Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ನವೆಂಬರ್ 2026 › 8 ನವೆಂಬರ್

ಆರ್ಥೊಡಾಕ್ಸ್ ಪಂಚಾಂಗ · ಅಕ್ಟೋಬರ್ 26 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 8 ನವೆಂಬರ್ 2026

ಭಾನುವಾರ · ಸ್ವರ 6

ಹಬ್ಬಗಳು ಮತ್ತು ಸಂತರು

ಪಂಚಾಶತ್ತಮದ ನಂತರದ 23ನೇ ಭಾನುವಾರ

ಉಪವಾಸ

ಉಪವಾಸವಿಲ್ಲ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಸಂಧ್ಯಾ ಪ್ರಾರ್ಥನೆ: ವಾಚನ

ಯೆಶಾ 63:15–64:5, 8–9

15ಆಕಾಶದಿಂದ ನೋಡು, ಪರಿಶುದ್ಧವೂ, ಘನವೂ ಆದ ನಿನ್ನ ಉನ್ನತಸ್ಥಾನದಿಂದ ಲಕ್ಷಿಸು; ನಿನ್ನ ಉತ್ಸಾಹವೆಲ್ಲಿ, ನಿನ್ನ ಸಾಹಸ ಕಾರ್ಯಗಳೆಲ್ಲಿ? ನಿನ್ನ ಕರುಳ ಮರುಗಾಟವನ್ನೂ, ನಿನ್ನ ಕನಿಕರವನ್ನೂ ನಮ್ಮ ಕಡೆಗೆ ಬಿಗಿ ಹಿಡಿದಿದ್ದಿ. 16ನೀನೇ ನಮ್ಮ ಪಿತೃವಾಗಿದ್ದೀಯಲ್ಲಾ; ಅಬ್ರಹಾಮನು ನಮ್ಮನ್ನರಿಯನು, ಇಸ್ರಾಯೇಲನು ನಮ್ಮನ್ನು ಗುರುತಿಸನು; ಯೆಹೋವನೇ, ನೀನೇ ನಮ್ಮ ಪಿತೃ; ನೀನು ಆದಿಯಿಂದಲೂ ‘ನಮ್ಮ ವಿಮೋಚಕನು’ ಅನ್ನಿಸಿಕೊಂಡಿದ್ದಿ. 17ಯೆಹೋವನೇ, ನಾವು ನಿನ್ನ ಮಾರ್ಗದಿಂದ ತಪ್ಪಿ ಅಲೆಯುವಂತೆ ಏಕೆ ಮಾಡುತ್ತೀ? ನಾವು ನಿನಗೆ ಭಯಪಡದ ಹಾಗೆ ನಮ್ಮ ಹೃದಯವನ್ನು ಕಠಿನಪಡಿಸುವುದೇಕೆ? ನಿನ್ನ ಸೇವಕರ ನಿಮಿತ್ತ ನಿನ್ನ ಬಾಧ್ಯವಾದ ಕುಲಗಳಿಗಾಗಿ ತಿರುಗಿ ಪ್ರಸನ್ನನಾಗು. 18ನಿನ್ನ ಸ್ವಕೀಯಜನರು ಸ್ವಲ್ಪಕಾಲ ಮಾತ್ರ ನಿನ್ನ ಸ್ವತ್ತಾದ ಪವಿತ್ರಸ್ಥಳವನ್ನು ಅನುಭವಿಸುತ್ತಿದ್ದರು; ಈಗ ನಮ್ಮ ವೈರಿಗಳು ಅದನ್ನು ತುಳಿದುಬಿಟ್ಟಿದ್ದಾರೆ. 19ನಿನ್ನ ದೊರೆತನಕ್ಕೆ ಎಂದಿಗೂ ಒಳಪಡದೆ, ನಿನ್ನ ನಾಮವನ್ನು ಧರಿಸದೆ ಇರುವ ಜನರ ಹಾಗಿದ್ದೇವೆ. 64:1ಆಹಾ, ನೀನು ಆಕಾಶವನ್ನು ಸೀಳಿ ಇಳಿದು ಬರಬಾರದೇ! ನಿನ್ನ ದರ್ಶನವು ಉಂಟಾಗಿ ಪರ್ವತಗಳು ಅಗಲಿದರೆ ಎಷ್ಟೋ ಒಳ್ಳೆಯದು! 2ಒಣಗಿಡಕ್ಕೆ ಹತ್ತುವ ಕಿಚ್ಚಿನ ಪ್ರಕಾರ, ನೀರನ್ನು ಕುದಿಸುವ ಬೆಂಕಿಯೋಪಾದಿಯಲ್ಲಿಯೂ ನೀನು ಪ್ರತ್ಯಕ್ಷನಾಗಿ, ನಿನ್ನ ನಾಮಮಹತ್ತನ್ನು ನಿನ್ನ ಶತ್ರುಗಳಿಗೆ ತಿಳಿಯಪಡಿಸಿ, ಜನಾಂಗಗಳನ್ನು ನಿನ್ನ ದರ್ಶನದಿಂದ ನಡುಗಿಸಬಾರದೇ! 3ಹೌದು, ನೀನು ಮೊದಲಿನಂತೆ ನಮ್ಮ ನಿರೀಕ್ಷೆಗೆ ಮೀರಿದ ಭಯಂಕರ ಕೃತ್ಯಗಳನ್ನು ನಡೆಸಿ ಇಳಿದು ಬಂದು, ಪರ್ವತಗಳು ನಿನ್ನ ದರ್ಶನದಿಂದ ನಡುಗಿದರೆ ಎಷ್ಟೋ ಲೇಸು! 4ನಿನ್ನನ್ನು ಬಿಟ್ಟರೆ ನಿರೀಕ್ಷಿಸುವವನಿಗೆ ಕಾರ್ಯಕರ್ತನಾದ ಯಾವ ದೇವರನ್ನೂ ಆದಿಯಿಂದ ಯಾರೂ ಕೇಳಲಿಲ್ಲ, ಯಾರ ಕಿವಿಗೂ ಬೀಳಲಿಲ್ಲ, ಯಾರ ಕಣ್ಣೂ ಕಾಣಲಿಲ್ಲ. 5ಧರ್ಮವನ್ನು ಅನುಸರಿಸಲು ಸಂತೋಷಪಟ್ಟು ನಿನ್ನ ಮಾರ್ಗದಲ್ಲಿ ನಡೆಯುತ್ತಾ ನಿನ್ನನ್ನು ಸ್ಮರಿಸುವವರಿಗೆ ಪ್ರಸನ್ನನಾಗಿದ್ದಿ; ನಮ್ಮ ಮೇಲಾದರೋ ರೋಷಗೊಂಡಿದ್ದಿ; ಆದರೂ ಪಾಪದಲ್ಲಿ ಮುಳುಗಿರುವ ನಮಗೆ ರಕ್ಷಣೆಯಾದೀತೇ? 8ಈಗಲಾದರೋ ಯೆಹೋವನೇ, ನೀನು ನಮ್ಮ ತಂದೆಯಾಗಿದ್ದಿ; ನೀನು ಕುಂಬಾರನು, ನಾವು ಜೇಡಿಮಣ್ಣು, ನಾವೆಲ್ಲರೂ ನಿನ್ನ ಕೈಕೆಲಸವೇ. 9ಯೆಹೋವನೇ, ಅತಿರೋಷಗೊಳ್ಳದಿರು, ನಮ್ಮ ಅಧರ್ಮವನ್ನು ಕಡೆಯವರೆಗೂ ಜ್ಞಾಪಕದಲ್ಲಿಡಬೇಡ; ಎಲೈ, ಕರ್ತನೇ, ಕಟಾಕ್ಷಿಸು, ನಾವೆಲ್ಲರೂ ನಿನ್ನ ಜನರಾಗಿದ್ದೇವೆ.

ಸಂಧ್ಯಾ ಪ್ರಾರ್ಥನೆ: ವಾಚನ

ಯೆರೆ 2:2–12

2“ನೀನು ಹೋಗಿ ಯೆರೂಸಲೇಮಿನ ಕಿವಿಗೆ ಮುಟ್ಟುವಂತೆ ಈ ಮಾತುಗಳನ್ನು ಸಾರು, ‘ಯೆಹೋವನು ಹೀಗೆನ್ನುತ್ತಾನೆ, ನೀನು ಯೌವನದಲ್ಲಿ ನನ್ನ ಮೇಲೆ ಇಟ್ಟಿದ್ದ ಪ್ರೀತಿಯನ್ನೂ, ವಿವಾಹಕಾಲದ ನಿನ್ನ ಪ್ರೇಮವನ್ನೂ, ನೀನು ಬಿತ್ತನೆ ಮಾಡದ ಅರಣ್ಯದಲ್ಲಿ ನನ್ನನ್ನು ಹಿಂಬಾಲಿಸಿದ ನಿನ್ನ ಪಾತಿವ್ರತ್ಯವನ್ನೂ ನಿನ್ನ ಹಿತಕ್ಕಾಗಿ ಜ್ಞಾಪಕದಲ್ಲಿಟ್ಟಿದ್ದೇನೆ. 3ಇಸ್ರಾಯೇಲ್ ಯೆಹೋವನ ಬೆಳೆಯ ಪ್ರಥಮಫಲವಾಗಿ ಆತನಿಗೆ ಮೀಸಲಾಗಿತ್ತು; ಅದನ್ನು ತಿಂದವರೆಲ್ಲರೂ ದೋಷಿಗಳಾಗಿ ಕೇಡಿಗೆ ಗುರಿಯಾಗುವರು. ಇದು ಯೆಹೋವನು ನುಡಿ.’” 4ಯಾಕೋಬನ ಮನೆತನವೇ, ಇಸ್ರಾಯೇಲ್ ವಂಶದ ಸಕಲ ಗೋತ್ರಗಳೇ, ಯೆಹೋವನ ವಾಕ್ಯವನ್ನು ಕೇಳಿರಿ; 5ಯೆಹೋವನು ಹೀಗೆನ್ನುತ್ತಾನೆ, “ನಿಮ್ಮ ಪೂರ್ವಿಕರು ನನ್ನಲ್ಲಿ ಯಾವ ಅನ್ಯಾಯವನ್ನು ಕಂಡು, ವ್ಯರ್ಥಾಚರಣೆಯನ್ನು ಅನುಸರಿಸಿ ತಾವೇ ಅಯೋಗ್ಯರಾಗಿ ನನ್ನನ್ನು ಬಿಟ್ಟು ದೂರವಾದರು? 6‘ನಮ್ಮನ್ನು ಐಗುಪ್ತ ದೇಶದೊಳಗಿಂದ ಬರಮಾಡಿ ಕಾಡಾಗಿಯೂ, ಹಳ್ಳಕೊಳ್ಳವಾಗಿಯೂ, ನಿರ್ಜಲವಾಗಿಯೂ, ಘೋರಾಂಧಕಾರವಾಗಿಯೂ, ಯಾರೂ ಹಾದುಹೋಗದೆಯೂ, ಯಾರೂ ವಾಸಿಸದೆಯೂ ಇರುವ ಅರಣ್ಯದಲ್ಲಿ ನಡೆಸಿದ ಯೆಹೋವನು ಎಲ್ಲಿ?’ ಎಂದು ಅವರು ಅಂದುಕೊಳ್ಳಲಿಲ್ಲವಲ್ಲ. 7ನಾನು ನಿಮ್ಮನ್ನು ಫಲವತ್ತಾದ ಸೀಮೆಗೆ ಕರೆತಂದು, ಅದರ ಫಲವನ್ನು ಮತ್ತು ಸಾರವನ್ನು ಅನುಭವಿಸುವ ಹಾಗೆ ಮಾಡಿದೆನು. ಆದರೆ ನೀವು ಆ ನನ್ನ ದೇಶವನ್ನು ಪ್ರವೇಶಿಸಿ, ಅದನ್ನು ಹೊಲೆ ಮಾಡಿ, ನನ್ನ ಸ್ವತ್ತನ್ನು ಅಸಹ್ಯಪಡಿಸಿದಿರಿ. 8ಯಾಜಕರು, ‘ಯೆಹೋವನು ಎಲ್ಲಿ?’ ಎಂಬುದನ್ನು ವಿಚಾರಿಸಲಿಲ್ಲ. ಧರ್ಮೋಪದೇಶಕರು ನನ್ನನ್ನು ತಿಳಿಯಲ್ಲಿಲ್ಲ, ಪಾಲಕರು ನನಗೆ ದ್ರೋಹಮಾಡಿದರು, ಪ್ರವಾದಿಗಳು ಬಾಳ್ ದೇವತೆಯ ಆವೇಶದಿಂದ ಪ್ರವಾದಿಸಿ ಕೆಲಸಕ್ಕೆ ಬಾರದವುಗಳನ್ನು ಆರಾಧಿಸಿದರು. 9ಆದಕಾರಣ ನಾನು ನಿಮ್ಮೊಂದಿಗೆ ಇನ್ನೂ ವ್ಯಾಜ್ಯ ಮಾಡುವೆನು. ನಾನು ನಿಮ್ಮ ಸಂತಾನದವರೊಂದಿಗೂ ವ್ಯಾಜ್ಯ ಮಾಡುವೆನು” ಎಂದು ಯೆಹೋವನು ನುಡಿಯುತ್ತಾನೆ. 10“ಕಿತ್ತೀಮ್ ದ್ವೀಪಗಳಿಗೆ ಹೋಗಿ ನೋಡಿರಿ, ಕೇದಾರಿಗೆ ಕಳುಹಿಸಿ ವಿಚಾರಮಾಡಿರಿ, ಇಂತಹ ಕಾರ್ಯವು ಎಲ್ಲಿಯಾದರೂ ನಡೆಯಿತೇ ಎಂದು ಚೆನ್ನಾಗಿ ಆಲೋಚಿಸಿರಿ. 11ತನ್ನ ದೇವತೆಗಳು ದೇವರಲ್ಲದೆ ಇದ್ದರೂ ಅವುಗಳನ್ನು ಯಾವ ಜನಾಂಗವಾದರೂ ಬದಲಾಯಿಸಿಕೊಂಡಿತೋ? ಆದರೆ ನನ್ನ ಜನರು ತಮ್ಮ ಮಹಿಮೆಯಾದ ನನ್ನ ಬದಲಾಗಿ ಕೆಲಸಕ್ಕೆ ಬಾರದವುಗಳನ್ನು ಆರಿಸಿಕೊಂಡಿದ್ದಾರೆ. 12ಆಕಾಶಮಂಡಲವೇ, ಇದಕ್ಕೆ ಬೆಚ್ಚಿಬೆರಗಾಗು, ತತ್ತರಿಸು, ಹಾಳಾಗು” ಎಂದು ಯೆಹೋವನು ನುಡಿಯುತ್ತಾನೆ.

ಸಂಧ್ಯಾ ಪ್ರಾರ್ಥನೆ: ವಾಚನ

ಈ ಅನುವಾದದಲ್ಲಿ ಇಲ್ಲ

ಉದಯಕಾಲದ ಮೊದಲನೆಯ ಸುವಾರ್ತೆ

ಮತ್ತಾ 28:16–20

16ಆದರೆ ಹನ್ನೊಂದು ಮಂದಿ ಶಿಷ್ಯರು ಗಲಿಲಾಯಕ್ಕೆ ಹೋಗಿ, ಯೇಸು ತಮಗೆ ಗೊತ್ತುಮಾಡಿದ್ದ ಬೆಟ್ಟಕ್ಕೆ ಹೋಗಿ ಸೇರಿದರು. 17ಅವರು ಅಲ್ಲಿ ಯೇಸುವನ್ನು ಕಂಡು ಆತನನ್ನು ಆರಾಧಿಸಿದರು; ಆದರೆ ಕೆಲವರು ಸಂದೇಹಪಟ್ಟರು. 18ಯೇಸು ಅವರ ಹತ್ತಿರಕ್ಕೆ ಬಂದು, “ಪರಲೋಕದಲ್ಲಿಯೂ, ಭೂಲೋಕದಲ್ಲಿಯೂ ಇರುವ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. 19ಆದುದರಿಂದ ನೀವು ಹೊರಟುಹೋಗಿ ಎಲ್ಲಾ ಜನಾಂಗಗಳನ್ನು ಶಿಷ್ಯರನ್ನಾಗಿ ಮಾಡಿ; ಅವರಿಗೆ ತಂದೆ, ಮಗ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿರಿ. 20ನಾನು ನಿಮಗೆ ಆಜ್ಞಾಪಿಸಿದ ಎಲ್ಲವನ್ನು ಅನುಸರಿಸುವುದಕ್ಕೆ ಅವರಿಗೆ ಉಪದೇಶ ಮಾಡಿರಿ. ಹಾಗು ಇಗೋ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿನವೂ ನಿಮ್ಮ ಸಂಗಡ ಇರುತ್ತೇನೆ” ಎಂದು ಹೇಳಿದನು.

ಪತ್ರಿಕೆ

ಎಫೆ 2:4–10

4ಆದರೆ ಕರುಣಾನಿಧಿಯಾಗಿರುವ ದೇವರು ನಮ್ಮನ್ನು ಪ್ರೀತಿಸಿದ ಮಹಾ ಪ್ರೀತಿಯ ನಿಮಿತ್ತ, 5ಅಪರಾಧಗಳ ದೆಸೆಯಿಂದ ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. 6ಆತನು ಕ್ರಿಸ್ತ ಯೇಸುವಿನಲ್ಲಿ ನಮ್ಮೊಂದಿಗಿರುವ ದಯೆಯ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು 7ಮುಂದಿನ ಯುಗಗಳಲ್ಲಿ ನಮಗೆ ತೋರಿಸಬೇಕೆಂದು ಕ್ರಿಸ್ತಯೇಸುವಿನಲ್ಲಿರುವ ನಮ್ಮನ್ನು ಆತನೊಂದಿಗೆ ಎಬ್ಬಿಸಿ, ಪರಲೋಕದಲ್ಲಿ ಯೇಸುಕ್ರಿಸ್ತನೊಂದಿಗೆ ನಮ್ಮನ್ನು ಕೂರಿಸಿದ್ದಾನೆ. 8ನಂಬಿಕೆಯ ಮೂಲಕ ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ಈ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ದಾನವೇ. 9ಈ ರಕ್ಷಣೆಯೂ ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ, ಆದ್ದರಿಂದ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿಲ್ಲ. 10ನಾವಾದರೋ ದೇವರ ಕಲಾಕೃತಿಯಾಗಿದ್ದೇವೆ, ದೇವರು ಮೊದಲೇ ನಮಗಾಗಿ ಸಂಕಲ್ಪಿಸಿದ್ದ ಸತ್ಕಾರ್ಯಗಳನ್ನು ಮಾಡುವವರಾಗಿ ಬದುಕಬೇಕೆಂದು ಯೇಸು ಕ್ರಿಸ್ತನಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ.

ಪತ್ರಿಕೆ (ಭೂಕಂಪದ ಸಮಯದಲ್ಲಿ)

ಇಬ್ರಿ 12:6–13, 25–27

6ಏಕೆಂದರೆ ಕರ್ತನು ಯಾರನ್ನು ಪ್ರೀತಿಸುತ್ತಾನೋ ಅವರನ್ನು ಶಿಕ್ಷಿಸುತ್ತಾನೆ. ತಾನು ಮಗನಂತೆ ಸ್ವೀಕರಿಸುವ ಪ್ರತಿಯೊಬ್ಬನನ್ನು ದಂಡಿಸುತ್ತಾನೆ ಎಂಬುದಾಗಿದೆ. 7ನಿಮ್ಮ ಶಿಸ್ತಿಗಾಗಿಯೇ, ನಿಮಗೆ ಶಿಕ್ಷೆಯಾಗುತ್ತದೆಂದು ಅದನ್ನು ಸಹಿಸಿಕೊಳ್ಳಿರಿ. ದೇವರು ನಿಮ್ಮನ್ನು ಮಕ್ಕಳೆಂದು ನಡೆಸುತ್ತಾನೆ. ಯಾಕೆಂದರೆ ತಂದೆಯಿಂದ ಶಿಕ್ಷೆ ಹೊಂದದ ಮಗನೆಲ್ಲಿದ್ದಾನೆ? 8ಎಲ್ಲರೂ ಪಾಲುಗಾರರಬೇಕಾದ ಶಿಕ್ಷೆಯು ನಿಮಗುಂಟಾಗದಿದ್ದರೆ ನೀವು ಹಾದರದಿಂದ ಹುಟ್ಟಿದವರೇ ಹೊರತು ಆತನ ಮಕ್ಕಳಲ್ಲ. 9ಇದು ಮಾತ್ರವಲ್ಲದೆ ನಮ್ಮನ್ನು ಶಿಕ್ಷಿಸಿದ ಲೌಕಿಕ ತಂದೆಗಳನ್ನು ನಾವು ಸನ್ಮಾನಿಸಿತ್ತೇವಲ್ಲ. ನಮ್ಮ ಆತ್ಮಗಳಿಗೆ ತಂದೆಯಾಗಿರುವಾತನಿಗೆ ನಾವು ಇನ್ನೂ ಹೆಚ್ಚಾಗಿ ಅಧೀನರಾಗಿ ಜೀವಿಸಬೇಕಲ್ಲವೇ? 10ನಮ್ಮ ಲೌಕಿಕ ತಂದೆಗಳು ಮನಸ್ಸಿಗೆ ಸರಿದೋರಿದಂತೆ ಕೆಲವು ಕಾಲ ಮಾತ್ರ ನಮ್ಮನ್ನು ಶಿಕ್ಷಿಸಿದರು. ಆದರೆ ದೇವರು ತನ್ನ ಪರಿಶುದ್ಧತೆಯಲ್ಲಿ ನಾವು ಪಾಲುಗಾರರಾಗಬೇಕೆಂದು ನಮ್ಮ ಹಿತಕ್ಕಾಗಿಯೇ ಶಿಕ್ಷಿಸುತ್ತಾನೆ. 11ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರವಾಗಿ ತೋರದೆ, ದುಃಖಕರವಾಗಿ ತೋರುತ್ತದೆ. ಆದರೆ ಶಿಸ್ತಿನ ಅಭ್ಯಾಸವನ್ನು ಹೊಂದಿದವರು, ಮುಂದೆ ಸಮಾಧಾನವುಳ್ಳ ನೀತಿಯ ಫಲವನ್ನು ಪಡೆಯುತ್ತಾರೆ. 12ಆದುದ್ದರಿಂದ ಜೋಲುಬಿದ್ದ ಕೈಗಳನ್ನೂ ಮತ್ತು ನಡುಗುವ ಮೊಣಕಾಲುಗಳನ್ನೂ ಬಲಪಡಿಸಿರಿ. 13ನಿಮ್ಮ ಪಾದಗಳಿಗೆ ನೇರವಾದ ದಾರಿಯನ್ನು ಮಾಡಿಕೊಳ್ಳಿರಿ. ಹೀಗೆ ಮಾಡಿದರೆ ಕುಂಟುವ ಕಾಲು ಉಳುಕಿ ಹೋಗದೇ ವಾಸಿಯಾಗುವುದು. 25ಮಾತನಾಡುತ್ತಿರುವಾತನನ್ನು ನೀವು ಅಸಡ್ಡೆ ಮಾಡದಂತೆ ನೋಡಿಕೊಳ್ಳಿರಿ. ಏಕೆಂದರೆ ಭೂಮಿಯ ಮೇಲೆ ದೈವೋಕ್ತಿಗಳನ್ನಾಡಿದವನನ್ನು ಅಸಡ್ಡೆಮಾಡಿದವರು ದಂಡನೆಗೆ ತಪ್ಪಿಸಿಕೊಳ್ಳಲಾಗದಿದ್ದರೆ, ಪರಲೋಕದಿಂದ ಮಾತನಾಡುವಾತನನ್ನು ಬಿಟ್ಟು ದೂರವಾಗಿ ನಾವು ಹೋದರೆ ದಂಡನೆಯಿಂದ ಹೇಗೆ ತಪ್ಪಿಸಿಕೊಂಡೆವು? 26ಆತನ ಧ್ವನಿಯು ಆಗ ಭೂಮಿಯನ್ನು ಕದಲಿಸಿತು. ಈಗಲಾದರೋ ಆತನು, “ಇನ್ನೊಂದೇ ಸಾರಿ ನಾನು ಭೂಮಿಯನ್ನು ಮಾತ್ರವಲ್ಲದೆ ಪರಲೋಕವನ್ನೂ ಕದಲಿಸುತ್ತೇನೆ” ಎಂದು ವಾಗ್ದಾನಮಾಡಿ ಹೇಳಿದ್ದಾನೆ. 27“ಇನ್ನೊಂದೇ ಸಾರಿ,” ಎಂಬ ಈ ಮಾತನ್ನು ಯೋಚಿಸಿದರೆ, ಕದಲಿಸಿರುವ ವಸ್ತುಗಳು ನಿರ್ಮಿತವಾದವುಗಳಾದ್ದರಿಂದ ತೆಗೆದುಹಾಕಲ್ಪಡುತ್ತವೆಂಬುದು ಸ್ಪಷ್ಟವಾಗುತ್ತದೆ. ಆಗ, ಕದಲಿಸದೇ ಇರುವ ವಸ್ತುಗಳು ಸ್ಥಿರವಾಗಿ ನಿಲ್ಲುವವು.

ಪತ್ರಿಕೆ (ಸಂತ ದೆಮೆತ್ರಿಯಸ್)

2 ತಿಮೊ 2:1–10

1ನನ್ನ ಮಗನೇ, ನೀನು ಕ್ರಿಸ್ತ ಯೇಸುವಿನಲ್ಲಿರುವ ಕೃಪೆಯಿಂದ ಬಲಹೊಂದಿದವನಾಗು. 2ನೀನು ಅನೇಕ ಸಾಕ್ಷಿಗಳ ಮುಂದೆ ನನ್ನಿಂದ ಕೇಳಿದ ಉಪದೇಶವನ್ನು ಇತರರಿಗೆ ಬೋಧಿಸಲು ಶಕ್ತರಾದ, ನಂಬಿಗಸ್ತರಾದ ಜನರಿಗೆ ಅದನ್ನು ಒಪ್ಪಿಸಿಕೊಡು. 3ಕ್ರಿಸ್ತ ಯೇಸುವಿನ ಒಳ್ಳೆಯ ಸೈನಿಕನಂತೆ ನನ್ನೊಂದಿಗೆ ಕಷ್ಟವನ್ನನುಭವಿಸು. 4ಯುದ್ಧಕ್ಕೆ ಹೋಗುವ ಸೈನಿಕನು ಲೋಕವ್ಯವಹಾರದಲ್ಲಿ ಸಿಕ್ಕಿಕೊಳ್ಳದೆ, ತನ್ನನ್ನು ಸೈನ್ಯದಲ್ಲಿ ಸೇರಿಸಿಕೊಂಡವನನ್ನು ಮೆಚ್ಚಿಸುವುದಕ್ಕಾಗಿ ಪ್ರಯಾಸ ಪಡುತ್ತಿರುವನಲ್ಲವೇ. 5ಇದಲ್ಲದೆ ಯಾವನಾದರೂ ಸ್ಪರ್ಧೆಯಲ್ಲಿ ಎದುರಾಳಿಯೊಡನೆ ಹೋರಾಡುವಾಗ ನಿಯಮದ ಪ್ರಕಾರ ಹೋರಾಡದಿದ್ದರೆ ಅವನಿಗೆ ಜಯಮಾಲೆಯು ದೊರಕುವುದಿಲ್ಲ. 6ವ್ಯವಸಾಯದ ಹುಟ್ಟುವಳಿಯಲ್ಲಿ ಮೊದಲನೆಯ ಪಾಲು ಕಷ್ಟಪಟ್ಟ ಕೃಷಿಕನಿಗೆ ದೊರೆಯುತ್ತದೆ. 7ನಾನು ಹೇಳುವುದನ್ನು ಯೋಚಿಸು. ಕರ್ತನು ಎಲ್ಲಾದರಲ್ಲಿಯೂ ನಿನಗೆ ವಿವೇಕವನ್ನು ದಯಪಾಲಿಸುವನು. 8ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೂ ದಾವೀದನ ವಂಶದವನೂ ಆಗಿರುವ ಯೇಸು ಕ್ರಿಸ್ತನನ್ನು ಜ್ಞಾಪಕಮಾಡಿಕೋ, ಇದೇ ನಾನು ಸಾರುವ ಸುವಾರ್ತೆ. 9ಇದರಲ್ಲಿ ನಾನು ಕಷ್ಟವನ್ನನುಭವಿಸಿ ದುಷ್ಕರ್ಮಿಯಂತೆ ಸಂಕೋಲೆಯಿಂದ ಬಂಧಿಸಲ್ಪಟ್ಟವನಾಗಿದ್ದೇನೆ. ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ. 10ಆದಕಾರಣ ದೇವರು ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ನಿತ್ಯ ಮಹಿಮೆಯ ಸಹಿತವಾಗಿ ಹೊಂದಬೇಕೆಂದು ನಾನು ಅವರಿಗೋಸ್ಕರ ಎಲ್ಲವನ್ನು ತಾಳಿಕೊಳ್ಳುತ್ತೇನೆ.

ಸುವಾರ್ತೆ

ಲೂಕ 16:19–31

19“ಐಶ್ವರ್ಯವಂತನಾದ ಒಬ್ಬ ಮನುಷ್ಯನಿದ್ದನು. ಅವನು ಬೆಲೆಬಾಳುವ ನಯವಾದ ನಾರುಮಡಿ ಮುಂತಾದ ವಸ್ತ್ರಗಳನ್ನು ಧರಿಸಿಕೊಂಡು, ಪ್ರತಿದಿನವು ಸುಖಸಂತೋಷಗಳಲ್ಲಿ ಜೀವಿಸುತ್ತಿದ್ದನು. 20ಅವನ ಮನೇ ಬಾಗಿಲಿನಲ್ಲಿ ಲಾಜರನೆಂಬ ಒಬ್ಬ ಭಿಕ್ಷುಕನು ಬಿದ್ದುಕೊಂಡಿದ್ದನು. ಇವನು ಮೈತುಂಬಾ ಹುಣ್ಣೆದ್ದವನು. 21ಐಶ್ವರ್ಯವಂತನ ಮೇಜಿನಿಂದ ಬಿದ್ದ ಎಂಜಲನ್ನು ತಿಂದು ಹಸಿವು ತೀರಿಸಿಕೊಳ್ಳಬೇಕೆಂದಿದ್ದನು. ಇಷ್ಟು ಮಾತ್ರವಲ್ಲದೆ ನಾಯಿಗಳು ಸಹ ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು. 22ಹೀಗಿರುವಲ್ಲಿ ಸ್ವಲ್ಪ ಕಾಲವಾದ ಮೇಲೆ ಆ ಭಿಕ್ಷುಕನು ಸತ್ತನು. ದೇವದೂತರು ಅವನನ್ನು ತೆಗೆದುಕೊಂಡು ಹೋಗಿ ಅಬ್ರಹಾಮನ ಎದೆಗೆ ಒರಗಿಸಿದರು. ಆ ಐಶ್ವರ್ಯವಂತನು ಸಹ ಸತ್ತನು. ಅವನನ್ನು ಹೂಣಿಟ್ಟರು. 23ಅವನು ಪಾತಾಳದೊಳಗೆ ಯಾತನೆಪಡುತ್ತಾ ಇರುವಲ್ಲಿ ಕಣ್ಣೆತ್ತಿ ದೂರದಿಂದ ಅಬ್ರಹಾಮನನ್ನೂ ಅವನ ಎದೆಗೆ ಒರಗಿಕೊಂಡಿದ್ದ ಲಾಜರನನ್ನೂ ನೋಡಿ, 24‘ತಂದೆಯೇ, ಅಬ್ರಹಾಮನೇ ನನ್ನ ಮೇಲೆ ಕರುಣೆ ಇಟ್ಟು ಲಾಜರನನ್ನು ಕಳುಹಿಸು ಅವನು ತನ್ನ ತುದಿ ಬೆರಳನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡಲಿ, ಏಕೆಂದರೆ ಈ ಉರಿಯಲ್ಲಿ ಸಂಕಟಪಡುತ್ತಿದ್ದೇನೆ’ ಎಂದು ಕೂಗಿ ಹೇಳಿದನು. 25ಆದರೆ ಅಬ್ರಹಾಮನು, ‘ಕಂದಾ, ನೀನು ಆಶಿಸಿದ ಸುಖಸಂಪತ್ತನ್ನು ನಿನ್ನ ಜೀವಮಾನದಲ್ಲಿ ಹೊಂದಿದ್ದಿ. ಹಾಗೆಯೇ ಲಾಜರನು ಕಷ್ಟವನ್ನು ಹೊಂದಿದನು ಎಂಬುದನ್ನು ನೆನಪಿಗೆ ತಂದುಕೋ. ಈಗಲಾದರೋ ಇಲ್ಲಿ ಇವನಿಗೆ ಸಮಾಧಾನ, ಆದರೆ ನಿನಗೆ ಸಂಕಟ. 26ಇದು ಮಾತ್ರವಲ್ಲದೆ ನಮಗೂ ನಿಮಗೂ ನಡುವೆ ದೊಡ್ಡದೊಂದು ಆಳವಾದ ಕಂದಕ ಇದೆ. ಆದಕಾರಣ ಈ ಕಡೆಯಿಂದ ನಿಮ್ಮ ಬಳಿಗೆ ಹೋಗಬೇಕೆಂದಿರುವವರು ಹೋಗಲಾರರು. ಮತ್ತು ಆ ಕಡೆಯಿಂದ ನಮ್ಮ ಬಳಿಗೆ ಯಾರಿಂದಲೂ ಬರಲಿಕ್ಕಾಗದು’ ಅಂದನು. 27ಆಗ ಅವನು, ‘ಅಪ್ಪಾ, ಹಾಗಾದರೆ ಲಾಜರನನ್ನು ನನ್ನ ತಂದೆಯ ಮನೆಗೆ ಕಳುಹಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. 28ನನಗೆ ಐದು ಮಂದಿ ಅಣ್ಣತಮ್ಮಂದಿರಿದ್ದಾರೆ. ಅವರು ಸಹ ಈ ಯಾತನೆಯ ಸ್ಥಳಕ್ಕೆ ಬಾರದಂತೆ ಅವನು ತಾನು ಕಂಡದ್ದನ್ನು ಅವರಿಗೆ ಚೆನ್ನಾಗಿ ತಿಳಿಸಿ ಹೇಳಲಿ’ ಅಂದನು. 29ಅದಕ್ಕೆ ಅಬ್ರಹಾಮನು, ‘ಮೋಶೆಯ ಧರ್ಮಶಾಸ್ತ್ರವೂ ಪ್ರವಾದಿಗಳ ಗ್ರಂಥಗಳೂ ಅವರಲ್ಲಿ ಅವೆ, ಅವುಗಳನ್ನು ಕೇಳಲಿ’ ಅನ್ನಲು, 30ಅವನು ‘ತಂದೆಯೇ, ಅಬ್ರಹಾಮನೇ ಹಾಗಲ್ಲ. ಸತ್ತವರ ಕಡೆಯಿಂದ ಒಬ್ಬನು ಅವರ ಬಳಿಗೆ ಹೋದರೆ ಅವರು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವರು’ ಅಂದನು. 31ಅಬ್ರಹಾಮನು ಅವನಿಗೆ, ‘ಅವರು ಮೋಶೆಯ ಮಾತನ್ನೂ ಪ್ರವಾದಿಗಳ ಮಾತನ್ನೂ ಕೇಳದಿದ್ದರೆ ಸತ್ತುಹೋಗಿದ್ದವನೊಬ್ಬನು ಜೀವಿತನಾಗಿ ಎದ್ದರೂ ಅವರು ಒಪ್ಪುವುದಿಲ್ಲ’ ಎಂದು ಹೇಳಿದನು.”

ಸುವಾರ್ತೆ (ಭೂಕಂಪದ ಸಮಯದಲ್ಲಿ)

ಮತ್ತಾ 8:23–27

23ಯೇಸು ದೋಣಿಯನ್ನು ಹತ್ತಿದಾಗ ಆತನ ಶಿಷ್ಯರು ಆತನನ್ನು ಹಿಂಬಾಲಿಸಿದರು. 24ಅವರು ಹೋಗುತ್ತಿರುವಾಗ ಸಮುದ್ರವು ಅಲ್ಲೋಲಕಲ್ಲೋಲವಾಗಿ ದೋಣಿಯು ಅಲೆಗಳಿಂದ ಮುಚ್ಚುವಂತೆ ಆಯಿತು; ಆದರೆ ಯೇಸು ನಿದ್ರಿಸುತ್ತಿದ್ದನು. 25ಆಗ ಶಿಷ್ಯರು ಆತನ ಹತ್ತಿರ ಬಂದು ಆತನನ್ನು ಎಬ್ಬಿಸಿ, “ಕರ್ತನೇ, ನಮ್ಮನ್ನು ಕಾಪಾಡು, ಸಾಯುತ್ತಿದ್ದೇವೆ” ಎಂದರು. 26ಆತನು ಅವರಿಗೆ, “ಅಲ್ಪ ವಿಶ್ವಾಸಿಗಳೇ, ಏಕೆ ಹೆದರುತ್ತೀರಿ?” ಎಂದು ಹೇಳಿ, ಎದ್ದು ಗಾಳಿಯನ್ನೂ ಸಮುದ್ರವನ್ನೂ ಗದರಿಸಿದನು; ಆಗ ಅಲ್ಲಿ ಸಂಪೂರ್ಣವಾಗಿ ಶಾಂತವಾಯಿತು. 27ಆ ಜನರು ಬೆರಗಾಗಿ, “ಈತನು ಎಂಥವನಾಗಿರಬಹುದು! ಗಾಳಿಯೂ ಸಮುದ್ರವೂ ಸಹ ಈತನಿಗೆ ವಿಧೇಯವಾಗುತ್ತವಲ್ಲಾ” ಅಂದರು.

ಸುವಾರ್ತೆ (ಸಂತ ದೆಮೆತ್ರಿಯಸ್)

ಯೋಹಾ 15:17–16:2

17ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂತಲೇ ಇವುಗಳನ್ನು ನಾನು ನಿಮಗೆ ಆಜ್ಞಾಪಿಸುತ್ತಿದ್ದೇನೆ. 18“ಲೋಕವು ನಿಮ್ಮನ್ನು ದ್ವೇಷ ಮಾಡುವುದಾದರೆ ಅದು ಮೊದಲು ನನ್ನನ್ನು ದ್ವೇಷ ಮಾಡಿತ್ತೆಂದು ನೀವು ತಿಳಿದುಕೊಳ್ಳಿರಿ. 19ನೀವು ಲೋಕದವರಾಗಿದ್ದರೆ ಲೋಕವು ನಿಮ್ಮನ್ನು ತನ್ನವರೆಂದು ಪ್ರೀತಿಸುತ್ತಿತ್ತು. ನೀವಾದರೋ ಲೋಕದ ಕಡೆಯವರಲ್ಲ, ನಾನು ನಿಮ್ಮನ್ನು ಆರಿಸಿಕೊಂಡಿದ್ದರಿಂದಲೇ ಲೋಕವು ನಿಮ್ಮನ್ನು ದ್ವೇಷ ಮಾಡುತ್ತದೆ. 20ದಣಿಗಿಂತ ಆಳು ದೊಡ್ಡವನಲ್ಲವೆಂಬುದಾಗಿ ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಕ ಮಾಡಿಕೊಳ್ಳಿರಿ. ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು. ಅವರು ನನ್ನ ಮಾತನ್ನು ಕೈಗೊಂಡಿದ್ದರೆ ನಿಮ್ಮ ಮಾತನ್ನು ಸಹ ಕೈಗೊಳ್ಳುತ್ತಿದ್ದರು. 21ಆದರೆ ಅವರು ನನ್ನನ್ನು ಕಳುಹಿಸಿಕೊಟ್ಟಾತನನ್ನು ತಿಳಿಯದವರಾದ್ದರಿಂದ ಇದನ್ನೆಲ್ಲಾ ನನ್ನ ಹೆಸರಿನ ನಿಮಿತ್ತ ನಿಮಗೆ ಮಾಡುವರು. 22ನಾನು ಬಾರದೆ ಮತ್ತು ಅವರ ಸಂಗಡ ಮಾತನಾಡದೆ ಹೋಗಿದ್ದಾರೆ ಅವರಿಗೆ ಪಾಪವು ಇರುತ್ತಿರಲಿಲ್ಲ. ಆದರೆ ಅವರ ಪಾಪಕ್ಕಾಗಿ ಈಗ ಯಾವ ನೆಪವೂ ಇಲ್ಲ. 23ನನ್ನನ್ನು ದ್ವೇಷಿಸುವವನು ನನ್ನ ತಂದೆಯನ್ನು ಸಹ ದ್ವೇಷಿಸುತ್ತಾನೆ. 24ಬೇರೆ ಯಾರೂ ಮಾಡದಿರುವ ಕ್ರಿಯೆಗಳನ್ನು ನಾನು ಅವರ ನಡುವೆ ಮಾಡದೆಹೋಗಿದ್ದರೆ ಅವರಿಗೆ ಪಾಪವು ಇರುತ್ತಿರಲಿಲ್ಲ. ಆದರೆ ಈಗ ಅವರು ನನ್ನ ಅದ್ಭುತಕಾರ್ಯಗಳನ್ನು ನೋಡಿದ್ದಾರೆ, ಆದರೂ ನನ್ನನ್ನೂ ನನ್ನ ತಂದೆಯನ್ನೂ ದ್ವೇಷಿಸಿದ್ದಾರೆ 25‘ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಿಸಿದರು’ ಎಂದು ಅವರ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ನೆರವೇರುವಂತೆ ಹೀಗಾಯಿತು. 26ಆದರೆ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಸಹಾಯಕನು, ಎಂದರೆ, ತಂದೆಯ ಬಳಿಯಿಂದ ಹೊರಡುವ ಸತ್ಯದ ಆತ್ಮನು ಬಂದಾಗ, ಆತನೇ ನನ್ನ ವಿಷಯವಾಗಿ ಸಾಕ್ಷಿ ಕೊಡುವನು. 27ನೀವು ಮೊದಲಿನಿಂದ ನನ್ನ ಸಂಗಡ ಇದ್ದುದರಿಂದ ನೀವೂ ಸಹ ನನಗೆ ಸಾಕ್ಷಿಗಳಾಗಿದ್ದೀರಿ. 16:1“ನೀವು ನಂಬಿಕೆಯಿಂದ ಎಡವಿ ಬಿದ್ದು ಹೋಗಬಾರದೆಂದು ನಾನು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. 2ಅವರು ನಿಮ್ಮನ್ನು ಸಭಾಮಂದಿರದಿಂದ ಹೊರಗೆ ಹಾಕುವರು; ಅದಲ್ಲದೆ ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಬಲಿಕೊಟ್ಟೆನೆಂದು ಭಾವಿಸುವ ಕಾಲವು ಬರಲಿದೆ.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 26 ಅಕ್ಟೋಬರ್ ಎಂದರೆ ನಾಗರಿಕ ಪಂಚಾಂಗದ 8 ನವೆಂಬರ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು