ಸಹೋದರನನ್ನು ತಂದೆಯ ಮನೆಯಲ್ಲಿ ಹಿಡಿದು, ‘ನಿನಗೆ ನಿಲುವಂಗಿ ಇದೆ. ನೀನು ನಮಗೆ ಒಡೆಯನಾಗಬೇಕು. ಹಾಳಾದ ಈ ಪಟ್ಟಣವು ನಿನ್ನ ಕೈಕೆಳಗಿರಲಿ ತಂದೆಯ ಮನೆಯೊಳಗೆ ಅಣ್ಣನನ್ನು ಬಲವಂತ ಮಾಡಲು ಅಣ್ಣನು ದೇಶದ ನಿರರ್ಥಕ ವ್ರಣವೈದ್ಯನಾಗುವುದಕ್ಕೆ ನನಗೆ ಇಷ್ಟವಿಲ್ಲ’ ಎಂದು ನಿರಾಕರಿಸುವನು. 7ಆ ದಿನದಲ್ಲಿ ಅವನು ಗಟ್ಟಿಯಾಗಿ ಕೂಗುತ್ತಾ, ‘ನಾನು ನಿಮ್ಮನ್ನು ಸ್ವಸ್ಥಪಡಿಸುವುದಿಲ್ಲ. ನನ್ನ ಮನೆಯಲ್ಲಿ ಅನ್ನವಾಗಲೀ, ವಸ್ತ್ರವಾಗಲೀ ಇಲ್ಲ: ಜನರನ್ನು ಆಳುವ ಒಡೆಯನನ್ನಾಗಿ ನನ್ನನ್ನು ಮಾಡಬೇಡಿರಿ’” ಎಂದು ಹೇಳುವನು. 8ಏಕೆಂದರೆ ಯೆರೂಸಲೇಮ್ ಹಾಳಾಯಿತು. ಯೆಹೂದವು ಬಿದ್ದುಹೋಯಿತು. ಅವರ ನಡೆನುಡಿಗಳು ಯೆಹೋವನಿಗೆ ವಿರುದ್ಧವಾಗಿ ಆತನ ಪ್ರಭಾವದ ದೃಷ್ಟಿಯನ್ನು ಕೆರಳಿಸುತ್ತದಲ್ಲವೇ? 9ಅವರ ಮುಖಭಾವವೇ ಅವರಿಗೆ ವಿರುದ್ಧ ಸಾಕ್ಷಿಯಾಗಿದೆ. ತಮ್ಮ ಪಾಪವನ್ನು ಮರೆಮಾಡದೇ ಸೊದೋಮಿನವರಂತೆ ಪ್ರಕಟಿಸುತ್ತಾರೆ. ಅಯ್ಯೋ, ಅವರ ಆತ್ಮದ ಗತಿಯೇ! ತಮಗೆ ತಾವೇ ಕೇಡು ಮಾಡಿಕೊಂಡಿದ್ದಾರೆ. 10ನೀವು ನೀತಿವಂತರಿಗೆ, “ನಿಮಗೆ ಒಳ್ಳೆಯದಾಗಲಿ” ಎಂದು ಹೇಳಿರಿ, ಅವರು ತಮ್ಮ ಒಳ್ಳೆಯ ಫಲವನ್ನು ಅನುಭವಿಸುವರು. 11ದುಷ್ಟರ ಗತಿಯನ್ನು ಏನು ಹೇಳಲಿ! ಅವರ ಕಾರ್ಯಗಳಿಗೆ ತಕ್ಕ ಪ್ರತಿಫಲವು ಅವರಿಗೆ ದೊರಕುವುದು. 12ನನ್ನ ಪ್ರಜೆಗಳನ್ನು ಬಾಲಕರು ಬಾಧಿಸುವರು. ಸ್ತ್ರೀಯರು ಅವರನ್ನು ಆಳುವರು. ನನ್ನ ಪ್ರಜೆಗಳೇ, ನಿಮ್ಮನ್ನು ನಡೆಸುವವರು ದಾರಿತಪ್ಪಿಸುವವರಾಗಿದ್ದಾರೆ. ನೀವು ನಡೆಯತಕ್ಕ ದಾರಿಯನ್ನು ಹಾಳುಮಾಡಿದ್ದಾರೆ. 13ಯೆಹೋವನು ವಾದಿಸುವುದಕ್ಕೂ, ಜನರಿಗೆ ನ್ಯಾಯತೀರಿಸುವುದಕ್ಕೂ ಎದ್ದು ನಿಂತಿದ್ದಾನೆ. 14ಯೆಹೋವನು ತನ್ನ ಜನರ ಹಿರಿಯರನ್ನು, ಅಧಿಕಾರಿಗಳನ್ನೂ ನ್ಯಾಯವಿಚಾರಣೆಗೆ ತರುವನು. ಏಕೆಂದರೆ, “ನೀವು ದ್ರಾಕ್ಷಿಯ ತೋಟವನ್ನು ನುಂಗಿಬಿಟ್ಟಿದ್ದೀರಿ. ಬಡವರಿಂದ ಕೊಳ್ಳೆಹೊಡೆದದ್ದು ನಿಮ್ಮ ಮನೆಗಳಲ್ಲಿ ಇದೆ.
ಸಂಧ್ಯಾ ಪ್ರಾರ್ಥನೆ: ವಾಚನ
20ಹೀಗೆ ಆದಾಮನು ಎಲ್ಲಾ ಪಶುಗಳಿಗೂ, ಆಕಾಶದ ಪಕ್ಷಿಗಳಿಗೂ, ಕಾಡುಮೃಗಗಳಿಗೂ ಹೆಸರಿಟ್ಟನು. ಆದರೆ ಆ ಮನುಷ್ಯನಿಗೆ ಸರಿಯಾದ ಸಹಕಾರಿ ಸಿಗಲಿಲ್ಲ. 21ಹೀಗಿರುವಲ್ಲಿ ಯೆಹೋವನಾದ ದೇವರು ಆ ಮನುಷ್ಯನಿಗೆ ಗಾಢನಿದ್ರೆಯನ್ನು ಬರಮಾಡಿ ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಸ್ಥಳವನ್ನು ಮಾಂಸದಿಂದ ತುಂಬಿದನು. 22ಯೆಹೋವನು ಮನುಷ್ಯನಿಂದ ತೆಗೆದ ಎಲುಬನ್ನು, ಸ್ತ್ರೀಯನ್ನಾಗಿ ಮಾಡಿ ಆಕೆಯನ್ನು ಅವನ ಬಳಿಗೆ ಕರೆದುಕೊಂಡು ಬಂದನು. ಅವನು ಆಕೆಯನ್ನು ನೋಡಿ, 23“ಈಗ ಸರಿ, ಈಕೆಯು ನನ್ನ ಎಲುಬುಗಳಿಂದ ಬಂದ ಎಲುಬು, ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ. ಈಕೆಯು ಮನುಷ್ಯನಿಂದ ಉತ್ಪತ್ತಿಯಾದ ಕಾರಣ ನಾರೀ ಎನ್ನಿಸಿಕೊಳ್ಳುವಳು” ಅಂದನು. 24ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗಿರುವರು. 25ಆ ಮನುಷ್ಯನು ಮತ್ತು ಅವನ ಹೆಂಡತಿ ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ. 3:1ಯೆಹೋವನಾದ ದೇವರು ಉಂಟುಮಾಡಿದ ಎಲ್ಲಾ ಕಾಡುಮೃಗಗಳಲ್ಲಿ ಸರ್ಪವು ಅತಿ ಯುಕ್ತಿಯುಳ್ಳದ್ದಾಗಿತ್ತು. ಸರ್ಪವು ಸ್ತ್ರೀಯ ಬಳಿಗೆ ಬಂದು, “ಏನಮ್ಮಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನು ನೀವು ತಿನ್ನಬಾರದೆಂದು ದೇವರು ಅಪ್ಪಣೆ ಕೊಟ್ಟಿರುವುದು ನಿಜವೋ?” ಎಂದು ಕೇಳಲು. 2ಆ ಸ್ತ್ರೀಯು ಸರ್ಪಕ್ಕೆ, “ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ತಿನ್ನಬಹುದು, 3ಆದರೆ ತೋಟದ ಮಧ್ಯದಲ್ಲಿರುವ ಆ ಮರದ ಹಣ್ಣಿನ ವಿಷಯವಾಗಿ, ‘ನೀವು ಇದನ್ನು ತಿನ್ನಲೂ ಬಾರದು, ಮುಟ್ಟಲೂ ಕೂಡದು, ತಿಂದರೆ ಸಾಯುವಿರಿ’ ಎಂದು ದೇವರು ಹೇಳಿದ್ದಾನೆ” ಅಂದಳು. 4ಆಗ ಸರ್ಪವು ಸ್ತ್ರೀಗೆ, “ನೀವು ನಿಶ್ಚಯವಾಗಿ ಸಾಯುವುದಿಲ್ಲ. 5ನೀವು ಇದರ ಹಣ್ಣನ್ನು ತಿಂದ ಕ್ಷಣವೇ ನಿಮ್ಮ ಕಣ್ಣುಗಳು ತೆರೆಯುವವು, ನೀವು ದೇವರುಗಳಂತೆ ಆಗಿ ಒಳ್ಳೆಯದರ ಮತ್ತು ಕೆಟ್ಟದ್ದರ ಬೇಧವನ್ನು ತಿಳಿಯುವಿರಿ, ಇದು ದೇವರಿಗೆ ಚೆನ್ನಾಗಿ ಗೊತ್ತು” ಎಂದು ಹೇಳಿತು. 6ಆಗ ಸ್ತ್ರೀಯು ಆ ಮರದ ಹಣ್ಣು ತಿನ್ನುವುದಕ್ಕೆ ಉತ್ತಮವಾಗಿಯೂ, ನೋಡುವುದಕ್ಕೆ ರಮ್ಯವಾಗಿಯೂ, ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಇದೆ ಎಂದು ತಿಳಿದು ಅದನ್ನು ತೆಗೆದುಕೊಂಡು ತಿಂದಳು ಮತ್ತು ಸಂಗಡ ಇದ್ದ ಗಂಡನಿಗೂ ಕೊಡಲೂ, ಅವನೂ ತಿಂದನು. 7ಕೂಡಲೆ ಅವರಿಬ್ಬರ ಕಣ್ಣುಗಳು ತೆರೆದವು. ತಾವು ಬೆತ್ತಲೆಯಾಗಿದ್ದೇವೆಂದು ತಿಳಿದು ಅಂಜೂರದ ಎಲೆಗಳನ್ನು ಜೋಡಿಸಿ ಉಟ್ಟುಕೊಂಡರು. 8ತರುವಾಯ ಯೆಹೋವನಾದ ದೇವರು ಸಂಜೆಯ ತಂಗಾಳಿಯಲ್ಲಿ ತೋಟದೊಳಗೆ ಸಂಚರಿಸುತ್ತಿರುವಾಗ ಆ ಮನುಷ್ಯನು ಮತ್ತು ಸ್ತ್ರೀಯು ಆತನ ಸಪ್ಪಳವನ್ನು ಕೇಳಿ ಆತನಿಗೆ ಕಾಣಿಸಬಾರದೆಂದು ತೋಟದ ಮರಗಳ ಹಿಂದೆ ಅಡಗಿಕೊಂಡರು. 9ಆಗ ಯೆಹೋವ ದೇವರು ಮನುಷ್ಯನನ್ನು ಕರೆದು, “ನೀನು ಎಲ್ಲಿದ್ದೀ?” ಎಂದು ಕೇಳಿದನು. 10ಅದಕ್ಕೆ ಅವನು, “ನೀನು ತೋಟದಲ್ಲಿ ಸಂಚರಿಸುವ ಸಪ್ಪಳವನ್ನು ನಾನು ಕೇಳಿ, ಬೆತ್ತಲೆಯಾಗಿರುವುದರಿಂದ ಹೆದರಿ ಅಡಗಿಕೊಂಡೆನು” ಎಂದನು. 11ಅದಕ್ಕಾತನು, “ನೀನು ಬೆತ್ತಲೆಯಾಗಿದ್ದೀಯೆಂದು ನಿನಗೆ ತಿಳಿಸಿದವರಾರು? ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಹಣ್ಣನ್ನು ತಿಂದಿದ್ದಿಯಾ?” ಎಂದು ಕೇಳಿದನು. 12ಅದಕ್ಕೆ ಆ ಮನುಷ್ಯನು, “ನನ್ನ ಜೊತೆಯಲ್ಲಿರುವುದಕ್ಕೆ ನೀನು ಕೊಟ್ಟ ಈ ಸ್ತ್ರೀಯು, ಆ ಮರದ ಹಣ್ಣನ್ನು ನನಗೆ ಕೊಟ್ಟಳು, ನಾನು ತಿಂದೆನು” ಎಂದು ಹೇಳಿದನು. 13ಯೆಹೋವನಾದ ದೇವರು ಆ ಸ್ತ್ರೀಗೆ, “ಇದೇನು ನೀನು ಮಾಡಿದ್ದು?” ಎಂದು ಕೇಳಲು, ಆ ಸ್ತ್ರೀಯು, “ಸರ್ಪವು ನನ್ನನ್ನು ವಂಚಿಸಿತು, ನಾನು ತಿಂದೆನು” ಎಂದು ಉತ್ತರ ಕೊಟ್ಟಳು. 14ಆಗ ಯೆಹೋವನಾದ ದೇವರು ಸರ್ಪಕ್ಕೆ; “ನೀನು ಈ ಕಾರ್ಯವನ್ನು ಮಾಡಿದ್ದರಿಂದ ಎಲ್ಲಾ ಪಶುಗಳಲ್ಲಿಯೂ ಅಡವಿಯ ಎಲ್ಲಾ ಕಾಡುಮೃಗಗಳಲ್ಲಿಯೂ ಶಾಪಗ್ರಸ್ತನಾಗಿರುವೆ. ನೀನು ಹೊಟ್ಟೆಯಿಂದ ಹರಿದು ನಿನ್ನ ಜೀವಮಾನದ ದಿನಗಳಲ್ಲೆಲ್ಲಾ ಮಣ್ಣನ್ನೇ ತಿನ್ನುವಿ. 15ನಿನಗೂ, ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವುದು. ನೀನು ಅವನ ಹಿಮ್ಮಡಿಯನ್ನು ಕಚ್ಚುವಿ” ಎಂದು ಹೇಳಿದನು. 16ಆ ನಂತರ ಆ ಸ್ತ್ರೀಗೆ, “ನಾನು ನಿನ್ನ ಗರ್ಭವೇದನೆಯನ್ನು ಅಧಿಕವಾಗಿ ಹೆಚ್ಚಿಸುವೆನು ನೀನು ನೋವಿನಿಂದ ಮಕ್ಕಳನ್ನು ಹಡೆಯುವಿ. ಗಂಡನ ಮೇಲೆ ನಿನಗೆ ಬಯಕೆ ಇರುವುದು, ಆದರೆ ಅವನು ನಿನ್ನ ಮೇಲೆ ಆಳ್ವಿಕೆ ಮಾಡುವನು” ಎಂದು ಹೇಳಿದನು. 17ಅನಂತರ ಆ ಪುರುಷನಿಗೆ, “ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಫಲವನ್ನು ನಿನ್ನ ಹೆಂಡತಿಯ ಮಾತು ಕೇಳಿ ತಿಂದ ಕಾರಣ, ನಿನ್ನ ನಿಮಿತ್ತ ಭೂಮಿಯು ಶಾಪಗ್ರಸ್ಥವಾಯಿತು. ನಿನ್ನ ಜೀವಮಾನವೆಲ್ಲಾ ಕಷ್ಟಪಟ್ಟು ಬೆವರು ಸುರಿಸಿ ದುಡಿದು ಭೂಮಿಯ ಹುಟ್ಟುವಳಿಯನ್ನು ತಿನ್ನಬೇಕು. 18ಆ ಭೂಮಿಯಲ್ಲಿ ಮುಳ್ಳುಗಿಡಗಳೂ ಕಳೆಗಳೂ ಬಹಳವಾಗಿ ಬೆಳೆಯುವವು, ಹೊಲದ ಬೆಳೆಗಳು ನಿನಗೆ ಆಹಾರವಾಗಿರುವವು. 19ನೀನು ಪುನಃ ಮಣ್ಣಿಗೆ ಸೇರುವ ತನಕ ಬೆವರು ಸುರಿಸುತ್ತಾ ಬೇಕಾದ ಆಹಾರವನ್ನು ಸಂಪಾದಿಸಬೇಕು. ನೀನು ಮಣ್ಣಿನಿಂದ ತೆಗೆಯಲ್ಪಟ್ಟವನಾಗಿರುವುದರಿಂದ ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ” ಎಂದು ಹೇಳಿದನು. 20ಆ ಮನುಷ್ಯನು ತನ್ನ ಹೆಂಡತಿಗೆ ಹವ್ವ ಎಂದು ಹೆಸರಿಟ್ಟನು. ಆದುದರಿಂದ ಬದುಕಿರುವವರೆಲ್ಲರಿಗೂ ಆಕೆಯೇ ಮೂಲತಾಯಿಯಾಗಿದ್ದಾಳೆ.
ಸಂಧ್ಯಾ ಪ್ರಾರ್ಥನೆ: ವಾಚನ
19ಯೆಹೋವನು ಜ್ಞಾನದ ಮೂಲಕ ಭೂಮಿಯನ್ನು ಸ್ಥಾಪಿಸಿ, ವಿವೇಕದ ಮುಖಾಂತರ ಆಕಾಶಮಂಡಲವನ್ನು ಸ್ಥಿರಪಡಿಸಿದನು. 20ಭೂಮಿಯ ಕೆಳಗಿನ ಸಾಗರವು ಒಡೆದದ್ದಕ್ಕೂ, ಆಕಾಶವು ಇಬ್ಬನಿಯನ್ನು ಸುರಿಸುವುದಕ್ಕೂ ಆತನ ತಿಳಿವಳಿಕೆಯೇ ಸಾಧನ. 21ನನ್ನ ಮಗನೇ, ಸುಜ್ಞಾನವನ್ನೂ ಮತ್ತು ಬುದ್ಧಿಯನ್ನೂ ಭದ್ರವಾಗಿಟ್ಟುಕೋ, ನಿನ್ನ ದೃಷ್ಟಿಯು ಅವುಗಳ ಮೇಲೆ ತಪ್ಪದೇ ಇರಲಿ. 22ಅವು ನಿನಗೆ ಜೀವವೂ, ನಿನ್ನ ಕೊರಳಿಗೆ ಭೂಷಣವೂ ಆಗಿರುವವು. 23ಆಗ ನೀನು ಎಡವದೆ ನಿನ್ನ ಮಾರ್ಗದಲ್ಲಿ ನಿರ್ಭಯವಾಗಿ ನಡೆಯುವಿ. 24ನೀನು ಮಲಗುವಾಗ ಹೆದರಿಕೆ ಇರುವುದಿಲ್ಲ, ಮಲಗಿದ ಮೇಲೆ ಸುಖವಾಗಿ ನಿದ್ರೆಮಾಡುವಿ. 25ಪಕ್ಕನೆ ಬರುವ ಅಪಾಯಕ್ಕಾಗಲಿ ಅಥವಾ ದುಷ್ಟರಿಗೆ ಸಂಭವಿಸುವ ನಾಶನಕ್ಕಾಗಲಿ ನೀನು ಅಂಜುವುದೇ ಇಲ್ಲ. 26ಯೆಹೋವನು ನಿನ್ನ ಭರವಸಕ್ಕೆ ಆಧಾರನಾಗಿದ್ದು, ನಿನ್ನ ಕಾಲು ಮೋಸದ ಬಲೆಗೆ ಸಿಕ್ಕದಂತೆ ನಿನ್ನನ್ನು ಕಾಪಾಡುವನು. 27ಉಪಕಾರಮಾಡುವುದಕ್ಕೆ ನಿನ್ನಿಂದ ಸಾಧ್ಯವಾಗುವಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ. 28ಕೊಡತಕ್ಕದ್ದು ನಿನ್ನಲ್ಲಿದ್ದರೆ ನೆರೆಯವನಿಗೆ, “ಹೋಗಿ ಬಾ, ನಾಳೆ ಕೊಡುತ್ತೇನೆ” ಎಂದು ಹೇಳಬೇಡ. 29ನೆರೆಯವನಿಗೆ ಕೇಡನ್ನು ಕಲ್ಪಿಸಬಾರದು, ಅವನು ನಿನ್ನ ಪಕ್ಕದಲ್ಲಿ ನಂಬಿಕೆಯಿಂದ ವಾಸಮಾಡುತ್ತಾನಲ್ಲವೇ? 30ನಿನಗೆ ಅಪಕಾರ ಮಾಡದವನ ಸಂಗಡ ಸುಮ್ಮನೆ ಜಗಳವಾಡಬೇಡ. 31ಬಲಾತ್ಕಾರಿಯನ್ನು ನೋಡಿ ಹೊಟ್ಟೆಕಿಚ್ಚುಪಡದಿರು, ಅವನ ನಡತೆಯನ್ನು ಎಷ್ಟು ಮಾತ್ರಕ್ಕೂ ಅನುಸರಿಸಬೇಡ. 32ವಕ್ರಬುದ್ಧಿಯವನು ಯೆಹೋವನಿಗೆ ಅಸಹ್ಯನು, ಯಥಾರ್ಥರಿಗೆ ಆತನ ಸ್ನೇಹವು ದೊರೆಯುವುದು. 33ಯೆಹೋವನು ದುಷ್ಟನ ಮನೆಯನ್ನು ಶಪಿಸುವನು, ನೀತಿವಂತರ ನಿವಾಸವನ್ನೋ ಆಶೀರ್ವದಿಸುವನು. 34ಯಾರು ಧರ್ಮವನ್ನು ತಿರಸ್ಕರಿಸುವರೋ ಅವರನ್ನು ಆತನು ತಿರಸ್ಕರಿಸುವನು. ದೀನರಿಗಾದರೋ ತನ್ನ ಕೃಪೆಯನ್ನು ಅನುಗ್ರಹಿಸುವನು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 6 ಮಾರ್ಚ್ ಎಂದರೆ ನಾಗರಿಕ ಪಂಚಾಂಗದ 19 ಮಾರ್ಚ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು