Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 19 ಮಾರ್ಚ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 19 ಮಾರ್ಚ್ 2027

ಶುಕ್ರವಾರ · ತಪಸ್ಸು ಕಾಲದ ಐದನೆಯ ವಾರ

ಹಬ್ಬಗಳು ಮತ್ತು ಸಂತರು

ಸಂತ ಯೋಸೇಫ, ಪೂಜ್ಯ ಕನ್ಯೆ ಮರಿಯಳ ಪತಿ

ಮಹೋತ್ಸವ · ಆರಾಧನಾ ಬಣ್ಣ: ಬಿಳಿ

ದಿನದ ವಾಚನಗಳು

ಮೊದಲನೆಯ ವಾಚನ

2 ಸಮು 7:4–5, 12–14, 16

4ಅದೇ ರಾತ್ರಿಯಲ್ಲಿ ನಾತಾನನಿಗೆ ಯೆಹೋವನ ಮಾತು ಕೇಳಿ ಬಂತು. 5ಯೆಹೋವನು, “ನೀನು ಹೋಗಿ ನನ್ನ ಸೇವಕನಾದ ದಾವೀದನಿಗೆ ‘ನೀನು ನನಗೋಸ್ಕರ ಮನೆಯನ್ನು ಕಟ್ಟಬೇಕೋ? 12ನಿನ್ನ ಆಯುಷ್ಕಾಲವು ಮುಗಿದು, ನೀನು ಪೂರ್ವಿಕರ ಬಳಿಗೆ ಸೇರಿದ ಮೇಲೆ, ನಿನ್ನಿಂದ ಹುಟ್ಟುವ ಮಕ್ಕಳಲ್ಲಿ ಒಬ್ಬನನ್ನು ಎಬ್ಬಿಸಿ, ಅವನ ರಾಜ್ಯವನ್ನು ಸ್ಥಿರಪಡಿಸುವೆನು. 13ಅವನು ನನ್ನ ಹೆಸರಿಗಾಗಿ ಒಂದು ಮನೆಯನ್ನು ಕಟ್ಟುವನು. ನಾನು ಅವನ ರಾಜ್ಯದ ಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸುವೆನು. 14ನಾನು ಅವನಿಗೆ ತಂದೆಯಾಗಿರುವೆನು. ಅವನು ನನಗೆ ಮಗನಾಗಿರುವನು. ಅವನು ತಪ್ಪು ಮಾಡಿದರೆ ತಂದೆ ಮಗನಿಗೆ ಬೆತ್ತದಿಂದ ಶಿಕ್ಷೆಯನ್ನು ಕೊಡುವೆನು ಮತ್ತು ನರಪುತ್ರರಂತೆ ಅವನನ್ನು ದಂಡಿಸುವೆನು. 16ನಿನ್ನ ಮನೆಯೂ ಅರಸುತನವೂ ಸದಾಕಾಲ ಸ್ಥಿರವಾಗಿರುವುದು. ನಿನ್ನ ಸಿಂಹಾಸನವು ಶಾಶ್ವತವಾಗಿರುವುದು’” ಎಂದು

ಪ್ರತಿವಚನ ಕೀರ್ತನೆ

ಕೀರ್ತ 89:1–4, 26, 28

1ಜೇರಹ ಕುಲದವನಾದ ಏತಾನನ ಪದ್ಯ. ಯೆಹೋವನೇ, ನಿತ್ಯವೂ ನಿನ್ನ ಕೃಪಾತಿಶಯವನ್ನು ಹಾಡಿಹರಸುವೆನು; ನನ್ನ ಬಾಯಿ ನಿನ್ನ ಸತ್ಯವನ್ನು, ಮುಂದಣ ಸಂತಾನದವರೆಲ್ಲರಿಗೂ ತಿಳಿಯಮಾಡುವುದು. 2ನಿನ್ನ ಪ್ರೀತಿಸಂಕಲ್ಪವು ನಿತ್ಯವು ಸಿದ್ಧಿಗೆ ಬರುತ್ತಲೇ ಇರುವುದು; ಆಕಾಶದಲ್ಲಿ ನಿನ್ನ ಸತ್ಯತೆಯನ್ನು ಸ್ಥಾಪಿಸುವಿ ಎಂದು ತಿಳಿದುಕೊಂಡಿದ್ದೇನೆ. 3ನೀನು ನುಡಿದದ್ದೇನೆಂದರೆ, “ನಾನು ಆರಿಸಿಕೊಂಡ ಸೇವಕನಾದ ದಾವೀದನ ಸಂಗಡ ಒಡಂಬಡಿಕೆ ಮಾಡಿಕೊಂಡು ಆಣೆಯಿಟ್ಟು, 4‘ಶಾಶ್ವತವಾಗಿ ನಿನ್ನ ಸಂತತಿಯನ್ನು ಸ್ಥಾಪಿಸುವೆನು, ತಲತಲಾಂತರಗಳಿಗೂ ನಿನ್ನ ಸಿಂಹಾಸನವನ್ನು ಸ್ಥಿರಪಡಿಸುವೆನು ಎಂದು ಹೇಳಿದ್ದೇನೆ’” ಎಂಬುವುದೇ. ಸೆಲಾ 26ಅವನು ನನಗೆ, ‘ನನ್ನ ತಂದೆಯೂ, ದೇವರೂ, ಆಶ್ರಯದುರ್ಗವೂ ನೀನೇ’ ಎಂದು ಹೇಳುವನು. 28ನನ್ನ ಕೃಪೆಯು ಅವನಲ್ಲಿ ಶಾಶ್ವತವಾಗಿ ಇರುವುದು; ನನ್ನ ಒಡಂಬಡಿಕೆಯು ಅವನಲ್ಲಿ ಸ್ಥಿರವಾಗಿರುವುದು.

ಎರಡನೆಯ ವಾಚನ

ರೋಮಾ 4:13, 16–18, 22

13ನೀನು ಲೋಕಕ್ಕೆ ಬಾಧ್ಯನಾಗುವಿ ಎಂಬ ವಾಗ್ದಾನವು ಅಬ್ರಹಾಮನಿಗಾಗಲಿ ಅವನ ಸಂತತಿಯವರಿಗಾಗಲಿ ಧರ್ಮಶಾಸ್ತ್ರದಿಂದ ಆದದ್ದಲ್ಲ; ನಂಬಿಕೆಯಿಂದ ಬರುವ ನೀತಿಯಾಗಿದೆ. 16ಆದಕಾರಣ ಆ ಬಾಧ್ಯತೆಯು ಕೃಪೆಯಿಂದಲೇ ದೊರೆಯುವಂಥದ್ದಾಗಿದೆ, ಅದು ನಂಬಿಕೆಯ ಮೂಲಕವೇ ಸಿಕ್ಕುತ್ತದೆ, ಹೀಗೆ ಆ ವಾಗ್ದಾನವು ನಮ್ಮೆಲ್ಲರ ತಂದೆಯಾದಅಬ್ರಹಾಮನ ಸಂತತಿಯವರೆಲ್ಲರಿಗೂ, ಅಂದರೆ ಧರ್ಮಶಾಸ್ತ್ರವನ್ನು ಆಧಾರ ಮಾಡಿಕೊಂಡವರಿಗೆ ಮಾತ್ರವಲ್ಲದೆ, ಅಬ್ರಹಾಮನಂಥ ನಂಬಿಕೆ ಇರುವವರೆಲ್ಲರಿಗೂ ಸಹ ಸ್ಥಿರವಾಗಿದೆ. 17“ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಪಿತನಾಗಿ ನೇಮಿಸಿದ್ದೇನೆಂದು” ಶಾಸ್ತ್ರದಲ್ಲಿ ಬರೆದಿದೆಯಲ್ಲ. ದೇವರು ಸತ್ತವರನ್ನು ಬದುಕಿಸುವವನಾಗಿಯೂ ಮತ್ತು ಅಸ್ತಿತ್ವದಲ್ಲಿ ಇಲ್ಲದ್ದನ್ನು ಅಸ್ತಿತ್ವಕ್ಕೆ ತರುವಂಥವನೂ ಆದ ದೇವರಲ್ಲಿ ಅಬ್ರಹಾಮನು ನಂಬಿಕೆಯಿಟ್ಟನು. 18“ನಿನ್ನ ಸಂತಾನವು ನಕ್ಷತ್ರಗಳಷ್ಟಾಗುವುದು” ಎಂಬುದಾಗಿ ತನಗೆ ಹೇಳಲ್ಪಟ್ಟ ಆ ನಿರೀಕ್ಷೆಗೆ ಆಸ್ಪದವಿಲ್ಲದಿರುವಾಗಲೂ ಅಬ್ರಹಾಮನು ತಾನು ಬಹು ಜನಾಂಗಗಳಿಗೆ ಪಿತನಾಗುವೆನೆಂದು ನಿರೀಕ್ಷೆಗೆ ವಿರುದ್ಧವಾಗಿ ನಿರೀಕ್ಷಿಸಿ ನಂಬಿದನು. 22ಆದ್ದರಿಂದ ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು.

ಸುವಾರ್ತೆ

ಮತ್ತಾ 1:16, 18–21, 24

ಅಥವಾ: ಲೂಕ 2:41–51

16ಯಾಕೋಬನ ಮಗನು ಯೋಸೇಫನು. ಯೋಸೇಫನು ಮರಿಯಳ ಗಂಡನು. ಈ ಮರಿಯಳಿಂದಲೇ ಕ್ರಿಸ್ತನೆಂಬ ಯೇಸು ಹುಟ್ಟಿದನು. 18ಯೇಸು ಕ್ರಿಸ್ತನ ಜನನವು ಹೇಗಾಯಿತಂದರೆ, ಆತನ ತಾಯಿಯಾದ ಮರಿಯಳಿಗೂ ಯೋಸೇಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಮದುವೆಯಾಗಿ ಕೂಡಿಬಾಳುವುದಕ್ಕಿಂತ ಮೊದಲೇ ಮರಿಯಳು ಪವಿತ್ರಾತ್ಮನ ಶಕ್ತಿಯಿಂದ ಗರ್ಭಧರಿಸಿದ್ದು ತಿಳಿದುಬಂತು. 19ಆದರೆ ಆಕೆಯ ಗಂಡನಾದ ಯೋಸೇಫನು ನೀತಿವಂತನಾಗಿದ್ದ ಕಾರಣ ಮರಿಯಳನ್ನು ಬಯಲಿಗೆ ತಂದು ಅವಮಾನಕ್ಕೆ ಗುರಿಮಾಡದೆ ನಿಶ್ಚಿತಾರ್ಥವನ್ನು ರಹಸ್ಯವಾಗಿ ಮುರಿದುಬಿಡಬೇಕೆಂದು ಆಲೋಚಿಸಿದ್ದನು. 20ಅವನು ಇದನ್ನು ಕುರಿತು ಆಲೋಚಿಸುತ್ತಿರುವಾಗ, ದೇವದೂತನು ಅವನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ದಾವೀದನ ಮಗನಾದ ಯೋಸೇಫನೇ, ನೀನು ಮರಿಯಳನ್ನು ಹೆಂಡತಿಯಾಗಿ ಸೇರಿಸಿಕೊಳ್ಳುವುದಕ್ಕೆ ಅಂಜಬೇಡ. ಆಕೆ ಗರ್ಭವತಿಯಾದದ್ದು ಪವಿತ್ರಾತ್ಮನಿಂದಲೇ. 21ಆಕೆಯು ಒಬ್ಬ ಮಗನನ್ನು ಹೆರುವಳು; ನೀನು ಆತನಿಗೆ ‘ಯೇಸು’ ಎಂದು ಹೆಸರಿಡಬೇಕು; ಏಕೆಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ರಕ್ಷಿಸುವನು,” ಅಂದನು. 24ಆಗ ಯೋಸೇಫನು ಎಚ್ಚೆತ್ತು ದೇವದೂತನು ಅಪ್ಪಣೆಕೊಟ್ಟ ಪ್ರಕಾರ ಮರಿಯಳನ್ನು ಹೆಂಡತಿಯನ್ನಾಗಿ ಸ್ವೀಕರಿಸಿಕೊಂಡನು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು