Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜನವರಿ 2027 › 17 ಜನವರಿ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 17 ಜನವರಿ 2027

ಭಾನುವಾರ · ಸಾಮಾನ್ಯ ಕಾಲದ ಎರಡನೆಯ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ ಎರಡನೆಯ ಭಾನುವಾರ

ಭಾನುವಾರ · ಆರಾಧನಾ ಬಣ್ಣ: ಹಸಿರು

ದಿನದ ವಾಚನಗಳು

ಮೊದಲನೆಯ ವಾಚನ

1 ಸಮು 3:3–10, 19

3ಸಮುವೇಲನು ಯೆಹೋವನ ಮಂದಿರದಲ್ಲಿ ದೇವರ ಮಂಜೂಷವಿದ್ದ ಸ್ಥಳದಲ್ಲಿ ಮಲಗಿದ್ದನು. ಆಗ ದೇವದೀಪವು ಇನ್ನೂ ಉರಿಯುತ್ತಿತ್ತು. 4ಯೆಹೋವನು ಸಮುವೇಲನನ್ನು ಕರೆದನು; ಸಮುವೇಲನು “ಇಗೋ ಬಂದೆ” ಎಂದು ಉತ್ತರಕೊಟ್ಟು ಒಡನೆ ಏಲಿಯ ಬಳಿಗೆ ಹೋಗಿ, 5“ಇಗೋ ಬಂದಿದ್ದೇನೆ; ನೀನು ನನ್ನನ್ನು ಕರೆದೆಯಲ್ಲವೇ?” ಅಂದನು. ಆಗ ಏಲಿಯು, “ನಾನು ನಿನ್ನನ್ನು ಕರೆಯಲಿಲ್ಲ, ಹೋಗಿ ಮಲಗಿಕೋ” ಅಂದನು. ಸಮುವೇಲನು ಹೋಗಿ ಮಲಗಿದನು. 6ಯೆಹೋವನು ತಿರುಗಿ, “ಸಮುವೇಲನೇ” ಎಂದು ಕರೆದನು. ಸಮುವೇಲನು ಕೂಡಲೆ ಎದ್ದು ಏಲಿಯ ಬಳಿಗೆ ಹೋಗಿ, “ಇಗೋ, ಬಂದಿದ್ದೇನೆ; ನೀನು ನನ್ನನ್ನು ಕರೆದೆಯಲ್ಲಾ” ಅನ್ನಲು ಅವನು, “ನನ್ನ ಮಗನೇ, ನಾನು ನಿನ್ನನ್ನು ಕರೆಯಲಿಲ್ಲಾ, ಹೋಗಿ ಮಲಗಿಕೋ” ಎಂದನು. 7ಆವರೆಗೂ ಸಮುವೇಲನಿಗೆ ಯೆಹೋವನ ಅನುಭವವಿರಲಿಲ್ಲ; ಅವನು ದೈವೋಕ್ತಿಗಳನ್ನು ಹೊಂದಿರಲಿಲ್ಲ. 8ಯೆಹೋವನು ಸಮುವೇಲನನ್ನು ಮೂರನೆಯ ಸಾರಿ ಕರೆದನು. ಅವನು ತಟ್ಟನೆ ಏಲಿಯ ಹತ್ತಿರ ಹೋಗಿ, “ಇಗೋ, ಬಂದಿದ್ದೇನೆ, ನನ್ನನ್ನು ಕರೆದಿಯಲ್ಲಾ” ಅನ್ನಲು, ಹುಡುಗನನ್ನು ಕರೆದವನು ಯೆಹೋವನೇ ಎಂದು ಏಲಿಯು ತಿಳಿದು ಅವನಿಗೆ, “ಹೋಗಿ ಮಲಗಿಕೋ; 9ಪುನಃ ಆತನು ನಿನ್ನನ್ನು ಕರೆದರೆ ಯೆಹೋವನೇ, ಅಪ್ಪಣೆಯಾಗಲಿ, ನಿನ್ನ ದಾಸನು ಕೇಳಿಸಿಕೊಳ್ಳುತ್ತಿದ್ದಾನೆ” ಎಂದು ಹೇಳು ಅಂದನು. ಸಮುವೇಲನು ತಿರುಗಿ ಹೋಗಿ ತನ್ನ ಸ್ಥಳದಲ್ಲಿ ಮಲಗಿಕೊಂಡನು. 10ಯೆಹೋವನು ಪ್ರತ್ಯಕ್ಷನಾಗಿ ಮುಂಚಿನಂತೆಯೇ “ಸಮುವೇಲನೇ, ಸಮುವೇಲನೇ” ಅಂದನು. ಸಮುವೇಲನು, “ಅಪ್ಪಣೆಯಾಗಲಿ, ನಿನ್ನ ದಾಸನು ಕೇಳಿಸಿಕೊಳ್ಳುತ್ತಿದ್ದಾನೆ” ಎಂದನು. 19ಸಮುವೇಲನು ದೊಡ್ಡವನಾಗುತ್ತಾ ಬಂದನು. ಯೆಹೋವನು ಅವನೊಡನೆ ಇದ್ದುದ್ದರಿಂದ ಅವನ ಪ್ರವಾದನೆಗಳಲ್ಲಿ ಒಂದೂ ಬಿದ್ದುಹೋಗಲಿಲ್ಲ.

ಪ್ರತಿವಚನ ಕೀರ್ತನೆ

ಕೀರ್ತ 40:2–3, 6–9

2ನನ್ನನ್ನು ನಾಶನದ ಗುಂಡಿಯೊಳಗಿಂದ ಎತ್ತಿದನು; ಕೆಸರಿನೊಳಗಿಂದ ನನ್ನನ್ನು ತೆಗೆದು ಬಂಡೆಯ ಮೇಲೆ ನಿಲ್ಲಿಸಿ, ನಾನು ದೃಢವಾಗಿ ಹೆಜ್ಜೆಯಿಡುವಂತೆ ಮಾಡಿದನು. 3ಆತನು ನನ್ನ ಬಾಯಲ್ಲಿ ನೂತನ ಕೀರ್ತನೆಯನ್ನು ಹುಟ್ಟಿಸಿದ್ದಾನೆ; ಅದು ನಮ್ಮ ದೇವರ ಸ್ತೋತ್ರವೇ. ಆತನ ಮಹತ್ಕಾರ್ಯಗಳನ್ನು ನೋಡಿದ ಅನೇಕರು ಭಯಭಕ್ತಿಯುಳ್ಳವರಾಗಿ ಯೆಹೋವನಲ್ಲಿ ನಂಬಿಕೆಯಿಡುವರು. 6ಯಜ್ಞನೈವೇದ್ಯಗಳು ನಿನಗೆ ಇಷ್ಟವಿಲ್ಲ; ಸರ್ವಾಂಗಹೋಮಗಳನ್ನಾಗಲಿ, ದೋಷಪರಿಹಾರಕ ಯಜ್ಞಗಳನ್ನಾಗಲಿ ನೀನು ಅಪೇಕ್ಷಿಸಲಿಲ್ಲ. ಆದರೆ ಶ್ರವಣಶಕ್ತಿಯನ್ನು ನನಗೆ ಅನುಗ್ರಹಿಸಿದಿ. 7ಆಗ ನಾನು, “ಇಗೋ ಇದ್ದೇನೆ; ನನ್ನ ಕರ್ತವ್ಯವು ಗ್ರಂಥದ ಸುರುಳಿಯಲ್ಲಿ ಬರೆದದೆ. 8ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವುದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ” ಅಂದೆನು. 9ನೀನು ನೀತಿಯನ್ನು ಸಾಧಿಸಿದ ಶುಭಸಮಾಚಾರವನ್ನು, ಧಾರಳವಾಗಿ ಮಹಾಸಭೆಯಲ್ಲಿ ಪ್ರಕಟಿಸಿದೆನು; ಯೆಹೋವನೇ, ನೀನೇ ಬಲ್ಲೆ.

ಎರಡನೆಯ ವಾಚನ

1 ಕೊರಿ 6:13–15, 17–20

13“ಭೋಜನ ಪದಾರ್ಥಗಳು ಹೊಟ್ಟೆಗಾಗಿಯೂ ಮತ್ತು ಹೊಟ್ಟೆಯು ಭೋಜನಪದಾರ್ಥಗಳಿಗಾಗಿಯೂ” ಇವೆ. ದೇವರು ಇವೆರಡನ್ನೂ ನಾಶಮಾಡುವನು. ಆದರೆ ದೇಹವು ಜಾರತ್ವಕೋಸ್ಕರ ಇರುವಂಥದಲ್ಲ. ಕರ್ತನಿಗೋಸ್ಕರ ಇರುವುದಾಗಿದೆ. ಕರ್ತನು ದೇಹಕೋಸ್ಕರ ಒದಗಿಸಿಕೊಡುತ್ತಾನೆ. 14ದೇವರು ಕರ್ತನನ್ನು ತನ್ನ ಶಕ್ತಿಯಿಂದ ಪುನರುತ್ಥಾನಗೊಳಿಸಿದ ಹಾಗೆಯೇ ನಮ್ಮನ್ನೂ ತನ್ನ ಶಕ್ತಿಯಿಂದ ಎಬ್ಬಿಸುವನು. 15ನಿಮ್ಮ ದೇಹಗಳು ಕ್ರಿಸ್ತನ ಅಂಗಗಳಾಗಿವೆ ಎಂಬುದು ನಿಮಗೆ ತಿಳಿಯದೋ? ಹೀಗಿರಲಾಗಿ ಕ್ರಿಸ್ತನ ಅಂಗಗಳಾಗಿರುವಂಥವುಗಳನ್ನು ತೆಗೆದು ವೇಶ್ಯೆಯ ಅಂಗಗಳೊಡನೆ ಸೇರಿಸುವುದು ಸರಿಯೋ? ಎಂದಿಗೂ ಹಾಗೆ ಮಾಡಬಾರದು 17ಆದರೆ ಕರ್ತನೊಂದಿಗೆ ಸೇರಿಕೊಂಡವನು ಆತನೊಂದಿಗೆ ಒಂದೇ ಆತ್ಮವಾಗಿದ್ದಾನೆ. 18ಜಾರತ್ವವನ್ನು ಬಿಟ್ಟು ದೂರ ಓಡಿಹೋಗಿರಿ. “ಮನುಷ್ಯರು ಮಾಡುವ ಇತರ ಪಾಪಕೃತ್ಯಗಳು ದೇಹದ ಹೊರಗಿವೆ”, ಆದರೆ ಜಾರತ್ವ ಮಾಡುವವನು ತನ್ನ ಸ್ವಂತ ದೇಹಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ. 19ನೀವು ನಿಮ್ಮ ಸ್ವಂತ ಸೊತ್ತಲ್ಲವೆಂದು ಮತ್ತು ದೇವರಿಂದ ದಾನವಾಗಿ ಲಭಿಸಿದ ಪವಿತ್ರಾತ್ಮನು ನಿಮ್ಮೊಳಗೆ ನೆಲೆಗೊಂಡಿರುವುದರಿಂದ ನಿಮ್ಮ ದೇಹವು ದೇವರ ಪವಿತ್ರಾಲಯವಾಗಿದೆಂಬುದು ನಿಮಗೆ ತಿಳಿಯದೋ? 20ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು ಆದಕಾರಣ ನಿಮ್ಮ ದೇಹದ ಮೂಲಕ ದೇವರನ್ನು ಮಹಿಮೆಪಡಿಸಿರಿ.

ಸುವಾರ್ತೆ

ಯೋಹಾ 1:35–42

35ಮರುದಿನ ಪುನಃ ಯೋಹಾನನೂ ತನ್ನ ಇಬ್ಬರು ಶಿಷ್ಯರೊಂದಿಗೆ ನಿಂತುಕೊಂಡಿದ್ದನು, 36ಆಗ ಅಲ್ಲಿ ಯೇಸು ಹೋಗುತ್ತಿರುವುದನ್ನು ನೋಡಿ, ಯೋಹಾನನೂ ಅಗೋ, “ಯಜ್ಞಕ್ಕೆ ದೇವರು ನೇಮಿಸಿರುವ ಕುರಿಮರಿ” ಎಂದು ಹೇಳಿದನು. 37ಆ ಇಬ್ಬರು ಶಿಷ್ಯರು ಯೋಹಾನನು ಹೇಳಿದ್ದನ್ನು ಕೇಳಿ ಯೇಸುವನ್ನು ಹಿಂಬಾಲಿಸಿದರು. 38ಯೇಸು ಹಿಂತಿರುಗಿ ತನ್ನನ್ನು ಹಿಂಬಾಲಿಸುತ್ತಿದ್ದ ಅವರನ್ನು ನೋಡಿ, “ನಿಮಗೆ ಏನು ಬೇಕು?” ಎಂದು ಕೇಳಲು ಅವರು, “ರಬ್ಬಿಯೇ, (ಅಂದರೆ ಗುರುವೇ) ನೀನು ವಾಸಿಸುವುದು ಎಲ್ಲಿ?” ಎಂದು ಕೇಳಿದರು. 39ಆತನು ಅವರಿಗೆ, “ನೀವೇ ಬಂದು ನೋಡಿರಿ” ಎಂದು ಹೇಳಲು, ಅವರು ಹೋಗಿ ಆತನು ವಾಸಿಸುತ್ತಿದ್ದ ಸ್ಥಳವನ್ನು ನೋಡಿ ಆ ದಿನ ಆತನ ಸಂಗಡ ಇದ್ದರು. ಆಗ ಹೆಚ್ಚುಕಡಿಮೆ ಸಂಜೆ ನಾಲ್ಕು ಗಂಟೆಯಾಗಿತ್ತು. 40ಯೋಹಾನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದ ಆ ಇಬ್ಬರಲ್ಲಿ ಸೀಮೋನ್ ಪೇತ್ರನ ತಮ್ಮನಾದ ಅಂದ್ರೆಯನು ಒಬ್ಬನು. 41ಇವನು ಮೊದಲು ತನ್ನ ಅಣ್ಣನಾದ ಸೀಮೋನನನ್ನು ಕಂಡು ಅವನಿಗೆ “ನಾವು ಮೆಸ್ಸೀಯನನ್ನು ಕಂಡುಕೊಂಡೆವು” (ಮೆಸ್ಸೀಯನು ಎಂದರೆ ಕ್ರಿಸ್ತನು) ಎಂದು ಹೇಳಿ, 42ಅವನನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದನು. ಯೇಸು ಅವನನ್ನು ನೋಡಿ “ನೀನು ಯೋಹಾನನ ಮಗನಾದ ಸೀಮೋನನು. ಇನ್ನು ಮೇಲೆ ನೀನು ‘ಕೇಫ’ ಎಂದು ಕರೆಯಲ್ಪಡುವಿ” ಎಂದು ಹೇಳಿದನು. (ಕೇಫ ಎಂದರೆ ಪೇತ್ರ ಇಲ್ಲವೆ ಬಂಡೆ ಎಂದು ಅರ್ಥ)

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು