Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ನವೆಂಬರ್ 2026 › 20 ನವೆಂಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 20 ನವೆಂಬರ್ 2026

ಶುಕ್ರವಾರ · ಸಾಮಾನ್ಯ ಕಾಲದ 33ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 33ನೇ ವಾರದ ಶುಕ್ರವಾರ

ವಾರದ ದಿನ · ಆರಾಧನಾ ಬಣ್ಣ: ಹಸಿರು

ಉಪವಾಸ ಮತ್ತು ಪ್ರಾಯಶ್ಚಿತ್ತ

ಪ್ರಾಯಶ್ಚಿತ್ತದ ದಿನ

ಪ್ರತಿ ಶುಕ್ರವಾರವೂ ಪ್ರಾಯಶ್ಚಿತ್ತದ ದಿನ; ಅದನ್ನು ಹೇಗೆ ಆಚರಿಸಬೇಕು ಎಂಬುದನ್ನು ಪ್ರತಿಯೊಂದು ಬಿಷಪರ ಸಮ್ಮೇಳನ ನಿರ್ಧರಿಸುತ್ತದೆ: ಮಾಂಸ ವರ್ಜನೆ ಅಥವಾ ಬೇರೊಂದು ಪ್ರಾಯಶ್ಚಿತ್ತ ಕಾರ್ಯ. ಉಪವಾಸ 18 ರಿಂದ 59 ವರ್ಷದವರಿಗೆ, ಮಾಂಸ ವರ್ಜನೆ 14 ವರ್ಷದಿಂದ ಕಡ್ಡಾಯ.

ದಿನದ ವಾಚನಗಳು

ಮೊದಲನೆಯ ವಾಚನ

ಪ್ರಕ 10:8–11

8ಅನಂತರ ಪರಲೋಕದಿಂದ ನನಗೆ ಕೇಳಿಸಿದ್ದ ಶಬ್ದವು ಮತ್ತೊಮ್ಮೆ ನನ್ನೊಂದಿಗೆ ಮಾತನಾಡಿ, “ನೀನು ಹೋಗಿ ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ನಿಂತುಕೊಂಡಿರುವ ದೂತನ ಕೈಯಲ್ಲಿರುವ ಆ ಬಿಚ್ಚಿದ ಸುರುಳಿಯನ್ನು ತೆಗೆದುಕೊ” ಎಂದು ಹೇಳಿತು. 9ನಾನು ಆ ದೂತನ ಬಳಿಗೆ ಹೋಗಿ, “ಆ ಚಿಕ್ಕ ಸುರುಳಿಯನ್ನು ನನಗೆ ಕೊಡು ಎಂದು ಕೇಳಲು ಅವನು ನನಗೆ, ನೀನು ಅದನ್ನು ತೆಗೆದುಕೊಂಡು ತಿಂದು ಬಿಡು, ಅದು ನಿನ್ನ ಹೊಟ್ಟೆಯನ್ನು ಕಹಿಯಾಗುವಂತೆ ಮಾಡುವುದು, ಆದರೆ ನಿನ್ನ ಬಾಯಿ ಜೇನಿನಂತೆ ಸಿಹಿಯಾಗಿರುವುದು” ಎಂದು ಹೇಳಿದನು. 10ಆಗ ನಾನು ಆ ಚಿಕ್ಕ ಸುರುಳಿಯನ್ನು ಆ ದೂತನ ಕೈಯಿಂದ ತೆಗೆದುಕೊಂಡು ತಿಂದುಬಿಟ್ಟೆನು. ಅದು ನನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿತ್ತು, ಅದನ್ನು ತಿಂದ ನಂತರ ನನ್ನ ಹೊಟ್ಟೆಯು ಕಹಿಯಾಯಿತು. 11ಅನಂತರ ಆ ದೂತನು ನನಗೆ, “ನೀನು ಇನ್ನೂ ಅನೇಕ ಪ್ರಜೆ, ಜನ, ಭಾಷೆಗಳನ್ನೂ, ಅರಸರನ್ನೂ ಕುರಿತು ಪ್ರವಾದನೆ ಹೇಳಬೇಕು” ಎಂದು ಆಜ್ಞಾಪಿಸಿದನು.

ಪ್ರತಿವಚನ ಕೀರ್ತನೆ

ಕೀರ್ತ 119:14, 24, 72, 103, 111, 131

14ಸರ್ವಸಂಪತ್ತಿನಲ್ಲಿ ಹೇಗೋ, ಹಾಗೆಯೇ ನಿನ್ನ ಕಟ್ಟಳೆಯ ಮಾರ್ಗದಲ್ಲಿ ಆನಂದಿಸುತ್ತೇನೆ. 24ನಿನ್ನ ಕಟ್ಟಳೆಗಳು ನನ್ನ ಪರಮಾನಂದ, ಅವೇ ನನ್ನ ಮಾರ್ಗದರ್ಶನ. 72ನೀನು ಕೊಟ್ಟ ಧರ್ಮಶಾಸ್ತ್ರವು, ಸಾವಿರಾರು ಚಿನ್ನ, ಬೆಳ್ಳಿಯ ನಾಣ್ಯಗಳಿಗಿಂತಲೂ ನನಗೆ ಅತಿಪ್ರಿಯವಾಗಿದೆ. 103ನಿನ್ನ ನುಡಿಗಳು ನನ್ನ ನಾಲಿಗೆಗೆ ಎಷ್ಟೋ ರುಚಿಯಾಗಿವೆ, ಅವು ನನ್ನ ಬಾಯಿಗೆ ಜೇನು ತುಪ್ಪಕ್ಕಿಂತಲೂ ಸಿಹಿಯಾಗಿವೆ. 111ನಿನ್ನ ಕಟ್ಟಳೆಗಳನ್ನು ನನ್ನ ನಿತ್ಯಸ್ವತ್ತಾಗಿ ಆರಿಸಿಕೊಂಡಿದ್ದೇನೆ, ಅವು ನನ್ನ ಹೃದಯಕ್ಕೆ ಉಲ್ಲಾಸಕರವಾಗಿವೆ. 131ನಾನು ಬಾಯಾರಿ ನಿನ್ನನ್ನೇ ಎದುರುನೋಡುತ್ತಿದ್ದೇನೆ, ನಿನ್ನ ಆಜ್ಞೆಗಳನ್ನು ಲವಲವಿಕೆಯಿಂದ ಬಯಸಿದ್ದೇನೆ.

ಸುವಾರ್ತೆ

ಲೂಕ 19:45–48

45ಬಳಿಕ ಆತನು ದೇವಾಲಯಕ್ಕೆ ಹೋಗಿ ವ್ಯಾಪಾರಮಾಡುವವರನ್ನು ಹೊರಹಾಕುವುದಕ್ಕೆ ಪ್ರಾರಂಭಿಸಿ ಅವರಿಗೆ, 46“‘ನನ್ನ ಆಲಯವು ಪ್ರಾರ್ಥನಾಲಯವಾಗಿರುವುದು’ ಎಂದು ಬರೆಯಲ್ಪಟ್ಟಿದೆಯಲ್ಲಾ, ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ” ಎಂದು ಹೇಳಿ ಅವರನ್ನು ಹೊರಗೆ ಅಟ್ಟಿದನು. 47ಅಲ್ಲದೆ ಆತನು ಪ್ರತಿದಿನ ದೇವಾಲಯದಲ್ಲಿ ಬಂದು ಬೋಧನೆ ಮಾಡುತ್ತಿದ್ದನು. ಅಷ್ಟರಲ್ಲಿ ಮುಖ್ಯಯಾಜಕರೂ, ಶಾಸ್ತ್ರಿಗಳೂ, ಪ್ರಜೆಗಳಲ್ಲಿ ನಾಯಕರೂ ಆತನನ್ನು ಕೊಲ್ಲುವುದಕ್ಕೆ ಸಂದರ್ಭನೋಡುತ್ತಿದ್ದರು. 48ಆದರೆ ಜನರೆಲ್ಲರು ಆತನ ಹತ್ತಿರದಲ್ಲಿದ್ದುಕೊಂಡು ಬೋಧನೆಯನ್ನು ಗಮನಿಸಿ ಕೇಳುತ್ತಿದ್ದುದರಿಂದ ಏನು ಮಾಡಬೇಕೆಂದು ಅವರಿಗೆ ತಿಳಿಯಲಿಲ್ಲ.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ A, ವಾರದ ದಿನಗಳ ವರ್ಷ II.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು