ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಅಕ್ಟೋಬರ್ 2026 › 25 ಅಕ್ಟೋಬರ್
ಆರ್ಥೊಡಾಕ್ಸ್ ಪಂಚಾಂಗ · ಅಕ್ಟೋಬರ್ 12 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 25 ಅಕ್ಟೋಬರ್ 2026
ಭಾನುವಾರ · ಸ್ವರ 4
ಹಬ್ಬಗಳು ಮತ್ತು ಸಂತರು
ಪಂಚಾಶತ್ತಮದ ನಂತರದ 21ನೇ ಭಾನುವಾರ
ಏಳನೆಯ ಸಾರ್ವತ್ರಿಕ ಮಹಾಸಭೆಯ ಪಿತೃಗಳು
ಉಪವಾಸ
ಉಪವಾಸವಿಲ್ಲ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಸಂಧ್ಯಾ ಪ್ರಾರ್ಥನೆ: ವಾಚನ
14ಅಬ್ರಾಮನು ತನ್ನ ತಮ್ಮನ ಮಗನು ಸೆರೆಗೆ ಸಿಕ್ಕಿದ್ದನ್ನು ಕೇಳಿ ತನ್ನ ಮನೆಯಲ್ಲೇ ಹುಟ್ಟಿ ಬೆಳೆದ ಶಿಕ್ಷಿತರಾದ ಮುನ್ನೂರ ಹದಿನೆಂಟು ಮಂದಿ ಆಳುಗಳನ್ನು ಯುದ್ಧಕ್ಕೆ ಸಿದ್ಧಮಾಡಿಕೊಂಡು ಹೊರಟು ಆ ರಾಜರನ್ನು ದಾನೂರಿನವರೆಗೂ ಹಿಂದಟ್ಟಿದನು. 15ಅವನು ರಾತ್ರಿ ವೇಳೆಯಲ್ಲಿ ತನ್ನ ದಂಡನ್ನು ಎರಡು ಭಾಗಮಾಡಿ ತನ್ನ ಭಟರೊಡನೆ ಅವರ ಮೇಲೆ ಬಿದ್ದು, ಹೊಡೆದು, ದಮಸ್ಕ ಪಟ್ಟಣದ ಉತ್ತರಕಡೆಯಲ್ಲಿರುವ ಹೋಬಾ ಊರಿನ ತನಕ ಅವರನ್ನು ಹಿಂದಟ್ಟಿದ್ದನು. 16ರಾಜರು ಅಪಹರಿಸಿದ್ದ ಎಲ್ಲಾ ವಸ್ತುಗಳನ್ನು ಅವನು ತಿರುಗಿ ಪಡೆದುಕೊಂಡನು. ತನ್ನ ತಮ್ಮನ ಮಗನಾದ ಲೋಟನನ್ನೂ ಅವನ ಆಸ್ತಿಯನ್ನೂ ಬಿಡಿಸಿಕೊಂಡದ್ದಲ್ಲದೆ, ಸೆರೆಯಲ್ಲಿದ್ದ ಸ್ತ್ರೀಯರನ್ನೂ, ಉಳಿದಿದ್ದ ಜನರನ್ನು ಕರೆದುಕೊಂಡು ಬಂದನು. 17ಅವನು ಕೆದೊರ್ಲಗೋಮರನ್ನೂ ಅವನೊಂದಿಗೆ ಇದ್ದ ರಾಜರನ್ನೂ ಸೋಲಿಸಿ ಬಂದ ಮೇಲೆ ಸೊದೋಮಿನ ಅರಸನು ಅವನನ್ನು ಅರಸನ ತಗ್ಗು ಎನ್ನಿಸಿಕೊಳ್ಳುವ ಶಾವೆ ತಗ್ಗಿನಲ್ಲಿ ಅಬ್ರಾಮನನ್ನು ಎದುರುಗೊಂಡನು. 18ಸಾಲೇಮಿನ ಅರಸನಾದ ಮೆಲ್ಕೀಚೆದೆಕನು ಸಹ ಬಂದು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ಕೊಟ್ಟನು. ಇವನು ಪರಾತ್ಪರನಾದ ದೇವರ ಯಾಜಕನಾಗಿದ್ದನು. 19ಇವನು ಅಬ್ರಾಮನನ್ನು ಆಶೀರ್ವದಿಸಿ, “ಭೂಮ್ಯಾಕಾಶವನ್ನು ನಿರ್ಮಾಣಮಾಡಿದ ಪರಾತ್ಪರನಾದ ದೇವರ ಆಶೀರ್ವಾದವು ಅಬ್ರಾಮನಿಗೆ ದೊರೆಯಲಿ; 20ಪರಾತ್ಪರನಾದ ದೇವರು ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ್ದಕ್ಕಾಗಿ ಆತನಿಗೆ ಸ್ತೋತ್ರ” ಎಂದು ಹೇಳಿದನು. ಅಬ್ರಾಮನು ತಾನು ಗೆದ್ದು ತಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಯಾಜಕನಿಗೆ ಕೊಟ್ಟನು.
ಸಂಧ್ಯಾ ಪ್ರಾರ್ಥನೆ: ವಾಚನ
8ಆ ದೇಶವನ್ನು ನಿಮಗೇ ಕೊಟ್ಟಿದ್ದೇನೆ. ಯೆಹೋವನೆಂಬ ನಾನು ನಿಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್, ಯಾಕೋಬರಿಗೂ ಮತ್ತು ಅವರ ಸಂತತಿಯವರಿಗೂ ಆ ದೇಶವನ್ನು ಕೊಡುತ್ತೇನೆಂದು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದೆನಲ್ಲಾ. ಅದರಲ್ಲಿ ಪ್ರವೇಶಮಾಡಿ ಸ್ವಾಧೀನಮಾಡಿಕೊಳ್ಳಿರಿ’” ಎಂದು ಅಜ್ಞಾಪಿಸಿದನು. 9ಆ ಕಾಲದಲ್ಲಿ ನಾನು ನಿಮ್ಮ ಸಂಗಡ ಮಾತನಾಡಿ, “ನಿಮ್ಮ ಹೊಣೆಯನ್ನು ನಾನೊಬ್ಬನೇ ಹೊರುವುದು ಅಸಾಧ್ಯ. 10ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಅಧಿಕ ಸಂಖ್ಯೆಯಲ್ಲಿ ಹೆಚ್ಚಿಸಿದ್ದರಿಂದ ನೀವು ಈಗ ಆಕಾಶದ ನಕ್ಷತ್ರಗಳಷ್ಟು ಅಸಂಖ್ಯರಾಗಿದ್ದೀರಿ. 11ನೀವು ಈಗ ಇರುವುದಕ್ಕಿಂತಲೂ ಇನ್ನು ಸಾವಿರದಷ್ಟಾಗುವಂತೆ ನಿಮ್ಮ ಪೂರ್ವಿಕರ ದೇವರಾದ ಯೆಹೋವನು ನಿಮ್ಮನ್ನು ಹೆಚ್ಚಿಸಿ, ತಾನು ವಾಗ್ದಾನಮಾಡಿದ ಪ್ರಕಾರವೇ ನಿಮಗೆ ಶುಭಗಳನ್ನು ಅನುಗ್ರಹಿಸಲಿ. 15ಆಗ ನಾನು ನಿಮ್ಮಲ್ಲಿ ಪ್ರಸಿದ್ಧರಾದ, ಬುದ್ಧಿವಂತರನ್ನು ಆರಿಸಿಕೊಂಡು ಒಂದೊಂದು ಕುಲದಲ್ಲಿ ಸಾವಿರ ಜನರಿಗೆ ಒಬ್ಬರಂತೆ, ನೂರು ಜನರಿಗೆ ಒಬ್ಬರಂತೆ, ಐವತ್ತು ಜನರಿಗೆ ಒಬ್ಬರಂತೆ ಮತ್ತು ಹತ್ತು ಜನರಿಗೆ ಒಬ್ಬರಂತೆ ಅಧಿಕಾರಿಗಳನ್ನಾಗಿಯೂ ಮತ್ತು ಉಪ ಅಧಿಕಾರಿಗಳನ್ನಾಗಿಯೂ ನೇಮಿಸಿದೆನು. 16ಆ ನ್ಯಾಯಾಧಿಪತಿಗಳಿಗೆ ನಾನು ಆ ಕಾಲದಲ್ಲಿ ಅಪ್ಪಣೆಮಾಡಿ, “ನೀವು ಸ್ವಕುಲದವರ ವ್ಯಾಜ್ಯಗಳನ್ನು ವಿಚಾರಿಸಬೇಕು. ಅವರು ಇಸ್ರಾಯೇಲರೊಡನೆ ವ್ಯಾಜ್ಯವಾಡಿದರೂ, ಅನ್ಯರೊಡನೆ ವ್ಯಾಜ್ಯವಾಡಿದರೂ ನೀವು ನ್ಯಾಯದ ಪ್ರಕಾರವೇ ತೀರ್ಪುಮಾಡಬೇಕು. 17ನ್ಯಾಯವಿಚಾರಣೆ ಮಾಡುವಾಗ ಮುಖದಾಕ್ಷಿಣ್ಯಮಾಡದೆ, ಪ್ರಮುಖರನ್ನೂ ಹಾಗು ಅಲ್ಪರನ್ನೂ ಸಮಾನವಾಗಿ ಕಾಣಬೇಕು. ನೀವು ದೇವರ ಹೆಸರಿನಲ್ಲಿ ನ್ಯಾಯತೀರಿಸುವವರಾದ ಕಾರಣ ಮನುಷ್ಯರ ಮುಖವನ್ನು ನೋಡಿ ಹೆದರಬೇಡಿರಿ. ನೀವು ತೀರಿಸಲಿಕ್ಕೆ ಆಗದ ವ್ಯಾಜ್ಯಗಳನ್ನು ನನ್ನ ಬಳಿಗೆ ತರಬೇಕು; ನಾನೇ ಅವುಗಳನ್ನು ತೀರಿಸುವೆನು” ಎಂದು ಹೇಳಿದೆನು.
ಸಂಧ್ಯಾ ಪ್ರಾರ್ಥನೆ: ವಾಚನ
14ನಿಮ್ಮಿಂದ ಬೇರೇನೂ ಕೇಳಿಕೊಳ್ಳುತ್ತಾನೆ? ಆಲೋಚಿಸಿರಿ; ಉನ್ನತವಾದ ಆಕಾಶಮಂಡಲವೂ ಮತ್ತು ಭೂಮಿಯೂ, ಅದರಲ್ಲಿರುವ ಎಲ್ಲವೂ ನಿಮ್ಮ ದೇವರಾದ ಯೆಹೋವನವೇ. 15ಆದರೂ ಆತನು ನಿಮ್ಮ ಪೂರ್ವಿಕರಲ್ಲಿ ಇಷ್ಟವುಳ್ಳವನಾಗಿ ಅವರನ್ನು ಪ್ರೀತಿಸಿದ್ದರಿಂದ ಈಗ ನಿಮ್ಮ ಅನುಭವಕ್ಕೆ ಬಂದಂತೆ ಅವರ ತರುವಾಯ ಅವರ ಸಂತತಿಯವರಾದ ನಿಮ್ಮನ್ನೇ ಎಲ್ಲಾ ಜನಾಂಗಗಳೊಳಗಿಂದ ಆರಿಸಿಕೊಂಡನು. 16ಆದುದರಿಂದ ನೀವು ಆಜ್ಞೆಗೆ ಮಣಿಯದ ನಿಮ್ಮ ದುಷ್ಟಸ್ವಭಾವವನ್ನು ಬಿಟ್ಟು ನಿಮ್ಮ ಹೃದಯದಲ್ಲೇ ಸುನ್ನತಿಮಾಡಿಕೊಳ್ಳಿರಿ. 17ನಿಮ್ಮ ದೇವರಾದ ಯೆಹೋವನು ದೇವಾಧಿದೇವನಾಗಿಯೂ, ಕರ್ತರ ಕರ್ತನಾಗಿಯೂ ಇದ್ದಾನೆ. ಆತನು ಪರಮದೇವರೂ, ಪರಾಕ್ರಮಿಯೂ ಮತ್ತು ಭಯಂಕರನೂ ಆಗಿದ್ದಾನೆ. ಆತನು ಪಕ್ಷಪಾತ ಮಾಡುವವನಲ್ಲ ಹಾಗೂ ಲಂಚತೆಗೆದುಕೊಳ್ಳುವವನಲ್ಲ. 18ಆತನು ಅನಾಥರ ಮತ್ತು ವಿಧವೆಯರ ನ್ಯಾಯವನ್ನು ಸ್ಥಾಪಿಸುತ್ತಾನೆ. ಪರದೇಶಿಗಳಾದವರಲ್ಲಿ ಪ್ರೀತಿಯಿಟ್ಟು ಅವರಿಗೆ ಅನ್ನವಸ್ತ್ರಗಳನ್ನು ಕೊಡುತ್ತಾನೆ. 19ಐಗುಪ್ತದೇಶದಲ್ಲಿ ನೀವೇ ಪರದೇಶಿಗಳಾಗಿದ್ದದ್ದನ್ನು ಜ್ಞಾಪಿಸಿಕೊಂಡು ಪರದೇಶದವರಲ್ಲಿ ಪ್ರೀತಿಯಿಡಿರಿ. 20ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ, ಆತನನ್ನೇ ಸೇವಿಸಬೇಕು; ಆತನನ್ನು ಹೊಂದಿಕೊಂಡು, ಆತನ ಹೆಸರಿನ ಮೇಲೆಯೇ ಪ್ರಮಾಣಮಾಡಬೇಕು. 21ಆತನೊಬ್ಬನೇ ನಿಮ್ಮ ಸ್ತುತಿ ಸ್ತೋತ್ರಕ್ಕೆ ಪಾತ್ರನು; ಆತನು ನಿಮ್ಮ ದೇವರು; ನೀವು ನೋಡಿದ ಆ ಅದ್ಭುತವಾದ ಮಹತ್ಕಾರ್ಯಗಳನ್ನು ನಿಮಗೋಸ್ಕರ ನಡಿಸಿದವನು ಆತನೇ.
ಉದಯಕಾಲದ 10ನೇ ಸುವಾರ್ತೆ
1ತರುವಾಯ ಯೇಸು ತಿಬೇರಿಯ ಸಮುದ್ರದ ಬಳಿಯಲ್ಲಿ ಶಿಷ್ಯರಿಗೆ ಪುನಃ ಕಾಣಿಸಿಕೊಂಡನು: 2ಸೀಮೋನ್ ಪೇತ್ರನೂ, ದಿದುಮನೆಂಬ ತೋಮನೂ, ಗಲಿಲಾಯದ ಕಾನಾ ಊರಿನ ನತಾನಯೇಲನೂ, ಜೆಬೆದಾಯನ ಮಕ್ಕಳೂ ಮತ್ತು ಆತನ ಶಿಷ್ಯರಲ್ಲಿ ಇನ್ನಿಬ್ಬರೂ ಕೂಡಿಬಂದಿದ್ದರು. 3ಆಗ ಅವರಿಗೆ ಸೀಮೋನ ಪೇತ್ರನು, “ನಾನು ಮೀನು ಹಿಡಿಯಲು ಹೋಗುತ್ತೇನೆ” ಎಂದು ಹೇಳಲು ಅವರು ಅವನಿಗೆ, “ನಾವೂ ಸಹ ನಿನ್ನ ಜೊತೆಯಲ್ಲಿ ಬರುತ್ತೇವೆ” ಎಂದರು. ಅವರು ಹೊರಟು ದೋಣಿಯನ್ನು ಹತ್ತಿದರು. ಆದರೆ ಆ ರಾತ್ರಿ ಅವರಿಗೆ ಏನೂ ಸಿಗಲಿಲ್ಲ. 4ಬೆಳಗಾಗುವಾಗ ಯೇಸು ದಡದಲ್ಲಿ ನಿಂತಿದ್ದನು. ಆದಾಗ್ಯೂ ಶಿಷ್ಯರು ಆತನನ್ನು ಯೇಸುವೇ ಎಂದು ಗುರುತಿಸಲಿಲ್ಲ. 5ಆಗ ಯೇಸು ಅವರನ್ನು, “ಮಕ್ಕಳಿರಾ, ನಿಮ್ಮಲ್ಲಿ ಮೀನುಗಳು ಉಂಟೋ?” ಎಂದು ಕೇಳಲು, ಅವರು ಆತನಿಗೆ “ಇಲ್ಲ” ಎಂದು ಉತ್ತರಕೊಟ್ಟರು. 6ಆತನು ಅವರಿಗೆ, “ನೀವು ದೋಣಿಯ ಬಲಗಡೆಯಲ್ಲಿ ಬಲೆಯನ್ನು ಬೀಸಿರಿ; ಆಗ ನಿಮಗೆ ಸಿಕ್ಕುತ್ತವೆ” ಎಂದು ಹೇಳಿದನು. ಅವರು ಬಲೆ ಬೀಸಿದಾಗ ಮೀನುಗಳು ರಾಶಿ ರಾಶಿಯಾಗಿ ಬಲೆಗೆ ಬಂದು ಸೇರಿದ್ದರಿಂದ, ಅವರಿಗೆ ಬಲೆಯನ್ನು ಎಳೆಯುವುದಕ್ಕೆ ಸಾಧ್ಯವಾಗದೆ ಹೋಯಿತು. 7ಆಗ ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಪೇತ್ರನಿಗೆ, “ಆತನು ಕರ್ತನೇ” ಎಂದು ಹೇಳಿದನು. ಸೀಮೋನ್ ಪೇತ್ರನು ಅದನ್ನು ಕೇಳಿ ತಾನು ತೆಗೆದು ಬಿಟ್ಟಿದ್ದ ತನ್ನ ಮೇಲಂಗಿಯನ್ನು ಸುತ್ತಿಕೊಂಡು ಸಮುದ್ರದೊಳಗೆ ಧುಮುಕಿದನು. 8ದಡವು ದೂರವಿರಲಿಲ್ಲ, ಹೆಚ್ಚು ಕಡಿಮೆ ಇನ್ನೂರು ಅಡಿ ದೂರವಿತ್ತು. ಉಳಿದ ಶಿಷ್ಯರು ಮೀನು ತುಂಬಿದ್ದ ಆ ಬಲೆಯನ್ನು ಎಳೆಯುತ್ತಾ ದೋಣಿಯಲ್ಲಿಯೇ ಬಂದರು. 9ಅವರು ದಡಕ್ಕೆ ಬಂದು ಸೇರಿದಾಗ, ಕೆಂಡಗಳನ್ನೂ ಅವುಗಳ ಮೇಲೆ ಇಟ್ಟಿದ್ದ ಮೀನುಗಳನ್ನು ಮತ್ತು ರೊಟ್ಟಿಯನ್ನು ಕಂಡರು. 10ಯೇಸು ಅವರಿಗೆ, “ನೀವು ಈಗ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ” ಎಂದು ಹೇಳಲು, 11ಸೀಮೋನ್ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ದಡಕ್ಕೆ ಎಳದುಕೊಂಡು ಬಂದನು. ಅದು ನೂರೈವತ್ಮೂರು ದೊಡ್ಡ ಮೀನುಗಳಿಂದ ತುಂಬಿತ್ತು. ಅಷ್ಟು ಮೀನುಗಳು ಇದ್ದರೂ ಬಲೆಯು ಹರಿದಿರಲಿಲ್ಲ. 12ಯೇಸು ಅವರಿಗೆ, “ಬಂದು ಊಟ ಮಾಡಿರಿ” ಎಂದು ಹೇಳಿದನು. ಶಿಷ್ಯರು ಆತನನ್ನು ಕರ್ತನೆಂದು ತಿಳಿದಿದ್ದರಿಂದ “ನೀನು ಯಾರು?” ಎಂದು ಕೇಳುವುದಕ್ಕೆ ಅವರಲ್ಲಿ ಒಬ್ಬರಿಗೂ ಧೈರ್ಯವಿರಲಿಲ್ಲ. 13ಯೇಸು ಬಂದು ರೊಟ್ಟಿಯನ್ನು ತೆಗೆದುಕೊಂಡು ಅವರಿಗೆ ಕೊಟ್ಟನು. ಹಾಗೆಯೇ ಮೀನನ್ನೂ ಕೊಟ್ಟನು. 14ಯೇಸು ಸತ್ತವರೊಳಗಿಂದ ಜೀವಿತನಾಗಿ ಎದ್ದ ಮೇಲೆ, ತನ್ನ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಾರಿ.
ಪತ್ರಿಕೆ
16ಯಾವನಾದರೂ ಯೇಸು ಕ್ರಿಸ್ತನ ಮೇಲೆ ನಂಬಿಕೆ ಇಡುವುದರಿಂದಲೇ ಹೊರತು ಧರ್ಮಶಾಸ್ತ್ರದ ನೇಮನಿಷ್ಠೆಗಳನ್ನು ಅನುಸರಿಸುವುದರಿಂದ ನೀತಿವಂತನೆಂದು ನಿರ್ಣಯಿಸಲ್ಪಡುವುದಿಲ್ಲವೆಂಬುದು ನಮಗೆ ತಿಳಿದಿರುವುದರಿಂದ ನಾವು ಸಹ ಧರ್ಮಶಾಸ್ತ್ರದ ನೇಮನಿಷ್ಠೆಗಳನ್ನು ಬಿಟ್ಟು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಟ್ಟೆವು. ಏಕೆಂದರೆ ಯಾರೂ ಧರ್ಮಶಾಸ್ತ್ರದ ನೇಮನಿಷ್ಠೆಗಳನ್ನನುಸರಿಸಿ ನೀತಿವಂತನೆಂದು ನಿರ್ಣಯಿಸಲ್ಪಡುವುದಿಲ್ಲ. 17ಆದರೆ ನಾವು ಕ್ರಿಸ್ತನ ಮೂಲಕ ನೀತಿವಂತರೆಂಬ ನಿರ್ಣಯ ಹೊಂದುವುದಕ್ಕೆ ಪ್ರಯತ್ನಿಸುತ್ತಿರುವಾಗ, ನಾವೂ ಪಾಪಿಗಳಾಗಿ ತೋರಿಬಂದರೆ ಕ್ರಿಸ್ತನು ಪಾಪಕ್ಕೆ ಸಹಾಯಕನಾಗಿರುವನೋ? ಎಂದಿಗೂ ಇಲ್ಲ. 18ನಾನು ಕೆಡವಿದ್ದನ್ನೇ ತಿರುಗಿ ಕಟ್ಟಿದರೆ ನನ್ನನ್ನು ನಾನೇ ಅಪರಾಧಿ ಎಂದು ತೋರಿಸಿಕೊಳ್ಳುತ್ತೇನಲ್ಲಾ. 19ನಾನಂತೂ ದೇವರಿಗಾಗಿ ಜೀವಿಸುವುದಕ್ಕೋಸ್ಕರ ಧರ್ಮಶಾಸ್ತ್ರದ ಮೂಲಕವಾಗಿ ಧರ್ಮಶಾಸ್ತ್ರದ ಪಾಲಿಗೆ ಸತ್ತವನಾಗಿದ್ದೇನೆ. 20ನಾನು ಸಹ ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ, ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ. ಈಗ ಶರೀರದಲ್ಲಿರುವ ನಾನು ಜೀವಿಸುವುದು ಹೇಗೆಂದರೆ ದೇವಕುಮಾರನ ಮೇಲಣ ನಂಬಿಕೆಯಿಂದಲೇ. ಆತನು ನನ್ನನ್ನು ಪ್ರೀತಿಸಿ ನನಗಾಗಿ ತನ್ನನ್ನು ಒಪ್ಪಿಸಿಕೊಟ್ಟನು.
ಪತ್ರಿಕೆ (ಪಿತೃಗಳು)
7ನಿಮಗೆ ದೇವರ ವಾಕ್ಯವನ್ನು ಬೋಧಿಸಿದ ನಿಮ್ಮ ಸಭಾನಾಯಕರನ್ನು ನೆನಪುಮಾಡಿಕೊಳ್ಳಿರಿ. ಅವರು ಜೀವಾಂತ್ಯದವರೆಗೆ ಯಾವ ರೀತಿ ನಡೆದುಕೊಂಡುರೆಂಬುದನ್ನು ನೆನಪಿಸಿಕೊಂಡು ಮತ್ತು ಅವರ ನಂಬಿಕೆಯನ್ನು ಅನುಸರಿಸಿರಿ. 8ಯೇಸು ಕ್ರಿಸ್ತನು ನಿನ್ನೇ ಇದ್ದ ಹಾಗೆಯೇ, ಈ ಹೊತ್ತು, ನಿರಂತರವೂ ಇರುವನು. 9ನಾನಾ ವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಿಕೊಳ್ಳಬೇಡಿರಿ. ಏಕೆಂದರೆ ದೇವರ ಕೃಪೆಯಿಂದ ಹೃದಯವನ್ನು ದೃಢಪಡಿಸಿಕೊಳ್ಳುವುದು ಒಳ್ಳೆಯದು. ಭೋಜನ ಪದಾರ್ಥಗಳ ಕುರಿತಾದ ನಿಯಮಗಳನ್ನು ಅನುಸರಿಸುವವರಿಗೆ ಏನೂ ಪ್ರಯೋಜನವಾಗುವುದಿಲ್ಲ. 10ನಮಗೊಂದು ಯಜ್ಞವೇದಿ ಉಂಟು ಈ ಯಜ್ಞವೇದಿಯ ಪದಾರ್ಥಗಳನ್ನು ತಿನ್ನುವುದಕ್ಕೆ ಗುಡಾರದಲ್ಲಿ ಸೇವೆ ನಡೆಸುವವರಿಗೆ ಹಕ್ಕಿಲ್ಲ. 11ಮಹಾಯಾಜಕನು ದೋಷಪರಿಹಾರಕ ಯಜ್ಞದ ಪಶುಗಳ ರಕ್ತವನ್ನು ತೆಗೆದುಕೊಂಡು ಪವಿತ್ರ ಸ್ಥಾನದೊಳಗೆ ಹೋಗುತ್ತಾನೆ, ಆದರೆ ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಡಲ್ಪಡುತ್ತವಲ್ಲ. 12ಅದರಂತೆ ಯೇಸು ಕೂಡ ಸ್ವಂತ ರಕ್ತದಿಂದ ತನ್ನ ಜನರನ್ನು ಶುದ್ಧೀಕರಿಸುವುದಕ್ಕೋಸ್ಕರ ಪಟ್ಟಣದ ಹೊರಗೆ ಸತ್ತನು. 13ಆದ್ದರಿಂದ ನಾವು ಆತನ ನಿಮಿತ್ತ ಉಂಟಾಗುವ ನಿಂದೆಯನ್ನು ತಾಳಿಕೊಳ್ಳುವವರಾಗಿ, ಪಾಳೆಯದ ಆಚೆ ಆತನ ಬಳಿಗೆ ಹೊರಟುಹೋಗೊಣ. 14ಏಕೆಂದರೆ ಇಹದಲ್ಲಿ ಶಾಶ್ವತವಾದ ಪಟ್ಟಣವು ನಮಗಿಲ್ಲ. ಭವಿಷ್ಯತ್ತಿನಲ್ಲಿ ಬರುವ ಪಟ್ಟಣವನ್ನು ಎದುರುನೋಡುತ್ತಾ ಇದ್ದೇವೆ. 15ಆದ್ದರಿಂದ ಯೇಸುವಿನ ಮೂಲಕವಾಗಿಯೇ ದೇವರಿಗೆ ಸ್ತೋತ್ರವೆಂಬ ಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ, ಆತನನ್ನು ನಾವು ಕರ್ತನೆಂದು ನಂಬಿ ಬಾಯಿಂದ ಅರಿಕೆ ಮಾಡುವುದೇ ನಾವು ಅರ್ಪಿಸುವ ಯಜ್ಞವಾಗಿದೆ. 16ಇದಲ್ಲದೆ ಪರೋಪಕಾರ ಮಾಡುವುದನ್ನು, ಬೇರೆಯವರಿಗೆ ಸಹಾಯ ಮಾಡುವುದನ್ನು ಮರೆಯಬೇಡಿರಿ. ಇವೇ ದೇವರಿಗೆ ಮೆಚ್ಚಿಕೆಯಾದ ಯಜ್ಞಗಳು.
ಸುವಾರ್ತೆ
11ಸ್ವಲ್ಪಕಾಲದ ನಂತರ ಆತನು ನಾಯಿನ್ ಎಂಬ ಊರಿಗೆ ಹೋದನು. ಆತನ ಜೊತೆಯಲ್ಲಿ ಆತನ ಶಿಷ್ಯರು ಮತ್ತು ಬಹುಜನರು ಹೋದರು. 12ಆತನು ಊರು ಬಾಗಿಲಿನ ಹತ್ತಿರಕ್ಕೆ ಬಂದಾಗ ಸತ್ತುಹೋಗಿದ್ದ ಒಬ್ಬನನ್ನು ಹೊತ್ತುಕೊಂಡು ಹೊರಗೆ ತರುತ್ತಿದ್ದರು. ಅವನು ತನ್ನ ತಾಯಿಗೆ ಒಬ್ಬನೇ ಮಗನಾಗಿದ್ದನು; ಆಕೆಯು ವಿಧವೆಯಾಗಿದ್ದಳು. ಆಕೆಯ ಸಂಗಡ ಊರಿನವರು ಅನೇಕರಿದ್ದರು. 13ಕರ್ತನು ಆಕೆಯನ್ನು ಕಂಡು ಕನಿಕರಿಸಿ, “ಅಳಬೇಡ” ಎಂದು ಆಕೆಗೆ ಹೇಳಿ, 14ಚಟ್ಟದ ಹತ್ತಿರಕ್ಕೆ ಹೋಗಿ ಅದನ್ನು ಮುಟ್ಟಲು ಹೊತ್ತುಕೊಂಡವರು ನಿಂತರು. ಆಗ ಆತನು, “ಯೌವನಸ್ಥನೇ, ಏಳು ಎಂದು ನಿನಗೆ ಹೇಳುತ್ತೇನೆ” ಅಂದನು. 15ಅನ್ನುತ್ತಲೇ ಸತ್ತಿದ್ದವನು ಎದ್ದು ಕುಳಿತುಕೊಂಡು ಮಾತನಾಡುವುದಕ್ಕೆ ತೊಡಗಿದನು. ಯೇಸು ಅವನನ್ನು ಅವನ ತಾಯಿಗೆ ಒಪ್ಪಿಸಿದನು. 16ಎಲ್ಲರು ಭಯಹಿಡಿದವರಾಗಿ, “ಮಹಾಪ್ರವಾದಿಯು ನಮ್ಮಲ್ಲಿ ಎದ್ದಿದ್ದಾನೆ, ದೇವರು ತನ್ನ ಜನರನ್ನು ಸಂದರ್ಶಿಸಲು ಬಂದಿದ್ದಾನೆ” ಎಂದು ದೇವರನ್ನು ಕೊಂಡಾಡಿದರು.
ಸುವಾರ್ತೆ (ಪಿತೃಗಳು)
1ಯೇಸು ಈ ಮಾತುಗಳನ್ನು ಹೇಳಿದ ಮೇಲೆ ಆಕಾಶದ ಕಡೆಗೆ ಕಣ್ಣೆತ್ತಿ ನೋಡಿ ಹೇಳಿದ್ದೇನೆಂದರೆ, “ತಂದೆಯೇ, ಸಮಯ ಬಂದಿದೆ; ಮಗನು ನಿನ್ನನ್ನು ಮಹಿಮೆಪಡಿಸುವುದಕೊಸ್ಕರ ನಿನ್ನ ಮಗನನ್ನು ಮಹಿಮೆಪಡಿಸು. 2ನೀನು ಯಾರಾರನ್ನು ಕೊಟ್ಟಿದ್ದೀಯೋ ಅವರೆಲ್ಲರಿಗೂ ನಿತ್ಯಜೀವವನ್ನು ಕೊಡಬೇಕೆಂದು, ಆತನಿಗೆ ಎಲ್ಲಾ ಮನುಷ್ಯರ ಮೇಲೆ ಅಧಿಕಾರವನ್ನು ಕೊಟ್ಟಿರುವೆ. 3ಒಬ್ಬನೇ ಸತ್ಯ ದೇವರಾಗಿರುವ ನಿನ್ನನ್ನೂ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವುದೇ ನಿತ್ಯಜೀವವು. 4ನೀನು ನನಗೆ ಕೊಟ್ಟ ಕೆಲಸವನ್ನು ನಾನು ನೆರವೇರಿಸಿ ಭೂಲೋಕದಲ್ಲಿ ನಾನು ನಿನ್ನನ್ನು ಮಹಿಮೆಪಡಿಸಿದ್ದೇನೆ. 5ಈಗ ತಂದೆಯೇ, ಲೋಕವು ಸೃಷ್ಟಿಯಾಗುವುದಕ್ಕಿಂತ ಮೊದಲು, ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಂತೆಯೇ ನಿನ್ನೊಂದಿಗೆ ನನ್ನನ್ನು ಮಹಿಮೆಪಡಿಸು. 6“ಲೋಕದಲ್ಲಿ ನೀನು ನನಗೆ ಕೊಟ್ಟಿರುವ ಮನುಷ್ಯರಿಗೆ ನಾನು ನಿನ್ನ ಹೆಸರನ್ನು ಪ್ರಕಟಪಡಿಸಿದ್ದೇನೆ. ಇವರು ನಿನ್ನವರಾಗಿದ್ದರು ಮತ್ತು ನೀನು ಇವರನ್ನು ನನಗೆ ಕೊಟ್ಟಿದ್ದೀ. ಇವರು ನಿನ್ನ ವಾಕ್ಯಕ್ಕೆ ವಿಧೇಯರಾಗಿದ್ದಾರೆ. 7ನೀನು ನನಗೆ ಕೊಟ್ಟದ್ದೆಲ್ಲವೂ ನಿನ್ನಿಂದಲೇ ಬಂದಿದೆ ಎಂದು ಈಗ ಇವರು ತಿಳಿದುಕೊಂಡಿದ್ದಾರೆ. 8ಹೇಗೆಂದರೆ, ನೀನು ನನಗೆ ಕೊಟ್ಟ ಮಾತುಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ. ಇವರು ಆ ಮಾತುಗಳನ್ನು ಸ್ವೀಕರಿಸಿದ್ದಾರೆ ಮತ್ತು ನಾನು ನಿನ್ನ ಬಳಿಯಿಂದ ಬಂದವನೆಂದು ಇವರು ನಿಜವಾಗಿ ತಿಳಿದು, ನೀನೇ ನನ್ನನ್ನು ಕಳುಹಿಸಿದ್ದೀ ಎಂದು ನಂಬಿದ್ದಾರೆ. 9ನಾನು ಇವರಿಗಾಗಿಯೇ ಬೇಡಿಕೊಳ್ಳುತ್ತೇನೆ. ಲೋಕಕ್ಕೋಸ್ಕರ ಬೇಡಿಕೊಳ್ಳದೆ, ನೀನು ನನಗೆ ಕೊಟ್ಟವರಿಗಾಗಿಯೇ ಬೇಡಿಕೊಳ್ಳುತ್ತೇನೆ, ಏಕೆಂದರೆ, ಇವರು ನಿನ್ನವರು. 10ನನ್ನದೆಲ್ಲವೂ ನಿನ್ನದೇ ಮತ್ತು ನಿನ್ನದೆಲ್ಲವೂ ನನ್ನದೇ. ನಾನು ಇವರಲ್ಲಿ ಮಹಿಮೆಗೊಂಡಿದ್ದೇನೆ. 11ಇನ್ನು ಮೇಲೆ ನಾನು ಲೋಕದಲ್ಲಿ ಇರುವುದಿಲ್ಲ, ಇವರಾದರೋ ಲೋಕದಲ್ಲಿ ಇರುತ್ತಾರೆ. ನಾನು ನಿನ್ನ ಬಳಿಗೆ ಬರುತ್ತೇನೆ. ಪರಿಶುದ್ಧನಾದ ತಂದೆಯೇ, ನಾವು ಒಂದಾಗಿರುವ ಹಾಗೆ ಇವರೂ ಒಂದಾಗಿರಬೇಕೆಂದು, ನೀನು ನನಗೆ ಕೊಟ್ಟ ನಿನ್ನ ಹೆಸರಿನಲ್ಲಿ ಇವರನ್ನು ಕಾಪಾಡು. 12ನಾನು ಇವರ ಜೊತೆ ಇದ್ದಾಗ ನೀನು ನನಗೆ ಕೊಟ್ಟ ನಿನ್ನ ಹೆಸರಿನಲ್ಲಿ ಇವರನ್ನು ಕಾಪಾಡಿ ಸಂರಕ್ಷಿಸಿದೆನು. ಧರ್ಮಶಾಸ್ತ್ರದ ಮಾತು ನೆರವೇರುವಂತೆ ನಾಶಕ್ಕಾಗಿ ಹುಟ್ಟಿದವನೇ ಹೊರತು ಇವರಲ್ಲಿ ಒಬ್ಬನೂ ನಾಶವಾಗಲಿಲ್ಲ. 13“ಆದರೆ ಈಗ ನಾನು ನಿನ್ನ ಬಳಿಗೆ ಬರುತ್ತೇನೆ. ಆದುದರಿಂದ ನನ್ನ ಆನಂದವು ಇವರಲ್ಲಿ ಪರಿಪೂರ್ಣವಾಗಿರುವಂತೆ ನಾನು ಲೋಕದಲ್ಲಿದ್ದು ಈ ಮಾತುಗಳನ್ನಾಡುತ್ತಿದೇನೆ.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 12 ಅಕ್ಟೋಬರ್ ಎಂದರೆ ನಾಗರಿಕ ಪಂಚಾಂಗದ 25 ಅಕ್ಟೋಬರ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು