Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ನವೆಂಬರ್ 2026 › 22 ನವೆಂಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 22 ನವೆಂಬರ್ 2026

ಭಾನುವಾರ · ಸಾಮಾನ್ಯ ಕಾಲದ 34ನೇ ವಾರ

ಹಬ್ಬಗಳು ಮತ್ತು ಸಂತರು

ನಮ್ಮ ಕರ್ತನಾದ ಯೇಸು ಕ್ರಿಸ್ತ, ವಿಶ್ವದ ಅರಸ

ಮಹೋತ್ಸವ · ಆರಾಧನಾ ಬಣ್ಣ: ಬಿಳಿ

ದಿನದ ವಾಚನಗಳು

ಮೊದಲನೆಯ ವಾಚನ

ಯೆಹೆ 34:11–12, 15–17

11“‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆಹಾ, ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು. 12ಮಂದೆಯ ಕುರುಬನು ಸುತ್ತುಮುತ್ತಲು ಚದುರಿ ಹೋದ ತನ್ನ ಕುರಿಗಳನ್ನು ಹುಡುಕುವ ಹಾಗೆ, ನಾನು ನನ್ನ ಕುರಿಗಳನ್ನು ಹುಡುಕುವೆನು; ಕಾರ್ಮುಗಿಲಿನ ದುರ್ದಿನದಲ್ಲಿ ಚದುರಿಹೋದ ಎಲ್ಲಾ ಸ್ಥಳಗಳಿಂದ ಅವುಗಳನ್ನು ರಕ್ಷಿಸುವೆನು. 15ನಾನೇ ನನ್ನ ಕುರಿಗಳನ್ನು ಮೇಯಿಸಿ, ಹಾಯಾಗಿ ಮಲಗುವಂತೆ ಮಾಡುವೆನು” ಇದು ಕರ್ತನಾದ ಯೆಹೋವನ ನುಡಿ. 16“ತಪ್ಪಿಸಿಕೊಂಡದ್ದನ್ನು ಹುಡುಕುವೆನು, ಓಡಿಸಿದ್ದನ್ನು ಮಂದೆಗೆ ಸೇರಿಸುವೆನು, ದುರ್ಬಲವಾದದ್ದನ್ನು ಬಲಗೊಳಿಸುವೆನು, ಮುರಿದ ಅಂಗವನ್ನು ಕಟ್ಟುವೆನು; ಬಲಿತ ಕೊಬ್ಬಿದ ಕುರಿಗಳನ್ನು ಸಂಹರಿಸುವೆನು; ನಾನೇ ಅವುಗಳಿಗೆ ನ್ಯಾಯದಂಡನೆ ಎಂಬ ಮೇವನ್ನು ತಿನ್ನಿಸುವೆನು.” 17“‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಹಿಂಡೇ, ಇಗೋ, ನಾನು ನಿಮ್ಮಲ್ಲಿನ ಕುರಿಮೇಕೆಗಳಿಗೂ, ಟಗರುಹೋತಗಳಿಗೂ ಮಧ್ಯವರ್ತಿಯಾಗಿ ನ್ಯಾಯ ತೀರಿಸುವೆನು.

ಪ್ರತಿವಚನ ಕೀರ್ತನೆ

ಕೀರ್ತ 23:1–3, 5–6

1ದಾವೀದನ ಕೀರ್ತನೆ. ಯೆಹೋವನು ನನಗೆ ಕುರುಬನು; ಕೊರತೆಪಡೆನು. 2ಆತನು ಹಸಿರುಗಾವಲುಗಳಲ್ಲಿ ನನ್ನನ್ನು ತಂಗಿಸುತ್ತಾನೆ; ವಿಶ್ರಾಂತಿಕರವಾದ ನೀರುಗಳ ಬಳಿಗೆ ಬರಮಾಡುತ್ತಾನೆ. 3ನನ್ನ ಪ್ರಾಣವನ್ನು ಉಜ್ಜೀವಿಸಮಾಡಿ ತನ್ನ ಹೆಸರಿಗೆ ತಕ್ಕಂತೆ ನೀತಿಯ ಮಾರ್ಗದಲ್ಲಿ ನನ್ನನ್ನು ನಡೆಸುತ್ತಾನೆ. 5ವೈರಿಗಳ ಮುಂದೆಯೇ ನೀನು ನನಗೋಸ್ಕರ ಔತಣವನ್ನು ಸಿದ್ಧಪಡಿಸುತ್ತೀ; ನನ್ನ ತಲೆಗೆ ತೈಲವನ್ನು ಹಚ್ಚಿಸುತ್ತೀ, ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ. 6ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಮತ್ತು ಕೃಪೆಯೂ ನನ್ನನ್ನು ಹಿಂಬಾಲಿಸುವವು. ನಾನು ಸದಾಕಾಲವೂ ಯೆಹೋವನ ಮಂದಿರದಲ್ಲಿ ವಾಸಿಸುವೆನು.

ಎರಡನೆಯ ವಾಚನ

1 ಕೊರಿ 15:20–26, 28

20ಆದರೆ ಕ್ರಿಸ್ತನು ಸತ್ತವರೊಳಗಿಂದ ಎದ್ದು ಬಂದನು. ಸತ್ತುಹೋದವರಲ್ಲಿ ಪ್ರಥಮಫಲವಾದನು. 21ಮನುಷ್ಯನ ಮೂಲಕ ಮರಣ ಉಂಟಾದ ಕಾರಣ, ಮನುಷ್ಯನ ಮೂಲಕವೇ ಸತ್ತವರಿಗೆ ಪುನರುತ್ಥಾನವುಂಟಾಗಿದೆ. 22ಆದಾಮನಿಂದ ಹೇಗೆ ಎಲ್ಲರೂ ಸಾಯುವವರಾದರೋ ಅದೇ ಪ್ರಕಾರ ಯೇಸು ಕ್ರಿಸ್ತನಿಂದ ಎಲ್ಲರೂ ಬದುಕುವವರಾದರು. 23ಆದರೆ ಪ್ರತಿಯೊಬ್ಬನು ತನ್ನ ಕ್ರಮದಲ್ಲಿ ಎದ್ದುಬರುವನು. ಕ್ರಿಸ್ತನು ಪ್ರಥಮಫಲವಾದನು; ತರುವಾಯ ಕ್ರಿಸ್ತನಿಗೆ ಸೇರಿದವರು ಆತನ ಬರೋಣದಲ್ಲಿ ಜೀವವುಳ್ಳವರಾಗಿ ಎದ್ದು ಬರುವರು. 24ಅನಂತರ ಆತನು ಎಲ್ಲಾ ದೊರೆತನವನ್ನೂ, ಎಲ್ಲಾ ಅಧಿಕಾರವನ್ನೂ ಮತ್ತು ಬಲವನ್ನೂ ನಿರ್ಮೂಲಗೊಳಿಸಿ ತಂದೆ ದೇವರಿಗೆ ರಾಜ್ಯವನ್ನು ಒಪ್ಪಿಸಿಕೊಡುವಾಗ ಸಮಾಪ್ತಿಯಾಗುವುದು. 25ಯಾಕೆಂದರೆ ತಾನು ಎಲ್ಲಾ ವಿರೋಧಿಗಳನ್ನು ತನ್ನ ಪಾದಗಳ ಕೆಳಗೆ ಹಾಕಿಕೊಳ್ಳುವ ತನಕ ರಾಜ್ಯವನ್ನಾಳುವುದು ಅವಶ್ಯ. 26ನಿರ್ಮೂಲವಾಗುವ ಕಡೆ ಶತ್ರುವು ಮರಣವಾಗಿದೆ. 28ಸಮಸ್ತವೂ ಆತನಿಗೆ ಅಧೀನವಾದ ಮೇಲೆ ಮಗನು ಸಮಸ್ತವನ್ನೂ ತನಗೆ ಅಧೀನಮಾಡಿ ಕೊಟ್ಟಾತನಿಗೆ ತಾನೇ ಅಧೀನನಾಗುವನು; ಹೀಗೆ ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗುವನು.

ಸುವಾರ್ತೆ

ಮತ್ತಾ 25:31–46

31“ಇದಲ್ಲದೆ ಮನುಷ್ಯಕುಮಾರನು ತನ್ನ ಮಹಿಮೆಯಿಂದ ಸಮಸ್ತ ದೇವದೂತರೊಂದಿಗೆ ಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಳ್ಳುವನು; 32ಆಗ ಎಲ್ಲಾ ದೇಶಗಳ ಜನರನ್ನೂ ಆತನ ಸಮ್ಮುಖದಲ್ಲಿ ತಂದು ಸೇರಿಸುವರು. ಕುರುಬನು ಕುರಿಗಳನ್ನೂ, ಆಡುಗಳನ್ನೂ ಬೇರ್ಪಡಿಸುವ ಪ್ರಕಾರ ಆತನು ಅವರನ್ನು ಬೇರ್ಪಡಿಸುವನು. 33ಕುರಿಗಳನ್ನು ತನ್ನ ಬಲಗಡೆಯಲ್ಲಿ ಮತ್ತು ಆಡುಗಳನ್ನು ಎಡಗಡೆಯಲ್ಲಿ ನಿಲ್ಲಿಸುವನು. 34ಆಗ ಅರಸನು ತನ್ನ ಬಲಗಡೆಯಲ್ಲಿರುವವರಿಗೆ, ‘ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವತ್ತಾಗಿ ಪಡೆದುಕೊಳ್ಳಿರಿ. 35ನಾನು ಹಸಿದಿದ್ದೆನು, ನನಗೆ ಊಟ ಕೊಟ್ಟಿರಿ; ನಾನು ಬಾಯಾರಿದ್ದೆನು, ನನಗೆ ಕುಡಿಯುವುದಕ್ಕೆ ಕೊಟ್ಟಿರಿ; ಪರದೇಶಿಯಾಗಿದ್ದೆನು, ನನಗೆ ಆಶ್ರಯ ಕೊಟ್ಟಿರಿ; 36ಬಟ್ಟೆಯಿಲ್ಲದವನಾಗಿದ್ದೆನು, ನನಗೆ ಉಡುವುದಕ್ಕೆ ಕೊಟ್ಟಿರಿ; ಅಸ್ವಸ್ಥನಾಗಿದ್ದಾಗ, ನನ್ನನ್ನು ಆರೈಕೆ ಮಾಡಿದಿರಿ; ಸೆರೆಮನೆಯಲ್ಲಿದ್ದೆನು, ನನ್ನನ್ನು ನೋಡುವುದಕ್ಕೆ ಬಂದಿರಿ’ ಎಂದು ಹೇಳುವನು. 37ಅದಕ್ಕೆ ಉತ್ತರವಾಗಿ ನೀತಿವಂತರು, ‘ಕರ್ತನೇ, ಯಾವಾಗ ನೀನು ಹಸಿದಿದ್ದನ್ನು ಕಂಡು ನಿನಗೆ ಊಟ ಕೊಟ್ಟೆವು? ಇಲ್ಲವೆ ನೀನು ಬಾಯಾರಿದ್ದನ್ನು ಕಂಡು ಕುಡಿಯುವುದಕ್ಕೆ ಕೊಟ್ಟೆವು? 38ಯಾವಾಗ ನೀನು ಪರದೇಶಿಯಾಗಿರುವುದನ್ನು ಕಂಡು ಆಶ್ರಯ ನೀಡಿದೆವು? ಇಲ್ಲವೆ ನಿನಗೆ ಬಟ್ಟೆಯಿಲ್ಲದ್ದನ್ನು ಕಂಡು ಉಡುವುದಕ್ಕೆ ಕೊಟ್ಟೆವು? 39ಯಾವಾಗ ನೀನು ಅಸ್ವಸ್ಥನಾಗಿದ್ದಾಗ ಅಥವಾ ಸೆರೆಮನೆಯಲ್ಲಿ ಇದ್ದುದನ್ನು ಕಂಡು ನಿನ್ನನ್ನು ನೋಡುವುದಕ್ಕೆ ಬಂದೆವು’ ಎಂದು ಕೇಳುವರು. 40ಅದಕ್ಕೆ ಉತ್ತರವಾಗಿ ಅರಸನು, ‘ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಅನ್ನುವನು. 41ಆ ಮೇಲೆ ಆತನು ಎಡಗಡೆಯಲ್ಲಿರುವವರಿಗೆ, ‘ಶಾಪಗ್ರಸ್ತರೇ, ನನ್ನನ್ನು ಬಿಟ್ಟು ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ. 42ನಾನು ಹಸಿದಿದ್ದೆನು, ನೀವು ನನಗೆ ಊಟ ಕೊಡಲಿಲ್ಲ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಡಲಿಲ್ಲ. 43ಪರದೇಶಿಯಾಗಿದ್ದೆನು, ನೀವು ನನಗೆ ಆಶ್ರಯ ಕೊಡಲಿಲ್ಲ; ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡುವುದಕ್ಕೆ ಕೊಡಲಿಲ್ಲ; ಅಸ್ವಸ್ಥನಾಗಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಆರೈಕೆಮಾಡುವುದಕ್ಕೆ ಬರಲಿಲ್ಲವೆಂದು’ ಹೇಳುವನು. 44ಅದಕ್ಕೆ ಉತ್ತರವಾಗಿ ಅವರೂ ಸಹ, ‘ಕರ್ತನೇ, ಯಾವಾಗ ನೀನು ಹಸಿದಿದ್ದನ್ನೂ, ನೀನು ಬಾಯಾರಿದ್ದನ್ನೂ, ನೀನು ಪರದೇಶಿಯಾಗಿದ್ದನ್ನೂ, ಬಟ್ಟೆಯಿಲ್ಲದವನಾಗಿದ್ದನ್ನೂ, ಅಸ್ವಸ್ಥನಾಗಿದ್ದುದನ್ನೂ, ಸೆರೆಮನೆಯಲ್ಲಿದ್ದುದನ್ನೂ ಕಂಡು ನಿನಗೆ ಉಪಚಾರಮಾಡದೆ ಹೋದೆವು?’ ಅನ್ನುವರು. 45ಆಗ ಆತನು ಉತ್ತರವಾಗಿ ಅವರಿಗೆ, ‘ನೀವು ಈ ಕೇವಲ ಅಲ್ಪರಾದವರಲ್ಲಿ ಒಬ್ಬನಿಗೆ ಏನನ್ನು ಮಾಡದೆ ಹೋದಿರೋ ಅದನ್ನು ನನಗೂ ಮಾಡದೆ ಹೋದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಅನ್ನುವನು. 46ಮತ್ತು ಅನೀತಿವಂತರಾದ ಇವರು ನಿತ್ಯದಂಡನೆಗೆ ಹೋಗುವರು ಆದರೆ ನೀತಿವಂತರು ನಿತ್ಯಜೀವಕ್ಕೆ ಹೋಗುವರು” ಎಂದು ಹೇಳಿದನು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ A, ವಾರದ ದಿನಗಳ ವರ್ಷ II.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು