20ಆಗ ಜೆಬೆದಾಯನ ಮಕ್ಕಳ ತಾಯಿ ತನ್ನ ಮಕ್ಕಳೊಂದಿಗೆ ಯೇಸುವಿನ ಬಳಿಗೆ ಬಂದು; ಆತನಿಗೆ ಅಡ್ಡಬಿದ್ದು ಒಂದು ಉಪಕಾರ ಮಾಡಬೇಕೆಂದು ಬೇಡಿಕೊಂಡಳು.
21ಆತನು ಆಕೆಯನ್ನು, “ನಿನ್ನ ಅಪೇಕ್ಷೆ ಏನು?” ಎಂದು ಕೇಳಲು ಆಕೆ ಆತನಿಗೆ, “ನಿನ್ನ ರಾಜ್ಯದಲ್ಲಿ ನನ್ನ ಈ ಇಬ್ಬರು ಮಕ್ಕಳಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲೂ ಮತ್ತೊಬ್ಬನು ಎಡಗಡೆಯಲ್ಲೂ ಕುಳಿತುಕೊಳ್ಳುವಂತೆ ಅನುಗ್ರಹ ಮಾಡಬೇಕು” ಅಂದಳು.
22ಅದಕ್ಕೆ ಯೇಸು ಪ್ರತ್ಯುತ್ತರವಾಗಿ, “ನೀವು ಬೇಡಿಕೊಳ್ಳುತ್ತಿರುವುದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯಬೇಕಾಗಿರುವ ಪಾನಪಾತ್ರೆಯಲ್ಲಿ ಕುಡಿಯುವುದಕ್ಕೆ ನಿಮ್ಮಿಂದ ಆಗುವುದೋ?” ಎಂದು ಕೇಳಿದನು. ಅವರು ಆತನಿಗೆ, “ನಮ್ಮಿಂದ ಆಗುವುದು” ಅಂದರು.
23ಆಗ ಆತನು ಅವರಿಗೆ, “ನನ್ನ ಪಾನಪಾತ್ರೆಯಲ್ಲಿ ನಿಶ್ಚಯವಾಗಿ ನೀವು ಕುಡಿಯುವಿರಿ. ಆದರೆ ನನ್ನ ಎಡಬಲಗಡೆಗಳಲ್ಲಿ ಕುಳಿತುಕೊಳ್ಳುವಂತೆ ಅನುಗ್ರಹ ಮಾಡುವುದು ನನ್ನದಲ್ಲ, ಆದರೆ ನನ್ನ ತಂದೆಯಿಂದ ಅದು ಯಾರಿಗೆಂದು ಸಿದ್ಧಪಡಿಸಲಾಗಿದೆಯೋ ಅವರಿಗೇ ಸಿಕ್ಕುವುದು” ಎಂದು ಹೇಳಿದನು.
24ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿ ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರು.
25ಆದರೆ ಯೇಸು ಅವರನ್ನು ತನ್ನ ಹತ್ತಿರಕ್ಕೆ ಕರೆದು ಅವರಿಗೆ, “ಅನ್ಯಜನರ ಅಧಿಪತಿಗಳು ಅವರ ಮೇಲೆ ದೊರೆತನ ಮಾಡುತ್ತಾರೆ ಮತ್ತು ಅವರ ಮುಖ್ಯಾಧಿಕಾರಿಗಳು ಅವರ ಮೇಲೆ ಬಲಾತ್ಕಾರದಿಂದ ಅಧಿಕಾರ ನಡೆಸುತ್ತಾರೆ ಎಂದು ನಿಮಗೆ ಗೊತ್ತು.
26ಆದರೆ ನಿಮ್ಮಲ್ಲಿ ಹಾಗಿರಬಾರದು. ನಿಮ್ಮಲ್ಲಿ ದೊಡ್ಡವನಾಗಿರಲು ಬಯಸುವವನು ನಿಮ್ಮ ಸೇವಕನಾಗಿರಲಿ.
27ನಿಮ್ಮಲ್ಲಿ ಪ್ರಮುಖನಾಗಿರಲು ಬಯಸುವವನು ನಿಮ್ಮ ದಾಸನಾಗಿರಲಿ.
28ಹಾಗೆಯೇ ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವುದಕ್ಕಾಗಿ ಬರಲಿಲ್ಲ, ಸೇವೆ ಮಾಡುವುದಕ್ಕೂ, ಅನೇಕರ ವಿಮೋಚನೆಗಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದನು” ಎಂದು ಹೇಳಿದನು.