Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜನವರಿ 2027 › 18 ಜನವರಿ

ಆರ್ಥೊಡಾಕ್ಸ್ ಪಂಚಾಂಗ · ಜನವರಿ 5 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 18 ಜನವರಿ 2027

ಸೋಮವಾರ · ಪಂಚಾಶತ್ತಮದ ನಂತರದ 34ನೇ ವಾರ · ಸ್ವರ 8

ಹಬ್ಬಗಳು ಮತ್ತು ಸಂತರು

ದೇವಪ್ರತ್ಯಕ್ಷತೆಯ ಮುನ್ನಾದಿನ

ಒಂದು ದಿನದ ಉಪವಾಸ · ಕಟ್ಟುನಿಟ್ಟಿನ ಉಪವಾಸ

ಉಪವಾಸ: ಎಣ್ಣೆಯೊಂದಿಗೆ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಮೊದಲನೆಯ ತಾಸು: ಪ್ರವಾದನೆ

ಯೆಶಾ 35:1–10

1ಅರಣ್ಯವೂ, ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವುದು. 2ಅದು ಸಮೃದ್ಧಿಯಾಗಿ ಹೂಬಿಟ್ಟು, ಉತ್ಸಾಹ ಧ್ವನಿಮಾಡುವಷ್ಟು ಉಲ್ಲಾಸಿಸುವುದು. ಲೆಬನೋನಿನ ಮಹಿಮೆಯೂ, ಕರ್ಮೆಲಿನ ಮತ್ತು ಶಾರೋನಿನ ವೈಭವವೂ ಅದಕ್ಕೆ ದೊರೆಯುವವು; ಇವೆಲ್ಲಾ ಯೆಹೋವನ ಮಹಿಮೆಯನ್ನೂ, ನಮ್ಮ ದೇವರ ವೈಭವವನ್ನೂ ಕಾಣುವವು. 3ಜೋಲುಬಿದ್ದ ಕೈಗಳನ್ನೂ, ನಡುಗುವ ಮೊಣಕಾಲುಗಳನ್ನೂ ಬಲಗೊಳಿಸಿರಿ. 4ಭಯಭ್ರಾಂತ ಹೃದಯದವರಿಗೆ, “ಬಲಗೊಳ್ಳಿರಿ, ಹೆದರಬೇಡಿರಿ! ಇಗೋ, ನಿಮ್ಮ ದೇವರು ಮುಯ್ಯಿತೀರಿಸುವುದಕ್ಕೂ, ದೈವಿಕ ಪ್ರತಿಫಲವನ್ನು ಕೊಡುವುದಕ್ಕೂ ಬರುವನು. ತಾನೇ ಬಂದು ನಿಮ್ಮನ್ನು ರಕ್ಷಿಸುವನು” ಎಂದು ಹೇಳಿರಿ. 5ಆಗ ಕುರುಡರ ಕಣ್ಣು ಕಾಣುವುದು, ಕಿವುಡರ ಕಿವಿ ಕೇಳುವುದು. 6ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವುದು, ಅರಣ್ಯದಲ್ಲಿ ಒರತೆಗಳು ಒಡೆಯುವವು, ಮರುಭೂಮಿಯಲ್ಲಿ ನದಿಗಳು ಹುಟ್ಟಿ ಹರಿಯುವವು. 7ಬೆಂಗಾಡು ಸರೋವರವಾಗುವುದು, ಒಣನೆಲದಲ್ಲಿ ಬುಗ್ಗೆಗಳು ಹರಿಯುವವು; ನರಿಗಳು ಮಲಗುತ್ತಿದ್ದ ಸ್ಥಳವು ಆಪುಜಂಬುಗಳ ಪ್ರದೇಶವಾಗುವುದು. 8ಅಲ್ಲಿ ರಾಜಮಾರ್ಗವಿರುವುದು. ಅದು ಪರಿಶುದ್ಧ ಮಾರ್ಗ ಎನಿಸಿಕೊಳ್ಳುವುದು. ಯಾವ ಅಶುದ್ಧನೂ ಅದರ ಮೇಲೆ ಹಾದುಹೋಗನು. ಆದರೆ ಅದು ದೇವಜನರಿಗಾಗಿಯೇ ಇರುವುದು. ಅಲ್ಲಿ ಹೋಗುವ ಮೂಢನೂ ದಾರಿತಪ್ಪನು. 9ಸಿಂಹವು ಅಲ್ಲಿ ಇರದು. ಇಲ್ಲವೆ ಕ್ರೂರವಾದ ಮೃಗಗಳು ಅದರ ಮೇಲೆ ಹೋಗುವುದಿಲ್ಲ. ಅದು ಅಲ್ಲಿ ಕಾಣುವುದೇ ಇಲ್ಲ. ಬಿಡುಗಡೆಯಾದವರೇ ಅಲ್ಲಿ ನಡೆಯುವರು. 10ಯೆಹೋವನು ವಿಮೋಚಿಸಿದವರು ಹಿಂದಿರುಗಿ, ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು ಉತ್ಸಾಹಧ್ವನಿಯೊಡನೆ ಚೀಯೋನಿಗೆ ಸೇರುವರು. ಅವರು ಹರ್ಷಾನಂದಗಳನ್ನು ಅನುಭವಿಸುವರು, ದುಃಖವೂ, ನಿಟ್ಟುಸಿರೂ ಓಡಿಹೋಗುವವು.

ಮೊದಲನೆಯ ತಾಸು: ಪತ್ರಿಕೆ

ಅ. ಕೃ 13:25–32

25ಯೋಹಾನನು ತನ್ನ ಸೇವೆಯನ್ನು ಪೂರೈಸುತ್ತಿರುವಾಗ ಜನರಿಗೆ; ‘ನನ್ನನ್ನು ಯಾರೆಂದು ಯೋಚಿಸುತ್ತೀರಿ? ನಾನು ಆತನಲ್ಲ, ಆದರೆ ನನ್ನ ಹಿಂದೆ ಒಬ್ಬನು ಬರುತ್ತಾನೆ, ಆತನ ಪಾದರಕ್ಷೆಯನ್ನು ಬಿಚ್ಚುವುದಕ್ಕೆ ನಾನು ಯೋಗ್ಯನಲ್ಲ’ ಎಂದು ಹೇಳಿದನು. 26“ಸಹೋದರರೇ, ಅಬ್ರಹಾಮನ ವಂಶಸ್ಥರೇ, ಮತ್ತು ನಿಮ್ಮೊಂದಿಗಿರುವ ಯೆಹೂದ್ಯಮತಾವಲಂಬಿಗಳೇ, ನಮಗೆ ಈ ರಕ್ಷಣೆಯ ವಾಕ್ಯವು ಕಳುಹಿಸಲ್ಪಟ್ಟಿದೆ. 27ಯೆರೂಸಲೇಮಿನಲ್ಲಿ ವಾಸವಾಗಿರುವವರೂ, ಅವರ ಅಧಿಕಾರಿಗಳೂ, ಆತನನ್ನಾಗಲಿ, ಪ್ರತಿ ಸಬ್ಬತ್ ದಿನದಲ್ಲಿ ಪಾರಾಯಣವಾಗುವ ಪ್ರವಾದಿಗಳ ಮಾತುಗಳನ್ನಾಗಲಿ ಗ್ರಹಿಸದೆ, ಆತನನ್ನು ಅಪರಾಧಿಯೆಂದು ತೀರ್ಪುಮಾಡಿ ಆ ಮಾತುಗಳನ್ನೇ ನೆರವೇರಿಸಿದರು. 28ಮರಣದಂಡನೆಗೆ ಕಾರಣವೇನೂ ತಮಗೆ ಸಿಕ್ಕದಿದ್ದರೂ, ಆತನನ್ನು ಕೊಲ್ಲಿಸಬೇಕೆಂದು ಪಿಲಾತನನ್ನು ಕೇಳಿಕೊಂಡರು. 29ಆತನ ವಿಷಯವಾಗಿ ಶಾಸ್ತ್ರದಲ್ಲಿ ಬರೆದಿರುವುದೆಲ್ಲಾ ನೆರವೇರಿಸಿದ ಮೇಲೆ, ಆತನನ್ನು ಮರದ ಕಂಬದಿಂದ ಇಳಿಸಿ ಸಮಾಧಿಯಲ್ಲಿಟ್ಟರು. 30“ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು. 31ಮತ್ತು ಆತನು ಗಲಿಲಾಯದಿಂದ ಯೆರೂಸಲೇಮಿಗೆ ತನ್ನ ಜೊತೆಯಲ್ಲಿ ಬಂದವರಿಗೆ ಅನೇಕ ದಿನಗಳವರೆಗೂ ಕಾಣಿಸಿಕೊಂಡನು; ಈಗ ಅವರು ಜನರಿಗೆ ಆತನ ಸಾಕ್ಷಿಗಳಾಗಿದ್ದಾರೆ. 32“ದೇವರು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನವನ್ನು ನಮ್ಮ ಮಕ್ಕಳಿಗೋಸ್ಕರ ನೆರವೇರಿಸಿದ್ದಾನೆಂಬ ಶುಭಸಮಾಚಾರವನ್ನು ನಾವು ನಿಮಗೆ ಸಾರುವವರಾಗಿದ್ದೇವೆ. ಆತನು ಯೇಸುವನ್ನು ಮರಣದಿಂದ ಎಬ್ಬಿಸಿದ್ದರಲ್ಲಿ;

ಮೊದಲನೆಯ ತಾಸು: ಸುವಾರ್ತೆ

ಮತ್ತಾ 3:1–11

1ಆ ದಿನಗಳಲ್ಲಿ ಸ್ನಾನಿಕನಾದ ಯೋಹಾನನೆಂಬುವವನು ಯೂದಾಯದ ಅಡವಿಯಲ್ಲಿ ಬೋಧನೆ ಮಾಡುತ್ತಾ, 2ಹೇಳಿದ್ದೇನೆಂದರೆ, “ಪಶ್ಚಾತ್ತಾಪಪಡಿರಿ; ಏಕೆಂದರೆ ಪರಲೋಕ ರಾಜ್ಯವು ಸಮೀಪಿಸುತ್ತಿದೆ.” 3“‘ಕರ್ತನ ದಾರಿಯನ್ನು ಸಿದ್ಧಮಾಡಿರಿ; ಆತನ ಮಾರ್ಗವನ್ನು ಸರಾಗ ಮಾಡಿರಿ’ ಎಂದು ಅಡವಿಯಲ್ಲಿ ಕೂಗುವವನ ಶಬ್ದವಿದೆ” ಎಂಬುದಾಗಿ ಪ್ರವಾದಿಯಾದ ಯೆಶಾಯನಿಂದ ಸೂಚಿತನಾದವನು ಇವನೇ. 4ಯೋಹಾನನ ಉಡುಪು ಒಂಟೆಯ ಕೂದಲಿನಿಂದ ಮಾಡಿತ್ತು, ಅವನು ಸೊಂಟಕ್ಕೆ ಒಂದು ಚರ್ಮದ ನಡುಕಟ್ಟನ್ನು ಕಟ್ಟಿಕೊಳ್ಳುತ್ತಿದ್ದನು. ಮಿಡತೆ ಮತ್ತು ಕಾಡುಜೇನು ಅವನ ಆಹಾರವಾಗಿತ್ತು. 5ಆಗ ಯೆರೂಸಲೇಮಿನವರು, ಎಲ್ಲಾ ಯೂದಾಯದವರೂ ಮತ್ತು ಯೊರ್ದನ್ ಹೊಳೆಯ ಸುತ್ತಲಿರುವ ಎಲ್ಲಾ ಸೀಮೆಯ ಜನರು ಅವನ ಬಳಿಗೆ ಹೊರಟು ಬಂದು, 6ತಮ್ಮ ಪಾಪಗಳನ್ನು ಅರಿಕೆಮಾಡಿಕೊಂಡು ಯೊರ್ದನ್ ಹೊಳೆಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು. 7ಆದರೆ ಯೋಹಾನನು ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತನ್ನಿಂದ ದೀಕ್ಷಾಸ್ನಾನಮಾಡಿಸಿಕೊಳ್ಳುವುದಕ್ಕೆ ಬರುವುದನ್ನು ಕಂಡು ಅವರಿಗೆ, “ಎಲೈ ಸರ್ಪಸಂತತಿಯವರೇ, ಮುಂದೆ ಬರಲಿರುವ ದೈವಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮ್ಮನ್ನು ಎಚ್ಚರಿಸಿದವರಾರು? 8ನೀವು ಮಾನಸಾಂತರ ಹೊಂದಿರುವಿರಿ ಎಂಬುದಕ್ಕೆ ಯೋಗ್ಯವಾದ ಫಲವನ್ನು ತೋರಿಸಿರಿ. 9ಅಬ್ರಹಾಮನು ನಮ್ಮ ತಂದೆ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿರಿ. ದೇವರು ಅಬ್ರಹಾಮನಿಗಾಗಿ ಈ ಕಲ್ಲುಗಳಿಂದಲೂ ಮಕ್ಕಳನ್ನು ಸೃಷ್ಟಿಮಾಡಬಲ್ಲನೆಂದು ನಿಮಗೆ ಹೇಳುತ್ತೇನೆ. 10ಈಗಾಗಲೇ ಮರಗಳ ಬೇರಿಗೆ ಕೊಡಲಿ ಹಾಕಿದೆ; ಆದ್ದರಿಂದ ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು. 11ನಾನಂತೂ ಮಾನಸಾಂತರಕ್ಕಾಗಿ ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನನ್ನ ನಂತರ ಬರುವವನು ನನಗಿಂತ ಶಕ್ತನು; ಆತನ ಪಾದರಕ್ಷೆಗಳನ್ನು ಹೊರಲಿಕ್ಕೂ ನಾನು ಯೋಗ್ಯನಲ್ಲ; ಆತನು ಪವಿತ್ರಾತ್ಮನಲ್ಲಿಯೂ ಬೆಂಕಿಯಲ್ಲಿಯೂ ನಿಮಗೆ ದೀಕ್ಷಾಸ್ನಾನಮಾಡಿಸುವನು.

ಮೂರನೆಯ ತಾಸು: ಪ್ರವಾದನೆ

ಯೆಶಾ 1:16–20

16ನಿಮ್ಮನ್ನು ತೊಳೆದು ಶುದ್ಧರಾಗಿ, ನನ್ನ ಕಣ್ಣೆದುರಿನಿಂದ ನಿಮ್ಮ ದುಷ್ಕೃತ್ಯಗಳನ್ನು ತೊಲಗಿಸಿರಿ, ದುರಾಚಾರವನ್ನು ಬಿಡಿ, 17ಸದಾಚಾರವನ್ನು ಅಭ್ಯಾಸ ಮಾಡಿಕೊಳ್ಳಲು ಕಲಿಯಿರಿ, ನ್ಯಾಯವನ್ನು ಅನುಸರಿಸಿ ನಡೆಯಿರಿ. ಹಿಂಸೆಗೆ ಒಳಗಾದವನಿಗೆ ಸಹಾಯಮಾಡಿರಿ. ಅನಾಥನಿಗೆ ನ್ಯಾಯತೀರಿಸಿರಿ. ವಿಧವೆಯ ಪಕ್ಷವಾಗಿ ವಾದಿಸಿರಿ.” 18“ಬನ್ನಿರಿ ವಾದಿಸುವ” ಎಂದು ಯೆಹೋವನು ಅನ್ನುತ್ತಾನೆ. “ನಿಮ್ಮ ಪಾಪಗಳು ಕಡುಕೆಂಪಾಗಿದ್ದರೂ, ಹಿಮದ ಹಾಗೆ ಬಿಳುಪಾಗುವವು. ಕಿರಮಂಜಿ ಬಣ್ಣವಾಗಿದ್ದರೂ ಉಣ್ಣೆಯಂತೆ ಬೆಳ್ಳಗಾಗುವವು. 19ನೀವು ಒಪ್ಪಿ ವಿಧೇಯರಾದರೆ ದೇಶದ ಮೇಲನ್ನು ಅನುಭವಿಸುವಿರಿ. 20ಒಪ್ಪದೆ ತಿರುಗಿ ಬಿದ್ದರೆ, ಕತ್ತಿಯ ಬಾಯಿಗೆ ತುತ್ತಾಗುವಿರಿ” ಈ ಮಾತನ್ನು ಯೆಹೋವನೇ ನುಡಿದಿದ್ದಾನೆ.

ಮೂರನೆಯ ತಾಸು: ಪತ್ರಿಕೆ

ಅ. ಕೃ 19:1–8

1ಅಪೊಲ್ಲೋಸನು ಕೊರಿಂಥದಲ್ಲಿದ್ದಾಗ ಪೌಲನು ಮಲೆನಾಡಿನಲ್ಲಿ ಸಂಚಾರಮಾಡಿ ಎಫೆಸಕ್ಕೆ ಬಂದು ಕೆಲವು ಮಂದಿ ಶಿಷ್ಯರನ್ನು ಕಂಡು; 2“ನೀವು ನಂಬಿದಾಗ ಪವಿತ್ರಾತ್ಮವರವನ್ನು ಹೊಂದಿದಿರೋ?” ಎಂದು ಅವರನ್ನು ಕೇಳಲು ಅವರು ಅವನಿಗೆ; “ಇಲ್ಲ, ಪವಿತ್ರಾತ್ಮವರವು ಉಂಟೆಂಬುದನ್ನೇ ನಾವು ಕೇಳಿಲ್ಲ” ಅಂದರು. 3ಅವನು; “ನೀವು ಏನನ್ನು ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡಿರಿ” ಎಂದು ಕೇಳಿದ್ದಕ್ಕೆ ಅವರು; “ಯೋಹಾನನ ಬೋಧನೆಯನ್ನು ನಂಬಿ ದೀಕ್ಷಾಸ್ನಾನಮಾಡಿಸಿಕೊಂಡೆವು” ಅಂದರು. 4ಅದಕ್ಕೆ ಪೌಲನು; “ಯೋಹಾನನು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡವರಿಗೆ ದೀಕ್ಷಾಸ್ನಾನ ಮಾಡಿಸಿ ತನ್ನ ಹಿಂದೆ ಬರುವ ಯೇಸುವಿನಲ್ಲಿ ನಂಬಿಕೆಯಿಡಬೇಕೆಂಬುದಾಗಿ ಜನರಿಗೆ ಹೇಳಿದನು” ಎಂದು ಹೇಳಲು, 5ಅವರು ಆ ಮಾತನ್ನು ಕೇಳಿ ಕರ್ತನಾದ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡರು. 6ಪೌಲನು ಅವರ ಮೇಲೆ ಕೈಗಳನ್ನಿಡಲು ಪವಿತ್ರಾತ್ಮನು ಅವರ ಮೇಲೆ ಇಳಿದುಬಂದನು; ಅವರು ನಾನಾ ಭಾಷೆಗಳನ್ನಾಡಿದರು, ಪ್ರವಾದಿಸಿದರು. 7ಅಲ್ಲಿ ಸುಮಾರು ಹನ್ನೆರಡು ಮಂದಿ ಗಂಡಸರಿದ್ದರು. 8ಆ ಪಟ್ಟಣದಲ್ಲಿ ಪೌಲನು ಸಭಾಮಂದಿರದೊಳಗೆ ಹೋಗಿ, ಮೂರು ತಿಂಗಳು ಅಲ್ಲೇ ದೇವರ ರಾಜ್ಯದ ವಿಷಯಗಳನ್ನು ಕುರಿತು, ವಾದಿಸುತ್ತಾ ಜನರನ್ನು ಒಡಂಬಡಿಸುತ್ತಾ ಧೈರ್ಯದಿಂದ ಮಾತನಾಡಿದನು.

ಮೂರನೆಯ ತಾಸು: ಸುವಾರ್ತೆ

ಮಾರ್ಕ 1:1–8

1ದೇವಕುಮಾರನಾದ ಯೇಸು ಕ್ರಿಸ್ತನ ಕುರಿತಾದ ಸುವಾರ್ತೆಯ ಪ್ರಾರಂಭವು. 2ಪ್ರವಾದಿಯಾದ ಯೆಶಾಯನ ಗ್ರಂಥದಲ್ಲಿ ಬರೆದಿರುವ ಪ್ರಕಾರ, “ಇಗೋ, ನಾನು ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ; ಅವನು ನಿನ್ನ ದಾರಿಯನ್ನು ಸಿದ್ಧಮಾಡುವನು.” 3“‘ಕರ್ತನ ದಾರಿಯನ್ನು ಸಿದ್ಧಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ’ ಎಂದು ಅಡವಿಯಲ್ಲಿ ಕೂಗುವವನ ಶಬ್ದವದೆ” ಎಂಬುದೇ. 4ಯೋಹಾನನು ಬಂದು ಜನರಿಗೆ, ನೀವು ಪಾಪಗಳ ಕ್ಷಮಾಪಣೆಗಾಗಿ ಪಶ್ಚಾತ್ತಾಪದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಉಪದೇಶಿಸುತ್ತಾ ಅಡವಿಯಲ್ಲಿ ದೀಕ್ಷಾಸ್ನಾನಮಾಡಿಸುತ್ತಾ ಇದ್ದನು. 5ಆಗ ಯೂದಾಯ ಸೀಮೆಯೆಲ್ಲವೂ ಯೆರೂಸಲೇಮಿನವರೆಲ್ಲರೂ ಅವನ ಬಳಿಗೆ ಹೊರಟುಹೋಗಿ ತಮ್ಮ ತಮ್ಮ ಪಾಪಗಳನ್ನು ಒಪ್ಪಿಕೊಂಡು ಯೊರ್ದನ್ ಹೊಳೆಯಲ್ಲಿ ಅವನಿಂದ ದೀಕ್ಷಾಸ್ನಾನಮಾಡಿಸಿಕೊಳ್ಳುತ್ತಿದ್ದರು. 6ಈ ಯೋಹಾನನು ಒಂಟೆಯ ರೋಮದ ಹೊದಿಕೆಯನ್ನು ಧರಿಸಿಕೊಂಡು ಸೊಂಟಕ್ಕೆ ಚರ್ಮದ ನಡುಕಟ್ಟನ್ನು ಕಟ್ಟಿಕೊಂಡಿದ್ದನು; ಅವನು ಮಿಡತೆಯನ್ನೂ ಕಾಡುಜೇನನ್ನೂ ಆಹಾರವನ್ನಾಗಿ ಸೇವಿಸುತ್ತಿದ್ದನು. 7ಅವನು “ನನಗಿಂತ ಶಕ್ತನು ನನ್ನ ಹಿಂದೆ ಬರುತ್ತಾನೆ; ಆತನ ಕೆರಗಳ ಪಟ್ಟಿಗಳನ್ನು ಬಗ್ಗಿ ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ. 8ನಾನು ನಿಮಗೆ ನೀರಿನಿಂದ ದೀಕ್ಷಾಸ್ನಾನ ಕೊಡುತ್ತಿದ್ದೇನೆ; ಆತನಾದರೋ ನಿಮಗೆ ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುತ್ತಾನೆ” ಎಂದು ಸಾರಿ ಹೇಳಿದನು.

ಆರನೆಯ ತಾಸು: ಪ್ರವಾದನೆ

ಯೆಶಾ 12:3–6

3ಮತ್ತು ರಕ್ಷಣೆಯೆಂಬ ಬಾವಿಗಳಿಂದ ಉಲ್ಲಾಸದೊಡನೆ ನೀವು ನೀರನ್ನು ಸೇದುವಿರಿ. 4ಆ ದಿನದಲ್ಲಿ ನೀವು ಹೇಳುವುದೇನೆಂದರೆ, “ಯೆಹೋವನಿಗೆ ಕೃತಜ್ಞತಾ ಸ್ತುತಿಮಾಡಿರಿ, ಆತನ ನಾಮದ ಮಹತ್ವವನ್ನು ವರ್ಣಿಸಿರಿ, ಜನಾಂಗಗಳಲ್ಲಿ ಆತನ ಕೃತ್ಯಗಳನ್ನು ಪ್ರಸಿದ್ಧಿಪಡಿಸಿರಿ, ಆತನ ನಾಮವು ಉನ್ನತೋನ್ನತ ಎಂದು ಜ್ಞಾಪಕಪಡಿಸಿರಿ. 5ಯೆಹೋವನನ್ನು ಗಾನದಿಂದ ಸ್ತುತಿಸಿರಿ; ಆತನು ಮಹಿಮೆಯ ಕಾರ್ಯಗಳನ್ನು ಮಾಡಿದ್ದಾನೆ; ಇದು ಭೂಮಂಡಲದಲ್ಲೆಲ್ಲಾ ತಿಳಿದಿರಲಿ. 6ಚೀಯೋನಿನ ನಿವಾಸಿಗಳೇ, ಉತ್ಸಾಹ ಧ್ವನಿಮಾಡಿರಿ; ಜಯಘೋಷಮಾಡಿರಿ. ಇಸ್ರಾಯೇಲರ ಪರಿಶುದ್ಧನು ನಿಮ್ಮ ಮಧ್ಯದಲ್ಲಿ ಮಹತ್ವವುಳ್ಳವನಾಗಿದ್ದಾನೆ” ಎಂಬುದೇ.

ಆರನೆಯ ತಾಸು: ಪತ್ರಿಕೆ

ರೋಮಾ 6:3–11

3ಕ್ರಿಸ್ತ ಯೇಸುವಿನೊಂದಿಗೆ ಸೇರುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡವರಾದ ನಾವೆಲ್ಲರೂ ಆತನ ಮರಣದಲ್ಲಿ ಪಾಲುಗಾರರಾಗುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡೆವೆಂದು ನಿಮಗೆ ತಿಳಿಯದೋ? 4ಹೀಗಿರಲಾಗಿ ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗಿ ಆತನೊಂದಿಗೆ ಹೂಣಲ್ಪಟ್ಟೆವು. ಆದ್ದರಿಂದ ಕ್ರಿಸ್ತನು ಸತ್ತು ತಂದೆಯ ಮಹಿಮೆಯಿಂದ ಜೀವಿತನಾಗಿ ಎಬ್ಬಿಸಲ್ಪಟ್ಟಂತೆಯೇ ನಾವು ಕೂಡ ಜೀವದಿಂದೆದ್ದು ನೂತನ ಜೀವದಲ್ಲಿ ನಡೆದುಕೊಳ್ಳಬೇಕು. 5ಹೇಗೆಂದರೆ ನಾವು ಆತನ ಮರಣಕ್ಕೆ ಸದೃಶ್ಯವಾದ ಮರಣವನ್ನು ಹೊಂದಿ ಆತನಲ್ಲಿ ಐಕ್ಯವಾಗಿದ್ದರೆ ಆತನ ಪುನರುತ್ಥಾನಕ್ಕೆ ಸದೃಶವಾದ ಪುನರುತ್ಥಾನವನ್ನೂ ಹೊಂದಿ ಆತನಲ್ಲಿ ಐಕ್ಯವಾಗುವೆವು. 6ನಮಗೆ ತಿಳಿದಿರುವಂತೆ, ನಮ್ಮ ಪಾಪಾಧೀನಸ್ವಭಾವವು ನಾಶವಾಗಿ, ನಾವು ಇನ್ನೂ ಪಾಪದ ವಶದಲ್ಲಿರದಂತೆ ನಮ್ಮ ಪೂರ್ವಸ್ವಭಾವವು ಕ್ರಿಸ್ತನ ಕೂಡ ಶಿಲುಬೆಗೆ ಹಾಕಲ್ಪಟ್ಟಿದೆ. 7ಸತ್ತವನು ಪಾಪದ ವಶದಿಂದ ಬಿಡುಗಡೆ ಹೊಂದಿದ್ದಾನೆ. 8ಇದಲ್ಲದೆ ನಾವು ಕ್ರಿಸ್ತನೊಡನೆ ಸತ್ತ ಪಕ್ಷದಲ್ಲಿ ಆತನೊಡನೆ ಜೀವಿಸುವೆವೆಂದು ನಂಬುತ್ತೇವೆ. 9ನಮಗೆ ತಿಳಿದಿರುವಂತೆ, ಕ್ರಿಸ್ತನು ಸತ್ತ ಮೇಲೆ ಜೀವಿತನಾಗಿ ಎದ್ದು ಬಂದದ್ದರಿಂದ ಆತನು ಇನ್ನು ಮುಂದೆ ಸಾಯತಕ್ಕವನಲ್ಲ, ಮರಣವು ಆತನ ಮೇಲೆ ಆಳ್ವಿಕೆ ನಡಿಸುವುದಿಲ್ಲ. 10ಆತನು ಸತ್ತದ್ದು ಒಂದೇ ಸಾರಿ ಅದು ಪಾಪದ ಪಾಲಿಗೆ; ಆತನು ಜೀವಿಸುವುದು ದೇವರಿಗಾಗಿಯೇ, 11ಅದೇ ಪ್ರಕಾರ ನೀವು ಸಹ ನಿಮ್ಮನ್ನು ಕ್ರಿಸ್ತ ಯೇಸುವಿನ ಐಕ್ಯದಿಂದ ಪಾಪದ ಪಾಲಿಗೆ ಸತ್ತವರೂ, ದೇವರಿಗಾಗಿ ಜೀವಿಸುವವರೂ ಎಂದು ಎಣಿಸಿಕೊಳ್ಳಿರಿ.

ಆರನೆಯ ತಾಸು: ಸುವಾರ್ತೆ

ಮಾರ್ಕ 1:9–15

9ಆ ದಿನಗಳಲ್ಲಿ ಯೇಸು ಗಲಿಲಾಯ ಸೀಮೆಗೆ ಸೇರಿದ ನಜರೇತೆಂಬ ಊರಿನಿಂದ ಬಂದು ಯೊರ್ದನ್ ಹೊಳೆಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡನು. 10ಯೇಸುವು ನೀರಿನೊಳಗಿನಿಂದ ಮೇಲಕ್ಕೆ ಬಂದ ಕೂಡಲೇ ಪರಲೋಕವು ತೆರೆಯಲ್ಪಟ್ಟು ದೇವರಾತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿಯುವುದನ್ನು ಕಂಡನು. 11ಆಗ “ನೀನು ಪ್ರಿಯನಾಗಿರುವ ನನ್ನ ಮಗನು, ನಾನು ನಿನ್ನನ್ನು ಬಹಳವಾಗಿ ಮೆಚ್ಚಿದ್ದೇನೆ” ಎಂಬ ದೈವ ವಾಣಿ ಪರಲೋಕದಿಂದ ಕೇಳಿಸಿತು. 12ಕೂಡಲೇ ಪವಿತ್ರಾತ್ಮ ಪ್ರೇರಿತನಾಗಿ ಯೇಸು ಅಡವಿಗೆ ಹೋದನು. 13ಆತನು ನಲವತ್ತು ದಿನ ಅಡವಿಯಲ್ಲಿ ಕಾಡುಮೃಗಗಳೊಂದಿಗೆ ಇದ್ದು ಸೈತಾನನಿಂದ ಶೋಧಿಸಲ್ಪಟ್ಟನು ಮತ್ತು ದೇವದೂತರು ಯೇಸುವಿಗೆ ಉಪಚಾರ ಮಾಡಿದರು. 14ಯೋಹಾನನು ಬಂಧಿತನಾದ ತರುವಾಯ ಯೇಸು ಗಲಿಲಾಯಕ್ಕೆ ಬಂದು ದೇವರ ಸುವಾರ್ತೆಯನ್ನು ಹೀಗೆ ಸಾರಿ ಹೇಳಿದನು, 15“ಕಾಲವು ಪರಿಪೂರ್ಣವಾಯಿತು, ದೇವರ ರಾಜ್ಯವು ಸಮೀಪಿಸಿತು; ಪಶ್ಚಾತ್ತಾಪಪಟ್ಟು ಸುವಾರ್ತೆಯನ್ನು ನಂಬಿರಿ.”

9ನೇ ತಾಸು: ಪ್ರವಾದನೆ

ಯೆಶಾ 49:8–15

8ಇದೇ ಯೆಹೋವನ ನುಡಿ, “ಈ ಪ್ರಸನ್ನತೆಯ ಕಾಲದಲ್ಲಿ ನಿನಗೆ ಸದುತ್ತರವನ್ನು ದಯಪಾಲಿಸಿದ್ದೇನೆ. ಈ ರಕ್ಷಣೆಯ ದಿನದಲ್ಲಿ ನಿನಗೆ ಸಹಾಯಮಾಡಿದ್ದೇನೆ. ನಾನು ನಿನ್ನನ್ನು ಕಾಪಾಡುತ್ತಾ ನನ್ನ ಜನರಿಗೆ ಒಡಂಬಡಿಕೆಯ ಆಧಾರವನ್ನಾಗಿ ನೇಮಿಸಿದ್ದೇನೆ. 9ನೀನು ಬಂದಿಸಲ್ಪಟ್ಟವರಿಗೆ ‘ಹೊರಟುಹೋಗಿರಿ’ ಎಂದು, ಕತ್ತಲಲ್ಲಿರುವವರಿಗೆ, ‘ಬೆಳಕಿಗೆ ಹೊರಡಿರಿ’ ಎಂದು ಅಪ್ಪಣೆಕೊಟ್ಟು ಹಾಳಾಗಿದ್ದ ಸ್ವತ್ತುಗಳನ್ನು ಅವರಿಗೆ ಹಂಚಿ ದೇಶವನ್ನು ಉನ್ನತ ಸ್ಥಿತಿಗೆ ತರುವೆನು. ನನ್ನ ಜನವೆಂಬ ಹಿಂಡು ದಾರಿಗಳಲ್ಲಿ ಮೇಯುವುದು. ಎಲ್ಲಾ ಬೋಳುಬೆಟ್ಟಗಳೂ ಕೂಡ ಹುಲ್ಲುಗಾವಲಾಗುವವು. 10ಅವರಿಗೆ ಹಸಿವೆ ಬಾಯಾರಿಕೆಗಳು ಆಗುವುದಿಲ್ಲ, ಝಳವೂ ಬಿಸಿಲೂ ಬಡಿಯುವುದಿಲ್ಲ. ಅವರನ್ನು ಕರುಣಿಸುವಾತನು ದಾರಿತೋರಿಸುತ್ತಾ ನೀರು ಸಿಕ್ಕುವ ಒರತೆಗಳ ಬಳಿಯಲ್ಲಿ ನಡೆಸುವನು. 11ನನ್ನ ಬೆಟ್ಟಗಳನ್ನೆಲ್ಲಾ ಸಮದಾರಿಯನ್ನಾಗಿ ಮಾಡಿ ನನ್ನ ರಾಜಮಾರ್ಗಗಳನ್ನು ಎತ್ತರಿಸುವೆನು. 12ಇಗೋ, ಇವರು ದೂರದಿಂದ ಬರುತ್ತಾರೆ. ಇಗೋ, ಇವರು ಬಡಗಲಿಂದ ಮತ್ತು ಪಡವಲಿಂದ, ಇವರು ಸೀನೀಮ್ ದೇಶದಿಂದ ಬರುತ್ತಿದ್ದಾರೆ. 13ಆಕಾಶವೇ, ಹರ್ಷಧ್ವನಿಗೈ! ಭೂಮಿಯೇ, ಉಲ್ಲಾಸಗೊಳ್ಳು! ಪರ್ವತಗಳೇ, ಹರ್ಷಧ್ವನಿಗೈಯಿರಿ! ಏಕೆಂದರೆ ಯೆಹೋವನು ತನ್ನ ಪ್ರಜೆಯನ್ನು ಸಂತೈಸಿ, ದಿಕ್ಕಿಲ್ಲದ ತನ್ನ ಜನರನ್ನು ಕರುಣಿಸುವನು.” 14ಚೀಯೋನ್ ನಗರಿಯಾದರೋ, “ಯೆಹೋವನು ನನ್ನನ್ನು ಕೈಬಿಟ್ಟಿದ್ದಾನೆ, ಕರ್ತನು ನನ್ನನ್ನು ಮರೆತಿದ್ದಾನೆ” ಎಂದುಕೊಂಡಳು. 15ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತರು ಮರೆತಾಳು, ಆದರೆ ನಾನು ನಿನ್ನನ್ನು ಮರೆಯುವುದಿಲ್ಲ.

9ನೇ ತಾಸು: ಪತ್ರಿಕೆ

ತೀತ 2:11–14; 3:4–7

11ಏಕೆಂದರೆ ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನುಂಟುಮಾಡುವ ದೇವರ ಕೃಪೆಯು ಪ್ರತ್ಯಕ್ಷವಾಯಿತು; 12ಅದು ಭಕ್ತಿಹೀನತೆಯನ್ನೂ, ಲೋಕದ ಆಸೆಗಳನ್ನೂ ತ್ಯಜಿಸಿ ಭಾಗ್ಯಕರವಾದ ನಿರೀಕ್ಷೆಯನ್ನು, 13ಅಂದರೆ ಮಹಾ ದೇವರ ಮತ್ತು ನಮ್ಮ ರಕ್ಷಕನಾದ ಯೇಸುಕ್ರಿಸ್ತನ ಮಹಿಮೆಪೂರ್ಣವಾದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಇಹಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ, ನೀತಿವಂತರಾಗಿಯೂ, ಭಕ್ತಿಯುಳ್ಳವರಾಗಿಯೂ ಜೀವಿಸಬೇಕೆಂದು ನಮಗೆ ಬೋಧಿಸುತ್ತದೆ. 14ಆತನು ನಮ್ಮನ್ನು ಸಕಲ ಅಧರ್ಮಗಳಿಂದ ಬಿಡುಗಡೆಮಾಡುವುದಕ್ಕೂ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಕೀಯಜನರನ್ನು ತನಗಾಗಿ ಬೇರ್ಪಡಿಸಿ ಶುದ್ಧೀಕರಣ ಮಾಡುವುದಕ್ಕಾಗಿಯೂ ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು. 3:4ಆದರೆ ನಮ್ಮ ರಕ್ಷಕನಾದ ದೇವರ ದಯೆಯೂ, ಪ್ರೀತಿಯೂ, ಮನುಷ್ಯರಿಗೆ ಪ್ರತ್ಯಕ್ಷವಾದಾಗ, 5ನಾವು ಮಾಡಿದ ಪುಣ್ಯಕಾರ್ಯಗಳ ನಿಮಿತ್ತದಿಂದಲ್ಲ ಪುನರ್ಜನ್ಮವನ್ನು ಸೂಚಿಸುವ ದೀಕ್ಷಾಸ್ನಾನದ ಮೂಲಕವಾಗಿಯೂ, ಪವಿತ್ರಾತ್ಮನ ನವೀಕರಣದ ಮೂಲಕವಾಗಿಯೂ ಆತನು ತನ್ನ ಕರುಣೆಯಿಂದಲೇ ನಮ್ಮನ್ನು ರಕ್ಷಿಸಿದನು. 6ನಾವು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಕೃಪೆಯಿಂದ ನೀತಿವಂತರೆಂದು ನಿರ್ಣಯಿಸಲ್ಪಟ್ಟು ನಿತ್ಯಜೀವದ ನಿರೀಕ್ಷೆಗೆ ಬಾಧ್ಯರಾಗುವಂತೆ ದೇವರು ಆತನ ಮೂಲಕ ಪವಿತ್ರಾತ್ಮನನ್ನು ನಮ್ಮ ಮೇಲೆ ಹೇರಳವಾಗಿ ಸುರಿಸಿದನು.

9ನೇ ತಾಸು: ಸುವಾರ್ತೆ

ಮತ್ತಾ 3:13–17

13ಆ ಕಾಲದಲ್ಲಿ ಯೇಸು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಗಲಿಲಾಯದಿಂದ ಯೊರ್ದನ್ ಹೊಳೆಯ ಬಳಿ ಬಂದನು. 14ಆತನಿಗೆ ಯೋಹಾನನು ತಡೆಯುತ್ತಾ, “ನಾನೇ ನಿನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕಾಗಿತ್ತು, ಆದರೆ ನೀನು ನನ್ನ ಬಳಿಗೆ ಬರುವುದೇಕೆ?” ಎಂದು ಹೇಳಿದಕ್ಕೆ, 15ಯೇಸು ಪ್ರತ್ಯುತ್ತರವಾಗಿ ಅವನಿಗೆ, “ಸದ್ಯಕ್ಕೆ ಒಪ್ಪಿಕೋ; ಹೀಗೆ ನಾವು ಎಲ್ಲಾ ನೀತಿಯನ್ನು ನೆರವೇರಿಸತಕ್ಕದ್ದಾಗಿದೆ” ಎಂದು ಹೇಳಿದಾಗ ಯೋಹಾನನು ಒಪ್ಪಿಕೊಂಡನು. 16ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡ ನೀರಿನಿಂದ ಮೇಲಕ್ಕೆ ಬಂದ ಕೂಡಲೇ ಇಗೋ, ಆತನಿಗಾಗಿ ಪರಲೋಕವು ತೆರೆಯಿತು; ಮತ್ತು ದೇವರ ಆತ್ಮವು ಪಾರಿವಾಳದ ಹಾಗೆ ತನ್ನ ಮೇಲೆ ಇಳಿದು ಬರುವುದನ್ನು ಕಂಡನು. 17ಆಗ “ಈತನು ನನ್ನ ಪ್ರಿಯ ಮಗನು, ಈತನನ್ನು ನಾನು ಬಹಳವಾಗಿ ಮೆಚ್ಚಿದ್ದೇನೆ” ಎಂಬ ವಾಣಿ ಪರಲೋಕದಿಂದ ಕೇಳಿಬಂದಿತು.

ಸಂಧ್ಯಾ ಪ್ರಾರ್ಥನೆ: ವಾಚನ

ಆದಿ 1:1–13

1ಆದಿಯಲ್ಲಿ ದೇವರು ಆಕಾಶವನ್ನು, ಭೂಮಿಯನ್ನು ಸೃಷ್ಟಿಮಾಡಿದನು. 2ಭೂಮಿಯು ಕ್ರಮವಿಲ್ಲದೆಯೂ ಬರಿದಾಗಿಯೂ ಇತ್ತು. ಆದಿಸಾಗರದ ಮೇಲೆ ಕತ್ತಲಿತ್ತು. ದೇವರಾತ್ಮವು ಸಾಗರದ ಮೇಲೆ ಚಲಿಸುತ್ತಿತ್ತು. 3ಅನಂತರ ದೇವರು “ಬೆಳಕಾಗಲಿ” ಎಂದು ಆಜ್ಞಾಪಿಸಲು ಬೆಳಕಾಯಿತು. 4ದೇವರು ಆ ಬೆಳಕನ್ನು ಒಳ್ಳೆಯದೆಂದು ಕಂಡನು. 5ದೇವರು ಬೆಳಕನ್ನೂ ಕತ್ತಲನ್ನೂ ಬೇರ್ಪಡಿಸಿ ಬೆಳಕಿಗೆ “ಹಗಲು” ಎಂದೂ, ಕತ್ತಲೆಗೆ “ಇರುಳು” ಎಂದೂ ಹೆಸರಿಟ್ಟನು. ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಮೊದಲನೆಯ ದಿನವಾಯಿತು. 6ಬಳಿಕ ದೇವರು “ಜಲರಾಶಿಗಳ ನಡುವೆ ವಿಸ್ತಾರವಾದ ಗುಮ್ಮಟವು ಉಂಟಾಗಲಿ ಅದು ಕೆಳಗಿನ ನೀರುಗಳನ್ನೂ ಮೇಲಿನ ನೀರುಗಳನ್ನೂ ಬೇರೆ ಬೇರೆ ಮಾಡಲಿ” ಅಂದನು. 7ದೇವರು ವಿಸ್ತಾರವಾದ ಗುಮ್ಮಟವನ್ನು ಮಾಡಿ ಅದರ ಕೆಳಗಿದ್ದ ನೀರುಗಳನ್ನು ಅದರ ಮೇಲಿದ್ದ ನೀರುಗಳಿಂದ ವಿಂಗಡಿಸಿದನು. ಅದು ಹಾಗೆಯೇ ಆಯಿತು. 8ದೇವರು ಆ ಗುಮ್ಮಟಕ್ಕೆ “ಆಕಾಶ” ಎಂದು ಹೆಸರಿಟ್ಟನು. ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಎರಡನೆಯ ದಿನವಾಯಿತು. 9ಅನಂತರ ದೇವರು, “ಆಕಾಶದ ಕೆಳಗಿರುವ ನೀರೆಲ್ಲಾ ಒಂದೇ ಸ್ಥಳದಲ್ಲಿ ಒಟ್ಟಿಗೆ ಕೂಡಿಕೊಳ್ಳಲಿ ಮತ್ತು ಒಣನೆಲವು ಕಾಣಿಸಲಿ” ಅಂದನು. ಹಾಗೆಯೇ ಆಯಿತು. 10ದೇವರು ಒಣನೆಲಕ್ಕೆ “ಭೂಮಿ” ಎಂದೂ ಜಲರಾಶಿಗೆ “ಸಮುದ್ರ” ಎಂದೂ ಹೆಸರಿಟ್ಟನು. ಆತನು ಅದನ್ನು ಒಳ್ಳೆಯದೆಂದು ನೋಡಿದನು. 11ತರುವಾಯ ದೇವರು, “ಭೂಮಿಯು ಹುಲ್ಲನ್ನು, ಸಸ್ಯಗಳನ್ನೂ, ಬೀಜಬಿಡುವ ಕಾಯಿಪಲ್ಯದ ಗಿಡಗಳನ್ನೂ ಬೆಳೆಯಿಸಲಿ ಮತ್ತು ಬೀಜವುಳ್ಳ ಹಣ್ಣಿನ ಮರಗಳನ್ನು ಅವುಗಳ ಜಾತಿಗನುಸಾರವಾಗಿ ಫಲಿಸಲಿ” ಎಂದು ಹೇಳಿದನು, ಹಾಗೆಯೇ ಆಯಿತು. 12ಭೂಮಿಯಲ್ಲಿ ಸಸ್ಯಗಳು ಬೆಳೆದವು. ತಮ್ಮ ತಮ್ಮ ಜಾತಿಯ ಪ್ರಕಾರ ಬೀಜಬಿಡುವ ಕಾಯಿಪಲ್ಯದ ಗಿಡಗಳು ಉಂಟಾದವು. ತಮ್ಮ ತಮ್ಮ ಜಾತಿಗನುಸಾರವಾಗಿ ಬೀಜವುಳ್ಳ ಹಣ್ಣಿನ ಮರಗಳು ಉತ್ಪತ್ತಿಯಾದವು. ದೇವರು ಅದನ್ನು ಒಳ್ಳೆಯದೆಂದು ಕಂಡನು 13ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಮೂರನೆಯ ದಿನವಾಯಿತು.

ಸಂಧ್ಯಾ ಪ್ರಾರ್ಥನೆ: ವಾಚನ

ವಿಮೋ 14:15–18, 21–23, 27–29

15ಆಗ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, “ನೀನು ನನಗೆ ಮೊರೆಯಿಡುವುದೇನು? ಮುಂದಕ್ಕೆ ಹೊರಡಬೇಕೆಂದು ಇಸ್ರಾಯೇಲರಿಗೆ ಹೇಳು. 16ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಕೈಚಾಚಿ ಅದನ್ನು ವಿಭಾಗಿಸು, ಆಗ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ನಡೆದುಕೊಂಡು ಹೋಗುವರು. 17ನಾನಂತೂ ಐಗುಪ್ತ್ಯರ ಹೃದಯಗಳನ್ನು ಕಠಿಣಪಡಿಸುವೆನು. ಅವರು ಇವರನ್ನು ಹಿಂದಟ್ಟುವರು. ಆಗ ನಾನು ಫರೋಹನ ಮೇಲೆಯೂ, ಅವನ ಸಮಸ್ತ ಸೈನ್ಯದವರ ಮೇಲೆಯೂ, ರಥಗಳ ಮೇಲೆಯೂ ಮತ್ತು ಕುದುರೆಗಳ ಮೇಲೆಯೂ ಪ್ರಖ್ಯಾತಿಗೊಳ್ಳುವೆನು. 18ನಾನು ಫರೋಹನನಲ್ಲಿಯೂ ಅವನ ರಥಗಳಲ್ಲಿಯೂ, ಕುದುರೆಗಳಲ್ಲಿಯೂ ಪ್ರಖ್ಯಾತಿ ಹೊಂದಿದ ನಂತರ ನಾನೇ ಯೆಹೋವನು ಎಂಬುದನ್ನು ಐಗುಪ್ತ್ಯರು ತಿಳಿದುಕೊಳ್ಳುವರು” ಎಂದನು. 21ಮೋಶೆ ಸಮುದ್ರದ ಮೇಲೆ ಕೈಚಾಚಿದಾಗ, ಯೆಹೋವನು ಆ ರಾತ್ರಿಯೆಲ್ಲಾ ಮೂಡಣ ದಿಕ್ಕಿನಿಂದ ಬಲವಾದ ಬಿರುಗಾಳಿಯನ್ನು ಬೀಸುವಂತೆ ಮಾಡಿ ಸಮುದ್ರದ ನೀರನ್ನು ಒಂದು ಕಡೆಗೆ ನೂಕಿ ಅದರ ತಳದಲ್ಲಿ ಒಣನೆಲವು ಕಾಣಿಸುವಂತೆ ಮಾಡಿದನು. ನೀರು ಇಬ್ಭಾಗವಾಯಿತು. 22ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣನೆಲದಲ್ಲಿ ನಡೆದುಹೋದರು. ನೀರು ಅವರ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಂತೆ ನಿಂತುಕೊಂಡಿತು. 23ಐಗುಪ್ತ್ಯರೂ ಅಂದರೆ ಫರೋಹನ ಕುದುರೆಗಳೂ, ರಥಗಳೂ, ರಾಹುತರೂ ಅವರನ್ನು ಬೆನ್ನಟ್ಟುವವರಾಗಿ ಅವರ ಹಿಂದೆಯೇ ಸಮುದ್ರದೊಳಗೆ ಬಂದರು. 27ಮೋಶೆ ಸಮುದ್ರದ ಮೇಲೆ ಕೈಚಾಚಿದನು. ಬೆಳಗಾಗುವಾಗಲೇ ಸಮುದ್ರದ ನೀರು ಮೊದಲಿದ್ದಂತೆಯೇ ತುಂಬಿಕೊಂಡಿತು. ಐಗುಪ್ತ್ಯರು ಓಡಿಹೋಗುತ್ತಾ ಅದರ ಎದುರಾಗಿಯೇ ಬಂದರು. ಹೀಗೆ ಯೆಹೋವನು ಐಗುಪ್ತ್ಯರನ್ನು ಸಮುದ್ರದೊಳಗೆ ತಳ್ಳಿಬಿಟ್ಟನು. 28ನೀರು ಮೊದಲಿನಂತೆ ಬಂದು ಆ ರಥಗಳನ್ನೂ, ರಾಹುತರನ್ನೂ, ಅವರ ಹಿಂದೆ ಸಮುದ್ರದೊಳಗೆ ಹೋಗಿದ್ದ ಫರೋಹನ ಸೈನ್ಯದವರೆಲ್ಲರನ್ನೂ ಮುಳುಗಿಸಿಬಿಟ್ಟಿತ್ತು, ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ. 29ಇಸ್ರಾಯೇಲರಾದರೋ, ಸಮುದ್ರದೊಳಗೆ ಒಣನೆಲದಲ್ಲೇ ನಡೆದುಹೋದರು. ನೀರು ಅವರ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಂತೆ ನಿಂತಿತ್ತು.

ಸಂಧ್ಯಾ ಪ್ರಾರ್ಥನೆ: ವಾಚನ

ವಿಮೋ 15:22–16:1

22ಆನಂತರ ಮೋಶೆಯು ಇಸ್ರಾಯೇಲರನ್ನು ಕೆಂಪುಸಮುದ್ರದ ಮೂಲಕವಾಗಿ ನಡೆಸಿದನು. ಅವರು ಶೂರ್ ಮರುಭೂಮಿಯಲ್ಲಿ ಮೂರು ದಿನಗಳು ನೀರಿಲ್ಲದೆ ಪ್ರಯಾಣ ಮಾಡಿದರು. 23ತರುವಾಯ ಅವರು ಮಾರಾ ಎಂಬ ಸ್ಥಳಕ್ಕೆ ಬಂದರು. ಆದರೆ ಆ ಸ್ಥಳದ ನೀರು ಕಹಿಯಾಗಿದ್ದರಿಂದ ಅವರಿಗೆ ಅದನ್ನು ಕುಡಿಯುವುದಕ್ಕೆ ಆಗದೆ ಹೋಯಿತು. ಆದ್ದರಿಂದಲೇ ಆ ಸ್ಥಳಕ್ಕೆ ಮಾರಾ ಎಂದು ಹೆಸರಾಯಿತು. 24ಜನರು ಮೋಶೆಗೆ, “ನಾವೇನು ಕುಡಿಯಬೇಕು?” ಎಂದು ಅವನಿಗೆ ವಿರುದ್ಧವಾಗಿ ಗುಣಗುಟ್ಟಿದರು. 25ಮೋಶೆಯು ಯೆಹೋವನಿಗೆ ಪ್ರಾರ್ಥಿಸಿದನು. ಆಗ ಯೆಹೋವನು ಅವನಿಗೆ ಒಂದು ಗಿಡವನ್ನು ತೋರಿಸಿದನು. ಅವನು ಅದನ್ನು ನೀರಿನಲ್ಲಿ ಹಾಕಿದಾಗ, ನೀರು ಸಿಹಿಯಾಯಿತು. ಅಲ್ಲಿ ಯೆಹೋವನು ಇಸ್ರಾಯೇಲರಿಗಾಗಿ ಒಂದು ನಿಯಮವನ್ನು ಮಾಡಿ ಅವರನ್ನು ಪರೀಕ್ಷಿಸಿದನು. 26ಯೆಹೋವನು ಅವರಿಗೆ, “ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ, ಆತನ ದೃಷ್ಟಿಗೆ ಸರಿಬೀಳುವುದನ್ನು ಮಾಡಿ, ಆತನ ಆಜ್ಞೆಗಳಿಗೆ ವಿಧೇಯರಾಗಿದ್ದು, ಆತನ ಕಟ್ಟಳೆಗಳನ್ನೆಲ್ಲಾ ಅನುಸರಿಸಿ ನಡೆದರೆ, ನಾನು ಐಗುಪ್ತ್ಯರಿಗೆ ಉಂಟುಮಾಡಿದ ವ್ಯಾಧಿಗಳಲ್ಲಿ ಒಂದನ್ನೂ ನಿಮಗೆ ಬರಗೊಡಿಸುವುದಿಲ್ಲ. ಯೆಹೋವನೆಂಬ ನಾನೇ ನಿಮಗೆ ಆರೋಗ್ಯದಾಯಕನೂ, ನಿಮ್ಮನ್ನು ಗುಣಪಡಿಸುವವನೂ ಆಗಿದ್ದೇನೆ” ಎಂದನು. 27ಆ ನಂತರ ಅವರು ಏಲೀಮಿಗೆ ಬಂದರು. ಅಲ್ಲಿ ಹನ್ನೆರಡು ನೀರಿನ ಬುಗ್ಗೆಗಳೂ, ಎಪ್ಪತ್ತು ಖರ್ಜೂರದ ಮರಗಳೂ ಇದ್ದವು. ಆ ನೀರಿನ ಬಳಿಯಲ್ಲಿ ಅವರು ಇಳಿದು ಕೊಂಡರು. 16:1ಇಸ್ರಾಯೇಲರ ಸಮೂಹವೆಲ್ಲಾ ಏಲೀಮಿನಿಂದ ಪ್ರಯಾಣ ಮಾಡಿ ಅವರು ಐಗುಪ್ತ ದೇಶದಿಂದ ಹೊರಟ ಎರಡನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಎಲೀಮಿಗೂ ಸೀನಾಯಿ ಬೆಟ್ಟಕ್ಕೂ ನಡುವೆಯಿರುವ ಸೀನ್ ಎಂಬ ಮರುಭೂಮಿಗೆ ಬಂದರು.

ಸಂಧ್ಯಾ ಪ್ರಾರ್ಥನೆ: ವಾಚನ

ಯೆಹೋ 3:7–8, 15–17

7ಆಗ ಯೆಹೋವನು ಯೆಹೋಶುವನಿಗೆ “ನಾನು ಈ ದಿನ ನಿನ್ನನ್ನು ಇಸ್ರಾಯೇಲ್ಯರೆಲ್ಲರ ಮುಂದೆ ಘನಪಡಿಸುವೆನು; ನಾನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡಲೂ ಇರುವೆನೆಂದು ಅವರಿಗೆ ಗೊತ್ತಾಗುವುದು. 8ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನ್ ನದಿಯ ಅಂಚಿಗೆ ಬಂದ ಕೂಡಲೆ ಅಲ್ಲೇ ನಿಲ್ಲಬೇಕೆಂದು ಆಜ್ಞಾಪಿಸು” ಎಂದು ಹೇಳಿದನು. 15ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿಗೆ ಬಂದು, ನೀರಿನಲ್ಲಿ ತಮ್ಮ ಕಾಲುಗಳನ್ನು ಇಡುತ್ತಲೇ ಸುಗ್ಗೀ ಕಾಲದಲ್ಲೆಲ್ಲಾ ದಡಮೀರಿ ಹರಿಯುತ್ತಿದ್ದ ಯೊರ್ದನ್ ನದಿಯ ನೀರು ನಿಂತುಹೋಯಿತು. 16ಮೇಲಿನಿಂದ ಹರಿದು ಬರುತ್ತಿದ್ದ ನೀರು ಬಹುದೂರದಲ್ಲಿದ್ದ ಚಾರೆತಾನಿನ ಹತ್ತಿರವಿರುವ ಆದಾಮ್ ಊರಿನ ತನಕ ರಾಶಿಯಾಗಿ ನಿಂತಿತು. ಕೆಳಗಿನ ನೀರು ಅರಾಬಾ ತಗ್ಗಿನಲ್ಲಿರುವ ಲವಣಸಮುದ್ರಕ್ಕೆ ಹರಿದು ಹೋಯಿತು ಜನರು ಯೆರಿಕೋವಿನ ಎದುರಿನಲ್ಲಿ ಹೊಳೆದಾಟಿದರು. 17ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿನ ಮಧ್ಯದಲ್ಲಿ ಒಣನೆಲದ ಮೇಲೆ ನಿಂತಿದ್ದರು. ಅಷ್ಟರಲ್ಲಿ ಇಸ್ರಾಯೇಲ್ಯರೆಲ್ಲರೂ ಒಣನೆಲದ ಮೇಲೆ ನಡೆದು ಹೋದರು. ಈ ಪ್ರಕಾರ ಜನರೆಲ್ಲರೂ ಯೊರ್ದನಿನ ಆಚೆಗೆ ತಲುಪಿದರು.

ಸಂಧ್ಯಾ ಪ್ರಾರ್ಥನೆ: ವಾಚನ

2 ಅರಸು 2:6–14

6ಎಲೀಯನು ತಿರುಗಿ ಅವನಿಗೆ, “ನೀನು ಇಲ್ಲೇ ಇರು. ಯೆಹೋವನು ನನಗೆ ಯೊರ್ದನಿಗೆ ಹೋಗಬೇಕೆಂದು ಆಜ್ಞಾಪಿಸಿದ್ದಾನೆ” ಎಂದು ಹೇಳಿದನು. ಅದಕ್ಕೆ ಎಲೀಷನು, “ಯೆಹೋವನಾಣೆ, ನಿನ್ನ ಜೀವದಾಣೆ, ನಾನು ನಿನ್ನನ್ನು ಬಿಟ್ಟು ಹೋಗುವುದಿಲ್ಲ” ಎಂದು ಉತ್ತರ ಕೊಟ್ಟನು. ಅನಂತರ ಅವರಿಬ್ಬರೂ ಹೊರಟು ಯೊರ್ದನ್ ಹೊಳೆಯ ದಡಕ್ಕೆ ಬಂದರು. 7ಪ್ರವಾದಿ ಮಂಡಳಿಯವರಲ್ಲಿ ಐವತ್ತು ಜನರು ಇವರ ಹಿಂದಿನಿಂದಲೇ ಬಂದು ಯೊರ್ದನಿಗೆ ಸ್ವಲ್ಪ ದೂರದಲ್ಲಿಯೇ ನಿಂತುಕೊಂಡರು. 8ಅನಂತರ ಎಲೀಯನು ತನ್ನ ಕಂಬಳಿಯನ್ನು ಮಡಚಿ ಅದರಿಂದ ನೀರನ್ನು ಹೊಡೆಯಲು ನೀರು ಎರಡು ಭಾಗವಾಯಿತು. ಇಬ್ಬರೂ ಒಣನೆಲದ ಮೇಲೆ ನಡೆದುಕೊಂಡು ಯೊರ್ದನನ್ನು ದಾಟಿದರು. 9ಅವರು ಆಚೆ ದಡಕ್ಕೆ ಸೇರಿದ ಮೇಲೆ ಎಲೀಯನು ಎಲೀಷನನ್ನು, “ನಿನ್ನನ್ನು ಬಿಟ್ಟು ಹೋಗುವ ಮೊದಲು, ನಾನು ನಿನಗೋಸ್ಕರ ಏನು ಮಾಡಬೇಕೆನ್ನುತ್ತೀ ಹೇಳು” ಎಂದು ಕೇಳಿದನು. ಅದಕ್ಕೆ ಎಲೀಷನು, “ನಿನಗಿರುವ ಆತ್ಮದಲ್ಲಿ ನನಗೆ ಎರಡರಷ್ಟು ಪಾಲನ್ನು ಅನುಗ್ರಹಿಸು” ಎಂದು ಬೇಡಿಕೊಂಡನು. 10ಆಗ ಎಲೀಯನು ಅವನಿಗೆ, “ನೀನು ಕಷ್ಟಕರವಾದುದ್ದನ್ನು ಕೇಳಿಕೊಂಡಿರುವೆ. ಆದರೂ ನಾನು ನಿನ್ನ ಬಳಿಯಿಂದ ತೆಗೆಯಲ್ಪಡುವಾಗ ನೀನು ನನ್ನನ್ನು ನೋಡುವುದಾದರೆ ಅದು ನಿನಗೆ ದೊರಕುವುದು. ಇಲ್ಲವಾದರೆ ದೊರಕುವುದಿಲ್ಲ” ಎಂದನು. 11ಅವರು ಮಾತನಾಡುತ್ತಾ ಮುಂದೆ ಹೋಗುತ್ತಿರುವಾಗ, ಪಕ್ಕನೆ ಅಗ್ನಿಮಯವಾದ ರಥಗಳು ನಡುವೆ ಬಂದು ಅವರಿಬ್ಬರನ್ನು ಬೇರ್ಪಡಿಸಿದವು. ಎಲೀಯನು ಸುಂಟರಗಾಳಿಯ ಮುಖಾಂತರವಾಗಿ ಪರಲೋಕಕ್ಕೆ ಏರಿ ಹೋದನು. 12ಎಲೀಷನು ಅದನ್ನು ನೋಡುತ್ತಾ, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲರಿಗೆ ರಥಾರಥಾಶ್ವಗಳಾಗಿದ್ದವನೇ” ಎಂದು ಕೂಗಿಕೊಂಡನು. ಎಲೀಯನು ತನಗೆ ಕಾಣಿಸದೆ ಹೋದ ಮೇಲೆ ತನ್ನ ಬಟ್ಟೆಗಳನ್ನು ಹರಿದು ಎರಡು ತುಂಡುಮಾಡಿದನು. 13ಅನಂತರ ಅವನು ಮೇಲಿನಿಂದ ಬಿದ್ದ ಎಲೀಯನ ಕಂಬಳಿಯನ್ನು ತೆಗೆದುಕೊಂಡು ಯೊರ್ದನ್ ನದಿ ತೀರಕ್ಕೆ ಬಂದು, 14“ಎಲೀಯನ ದೇವರಾದ ಯೆಹೋವನೆಲ್ಲಿ?” ಎಂದು ಅಂದುಕೊಂಡು, ಆ ಕಂಬಳಿಯಿಂದ ನೀರನ್ನು ಹೊಡೆಯಲು ಅದು ಎರಡು ಭಾಗವಾಯಿತು. ಎಲೀಷನು ಹೊಳೆಯನ್ನು ದಾಟಿಹೋದನು.

ಸಂಧ್ಯಾ ಪ್ರಾರ್ಥನೆ: ವಾಚನ

2 ಅರಸು 5:9–14

9ನಾಮಾನನು ರಥಾಶ್ವಗಳೊಡನೆ ಎಲೀಷನ ಮನೆಗೆ ಹೋಗಿ ಬಾಗಿಲಿನ ಮುಂದೆ ನಿಂತನು. 10ಎಲೀಷನು ಅವನಿಗೆ, “ಹೋಗಿ ಯೊರ್ದನ್ ನದಿಯಲ್ಲಿ ಏಳು ಸಾರಿ ಮುಳುಗಿ ಬಾ, ಆಗ ನಿನ್ನ ದೇಹವು ಮೊದಲಿನಂತಾಗುವುದು; ನೀನು ಶುದ್ಧನಾಗುವಿ” ಎಂದು ಹೇಳಿ ಕಳುಹಿಸಿದನು. 11ನಾಮಾನನು ಇದನ್ನು ಕೇಳಿ ಕೋಪಗೊಂಡು, “ಇದೇನು? ಅವನು ಹೊರಗೆ ಬಂದು ತನ್ನ ದೇವರಾದ ಯೆಹೋವನ ಹೆಸರನ್ನು ಹೇಳಿ ನನ್ನ ಕುಷ್ಠದ ಮೇಲೆ ಕೈಯಾಡಿಸಿ ವಾಸಿಮಾಡುವನೆಂದು ನೆನಸಿದೆನು. 12ದಮಸ್ಕದ ಅಬಾನಾ ಮತ್ತು ಪರ್ಪರ್ ಎಂಬ ನದಿಗಳು ಇಸ್ರಾಯೇಲರ ಎಲ್ಲಾ ನದಿ ಹೊಳೆಹಳ್ಳಗಳಿಗಿಂತ ಉತ್ತಮವಾಗಿವೆಯಲ್ಲವೋ? ಸ್ನಾನದಿಂದ ಶುದ್ಧನಾಗುವ ಹಾಗಿದ್ದರೆ ನಾನು ಅವುಗಳಲ್ಲಿಯೇ ಸ್ನಾನಮಾಡಬಹುದಲ್ಲವೇ?” ಎಂದು ಹೇಳಿ, ಬಲು ಸಿಟ್ಟಿನಿಂದ ಹೊರಟುಹೋದನು. 13ಆಗ ಅವನ ಸೇವಕರು ಹತ್ತಿರ ಬಂದು ಅವನಿಗೆ, “ಸ್ವಾಮೀ, ಪ್ರವಾದಿಯು ಒಂದು ಕಠಿಣವಾದ ಕೆಲಸ ಹೇಳಿದ್ದರೆ, ಅದನ್ನು ನೀವು ಮಾಡುತ್ತಿದ್ದಿರಲ್ಲವೇ? ಹಾಗಾದರೆ ‘ಸ್ನಾನಮಾಡಿ ಶುದ್ಧನಾಗು’ ಎಂದು ಹೇಳಿದರೆ ಯಾಕೆ ಅದರಂತೆ ಮಾಡಬಾರದು” ಎಂದು ಹೇಳಿದರು. 14ಅವನು ಯೊರ್ದನ್ ನದಿಗೆ ಹೋಗಿ ಏಳು ಸಾರಿ ಅದರಲ್ಲಿ ಮುಳುಗಿ ಎದ್ದನು. ಕೂಡಲೆ ದೇವರ ಮನುಷ್ಯನ ಮಾತಿಗನುಸಾರವಾಗಿ ಅವನ ದೇಹವು ಕೂಸಿನ ದೇಹದಂತೆ ಶುದ್ಧವಾಯಿತು.

ಸಂಧ್ಯಾ ಪ್ರಾರ್ಥನೆ: ವಾಚನ

ಯೆಶಾ 1:16–20

16ನಿಮ್ಮನ್ನು ತೊಳೆದು ಶುದ್ಧರಾಗಿ, ನನ್ನ ಕಣ್ಣೆದುರಿನಿಂದ ನಿಮ್ಮ ದುಷ್ಕೃತ್ಯಗಳನ್ನು ತೊಲಗಿಸಿರಿ, ದುರಾಚಾರವನ್ನು ಬಿಡಿ, 17ಸದಾಚಾರವನ್ನು ಅಭ್ಯಾಸ ಮಾಡಿಕೊಳ್ಳಲು ಕಲಿಯಿರಿ, ನ್ಯಾಯವನ್ನು ಅನುಸರಿಸಿ ನಡೆಯಿರಿ. ಹಿಂಸೆಗೆ ಒಳಗಾದವನಿಗೆ ಸಹಾಯಮಾಡಿರಿ. ಅನಾಥನಿಗೆ ನ್ಯಾಯತೀರಿಸಿರಿ. ವಿಧವೆಯ ಪಕ್ಷವಾಗಿ ವಾದಿಸಿರಿ.” 18“ಬನ್ನಿರಿ ವಾದಿಸುವ” ಎಂದು ಯೆಹೋವನು ಅನ್ನುತ್ತಾನೆ. “ನಿಮ್ಮ ಪಾಪಗಳು ಕಡುಕೆಂಪಾಗಿದ್ದರೂ, ಹಿಮದ ಹಾಗೆ ಬಿಳುಪಾಗುವವು. ಕಿರಮಂಜಿ ಬಣ್ಣವಾಗಿದ್ದರೂ ಉಣ್ಣೆಯಂತೆ ಬೆಳ್ಳಗಾಗುವವು. 19ನೀವು ಒಪ್ಪಿ ವಿಧೇಯರಾದರೆ ದೇಶದ ಮೇಲನ್ನು ಅನುಭವಿಸುವಿರಿ. 20ಒಪ್ಪದೆ ತಿರುಗಿ ಬಿದ್ದರೆ, ಕತ್ತಿಯ ಬಾಯಿಗೆ ತುತ್ತಾಗುವಿರಿ” ಈ ಮಾತನ್ನು ಯೆಹೋವನೇ ನುಡಿದಿದ್ದಾನೆ.

ಸಂಧ್ಯಾ ಪ್ರಾರ್ಥನೆ: ವಾಚನ

ಆದಿ 32:1–10

1ಯಾಕೋಬನು ಮುಂದೆ ಪ್ರಯಾಣಮಾಡಲು ದೇವದೂತರು ಅವನೆದುರಿಗೆ ಬಂದರು. 2ಯಾಕೋಬನು ಅವರನ್ನು ನೋಡಿದಾಗ, “ಇದು ದೇವರ ಸೇನಾನಿವೇಶ” ಎಂದು ಹೇಳಿ ಆ ಸ್ಥಳಕ್ಕೆ “ಮಹನಯಿಮ್” ಎಂದು ಹೆಸರಿಟ್ಟನು. 3ಬಳಿಕ ಯಾಕೋಬನು ತನಗಿಂತ ಮೊದಲು ಎದೋಮ್ಯರ ಪ್ರದೇಶವಾಗಿರುವ ಸೇಯೀರ್ ಸೀಮೆಗೆ ತನ್ನ ಅಣ್ಣನಾದ ಏಸಾವನ ಬಳಿಗೆ ಸೇವಕರನ್ನು ಕಳುಹಿಸಿದನು. 4ಕಳುಹಿಸುವಾಗ ಅವರಿಗೆ “ನೀವು ನನ್ನ ಪ್ರಭುವಾದ ಏಸಾವನ ಬಳಿಗೆ ಹೋಗಿ ಅವನಿಗೆ, ‘ನಿನ್ನ ಸೇವಕನಾದ ಯಾಕೋಬನು ಇಷ್ಟು ದಿನ ಲಾಬಾನನ ಬಳಿಯಲ್ಲಿ ವಾಸವಾಗಿದ್ದನು 5ಈಗ ಅವನಿಗೆ ಎತ್ತು, ಕತ್ತೆ ಮುಂತಾದ ಪಶುಗಳ ಹಿಂಡುಗಳೂ ದಾಸದಾಸಿಯರು ಇದ್ದಾರೆ. ಅವನು ತಮ್ಮ ದಯೆ ಆತನ ಮೇಲೆ ಇರಬೇಕೆಂದು ತಿಳಿಸುವುದಕ್ಕೆ ನಿಮ್ಮನ್ನು ಕಳುಹಿಸಿದ್ದಾನೆ’” ಎಂದು ಹೇಳಿರಿ ಅಂದನು. 6ತರುವಾಯ ಆ ಸೇವಕರು ಯಾಕೋಬನ ಬಳಿಗೆ ಹಿಂತಿರುಗಿ ಬಂದು, “ನಾವು ನಿನ್ನ ಅಣ್ಣನಾದ ಏಸಾವನ ಹತ್ತಿರಕ್ಕೆ ಹೋಗಿ ಬಂದಿದ್ದೇವೆ, ಅವನು ನಾನೂರು ಜನರ ಸಮೇತ ನಿನ್ನನ್ನು ಎದುರುಗೊಳ್ಳುವುದಕ್ಕೆ ಬರುತ್ತಾನೆ” ಎಂದು ಹೇಳಿದಾಗ, 7ಯಾಕೋಬನಿಗೆ ಬಹು ಭಯವೂ ಕಳವಳವೂ ಉಂಟಾದವು. ಅವನು ತನ್ನೊಂದಿಗಿದ್ದ ಜನರನ್ನು, ಕುರಿದನಗಳನ್ನು ಹಾಗೂ ಒಂಟೆಗಳನ್ನು ಎರಡು ಗುಂಪುಗಳಾಗಿ ವಿಭಾಗಿಸಿದನು. 8ಏಕೆಂದರೆ, “ಏಸಾವನು ಒಂದು ಗುಂಪಿನ ಮೇಲೆ ಬಿದ್ದರೂ ಮತ್ತೊಂದು ಗುಂಪು ತಪ್ಪಿಸಿಕೊಂಡು ಹೋಗಬಹುದು” ಅಂದುಕೊಂಡನು. 9ಇದಲ್ಲದೆ ಯಾಕೋಬನು ದೇವರನ್ನು ಪ್ರಾರ್ಥಿಸಿ, “ಯೆಹೋವನೇ, ನನ್ನ ತಂದೆಯಾದ ಅಬ್ರಹಾಮನ ದೇವರೇ, ನನ್ನ ತಂದೆಯಾದ ಇಸಾಕನ ದೇವರೇ, ‘ನಿನ್ನ ಸ್ವದೇಶಕ್ಕೂ, ಬಂಧುಗಳ ಬಳಿಗೂ ತಿರುಗಿ ಹೋಗಬೇಕೆಂದು ನನಗೆ ಆಜ್ಞಾಪಿಸಿ ನಿನಗೆ ಒಳ್ಳೆಯದನ್ನು ಮಾಡುವೆನೆಂದು’ ನನಗೆ ವಾಗ್ದಾನ ಮಾಡಿದ ಯೆಹೋವನೇ, 10ನೀನು ನಿನ್ನ ದಾಸನಾದ ನನ್ನ ಮೇಲೆ ಎಷ್ಟೋ ನಂಬಿಕೆಯನ್ನಿಟ್ಟು ನಿನ್ನ ವಾಗ್ದಾನವನ್ನು ನೆರವೇರಿಸಿದ್ದೀಯಲ್ಲಾ. ನಾನು ಅದಕ್ಕೆ ಕೇವಲ ಅಯೋಗ್ಯನು. ನಾನು ಮೊದಲು ಈ ಯೊರ್ದನ್ ನದಿಯನ್ನು ದಾಟಿದಾಗ ನನ್ನ ಬಳಿಯಲ್ಲಿ ಒಂದು ಕೋಲು ಮಾತ್ರವೇ ಇತ್ತು. ಈಗ ಎರಡು ಗುಂಪುಗಳಿಗೆ ಒಡೆಯನಾಗಿದ್ದೇನೆ.

ಸಂಧ್ಯಾ ಪ್ರಾರ್ಥನೆ: ವಾಚನ

ವಿಮೋ 2:5–10

5ಅಷ್ಟರಲ್ಲಿ ಫರೋಹನ ಮಗಳು ಸ್ನಾನಕ್ಕಾಗಿ ನೈಲ್ ನದಿಯ ಬಳಿಗೆ ಬಂದಳು. ಆಕೆಯ ಸೇವಕಿಯರು ನದಿಯ ದಡದಲ್ಲಿ ತಿರುಗಾಡುತ್ತಿದ್ದರು. ಆಕೆ ಜಂಬುಹುಲ್ಲಿನ ಪೆಟ್ಟಿಗೆಯನ್ನು ಕಂಡು, ದಾಸಿಯೊಬ್ಬಳನ್ನು ಕಳುಹಿಸಿ ಅದನ್ನು ತರಿಸಿದಳು. 6ಪೆಟ್ಟಿಗೆಯನ್ನು ತೆರೆದು ನೋಡುವಾಗ, ಆಹಾ! ಅಳುವ ಕೂಸು. ಆಕೆಗೆ ಅದರ ಮೇಲೆ ಕನಿಕರಹುಟ್ಟಿ, “ಇದು ಇಬ್ರಿಯರ ಮಕ್ಕಳಲ್ಲಿ ಒಂದಾಗಿರಬಹುದು” ಎಂದುಕೊಂಡಳು. 7ಆಗಲೇ ಮಗುವಿನ ಅಕ್ಕ ಬಂದು, “ಫರೋಹನ ಮಗಳಿಗೆ ನಿನಗೋಸ್ಕರ ಈ ಕೂಸನ್ನು ಮೊಲೆಕೊಟ್ಟು ಸಾಕುವುದಕ್ಕೆ ಇಬ್ರಿಯ ಸ್ತ್ರೀಯರಲ್ಲಿ ಒಬ್ಬ ದಾದಿಯನ್ನು ನಾನು ಕರೆದುಕೊಂಡು ಬರಬಹುದೋ?” ಎಂದು ಕೇಳಿದಳು. 8ಫರೋಹನ ಮಗಳು ಆಕೆಗೆ, “ಹೋಗು ಕರೆದುಕೊಂಡು ಬಾ” ಎಂದಳು. ಆ ಹುಡುಗಿ ಹೋಗಿ ಕೂಸಿನ ತಾಯಿಯನ್ನೇ ಕರೆದುತಂದಳು. 9ಫರೋಹನ ಮಗಳು ಮಗುವಿನ ತಾಯಿಗೆ, “ನೀನು ಈ ಮಗುವನ್ನು ತೆಗೆದುಕೊಂಡು ಹೋಗಿ ನನಗೋಸ್ಕರ ಹಾಲುಕೊಟ್ಟು ಸಾಕಬೇಕು. ನಾನು ನಿನಗೆ ಸಂಬಳವನ್ನು ಕೊಡುವೆನು” ಎಂದು ಹೇಳಿದಳು. ಆ ಸ್ತ್ರೀಯು ಕೂಸನ್ನು ತೆಗೆದುಕೊಂಡು ಹೋಗಿ ಸಾಕಿದಳು. 10ಆ ಹುಡುಗನು ಬೆಳೆದಾಗ, ಅವನನ್ನು ಫರೋಹನ ಮಗಳ ಬಳಿಗೆ ತೆಗೆದುಕೊಂಡು ಬಂದಳು, ಅವನು ಆಕೆಗೆ ಮಗನಾದನು. “ಇವನನ್ನು ನೀರಿನೊಳಗಿನಿಂದ ಎಳೆದುಕೊಂಡಿದ್ದೇನೆ,” ಎಂದು ಹೇಳಿ ಆಕೆಯು ಅವನಿಗೆ “ಮೋಶೆ” ಎಂದು ಹೆಸರಿಟ್ಟಳು.

ಸಂಧ್ಯಾ ಪ್ರಾರ್ಥನೆ: ವಾಚನ

ನ್ಯಾಯ 6:36–40

36ಮತ್ತು ಗಿದ್ಯೋನನು ದೇವರಿಗೆ, “ನೀನು ಹೇಳಿದಂತೆ ಇಸ್ರಾಯೇಲ್ಯರನ್ನು ನನ್ನ ಮೂಲಕವಾಗಿ ರಕ್ಷಿಸುವಿಯೋ ಇಲ್ಲವೋ ಎಂಬುದನ್ನು ತಿಳಿಯಪಡಿಸು. 37ಇಗೋ, ನಾನು ಕಣದಲ್ಲಿ ಕುರಿಯ ಉಣ್ಣೆಯನ್ನು ಇಡುತ್ತೇನೆ; ಅದರಲ್ಲಿ ಮಾತ್ರ ಮಂಜುಬಿದ್ದು ನೆಲವೆಲ್ಲಾ ಒಣಗಿದ್ದರೆ ನೀನು ಹೇಳಿದಂತೆಯೇ ಇಸ್ರಾಯೇಲರನ್ನು ನನ್ನ ಮೂಲಕವಾಗಿ ರಕ್ಷಿಸುವಿಯೆಂದು ತಿಳಿಯುವೆನು” ಎಂಬುದಾಗಿ ವಿಜ್ಞಾಪಿಸಿದನು. 38ಹಾಗೆಯೇ ಆಯಿತು; ಅವನು ಮರುದಿನ ಹೊತ್ತಾರೆಯಲ್ಲಿ ಎದ್ದು ಉಣ್ಣೆಯನ್ನು ಒತ್ತಿ ಹಿಂಡಲು ಮಂಜಿನ ನೀರು ಒಂದು ಬಟ್ಟಲು ತುಂಬಾ ಆಯಿತು. 39ಅವನು ತಿರುಗಿ ದೇವರಿಗೆ, “ಸ್ವಾಮೀ, ಸಿಟ್ಟಾಗಬಾರದು; ಇನ್ನೊಂದು ಸಾರಿ ಮಾತನಾಡುತ್ತೇನೆ. ಇನ್ನು ಒಂದೇ ಸಾರಿ ಈ ಉಣ್ಣೆಯಿಂದ ನಿನ್ನನ್ನು ಪರೀಕ್ಷಿಸುವುದಕ್ಕೆ ಅಪ್ಪಣೆಯಾಗಲಿ; ಈ ಉಣ್ಣೆ ಮಾತ್ರವೇ ಒಣಗಿದ್ದು ನೆಲದ ಮೇಲೆಲ್ಲಾ ಹನಿ ಬಿದ್ದಿರಲಿ” ಅಂದನು. 40ಆ ರಾತ್ರಿ ದೇವರು ಹಾಗೆಯೇ ಮಾಡಿದನು; ಉಣ್ಣೆ ಮಾತ್ರ ಒಣಗಿತ್ತು, ನೆಲದ ಮೇಲೆಲ್ಲಾ ಹನಿ ಬಿದ್ದಿತ್ತು.

ಸಂಧ್ಯಾ ಪ್ರಾರ್ಥನೆ: ವಾಚನ

1 ಅರಸು 18:30–39

30ಅನಂತರ ಎಲೀಯನು ಎಲ್ಲಾ ಜನರನ್ನು ಹತ್ತಿರಕ್ಕೆ ಕರೆಯಲು ಅವರು ಬಂದರು. ಅವನು ಹಾಳಾಗಿದ್ದ ಅಲ್ಲಿ ಯೆಹೋವನ ಯಜ್ಞವೇದಿಯನ್ನು ತಿರುಗಿ ಕಟ್ಟಿಸಿದನು. 31ಯೆಹೋವನಿಂದ ಇಸ್ರಾಯೇಲನೆಂಬ ಹೆಸರು ಹೊಂದಿದ ಯಾಕೋಬನ ಮಕ್ಕಳಿಂದ ಉತ್ಪತ್ತಿಯಾದ ಕುಲಗಳ ಸಂಖ್ಯೆಗೆ ಸರಿಯಾಗಿ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು, 32ಯೆಹೋವನ ಹೆಸರಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿಸಿ, ಅದರ ಸುತ್ತಲೂ ಇಪ್ಪತ್ತು ಸೇರು ಬೀಜಬಿತ್ತುವಷ್ಟು ನೆಲವನ್ನು ಅಗೆಸಿ ಕಾಲುವೆ ಮಾಡಿಸಿದನು. 33ಇದಲ್ಲದೆ ಕಟ್ಟಿಗೆಯನ್ನು ಯಜ್ಞವೇದಿಯ ಮೇಲೆ ಕ್ರಮಪಡಿಸಿ, ಹೋರಿಯನ್ನು ವಧಿಸಿ ತುಂಡು ಮಾಡಿ ಅದರ ಮೇಲಿಟ್ಟನು. ಅನಂತರ ಜನರಿಗೆ, “ನಾಲ್ಕು ಕೊಡ ನೀರು ತಂದು ಯಜ್ಞಮಾಂಸದ ಮೇಲೆಯೂ ಕಟ್ಟಿಗೆಯ ಮೇಲೆಯೂ ಸುರಿಯಿರಿ” ಎಂದು ಆಜ್ಞಾಪಿಸಿದನು. 34ಅವರು ತೆಗೆದುಕೊಂಡು ಬರಲು, “ಇನ್ನೊಂದು ಸಾರಿ ತನ್ನಿರಿ” ಎಂದು ಹೇಳಿದನು. ತಿರುಗಿ ತಂದರು. ಅವನು ಮೂರನೆಯ ಸಾರಿ ಅದೇ ಪ್ರಕಾರವಾಗಿ ಆಜ್ಞಾಪಿಸಿಲು ಅವರು ಮತ್ತೊಮ್ಮೆ ತಂದು ಸುರಿದರು 35ನೀರು ಯಜ್ಞವೇದಿಯ ಸುತ್ತಲೂ ತುಂಬಿ ಹರಿಯಿತು. ಇದಲ್ಲದೆ ಅವನು ಕಾಲುವೆಯನ್ನು ನೀರಿನಿಂದ ತುಂಬಿಸಿದನು. 36ಸಂಧ್ಯಾನೈವೇದ್ಯದ ಹೊತ್ತಿಗೆ ಪ್ರವಾದಿಯಾದ ಎಲೀಯನು ಯಜ್ಞವೇದಿಯ ಹತ್ತಿರ ಬಂದು, “ಅಬ್ರಹಾಮ, ಇಸಾಕ ಇಸ್ರಾಯೇಲರ ದೇವರೇ, ಯೆಹೋವನೇ, ನೀನೊಬ್ಬನೇ ಇಸ್ರಾಯೇಲರ ದೇವರಾಗಿರುತ್ತೀ ಎಂಬುದನ್ನೂ, ನಾನು ನಿನ್ನ ಸೇವಕನಾಗಿರುತ್ತೇನೆ ಎಂಬುದನ್ನೂ ಮತ್ತು ಇದನ್ನೆಲ್ಲಾ ನಿನ್ನ ಅಪ್ಪಣೆಯ ಮೇರೆಗೆ ಮಾಡಿದೆನೆಂಬುದನ್ನೂ ಈ ಹೊತ್ತು ತೋರಿಸಿಕೊಡು. 37ಕಿವಿಗೊಡು, ಯೆಹೋವನೇ ಕಿವಿಗೊಡು, ಯೆಹೋವನಾದ ನೀನೊಬ್ಬನೇ ದೇವರೂ! ಈ ಜನರ ಮನಸ್ಸನ್ನು ನಿನ್ನ ಕಡೆಗೆ ತಿರುಗಿಸಿಕೊಳ್ಳುವವನೂ ನೀನೇ ಆಗಿರುತ್ತೀ ಎಂಬುದನ್ನು ಇವರಿಗೆ ತಿಳಿಯಪಡಿಸು” ಎಂದು ಪ್ರಾರ್ಥಿಸಿದನು. 38ಕೂಡಲೇ ಯೆಹೋವನ ಕಡೆಯಿಂದ ಬೆಂಕಿಬಿದ್ದು ಯಜ್ಞಮಾಂಸವನ್ನೂ, ಕಟ್ಟಿಗೆ, ಕಲ್ಲು ಮಣ್ಣುಗಳನ್ನೂ ದಹಿಸಿಬಿಟ್ಟು ಕಾಲುವೆಯಲ್ಲಿದ್ದ ನೀರನ್ನೆಲ್ಲಾ ಹೀರಿಬಿಟ್ಟಿತು. 39ಜನರೆಲ್ಲರೂ ಅದನ್ನು ಕಂಡು ಬೋರ್ಲಬಿದ್ದು, “ಯೆಹೋವನೇ ದೇವರು! ಯೆಹೋವನೇ ದೇವರು!” ಎಂದು ಕೂಗಿದರು.

ಸಂಧ್ಯಾ ಪ್ರಾರ್ಥನೆ: ವಾಚನ

2 ಅರಸು 2:19–22

19ಯೆರಿಕೋವಿನ ಜನರು ಎಲೀಷನಿಗೆ, “ನಮ್ಮ ಒಡೆಯನಾದ ನಿನಗೆ ಗೊತ್ತಿರುವಂತೆ, ಈ ಊರು ಕಟ್ಟಲ್ಪಟ್ಟಿರುವ ಸ್ಥಳವು ಒಳ್ಳೆಯದಾಗಿದೆ. ಆದರೆ ನೀರು ಕೆಟ್ಟದ್ದಾಗಿರುವುದರಿಂದ ಬಂಜೆತನ ಉಂಟಾಗಿದೆ” ಎಂದು ಹೇಳಿದರು. 20ಆಗ ಎಲೀಷನು ಅವರಿಗೆ, “ಒಂದು ಹೊಸ ಮಡಿಕೆಯಲ್ಲಿ ಉಪ್ಪು ಹಾಕಿ ಅದನ್ನು ತಂದು ಕೊಡಿರಿ” ಎಂದು ಹೇಳಿದಾಗ, ಅವರು ತಂದುಕೊಟ್ಟರು. 21ಅವನು ಬುಗ್ಗೆಗೆ ಹೋಗಿ ಆ ನೀರಿನಲ್ಲಿ ಉಪ್ಪು ಹಾಕಿ, “ಇನ್ನು ಮುಂದೆ ಈ ನೀರಿನಿಂದ ಮರಣವೂ ಬಂಜೆತನವೂ ಉಂಟಾಗದಂತೆ ಇದರಲ್ಲಿದ್ದ ದೋಷವನ್ನೆಲ್ಲಾ ಪರಿಹರಿಸಿದ್ದೇನೆ ಎಂಬುದಾಗಿ ಯೆಹೋವನು ಅನ್ನುತ್ತಾನೆ” ಎಂದು ಹೇಳಿದನು. 22ಕೂಡಲೆ ನೀರಿನಲ್ಲಿದ್ದ ದೋಷವೆಲ್ಲಾ ಪರಿಹಾರವಾಯಿತು, ಎಲೀಷನ ವಾಕ್ಯಬಲದಿಂದ ಅದು ಇಂದಿನವರೆಗೂ ಹಾಗೆಯೇ ಇರುತ್ತದೆ.

ಸಂಧ್ಯಾ ಪ್ರಾರ್ಥನೆ: ವಾಚನ

ಯೆಶಾ 49:8–15

8ಇದೇ ಯೆಹೋವನ ನುಡಿ, “ಈ ಪ್ರಸನ್ನತೆಯ ಕಾಲದಲ್ಲಿ ನಿನಗೆ ಸದುತ್ತರವನ್ನು ದಯಪಾಲಿಸಿದ್ದೇನೆ. ಈ ರಕ್ಷಣೆಯ ದಿನದಲ್ಲಿ ನಿನಗೆ ಸಹಾಯಮಾಡಿದ್ದೇನೆ. ನಾನು ನಿನ್ನನ್ನು ಕಾಪಾಡುತ್ತಾ ನನ್ನ ಜನರಿಗೆ ಒಡಂಬಡಿಕೆಯ ಆಧಾರವನ್ನಾಗಿ ನೇಮಿಸಿದ್ದೇನೆ. 9ನೀನು ಬಂದಿಸಲ್ಪಟ್ಟವರಿಗೆ ‘ಹೊರಟುಹೋಗಿರಿ’ ಎಂದು, ಕತ್ತಲಲ್ಲಿರುವವರಿಗೆ, ‘ಬೆಳಕಿಗೆ ಹೊರಡಿರಿ’ ಎಂದು ಅಪ್ಪಣೆಕೊಟ್ಟು ಹಾಳಾಗಿದ್ದ ಸ್ವತ್ತುಗಳನ್ನು ಅವರಿಗೆ ಹಂಚಿ ದೇಶವನ್ನು ಉನ್ನತ ಸ್ಥಿತಿಗೆ ತರುವೆನು. ನನ್ನ ಜನವೆಂಬ ಹಿಂಡು ದಾರಿಗಳಲ್ಲಿ ಮೇಯುವುದು. ಎಲ್ಲಾ ಬೋಳುಬೆಟ್ಟಗಳೂ ಕೂಡ ಹುಲ್ಲುಗಾವಲಾಗುವವು. 10ಅವರಿಗೆ ಹಸಿವೆ ಬಾಯಾರಿಕೆಗಳು ಆಗುವುದಿಲ್ಲ, ಝಳವೂ ಬಿಸಿಲೂ ಬಡಿಯುವುದಿಲ್ಲ. ಅವರನ್ನು ಕರುಣಿಸುವಾತನು ದಾರಿತೋರಿಸುತ್ತಾ ನೀರು ಸಿಕ್ಕುವ ಒರತೆಗಳ ಬಳಿಯಲ್ಲಿ ನಡೆಸುವನು. 11ನನ್ನ ಬೆಟ್ಟಗಳನ್ನೆಲ್ಲಾ ಸಮದಾರಿಯನ್ನಾಗಿ ಮಾಡಿ ನನ್ನ ರಾಜಮಾರ್ಗಗಳನ್ನು ಎತ್ತರಿಸುವೆನು. 12ಇಗೋ, ಇವರು ದೂರದಿಂದ ಬರುತ್ತಾರೆ. ಇಗೋ, ಇವರು ಬಡಗಲಿಂದ ಮತ್ತು ಪಡವಲಿಂದ, ಇವರು ಸೀನೀಮ್ ದೇಶದಿಂದ ಬರುತ್ತಿದ್ದಾರೆ. 13ಆಕಾಶವೇ, ಹರ್ಷಧ್ವನಿಗೈ! ಭೂಮಿಯೇ, ಉಲ್ಲಾಸಗೊಳ್ಳು! ಪರ್ವತಗಳೇ, ಹರ್ಷಧ್ವನಿಗೈಯಿರಿ! ಏಕೆಂದರೆ ಯೆಹೋವನು ತನ್ನ ಪ್ರಜೆಯನ್ನು ಸಂತೈಸಿ, ದಿಕ್ಕಿಲ್ಲದ ತನ್ನ ಜನರನ್ನು ಕರುಣಿಸುವನು.” 14ಚೀಯೋನ್ ನಗರಿಯಾದರೋ, “ಯೆಹೋವನು ನನ್ನನ್ನು ಕೈಬಿಟ್ಟಿದ್ದಾನೆ, ಕರ್ತನು ನನ್ನನ್ನು ಮರೆತಿದ್ದಾನೆ” ಎಂದುಕೊಂಡಳು. 15ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತರು ಮರೆತಾಳು, ಆದರೆ ನಾನು ನಿನ್ನನ್ನು ಮರೆಯುವುದಿಲ್ಲ.

ಪತ್ರಿಕೆ (ದೇವಪ್ರತ್ಯಕ್ಷತೆಯ ಮುನ್ನಾದಿನ)

1 ಕೊರಿ 9:19–27

19ನಾನು ಎಲ್ಲಾ ವಿಷಯಗಳಲ್ಲಿ ಸ್ವತಂತ್ರನಾಗಿದ್ದರೂ ಹೆಚ್ಚು ಜನರನ್ನು ಸಂಪಾದಿಸಿಕೊಳ್ಳಬೇಕೆಂದು ನಾನು ಎಲ್ಲರಿಗೂ ದಾಸನಾದೆನು. 20ಯೆಹೂದ್ಯರನ್ನು ಸಂಪಾದಿಸಿಕೊಳ್ಳುವುದಕ್ಕೆ ಯೆಹೂದ್ಯರಿಗೆ ಯೆಹೂದ್ಯನಂತಾದೆನು. ನಾನು ಧರ್ಮಶಾಸ್ತ್ರಕ್ಕೆ ಅಧೀನನಲ್ಲದವನಾದರೂ, ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು ಸಂಪಾದಿಸಿಕೊಳ್ಳುವುದಕ್ಕಾಗಿ ಅವರಿಗೋಸ್ಕರ ಧರ್ಮಶಾಸ್ತ್ರಕ್ಕೆ ಅಧೀನನಂತಾದೆನು. 21ನಾನು ದೇವರ ಧರ್ಮಶಾಸ್ತ್ರ ಇಲ್ಲದವನಲ್ಲ, ಕ್ರಿಸ್ತನ ನಿಯಮಕ್ಕೊಳಗಾದವನೇ; ಆದರೂ ಧರ್ಮಶಾಸ್ತ್ರಕ್ಕೆ ಹೊರತಾದವರನ್ನು ಸಂಪಾದಿಸಿಕೊಳ್ಳುವುದಕ್ಕಾಗಿ ಧರ್ಮಶಾಸ್ತ್ರ ಬಾಹಿರನಂತಾದೆನು. 22ಬಲವಿಲ್ಲದವರನ್ನು ಸಂಪಾದಿಸುವುದಕ್ಕಾಗಿ ನಾನೂ ಬಲವಿಲ್ಲದವನಾದೆನು. ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಎಲ್ಲರಿಗೂ ಎಲ್ಲರಂತಾದೆನು. 23ಇದೆಲ್ಲವನ್ನು ಸುವಾರ್ತೆಗೋಸ್ಕರವೇ ಮಾಡಿ, ನಾನು ಇತರರ ಸಂಗಡ ಸುವಾರ್ತೆಯ ಆಶೀರ್ವಾದದಲ್ಲಿ ಪಾಲುಗಾರನಾಗಬೇಕೆಂದು ಇದನ್ನು ಮಾಡುತ್ತಿದ್ದೇನೆ. 24ಕ್ರೀಡಾಂಗಣದಲ್ಲಿ ಅನೇಕರು ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ, ಆದರೂ ಒಬ್ಬನು ಮಾತ್ರ ಜಯಮಾಲೆಯನ್ನು ಪಡೆಯುತ್ತಾನೆ ಎಂಬುದು ನಿಮಗೆ ತಿಳಿಯದೋ? ಅವರಂತೆ ನೀವೂ ಸಹ ಬಹುಮಾನವನ್ನು ಗೆಲ್ಲಬೇಕೆಂದು ಓಡಿರಿ. 25ಪ್ರತಿಯೊಬ್ಬ ಕ್ರೀಡಾಪಟುವು ತನ್ನ ತರಬೇತಿಯ ಎಲ್ಲಾ ವಿಷಯಗಳಲ್ಲಿ ಶಮೆದಮೆಯುಳ್ಳವನಾಗಿರುತ್ತಾನೆ. ಅವರು ಬಾಡಿ ಹೋಗುವ ಜಯಮಾಲೆಯನ್ನು ಹೊಂದುವುದಕ್ಕೆ ಸಾಧನೆ ಮಾಡುತ್ತಾರೆ; ನಾವಾದರೋ ಬಾಡಿಹೋಗದ ಜಯಮಾಲೆಯನ್ನು ಹೊಂದುವುದಕ್ಕೆ ಸಾಧನೆ ಮಾಡುವವರಾಗಿದ್ದೇವೆ. 26ಆದ್ದರಿಂದ ನಾನು ಸಹ ಗೊತ್ತುಗುರಿಯಿಲ್ಲದವನಂತೆ ಓಡುವುದಿಲ್ಲ; ಗಾಳಿಯೊಂದಿಗೆ ಗುದ್ದಾಡುವವನಂತೆ ಹೋರಾಡುವುದಿಲ್ಲ. 27ಇತರರಿಗೆ ಬೋಧಿಸಿದ ಮೇಲೆ ನಾನೇ ಅಯೋಗ್ಯನಾಗದಂತೆ, ನನ್ನ ದೇಹವನ್ನು ದಂಡಿಸಿ ಸ್ವಾಧಿನದಲ್ಲಿಟ್ಟುಕೊಳ್ಳುತ್ತೇನೆ.

ಸುವಾರ್ತೆ (ದೇವಪ್ರತ್ಯಕ್ಷತೆಯ ಮುನ್ನಾದಿನ)

ಲೂಕ 3:1–18

1ಚಕ್ರವರ್ತಿಯಾದ ತಿಬೇರಿಯನು ಆಳ್ವಿಕೆಗೆ ಬಂದ ಹದಿನೈದನೆಯ ವರ್ಷದಲ್ಲಿ, ಪೊಂತ್ಯ ಪಿಲಾತನು ಯೂದಾಯಕ್ಕೆ ಅಧಿಪತಿಯೂ, ಹೆರೋದನು ಗಲಿಲಾಯಕ್ಕೆ ಉಪರಾಜನೂ, ಅವನ ತಮ್ಮನಾದ ಫಿಲಿಪ್ಪನು ಇತುರಾಯ ತ್ರಕೋನೀತಿ ಸೀಮೆಗಳಿಗೆ ಉಪರಾಜನೂ, ಲುಸನ್ಯನು ಅಬಿಲೇನೆಗೆ ಉಪರಾಜನೂ ಆಗಿರುವಲ್ಲಿ 2ಅನ್ನನು ಮತ್ತು ಕಾಯಫನೂ ಮಹಾಯಾಜಕರಾಗಿದ್ದ ಕಾಲದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ಮರುಭೂಮಿಯಲ್ಲಿ ದೇವರ ವಾಕ್ಯವು ಪ್ರಕಟವಾಯಿತು. 3ಆತನು ಯೊರ್ದನ್ ಹೊಳೆಯ ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಜನರಿಗೆ, ನೀವು ಪಾಪ ಕ್ಷಮಾಪಣೆಗಾಗಿ ಪಶ್ಚಾತ್ತಾಪದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಸಾರಿ ಹೇಳುತ್ತಿದ್ದನು. 4ಇದು ಯೆಶಾಯನೆಂಬ ಪ್ರವಾದಿಯ ಗ್ರಂಥದಲ್ಲಿ ಬರೆದಿರುವ ಮಾತಿಗೆ ಅನುಸಾರವಾಗಿ ನಡೆಯಿತು. ಆ ಮಾತು ಏನೆಂದರೆ, “‘ಕರ್ತನ ದಾರಿಯನ್ನು ಸಿದ್ಧಮಾಡಿರಿ, ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ. ಎಲ್ಲಾ ಹಳ್ಳಕೊಳ್ಳಗಳು ಮುಚ್ಚಲ್ಪಡುವವು, ಎಲ್ಲಾ ಬೆಟ್ಟಗುಡ್ಡಗಳು ತಗ್ಗಿಸಲ್ಪಡುವುದು, ಡೊಂಕಾಗಿರುವಂಥದು ನೆಟ್ಟಗಾಗುವುದು, ಕೊರಕಲಾದ ದಾರಿಗಳು ಸಮವಾಗುವವು. ಎಲ್ಲಾ ಮನುಷ್ಯರೂ ದೇವರಿಂದಾಗುವ ರಕ್ಷಣೆಯನ್ನು ಕಾಣುವರು’ ಎಂಬುದಾಗಿ ಮರುಭೂಮಿಯಲ್ಲಿ ಕೂಗುವವನ ಶಬ್ದವದೆ” ಎಂಬುದೇ. 7ಹೀಗಿರಲಾಗಿ ಯೋಹಾನನು ತನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕಾಗಿ ಹೊರಟುಬಂದ ಜನರ ಗುಂಪಿಗೆ, “ಎಲೈ ಸರ್ಪಸಂತತಿಯವರೇ, ಮುಂದೆ ಕಾಣಬರುವ ದೇವರ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮಗೆ ಎಚ್ಚರಿಕೆಕೊಟ್ಟವರಾರು? 8ಹಾಗಾದರೆ ಮಾನಸಾಂತರಕ್ಕೆ ಯೋಗ್ಯವಾದ ಫಲಗಳನ್ನು ತೋರಿಸಿರಿ. ‘ಅಬ್ರಹಾಮನು ನಮಗೆ ತಂದೆಯಲ್ಲವೇ’ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿರಿ. ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದಲೂ ಮಕ್ಕಳನ್ನು ಹುಟ್ಟಿಸಬಲ್ಲನೆಂದು ನಿಮಗೆ ಹೇಳುತ್ತೇನೆ. 9ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು” ಎಂದು ಹೇಳಿದನು. 10ಆಗ ಆ ಗುಂಪಿನವರು, “ಹಾಗಾದರೆ ನಾವೇನು ಮಾಡಬೇಕು?” ಎಂದು ಆತನನ್ನು ಕೇಳಿದ್ದಕ್ಕೆ, 11ಆತನು, “ಎರಡು ಅಂಗಿಗಳುಳ್ಳವನು ಇಲ್ಲದವನಿಗೆ ಒಂದು ಕೊಡಲಿ; ಆಹಾರವುಳ್ಳವನು ಇಲ್ಲದವನಿಗೆ ಕೊಡಲಿ” ಎಂದು ಅವರಿಗೆ ಹೇಳಿದನು. 12ಸುಂಕ ವಸೂಲಿಗಾರರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಬಂದು, “ಗುರುವೇ, ನಾವೇನು ಮಾಡಬೇಕು” ಎಂದು ಆತನನ್ನು ಕೇಳಲು, 13ಆತನು, “ನೇಮಿಸಲ್ಪಟ್ಟಿದ್ದಕ್ಕಿಂತ ಹೆಚ್ಚಾಗಿ ಏನೂ ತೆಗೆದುಕೊಳ್ಳಬೇಡಿರಿ” ಎಂದು ಅವರಿಗೆ ಹೇಳಿದನು. 14ಸಿಪಾಯಿಗಳು ಸಹ ಬಂದು, “ನಾವು ಏನು ಮಾಡಬೇಕು” ಎಂದು ಆತನನ್ನು ಕೇಳಿದಾಗ ಆತನು ಅವರಿಗೆ, “ಯಾರನ್ನಾದರೂ ಬೆದರಿಸಿ ದುಡ್ಡು ಕಸಿದುಕೊಳ್ಳಬೇಡಿರಿ; ಯಾರ ಮೇಲೆಯೂ ಸುಳ್ಳುದೂರು ಹೇಳಬೇಡಿರಿ. ನಿಮ್ಮ ಸಂಬಳದಲ್ಲಿ ತೃಪ್ತರಾಗಿರಿ” ಎಂದು ಹೇಳಿದನು. 15ಹೀಗಿರುವಲ್ಲಿ ಇಸ್ರಾಯೇಲ್ ಜನರು ಬರಬೇಕಾದ ಕ್ರಿಸ್ತನನ್ನು ಎದುರು ನೋಡುವವರಾಗಿದ್ದದರಿಂದ ಅವರೆಲ್ಲರೂ ಯೋಹಾನನ ವಿಷಯವಾಗಿ ಇವನೇ ಆ ಕ್ರಿಸ್ತನಾಗಿರಬಹುದೋ ಏನೋ ಎಂದು ತಮ್ಮ ಮನಸ್ಸಿನಲ್ಲಿ ವಿಚಾರಮಾಡಿಕೊಳ್ಳುತ್ತಿರಲು, 16ಯೋಹಾನನು ಅವರೆಲ್ಲರಿಗೆ, “ನಾನಂತೂ ನಿಮಗೆ ನೀರಿನ ದೀಕ್ಷಾಸ್ನಾನ ಮಾಡಿಸುವವನು; ಆದರೆ ನನಗಿಂತ ಶಕ್ತನು ಬರುತ್ತಾನೆ. ಆತನ ಕೆರಗಳ ಬಾರನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ. ಆತನು ಪವಿತ್ರಾತ್ಮನಲ್ಲಿಯೂ ಮತ್ತು ಬೆಂಕಿಯಲ್ಲಿಯೂ ನಿಮಗೆ ದೀಕ್ಷಾಸ್ನಾನ ಮಾಡಿಸುವನು. 17ಆತನು ಮೊರವನ್ನು ಕೈಯಲ್ಲಿ ಹಿಡಿದಿದ್ದಾನೆ. ತನ್ನ ಕಣದಲ್ಲಿಯ ರಾಶಿಯನ್ನು ತೂರಿ ಹಸನುಮಾಡಿ ಗೋದಿಯನ್ನು ತನ್ನ ಕಣಜದಲ್ಲಿ ತುಂಬಿಕೊಳ್ಳುವನು. ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟುಬಿಡುವನು” ಎಂದು ಉತ್ತರಕೊಟ್ಟನು. 18ಇನ್ನು ಬೇರೆ ಅನೇಕ ಮಾತುಗಳಿಂದ ಆತನು ಇಸ್ರಾಯೇಲ್ ಜನರಿಗೆ ಬುದ್ಧಿಹೇಳಿ ಶುಭವಾರ್ತೆಯನ್ನು ಸಾರುತ್ತಿದ್ದನು.

ಜಲದ ಮಹಾ ಆಶೀರ್ವಾದ

ಯೆಶಾ 35:1–10

1ಅರಣ್ಯವೂ, ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವುದು. 2ಅದು ಸಮೃದ್ಧಿಯಾಗಿ ಹೂಬಿಟ್ಟು, ಉತ್ಸಾಹ ಧ್ವನಿಮಾಡುವಷ್ಟು ಉಲ್ಲಾಸಿಸುವುದು. ಲೆಬನೋನಿನ ಮಹಿಮೆಯೂ, ಕರ್ಮೆಲಿನ ಮತ್ತು ಶಾರೋನಿನ ವೈಭವವೂ ಅದಕ್ಕೆ ದೊರೆಯುವವು; ಇವೆಲ್ಲಾ ಯೆಹೋವನ ಮಹಿಮೆಯನ್ನೂ, ನಮ್ಮ ದೇವರ ವೈಭವವನ್ನೂ ಕಾಣುವವು. 3ಜೋಲುಬಿದ್ದ ಕೈಗಳನ್ನೂ, ನಡುಗುವ ಮೊಣಕಾಲುಗಳನ್ನೂ ಬಲಗೊಳಿಸಿರಿ. 4ಭಯಭ್ರಾಂತ ಹೃದಯದವರಿಗೆ, “ಬಲಗೊಳ್ಳಿರಿ, ಹೆದರಬೇಡಿರಿ! ಇಗೋ, ನಿಮ್ಮ ದೇವರು ಮುಯ್ಯಿತೀರಿಸುವುದಕ್ಕೂ, ದೈವಿಕ ಪ್ರತಿಫಲವನ್ನು ಕೊಡುವುದಕ್ಕೂ ಬರುವನು. ತಾನೇ ಬಂದು ನಿಮ್ಮನ್ನು ರಕ್ಷಿಸುವನು” ಎಂದು ಹೇಳಿರಿ. 5ಆಗ ಕುರುಡರ ಕಣ್ಣು ಕಾಣುವುದು, ಕಿವುಡರ ಕಿವಿ ಕೇಳುವುದು. 6ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವುದು, ಅರಣ್ಯದಲ್ಲಿ ಒರತೆಗಳು ಒಡೆಯುವವು, ಮರುಭೂಮಿಯಲ್ಲಿ ನದಿಗಳು ಹುಟ್ಟಿ ಹರಿಯುವವು. 7ಬೆಂಗಾಡು ಸರೋವರವಾಗುವುದು, ಒಣನೆಲದಲ್ಲಿ ಬುಗ್ಗೆಗಳು ಹರಿಯುವವು; ನರಿಗಳು ಮಲಗುತ್ತಿದ್ದ ಸ್ಥಳವು ಆಪುಜಂಬುಗಳ ಪ್ರದೇಶವಾಗುವುದು. 8ಅಲ್ಲಿ ರಾಜಮಾರ್ಗವಿರುವುದು. ಅದು ಪರಿಶುದ್ಧ ಮಾರ್ಗ ಎನಿಸಿಕೊಳ್ಳುವುದು. ಯಾವ ಅಶುದ್ಧನೂ ಅದರ ಮೇಲೆ ಹಾದುಹೋಗನು. ಆದರೆ ಅದು ದೇವಜನರಿಗಾಗಿಯೇ ಇರುವುದು. ಅಲ್ಲಿ ಹೋಗುವ ಮೂಢನೂ ದಾರಿತಪ್ಪನು. 9ಸಿಂಹವು ಅಲ್ಲಿ ಇರದು. ಇಲ್ಲವೆ ಕ್ರೂರವಾದ ಮೃಗಗಳು ಅದರ ಮೇಲೆ ಹೋಗುವುದಿಲ್ಲ. ಅದು ಅಲ್ಲಿ ಕಾಣುವುದೇ ಇಲ್ಲ. ಬಿಡುಗಡೆಯಾದವರೇ ಅಲ್ಲಿ ನಡೆಯುವರು. 10ಯೆಹೋವನು ವಿಮೋಚಿಸಿದವರು ಹಿಂದಿರುಗಿ, ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು ಉತ್ಸಾಹಧ್ವನಿಯೊಡನೆ ಚೀಯೋನಿಗೆ ಸೇರುವರು. ಅವರು ಹರ್ಷಾನಂದಗಳನ್ನು ಅನುಭವಿಸುವರು, ದುಃಖವೂ, ನಿಟ್ಟುಸಿರೂ ಓಡಿಹೋಗುವವು.

ಜಲದ ಮಹಾ ಆಶೀರ್ವಾದ

ಯೆಶಾ 55:1–13

1“ಎಲೈ, ಬಾಯಾರಿದ ಸಕಲಜನರೇ, ನೀರಿನ ಬಳಿಗೆ ಬನ್ನಿರಿ, ಹಣವಿಲ್ಲದವನು ಸಹ ಬರಲಿ! ಬನ್ನಿರಿ, ಕೊಂಡುಕೊಳ್ಳಿರಿ, ಊಟ ಮಾಡಿರಿ! ಬಂದು ದ್ರಾಕ್ಷಾರಸವನ್ನೂ, ಹಾಲನ್ನೂ ಹಣಕೊಡದೆ, ಕ್ರಯವಿಲ್ಲದೆ ತೆಗೆದುಕೊಳ್ಳಿರಿ. 2ಆಹಾರವಲ್ಲದ್ದಕ್ಕೆ ಹಣವನ್ನು ಏಕೆ ವ್ಯರ್ಥ ಮಾಡುತ್ತೀರಿ? ತೃಪ್ತಿಗೊಳಿಸದ ಪದಾರ್ಥಕ್ಕೆ ನಿಮ್ಮ ದುಡಿತವನ್ನು ವೆಚ್ಚಮಾಡುವುದೇಕೆ? ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ, ಒಳ್ಳೆಯದನ್ನೇ ಉಂಡು ಮೃಷ್ಟಾನ್ನದಲ್ಲಿ ಆನಂದಪಡಿರಿ. 3ಕಿವಿಯನ್ನು ನನ್ನ ಕಡೆಗೆ ತಿರುಗಿಸಿರಿ, ನನ್ನ ಬಳಿಗೆ ಬನ್ನಿರಿ; ಆಲಿಸಿದರೆ ಬದುಕಿ ಬಾಳುವಿರಿ. ನಾನು ದಾವೀದನಿಗೆ ಖಂಡಿತವಾಗಿ ವಾಗ್ದಾನಮಾಡಿದ ಕೃಪಾವರಗಳನ್ನು ನಿಮಗೆ ಕೊಡುತ್ತೇನೆ” ಎಂಬ ಶಾಶ್ವತವಾದ ಒಡಂಬಡಿಕೆಯನ್ನು ನಿಮ್ಮೊಂದಿಗೆ ಮಾಡಿಕೊಳ್ಳುವೆನು. 4ಇಗೋ, ನಾನು ಅವನನ್ನು ಜನಾಂಗಗಳಿಗೆ ಸಾಕ್ಷಿಯನ್ನಾಗಿಯೂ, ನಾಯಕನನ್ನಾಗಿಯೂ ಅಧಿಪತಿಯನ್ನಾಗಿಯೂ ನೇಮಿಸಿದೆನು. 5ಎಲೈ, ಇಸ್ರಾಯೇಲೇ, ಅವನಂತೆ ನೀನೂ ನಿನಗೆ ಗೊತ್ತಿಲ್ಲದ ಜನಾಂಗವನ್ನು ನಿನ್ನ ಅಧೀನಕ್ಕೆ ಕರೆಯುವಿ, ಇಸ್ರಾಯೇಲಿನ ಸದಮಲಸ್ವಾಮಿ ಎನಿಸಿಕೊಳ್ಳುವ ನಿನ್ನ ದೇವರಾದ ಯೆಹೋವನು ನಿನಗೆ ವೈಭವ ಕೊಟ್ಟಿರುವುದನ್ನು ನೋಡಿ ನಿನ್ನನ್ನು ತಿಳಿಯದ ಜನಾಂಗವು ನಿನ್ನ ಆಶ್ರಯಕ್ಕೆ ಓಡಿಬರುವುದು. 6ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ, ಆತನು ಸಮೀಪದಲ್ಲಿರುವಾಗ ಆತನಿಗೆ ಬಿನ್ನಹಮಾಡಿರಿ. 7ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ, ಕೆಡುಕನು ತನ್ನ ದುರಾಲೋಚನೆಗಳನ್ನು ತ್ಯಜಿಸಲಿ; ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ, ಆತನು ಅವನನ್ನು ಕರುಣಿಸುವನು; ನಮ್ಮ ದೇವರನ್ನು ಆಶ್ರಯಿಸಲಿ, ಆತನು ಮಹಾಕೃಪೆಯಿಂದ ಕ್ಷಮಿಸುವನು. 8ಯೆಹೋವನು ಹೀಗೆನ್ನುತ್ತಾನೆ, “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. 9ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ, ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ. 10ಮಳೆಯೂ, ಹಿಮವೂ ಆಕಾಶದಿಂದ ಬಿದ್ದು, ಭೂಮಿಯನ್ನು ತೋಯಿಸಿ, ಹಸರುಗೊಳಿಸಿ ಫಲಿಸುವಂತೆ ಮಾಡಿ, ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಆಹಾರವನ್ನು ಒದಗಿಸಿದ ಹೊರತು ಹೇಗೆ ಆಕಾಶಕ್ಕೆ ಸುಮ್ಮನೆ ಹಿಂದಿರುಗುವುದಿಲ್ಲವೋ, 11ಹಾಗೆಯೇ ನನ್ನ ಬಾಯಿಂದ ಹೊರಟ ಮಾತು, ನನ್ನ ಇಷ್ಟಾರ್ಥವನ್ನು ನೆರವೇರಿಸಿ, ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವುದಿಲ್ಲ. 12ನೀವು ಆನಂದಭರಿತರಾಗಿ ಹೊರಡುವಿರಿ, ಸಮಾಧಾನದಿಂದ ಮೆರವಣಿಗೆಯಾಗಿ ಬರುವಿರಿ; ಬೆಟ್ಟ ಗುಡ್ಡಗಳು ನಿಮ್ಮ ಮುಂದೆ ಜಯಘೋಷ ಮಾಡುವವು. 13ಮುಳ್ಳಿಗೆ ಬದಲಾಗಿ ತುರಾಯಿಯೂ, ದತ್ತೂರಿಗೆ ಪ್ರತಿಯಾಗಿ ಸುಗಂಧವೂ ಬೆಳೆಯುವವು; ಆ ವನವು ಯೆಹೋವನ ನಾಮಸ್ಮರಣೆಗೆ ಶಾಶ್ವತವಾದ ಗುರುತಾಗಿ ಎಂದಿಗೂ ಅಳಿಯದಿರುವುದು.”

ಜಲದ ಮಹಾ ಆಶೀರ್ವಾದ

ಯೆಶಾ 12:3–6

3ಮತ್ತು ರಕ್ಷಣೆಯೆಂಬ ಬಾವಿಗಳಿಂದ ಉಲ್ಲಾಸದೊಡನೆ ನೀವು ನೀರನ್ನು ಸೇದುವಿರಿ. 4ಆ ದಿನದಲ್ಲಿ ನೀವು ಹೇಳುವುದೇನೆಂದರೆ, “ಯೆಹೋವನಿಗೆ ಕೃತಜ್ಞತಾ ಸ್ತುತಿಮಾಡಿರಿ, ಆತನ ನಾಮದ ಮಹತ್ವವನ್ನು ವರ್ಣಿಸಿರಿ, ಜನಾಂಗಗಳಲ್ಲಿ ಆತನ ಕೃತ್ಯಗಳನ್ನು ಪ್ರಸಿದ್ಧಿಪಡಿಸಿರಿ, ಆತನ ನಾಮವು ಉನ್ನತೋನ್ನತ ಎಂದು ಜ್ಞಾಪಕಪಡಿಸಿರಿ. 5ಯೆಹೋವನನ್ನು ಗಾನದಿಂದ ಸ್ತುತಿಸಿರಿ; ಆತನು ಮಹಿಮೆಯ ಕಾರ್ಯಗಳನ್ನು ಮಾಡಿದ್ದಾನೆ; ಇದು ಭೂಮಂಡಲದಲ್ಲೆಲ್ಲಾ ತಿಳಿದಿರಲಿ. 6ಚೀಯೋನಿನ ನಿವಾಸಿಗಳೇ, ಉತ್ಸಾಹ ಧ್ವನಿಮಾಡಿರಿ; ಜಯಘೋಷಮಾಡಿರಿ. ಇಸ್ರಾಯೇಲರ ಪರಿಶುದ್ಧನು ನಿಮ್ಮ ಮಧ್ಯದಲ್ಲಿ ಮಹತ್ವವುಳ್ಳವನಾಗಿದ್ದಾನೆ” ಎಂಬುದೇ.

ಜಲದ ಮಹಾ ಆಶೀರ್ವಾದ (ಪತ್ರಿಕೆ)

1 ಕೊರಿ 10:1–4

1ಸಹೋದರರೇ, ನಾನು ನಿಮಗೆ ತಿಳಿಸಲು ಅಪೇಕ್ಷಿಸುವ ಸಂಗತಿ ಏನೆಂದರೆ, ನಮ್ಮ ಪೂರ್ವಿಕರೆಲ್ಲರೂ ಮೇಘದ ಅಡಿಯಲ್ಲಿದ್ದು ಸಮುದ್ರವನ್ನು ದಾಟಿಹೋದರು. 2ಅವರೆಲ್ಲರೂ ಮೋಶೆಯನ್ನು ಹಿಂಬಾಲಿಸುವುದಕ್ಕಾಗಿ ಮೇಘದಲ್ಲಿಯೂ ಸಮುದ್ರದಲ್ಲಿಯೂ ದೀಕ್ಷಾಸ್ನಾನವನ್ನು ಹೊಂದಿದರು. 3ಅವರೆಲ್ಲರೂ ಆತ್ಮೀಕವಾದ ಒಂದೇ ಆಹಾರವನ್ನು ತಿಂದರು. 4ಅವರೆಲ್ಲರೂ ದೈವಿಕವಾದ ಒಂದೇ ನೀರನ್ನು ಕುಡಿದರು. ಹೇಗೆಂದರೆ ಅವರನ್ನು ಹಿಂಬಾಲಿಸುತ್ತಿದ್ದ ದೈವಿಕವಾದ ಬಂಡೆಯೊಳಗಿಂದ ಬಂದ ನೀರನ್ನು ಕುಡಿಯುತ್ತಿದ್ದರು. ಆ ಬಂಡೆ ಕ್ರಿಸ್ತನೇ.

ಜಲದ ಮಹಾ ಆಶೀರ್ವಾದ (ಸುವಾರ್ತೆ)

ಮಾರ್ಕ 1:9–11

9ಆ ದಿನಗಳಲ್ಲಿ ಯೇಸು ಗಲಿಲಾಯ ಸೀಮೆಗೆ ಸೇರಿದ ನಜರೇತೆಂಬ ಊರಿನಿಂದ ಬಂದು ಯೊರ್ದನ್ ಹೊಳೆಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡನು. 10ಯೇಸುವು ನೀರಿನೊಳಗಿನಿಂದ ಮೇಲಕ್ಕೆ ಬಂದ ಕೂಡಲೇ ಪರಲೋಕವು ತೆರೆಯಲ್ಪಟ್ಟು ದೇವರಾತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿಯುವುದನ್ನು ಕಂಡನು. 11ಆಗ “ನೀನು ಪ್ರಿಯನಾಗಿರುವ ನನ್ನ ಮಗನು, ನಾನು ನಿನ್ನನ್ನು ಬಹಳವಾಗಿ ಮೆಚ್ಚಿದ್ದೇನೆ” ಎಂಬ ದೈವ ವಾಣಿ ಪರಲೋಕದಿಂದ ಕೇಳಿಸಿತು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 5 ಜನವರಿ ಎಂದರೆ ನಾಗರಿಕ ಪಂಚಾಂಗದ 18 ಜನವರಿ. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು