Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 5 ಮಾರ್ಚ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 5 ಮಾರ್ಚ್ 2027

ಶುಕ್ರವಾರ · ತಪಸ್ಸು ಕಾಲದ ಮೂರನೆಯ ವಾರ

ಹಬ್ಬಗಳು ಮತ್ತು ಸಂತರು

ತಪಸ್ಸು ಕಾಲದ ಮೂರನೆಯ ವಾರದ ಶುಕ್ರವಾರ

ವಾರದ ದಿನ · ಆರಾಧನಾ ಬಣ್ಣ: ನೇರಳೆ

ಉಪವಾಸ ಮತ್ತು ಪ್ರಾಯಶ್ಚಿತ್ತ

ಮಾಂಸ ವರ್ಜನೆ

ಪ್ರತಿ ಶುಕ್ರವಾರವೂ ಪ್ರಾಯಶ್ಚಿತ್ತದ ದಿನ; ಅದನ್ನು ಹೇಗೆ ಆಚರಿಸಬೇಕು ಎಂಬುದನ್ನು ಪ್ರತಿಯೊಂದು ಬಿಷಪರ ಸಮ್ಮೇಳನ ನಿರ್ಧರಿಸುತ್ತದೆ: ಮಾಂಸ ವರ್ಜನೆ ಅಥವಾ ಬೇರೊಂದು ಪ್ರಾಯಶ್ಚಿತ್ತ ಕಾರ್ಯ. ಉಪವಾಸ 18 ರಿಂದ 59 ವರ್ಷದವರಿಗೆ, ಮಾಂಸ ವರ್ಜನೆ 14 ವರ್ಷದಿಂದ ಕಡ್ಡಾಯ.

ದಿನದ ವಾಚನಗಳು

ಮೊದಲನೆಯ ವಾಚನ

ಹೋಶೇ 14:1–9

1ಇಸ್ರಾಯೇಲೇ, ನೀನು ಹಿಂದಿರುಗಿ ನಿನ್ನ ದೇವರಾದ ಯೆಹೋವನ ಕಡೆಗೆ ತಿರುಗಿಕೋ; ನಿನ್ನ ಅಪರಾಧದಿಂದಲೇ, ನೀನು ಮುಗ್ಗರಿಸಿ ಬಿದ್ದಿ. 2ಪಶ್ಚಾತ್ತಾಪದ ಮಾತುಗಳಿಂದ ಯೆಹೋವನ ಬಳಿಗೆ ಹಿಂದಿರುಗಿ ಬಂದು ಆತನಿಗೆ, “ನಮ್ಮ ಅಪರಾಧವನ್ನು ಸಂಪೂರ್ಣವಾಗಿ ನಿವಾರಣೆಮಾಡಿ, ನಮ್ಮಲ್ಲಿನ ಒಳ್ಳೆಯದನ್ನು ಅಂಗೀಕರಿಸು; ನಮ್ಮ ತುಟಿಗಳ ಫಲಗಳನ್ನು ಅರ್ಪಿಸುವೆವು. 3ಅಶ್ಶೂರವು ನಮ್ಮನ್ನು ರಕ್ಷಿಸುವುದೆಂದು ನಂಬುವುದಿಲ್ಲ, ಐಗುಪ್ತದ ಕುದುರೆಗಳನ್ನು ಹತ್ತುವುದಿಲ್ಲ, ನಮ್ಮ ಕೈಕೆಲಸದ ಬೊಂಬೆಗಳಿಗೆ, ‘ನೀವು ನಮ್ಮ ದೇವರುಗಳು’ ಎಂದು ಇನ್ನು ಹೇಳುವುದಿಲ್ಲ; ನೀನೇ ದಿಕ್ಕಿಲ್ಲದ ಈ ಅನಾಥರನ್ನು ಕರುಣಿಸುವವನು” ಎಂಬುದಾಗಿ ಅರಿಕೆಮಾಡಿಕೊಳ್ಳಿರಿ. 4ನಾನು ನನ್ನ ಜನರ ಭ್ರಷ್ಟತ್ವವನ್ನು ಪರಿಹರಿಸಿ ಅವರನ್ನು ಮನಃಪೂರ್ವಕವಾಗಿ ಪ್ರೀತಿಸುವೆನು; ನನ್ನ ಕೋಪವು ಅವರಿಂದ ತೊಲಗಿಹೋಯಿತು. 5ನಾನು ಇಸ್ರಾಯೇಲಿಗೆ ಇಬ್ಬನಿಯಂತಾಗುವೆನು; ಅದು ತಾವರೆಯಂತೆ ಅರಳುವುದು; ಲೆಬನೋನಿನ ದೇವದಾರು ಮರಗಳ ಹಾಗೆ ಬೇರು ಬಿಟ್ಟುಕೊಳ್ಳುವುದು. 6ಅದರ ರೆಂಬೆಗಳು ಹರಡುವವು, ಅದರ ಅಂದವು ಒಲೀವ್ ಮರದಂತೆ ಕಂಗೊಳಿಸುವುದು, ಅದರ ಪರಿಮಳವು ಲೆಬನೋನಿನ ಹಾಗೆ ಮನೋಹರವಾಗಿರುವುದು. 7ಅದರ ನೆರಳನ್ನು ಆಶ್ರಯಿಸಿರುವವರು ಹಿಂದಿರುಗಿ ಬೆಳೆಯನ್ನು ಬೆಳೆದು ದ್ರಾಕ್ಷಿಯಂತೆ ಫಲಪ್ರದರಾಗಿ ಫಲ ಕೊಡುವರು; ಅದರ ಕೀರ್ತಿಯು ಲೆಬನೋನಿನ ದ್ರಾಕ್ಷಾರಸದ ಹಾಗೆ ಸ್ವಾರಸ್ಯವಾಗಿರುವುದು. 8ಎಫ್ರಾಯೀಮು, “ವಿಗ್ರಹಗಳ ಗೊಡವೆ ನನಗೆ ಇನ್ನೇಕೆ?” ಎಂದು ಅವುಗಳನ್ನು ತ್ಯಜಿಸುವುದು; ನಾನು ಅದಕ್ಕೆ ಒಲಿದು ಕಟಾಕ್ಷಿಸುವೆನು; ನಾನು ಸೊಂಪಾದ ತುರಾಯಿ ಮರದಂತಿದ್ದೇನೆ; ನನ್ನಿಂದಲೇ ನೀನು ಫಲಿಸುವಿ. 9ಜ್ಞಾನಿಗಳು ಈ ಸಂಗತಿಗಳನ್ನು ಗ್ರಹಿಸುವರು; ವಿವೇಕಿಗಳು ಅವುಗಳನ್ನು ತಿಳಿದುಕೊಳ್ಳುವರು. ಯೆಹೋವನ ಮಾರ್ಗಗಳು ಸತ್ಯವಾದವುಗಳು; ಅವುಗಳಲ್ಲಿ ಸನ್ಮಾರ್ಗಿಗಳು ನಡೆಯುವರು, ದುರ್ಮಾರ್ಗಿಗಳು ಅವುಗಳನ್ನು ಬಿಟ್ಟು ಎಡವಿ ಬೀಳುವರು.

ಪ್ರತಿವಚನ ಕೀರ್ತನೆ

ಕೀರ್ತ 81:5–10, 13, 16

5ಆತನು ಐಗುಪ್ತ ದೇಶವನ್ನು ಬಾಧಿಸಲಿಕ್ಕೆ ಹೊರಟಾಗ, ನೆನಪಿಗಾಗಿ ಯೋಸೇಫ್ಯರಲ್ಲಿ ಈ ಕಟ್ಟಳೆಯನ್ನು ನೇಮಿಸಿದನು. ಪರಿಚಯವಿಲ್ಲದವನ ಮಾತು ನನಗೆ ಕೇಳಿಸುತ್ತದೆ; ಏನೆಂದರೆ, 6“ಅವನ ಹೆಗಲನ್ನು ಹೊರೆಗೆ ತಪ್ಪಿಸಿದೆನು; ಅವನ ಕೈಗಳನ್ನು ಪುಟ್ಟಿಯಿಂದ ಬಿಡಿಸಿದೆನು. 7ಕಷ್ಟದಲ್ಲಿ ಮೊರೆಯಿಟ್ಟ ನಿನ್ನನ್ನು ವಿಮೋಚಿಸಿದೆನು; ಗುಡುಗುವ ಮೋಡದಲ್ಲಿದ್ದು ನಿನಗೆ ಉತ್ತರವನ್ನು ಕೊಟ್ಟೆನು; ಮೆರೀಬಾ ಪ್ರವಾಹಗಳ ಬಳಿಯಲ್ಲಿ ನಿನ್ನನ್ನು ಪರೀಕ್ಷಿಸಿದೆನು. ಸೆಲಾ. 8ನನ್ನ ಜನರೇ, ಕೇಳಿರಿ; ಖಂಡಿತವಾಗಿ ಹೇಳುತ್ತೇನೆ, ಇಸ್ರಾಯೇಲರೇ, ಕಿವಿಗೊಟ್ಟರೆ ಎಷ್ಟೋ ಒಳ್ಳೇದು, 9ನಿಮ್ಮಲ್ಲಿ ಅನ್ಯದೇವತೆಗಳು ಇರಬಾರದು; ಪರರ ದೇವತೆಗಳನ್ನು ಪೂಜಿಸಬಾರದು; 10ನಿಮ್ಮನ್ನು ಐಗುಪ್ತದಿಂದ ಕರೆತಂದ ಯೆಹೋವನೆಂಬ ನಾನೇ ನಿಮ್ಮ ದೇವರು; ಅಗಲವಾಗಿ ಬಾಯಿತೆರೆಯಿರಿ; ಅದನ್ನು ತುಂಬಿಸುವೆನು ಅಂದೆನು. 13ನನ್ನ ಪ್ರಜೆಗಳಾದ ಇಸ್ರಾಯೇಲರು ನನ್ನ ಮಾತನ್ನು ಕೇಳಿ, ನನ್ನ ಮಾರ್ಗದಲ್ಲಿ ನಡೆದರೆ ಎಷ್ಟೋ ಒಳ್ಳೆಯದು! 16ನಾನು ಅವರಿಗೆ ಶ್ರೇಷ್ಠವಾದ ಗೋದಿಯನ್ನು ಊಟಕ್ಕೆ ಕೊಟ್ಟು, ಬಂಡೆಯೊಳಗಿನ ಜೇನಿನಿಂದ ತೃಪ್ತಿಪಡಿಸುವೆನು” ಎಂಬುದೇ.

ಸುವಾರ್ತೆ

ಮಾರ್ಕ 12:28–34

28ಶಾಸ್ತ್ರಿಗಳಲ್ಲಿ ಒಬ್ಬನು ಅವರ ವಾದವನ್ನು ಕೇಳಿ ಯೇಸು ಅವರಿಗೆ ಸರಿಯಾಗಿ ಉತ್ತರ ಕೊಟ್ಟನೆಂದು ತಿಳಿದು ಆತನ ಹತ್ತಿರಕ್ಕೆ ಬಂದು, “ಎಲ್ಲಾ ಆಜ್ಞೆಗಳಲ್ಲಿ ಮುಖ್ಯವಾದ್ದದು ಯಾವುದು?” ಎಂದು ಆತನನ್ನು ಕೇಳಿದರು. 29ಅದಕ್ಕೆ ಯೇಸು, “‘ಇಸ್ರಾಯೇಲ್ ಜನರೇ ಕೇಳಿ, ನಮ್ಮ ದೇವರಾದ ಕರ್ತನು ಒಬ್ಬನೇ ದೇವರು. 30ನಿನ್ನ ದೇವರಾದ ಕರ್ತನನ್ನು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ, ಪೂರ್ಣ ಬುದ್ಧಿಯಿಂದಲೂ, ಪೂರ್ಣ ಶಕ್ತಿಯಿಂದಲೂ ಪ್ರೀತಿಸಬೇಕು’ ಎಂಬುದೇ ಮುಖ್ಯವಾದ ಆಜ್ಞೆ. 31‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದೇ ಎರಡನೆಯ ಆಜ್ಞೆ. ಇವುಗಳಿಗಿಂತ ಹೆಚ್ಚಿನ ಆಜ್ಞೆ ಮತ್ತೊಂದಿಲ್ಲ” ಎಂದು ಉತ್ತರ ಕೊಟ್ಟನು. 32ಆಗ ಆ ಶಾಸ್ತ್ರಿಯು, “ಬೋಧಕನೇ, ನೀನು ಚೆನ್ನಾಗಿ ಹೇಳಿದೆ. ಸತ್ಯವನ್ನೇ ಹೇಳಿದಿ ದೇವರು ಒಬ್ಬನೇ, ಆತನ ಹೊರತು ಬೇರೊಬ್ಬ ದೇವರಿಲ್ಲ ಎಂದು ಹೇಳಿದನು. 33ಆತನನ್ನು ಪೂರ್ಣಹೃದಯದಿಂದಲೂ, ಪೂರ್ಣ ಬುದ್ಧಿಯಿಂದಲೂ, ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು. ಇದಲ್ಲದೆ ತನ್ನನ್ನು ಪ್ರೀತಿಸಿಕೊಳ್ಳುವಂತೆ ತನ್ನ ನೆರೆಯವನನ್ನು ಪ್ರೀತಿಸುವುದು ಇವೆರಡೂ ಎಲ್ಲಾ ಸರ್ವಾಂಗಹೋಮಗಳಿಗಿಂತಲೂ ಎಲ್ಲಾ ಯಜ್ಞಗಳಿಗಿಂತಲೂ ಮೇಲಾದುವು” ಅಂದನು. 34ಅವನು ಬುದ್ಧಿಯಿಂದ ಉತ್ತರಕೊಟ್ಟದ್ದನ್ನು ಯೇಸು ಕಂಡು, “ನೀನು ದೇವರ ರಾಜ್ಯಕ್ಕೆ ದೂರವಾದವನಲ್ಲ” ಎಂದನು. ಅಂದಿನಿಂದ ಆತನನ್ನು ಪ್ರಶ್ನೆಮಾಡುವುದಕ್ಕೆ ಯಾರಿಗೂ ಧೈರ್ಯವಿರಲಿಲ್ಲ.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು