Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಪಕ್ಕಪಕ್ಕದಲ್ಲಿ ಸುವಾರ್ತೆಗಳು › ಯೆರೂಸಲೇಮಿನ ದಾರಿಯಲ್ಲಿ

ಪಕ್ಕಪಕ್ಕದಲ್ಲಿ ಸುವಾರ್ತೆಗಳು · ಯೆರೂಸಲೇಮಿನ ದಾರಿಯಲ್ಲಿ

ಪೇತ್ರನ ಅರಿಕೆ

ಮತ್ತಾ 16:13–20 · ಮಾರ್ಕ 8:27–30 · ಲೂಕ 9:18–21

ಮತ್ತಾಯನು

ಮತ್ತಾ 16:13–20

13ಯೇಸು ಫಿಲಿಪ್ಪನ ಕೈಸರೈಯ ಎಂಬ ಪಟ್ಟಣದ ಪ್ರಾಂತ್ಯಕ್ಕೆ ಬಂದಾಗ, “ಜನರು ಮನುಷ್ಯಕುಮಾರನಾದ ನನ್ನನ್ನು ಯಾರೆಂದು ಹೇಳುತ್ತಾರೆ” ಎಂದು ತನ್ನ ಶಿಷ್ಯರನ್ನು ಕೇಳಿದನು.

14ಅವರು, “ನಿನ್ನನ್ನು ಕೆಲವರು ಸ್ನಾನಿಕನಾದ ಯೋಹಾನನು ಅನ್ನುತ್ತಾರೆ, ಕೆಲವರು ಎಲೀಯನು ಅನ್ನುತ್ತಾರೆ ಮತ್ತು ಬೇರೆಯವರು ಯೆರಮೀಯನು, ಇಲ್ಲವೆ ಪ್ರವಾದಿಗಳಲ್ಲಿ ಒಬ್ಬನು” ಅನ್ನುತ್ತಾರೆ ಎಂದು ಹೇಳಿದರು.

15ಆತನು ಅವರನ್ನು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ ಎಂದು ಕೇಳಿದನು?”

16ಆಗ ಸೀಮೋನ ಪೇತ್ರನು, “ನೀನು ಜೀವವುಳ್ಳ ದೇವರ ಕುಮಾರನಾದ ಕ್ರಿಸ್ತನು” ಎಂದು ಉತ್ತರ ಕೊಟ್ಟನು.

17ಅದಕ್ಕೆ ಯೇಸು, “ಯೋನನ ಮಗನಾದ ಸೀಮೋನನೇ, ನೀನು ಧನ್ಯನು. ಏಕೆಂದರೆ ಇದು ಮನುಷ್ಯನಿಂದ ನಿನಗೆ ಪ್ರಕಟವಾಗಿಲ್ಲ, ಪರಲೋಕದಲ್ಲಿರುವ ನನ್ನ ತಂದೆಯೇ ಇದನ್ನೂ ನಿನಗೆ ಪ್ರಕಟಪಡಿಸಿರುವನು” ಎಂದು ಹೇಳಿದನು.

18ನಾನು ಇದನ್ನು ಸಹ ನಿನಗೆ ಹೇಳುತ್ತೇನೆ, “ನೀನು ಪೇತ್ರನು, ಈ ಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು. ಪಾತಾಳದ ಶಕ್ತಿಗಳು ಅದನ್ನು ಸೋಲಿಸಲಾರವು.

19ಪರಲೋಕ ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಭೂಲೋಕದಲ್ಲಿ ನೀನು ಯಾವುದನ್ನು ಕಟ್ಟುತ್ತೀಯೋ ಅದು ಪರಲೋಕದಲ್ಲಿಯೂ ಕಟ್ಟಲ್ಪಟ್ಟಿರುವುದು. ಮತ್ತು ಭೂಲೋಕದಲ್ಲಿ ನೀನು ಯಾವುದನ್ನು ಬಿಚ್ಚುತ್ತೀಯೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪಟ್ಟಿರುವುದು” ಅಂದನು.

20ಆಗ ಆತನು, ನಾನು ಕ್ರಿಸ್ತನಾಗಿದ್ದೆನೆಂಬುದನ್ನು ಯಾರಿಗೂ ಖಂಡಿತವಾಗಿ ಹೇಳಬೇಡಿರಿ ಎಂದು ತನ್ನ ಶಿಷ್ಯರಿಗೆ ಆಜ್ಞಾಪಿಸಿದನು.

ಮಾರ್ಕನು

ಮಾರ್ಕ 8:27–30

27ಯೇಸುವೂ ಆತನ ಶಿಷ್ಯರೂ ಫಿಲಿಪ್ಪನ ಕೈಸರೈಯ ಎಂಬ ಪಟ್ಟಣಕ್ಕೆ ಸೇರಿದ ಗ್ರಾಮಗಳಿಗೆ ಹೊರಟರು. ದಾರಿಯಲ್ಲಿ ಆತನು, “ಜನರು ನನ್ನನ್ನು ಯಾರೆಂದು ಹೇಳುತ್ತಾರೆ?” ಎಂದು ತನ್ನ ಶಿಷ್ಯರನ್ನು ಕೇಳಿದನು.

28ಅದಕ್ಕೆ ಅವರು, “ನಿನ್ನನ್ನು ಕೆಲವರು ಸ್ನಾನಿಕನಾದ ಯೋಹಾನನು ಅನ್ನುತ್ತಾರೆ; ಕೆಲವರು ಎಲೀಯನು ಅನ್ನುತ್ತಾರೆ; ಇನ್ನು ಕೆಲವರು ಪ್ರವಾದಿಗಳಲ್ಲಿ ಒಬ್ಬನು ಅನ್ನುತ್ತಾರೆ” ಎಂದು ಹೇಳಿದರು.

29ಆತನು ಅವರನ್ನು, ಕುರಿತು “ನೀವು ನನ್ನನ್ನು ಯಾರನ್ನುತ್ತೀರಿ?” ಎಂದು ಕೇಳಲಾಗಿ ಪೇತ್ರನು, “ನೀನು ಕ್ರಿಸ್ತನು” ಎಂದು ಉತ್ತರಕೊಟ್ಟನು.

30ಅದಕ್ಕೆ ಆತನು, “ನನ್ನ ವಿಷಯವಾಗಿ ಯಾರಿಗೂ ಹೇಳಬೇಡಿರಿ” ಎಂದು ಅವರಿಗೆ ಖಂಡಿತವಾಗಿ ಎಚ್ಚರಿಸಿದನು.

ಲೂಕನು

ಲೂಕ 9:18–21

18ಒಂದು ದಿನ ಯೇಸುವು ಏಕಾಂತವಾಗಿ ಪ್ರಾರ್ಥನೆಮಾಡುತ್ತಿರುವಾಗ ಆತನ ಶಿಷ್ಯರು ಆತನ ಸಂಗಡ ಇದ್ದರು. ಅನಂತರ ಆತನು ಅವರಿಗೆ, “ಜನರು ನನ್ನನ್ನು ಕುರಿತು ಏನು ಹೇಳುತ್ತಾರೆ?” ಎಂದು ಶಿಷ್ಯರನ್ನು ಕೇಳಲು,

19ಅವರು, “ನಿನ್ನನ್ನು ಸ್ನಾನಿಕನಾದ ಯೋಹಾನನು ಎಂದೂ, ಕೆಲವರು ಎಲೀಯನು ಎಂದೂ, ಇನ್ನು ಕೆಲವರು ಪೂರ್ವದ ಪ್ರವಾದಿಗಳಲ್ಲಿ ಯಾರೋ ಒಬ್ಬನು ಜೀವದಿಂದ ಎದ್ದಿದ್ದಾನೆ ಎಂದು ಅನ್ನುತ್ತಿದ್ದಾರೆ” ಎಂದು ಹೇಳಿದರು.

20ಯೇಸು ಅವರನ್ನು, “ಆದರೆ ನೀವು ನನ್ನನ್ನು ಯಾರು ಅನ್ನುತ್ತೀರಿ?” ಎಂದು ಕೇಳಲಾಗಿ ಪೇತ್ರನು, “ನೀನು ದೇವರಿಂದ ಬರಬೇಕಾಗಿರುವ ಕ್ರಿಸ್ತನು” ಎಂದು ಉತ್ತರ ಕೊಟ್ಟನು.

21ಆಗ ಯೇಸುವು, ಇದನ್ನು ಯಾರಿಗೂ ಹೇಳಬೇಡಿರಿ ಎಂದು ಬಹು ಖಂಡಿತವಾಗಿ ಅವರಿಗೆ ಅಪ್ಪಣೆ ಕೊಟ್ಟನು.

ಗುರುತಿಸಿರುವುದು: ನೀವು ಓದುವ ಅನುವಾದದಲ್ಲಿ ಪ್ರತಿಯೊಂದು ವೃತ್ತಾಂತದಲ್ಲೂ ಇರುವ ಪದಗಳು. ಅತಿ ಸಾಮಾನ್ಯ ಪದಗಳನ್ನು (“ಮತ್ತು”, “ಅವನು”) ಗುರುತಿಸಿಲ್ಲ; ಬೇರೆ ರೂಪದಲ್ಲಿರುವ ಪದವನ್ನು ಗುರುತಿಸದಿರಬಹುದು.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು