ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 4 ಮಾರ್ಚ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 4 ಮಾರ್ಚ್ 2027
ಗುರುವಾರ · ತಪಸ್ಸು ಕಾಲದ ಮೂರನೆಯ ವಾರ
ಹಬ್ಬಗಳು ಮತ್ತು ಸಂತರು
ತಪಸ್ಸು ಕಾಲದ ಮೂರನೆಯ ವಾರದ ಗುರುವಾರ
ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ನೇರಳೆ
ಸಂತ ಕ್ಯಾಸಿಮಿರ್ · ಸ್ಮರಣೋಲ್ಲೇಖ
ದಿನದ ವಾಚನಗಳು
ಮೊದಲನೆಯ ವಾಚನ
23ಆದರೆ, ‘ನನ್ನ ಧ್ವನಿಗೆ ಕಿವಿಗೊಡಿರಿ, ನಾನು ನಿಮ್ಮ ದೇವರಾಗಿರುವೆನು, ನೀವು ನನ್ನ ಪ್ರಜೆಯಾಗಿರುವಿರಿ; ನಿಮಗೆ ಹಿತವಾಗುವಂತೆ ನಾನು ವಿಧಿಸುವ ಮಾರ್ಗದಲ್ಲೇ ನಡೆಯಿರಿ’ ಎಂಬ ಈ ಒಂದು ಅಪ್ಪಣೆಯನ್ನು ಮಾತ್ರ ಕೊಟ್ಟೆನು. 24ಅವರಾದರೋ ಕೇಳಲಿಲ್ಲ, ಕಿವಿಗೊಡಲಿಲ್ಲ, ಸ್ವಂತ ಆಲೋಚನೆಗಳನ್ನು ಅನುಸರಿಸಿ ತಮ್ಮ ದುಷ್ಟಹೃದಯದ ಹಟದಂತೆ ನಡೆದು ಹಿಂದಿರುಗಿಯೇ ಹೋದರು, ಮುಂದುವರಿಯಲಿಲ್ಲ. 25“ನಿಮ್ಮ ಪೂರ್ವಿಕರು ಐಗುಪ್ತ ದೇಶದೊಳಗಿಂದ ಹೊರಟ ದಿನ ಮೊದಲುಗೊಂಡು ಈ ದಿನದವರೆಗೂ ನನ್ನ ಸೇವಕರಾದ ಪ್ರವಾದಿಗಳನ್ನೆಲ್ಲಾ ನಿಮ್ಮವರ ಬಳಿಗೆ ಕಳುಹಿಸುತ್ತಾ ಬಂದಿದ್ದೇನೆ, ದಿನ ದಿನವೂ ತಡ ಮಾಡದೆ ಕಳುಹಿಸಿದ್ದೇನೆ. 26ನಿಮ್ಮವರಾದರೋ ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲಿಲ್ಲ, ನನ್ನ ಆಜ್ಞೆಗೆ ಮಣಿಯಲಿಲ್ಲ; ತಮ್ಮ ಪೂರ್ವಿಕರಿಗಿಂತಲೂ ಕೆಟ್ಟವರಾಗಿ ನಡೆದರು. 27“ನೀನು ಈ ಮಾತುಗಳನ್ನೆಲ್ಲಾ ಹೇಳುವಾಗ ಅವರು ಕಿವಿಗೊಡುವುದಿಲ್ಲ, ಕರೆಯುವಾಗ ಉತ್ತರಕೊಡುವುದಿಲ್ಲ. 28ಆದಕಾರಣ ನೀನು ಅವರಿಗೆ, ತಮ್ಮ ದೇವರಾದ ಯೆಹೋವನ ಧ್ವನಿಗೆ ಕಿವಿಗೊಡದೆ, ಶಿಕ್ಷಿತರಾಗದೆ ಇರುವ ಜನಾಂಗ ಇದುವೇ, ಸತ್ಯವು ಅವರ ಬಾಯಿಂದ ನಿರ್ಮೂಲವಾಗಿ ಅಳಿದುಹೋಗಿದೆ” ಎಂದು ಹೇಳು.
ಪ್ರತಿವಚನ ಕೀರ್ತನೆ
1ಬನ್ನಿರಿ, ಯೆಹೋವನಿಗೆ ಉತ್ಸಾಹದಿಂದ ಹಾಡೋಣ; ನಮ್ಮ ರಕ್ಷಕನಾದ ಶರಣನಿಗೆ ಜಯಘೋಷ ಮಾಡೋಣ. 2ಕೃತಜ್ಞತಾಸ್ತುತಿಯೊಡನೆ ಆತನ ಸನ್ನಿಧಿಗೆ ಸೇರೋಣ; ಕೀರ್ತನೆಗಳಿಂದ ಆತನಿಗೆ ಜಯಘೋಷ ಮಾಡೋಣ. 6ಬನ್ನಿರಿ; ನಮ್ಮ ನಿರ್ಮಾಣಿಕನಾದ ಯೆಹೋವನಿಗೆ ಸಾಷ್ಟಾಂಗವೆರಗಿ ಆರಾಧಿಸೋಣ. 7ಆತನು ನಮ್ಮ ದೇವರು; ನಾವೋ ಆತನು ಪಾಲಿಸುವ ಪ್ರಜೆಯೂ, ಆತನ ಕೈಕೆಳಗಿರುವ ಹಿಂಡೂ ಆಗಿದ್ದೇವೆ. ನೀವು ಈ ಹೊತ್ತು ಆತನ ಶಬ್ದಕ್ಕೆ ಕಿವಿಗೊಟ್ಟರೆ ಎಷ್ಟೋ ಒಳ್ಳೇಯದು. 8ನಿಮ್ಮ ಹಿರಿಯರು ಅರಣ್ಯದಲ್ಲಿರುವ ಮೆರೀಬದಲ್ಲಿ, ಮಸ್ಸಾದಲ್ಲಿ ಮಾಡಿದ ದಿನದಂತೆ, ನೀವು ನಿಮ್ಮ ಹೃದಯವನ್ನು ಕಠಿಣಮಾಡಿಕೊಳ್ಳಬೇಡಿರಿ. 9ಅಲ್ಲಿ ಅವರು ನನ್ನನ್ನು ಪರೀಕ್ಷಿಸಿದರು; ನನ್ನ ಮಹತ್ಕಾರ್ಯಗಳನ್ನು ನೋಡಿದರೂ ನನ್ನನ್ನು ಪರಿಶೋಧಿಸಿದರು.
ಸುವಾರ್ತೆ
14ಒಮ್ಮೆ ಯೇಸು ಮೂಗದೆವ್ವವನ್ನು ಬಿಡಿಸುತ್ತಿದ್ದನು. ಆ ದೆವ್ವವು ಬಿಟ್ಟು ಹೋದ ಮೇಲೆ ಮೂಕನು ಮಾತನಾಡಿದನು; ಅದನ್ನು ನೋಡಿದ ಜನರು ಆಶ್ಚರ್ಯಪಟ್ಟರು. 15ಆದರೆ ಅವರಲ್ಲಿ ಕೆಲವರು, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ” ಅಂದರು. 16ಬೇರೆ ಕೆಲವರು ಆತನನ್ನು ಪರೀಕ್ಷಿಸುವುದಕ್ಕಾಗಿ, “ನೀನು ಪರಲೋಕದಿಂದ ಒಂದು ಸೂಚಕಕಾರ್ಯವನ್ನು ಮಾಡಿತೋರಿಸು” ಎಂದು ಕೇಳಿದರು. 17ಯೇಸು ಅವರ ಆಲೋಚನೆಗಳನ್ನು ಅರಿತುಕೊಂಡು ಅವರಿಗೆ ಹೇಳಿದ್ದೇನಂದರೆ, “ತಮ್ಮತಮ್ಮೊಳಗೆ ಭೇದ ಹುಟ್ಟಿದ ರಾಜ್ಯವು ನಾಶವಾಗುವುದು ಮತ್ತು ತನ್ನಲ್ಲಿ ಕಚ್ಚಾಡಿ ಭೇದಹುಟ್ಟಿಸುವ ಕುಟುಂಬ ಬಿದ್ದುಹೋಗುವುದು. 18ಅದರಂತೆ ಸೈತಾನ ಪಕ್ಷದವರು ಒಬ್ಬರ ವಿರುದ್ಧ ಒಬ್ಬರು ಜಗಳ ಆಡಿದರೆ ಅವನ ರಾಜ್ಯವು ಹೇಗೆ ಉಳಿದೀತು? ಬೆಲ್ಜೆಬೂಲನ ಬಲದಿಂದ ದೆವ್ವಗಳನ್ನು ಬಿಡಿಸುತ್ತೀ ಎಂದು ನನಗೆ ಹೇಳುತ್ತೀರಲ್ಲಾ, 19ನಾನು ಬೆಲ್ಜೆಬೂಲನ ಬಲದಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಬಲದಿಂದ ಬಿಡಿಸುತ್ತಾರೆ? ಆದುದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪುಕೊಡುವರು. 20ನಾನು ದೇವರ ಬಲದಿಂದಲೇ ದೆವ್ವಗಳನ್ನು ಬಿಡಿಸುವುದಾದರೆ ದೇವರ ರಾಜ್ಯವು ನಿಮ್ಮಲ್ಲಿಗೆ ಈಗಾಗಲೇ ಬಂದಿದೆ ಎಂಬುದು ಸ್ಪಷ್ಟ. 21“ಒಬ್ಬ ಬಲಿಷ್ಠನು ಸರ್ವಾಯುಧಗಳನ್ನು ಧರಿಸಿಕೊಂಡು ತನ್ನ ಮನೆಯನ್ನು ಕಾಪಾಡಿಕೊಂಡಿರುವಾಗ ಅವನ ವಸ್ತುಗಳು ಭದ್ರವಾಗಿಯೇ ಇರುವವು; 22ಆದರೆ ಅವನಿಗಿಂತ ಬಲಿಷ್ಠನು ಬಂದು ಅವನನ್ನು ಗೆದ್ದು ಅವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಮಾಡಿದ್ದನ್ನು ಹಂಚಿಕೊಡುತ್ತಾನೆ. 23ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನ ಜೊತೆಯಲ್ಲಿ ಒಟ್ಟುಗೂಡಿಸದವನು ಚದರಿಸುವವನಾಗುತ್ತಾನೆ.
ಇಂದಿನ ಸಂತರು
- ಸಂತ ಕ್ಯಾಸಿಮಿರ್
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು