Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಡಿಸೆಂಬರ್ 2027 › 26 ಡಿಸೆಂಬರ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 26 ಡಿಸೆಂಬರ್ 2027

ಭಾನುವಾರ · ಕ್ರಿಸ್ಮಸ್ ಕಾಲ

ಹಬ್ಬಗಳು ಮತ್ತು ಸಂತರು

ಪವಿತ್ರ ಕುಟುಂಬ: ಯೇಸು, ಮರಿಯ ಮತ್ತು ಯೋಸೇಫ

ಹಬ್ಬ · ಆರಾಧನಾ ಬಣ್ಣ: ಬಿಳಿ

ದಿನದ ವಾಚನಗಳು

ಮೊದಲನೆಯ ವಾಚನ

1 ಸಮು 1:20–22, 24–28

20ಹನ್ನಳು ದಿನತುಂಬಿದ ಮೇಲೆ ಒಬ್ಬ ಮಗನನ್ನು ಹೆತ್ತಳು. ಯೆಹೋವನನ್ನು ಬೇಡಿ ಪಡೆದುಕೊಂಡೆನೆಂದು ಹೇಳಿ ಆ ಮಗನಿಗೆ ಸಮುವೇಲನೆಂದು ಹೆಸರಿಟ್ಟಳು. 21ಎಲ್ಕಾನನು ಎಂದಿನಂತೆ ಕುಟುಂಬ ಸಹಿತವಾಗಿ ಯೆಹೋವನಿಗೆ ವಾರ್ಷಿಕಯಜ್ಞವನ್ನು ಅರ್ಪಿಸಿ ಹರಕೆಸಲ್ಲಿಸಬೇಕೆಂದು ಶೀಲೋವಿಗೆ ಹೋಗುವುದಕ್ಕೆ ಸಿದ್ಧನಾಗಲು ಹನ್ನಳು 22“ಮಗನು ಮೊಲೆಬಿಡುವ ವರೆಗೂ ನಾನು ಬರುವುದಿಲ್ಲ; ಅವನು ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಂಡು ಯಾವಾಗಲೂ ಅಲ್ಲಿಯೇ ಇರುವ ಹಾಗೆ ಅವನನ್ನು ಕರೆದುಕೊಂಡು ಬರುವೆನು” ಎಂದು ಹೇಳಿದಳು. 24ಅನಂತರ ಆಕೆಯು ಮೂರು ವರ್ಷದ ಒಂದು ಹೋರಿಯನ್ನೂ, ಒಂದು ಏಫಾ ಹಿಟ್ಟನ್ನೂ, ಒಂದು ತಿತ್ತಿ ದ್ರಾಕ್ಷಾರಸವನ್ನೂ ತೆಗೆದುಕೊಂಡು ಪುತ್ರನೊಂದಿಗೆ ಶೀಲೋವಿನಲ್ಲಿದ್ದ ಯೆಹೋವನ ಮಂದಿರಕ್ಕೆ ಬಂದಳು. ಮಗನು ಇನ್ನೂ ಚಿಕ್ಕವನಾಗಿದ್ದನು. 25ಅವರು ಹೋರಿಯನ್ನು ಯಜ್ಞಮಾಡಿದ ಮೇಲೆ ಮಗನನ್ನು ಏಲಿಯ ಬಳಿಗೆ ಕರೆದುಕೊಂಡು ಬಂದರು. 26ಹನ್ನಳು ಏಲಿಗೆ “ಸ್ವಾಮೀ, ನಿನ್ನ ಜೀವದಾಣೆ; ಮೊದಲು ಯೆಹೋವನ ಸನ್ನಿಧಿಯಲ್ಲಿ ಪ್ರಾರ್ಥನೆಮಾಡುತ್ತಾ, ಇಲ್ಲಿ ನಿನ್ನ ಹತ್ತಿರ ನಿಂತಿದ್ದ ಸ್ತ್ರೀಯು ನಾನೇ. 27ಆತನು ನನ್ನ ಪ್ರಾರ್ಥನೆಯ ಫಲವಾಗಿ ಅನುಗ್ರಹಿಸಿದ ಮಗನು ಇವನೇ; 28ನಾನು ಇವನನ್ನು ಯೆಹೋವನಿಗೇ ಒಪ್ಪಿಸಿಬಿಟ್ಟಿದ್ದೇನೆ. ಇವನು ಜೀವದಿಂದಿರುವ ತನಕ ಆತನಿಗೇ ಪ್ರತಿಷ್ಠಿತನಾಗಿರುವನು” ಎಂದು ಹೇಳಿದಳು. ಆ ಮೇಲೆ ಅವರು ಶಿಲೋವಿನಲ್ಲಿ ಯೆಹೋವನನ್ನು ಆರಾಧಿಸಿದರು.

ಪ್ರತಿವಚನ ಕೀರ್ತನೆ

ಕೀರ್ತ 84:1–2, 4–5, 8–9

1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಗಿತ್ತೀಯ ರಾಗದಿಂದ ಹಾಡತಕ್ಕದ್ದು; ಕೋರಹೀಯರ ಕೀರ್ತನೆ. ಸೇನಾಧೀಶ್ವರನಾದ ಯೆಹೋವನೇ, ನಿನ್ನ ನಿವಾಸಗಳು ಎಷ್ಟೋ ರಮ್ಯವಾಗಿವೆ! 2ಯೆಹೋವನ ಆಲಯದ ಅಂಗಳಗಳಲ್ಲಿ ಸೇರಬೇಕೆಂದು, ನನ್ನ ಆತ್ಮವು ಹಂಬಲಿಸುತ್ತಾ ಕುಂದಿಹೋಗಿತ್ತು. ಆದರೆ ಈಗ ಚೈತನ್ಯಸ್ವರೂಪನಾದ ದೇವರಿಗೆ ನನ್ನ ತನುಮನಗಳಿಂದ ಹರ್ಷಧ್ವನಿಮಾಡುತ್ತೇನೆ. 4ನಿನ್ನ ಮಂದಿರದಲ್ಲಿ ವಾಸಿಸುವವರು ಧನ್ಯರು. ಅವರು ನಿತ್ಯವೂ ನಿನ್ನನ್ನು ಕೀರ್ತಿಸುತ್ತಾ ಇರುತ್ತಾರೆ. ಸೆಲಾ 5ನಿನ್ನಲ್ಲೇ ಬಲವನ್ನು ಹೊಂದುವ ಮನುಷ್ಯರು ಧನ್ಯರು. ಅವರು ಯಾತ್ರಿಕರಾಗಿ, 8“ಸೇನಾಧೀಶ್ವರನಾದ ಯೆಹೋವ ದೇವರೇ, ನನ್ನ ಮೊರೆಯನ್ನು ಕೇಳು; ಯಾಕೋಬ್ಯರ ದೇವರೇ, ಕಿವಿಗೊಡು” ಅನ್ನುತ್ತಾರೆ. ಸೆಲಾ 9ದೇವರೇ, ನಮಗೆ ಗುರಾಣಿಯಾಗಿರುವವನನ್ನು ನೋಡು; ನಿನ್ನ ಅಭಿಷಿಕ್ತನ ಮುಖವನ್ನು ಕಟಾಕ್ಷಿಸು.

ಎರಡನೆಯ ವಾಚನ

1 ಯೋಹಾ 3:1–2, 21–24

1ಇಗೋ, ನಾವು ದೇವರ ಮಕ್ಕಳೆಂದು ಕರೆಯಲ್ಪಡುವುದರಲ್ಲಿ ತಂದೆಯು ಎಂಥಾ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾನಲ್ಲಾ! ನಾವು ಆತನ ಮಕ್ಕಳಾಗಿದ್ದೇವೆ. ಲೋಕವು ಆತನನ್ನು ಅರ್ಥಮಾಡಿಕೊಳ್ಳದೆ ಇರುವುದರಿಂದ ನಮ್ಮನ್ನೂ ಅರ್ಥಮಾಡಿಕೊಳ್ಳುವುದಿಲ್ಲ. 2ಪ್ರಿಯರೇ, ನಾವು ಈಗ ದೇವರ ಮಕ್ಕಳಾಗಿದ್ದೇವೆ. ಮುಂದೆ ನಾವು ಎಂಥವರಾಗಿರುತ್ತೆವೋ ಎಂಬುದು ಇನ್ನೂ ತಿಳಿದಿಲ್ಲ. ಆದರೆ ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಾವು ಆತನ ಹಾಗಿರುವೆವೆಂದು ಬಲ್ಲೆವು. ಏಕೆಂದರೆ ಆತನಿರುವ ಪ್ರಕಾರವೇ ಆತನನ್ನು ನೋಡುವೆವು. 21ಪ್ರಿಯರೇ, ನಮ್ಮ ಹೃದಯವು ನಮ್ಮನ್ನು ದೋಷಿಗಳೆಂದು ಖಂಡಿಸಿ ನಡೆದರೆ ದೇವರ ಸನ್ನಿಧಿಯಲ್ಲಿ ನಮಗೆ ಭರವಸೆ ದೊರೆಯುತ್ತದೆ. 22ಆತನ ಆಜ್ಞೆಗಳನ್ನು ಕೈಕೊಂಡು ಆತನಿಗೆ ಮೆಚ್ಚಿಕೆಯಾಗುವ ಕಾರ್ಯಗಳನ್ನು ಮಾಡುವವರಾದರೆ ನಾವು ಏನು ಬೇಡಿಕೊಂಡರೂ ಆತನಿಂದ ಹೊಂದುವೆವು. 23ದೇವರ ಆಜ್ಞೆ ಯಾವುದೆಂದರೆ ನಾವು ಆತನ ಮಗನಾದ ಯೇಸು ಕ್ರಿಸ್ತನನ್ನು ನಂಬಿ ಆತನು ನಮಗೆ ಕೊಟ್ಟಿರುವ ಆಜ್ಞೆಗಳ ಪ್ರಕಾರ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ. 24ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವವನು ಆತನಲ್ಲಿ ನೆಲೆಗೊಂಡಿರುತ್ತಾನೆ ಮತ್ತು ದೇವರು ಆತನಲ್ಲಿ ನೆಲೆಗೊಂಡಿರುತ್ತಾನೆ. ಆತನು ಅವನಲ್ಲಿ ನೆಲೆಗೊಂಡಿರುತ್ತಾನೆ. ನಮ್ಮಲ್ಲಿ ನೆಲೆಗೊಂಡಿದ್ದಾನೆಂದು ಆತನು ನಮಗೆ ಅನುಗ್ರಹಿಸಿರುವ ಆತ್ಮನಿಂದ ನಾವು ಬಲ್ಲವರಾಗಿದ್ದೇವೆ.

ಸುವಾರ್ತೆ

ಲೂಕ 2:41–52

41ಯೇಸುವಿನ ತಂದೆತಾಯಿಗಳು ಪ್ರತಿವರ್ಷವೂ ಪಸ್ಕ ಹಬ್ಬಕ್ಕೆ ಯೆರೂಸಲೇಮಿಗೆ ಹೋಗುತ್ತಿದ್ದರು. 42ಆತನು ಹನ್ನೆರಡು ವರ್ಷದವನಾದಾಗ ಅವರು ಪದ್ಧತಿಯ ಪ್ರಕಾರ ಅಲ್ಲಿಗೆ ಹೋದರು. 43ಹಬ್ಬದ ದಿನಗಳನ್ನು ಮುಗಿಸಿಕೊಂಡು ಹಿಂತಿರುಗಿ ಬರುವಾಗ ಬಾಲಕನಾದ ಯೇಸು ಯೆರೂಸಲೇಮಿನಲ್ಲಿಯೇ ಉಳಿದುಕೊಂಡನು. ಅವನ ತಂದೆತಾಯಿಗಳು ಅದನ್ನು ತಿಳಿಯದೆ, 44ಆತನು ಯಾತ್ರಿಕರ ಗುಂಪಿನಲ್ಲಿ ಸೇರಿರಬಹುದೆಂದು ಊಹಿಸಿ, ಒಂದು ದಿನದ ಪ್ರಯಾಣ ಮಾಡಿಬಿಟ್ಟಿದ್ದರು. ನಂತರ ಬಂಧುಬಾಂಧವರಲ್ಲಿಯೂ ಪರಿಚಿತರಲ್ಲಿಯೂ ಹುಡುಕಾಡಿ, 45ಆತನನ್ನು ಕಾಣದಿದ್ದಾಗ ತಿರುಗಿ ಯೆರೂಸಲೇಮಿಗೆ ಹುಡುಕಿಕೊಂಡು ಹೋದರು. 46ಮೂರು ದಿನದ ಮೇಲೆ ಆತನನ್ನು ದೇವಾಲಯದಲ್ಲಿ ಕಂಡರು. ಆತನು ಬೋಧಕರ ನಡುವೆ ಕುಳಿತುಕೊಂಡು ಅವರ ಉಪದೇಶವನ್ನು ಕೇಳುತ್ತಾ ಪ್ರಶ್ನೆಮಾಡುತ್ತಾ ಇದ್ದನು. 47ಆತನು ಆಡಿದ ಮಾತುಗಳನ್ನು ಕೇಳಿದವರೆಲ್ಲರು ಆತನ ಬುದ್ಧಿಗೂ ಉತ್ತರಗಳಿಗೂ ಆಶ್ಚರ್ಯಪಟ್ಟರು. 48ತಂದೆತಾಯಿಗಳು ಆತನನ್ನು ಕಂಡು ಬೆರಗಾದರು; ಮತ್ತು ಆತನ ತಾಯಿಯು, “ಕಂದಾ, ನೀನು ನಮಗೆ ಯಾಕೆ ಹೀಗೆ ಮಾಡಿದಿ? ನಿನ್ನ ತಂದೆಯೂ ನಾನೂ ಎಷ್ಟೋ ತಳಮಳಗೊಂಡು ನಿನ್ನನ್ನು ಹುಡುಕಿ ಬಂದೆವಲ್ಲಾ” ಎಂದು ಹೇಳಲು, 49ಆತನು ಅವರಿಗೆ, “ನೀವು ನನ್ನನ್ನು ಹುಡುಕಿದ್ದೇಕೆ? ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕಾದವನು ಎಂದು ನಿಮಗೆ ತಿಳಿಯಲಿಲ್ಲವೇ?” ಎಂದು ಕೇಳಿದನು. 50ಆದರೆ ಆತನು ಹೇಳಿದ ಮಾತಿನ ಅರ್ಥವನ್ನು ಅವರು ಗ್ರಹಿಸಲಿಲ್ಲ. 51ಬಳಿಕ ಆತನು ಅವರ ಜೊತೆಯಲ್ಲಿ ನಜರೇತಿಗೆ ಬಂದು ಅವರಿಗೆ ವಿಧೇಯನಾಗಿದ್ದನು. ಆತನ ತಾಯಿಯು ಈ ಸಂಗತಿಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿ ಇಟ್ಟುಕೊಂಡಳು. 52ಯೇಸು ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ಬೆಳೆಯುತ್ತಾ ಬಂದನು; ಇದಲ್ಲದೆ ದೇವರ ಮತ್ತು ಮನುಷ್ಯರ ಕೃಪೆಯು ಆತನ ಮೇಲೆ ಹೆಚ್ಚಾಗುತ್ತಾ ಬಂದಿತು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ C, ವಾರದ ದಿನಗಳ ವರ್ಷ II.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು