ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜನವರಿ 2027 › 3 ಜನವರಿ
ಆರ್ಥೊಡಾಕ್ಸ್ ಪಂಚಾಂಗ · ಡಿಸೆಂಬರ್ 21 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 3 ಜನವರಿ 2027
ಭಾನುವಾರ · ಸ್ವರ 6
ಹಬ್ಬಗಳು ಮತ್ತು ಸಂತರು
ಪಂಚಾಶತ್ತಮದ ನಂತರದ 31ನೇ ಭಾನುವಾರ
ಕ್ರಿಸ್ತ ಜನನಕ್ಕೆ ಮುಂಚಿನ ಭಾನುವಾರ
ಕ್ರಿಸ್ತ ಜನನದ ಉಪವಾಸ
ಉಪವಾಸ: ಎಣ್ಣೆಯೊಂದಿಗೆ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಸಂಧ್ಯಾ ಪ್ರಾರ್ಥನೆ: ವಾಚನ
14ಅಬ್ರಾಮನು ತನ್ನ ತಮ್ಮನ ಮಗನು ಸೆರೆಗೆ ಸಿಕ್ಕಿದ್ದನ್ನು ಕೇಳಿ ತನ್ನ ಮನೆಯಲ್ಲೇ ಹುಟ್ಟಿ ಬೆಳೆದ ಶಿಕ್ಷಿತರಾದ ಮುನ್ನೂರ ಹದಿನೆಂಟು ಮಂದಿ ಆಳುಗಳನ್ನು ಯುದ್ಧಕ್ಕೆ ಸಿದ್ಧಮಾಡಿಕೊಂಡು ಹೊರಟು ಆ ರಾಜರನ್ನು ದಾನೂರಿನವರೆಗೂ ಹಿಂದಟ್ಟಿದನು. 15ಅವನು ರಾತ್ರಿ ವೇಳೆಯಲ್ಲಿ ತನ್ನ ದಂಡನ್ನು ಎರಡು ಭಾಗಮಾಡಿ ತನ್ನ ಭಟರೊಡನೆ ಅವರ ಮೇಲೆ ಬಿದ್ದು, ಹೊಡೆದು, ದಮಸ್ಕ ಪಟ್ಟಣದ ಉತ್ತರಕಡೆಯಲ್ಲಿರುವ ಹೋಬಾ ಊರಿನ ತನಕ ಅವರನ್ನು ಹಿಂದಟ್ಟಿದ್ದನು. 16ರಾಜರು ಅಪಹರಿಸಿದ್ದ ಎಲ್ಲಾ ವಸ್ತುಗಳನ್ನು ಅವನು ತಿರುಗಿ ಪಡೆದುಕೊಂಡನು. ತನ್ನ ತಮ್ಮನ ಮಗನಾದ ಲೋಟನನ್ನೂ ಅವನ ಆಸ್ತಿಯನ್ನೂ ಬಿಡಿಸಿಕೊಂಡದ್ದಲ್ಲದೆ, ಸೆರೆಯಲ್ಲಿದ್ದ ಸ್ತ್ರೀಯರನ್ನೂ, ಉಳಿದಿದ್ದ ಜನರನ್ನು ಕರೆದುಕೊಂಡು ಬಂದನು. 17ಅವನು ಕೆದೊರ್ಲಗೋಮರನ್ನೂ ಅವನೊಂದಿಗೆ ಇದ್ದ ರಾಜರನ್ನೂ ಸೋಲಿಸಿ ಬಂದ ಮೇಲೆ ಸೊದೋಮಿನ ಅರಸನು ಅವನನ್ನು ಅರಸನ ತಗ್ಗು ಎನ್ನಿಸಿಕೊಳ್ಳುವ ಶಾವೆ ತಗ್ಗಿನಲ್ಲಿ ಅಬ್ರಾಮನನ್ನು ಎದುರುಗೊಂಡನು. 18ಸಾಲೇಮಿನ ಅರಸನಾದ ಮೆಲ್ಕೀಚೆದೆಕನು ಸಹ ಬಂದು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ಕೊಟ್ಟನು. ಇವನು ಪರಾತ್ಪರನಾದ ದೇವರ ಯಾಜಕನಾಗಿದ್ದನು. 19ಇವನು ಅಬ್ರಾಮನನ್ನು ಆಶೀರ್ವದಿಸಿ, “ಭೂಮ್ಯಾಕಾಶವನ್ನು ನಿರ್ಮಾಣಮಾಡಿದ ಪರಾತ್ಪರನಾದ ದೇವರ ಆಶೀರ್ವಾದವು ಅಬ್ರಾಮನಿಗೆ ದೊರೆಯಲಿ; 20ಪರಾತ್ಪರನಾದ ದೇವರು ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ್ದಕ್ಕಾಗಿ ಆತನಿಗೆ ಸ್ತೋತ್ರ” ಎಂದು ಹೇಳಿದನು. ಅಬ್ರಾಮನು ತಾನು ಗೆದ್ದು ತಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಯಾಜಕನಿಗೆ ಕೊಟ್ಟನು.
ಸಂಧ್ಯಾ ಪ್ರಾರ್ಥನೆ: ವಾಚನ
8ಆ ದೇಶವನ್ನು ನಿಮಗೇ ಕೊಟ್ಟಿದ್ದೇನೆ. ಯೆಹೋವನೆಂಬ ನಾನು ನಿಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್, ಯಾಕೋಬರಿಗೂ ಮತ್ತು ಅವರ ಸಂತತಿಯವರಿಗೂ ಆ ದೇಶವನ್ನು ಕೊಡುತ್ತೇನೆಂದು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದೆನಲ್ಲಾ. ಅದರಲ್ಲಿ ಪ್ರವೇಶಮಾಡಿ ಸ್ವಾಧೀನಮಾಡಿಕೊಳ್ಳಿರಿ’” ಎಂದು ಅಜ್ಞಾಪಿಸಿದನು. 9ಆ ಕಾಲದಲ್ಲಿ ನಾನು ನಿಮ್ಮ ಸಂಗಡ ಮಾತನಾಡಿ, “ನಿಮ್ಮ ಹೊಣೆಯನ್ನು ನಾನೊಬ್ಬನೇ ಹೊರುವುದು ಅಸಾಧ್ಯ. 10ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಅಧಿಕ ಸಂಖ್ಯೆಯಲ್ಲಿ ಹೆಚ್ಚಿಸಿದ್ದರಿಂದ ನೀವು ಈಗ ಆಕಾಶದ ನಕ್ಷತ್ರಗಳಷ್ಟು ಅಸಂಖ್ಯರಾಗಿದ್ದೀರಿ. 11ನೀವು ಈಗ ಇರುವುದಕ್ಕಿಂತಲೂ ಇನ್ನು ಸಾವಿರದಷ್ಟಾಗುವಂತೆ ನಿಮ್ಮ ಪೂರ್ವಿಕರ ದೇವರಾದ ಯೆಹೋವನು ನಿಮ್ಮನ್ನು ಹೆಚ್ಚಿಸಿ, ತಾನು ವಾಗ್ದಾನಮಾಡಿದ ಪ್ರಕಾರವೇ ನಿಮಗೆ ಶುಭಗಳನ್ನು ಅನುಗ್ರಹಿಸಲಿ. 15ಆಗ ನಾನು ನಿಮ್ಮಲ್ಲಿ ಪ್ರಸಿದ್ಧರಾದ, ಬುದ್ಧಿವಂತರನ್ನು ಆರಿಸಿಕೊಂಡು ಒಂದೊಂದು ಕುಲದಲ್ಲಿ ಸಾವಿರ ಜನರಿಗೆ ಒಬ್ಬರಂತೆ, ನೂರು ಜನರಿಗೆ ಒಬ್ಬರಂತೆ, ಐವತ್ತು ಜನರಿಗೆ ಒಬ್ಬರಂತೆ ಮತ್ತು ಹತ್ತು ಜನರಿಗೆ ಒಬ್ಬರಂತೆ ಅಧಿಕಾರಿಗಳನ್ನಾಗಿಯೂ ಮತ್ತು ಉಪ ಅಧಿಕಾರಿಗಳನ್ನಾಗಿಯೂ ನೇಮಿಸಿದೆನು. 16ಆ ನ್ಯಾಯಾಧಿಪತಿಗಳಿಗೆ ನಾನು ಆ ಕಾಲದಲ್ಲಿ ಅಪ್ಪಣೆಮಾಡಿ, “ನೀವು ಸ್ವಕುಲದವರ ವ್ಯಾಜ್ಯಗಳನ್ನು ವಿಚಾರಿಸಬೇಕು. ಅವರು ಇಸ್ರಾಯೇಲರೊಡನೆ ವ್ಯಾಜ್ಯವಾಡಿದರೂ, ಅನ್ಯರೊಡನೆ ವ್ಯಾಜ್ಯವಾಡಿದರೂ ನೀವು ನ್ಯಾಯದ ಪ್ರಕಾರವೇ ತೀರ್ಪುಮಾಡಬೇಕು. 17ನ್ಯಾಯವಿಚಾರಣೆ ಮಾಡುವಾಗ ಮುಖದಾಕ್ಷಿಣ್ಯಮಾಡದೆ, ಪ್ರಮುಖರನ್ನೂ ಹಾಗು ಅಲ್ಪರನ್ನೂ ಸಮಾನವಾಗಿ ಕಾಣಬೇಕು. ನೀವು ದೇವರ ಹೆಸರಿನಲ್ಲಿ ನ್ಯಾಯತೀರಿಸುವವರಾದ ಕಾರಣ ಮನುಷ್ಯರ ಮುಖವನ್ನು ನೋಡಿ ಹೆದರಬೇಡಿರಿ. ನೀವು ತೀರಿಸಲಿಕ್ಕೆ ಆಗದ ವ್ಯಾಜ್ಯಗಳನ್ನು ನನ್ನ ಬಳಿಗೆ ತರಬೇಕು; ನಾನೇ ಅವುಗಳನ್ನು ತೀರಿಸುವೆನು” ಎಂದು ಹೇಳಿದೆನು.
ಸಂಧ್ಯಾ ಪ್ರಾರ್ಥನೆ: ವಾಚನ
14ನಿಮ್ಮಿಂದ ಬೇರೇನೂ ಕೇಳಿಕೊಳ್ಳುತ್ತಾನೆ? ಆಲೋಚಿಸಿರಿ; ಉನ್ನತವಾದ ಆಕಾಶಮಂಡಲವೂ ಮತ್ತು ಭೂಮಿಯೂ, ಅದರಲ್ಲಿರುವ ಎಲ್ಲವೂ ನಿಮ್ಮ ದೇವರಾದ ಯೆಹೋವನವೇ. 15ಆದರೂ ಆತನು ನಿಮ್ಮ ಪೂರ್ವಿಕರಲ್ಲಿ ಇಷ್ಟವುಳ್ಳವನಾಗಿ ಅವರನ್ನು ಪ್ರೀತಿಸಿದ್ದರಿಂದ ಈಗ ನಿಮ್ಮ ಅನುಭವಕ್ಕೆ ಬಂದಂತೆ ಅವರ ತರುವಾಯ ಅವರ ಸಂತತಿಯವರಾದ ನಿಮ್ಮನ್ನೇ ಎಲ್ಲಾ ಜನಾಂಗಗಳೊಳಗಿಂದ ಆರಿಸಿಕೊಂಡನು. 16ಆದುದರಿಂದ ನೀವು ಆಜ್ಞೆಗೆ ಮಣಿಯದ ನಿಮ್ಮ ದುಷ್ಟಸ್ವಭಾವವನ್ನು ಬಿಟ್ಟು ನಿಮ್ಮ ಹೃದಯದಲ್ಲೇ ಸುನ್ನತಿಮಾಡಿಕೊಳ್ಳಿರಿ. 17ನಿಮ್ಮ ದೇವರಾದ ಯೆಹೋವನು ದೇವಾಧಿದೇವನಾಗಿಯೂ, ಕರ್ತರ ಕರ್ತನಾಗಿಯೂ ಇದ್ದಾನೆ. ಆತನು ಪರಮದೇವರೂ, ಪರಾಕ್ರಮಿಯೂ ಮತ್ತು ಭಯಂಕರನೂ ಆಗಿದ್ದಾನೆ. ಆತನು ಪಕ್ಷಪಾತ ಮಾಡುವವನಲ್ಲ ಹಾಗೂ ಲಂಚತೆಗೆದುಕೊಳ್ಳುವವನಲ್ಲ. 18ಆತನು ಅನಾಥರ ಮತ್ತು ವಿಧವೆಯರ ನ್ಯಾಯವನ್ನು ಸ್ಥಾಪಿಸುತ್ತಾನೆ. ಪರದೇಶಿಗಳಾದವರಲ್ಲಿ ಪ್ರೀತಿಯಿಟ್ಟು ಅವರಿಗೆ ಅನ್ನವಸ್ತ್ರಗಳನ್ನು ಕೊಡುತ್ತಾನೆ. 19ಐಗುಪ್ತದೇಶದಲ್ಲಿ ನೀವೇ ಪರದೇಶಿಗಳಾಗಿದ್ದದ್ದನ್ನು ಜ್ಞಾಪಿಸಿಕೊಂಡು ಪರದೇಶದವರಲ್ಲಿ ಪ್ರೀತಿಯಿಡಿರಿ. 20ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ, ಆತನನ್ನೇ ಸೇವಿಸಬೇಕು; ಆತನನ್ನು ಹೊಂದಿಕೊಂಡು, ಆತನ ಹೆಸರಿನ ಮೇಲೆಯೇ ಪ್ರಮಾಣಮಾಡಬೇಕು. 21ಆತನೊಬ್ಬನೇ ನಿಮ್ಮ ಸ್ತುತಿ ಸ್ತೋತ್ರಕ್ಕೆ ಪಾತ್ರನು; ಆತನು ನಿಮ್ಮ ದೇವರು; ನೀವು ನೋಡಿದ ಆ ಅದ್ಭುತವಾದ ಮಹತ್ಕಾರ್ಯಗಳನ್ನು ನಿಮಗೋಸ್ಕರ ನಡಿಸಿದವನು ಆತನೇ.
ಉದಯಕಾಲದ 9ನೇ ಸುವಾರ್ತೆ
19ಅದೇ ದಿನ ಎಂದರೆ ವಾರದ ಮೊದಲನೆಯ ದಿನದ ಸಂಜೆಯಲ್ಲಿ ಶಿಷ್ಯರು ಯೆಹೂದ್ಯರ ಭಯದಿಂದ ತಾವು ಇದ್ದ ಮನೆಯ ಬಾಗಿಲುಗಳನ್ನು ಮುಚ್ಚಿಕೊಂಡಿರಲು, ಆಗ ಯೇಸು ಬಂದು ಅವರ ನಡುವೆ ನಿಂತು, “ನಿಮಗೆ ಸಮಾಧಾನವಾಗಲಿ” ಎಂದನು. 20ಇದನ್ನು ಹೇಳಿದ ಮೇಲೆ ಅವರಿಗೆ ತನ್ನ ಕೈಗಳನ್ನೂ ಪಕ್ಕೆಯನ್ನೂ ತೋರಿಸಿದನು. ಆಗ ಶಿಷ್ಯರು ಕರ್ತನನ್ನು ನೋಡಿ ಸಂತೋಷಪಟ್ಟರು. 21ಯೇಸು ಅವರಿಗೆ, “ನಿಮಗೆ ಸಮಾಧಾನವಾಗಲಿ” ಎಂದು ಪುನಃ ಹೇಳಿ, “ತಂದೆಯು ನನ್ನನ್ನು ಕಳುಹಿಸಿಕೊಟ್ಟ ಹಾಗೆಯೇ ನಾನೂ ನಿಮ್ಮನ್ನು ಕಳುಹಿಸಿಕೊಡುತ್ತೇನೆ” ಎಂದನು. 22ಆತನು ಇದನ್ನು ಹೇಳಿ ಅವರ ಮೇಲೆ ಉಸಿರೂದಿ ಅವರಿಗೆ, “ನೀವು ಪವಿತ್ರಾತ್ಮನನ್ನು ಪಡೆದುಕೊಳ್ಳಿರಿ. 23ನೀವು ಯಾರ ಪಾಪಗಳನ್ನು ಕ್ಷಮಿಸಿಬಿಡುತ್ತೀರೋ, ಅವರಿಗೆ ಅವುಗಳು ಕ್ಷಮಾಪಣೆಯಾಗುತ್ತದೆ; ಯಾರ ಪಾಪಗಳನ್ನು ನೀವು ಕ್ಷಮಿಸದೇ ಉಳಿಸುತ್ತೀರೋ, ಅವರಿಗೆ ಅವುಗಳು ಉಳಿಯುತ್ತವೆ” ಎಂದು ಹೇಳಿದನು. 24ಯೇಸು ಬಂದಾಗ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ದಿದುಮನೆನಿಸಿಕೊಳ್ಳುವ ತೋಮನು ಅವರ ಜೊತೆ ಇರಲಿಲ್ಲ. 25ಉಳಿದ ಶಿಷ್ಯರು ಅವನಿಗೆ, “ನಾವು ಕರ್ತನನ್ನು ನೋಡಿದ್ದೇವೆ” ಎಂದು ಹೇಳಿದರು. ಅದಕ್ಕೆ ಅವನು, “ನಾನು ಆತನ ಕೈಗಳಲ್ಲಿ ಮೊಳೆಗಳಿಂದಾದ ಗಾಯವನ್ನು ನೋಡಿ, ಆ ಮೊಳೆಯ ಗಾಯದಲ್ಲಿ ನನ್ನ ಬೆರಳನ್ನು ಇಟ್ಟು ಆತನ ಪಕ್ಕೆಯಲ್ಲಿ ನನ್ನ ಕೈಯನ್ನು ಹಾಕದ ಹೊರತು ನಿಮ್ಮ ಮಾತನ್ನು ನಂಬುವುದೇ ಇಲ್ಲ” ಎಂದನು. 26ಎಂಟು ದಿನಗಳಾದ ಮೇಲೆ ಆತನ ಶಿಷ್ಯರು ಪುನಃ ಒಳಗಿದ್ದಾಗ ತೋಮನೂ ಅವರ ಜೊತೆ ಇದ್ದನು. ಬಾಗಿಲುಗಳು ಮುಚ್ಚಿದ್ದವು ಆಗ ಯೇಸು ಬಂದು ನಡುವೆ ನಿಂತು ನಿಮಗೆ “ಸಮಾಧಾನವಾಗಲಿ ಎಂದನು” 27ಆ ಮೇಲೆ ತೋಮನಿಗೆ, “ನಿನ್ನ ಬೆರಳನ್ನು ಈ ಕಡೆ ಚಾಚಿ ನನ್ನ ಕೈಗಳನ್ನು ಮುಟ್ಟಿ ನೋಡು, ನಿನ್ನ ಕೈ ಚಾಚಿ ನನ್ನ ಪಕ್ಕೆಯಲ್ಲಿ ಹಾಕು. ಅಪನಂಬಿಕೆಯಳ್ಳವನಾಗಿರಬೇಡ, ನಂಬುವವನಾಗು” ಎಂದು ಹೇಳಿದನು. 28ತೋಮನು ಆತನಿಗೆ, “ನನ್ನ ಕರ್ತನೇ, ನನ್ನ ದೇವರೇ” ಎಂದು ಹೇಳಿದನು. 29ಯೇಸು ಆತನಿಗೆ, “ನೀನು ನನ್ನನ್ನು ನೋಡಿದ್ದರಿಂದ ನಂಬಿದ್ದೀ, ನೋಡದೆ ನಂಬಿದವರು ಧನ್ಯರು” ಎಂದು ಹೇಳಿದನು. 30ಯೇಸು ಇನ್ನು ಬೇರೆ ಎಷ್ಟೋ ಸೂಚಕಕಾರ್ಯಗಳನ್ನು ತನ್ನ ಶಿಷ್ಯರ ಮುಂದೆ ಮಾಡಿದನು. ಅವುಗಳನ್ನೆಲ್ಲಾ ಈ ಗ್ರಂಥದಲ್ಲಿ ಬರೆದಿರುವುದಿಲ್ಲಾ. 31ಆದರೆ ಯೇಸುವೇ ದೇವಕುಮಾರನಾದ ಕ್ರಿಸ್ತನೆಂದು ನೀವು ನಂಬುವಂತೆಯೂ, ನಂಬಿ ಆತನ ಹೆಸರಿನಲ್ಲಿ ನಿತ್ಯ ಜೀವವನ್ನು ಪಡೆದುಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದಿದೆ.
ಪತ್ರಿಕೆ (ಕ್ರಿಸ್ತ ಜನನಕ್ಕೆ ಮುಂಚಿನ ಭಾನುವಾರ)
9ನಂಬಿಕೆಯಿಂದಲೇ ಅವನು ವಾಗ್ದಾನದ ದೇಶಕ್ಕೆ ಬಂದಾಗ, ಅಲ್ಲಿ ಅನ್ಯ ದೇಶದವನಂತೆ ಗುಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿ ಬದುಕಿದನು. ಅದೇ ವಾಗ್ದಾನಕ್ಕೆ ಸಹಭಾಧ್ಯರಾಗಿದ್ದ ಇಸಾಕನೂ, ಯಾಕೋಬನೂ ಅವನಂತೆಯೇ ಗುಡಾರಗಳಲ್ಲಿ ವಾಸಿಸಿದರು. 10ಯಾಕೆಂದರೆ ಅವನು ಶಾಶ್ವತವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು ಅಂದರೆ ದೇವರು ಸಂಕಲ್ಪಿಸಿ ನಿರ್ಮಿಸಿದ ಪಟ್ಟಣವನ್ನು ಎದುರುನೋಡುತ್ತಿದ್ದನು. 17ಅಬ್ರಹಾಮನು ಪರೀಕ್ಷಿಸಲ್ಪಟ್ಟಾಗ ಇಸಾಕನನ್ನು ನಂಬಿಕೆಯಿಂದಲೇ ಸಮರ್ಪಿಸಿದನು. ಆ ವಾಗ್ದಾನಗಳನ್ನು ಹೊಂದಿದ ಅವನು, “ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು” ಎಂದು ದೇವರು ಅವನಿಗೆ ಹೇಳಿದ್ದರೂ ತನ್ನ ಏಕಪುತ್ರನನ್ನು ಅರ್ಪಿಸಿದನು. 19ನನ್ನ ಮಗನು ಸತ್ತರೂ ದೇವರು ಅವನನ್ನು ಬದುಕಿಸಲು ಸಮರ್ಥನಾಗಿದ್ದಾನೆಂದು ತಿಳಿದುಕೊಂಡಿದ್ದನು. ಮತ್ತು ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಪಡೆದುಕೊಂಡನು. 20ನಂಬಿಕೆಯಿಂದಲೇ ಇಸಾಕನು ಯಾಕೋಬನನ್ನು ಮತ್ತು ಏಸಾವನನ್ನು ಆಶೀರ್ವದಿಸಿದಾಗ ಮುಂದೆ ಸಂಭವಿಸಬಹುದಾದ ವಿಷಯಗಳನ್ನು ಸೂಚಿಸಿದನು. 21ಯಾಕೋಬನು ತಾನು ಮರಣ ಹೊಂದುವ ಸಮಯದಲ್ಲಿ ನಂಬಿಕೆಯಿಂದಲೇ ಯೋಸೇಫನ ಮಕ್ಕಳಿಬ್ಬರನ್ನು ಆಶೀರ್ವದಿಸಿದನು. ತನ್ನ ಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು. 22ಯೋಸೇಫನು ತನ್ನ ಮರಣ ಸಮಯದಲ್ಲಿ ಇಸ್ರಾಯೇಲ್ಯರು ಐಗುಪ್ತದೇಶದಿಂದ ಹೊರಡುವುದನ್ನು ಕುರಿತು ನಂಬಿಕೆಯಿಂದಲೇ ಮಾತನಾಡಿ ತನ್ನ ಎಲುಬುಗಳನ್ನು ತೆಗೆದುಕೊಂಡು ಹೋಗುವ ವಿಷಯದಲ್ಲಿ ಅಪ್ಪಣೆ ಕೊಟ್ಟನು. 23ಮೋಶೆ ಹುಟ್ಟಿದಾಗ ಅವನ ತಂದೆತಾಯಿಗಳು ಕೂಸು ಸುಂದರವಾಗಿದೆ ಎಂದು ನೋಡಿ ಅರಸನ ಅಪ್ಪಣೆಗೆ ಭಯಪಡದೇ ನಂಬಿಕೆಯಿಂದಲೇ ಅವನನ್ನು ಮೂರು ತಿಂಗಳು ಬಚ್ಚಿಟ್ಟರು. 32ಇನ್ನೂ ಏನು ಹೇಳಬೇಕು? ಗಿದ್ಯೋನ್, ಬಾರಾಕ ಸಂಸೋನ, ಯೆಪ್ತಾಹ, ದಾವೀದ, ಸಮುವೇಲ ಮತ್ತು ಪ್ರವಾದಿಗಳ ವಿಷಯವಾಗಿ ಹೇಳಬೇಕಾದರೆ ನನಗೆ ಸಮಯ ಸಾಲದು. 33ನಂಬಿಕೆಯ ಮೂಲಕ ಅವರು ರಾಜ್ಯಗಳನ್ನೂ ಸ್ವಾಧೀನ ಮಾಡಿಕೊಂಡರು, ನೀತಿಯನ್ನು ಸ್ಥಾಪಿಸಿದರು, ವಾಗ್ದಾನಗಳನ್ನು ಪಡೆದುಕೊಂಡರು, ಸಿಂಹಗಳ ಬಾಯಿ ಕಟ್ಟಿದರು., 34ಬೆಂಕಿಯ ಶಕ್ತಿಯನ್ನು ನಂದಿಸಿದರು, ಕತ್ತಿಯ ಬಾಯಿಂದ ತಪ್ಪಿಸಿಕೊಂಡರು, ದುರ್ಬಲರಾಗಿದ್ದು ಬಲಿಷ್ಠರಾದರು, ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು, ಪರದೇಶದವರ ಸೈನ್ಯಗಳನ್ನು ಓಡಿಸಿಬಿಟ್ಟರು. 35ಸ್ತ್ರೀಯರು ಸತ್ತುಹೋಗಿದ್ದ ತಮ್ಮವರನ್ನು ಜೀವದಿಂದ ತಿರುಗಿ ಪಡೆದುಕೊಂಡರು. ಕೆಲವರು ತಾವು ಯಾತನೆ ಹೊಂದುತ್ತಿರುವಾಗ ಶ್ರೇಷ್ಠ ಪುನರುತ್ಥಾನವನ್ನು ಹೊಂದುವುದಕ್ಕೋಸ್ಕರ, ಬಿಡುಗಡೆಯನ್ನು ತಿರಸ್ಕರಿಸಿದರು. 36ಬೇರೆ ಕೆಲವರು ಅಪಹಾಸ್ಯ, ಕೊರಡೆಯ ಪೆಟ್ಟು, ಬೇಡಿ, ಸೆರೆಮನೆವಾಸಗಳನ್ನು ಅನುಭವಿಸಿದರು. 37ಕೆಲವರನ್ನು ಜನರು ಕಲ್ಲೆಸೆದು ಕೊಂದರು, ಕೆಲವರನ್ನು ಗರಗಸದಿಂದ ಎರಡು ಭಾಗವಾಗಿ ಕೊಯ್ದು ಕೊಂದರು, ಕೆಲವರನ್ನು ಕತ್ತಿಯಿಂದ ಕೊಂದರು. ಕೆಲವರು ಕೊರತೆ, ಹಿಂಸೆ, ಬಾಧೆ ಇವುಗಳನ್ನು ಅನುಭವಿಸುವವರಾಗಿದ್ದು ಕುರಿ ಮೇಕೆಗಳ ಚರ್ಮಗಳನ್ನು ಉಟ್ಟುಕೊಂಡವರಾಗಿ ಅಲೆದಾಡಿದರು. 38ಇಂಥವರಿಗೆ ಈ ಲೋಕವು ಯೋಗ್ಯಸ್ಥಳವಾಗಿರಲಿಲ್ಲ. ಅವರು ತಮ್ಮ ದೇಶದ ಮರುಭೂಮಿ, ಬೆಟ್ಟ, ಗವಿ, ಕುಣಿಗಳಲ್ಲಿ ಅಲೆಯುವವರಾಗಿದ್ದರು. 39ಇವರೆಲ್ಲರು ತಮ್ಮ ನಂಬಿಕೆಯ ಮೂಲಕ ಒಳ್ಳೆ ಸಾಕ್ಷಿಯನ್ನು ಹೊಂದಿದವರಾಗಿದ್ದರೂ, ವಾಗ್ದಾನದ ಫಲವನ್ನು ಹೊಂದಲಿಲ್ಲ. 40ದೇವರು ನಮಗೋಸ್ಕರ ಶ್ರೇಷ್ಠವಾದ ಭಾಗ್ಯವನ್ನು ಏರ್ಪಡಿಸಿ, ನಾವಿಲ್ಲದೆ ಅವರು ಪರಿಪೂರ್ಣರಾಗಬಾರದೆಂದು ಸಂಕಲ್ಪಿಸಿದನು.
ಸುವಾರ್ತೆ (ಕ್ರಿಸ್ತ ಜನನಕ್ಕೆ ಮುಂಚಿನ ಭಾನುವಾರ)
1ಅಬ್ರಹಾಮನ ಮಗನಾದ ದಾವೀದನ ಕುಮಾರನಾದ ಯೇಸು ಕ್ರಿಸ್ತನ ವಂಶಾವಳಿ. 2ಅಬ್ರಹಾಮನ ಮಗನು ಇಸಾಕನು. ಇಸಾಕನ ಮಗನು ಯಾಕೋಬನು. ಯಾಕೋಬನ ಮಗನು ಯೆಹೂದನು, ಅವನ ಅಣ್ಣತಮ್ಮಂದಿರು ಯೆಹೂದನ ಮಕ್ಕಳು. 3ಯೆಹೂದನಿಗೆ ತಾಮಾರಳಲ್ಲಿ ಪೆರೆಚನು, ಜೆರಹನು ಹುಟ್ಟಿದರು. ಪೆರೆಚನ ಮಗನು ಹೆಚ್ರೋನನು. 4ಹೆಚ್ರೋನನ ಮಗನು ಅರಾಮನು. ಅರಾಮನ ಮಗನು ಅಮ್ಮಿನಾದಾಬನು. ಅಮ್ಮಿನಾದಾಬನ ಮಗನು ನಹಶೋನನು. ನಹಶೋನನ ಮಗನು ಸಲ್ಮೋನನು. 5ಸಲ್ಮೋನನ ಮಗನಾದ ಬೋವಜನು ರಾಹಾಬಳಲ್ಲಿ ಹುಟ್ಟಿದವನು. ಬೋವಜನ ಮಗನು ಓಬೇದನು ರೂತಳಲ್ಲಿ ಹುಟ್ಟಿದವನು. ಓಬೇದನ ಮಗನು ಇಷಯನು. 6ಇಷಯನ ಮಗನು ಅರಸನಾದ ದಾವೀದನು. ದಾವೀದನ ಮಗನಾದ ಸೊಲೊಮೋನನು ಊರೀಯನ ಹೆಂಡತಿಯಲ್ಲಿ ಹುಟ್ಟಿದವನು. 7ಸೊಲೊಮೋನನ ಮಗನು ರೆಹಬ್ಬಾಮನು. ರೆಹಬ್ಬಾಮನ ಮಗನು ಅಬೀಯನು. ಅಬೀಯನ ಮಗನು ಆಸನು. 8ಆಸನ ಮಗನು ಯೆಹೋಷಾಫಾಟನು. ಯೆಹೋಷಾಫಾಟನ ಮಗನು ಯೆಹೋರಾಮನು. ಯೆಹೋರಾಮನ ಮಗನು ಉಜ್ಜೀಯನು. 9ಉಜ್ಜೀಯನ ಮಗನು ಯೋತಾಮನು. ಯೋತಾಮನ ಮಗನು ಆಹಾಜನನು. ಆಹಾಜನ ಮಗನು ಹಿಜ್ಕೀಯನು. 10ಹಿಜ್ಕೀಯನ ಮಗನು ಮನಸ್ಸೆಯನು. ಮನಸ್ಸೆಯ ಮಗನು ಆಮೋನನು. 11ಆಮೋನ ಮಗನು ಯೋಷೀಯನು. ಬಾಬಿಲೋನಿಗೆ ಸೆರೆಹೋದ ಸಮಯದಲ್ಲಿ ಯೋಷೀಯನಿಗೆ ಯೆಕೊನ್ಯನು, ಅವನ ಅಣ್ಣತಮ್ಮಂದಿರು ಹುಟ್ಟಿದರು. 12ಬಾಬಿಲೋನಿಗೆ ಸೆರೆಹೋದ ಮೇಲೆ ಯೆಕೊನ್ಯನು ಶೆಯಲ್ತಿಯೇಲನನ್ನು ಪಡೆದನು. ಶೆಯಲ್ತಿಯೇಲನ ಮಗನು ಜೆರುಬ್ಬಾಬೆಲನು 13ಜೆರುಬ್ಬಾಬೆಲನ ಮಗನು ಅಬಿಹೂದನು. ಅಬಿಹೂದನ ಮಗನು ಎಲ್ಯಕೀಮನು. ಎಲ್ಯಕೀಮನ ಮಗನು ಅಜೋರನು. 14ಅಜೋರನ ಮಗನು ಸದೋಕನು. ಸದೋಕನ ಮಗನು ಅಖೀಮನು. ಅಖೀಮನ ಮಗನು ಎಲಿಹೂದನು. 15ಎಲಿಹೂದನ ಮಗನು ಎಲಿಯಾಜರನು. ಎಲಿಯಾಜರನ ಮಗನು ಮತ್ತಾನನು. ಮತ್ತಾನನ ಮಗನು ಯಾಕೋಬನು. 16ಯಾಕೋಬನ ಮಗನು ಯೋಸೇಫನು. ಯೋಸೇಫನು ಮರಿಯಳ ಗಂಡನು. ಈ ಮರಿಯಳಿಂದಲೇ ಕ್ರಿಸ್ತನೆಂಬ ಯೇಸು ಹುಟ್ಟಿದನು. 17ಅಬ್ರಹಾಮನಿಂದ ದಾವೀದನ ವರೆಗೂ ಒಟ್ಟು ಹದಿನಾಲ್ಕು ತಲೆಮಾರುಗಳು, ದಾವೀದನಿಂದ ಬಾಬಿಲೋನಿನ ದಾಸತ್ವಕ್ಕೆ ಹೋಗುವವರೆಗೂ ಹದಿನಾಲ್ಕು ತಲೆಮಾರುಗಳು, ಬಾಬಿಲೋನಿನ ದಾಸತ್ವದ ದಿನದಿಂದ ಕ್ರಿಸ್ತನವರೆಗೆ ಹದಿನಾಲ್ಕು ತಲೆಮಾರುಗಳು. 18ಯೇಸು ಕ್ರಿಸ್ತನ ಜನನವು ಹೇಗಾಯಿತಂದರೆ, ಆತನ ತಾಯಿಯಾದ ಮರಿಯಳಿಗೂ ಯೋಸೇಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಮದುವೆಯಾಗಿ ಕೂಡಿಬಾಳುವುದಕ್ಕಿಂತ ಮೊದಲೇ ಮರಿಯಳು ಪವಿತ್ರಾತ್ಮನ ಶಕ್ತಿಯಿಂದ ಗರ್ಭಧರಿಸಿದ್ದು ತಿಳಿದುಬಂತು. 19ಆದರೆ ಆಕೆಯ ಗಂಡನಾದ ಯೋಸೇಫನು ನೀತಿವಂತನಾಗಿದ್ದ ಕಾರಣ ಮರಿಯಳನ್ನು ಬಯಲಿಗೆ ತಂದು ಅವಮಾನಕ್ಕೆ ಗುರಿಮಾಡದೆ ನಿಶ್ಚಿತಾರ್ಥವನ್ನು ರಹಸ್ಯವಾಗಿ ಮುರಿದುಬಿಡಬೇಕೆಂದು ಆಲೋಚಿಸಿದ್ದನು. 20ಅವನು ಇದನ್ನು ಕುರಿತು ಆಲೋಚಿಸುತ್ತಿರುವಾಗ, ದೇವದೂತನು ಅವನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ದಾವೀದನ ಮಗನಾದ ಯೋಸೇಫನೇ, ನೀನು ಮರಿಯಳನ್ನು ಹೆಂಡತಿಯಾಗಿ ಸೇರಿಸಿಕೊಳ್ಳುವುದಕ್ಕೆ ಅಂಜಬೇಡ. ಆಕೆ ಗರ್ಭವತಿಯಾದದ್ದು ಪವಿತ್ರಾತ್ಮನಿಂದಲೇ. 21ಆಕೆಯು ಒಬ್ಬ ಮಗನನ್ನು ಹೆರುವಳು; ನೀನು ಆತನಿಗೆ ‘ಯೇಸು’ ಎಂದು ಹೆಸರಿಡಬೇಕು; ಏಕೆಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ರಕ್ಷಿಸುವನು,” ಅಂದನು. 22ಕರ್ತನು ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು; ಆ ಮಾತು ಏನೆಂದರೆ, 23“ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹೆರುವಳು; ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವರು. ‘ದೇವರು ನಮ್ಮ ಕೂಡ ಇದ್ದಾನೆಂದು’ ಈ ಹೆಸರಿನ ಅರ್ಥ.” 24ಆಗ ಯೋಸೇಫನು ಎಚ್ಚೆತ್ತು ದೇವದೂತನು ಅಪ್ಪಣೆಕೊಟ್ಟ ಪ್ರಕಾರ ಮರಿಯಳನ್ನು ಹೆಂಡತಿಯನ್ನಾಗಿ ಸ್ವೀಕರಿಸಿಕೊಂಡನು. 25ಆದರೆ ಆಕೆಯು ಗಂಡು ಮಗುವಿಗೆ ಜನ್ಮನೀಡುವವರೆಗೂ ಆಕೆಯೊಡನೆ ಶರೀರ ಸಂಬಂಧವಿಲ್ಲದೆ ಇದ್ದನು. ಮತ್ತು ಯೋಸೇಫನು ಆ ಮಗುವಿಗೆ ‘ಯೇಸು’ ಎಂದು ಹೆಸರಿಟ್ಟನು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 21 ಡಿಸೆಂಬರ್ ಎಂದರೆ ನಾಗರಿಕ ಪಂಚಾಂಗದ 3 ಜನವರಿ. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು