ಮುಖಪುಟ › ದೈನಂದಿನ ಬೈಬಲ್ ವಾಚನಗಳು › ನವೆಂಬರ್ 2026 › 22 ನವೆಂಬರ್
ಆರ್ಥೊಡಾಕ್ಸ್ ಪಂಚಾಂಗ · ನವೆಂಬರ್ 9 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 22 ನವೆಂಬರ್ 2026
ಭಾನುವಾರ · ಸ್ವರ 8
ಹಬ್ಬಗಳು ಮತ್ತು ಸಂತರು
ಪಂಚಾಶತ್ತಮದ ನಂತರದ 25ನೇ ಭಾನುವಾರ
ಉಪವಾಸ
ಉಪವಾಸವಿಲ್ಲ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಉದಯಕಾಲದ ಮೂರನೆಯ ಸುವಾರ್ತೆ
9ವಾರದ ಮೊದಲನೆಯ ದಿನ ಬೆಳಿಗ್ಗೆ ಯೇಸು ಜೀವಿತನಾಗಿ ಎದ್ದ ಮೇಲೆ ಮಗ್ದಲದ ಮರಿಯಳಿಗೆ ಮೊದಲು ಕಾಣಿಸಿಕೊಂಡನು. ಆತನು ಆಕೆಯನ್ನು ಏಳು ದೆವ್ವಗಳಿಂದ ಬಿಡಿಸಿದ್ದನು. 10ಆಕೆ ಹೋಗಿ ಆತನು ಕಾಣಿಸಿಕೊಂಡದ್ದನ್ನು ಆತನ ಜೊತೆಯಲ್ಲಿದ್ದವರಿಗೆ ತಿಳಿಸಿದಳು; ಅವರು ಶೋಕಿಸುತ್ತಾ ಅಳುತ್ತಿದ್ದರು. 11“ಆತನು ಬದುಕಿದ್ದಾನೆ ನನಗೆ ಕಾಣಿಸಿಕೊಂಡನು” ಎಂದು ಅವಳು ಹೇಳಿದ ಮಾತನ್ನು ಅವರು ನಂಬಲಿಲ್ಲ. 12ಇದಾದ ಮೇಲೆ ಶಿಷ್ಯರಲ್ಲಿ ಇಬ್ಬರು ಊರಿಗೆ ಪ್ರಯಾಣ ಮಾಡುತ್ತಿರುವಾಗ ಆತನು ಅವರಿಗೆ ಬೇರೆ ರೂಪದಲ್ಲಿ ಕಾಣಿಸಿಕೊಂಡನು. 13ಅವರು ಹೋಗಿ ಉಳಿದ ಶಿಷ್ಯರಿಗೆ ತಿಳಿಸಿದರು. ಆದರೆ ಶಿಷ್ಯರು ಅವರನ್ನೂ ನಂಬಲಿಲ್ಲ. 14ಅನಂತರ ಹನ್ನೊಂದು ಮಂದಿ ಶಿಷ್ಯರು ಊಟಕ್ಕೆ ಕುಳಿತಿದ್ದಾಗ ಆತನು ಅವರಿಗೂ ಕಾಣಿಸಿಕೊಂಡನು. ತಾನು ಜೀವಿತನಾಗಿ ಎದ್ದು ಬಂದ ಮೇಲೆ ತನ್ನನ್ನು ನೋಡಿದವರ ಮಾತನ್ನು ಅವರು ನಂಬಲಿಲ್ಲವಾದ ಕಾರಣ ಆತನು ಅವರ ಅಪನಂಬಿಕೆಗೂ ಅವರ ಮನಸ್ಸಿನ ಕಾಠಿಣ್ಯಕ್ಕೂ ಅವರನ್ನು ಗದರಿಸಿದನು. 15ಆ ಮೇಲೆ ಅವರಿಗೆ, “ನೀವು ಲೋಕದ ಎಲ್ಲಾ ಕಡೆಗಳಿಗೂ ಹೋಗಿ ಸೃಷ್ಟಿಗಳಿಗೆಲ್ಲಾ ಸುವಾರ್ತೆಯನ್ನು ಸಾರಿರಿ. 16ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆ ಹೊಂದುವನು; ನಂಬದೇ ಹೋಗುವವನು ದಂಡನೆಗೆ ಗುರಿಯಾಗುವನು. 17“ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು, ಹೊಸ ಭಾಷೆಗಳಲ್ಲಿ ಮಾತನಾಡುವರು; 18ಹಾವುಗಳನ್ನು ಕೈಗಳಿಂದ ಎತ್ತಿಕೊಳ್ಳುವರು; ವಿಷಪದಾರ್ಥಗಳನ್ನೇನಾದರು ಕುಡಿದರೂ ಅವರಿಗೆ ಯಾವ ಹಾನಿಯೂ ಆಗುವುದಿಲ್ಲ. ಅವರು ರೋಗಿಗಳ ಮೇಲೆ ಕೈಯಿಟ್ಟರೆ ಅವರಿಗೆ ಸ್ವಸ್ಥವಾಗುವುದು” ಎಂದು ಹೇಳಿದನು. 19ಕರ್ತನಾದ ಯೇಸು ಅವರೊಂದಿಗೆ ಮಾತನಾಡಿದ ಮೇಲೆ ಪರಲೋಕಕ್ಕೆ ಒಯ್ಯಲ್ಪಟ್ಟು ದೇವರ ಬಲಗಡೆಯಲ್ಲಿ ಆಸನಾರೂಢನಾದನು. 20ಅನಂತರ ಅವರು ಹೊರಟುಹೋಗಿ ಎಲ್ಲಾ ಕಡೆಗಳಲ್ಲಿಯೂ ಸುವಾರ್ತೆಯನ್ನು ಸಾರಿದರು; ಮತ್ತು ಕರ್ತನು ಅವರ ಸಂಗಡ ಕೆಲಸ ಮಾಡುತ್ತಾ ಸೂಚಕಕಾರ್ಯಗಳಿಂದ ಸುವಾರ್ತೆಯ ವಾಕ್ಯವನ್ನು ದೃಢಪಡಿಸುತ್ತಾ ಇದ್ದನು.
ಪತ್ರಿಕೆ
1ನೀವು ದೇವರಿಂದ ಕರೆಯಲ್ಪಟ್ಟವರಾದ ಕಾರಣ ಆ ಕರೆಗೆ ಯೋಗ್ಯರಾಗಿ ಜೀವಿಸಬೇಕೆಂದು, ಕರ್ತನ ಸೇವೆಯಲ್ಲಿ ಸೆರೆಯವನಾದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 2ನೀವು ಪೂರ್ಣ ವಿನಯ, ಸಾತ್ವಿಕತ್ವಗಳಿಂದಲೂ ದೀರ್ಘಶಾಂತಿಯಿಂದಲೂ ಕೂಡಿದವರಾಗಿ, ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. 3ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಸಕ್ತರಾಗಿರಿ. 4ನೀವು ಕರೆಯಲ್ಪಟ್ಟಾಗ ಒಂದೇ ನಿರೀಕ್ಷೆಗಾಗಿ ಕರೆಯಲ್ಪಟ್ಟವರಂತೆಯೇ, ನೀವೆಲ್ಲರೂ ಒಂದೇ ದೇಹಕ್ಕೆ ಸೇರಿದವರು, ಒಬ್ಬನೇ ಆತ್ಮನನ್ನು ಹೊಂದಿದವರು, 5ನಿಮ್ಮೆಲ್ಲರಿಗೂ ಕರ್ತನು ಒಬ್ಬನೇ, ನಂಬಿಕೆಯು ಒಂದೇ, ದೀಕ್ಷಾಸ್ನಾನ ಒಂದೇ, 6ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ. ಆತನು ಎಲ್ಲರ ಮೇಲಿರುವವನೂ, ಎಲ್ಲರ ಮುಖಾಂತರ ಕಾರ್ಯ ನಡಿಸುವವನೂ, ಎಲ್ಲರಲ್ಲಿ ವಾಸಿಸುವವನೂ ಆಗಿದ್ದಾನೆ.
ಸುವಾರ್ತೆ
41ಆಗ ಸಭಾಮಂದಿರದ ಅಧಿಕಾರಿಯಾದ ಯಾಯೀರನೆಂಬ ಒಬ್ಬ ಮನುಷ್ಯನು ಬಂದು ಯೇಸುವಿನ ಪಾದಗಳಿಗೆ ಅಡ್ಡಬಿದ್ದನು. ಏಕೆಂದರೆ ಹೆಚ್ಚುಕಡಿಮೆ ಹನ್ನೆರಡು ವರ್ಷದವಳಾದ ಅವನ ಒಬ್ಬಳೇ ಮಗಳು ಸಾಯುವ ಸ್ಥಿತಿಯಲ್ಲಿದ್ದ ಕಾರಣ ಆತನನ್ನು ತನ್ನ ಮನೆಗೆ ಬರಬೇಕೆಂದು ಬೇಡಿಕೊಂಡನು. ಯೇಸು ಹೋಗುತ್ತಿರುವಲ್ಲಿ ಜನಸಮೂಹವು ಸುತ್ತಲಿನಿಂದಲೂ ಆತನನ್ನು ನೂಕಾಡುತ್ತಿತ್ತು. 43ಆಗ ಹನ್ನೆರಡು ವರ್ಷದಿಂದ ರಕ್ತಸ್ರಾವ ರೋಗವಿದ್ದ ಒಬ್ಬ ಹೆಂಗಸು ಅಲ್ಲಿಗೆ ಬಂದಿದ್ದಳು. ಆಕೆಯು ತನ್ನ ಬಳಿ ಇದ್ದ ಹಣವನ್ನೆಲ್ಲಾ ವೆಚ್ಚಮಾಡಿದರೂ ಒಬ್ಬ ವೈದ್ಯರಿಂದಲೂ ಗುಣಹೊಂದಲಾರದೆ ಇದ್ದಳು. 44ಆಕೆಯು ಹಿಂದಿನಿಂದ ಬಂದು ಆತನ ಅಂಗಿಯ ಅಂಚನ್ನು ಮುಟ್ಟಿದಳು; ಮುಟ್ಟುತ್ತಲೇ ಆಕೆಗೆ ರಕ್ತಸ್ರಾವವಾಗುವುದು ನಿಂತಿತು. 45ಆಗ ಯೇಸುವು, “ನನ್ನನ್ನು ಮುಟ್ಟಿದವರಾರು?” ಎಂದು ಕೇಳಲು ಎಲ್ಲರೂ, ನಾನಲ್ಲ, ನಾನಲ್ಲ ಅನ್ನಲು ಪೇತ್ರನು, “ಗುರುವೇ, ಎಷ್ಟೋ ಜನರು ನಿನ್ನನ್ನು ಮೈಮೇಲೆ ಬೀಳುತ್ತಾ ನೂಕುತ್ತಿದ್ದಾರಲ್ಲಾ” ಅಂದನು. 46ಆದರೆ ಯೇಸುವು, “ಯಾರೋ ಒಬ್ಬರು ನನ್ನನ್ನು ಮುಟ್ಟಿದರು; ನನ್ನಿಂದ ಶಕ್ತಿಯು ಹೊರಟಿತೆಂಬುದು ನನಗೆ ಗೊತ್ತಾಯಿತು” ಅಂದಾಗ, 47ಆ ಹೆಂಗಸು ತಾನು ಮರೆಯಾಗಿಲ್ಲವೆಂದು ತಿಳಿದು ನಡುಗುತ್ತಾ ಬಂದು ಯೇಸುವಿಗೆ ಅಡ್ಡಬಿದ್ದು ತಾನು ಇಂಥ ಕಾರಣದಿಂದ ಮುಟ್ಟಿದೆನೆಂತಲೂ ಮುಟ್ಟಿದ ಕೂಡಲೆ ತನಗೆ ವಾಸಿಯಾಯಿತೆಂದೂ ಎಲ್ಲರ ಮುಂದೆ ತಿಳಿಸಿದಳು. 48ಯೇಸು ಆಕೆಗೆ, “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು” ಎಂದು ಹೇಳಿದನು. 49ಆತನು ಇನ್ನೂ ಮಾತನಾಡುತ್ತಿರುವಲ್ಲಿ ಸಭಾಮಂದಿರದ ಅಧಿಕಾರಿಯ ಕಡೆಯವನೊಬ್ಬನು ಬಂದು, “ನಿನ್ನ ಮಗಳು ಸತ್ತುಹೋದಳು, ಗುರುವಿಗೆ ತೊಂದರೆ ಕೊಡಬೇಡ” ಅಂದನು. 50ಆದರೆ ಯೇಸು ಅದನ್ನು ಕೇಳಿ ಸಭಾಮಂದಿರದ ಅಧಿಕಾರಿಗೆ, “ಅಂಜಬೇಡ, ನಂಬಿಕೆ ಮಾತ್ರ ಇರಲಿ, ಆಕೆ ಬದುಕುವಳು” ಎಂದು ಉತ್ತರಕೊಟ್ಟನು. 51ತರುವಾಯ ಆತನು ಆ ಅಧಿಕಾರಿಯ ಮನೆಗೆ ಹೋಗಿ, ಪೇತ್ರ ಯೋಹಾನ ಯಾಕೋಬ ಮತ್ತು ಆ ಹುಡುಗಿಯ ತಂದೆತಾಯಿಯರನ್ನು ಹೊರತು ಬೇರೆ ಯಾರನ್ನೂ ತನ್ನ ಸಂಗಡ ಒಳಕ್ಕೆ ಬರಗೊಡಿಸಲಿಲ್ಲ. 52ಎಲ್ಲರು ಅಳುತ್ತಾ ಆಕೆಗೋಸ್ಕರ ಎದೆಬಡಿದುಕೊಳ್ಳುತ್ತಾ ಇದ್ದರು. ಯೇಸು ಅವರಿಗೆ, “ಅಳಬೇಡಿರಿ, ಆಕೆ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ” ಅನ್ನಲು, 53ಜನರು ಆಕೆ ಸತ್ತಳೆಂದು ತಿಳಿದುಕೊಂಡಿದ್ದರಿಂದ ಆತನನ್ನು ಪರಿಹಾಸ್ಯಮಾಡಿದರು. 54ಆದರೆ ಆತನು ಆಕೆಯ ಕೈ ಹಿಡಿದು, “ಮಗಳೇ, ಎದ್ದೇಳು” ಎಂದು ಕೂಗಿ ಹೇಳಿದನು. 55ಆಕೆಯ ಆತ್ಮವು ತಿರುಗಿ ಬಂದು ತಕ್ಷಣವೇ ಆಕೆ ಎದ್ದಳು. ತರುವಾಯ ಆತನು, ಈಕೆಗೆ ಊಟಮಾಡಿಸಿರಿ ಎಂದು ಅಪ್ಪಣೆಕೊಟ್ಟನು. 56ಆಕೆಯ ತಂದೆತಾಯಿಗಳು ಬೆರಗಾದರು. ಆತನು, ಈ ನಡೆದ ಸಂಗತಿಯನ್ನು ಯಾರಿಗೂ ತಿಳಿಸಬೇಡಿರೆಂದು ಅವರಿಗೆ ಆಜ್ಞಾಪಿಸಿದನು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 9 ನವೆಂಬರ್ ಎಂದರೆ ನಾಗರಿಕ ಪಂಚಾಂಗದ 22 ನವೆಂಬರ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು