ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಡಿಸೆಂಬರ್ 2027 › 25 ಡಿಸೆಂಬರ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 25 ಡಿಸೆಂಬರ್ 2027
ಶನಿವಾರ · ಕ್ರಿಸ್ಮಸ್ ಕಾಲ
ಹಬ್ಬಗಳು ಮತ್ತು ಸಂತರು
ಕರ್ತನ ಜನನ (ಕ್ರಿಸ್ಮಸ್)
ಮಹೋತ್ಸವ · ಆರಾಧನಾ ಬಣ್ಣ: ಬಿಳಿ
ದಿನದ ವಾಚನಗಳು
ಮೊದಲನೆಯ ವಾಚನ
7ಪರ್ವತಗಳ ಮೇಲೆ ತ್ವರೆಪಡುತ್ತಾ, ಶುಭಸಮಾಚಾರವನ್ನು ತಂದು, ಸಮಾಧಾನವನ್ನು ಸಾರುವ ದೂತನ ಪಾದಗಳು ಎಷ್ಟೋ ಅಂದವಾಗಿವೆ! ಶುಭವರ್ತಮಾನವನ್ನು, ಶುಭದ ಸುವಾರ್ತೆಯನ್ನು ತಂದು, ರಕ್ಷಣೆಯನ್ನು ಪ್ರಕಟಿಸುತ್ತಾ, “ನಿನ್ನ ದೇವರು ರಾಜ್ಯಭಾರವನ್ನು ವಹಿಸಿದ್ದಾನೆ” ಎಂದು ಚೀಯೋನಿಗೆ ತಿಳಿಸುವವನಾಗಿದ್ದಾನೆ. 8ಇಗೋ, ನಿನ್ನ ಕಾವಲುಗಾರರ ಕೂಗು! ಸ್ವರವೆತ್ತಿ ಒಟ್ಟಿಗೆ ಹರ್ಷಧ್ವನಿಗೈಯುತ್ತಾರೆ. ಯೆಹೋವನು ಚೀಯೋನಿಗೆ ತಿರುಗಿ ಬರುವುದನ್ನು ಪ್ರತ್ಯಕ್ಷವಾಗಿ ನೋಡುವರು. 9ಯೆರೂಸಲೇಮಿನ ಹಾಳುಪ್ರದೇಶಗಳೇ, ತಟ್ಟನೆ ಜಯಘೋಷಮಾಡಿ ಒಟ್ಟಿಗೆ ಹರ್ಷಧ್ವನಿಗೈಯಿರಿ! ಯೆಹೋವನು ಯೆರೂಸಲೇಮನ್ನು ವಿಮೋಚಿಸಿ ತನ್ನ ಜನರನ್ನು ಸಂತೈಸಿದ್ದಾನೆ. 10ಯೆಹೋವನು ಸಕಲ ಜನಾಂಗಗಳ ಕಣ್ಣೆದುರಿನಲ್ಲಿ ತನ್ನ ದಿವ್ಯಬಾಹುವನ್ನು ತೆರೆದು ತೋರಿಸಿದ್ದಾನೆ. ಭೂಮಿಯ ಎಲ್ಲಾ ದಿಕ್ಕಿನವರೂ ನಮ್ಮ ದೇವರ ರಕ್ಷಣಾಕಾರ್ಯವನ್ನು ನೋಡುವರು.
ಪ್ರತಿವಚನ ಕೀರ್ತನೆ
1ಯೆಹೋವನಿಗೆ ಹೊಸ ಕೀರ್ತನೆಯನ್ನು ಹಾಡಿರಿ; ಆತನು ಅದ್ಭುತಕೃತ್ಯಗಳನ್ನು ನಡೆಸಿದ್ದಾನೆ. ಆತನ ಬಲಗೈಯೂ, ಪರಿಶುದ್ಧಬಾಹುವೂ ಜಯವನ್ನು ಉಂಟುಮಾಡಿವೆ. 2ಯೆಹೋವನು ತನ್ನ ರಕ್ಷಣೆಯನ್ನು ಪ್ರಕಟಿಸಿದ್ದಾನೆ; ಜನಾಂಗಗಳೆದುರಿಗೆ ತನ್ನ ನೀತಿಯನ್ನು ತೋರ್ಪಡಿಸಿದ್ದಾನೆ. 3ಆತನು ಇಸ್ರಾಯೇಲನ ಮನೆತನದವರ ಬಗ್ಗೆ ಇದ್ದ, ತನ್ನ ಪ್ರೀತಿ, ಸತ್ಯತೆಗಳನ್ನು ನೆನಪುಮಾಡಿಕೊಂಡಿದ್ದಾನೆ. ಭೂಲೋಕದ ಎಲ್ಲಾ ಕಡೆಯವರೂ, ನಮ್ಮ ದೇವರ ರಕ್ಷಣಾಕಾರ್ಯವನ್ನು ನೋಡಿದ್ದಾರೆ. 4ಸಮಸ್ತ ಭೂನಿವಾಸಿಗಳೇ, ಯೆಹೋವನಿಗೆ ಜಯಘೋಷಮಾಡಿರಿ; ಹರ್ಷಿಸಿರಿ, ಉತ್ಸಾಹಧ್ವನಿಮಾಡಿ ಹಾಡಿರಿ. 5ಕಿನ್ನರಿಯೊಡನೆ ಯೆಹೋವನನ್ನು ಸ್ತುತಿಸಿರಿ; ಕಿನ್ನರಿಯನ್ನು ನುಡಿಸುತ್ತಾ ಭಜಿಸಿರಿ. 6ತುತ್ತೂರಿಗಳನ್ನೂ, ಕೊಂಬನ್ನೂ ಊದುತ್ತಾ, ಯೆಹೋವರಾಜನಿಗೆ ಜಯಘೋಷಮಾಡಿರಿ.
ಎರಡನೆಯ ವಾಚನ
1ದೇವರು ಪುರಾತನ ಕಾಲದಲ್ಲಿ ನಮ್ಮ ಪೂರ್ವಿಕರ ಸಂಗಡ ಪ್ರವಾದಿಗಳ ಮುಖಾಂತರ ಹಲವಾರು ವಿಧದಲ್ಲಿ, ಅನೇಕಸಾರಿ ಮಾತನಾಡಿದ್ದಾನೆ. 2ಆದರೆ ಈ ಅಂತ್ಯ ದಿನಗಳಲ್ಲಿ ನಮ್ಮ ಸಂಗಡ ಮಗನ ಮುಖಾಂತರ ಮಾತನಾಡಿದ್ದಾನೆ. ಆತನನ್ನು ಎಲ್ಲದಕ್ಕೂ ಬಾಧ್ಯಸ್ಥನನ್ನಾಗಿ ನೇಮಿಸಿದನು ಮತ್ತು ಆತನ ಮೂಲಕವೇ ಇಡೀ ವಿಶ್ವವನ್ನು ಉಂಟುಮಾಡಿದನು. 3ಈತನು ದೇವರ ಮಹಿಮೆಯ ಪ್ರಕಾಶವೂ, ಆತನ ವ್ಯಕ್ತಿತ್ವದ ಪ್ರತಿರೂಪವೂ, ತನ್ನ ಶಕ್ತಿಯುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಪಾಪಗಳನ್ನು ಶುದ್ಧಿಮಾಡಿ, ಉನ್ನತದಲ್ಲಿರುವ ಮಹೋನ್ನತನಾದ ದೇವರ ಬಲಗಡೆಯಲ್ಲಿ ಕುಳಿತುಕೊಂಡನು. 4ಈತನು ದೇವದೂತರಿಗಿಂತಲೂ ಉನ್ನತನಾಗಿದ್ದು. ಅವರಿಗಿಂತ ಅತಿ ಶ್ರೇಷ್ಠವಾದ ಹೆಸರನ್ನು ಬಾಧ್ಯವಾಗಿ ಹೊಂದಿದನು. 5ಹೇಗೆಂದರೆ, ದೇವರು ತನ್ನ ದೇವದೂತರೊಳಗೆ ಯಾರಿಗಾದರೂ ಎಂದಾದರೂ ಈ ರೀತಿಯಾಗಿ ಹೇಳಿದ್ದುಂಟೋ?, “ನೀನು ನನ್ನ ಮಗನು, ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ.” “ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು.” 6ಇದಲ್ಲದೆ ದೇವರು ತನ್ನ ಚೊಚ್ಚಲು ಮಗನನ್ನು ಭೂಲೋಕಕ್ಕೆ ತಿರುಗಿ ಬರಮಾಡುವಾಗ “ದೇವದೂತರೆಲ್ಲರೂ ಆತನನ್ನು ಆರಾಧಿಸಬೇಕು” ಎಂದು ಆಜ್ಞಾಪಿಸಿದ್ದಾನೆ.
ಸುವಾರ್ತೆ
1ಆದಿಯಲ್ಲಿ ವಾಕ್ಯವಿತ್ತು; ಆ ವಾಕ್ಯವು ದೇವರೊಂದಿಗಿತ್ತು; ಆ ವಾಕ್ಯವು ದೇವರಾಗಿತ್ತು. 2ಆ ವಾಕ್ಯವೆಂಬಾತನು ಆದಿಯಲ್ಲಿ ದೇವರೊಂದಿಗಿದ್ದನು. 3ಸಮಸ್ತವೂ ಆತನ ಮೂಲಕವಾಗಿ ಸೃಷ್ಟಿಯಾಯಿತು. ಸೃಷ್ಟಿಯಾದ ಎಲ್ಲವುಗಳಲ್ಲಿ ಆತನಿಲ್ಲದೆ ಒಂದಾದರೂ ಸೃಷ್ಟಿಯಾಗಲಿಲ್ಲ. 4ಆತನಲ್ಲಿ ಜೀವವಿತ್ತು. ಆ ಜೀವವು ಮನುಷ್ಯರಿಗೆ ಬೆಳಕಾಗಿತ್ತು. 5ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ. ಕತ್ತಲು ಆ ಬೆಳಕನ್ನು ಮುಸುಕಲಿಲ್ಲ. 6ದೇವರು ಕಳುಹಿಸಿದ ಒಬ್ಬ ಮನುಷ್ಯನು ಬಂದನು. ಅವನ ಹೆಸರು ಯೋಹಾನನು. 7ಆ ಯೋಹಾನನು ಸಾಕ್ಷಿಗಾಗಿ ಬಂದನು. ತನ್ನ ಮೂಲಕವಾಗಿ ಎಲ್ಲರೂ ನಂಬುವಂತೆ ಅವನು ಬೆಳಕಿನ ವಿಷಯದಲ್ಲಿ ಸಾಕ್ಷಿಕೊಡಲು ಬಂದನು. 8ಅವನೇ ಆ ಬೆಳಕಲ್ಲ; ಆದರೆ ಆ ಬೆಳಕಿನ ವಿಷಯದಲ್ಲಿ ಸಾಕ್ಷಿ ನೀಡಲೆಂದೇ ಬಂದವನು. 9ನಿಜವಾದ ಬೆಳಕು ಲೋಕಕ್ಕೆ ಬರುವುದಾಗಿತ್ತು; ಆ ಬೆಳಕೇ ಪ್ರತಿ ಮನುಷ್ಯನಿಗೂ ಬೆಳಕನ್ನು ಕೊಡುವಂಥದು. 10ಆತನು ಲೋಕದಲ್ಲಿ ಇದ್ದನು ಮತ್ತು ಲೋಕವು ಆತನ ಮೂಲಕ ಉಂಟಾಯಿತು, ಆದರೂ ಲೋಕವು ಆತನನ್ನು ಅರಿತುಕೊಳ್ಳಲಿಲ್ಲ. 11ಆತನು ತನ್ನ ಸ್ವಂತ ಜನರ ಬಳಿಗೆ ಬಂದನು; ಆದರೆ ಸ್ವಂತ ಜನರು ಆತನನ್ನು ಸ್ವೀಕರಿಸಲಿಲ್ಲ. 12ಆದರೂ ಯಾರಾರು ಆತನನ್ನು ಸ್ವೀಕರಿಸಿದರೋ, ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ ಅವರಿಗೆ ದೇವರ ಮಕ್ಕಳಾಗುವ ಅಧಿಕಾರವನ್ನು ಆತನು ಕೊಟ್ಟನು. 13ಇವರು ರಕ್ತಸಂಬಂಧದಿಂದಾಗಲಿ, ಶರೀರದ ಇಚ್ಛೆಯಿಂದಾಗಲಿ, ಪುರುಷ ಸಂಕಲ್ಪದಿಂದಾಗಲಿ ಹುಟ್ಟಿದವರಲ್ಲ; ದೇವರಿಂದಲೇ ಹುಟ್ಟಿದವರು. 14ಆ ವಾಕ್ಯವೆಂಬುವವನು ಮನುಷ್ಯನಾಗಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. ನಾವು ಆತನ ಮಹಿಮೆಯನ್ನು ನೋಡಿದೆವು. ಆ ಮಹಿಮೆಯು ತಂದೆಯ ಬಳಿಯಿಂದ ಬಂದ ಒಬ್ಬನೇ ಮಗನಿಗೆ ಇರತಕ್ಕ ಮಹಿಮೆ. ಆತನು ಕೃಪೆಯಿಂದಲೂ, ಸತ್ಯದಿಂದಲೂ ತುಂಬಿದವನಾಗಿದ್ದನು. 15ಆತನ ವಿಷಯವಾಗಿ ಯೋಹಾನನು ಸಾಕ್ಷಿಕೊಡುತ್ತಾನೆ, ಹೇಗೆಂದರೆ “‘ನನ್ನ ನಂತರ ಬರುವಾತನು ನನಗಿಂತ ಮೊದಲೇ ಇದ್ದುದರಿಂದ ಆತನು ನನಗಿಂತಲೂ ಉನ್ನತನು’ ಎಂದು ನಾನು ಹೇಳಿದಾತನು ಈತನೇ” ಎಂದು ಘೋಷಿಸಿದನು. 16ಯೇಸು ಕ್ರಿಸ್ತನ ಪರಿಪೂರ್ಣತೆಯಿಂದ ನಾವೆಲ್ಲರೂ ಕೃಪೆಯ ಮೇಲೆ ಕೃಪೆಯನ್ನು ಹೊಂದಿದೆವು. 17ಧರ್ಮಶಾಸ್ತ್ರವು ಮೋಶೆಯ ಮುಖಾಂತರ ಕೊಡಲ್ಪಟ್ಟಿತು. ಆದರೆ ಕೃಪೆಯೂ, ಸತ್ಯವೂ ಯೇಸು ಕ್ರಿಸ್ತನ ಮುಖಾಂತರ ಬಂದವು. 18ದೇವರನ್ನು ಯಾರೂ ಎಂದೂ ನೋಡಿಲ್ಲ. ತಂದೆಯ ಹೃದಯದಲ್ಲಿರುವ ಏಕಪುತ್ರನೂ ಸ್ವತಃ ದೇವರೂ ಆಗಿರುವಾತನೇ, ತಂದೆಯನ್ನು ತಿಳಿಯಪಡಿಸಿದ್ದಾನೆ.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ C, ವಾರದ ದಿನಗಳ ವರ್ಷ II.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು