Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಫೆಬ್ರವರಿ 2027 › 16 ಫೆಬ್ರವರಿ

ಆರ್ಥೊಡಾಕ್ಸ್ ಪಂಚಾಂಗ · ಫೆಬ್ರವರಿ 3 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 16 ಫೆಬ್ರವರಿ 2027

ಮಂಗಳವಾರ · ಪಂಚಾಶತ್ತಮದ ನಂತರದ 38ನೇ ವಾರ · ಸ್ವರ 4

ಹಬ್ಬಗಳು ಮತ್ತು ಸಂತರು

Afterfeast of the Meeting of the Lord

ಉಪವಾಸ

ಉಪವಾಸವಿಲ್ಲ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಪತ್ರಿಕೆ (ಸೋಮವಾರಕ್ಕೆ)

1 ಪೇತ್ರ 2:21–3:9

21ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿದ್ದೀರಿ. ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ಆತನ ಹೆಜ್ಜೆಯ ಜಾಡಿಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು. 22ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ. 23ಬಯ್ಯುವವರನ್ನು ಆತನು ಪ್ರತಿಯಾಗಿ ಬಯ್ಯಲಿಲ್ಲ, ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ, ನ್ಯಾಯವಾಗಿ ತೀರ್ಪು ಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು. 24ನಾವು ಪಾಪದ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಶಿಲುಬೆಯನ್ನು ಏರಿ ಮರಣ ಹೊಂದಿದನು. ಆತನ ಬಾಸುಂಡೆಗಳಿಂದ ನಮಗೆ ಗುಣವಾಯಿತು. 25ನೀವು ದಾರಿತಪ್ಪಿದ ಕುರಿಗಳಂತೆ ಇದ್ದವರು. ಆದರೆ ಈಗ ನೀವು ತಿರುಗಿಕೊಂಡು ನಿಮ್ಮ ಆತ್ಮಗಳ ಕುರುಬನೂ ಪಾಲಕನೂ ಆಗಿರುವಾತನ ಬಳಿಗೆ ಬಂದಿದ್ದೀರಿ. 3:1ಅದೇ ರೀತಿಯಾಗಿ ಪತ್ನಿಯರೇ, ನಿಮ್ಮ ಪತಿಯರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ, ಗೌರವದಿಂದಲೂ ನಡೆದುಕೊಳ್ಳುವುದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಪತ್ನಿಯರಾದ ನಿಮ್ಮ ಒಳ್ಳೆಯ ನಡತೆಗಳಿಂದಲೇ ಸನ್ಮಾರ್ಗಕ್ಕೆ ಬಂದಾರು. 3ಜಡೆ ಹೆಣೆದುಕೊಳ್ಳುವುದೂ, ಚಿನ್ನದ ಒಡವೆಗಳನ್ನು ಹಾಕಿಕೊಳ್ಳುವುದೂ, ಬೆಲೆಬಾಳುವ ವಸ್ತ್ರಗಳನ್ನು ಧರಿಸಿಕೊಳ್ಳುವುದೂ ಈ ಮೊದಲಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು. 4ಆದರೆ ದೇವರ ದೃಷ್ಟಿಯಲ್ಲಿ ಅಮೂಲ್ಯವಾದದ್ದೂ ಮತ್ತು ಶಾಶ್ವತವಾದದ್ದೂ ಆಗಿರುವ ಸಾತ್ವಿಕತೆ ಮತ್ತು ಶಾಂತಮನಸ್ಸು ಎಂಬ ಆಂತರ್ಯದ ಭೂಷಣವೇ ನಿಮ್ಮ ಅಲಂಕಾರವಾಗಿರಲಿ. 5ಪೂರ್ವ ಕಾಲದಲ್ಲಿ ದೇವರ ಮೇಲೆ ನಿರೀಕ್ಷೆಯನ್ನಿಟ್ಟಿದ್ದ ಭಕ್ತೆಯರಾದ ಸ್ತ್ರೀಯರೂ ಸಹ ಹೀಗೆಯೇ ತಮ್ಮನ್ನು ಅಲಂಕರಿಸಿಕೊಂಡಿದ್ದರು. ಅವರು ತಮ್ಮ ತಮ್ಮ ಗಂಡಂದಿರಿಗೆ ಅಧೀನರಾಗಿದ್ದರು. 6ಸಾರಳು ಹಾಗೆಯೇ ಅಬ್ರಹಾಮನಿಗೆ ವಿಧೇಯಳಾಗಿದ್ದು ಅವನನ್ನು ಯಜಮಾನ ಎಂದು ಕರೆದಳು. ನೀವು ಒಳ್ಳೆಯದನ್ನು ಮಾಡುತ್ತಾ ಯಾವ ಭೀತಿಗೂ ಭಯಪಡುವುದಿಲ್ಲವಾದರೆ ನೀವು ಆಕೆಯ ಕುವರಿಯರೇ ಆಗುವಿರಿ. 7ಅದೇ ರೀತಿಯಾಗಿ ಪತಿಯರೇ, ಸ್ತ್ರೀಯು ನಿಮ್ಮಗಿಂತ ಬಲಹೀನಳೆಂಬುದನ್ನು ತಿಳಿದುಕೊಂಡು, ನಿಮ್ಮ ಪತ್ನಿಯರ ಸಂಗಡ ವಿವೇಕದಿಂದ ನಡೆದುಕೊಳ್ಳಿರಿ, ಅವರು ನಿತ್ಯಜೀವ ವರಕ್ಕೆ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಗೌರವವನ್ನು ಸಲ್ಲಿಸಿರಿ. ಹೀಗೆ ಮಾಡಿದರೆ ನಿಮ್ಮ ಪ್ರಾರ್ಥನೆಗಳಿಗೆ ಅಡಚಣೆ ಉಂಟಾಗುವುದಿಲ್ಲ. 8ಕಡೆಗೆ ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ, ಪರಸ್ಪರ ಅನುಕಂಪವುಳ್ಳವರಾಗಿರಿ, ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ, ಕರುಣೆಯೂ, ದೀನಭಾವವೂ ಉಳ್ಳವರಾಗಿರಿ. 9ಅಪಕಾರಕ್ಕೆ ಅಪಕಾರವನ್ನು, ನಿಂದೆಗೆ ನಿಂದೆಯನ್ನು ಮಾಡದೇ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದಿದ್ದಾನಲ್ಲಾ. ಹೀಗೆ ಮಾಡುವುದಾದರೆ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿರಿ.

ಪತ್ರಿಕೆ

1 ಪೇತ್ರ 3:10–22

10ಏಕೆಂದರೆ ಪವಿತ್ರಗ್ರಂಥದಲ್ಲಿ ಬರೆದಿರುವಂತೆ, “ಜೀವವನ್ನು ಬಯಸುತ್ತಾ ಸುದಿನಗಳನ್ನು ನೋಡುವುದಕ್ಕೆ ಕಾದಿರುವಾತನು ಕೆಟ್ಟದ್ದನ್ನು ನುಡಿಯದಂತೆ ತನ್ನ ನಾಲಿಗೆಯನ್ನು ವಂಚನೆಯ ಮಾತುಗಳನ್ನಾಡದಂತೆ ತುಟಿಗಳನ್ನು ಬಿಗಿಹಿಡಿದುಕೊಳ್ಳಲಿ. 11ಅವನು ಕೆಟ್ಟದ್ದನ್ನು ಬಿಟ್ಟು ಒಳ್ಳೆದನ್ನು ಮಾಡಲಿ. ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನಪಡಲಿ. 12ಏಕೆಂದರೆ ಕರ್ತನು ನೀತಿವಂತರನ್ನು ಕಟಾಕ್ಷಿಸುತ್ತಾನೆ ಮತ್ತು ಆತನು ಅವರ ವಿಜ್ಞಾಪನೆಗಳಿಗೆ ಕಿವಿಗೊಡುತ್ತಾನೆ. ಆದರೆ ಕೆಡುಕರಿಗೋ ಕರ್ತನು ವಿಮುಖನಾಗಿರುತ್ತಾನೆ.” 13ನೀವು ಒಳ್ಳೆಯದನ್ನೇ ಮಾಡುವುದರಲ್ಲಿ ಆಸಕ್ತರಾಗಿದ್ದರೆ ನಿಮಗೆ ಕೇಡು ಮಾಡುವವರು ಯಾರಿದ್ದಾರೆ? 14ಒಂದು ವೇಳೆ ನೀವು ನೀತಿಯ ನಿಮಿತ್ತವೇ ಬಾಧೆಪಟ್ಟರೆ ನೀವು ಧನ್ಯರೇ. ಅವರ ಬೆದರಿಕೆಗೆ ಹೆದರಬೇಡಿರಿ, ಕಳವಳಪಡಬೇಡಿರಿ. 15ಆದರೆ ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೆನೆಂದು ಕೇಳುವವರೆಲ್ಲರಿಗೂ ಉತ್ತರ ಹೇಳುವುದಕ್ಕೆ ಯಾವಾಗಲೂ ಸಿದ್ಧರಾಗಿರಿ. ಆದರೆ ಅದನ್ನು ಸಾತ್ವಿಕತ್ವದಿಂದಲೂ ಮತ್ತು ಗೌರವದಿಂದಲೂ ಹೇಳಿರಿ. 16ಒಳ್ಳೆಯ ಮನಸ್ಸಾಕ್ಷಿಯುಳ್ಳವರಾಗಿರಿ ಆಗ ಕ್ರಿಸ್ತನಲ್ಲಿರುವ ನಿಮ್ಮ ಒಳ್ಳೆಯ ನಡತೆಯನ್ನು ಕುರಿತು ಕೆಟ್ಟಮಾತುಗಳನ್ನಾಡುವವರು ನಿಮ್ಮನ್ನು ನಿಂದಿಸುವುದಕ್ಕೆ ನಾಚಿಕೆಪಡುವರು. 17ಕೆಟ್ಟ ನಡತೆಯುಳ್ಳವರಾಗಿ ಬಾಧೆಪಡುವುದಕ್ಕಿಂತಲೂ ಒಳ್ಳೆ ನಡತೆಯುಳ್ಳವರಾಗಿಯೇ ದೇವರ ಚಿತ್ತದ ಪ್ರಕಾರ ಬಾಧೆಪಡುವುದು ಉತ್ತಮ. 18ಕ್ರಿಸ್ತನು ಸಹ ನೀತಿವಂತನಾಗಿದ್ದು ಅನೀತಿವಂತರಿಗೋಸ್ಕರ ಪ್ರಾಣ ಕೊಟ್ಟು ನಮ್ಮನ್ನು ದೇವರ ಬಳಿಗೆ ಸೇರಿಸುವುದಕ್ಕಾಗಿ ಒಂದೇ ಸಾರಿ ಪಾಪನಿವಾರಣೆಗೋಸ್ಕರ ಬಾಧೆಪಟ್ಟು ಸತ್ತನು. ಆತನು ಶರೀರಸಂಬಂಧವಾಗಿ ಕೊಲ್ಲಲ್ಪಟ್ಟು, ಆತ್ಮ ಸಂಬಂಧವಾಗಿ ತಿರುಗಿ ಬದುಕುವವನಾದನು. 19ಇದಲ್ಲದೆ ಆತನು ಆತ್ಮರೂಪನಾಗಿ ಸೆರೆಯಲ್ಲಿದ್ದ ಆತ್ಮಗಳ ಬಳಿಗೆ ಹೋಗಿ ಸುವಾರ್ತೆಯನ್ನು ಸಾರಿದನು. 20ಅಂದರೆ ಪೂರ್ವಕಾಲದಲ್ಲಿ ನೋಹನು ನಾವೆಯನ್ನು ಕಟ್ಟುತ್ತಿರಲು ದೇವರು ದೀರ್ಘಶಾಂತಿಯಿಂದ ಕಾದಿದ್ದಾಗ ಅವರು ಆತನಿಗೆ ಅವಿಧೇಯರಾಗಿದ್ದರು. ಆ ನಾವೆಯೊಳಗೆ ಸೇರಿದ ಎಂಟು ಜನರು ಮಾತ್ರ ನೀರಿನೊಳಗಿನಿಂದ ರಕ್ಷಿಸಲ್ಪಟ್ಟರು. 21ಆ ನೀರಿಗೆ ಅನುರೂಪವಾದ ದೀಕ್ಷಾಸ್ನಾನವು ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ. ಅದು ದೇಹದ ಮೇಲಿನ ಕೊಳೆಯನ್ನು ಹೊಗಲಾಡಿಸುವಂಥದ್ದಲ್ಲ. ಆದರೆ ಒಳ್ಳೆಯ ಮನಸ್ಸಾಕ್ಷಿ ಬೇಕೆಂದು ದೇವರಿಗೆ ವಿಜ್ಞಾಪಿಸಿಕೊಳ್ಳುವಂಥದಾಗಿದೆ. 22ಆತನು ಪರಲೋಕಕ್ಕೆ ಹೋಗಿ ದೇವರ ಬಲಗಡೆಯಲ್ಲಿದ್ದಾನೆ, ದೇವದೂತರು, ಅಧಿಕಾರಿಗಳು ಮತ್ತು ಶಕ್ತಿಗಳೂ ಆತನ ಸ್ವಾಧೀನವಾಗಿವೆ.

ಪತ್ರಿಕೆ (ಸಂತರಾದ ಸಿಮೆಯೋನ ಮತ್ತು ಅನ್ನ)

ಇಬ್ರಿ 9:11–14

11ಕ್ರಿಸ್ತನಾದರೋ ಈಗ ದೊರೆತಿರುವ ಶುಭಗಳ ಮಹಾಯಾಜಕನಾಗಿ ಬಂದು, ಮನುಷ್ಯರ ಕೈಯಿಂದ ಕಟ್ಟಲ್ಪಡದಂಥದೂ, ಇಹಲೋಕದ ಸೃಷ್ಟಿಗೆ ಸಂಬಂಧಪಡದಂಥದೂ, ಶ್ರೇಷ್ಠವಾದುದೂ, ಬಹು ಪರಿಪೂರ್ಣವಾದುದೂ ಆಗಿರುವ ಗುಡಾರದಲ್ಲಿ ಸೇವೆ ಮಾಡುವವನಾಗಿ, 12ಹೋತಗಳ ಮತ್ತು ಹೋರಿಕರುಗಳ ರಕ್ತದ ಮೂಲಕವಲ್ಲ ತನ್ನ ಸ್ವಂತ ರಕ್ತದ ಮೂಲಕ ಒಂದೇ ಸಾರಿ ಎಲ್ಲರಿಗೋಸ್ಕರ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಿ ನಿತ್ಯ ವಿಮೋಚನೆಯನ್ನು ಸಾಧಿಸಿದನು. 13ಹೋತ ಹೋರಿಗಳ ರಕ್ತವೂ ಅಶುದ್ಧರಾದವರ ಮೇಲೆ ಚಿಮುಕಿಸುವ ಕಡಸಿನ ಬೂದಿಯೂ ಶರೀರವನ್ನು ಶುದ್ಧೀಕರಿಸುವುದಾದರೆ, 14ನಿತ್ಯಾತ್ಮನಿಂದ ತನ್ನನ್ನು ತಾನೇ ನಿರ್ದೋಷಿಯನ್ನಾಗಿ, ದೇವರಿಗೆ ಸಮರ್ಪಿಸಿಕೊಂಡ ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ, ನಮ್ಮನ್ನು ನಿರ್ಜೀವ ಕ್ರಿಯೆಗಳಿಂದ ಬಿಡಿಸಿ, ನಾವು ಜೀವವುಳ್ಳ ದೇವರನ್ನು ಆರಾಧಿಸುವಂತೆ ನಮ್ಮ ಮನಸ್ಸಾಕ್ಷಿಯನ್ನು ಶುದ್ಧೀಕರಿಸುತ್ತದಲ್ಲವೇ?

ಸುವಾರ್ತೆ (ಸೋಮವಾರಕ್ಕೆ)

ಮಾರ್ಕ 12:13–17

13ಆ ಮೇಲೆ ಅವರು ಯೇಸುವನ್ನು ಮಾತುಗಳಲ್ಲಿ ಹಿಡಿಯಬೇಕೆಂದು ಫರಿಸಾಯರಲ್ಲಿಯೂ, ಹೆರೋದ್ಯರಲ್ಲಿಯೂ ಕೆಲವರನ್ನು ಆತನ ಬಳಿಗೆ ಕಳುಹಿಸಿದರು. 14ಇವರು ಬಂದು, “ಬೋಧಕನೇ ನೀನು ಸತ್ಯವಂತನು, ಯಾವ ಮನುಷ್ಯನನ್ನು ಲಕ್ಷಿಸದವನೂ, ಮುಖದಾಕ್ಷಿಣ್ಯ ತೋರಿಸದವನೂ, ಸತ್ಯಕ್ಕನುಸಾರವಾಗಿ ದೈವಮಾರ್ಗವನ್ನು ಬೋಧಿಸುವವನೂ ಎಂದು ನಾವು ಬಲ್ಲೆವು. ಕೈಸರನಿಗೆ ಸುಂಕ ಕೊಡುವುದು ಧರ್ಮಸಮ್ಮತವೋ? ಅಲ್ಲವೋ? ನಾವದನ್ನು ಕೊಡಬೇಕೋ ಬೇಡವೋ?” ಎಂದು ಆತನನ್ನು ಕೇಳಿದರು. 15ಆದರೆ ಯೇಸು ಅವರ ಕಪಟತನವನ್ನು ಗ್ರಹಿಸಿ, “ನೀವು ನನ್ನನ್ನು ಪರೀಕ್ಷಿಸುವುದೇಕೆ? ಒಂದು ನಾಣ್ಯವನ್ನು ತಂದು ನನಗೆ ತೋರಿಸಿರಿ ನಾನು ಅದನ್ನು ನೋಡುತ್ತೇನೆ” ಎಂದು ಹೇಳಲು ಅವರು ತಂದರು. 16ಆಗ ಆತನು ಇದರ “ಮೇಲಿರುವುದು ಯಾರ ಮುಖಮುದ್ರೆ? ಮತ್ತು ಯಾರ ಲಿಪಿ?” ಎಂದು ಕೇಳಿದ್ದಕ್ಕೆ ಅವರು ಕೈಸರನದು ಅಂದರು. 17ಯೇಸು, “ಕೈಸರನಿಗೆ ಸಂಬಂಧಪಟ್ಟವುಗಳನ್ನು ಕೈಸರನಿಗೂ ದೇವರಿಗೆ ಸಂಬಂಧಪಟ್ಟವುಗಳನ್ನು ದೇವರಿಗೂ ಸಲ್ಲಿಸಿರಿ” ಎಂದು ಹೇಳಿದನು. ಅದಕ್ಕೆ ಅವರು ಆತನ ವಿಷಯವಾಗಿ ಬಹು ಆಶ್ಚರ್ಯಪಟ್ಟರು.

ಸುವಾರ್ತೆ

ಮಾರ್ಕ 12:18–27

18ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಆತನ ಬಳಿಗೆ ಬಂದು, 19ಆತನನ್ನು ಪ್ರಶ್ನೆಮಾಡಿದ್ದೇನಂದರೆ, “ಬೋಧಕನೇ, ‘ಅಣ್ಣನಾದವನು ಮಕ್ಕಳಿಲ್ಲದೆ ಹೆಂಡತಿಯನ್ನು ಬಿಟ್ಟು ಸತ್ತರೆ ಆಕೆಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು’ ಮೋಶೆಯು ನಮಗಾಗಿ ಬರೆದಿಟ್ಟಿದ್ದಾನಲ್ಲವೇ. 20“ಒಮ್ಮೆ ಏಳು ಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆ ಮಾಡಿಕೊಂಡು ಸಂತಾನವಿಲ್ಲದೆ ಸತ್ತನು. 21ಎರಡನೆಯವನೂ ಆಕೆಯನ್ನು ಮದುವೆ ಮಾಡಿಕೊಂಡು ಸಂತಾನವಿಲ್ಲದೆ ಸತ್ತನು. ಅದರಂತೆ ಮೂರನೆಯವನು. 22ಇದೇ ಪ್ರಕಾರ ಏಳು ಮಂದಿಯೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದೆ ಸತ್ತರು. ಕೊನೆಯಲ್ಲಿ ಆ ಸ್ತ್ರೀಯೂ ಸತ್ತಳು. 23ಪುನರುತ್ಥಾನದಲ್ಲಿ ಅವರು ಎದ್ದುಬರುವಾಗ ಅವರಲ್ಲಿ ಆಕೆಯು ಯಾರ ಹೆಂಡತಿಯಾಗಿರುವಳು? ಆ ಏಳು ಮಂದಿಗೂ ಆಕೆಯು ಹೆಂಡತಿಯಾಗಿದ್ದಳಲ್ಲಾ” ಎಂದರು. 24ಅದಕ್ಕೆ ಯೇಸು, “ನೀವು ಶಾಸ್ತ್ರವಚನಗಳನ್ನಾದರೂ, ದೇವರ ಶಕ್ತಿಯನ್ನಾದರೂ ತಿಳಿಯದೆ ಇರುವುದರಿಂದಲೇ ತಪ್ಪುವವರಾಗಿದ್ದೀರಿ? 25ಸತ್ತವರು ಬದುಕಿ ಎದ್ದಮೇಲೆ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಆದರೆ ಅವರು ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ. 26ಆದರೆ ಸತ್ತವರು ಬದುಕಿ ಬರುತ್ತಾರೆಂಬುದನ್ನು ಕುರಿತು ಹೇಳಬೇಕಾದರೆ ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಆಗಿದ್ದೇನೆ ಎಂದು ಪೊದೆಯಲ್ಲಿ ದೇವರು ಮೋಶೆಯ ಸಂಗಡ ಮಾತನಾಡಿದನೆಂದು ನೀವು ಮೋಶೆಯ ಗ್ರಂಥದಲ್ಲಿ ಓದಲಿಲ್ಲವೋ?’ 27ಆತನು ಜೀವಂತರಿಗೆ ದೇವರಾಗಿದ್ದಾನೆ ಹೊರತು ಸತ್ತವರಿಗಲ್ಲ. ಈ ವಿಷಯದಲ್ಲಿ ನೀವು ಬಹು ತಪ್ಪಾದ ಅಭಿಪ್ರಾಯವುಳ್ಳವರಾಗಿದ್ದಿರಿ” ಎಂದು ಹೇಳಿದನು.

ಸುವಾರ್ತೆ (ಸಂತರಾದ ಸಿಮೆಯೋನ ಮತ್ತು ಅನ್ನ)

ಲೂಕ 2:25–38

25ಆ ಕಾಲದಲ್ಲಿ ಯೆರೂಸಲೇಮಿನಲ್ಲಿ ಸಿಮೆಯೋನನೆಂಬ ಒಬ್ಬ ಮನುಷ್ಯನಿದ್ದನು. ಈ ಮನುಷ್ಯನು ನೀತಿವಂತನೂ ದೇವಭಕ್ತನೂ ಆಗಿದ್ದನು. ಇಸ್ರಾಯೇಲರನ್ನು ಸಂತೈಸುವವನು ಯಾವಾಗ ಬರುವನೋ ಎಂದು ನಿರೀಕ್ಷಿಸುತ್ತಾ ಇದ್ದನು ಮತ್ತು ಆತನು ಪವಿತ್ರಾತ್ಮಭರಿತನಾಗಿದ್ದನು. 26ಇದಲ್ಲದೆ, ಕರ್ತನು ಕಳುಹಿಸಬೇಕಾದ ಕ್ರಿಸ್ತನನ್ನು ಕಾಣುವುದಕ್ಕಿಂತ ಮುಂಚೆ ನೀನು ಸಾಯುವುದಿಲ್ಲವೆಂದು ಪವಿತ್ರಾತ್ಮನ ಮೂಲಕ ಅವನಿಗೆ ದೈವೋಕ್ತಿ ಉಂಟಾಗಿತ್ತು. 27ಇವನು ಪವಿತ್ರಾತ್ಮನ ಪ್ರೇರಣೆಯಿಂದ ದೇವಾಲಯಕ್ಕೆ ಬಂದನು. ಆಗ ತಂದೆತಾಯಿಗಳು ಮಗುವಾದ ಯೇಸುವನ್ನು ಧರ್ಮಶಾಸ್ತ್ರದಲ್ಲಿ ಹೇಳಿರುವ ಪದ್ಧತಿಯ ಪ್ರಕಾರ ನಡೆಸಬೇಕೆಂದು ಮಗುವನ್ನು ಒಳಕ್ಕೆ ತರಲು, 28ಸಿಮೆಯೋನನು ಆ ಮಗುವನ್ನು ತನ್ನ ಕೈಯಲ್ಲಿ ಎತ್ತಿಕೊಂಡು ದೇವರನ್ನು ಕೊಂಡಾಡುತ್ತಾ, 29“ಕರ್ತನೇ, ನಿನ್ನ ಮಾತು ನೆರವೇರಿತು; ಈಗ ಸಮಾಧಾನದಿಂದ ಹೋಗುವುದಕ್ಕೆ ನಿನ್ನ ದಾಸನಿಗೆ ಅಪ್ಪಣೆಯಾಯಿತು. 30ನೀನು ಎಲ್ಲಾ ಜನರ ಸಮ್ಮುಖದಲ್ಲಿ ಸಿದ್ಧಪಡಿಸಿದ ಆ ರಕ್ಷಣೆಯನ್ನು ನಾನು ಕಣ್ಣಾರೆ ಕಂಡೆನು. 32ಆತನು ಅನ್ಯಜನರಿಗೆ ಜ್ಞಾನೋದಯದ ಬೆಳಕು, ನಿನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೆ ಕೀರ್ತಿ” ಅಂದನು. 33ಆ ಮಗುವಿನ ವಿಷಯವಾಗಿ ಹೇಳಿದ ಈ ಮಾತುಗಳಿಗೆ ಅದರ ತಂದೆತಾಯಿಗಳು ಆಶ್ಚರ್ಯಪಡುತ್ತಿರಲು, 34ಸಿಮೆಯೋನನು ಅವರನ್ನು ಆಶೀರ್ವದಿಸಿ ತಾಯಿಯಾದ ಮರಿಯಳಿಗೆ, “ಇಗೋ, ಈತನು ಇಸ್ರಾಯೇಲ್ ಜನರಲ್ಲಿ ಅನೇಕರು ಬೀಳುವುದಕ್ಕೂ, ಅನೇಕರು ಏಳುವುದಕ್ಕೂ ಕಾರಣನಾಗಿರುವನು ಮತ್ತು ಜನರು ವಿರೋಧಿಸಿ ಮಾತನಾಡುವುದಕ್ಕೂ ಗುರುತಾಗಿರುವನು; 35ಹೀಗೆ ಬಹುಜನರ ಹೃದಯದ ಆಲೋಚನೆಗಳು ಬಹಿರಂಗವಾಗುವವು; ಈ ಕಾರಣಕ್ಕಾಗಿ ಈತನು ಹುಟ್ಟಿದ್ದು. ಇದಲ್ಲದೆ ನಿನ್ನ ಸ್ವಂತ ಮನಸ್ಸಿಗಂತೂ ಅಲಗು ನಾಟಿದಂತೆ ವೇದನೆ ಉಂಟಾಗುತ್ತದೆ” ಎಂದು ಹೇಳಿದನು. 36ಇದಲ್ಲದೆ ಅಸೇರನ ಕುಲದ ಫನುವೇಲನ ಮಗಳಾದ ಅನ್ನಳೆಂಬ ಒಬ್ಬ ಪ್ರವಾದಿನಿ ಇದ್ದಳು. ಆಕೆ ಬಹಳ ಮುಪ್ಪಿನವಳು. ಮದುವೆಯಾಗಿ ಏಳು ವರ್ಷ ಗಂಡನ ಕೂಡ ಸಂಸಾರ ಮಾಡಿ ವಿಧವೆಯಾಗಿದ್ದಳು, 37ಅವಳು ಎಂಭತ್ತುನಾಲ್ಕು ವರ್ಷದವಳಾಗಿದ್ದಳು. ಆಕೆ ದೇವಾಲಯವನ್ನು ಬಿಟ್ಟುಹೋಗದೆ ಉಪವಾಸ ವಿಜ್ಞಾಪನೆಗಳಿಂದ ರಾತ್ರಿ ಹಗಲೂ ದೇವರನ್ನು ಆರಾಧಿಸುತ್ತಿದ್ದಳು. 38ಆಕೆ ಅದೇ ಗಳಿಗೆಯಲ್ಲಿ ಅವರ ಹತ್ತಿರಕ್ಕೆ ಬಂದು ದೇವರಿಂದಾದ ಉಪಕಾರವನ್ನು ನೆನಸಿ ಕೊಂಡಾಡಿದ್ದಲ್ಲದೆ ಯೆರೂಸಲೇಮಿನ ಬಿಡುಗಡೆಯನ್ನು ಹಾರೈಸುತ್ತಿದ್ದವರೆಲ್ಲರ ಸಂಗಡ ಆತನ ವಿಷಯವಾಗಿ ಮಾತನಾಡುವವಳಾದಳು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 3 ಫೆಬ್ರವರಿ ಎಂದರೆ ನಾಗರಿಕ ಪಂಚಾಂಗದ 16 ಫೆಬ್ರವರಿ. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು