ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಡಿಸೆಂಬರ್ 2027 › 19 ಡಿಸೆಂಬರ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 19 ಡಿಸೆಂಬರ್ 2027
ಭಾನುವಾರ · ಆಗಮನ ಕಾಲದ ನಾಲ್ಕನೆಯ ವಾರ
ಹಬ್ಬಗಳು ಮತ್ತು ಸಂತರು
ಆಗಮನ ಕಾಲದ ನಾಲ್ಕನೆಯ ಭಾನುವಾರ
ಭಾನುವಾರ · ಆರಾಧನಾ ಬಣ್ಣ: ನೇರಳೆ
ದಿನದ ವಾಚನಗಳು
ಮೊದಲನೆಯ ವಾಚನ
2ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಗ್ರಾಮಗಳಲ್ಲಿ ಚಿಕ್ಕದ್ದಾಗಿದ್ದರೂ ಇಸ್ರಾಯೇಲನ್ನು ಆಳತಕ್ಕವನು ನಿನ್ನೊಳಗಿಂದ ನನಗಾಗಿ ಹೊರಡುವನು. ಆತನ ಕುಲದ ಮೂಲವು ಪುರಾತನವೂ ಮತ್ತು ಅನಾದಿಯೂ ಆದದ್ದು. 3ಹೀಗಿರಲು ಪ್ರಸವವೇದನೆ ಪಡತಕ್ಕವಳು ಮಗನನ್ನು ಹೆರುವವರೆಗೂ ನನ್ನ ಜನರು ಶತ್ರುವಶವಾಗಿರುವಂತೆ ಮಾಡುವೆನು. ಅನಂತರ ಆ ಮಗನ ಸಹೋದರರಲ್ಲಿ ಉಳಿದವರು ಇಸ್ರಾಯೇಲರೊಂದಿಗೆ ಹಿಂದಿರುಗುವರು 4ಆತನು ಯೆಹೋವನ ಬಲವನ್ನೂ, ತನ್ನ ದೇವರಾದ ಯೆಹೋವನ ನಾಮದ ಮಹಿಮೆಯನ್ನೂ ಹೊಂದಿದವನಾಗಿ ನಿಂತು ತನ್ನ ಹಿಂಡನ್ನು ಮೇಯಿಸುವನು. ಆ ಹಿಂಡು ನೆಮ್ಮದಿಯಾಗಿ ನೆಲೆಗೊಂಡಿರುವುದು. ಆತನು ಭೂಮಿಯ ಕಟ್ಟಕಡೆಯವರೆಗೂ ಪ್ರಬಲನಾಗಿರುವನು. 5ಆತನೇ ನಮಗೆ ಸಮಾಧಾನಪ್ರದನು. ಅಶ್ಶೂರ್ಯರು ನಮ್ಮ ದೇಶದಲ್ಲಿ ನುಗ್ಗಿ, ನಮ್ಮ ಅರಮನೆಗಳನ್ನು ತುಳಿದುಹಾಕುವಾಗ, ನಾವು ಅವರಿಗೆ ವಿರುದ್ಧವಾಗಿ ಏಳು ಪಾಲಕರನ್ನು ಹೌದು ಎಂಟು ಪುರುಷಶ್ರೇಷ್ಠರನ್ನು ನೇಮಿಸುವೆವು.
ಪ್ರತಿವಚನ ಕೀರ್ತನೆ
1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಶೋಶನ್ನೀಮ್ ಎದೂತೆಂಬ ರಾಗ. ಆಸಾಫನ ಕೀರ್ತನೆ. ಇಸ್ರಾಯೇಲರನ್ನು ಕಾಯುವ ಕುರುಬನೇ, ಕಿವಿಗೊಡು; ಯೋಸೇಫನ ವಂಶದವರನ್ನು ಕುರಿಹಿಂಡಿನಂತೆ ಕರೆತಂದವನೇ, ಕೆರೂಬಿಯರ ಮಧ್ಯದಲ್ಲಿ ಆಸೀನನಾಗಿರುವಾತನೇ, ಪ್ರಕಾಶಿಸು. 2ಎಫ್ರಾಯೀಮ್, ಬೆನ್ಯಾಮೀನ್ ಮತ್ತು ಮನಸ್ಸೆ ಕುಲಗಳ ಮುಂದೆ ಹೋಗುವವನಾಗಿ, ನಿನ್ನ ಶೌರ್ಯವನ್ನು ತೋರ್ಪಡಿಸು; ಬಂದು ನಮಗೆ ಜಯಪ್ರದನಾಗು. 14ಸೇನಾಧೀಶ್ವರನಾದ ದೇವರೇ, ಅಭಿಮುಖನಾಗಬೇಕು; ನೀನು ಪರಲೋಕದಿಂದ ಕಟಾಕ್ಷಿಸಿ, ಈ ದ್ರಾಕ್ಷಾಲತೆಯನ್ನು ಪರಾಂಬರಿಸು. 15ನಿನ್ನ ಬಲಗೈ ನೆಟ್ಟು, ಸಾಕಿ, ಬೆಳೆಸಿದ ಸಸಿಯನ್ನು ಕಾಪಾಡು. 17ನಿನ್ನ ಬಲಗೈ ಉದ್ಧರಿಸಿದ ಪುರುಷನೂ, ನೀನು ನಿನಗೋಸ್ಕರ ಸಾಕಿ ಬೆಳೆಸಿದ ನರಪುತ್ರನೂ ಆಗಿರುವವನನ್ನು, ನಿನ್ನ ಹಸ್ತದಿಂದ ಹಿಡಿದಿರು. 18ಆಗ ನಾವು ನಿನ್ನಿಂದ ಅಗಲುವುದಿಲ್ಲ. ನಿನ್ನ ಹೆಸರನ್ನು ಹೇಳಿಕೊಂಡು ಆರಾಧಿಸುವಂತೆ ನಮ್ಮನ್ನು ಚೈತನ್ಯಗೊಳಿಸು.
ಎರಡನೆಯ ವಾಚನ
5ಆದ್ದರಿಂದ ಕ್ರಿಸ್ತನು ಭೂಲೋಕದೊಳಗೆ ಬರುವಾಗ, “(ದೇವರೇ,) ಯಜ್ಞಗಳೂ ಕಾಣಿಕೆಗಳೂ ನಿನಗೆ ಇಷ್ಟವಾಗಿರಲಿಲ್ಲ, ಆದರೆ ನನಗೆ ಒಂದು ದೇಹವನ್ನು ಸಿದ್ಧಮಾಡಿಕೊಟ್ಟಿರುವೆ, 6ಸರ್ವಾಂಗಹೋಮಗಳಲ್ಲಿಯೂ ಪಾಪಪರಿಹಾರಕ ಯಜ್ಞಗಳಲ್ಲಿಯೂ ನೀನು ಸಂತೋಷಪಡುವುದಿಲ್ಲ. 7ಆಗ ನಾನು, ಇಗೋ, ದೇವರೇ, ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದಿರುವ ಪ್ರಕಾರ ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ” ಎಂದು ಹೇಳಿದೆನು. 8ಧರ್ಮಶಾಸ್ತ್ರದ ಪ್ರಕಾರ ಅರ್ಪಿಸಲ್ಪಟ್ಟ ಯಜ್ಞಗಳು, “ಸರ್ವಾಂಗಹೋಮಗಳು ಮತ್ತು ಪಾಪಪರಿಹಾರಕ ಯಜ್ಞಗಳು ನಿನಗೆ ಇಷ್ಟವಾಗಿರಲಿಲ್ಲ. ನೀನು ಅವುಗಳಲ್ಲಿ ಸಂತೋಷಪಡುವುದಿಲ್ಲ” ಎಂದು ಹೇಳಿದ್ದಾನೆ. 9ತರುವಾಯ ಆತನು “ಇಗೋ, ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ” ಎಂದು ಹೇಳಿದ್ದಾನೆ. ಆತನು ಎರಡನೆಯದನ್ನು ಸ್ಥಾಪಿಸುವುದಕ್ಕಾಗಿ ಮೊದಲನೆಯದನ್ನು ತೆಗೆದುಬಿಡುತ್ತಾನೆ. 10ಯೇಸು ಕ್ರಿಸ್ತನು ಒಂದೇ ಸಾರಿ ದೇಹ ಸಮರ್ಪಣೆ ಮಾಡಿ ದೇವರ ಚಿತ್ತವನ್ನು ನೆರವೇರಿಸಿದ್ದರಿಂದಲೇ ನಾವು ಶುದ್ಧೀಕರಿಸಲ್ಪಟ್ಟವರಾಗಿರುವೆವು.
ಸುವಾರ್ತೆ
39ಇದಾದ ನಂತರ ಮರಿಯಳು ಎದ್ದು ತ್ವರೆಯಾಗಿ ಯೆಹೂದದ ಮಲೆನಾಡಿನಲ್ಲಿರುವ ಒಂದು ಊರಿಗೆ ಹೋದಳು. 40ಜಕರೀಯನ ಮನೆಯನ್ನು ಸೇರಿ ಎಲಿಸಬೇತಳಿಗೆ ವಂದಿಸಿದಳು. 41ಎಲಿಸಬೇತಳು ಮರಿಯಳ ವಂದನೆಯನ್ನು ಕೇಳುತ್ತಲೇ ಆಕೆಯ ಗರ್ಭದಲ್ಲಿದ್ದ ಕೂಸು ಕುಣಿದಾಡಿತು ಮತ್ತು ಎಲಿಸಬೇತಳು ಪವಿತ್ರಾತ್ಮಭರಿತಳಾದಳು. 42ಆಗ ಆಕೆಯು ಮಹಾಧ್ವನಿಯಿಂದ ಕೂಗಿ, “ನೀನು ಸ್ತ್ರೀಯರೊಳಗೆ ಧನ್ಯಳು, ಮತ್ತು ನಿನ್ನಲ್ಲಿ ಹುಟ್ಟುವ ಕೂಸು ಆಶೀರ್ವಾದ ಹೊಂದಿದ್ದು. 43ನನ್ನ ಕರ್ತನ ತಾಯಿಯು ನನ್ನ ಬಳಿಗೆ ಬರುವಷ್ಟು ಸೌಭಾಗ್ಯ ನನಗೆ ಎಲ್ಲಿಂದಾಯಿತು? 44ಇಗೋ, ನಿನ್ನ ವಂದನೆಯು ನನ್ನ ಕಿವಿಗೆ ಬೀಳುತ್ತಲೇ ಕೂಸು ನನ್ನ ಗರ್ಭದಲ್ಲಿ ಉಲ್ಲಾಸದಿಂದ ಕುಣಿದಾಡಿತು. 45ಕರ್ತನು ನಿನಗೆ ಹೇಳಿದ ಮಾತುಗಳು ನೆರವೇರುವವು ಅಂದಳು. ಇದನ್ನು ನಂಬಿದವಳಾದ ನೀನು ಧನ್ಯಳು.”
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ C, ವಾರದ ದಿನಗಳ ವರ್ಷ II.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು