ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಅಕ್ಟೋಬರ್ 2027 › 23 ಅಕ್ಟೋಬರ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 23 ಅಕ್ಟೋಬರ್ 2027
ಶನಿವಾರ · ಸಾಮಾನ್ಯ ಕಾಲದ 29ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 29ನೇ ವಾರದ ಶನಿವಾರ
ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಹಸಿರು
ಕಾಪಿಸ್ಟ್ರಾನೊದ ಸಂತ ಜಾನ್, ಧರ್ಮಗುರು · ಐಚ್ಛಿಕ ಸ್ಮರಣೆ
ದಿನದ ವಾಚನಗಳು
ಮೊದಲನೆಯ ವಾಚನ
1ಆದ್ದರಿಂದ ಈಗ ಕ್ರಿಸ್ತ ಯೇಸುವಿನಲ್ಲಿರುವವರಿಗೆ ಯಾವ ಅಪರಾಧ ನಿರ್ಣಯವೂ ಇಲ್ಲ, 2ಯಾಕೆಂದರೆ ಕ್ರಿಸ್ತ ಯೇಸುವಿನ ಮೂಲಕ ಜೀವವನ್ನುಂಟುಮಾಡುವ ಪವಿತ್ರಾತ್ಮನ ನಿಯಮವು ನನ್ನನ್ನು ಪಾಪಮರಣಗಳಿಗೆ ಕಾರಣವಾದ ನಿಯಮದಿಂದ ವಿಮುಕ್ತಿಗೊಳಿಸಿತು. 3ಧರ್ಮಶಾಸ್ತ್ರವು ನಮ್ಮ ಶರೀರಾಧೀನಸ್ವಭಾವದ ನಿಮಿತ್ತ ದುರ್ಬಲವಾಗಿ ಯಾವ ಕೆಲಸವನ್ನು ಮಾಡಲಾರದೆ ಇತ್ತೋ, ಅದನ್ನು ದೇವರೇ ಮಾಡಿದನು. ಹೇಗೆಂದರೆ ಆತನು ಪಾಪನಿವಾರಣೆಗಾಗಿ ತನ್ನ ಮಗನನ್ನು ಪಾಪಾಧೀನವಾದ ಶರೀರ ರೂಪದಲ್ಲಿ ಕಳುಹಿಸಿಕೊಟ್ಟು ಶರೀರದಲ್ಲಿಯೇ ಪಾಪಕ್ಕೆ ಮರಣದಂಡನೆಯನ್ನು ವಿಧಿಸಿದನು. 4ಹೀಗಿರಲು ಶರೀರಭಾವಕ್ಕೆ ಅನುಸಾರವಾಗಿ ನಡೆಯದೆ ಪವಿತ್ರಾತ್ಮನಿಗನುಸಾರವಾಗಿ ನಡೆಯುವವರಾದ ನಮ್ಮಲ್ಲಿ ಧರ್ಮಶಾಸ್ತ್ರದ ನಿಯಮವು ನೆರವೇರುವುದಕ್ಕಾಗಿ ಹಾಗೆ ಮಾಡಿದನು. 5ಶರೀರಭಾವವನ್ನು ಅನುಸರಿಸುವವರು ಅದಕ್ಕೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ, ಪವಿತ್ರಾತ್ಮನನ್ನುಸರಿಸುವವರು ಪವಿತ್ರಾತ್ಮನಿಗೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ. 6ಶರೀರಭಾವದ ವಿಷಯಗಳ ಮೇಲೆ ಮನಸ್ಸಿಡುವುದು ಮರಣ; ಪವಿತ್ರಾತ್ಮನ ವಿಷಯಗಳ ಮೇಲೆ ಮನಸ್ಸಿಡುವುದು ನಿತ್ಯಜೀವವೂ ಮತ್ತು ಮನಶಾಂತಿಯೂ ಆಗಿದೆ. 7ಯಾಕೆಂದರೆ ಶರೀರಭಾವಗಳ ಮೇಲೆ ಮನಸ್ಸಿಡುವುದು ದೇವರಿಗೆ ವಿರುದ್ಧವಾಗಿದೆ; ಅಂಥ ಮನಸ್ಸು ಧರ್ಮನಿಯಮಕ್ಕೆ ಒಳಪಡುವುದೂ ಇಲ್ಲ, ಒಳಪಡುವುದಕ್ಕಾಗುವುದೂ ಇಲ್ಲ. 8ಶರೀರಭಾವಾಧೀನವಾಗಿರುವವರು ದೇವರನ್ನು ಮೆಚ್ಚಿಸಲಾರರು. 9ಆದಾಗ್ಯೂ, ನೀವೂ ದೇವರ ಆತ್ಮನ ಸ್ವಭಾವದ ಮೇಲೆ ಆತುಕೊಂಡು ಜೀವಿಸುವವರೇ ಹೊರತು ದೇಹಸ್ವಭಾವದವರಲ್ಲಾ. ನಿಮ್ಮಲ್ಲಿ ದೇವರ ಆತ್ಮನು ವಾಸವಾಗಿರುವುದಾದರೆ ನೀವು ಶರೀರ ಭಾವಾಧೀನರಲ್ಲ, ದೇವರಾತ್ಮನಿಗೆ ಅಧೀನರಾಗಿದ್ದೀರಿ. ಯಾರಲ್ಲಿ ಕ್ರಿಸ್ತನ ಆತ್ಮನು ಇಲ್ಲವೋ ಅವನು ಕ್ರಿಸ್ತನವನಲ್ಲ. 10ಆದರೆ ಕ್ರಿಸ್ತನು ನಿಮ್ಮಲ್ಲಿರುವುದಾದರೆ ದೇಹವು ಪಾಪದ ದೆಸೆಯಿಂದ ಸತ್ತದ್ದಾಗಿದ್ದರೂ, ಆತ್ಮವು ನೀತಿಯ ದೆಸೆಯಿಂದ ಜೀವಸ್ವರೂಪವಾಗಿರುತ್ತದೆ. 11ಯೇಸುವನ್ನು ಸತ್ತವರೊಳಗಿಂದ ಜೀವಿತನಾಗಿ ಎಬ್ಬಿಸಿದಾತನ ಆತ್ಮನು ನಿಮ್ಮಲ್ಲಿ ವಾಸವಾಗಿದ್ದರೆ, ಕ್ರಿಸ್ತ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದಾತನು ನಿಮ್ಮಲ್ಲಿ ವಾಸವಾಗಿರುವ ತನ್ನ ಆತ್ಮನ ಮೂಲಕ ನಿಮ್ಮ ಮರ್ತ್ಯದೇಹಗಳನ್ನು ಸಹ ಬದುಕಿಸುವನು.
ಪ್ರತಿವಚನ ಕೀರ್ತನೆ
1ದಾವೀದನ ಕೀರ್ತನೆ. ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನದು; ಲೋಕವೂ ಮತ್ತು ಅದರ ನಿವಾಸಿಗಳೂ ಆತನವೇ. 2ಆತನೇ ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು; ಅದನ್ನು ಜಲರಾಶಿಗಳ ಮೇಲೆ ಸ್ಥಿರಪಡಿಸಿದವನು ಆತನೇ. 3ಯೆಹೋವನ ಪರ್ವತವನ್ನು ಹತ್ತತಕ್ಕವನು ಯಾರು? ಆತನ ಪವಿತ್ರಸ್ಥಾನದಲ್ಲಿ ಪ್ರವೇಶಿಸುವುದಕ್ಕೆ ಎಂಥವನು ಯೋಗ್ಯನು? 4ಯಾರು ಅಯೋಗ್ಯಕಾರ್ಯಗಳಲ್ಲಿ ಮನಸ್ಸಿಡದೆ, ಮೋಸ ಪ್ರಮಾಣಮಾಡದೆ, ಶುದ್ಧಹಸ್ತವೂ, ನಿರ್ಮಲಮನಸ್ಸೂ ಉಳ್ಳವನಾಗಿದ್ದಾನೋ, 5ಅವನೇ ಯೆಹೋವನಿಂದ ಶುಭವನ್ನು ಹೊಂದುವನು; ತನ್ನ ರಕ್ಷಕನಾದ ದೇವರಿಂದ ನೀತಿಫಲವನ್ನು ಪಡೆಯುವನು. 6ಇಂಥವರೇ ಆತನ ದರ್ಶನವನ್ನು ಬಯಸುವವರು. ಯಾಕೋಬ್ಯರ ದೇವರೇ, ನಿನ್ನ ಸಾನ್ನಿಧ್ಯವನ್ನು ಸೇರುವವರು ಇಂಥವರೇ. ಸೆಲಾ
ಸುವಾರ್ತೆ
1ಅದೇ ಸಮಯದಲ್ಲಿ ಕೆಲವರು ಯೇಸುವಿನ ಹತ್ತಿರದಲ್ಲಿದ್ದು, ಪಿಲಾತನು ಗಲಿಲಾಯದವರ ರಕ್ತವನ್ನು ಅವರು ಕೊಟ್ಟ ಬಲಿಗಳ ಸಂಗಡ ಬೆರಸಿದನೆಂದು ಆತನಿಗೆ ತಿಳಿಸಿದರು. 2ಅದಕ್ಕೆ ಯೇಸು ಅವರಿಗೆ, “ಆ ಗಲಿಲಾಯದವರು ಇಂಥಾ ಕೊಲೆಯನ್ನು ಅನುಭವಿಸಿದ್ದರಿಂದ ಅವರನ್ನು ಎಲ್ಲಾ ಗಲಿಲಾಯದವರಿಗಿಂತ ಪಾಪಿಷ್ಠರೆಂದು ಭಾವಿಸುತ್ತೀರೋ? 3ಹಾಗೆ ಭಾವಿಸಕೂಡದೆಂದು ನಿಮಗೆ ಹೇಳುತ್ತೇನೆ. ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಅವರಂತೆ ನಾಶವಾಗುವಿರಿ. 4ಇಲ್ಲವೆ ಸಿಲೊವಾಮಿನಲ್ಲಿ ಗೋಪುರ ಬಿದ್ದು ಸತ್ತ ಆ ಹದಿನೆಂಟು ಮಂದಿಯು ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ಕೆಟ್ಟವರೆಂದು ನೀವು ಭಾವಿಸುತ್ತೀರೋ? 5ಹಾಗಲ್ಲವೆಂದು ನಿಮಗೆ ಹೇಳುತ್ತೇನೆ. ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಅವರಂತೆ ನಾಶವಾಗುವಿರಿ” ಎಂದು ಹೇಳಿದನು. 6ಆ ಮೇಲೆ ಯೇಸು ಒಂದು ಸಾಮ್ಯವನ್ನು ಹೇಳಿದನು. ಅದೇನೆಂದರೆ, “ಒಬ್ಬನು ತನ್ನ ದ್ರಾಕ್ಷಿಯ ತೋಟದಲ್ಲಿ ಒಂದು ಅಂಜೂರದ ಗಿಡವನ್ನು ನೆಡಿಸಿದನು. ಸ್ವಲ್ಪಕಾಲದ ನಂತರ ಅವನು ಆ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಬಂದನು. ಸಿಕ್ಕಲಿಲ್ಲ. 7ಬಳಿಕ ಅವನು ತೋಟಗಾರನಿಗೆ, ‘ನೋಡು, ನಾನು ಮೂರು ವರ್ಷದಿಂದಲೂ ಈ ಅಂಜೂರದ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಬಂದಿದ್ದೇನೆ; ಆದರೂ ನನಗೆ ಸಿಕ್ಕಲಿಲ್ಲ. ಇದನ್ನು ಕಡಿದು ಹಾಕು. ಇದರಿಂದ ಭೂಮಿಯು ಯಾಕೆ ವ್ಯರ್ಥವಾಗಬೇಕು’ ಎಂದು ಹೇಳಿದನು. 8ಅದಕ್ಕೆ ಆ ತೋಟಗಾರನು, ‘ಯಜಮಾನನೇ ಈ ವರ್ಷವೂ ಇದನ್ನು ಬಿಡು, ಅಷ್ಟರಲ್ಲಿ ನಾನು ಇದರ ಸುತ್ತಲು ಅಗೆದು ಗೊಬ್ಬರ ಹಾಕುತ್ತೇನೆ. 9ಮುಂದೆ ಅದರಲ್ಲಿ ಹಣ್ಣು ಬಿಟ್ಟರೆ ಸರಿ, ಇಲ್ಲದಿದ್ದರೆ ಇದನ್ನು ಕಡಿದುಹಾಕಬಹುದು’” ಎಂದು ಉತ್ತರ ಕೊಟ್ಟನು.
ಇಂದಿನ ಸಂತರು
- ಕಾಪಿಸ್ಟ್ರಾನೊದ ಸಂತ ಜಾನ್, ಧರ್ಮಗುರು
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು