ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಅಕ್ಟೋಬರ್ 2026 › 25 ಅಕ್ಟೋಬರ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 25 ಅಕ್ಟೋಬರ್ 2026
ಭಾನುವಾರ · ಸಾಮಾನ್ಯ ಕಾಲದ 30ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 30ನೇ ಭಾನುವಾರ
ಭಾನುವಾರ · ಆರಾಧನಾ ಬಣ್ಣ: ಹಸಿರು
ದಿನದ ವಾಚನಗಳು
ಮೊದಲನೆಯ ವಾಚನ
21ಪರದೇಶದವನಿಗೆ ಅನ್ಯಾಯ ಮಾಡಬಾರದು ಉಪದ್ರವ ಕೊಡಬಾರದು ನೀವು ಐಗುಪ್ತ ದೇಶದಲ್ಲಿ ಪರದೇಶಿಗಳಾಗಿದ್ದೀರಲ್ಲವೇ? 22ವಿಧವೆಯರನ್ನಾಗಲಿ, ದಿಕ್ಕಿಲ್ಲದ ಮಕ್ಕಳನ್ನಾಗಲಿ, ತೊಂದರೆಪಡಿಸಬಾರದು. 23ನೀವು ಇಂಥವರನ್ನು ತೊಂದರೆಪಡಿಸಿದರೆ ಅವರು ನನಗೆ ಮೊರೆಯಿಡುವರು ಆ ಮೊರೆಗೆ ನಾನು ಕಿವಿಗೊಡುವೆನೆಂದು ತಿಳಿದುಕೊಳ್ಳಿರಿ. 24ನಾನು ಕೋಪಗೊಂಡು ನಿಮ್ಮ ಶತ್ರುಗಳನ್ನು ಕತ್ತಿಯಿಂದ ಸಂಹಾರಮಾಡಿಸುವೆನು. ನಿಮ್ಮ ಹೆಂಡತಿಯರು ವಿಧವೆಯರಾಗುವರು. ನಿಮ್ಮ ಮಕ್ಕಳು ದಿಕ್ಕಿಲ್ಲದವರಾಗುವರು. 25ನನ್ನ ಜನರಲ್ಲಿ ಒಬ್ಬ ಬಡವನಿಗೆ ನೀನು ಹಣ ಕೊಟ್ಟರೆ ಅವನನ್ನು ಸಾಲಗಾರನಂತೆ ಕಾಣಬಾರದು. ಅವನಿಂದ ಬಡ್ಡಿಯನ್ನು ಕೇಳಬಾರದು. 26ನೀನು ಒಬ್ಬನ ಕಂಬಳಿಯನ್ನು ಅಡವು ಇಟ್ಟುಕೊಂಡರೆ ಸೂರ್ಯನು ಮುಳುಗುವಷ್ಟರಲ್ಲಿ ಅದನ್ನು ಹಿಂದಕ್ಕೆ ಕೊಡಬೇಕು. 27ಏಕೆಂದರೆ ಅದು ಅವನಿಗೆ ಒಂದೇ ಹೊದಿಕೆಯಾಗಿದೆ. ಅದೇ ಅವನ ಮೈಗೆ ಉಡುಪು. ಅವನು ಬೇರೆ ಯಾವುದನ್ನು ಹೊದ್ದುಕೊಂಡು ಮಲಗಬೇಕು? ಅವನು ನನಗೆ ಮೊರೆಯಿಟ್ಟರೆ ನಾನು ಕಿವಿಗೊಟ್ಟು ಕೇಳುವೆನು. ಏಕೆಂದರೆ ನಾನು ದಯಾಪರನು.
ಪ್ರತಿವಚನ ಕೀರ್ತನೆ
1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು. ಯೆಹೋವನ ಸೇವಕನಾದ ದಾವೀದನು ಸೌಲನಿಂದಲೂ, ಎಲ್ಲಾ ಶತ್ರುಗಳ ಕೈಯಿಂದಲೂ ತಪ್ಪಿಸಲ್ಪಟ್ಟಾಗ ಯೆಹೋವನ ಘನಕ್ಕಾಗಿ ಈ ಪದ್ಯವನ್ನು ರಚಿಸಿ ಹೇಳಿದನು. ನನ್ನ ಬಲವಾಗಿರುವ ಯೆಹೋವನೇ, ನಿನ್ನಲ್ಲಿಯೇ ಮಮತೆಯಿಡುತ್ತೇನೆ. 2ಯೆಹೋವನು ನನ್ನ ಬಂಡೆಯು, ನನ್ನ ಕೋಟೆಯು, ನನ್ನ ವಿಮೋಚಕನು, ನನ್ನ ದೇವರು, ನನ್ನ ಆಶ್ರಯಗಿರಿಯು, ನನ್ನ ಗುರಾಣಿಯು, ನನ್ನ ರಕ್ಷಣೆಯ ಕೊಂಬು ಮತ್ತು ನನ್ನ ದುರ್ಗವು ಆಗಿದ್ದಾನೆ. 3ಯೆಹೋವನು ಸ್ತೋತ್ರಕ್ಕೆ ಅರ್ಹನು; ನಾನು ಆತನಿಗೆ ಮೊರೆಯಿಡಲು ಆತನು ನನ್ನನ್ನು ಶತ್ರುಗಳಿಂದ ರಕ್ಷಿಸುತ್ತಾನೆ. 46ಯೆಹೋವನು ಚೈತನ್ಯಸ್ವರೂಪನು; ನನ್ನ ಶರಣನಿಗೆ ಸ್ತೋತ್ರ; ನನ್ನನ್ನು ರಕ್ಷಿಸುವ ದೇವರಿಗೆ ಕೊಂಡಾಟವಾಗಲಿ. 50ಆತನು ತಾನು ನೇಮಿಸಿದ ಅರಸನಿಗೋಸ್ಕರ ವಿಶೇಷ ರಕ್ಷಣೆಯನ್ನು ದಯಪಾಲಿಸುವವನಾಗಿದ್ದಾನೆ; ತಾನು ಅಭಿಷೇಕಿಸಿದ ದಾವೀದನಿಗೂ ಮತ್ತು ಅವನ ಸಂತತಿಯವರಿಗೂ ಸದಾಕಾಲ ಕೃಪೆಯನ್ನು ಅನುಗ್ರಹಿಸುವವನಾಗಿದ್ದಾನೆ.
ಎರಡನೆಯ ವಾಚನ
5ಯಾಕೆಂದರೆ ನಾವು ನಿಮ್ಮಲ್ಲಿ ಸಾರಿದ ಸುವಾರ್ತೆಯು ಬರೀ ಮಾತಾಗಿ ಬಾರದೆ ಶಕ್ತಿಯೊಡನೆಯೂ ಪವಿತ್ರಾತ್ಮದೊಡನೆಯೂ ಮತ್ತು ಬಹು ನಿಶ್ಚಯದೊಡನೆಯೂ ಬಂತೆಂಬುದನ್ನು ನೀವೂ ಬಲ್ಲಿರಿ. ಯಾಕೆಂದರೆ ನಾವು ನಿಮ್ಮಲ್ಲಿದ್ದುಕೊಂಡು ನಿಮಗೋಸ್ಕರ ಹೇಗೆ ವರ್ತಿಸಿದ್ದೇವೆಂಬುದನ್ನು ನೀವು ಗಮನಿಸಿದ್ದೀರಿ. 6ಇದಲ್ಲದೆ ನೀವು ಬಹಳ ಹಿಂಸೆಯನ್ನು ಅನುಭವಿಸಬೇಕಾಗಿ ಬಂದಿದ್ದರೂ ಪವಿತ್ರಾತ್ಮನಿಂದುಂಟಾದ ಆನಂದದೊಡನೆ ದೇವರ ವಾಕ್ಯವನ್ನು ಅಂಗೀಕರಿಸಿ, ನಮ್ಮನ್ನು ಮತ್ತು ಕರ್ತನಾದ ಯೇಸುವನ್ನು ಅನುಸರಿಸುವವರಾದಿರಿ. 7ಹೀಗೆ ಮಕೆದೋನ್ಯದಲ್ಲಿಯೂ ಅಖಾಯದಲ್ಲಿಯೂ ಕ್ರಿಸ್ತನನ್ನು ನಂಬುವವರೆಲ್ಲರಿಗೆ ಮಾದರಿಯಾದಿರಿ. 8ಕರ್ತನ ವಾಕ್ಯವು ನಿಮ್ಮಿಂದಲೇ ಮಕೆದೋನ್ಯದಲ್ಲಿಯೂ ಅಖಾಯದಲ್ಲಿಯೂ ಘೋಷಿತವಾದದಲ್ಲದೆ, ದೇವರ ಮೇಲೆ ನೀವು ಇಟ್ಟಿರುವ ನಂಬಿಕೆಯು ಎಲ್ಲಾ ಸ್ಥಳಗಳಲ್ಲಿಯೂ ಪ್ರಸಿದ್ಧವಾಯಿತು. ಆದುದರಿಂದ ಆ ವಿಷಯದಲ್ಲಿ ನಾವು ಏನನ್ನೂ ಹೇಳಬೇಕಾಗಿಲ್ಲ. 9ನಾವು ನಿಮ್ಮಲ್ಲಿಗೆ ಬಂದಾಗ ನೀವು ನಮ್ಮನ್ನು ಹೇಗೆ ಸ್ವಾಗತಿಸಿದಿರಿ; ನೀವು ವಿಗ್ರಹಗಳನ್ನು ತೊರೆದು ದೇವರ ಕಡೆಗೆ ತಿರುಗಿಕೊಂಡು ಜೀವಸ್ವರೂಪನಾದ ಸತ್ಯ ದೇವರನ್ನು ಸೇವಿಸುವವರಾಗಿದ್ದೀರಿ 10ಮತ್ತು ಆತನು ಸತ್ತವರೊಳಗಿಂದ ಎಬ್ಬಿಸಿದ, ಆಕಾಶದೊಳಗಿಂದ ಬರಲಿಕ್ಕಿರುವಂಥ ಆತನ ಕುಮಾರನನ್ನು ಕಾದುಕುಳಿತಿರುವಿರೆಂತಲೂ ಆ ಜನರೇ ಹೇಳುತ್ತಾರೆ. ಈ ಯೇಸು ಮುಂದೆ ಬರುವ ದೈವಕೋಪದಿಂದ ನಮ್ಮನ್ನು ತಪ್ಪಿಸುವಾತನು.
ಸುವಾರ್ತೆ
34ಯೇಸು ಸದ್ದುಕಾಯರನ್ನು ಸದ್ದಿಲ್ಲದವರನ್ನಾಗಿ ಮಾಡಿದ್ದಾನೆಂದು ಫರಿಸಾಯರು ಕೇಳಿ ಅಲ್ಲಿಗೆ ಸೇರಿ ಬಂದರು. 35ಅವರಲ್ಲಿದ್ದ ಒಬ್ಬ ಧರ್ಮೋಪದೇಶಕನು ಆತನನ್ನು ಪರೀಕ್ಷೆ ಮಾಡಬೇಕೆಂದು, 36“ಗುರುವೇ, ಧರ್ಮಶಾಸ್ತ್ರದಲ್ಲಿ ಯಾವ ಆಜ್ಞೆ ಮುಖ್ಯವಾದದ್ದು” ಎಂದು ಆತನನ್ನು ಕೇಳಿದ್ದಕ್ಕೆ 37ಯೇಸು ಅವನಿಗೆ, “‘ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು’ 38ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು. 39ಇದಕ್ಕೆ ಸಮಾನವಾದ ಎರಡನೆಯ ಆಜ್ಞೆ ಯಾವುದೆಂದರೆ, ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದೇ. 40ಈ ಎರಡು ಆಜ್ಞೆಗಳಲ್ಲಿ ಎಲ್ಲಾ ಧರ್ಮನಿಯಮವೂ ಪ್ರವಾದನಾಗ್ರಂಥಗಳೂ ಆಧಾರವಾಗಿವೆ” ಎಂದು ಹೇಳಿದನು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ A, ವಾರದ ದಿನಗಳ ವರ್ಷ II.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು