ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಅಕ್ಟೋಬರ್ 2027 › 24 ಅಕ್ಟೋಬರ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 24 ಅಕ್ಟೋಬರ್ 2027
ಭಾನುವಾರ · ಸಾಮಾನ್ಯ ಕಾಲದ 30ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 30ನೇ ಭಾನುವಾರ
ಭಾನುವಾರ · ಆರಾಧನಾ ಬಣ್ಣ: ಹಸಿರು
ದಿನದ ವಾಚನಗಳು
ಮೊದಲನೆಯ ವಾಚನ
7ಯೆಹೋವನು ಇಂತೆನ್ನುತ್ತಾನೆ, “ಯಾಕೋಬಿನ ನಿಮಿತ್ತ ಹರ್ಷಧ್ವನಿಗೈಯಿರಿ, ಜನಾಂಗಗಳ ಶಿರೋಮಣಿಯ ವಿಷಯದಲ್ಲಿ ಕೇಕೆಹಾಕಿರಿ. ಯೆಹೋವನೇ, ಇಸ್ರಾಯೇಲಿನಲ್ಲಿ ಉಳಿದ ನಿನ್ನ ಜನವನ್ನು ರಕ್ಷಿಸು ಎಂದು ಘೋಷಿಸಿ ಸ್ತುತಿಸಿರಿ. 8ಇಗೋ, ನಾನು ಅವರನ್ನು ಉತ್ತರ ದೇಶದಿಂದ ಬರಮಾಡುವೆನು, ದಿಗಂತಗಳಿಂದ ಅವರನ್ನು ಕೂಡಿಸುವೆನು. ಅವರೊಂದಿಗೆ ಕುರುಡರನ್ನೂ, ಕುಂಟರನ್ನೂ, ಗರ್ಭಿಣಿಯರನ್ನೂ, ದಿನತುಂಬಿದ ಬಸುರಿಯರನ್ನೂ ಒಟ್ಟಿಗೆ ಕರೆತರುವೆನು. ಅವರು ದೊಡ್ಡ ಗುಂಪಾಗಿ ಇಲ್ಲಿಗೆ ಹಿಂದಿರುಗುವರು. 9ಅವರು ತಮ್ಮ ವಿಜ್ಞಾಪನೆಗಳಿಂದ ಅಳುತ್ತಾ ನಡೆದು ಬರುವರು, ನಾನು ಅವರನ್ನು ಸಂತೈಸಿ ಮುನ್ನಡೆಸುವೆನು. ಎಡವದ ಸಮಮಾರ್ಗದಲ್ಲಿ ನಡೆಸುತ್ತಾ ತುಂಬಿದ ತೊರೆಗಳ ಬಳಿಗೆ ಬರಮಾಡುವೆನು. ನಾನು ಇಸ್ರಾಯೇಲಿಗೆ ತಂದೆ, ಎಫ್ರಾಯೀಮು ನನ್ನ ಹಿರಿಯ ಮಗನಲ್ಲವೆ.
ಪ್ರತಿವಚನ ಕೀರ್ತನೆ
1ಯಾತ್ರಾಗೀತೆ. ಸೆರೆಯಲ್ಲಿದ್ದ ನಮ್ಮನ್ನು ಯೆಹೋವನು ತಿರುಗಿ ಚೀಯೋನಿಗೆ ಬರಮಾಡಿದಾಗ, ನಾವು ಕನಸು ಕಂಡವರಂತೆ ಇದ್ದೆವು. 2ಆಗ ನಮ್ಮ ಬಾಯಿ ಬಲು ನಗೆಯಿಂದಲೂ, ನಮ್ಮ ನಾಲಿಗೆ ಹರ್ಷಗೀತದಿಂದಲೂ ತುಂಬಿದವು. ಅನ್ಯಜನರು, “ಯೆಹೋವನು ಇವರಿಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದ್ದಾನೆ” ಎಂದು ತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು. 3ಯೆಹೋವನು ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದ್ದು ನಿಜ; ಆದುದರಿಂದ ನಾವು ಸಂತೋಷವುಳ್ಳವರಾಗಿದ್ದೇವೆ. 4ಯೆಹೋವನೇ, ನೀನು ದಕ್ಷಿಣದೇಶದ ಹಳ್ಳಗಳನ್ನೋ ಎಂಬಂತೆ, ಸೆರೆಯಲ್ಲಿ ಉಳಿದಿರುವ ನಮ್ಮವರನ್ನೂ ತಿರುಗಿ ಬರಮಾಡು. 5ಅಳುತ್ತಾ ಬಿತ್ತುವವರು, ಹಾಡುತ್ತಾ ಕೊಯ್ಯುವರು, 6ದುಃಖಿಸುತ್ತಾ ಬೀಜವನ್ನು ತೆಗೆದುಕೊಂಡು ಹೋಗುವವನು, ಹರ್ಷಿಸುತ್ತಾ ಸಿವುಡುಗಳನ್ನು ಹೊತ್ತುಕೊಂಡು ಬರುವನು.
ಎರಡನೆಯ ವಾಚನ
1ಮನುಷ್ಯರೊಳಗಿಂದ ಪ್ರತಿಯೊಬ್ಬ ಮಹಾಯಾಜಕನೂ ಆರಿಸಲ್ಪಟ್ಟು ಮನುಷ್ಯರಿಗೋಸ್ಕರ ದೇವರ ಕಾರ್ಯಗಳನ್ನು ನಡೆಸುವುದಕ್ಕಾಗಿ ನೇಮಿಸಲಾಗಿದ್ದು. ಅವನು ಪಾಪಗಳ ನಿವಾರಣೆಗಾಗಿ ಕಾಣಿಕೆಗಳನ್ನು ಮತ್ತು ಯಜ್ಞಗಳನ್ನು ಸಮರ್ಪಿಸಬೇಕು. 2ತಾನೂ ಸಹ ಬಲಹೀನನಾಗಿರುವುದರಿಂದ ಅವನು ಅಜ್ಞಾನಿಗಳಿಗೂ ಮತ್ತು ಮಾರ್ಗತಪ್ಪಿದವರಿಗೂ ದಯಾಪರನಾಗಿ ನಡೆದುಕೊಳ್ಳುವುದಕ್ಕೆ ಶಕ್ತನಾಗಿರುವನು. 3ಆದ್ದರಿಂದ, ಅವನು ಜನರಿಗೋಸ್ಕರ ಹೇಗೋ ಹಾಗೆಯೇ ತನಗೋಸ್ಕರವೂ ಪಾಪನಿವಾರಣೆಗಾಗಿ ಯಜ್ಞಗಳನ್ನು ಸಮರ್ಪಿಸಬೇಕು. 4ಯಾವನೂ ತನ್ನಷ್ಟಕ್ಕೆ ತಾನೇ ಈ ಗೌರವ ಪದವಿಯನ್ನು ವಹಿಸಿಕೊಳ್ಳುವುದಕ್ಕಾಗುವುದಿಲ್ಲ, ಆದರೆ ಆರೋನನಂತೆ ದೇವರಿಂದ ಕರೆಯಲ್ಪಟ್ಟು ವಹಿಸಿಕೊಳ್ಳುತ್ತಾನೆ. 5ಅದೇ ರೀತಿಯಾಗಿ ಕ್ರಿಸ್ತನು, ಸಹ ತನ್ನನ್ನು ಘನಪಡಿಸಿಕೊಂಡು ತಾನೇ ಮಹಾಯಾಜಕನನ್ನಾಗಿ ಮಾಡಿಕೊಳ್ಳಲಿಲ್ಲ. ಆದರೆ “ನೀನು ನನ್ನ ಮಗನು, ಈ ಹೊತ್ತು ನಾನು ನಿನಗೆ ತಂದೆಯಾದೆನು” ಎಂದು ದೇವರೇ ಹೇಳಿದನು. 6ಆತನು ಇನ್ನೊಂದು ಕಡೆಯಲ್ಲಿ, “ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕನು” ಎಂದು ಹೇಳುತ್ತಾನೆ.
ಸುವಾರ್ತೆ
46ತರುವಾಯ ಅವರು ಯೆರಿಕೋವಿಗೆ ಬಂದರು. ಯೇಸುವೂ ತನ್ನ ಶಿಷ್ಯರೂ ಬಹು ಜನರ ಗುಂಪಿನೊಂದಿಗೆ ಆ ಊರಿನಿಂದ ಹೊರಟುಹೋಗುತ್ತಿರುವಾಗ ತಿಮಾಯನ ಮಗನಾದ ಬಾರ್ತಿಮಾಯನು ದಾರಿಯ ಬದಿಯಲ್ಲಿ ಕುಳಿತಿದ್ದನು. 47ಅವನು ಒಬ್ಬ ಕುರುಡ ಭಿಕ್ಷುಕನಾಗಿದ್ದನು. ಈ ಮಾರ್ಗವಾಗಿ ಹೋಗುತ್ತಿರುವವನು ನಜರೇತಿನ ಯೇಸುವೆಂದು ಅವನು ಕೇಳಿದಾಗ ಅವನು, “ಯೇಸುವೇ, ದಾವೀದನ ಕುಮಾರನೇ, ನನ್ನನ್ನು ಕರುಣಿಸು” ಎಂದು ಕೂಗಿಕೊಳ್ಳುವುದಕ್ಕೆ ಪ್ರಾರಂಭಿಸಿದನು. 48ಅನೇಕರು, ಅವನಿಗೆ ಸುಮ್ಮನಿರು ಎಂದು ಗದರಿಸಲು ಅವನು, “ದಾವೀದನ ಕುಮಾರನೇ ನನ್ನನ್ನು ಕರುಣಿಸು” ಎಂದು ಮತ್ತಷ್ಟು ಕೂಗಿಕೊಂಡನು. 49ಆಗ ಯೇಸು ನಿಂತು, “ಅವನನ್ನು ಕರೆಯಿರಿ” ಅನ್ನಲು ಅವರು ಆ ಕುರುಡನನ್ನು ಕರೆದು, “ಧೈರ್ಯವಾಗಿರು, ಏಳು, ಯೇಸು ನಿನ್ನನ್ನು ಕರೆಯುತ್ತಾನೆ” ಅಂದರು. 50ಅವನು ತನ್ನ ಹೊದಿಕೆಯನ್ನು ತೆಗೆದುಹಾಕಿ ತಟ್ಟನೆ ಎದ್ದು ಯೇಸುವಿನ ಬಳಿಗೆ ಬಂದನು. 51ಯೇಸು ಅವನನ್ನು, “ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ” ಎಂದು ಕೇಳಲು ಆ ಕುರುಡನು, “ಗುರುವೇ, ನನಗೆ ಕಣ್ಣಿನ ದೃಷ್ಟಿ ಬರುವಂತೆ ಮಾಡಬೇಕು” ಅಂದನು. 52ಯೇಸು ಅವನಿಗೆ, “ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ” ಎಂದು ಹೇಳಿದನು. ಕೂಡಲೇ ಅವನಿಗೆ ಕಣ್ಣಿನ ದೃಷ್ಟಿ ಬಂದಿತು. ಅವನು ಆ ದಾರಿಯಲ್ಲಿ ಆತನನ್ನು ಹಿಂಬಾಲಿಸಿದನು.
ಇಂದಿನ ಸಂತರು
- ಸಂತ ಅಂತೋನಿ ಮೇರಿ ಕ್ಲಾರೆಟ್, ಧರ್ಮಾಧ್ಯಕ್ಷ
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು