ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಸೆಪ್ಟೆಂಬರ್ 2027 › 29 ಸೆಪ್ಟೆಂಬರ್
ಆರ್ಥೊಡಾಕ್ಸ್ ಪಂಚಾಂಗ · ಸೆಪ್ಟೆಂಬರ್ 16 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 29 ಸೆಪ್ಟೆಂಬರ್ 2027
ಬುಧವಾರ · ಪಂಚಾಶತ್ತಮದ ನಂತರದ 15ನೇ ವಾರ · ಸ್ವರ 5
ಹಬ್ಬಗಳು ಮತ್ತು ಸಂತರು
Afterfeast of the Exaltation of the Cross
ಉಪವಾಸದ ದಿನ
ಉಪವಾಸ: ಎಣ್ಣೆಯೊಂದಿಗೆ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಪತ್ರಿಕೆ
15ಸಹೋದರರೇ, ದೈನಂದಿನ ಜೀವನದಿಂದ ಒಂದು ದೃಷ್ಟಾಂತವನ್ನು ನಿಮಗೆ ಹೇಳುತ್ತೇನೆ, ಒಬ್ಬನು ಮತ್ತೊಬ್ಬನೊಡನೆ ಸ್ಥಿರಪಡಿಸಿದ ಒಂದು ಒಪ್ಪಂದವು ಕೇವಲ ಮನುಷ್ಯನದ್ದಾಗಿದ್ದರೂ, ಅದನ್ನು ಯಾರೂ ರದ್ದುಮಾಡುವಂತಿಲ್ಲ ಮತ್ತು ಅದಕ್ಕೆ ಏನನ್ನೂ ಸೇರಿಸುವಂತಿಲ್ಲ. 16ಹಾಗೆಯೇ, ದೇವರು ಅಬ್ರಹಾಮನಿಗೆ ಮತ್ತು ಅವನಿಂದ ಬರುವ ಪೀಳಿಗೆಗೆ ವಾಗ್ದಾನ ಮಾಡಿದನು. ಆದರೆ “ಪೀಳಿಗೆ” ಎಂದು ಹೇಳಿದಾಗ, ಅದು ವಂಶದಲ್ಲಿ ಇರುವ ಎಲ್ಲರಿಗೂ ಅನ್ವಯಿಸದೇ, ಅಬ್ರಹಾಮನ ವಂಶಕ್ಕೆ ಸೇರಿದ ಒಬ್ಬ ವ್ಯಕ್ತಿಯನ್ನೇ ಸೂಚಿಸುತ್ತದೆ. ಆ ಒಬ್ಬನು ಕ್ರಿಸ್ತನೇ. 17ನಾನು ಹೇಳಬಯಸುವುದೇನೆಂದರೆ, ದೇವರು ಮೊದಲು ಅನುಮೋದಿಸಿದ ಒಡಂಬಡಿಕೆಯನ್ನು, ನಾನೂರ ಮೂವತ್ತು ವರ್ಷಗಳ ನಂತರ ಬಂದ ಮೋಶೆಯ ಧರ್ಮಶಾಸ್ತ್ರವು ಅದನ್ನು ನಿರರ್ಥಕಗೊಳಿಸಿ, ಆ ವಾಗ್ದಾನವನ್ನು ಬರಿದಾಗಿಮಾಡಲು ಸಾಧ್ಯವಿಲ್ಲ. 18ಅಬ್ರಹಾಮನಿಗೆ ಸಿಕ್ಕ ಆ ಬಾಧ್ಯತೆ ಮೋಶೆಯ ಧರ್ಮಶಾಸ್ತ್ರದ ಮೇಲೆ ಆಧಾರಗೊಂಡಿರುವುದಾದರೆ, ವಾಗ್ದಾನದ ಮೇಲೆ ಆಧಾರವಾಗಲು ಸಾಧ್ಯವಾಗುತ್ತಿರಲಿಲ್ಲ. ಆದರೆ ದೇವರು ಅಬ್ರಹಾಮನಿಗೆ ಕೊಟ್ಟ ಬಾಧ್ಯತೆಯನ್ನು ವಾಗ್ದಾನದ ಮೂಲಕವಾಗಿಯೇ ದಯಪಾಲಿಸಿದ್ದಾನೆ. 19ಹಾಗಾದರೆ ಮೋಶೆಯ ಧರ್ಮಶಾಸ್ತ್ರವು ಯಾತಕ್ಕೆ? ವಾಗ್ದಾನದಲ್ಲಿ ಸೂಚಿತನಾದವನು ಹುಟ್ಟಿ ಬರುವತನಕ ದೇವರು ಇಂಥಿಂಥದು ಅಪರಾಧವೆಂದು ತೋರಿಸುವುದಕ್ಕಾಗಿ ಅದನ್ನು ವಾಗ್ದಾನದ ತರುವಾಯ ನೇಮಿಸಿ ದೇವದೂತರ ಮುಖಾಂತರ ಒಬ್ಬ ಮಧ್ಯಸ್ಥನ ಕೈಯಲ್ಲಿ ಕೊಟ್ಟನು. 20ಒಂದೇ ಪಕ್ಷವಿದ್ದರೆ ಮಧ್ಯಸ್ಥನು ಬೇಕಿಲ್ಲ. ದೇವರಾದರೋ ಒಬ್ಬನೇ. 21ಹಾಗಾದರೆ ಮೋಶೆಯ ಧರ್ಮಶಾಸ್ತ್ರವು ದೇವರ ವಾಗ್ದಾನಗಳಿಗೆ ವಿರುದ್ಧವೋ? ಹಾಗೆ ಎಂದಿಗೂ ತಿಳಿದುಕೊಳ್ಳಬಾರದು. ಬದುಕಿಸುವುದಕ್ಕೆ ಶಕ್ತವಾಗಿರುವ ಧರ್ಮಶಾಸ್ತ್ರವು ಕೊಡಲ್ಪಟ್ಟಿದ್ದರೆ ಅದನ್ನು ಅನುಸರಿಸುವುದರ ಮೂಲಕ ನಿಸ್ಸಂದೇಹವಾಗಿ ನೀತಿಯುಂಟಾಗುತ್ತಿತ್ತು. 22ಸಮಸ್ತ ಲೋಕವು ಪಾಪಕ್ಕೆ ಅಧೀನವಾಯಿತೆಂದು ಪವಿತ್ರಗ್ರಂಥವು ಸ್ಪಷ್ಪೀಕರಿಸುತ್ತದೆ. ಹೀಗಿರುವುದರಿಂದ ವಾಗ್ದಾನ ಮಾಡಿದ ಸೌಭಾಗ್ಯವನ್ನು ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟವರಿಗೆ ಅವರ ನಂಬಿಕೆಯ ಆಧಾರದ ಮೇಲೆ ಕೊಡಲಾಗುತ್ತದೆ.
ಪತ್ರಿಕೆ (ಸಂತ ಯೂಫೇಮಿಯಾ)
1ದೇವರೊಡನೆ ದುಡಿಯುತ್ತಿರುವ ನಾವು ನಿಮ್ಮಲ್ಲಿ ವಿಜ್ಞಾಪಿಸುವುದೆನೆಂದರೆ; ದೇವರಿಂದ ಪಡೆದ ಕೃಪೆಯನ್ನು ವ್ಯರ್ಥಮಾಡಬೇಡಿರಿ. 2“ಸುಪ್ರಸನ್ನತೆಯ ಕಾಲದಲ್ಲಿ ನಿನ್ನ ಮನವಿಯನ್ನು ಕೇಳಿದೆನು, ರಕ್ಷಣೆಯ ದಿನದಲ್ಲಿ ನಿನಗೆ ಸಹಾಯ ಮಾಡಿದೆನು” ಎಂದು ದೇವರು ಹೇಳುತ್ತಾನಲ್ಲಾ. ನೋಡಿ, ಈಗಲೇ ಆ ಸುಪ್ರಸನ್ನತೆಯ ಕಾಲವು; ಇಂದೇ ಆ ರಕ್ಷಣೆಯ ದಿನ. 3ನಮ್ಮ ಸೇವೆಯು ಯಾರ ಮುಂದೆಯೂ ಅವಹೇಳನಕ್ಕೆ ಗುರಿಯಾಗದಂತೆ, ನಾವು ಯಾರಿಗೂ ಅಡ್ಡಿಯನ್ನು ಒಡ್ಡಲಿಲ್ಲ. 4ಬದಲಾಗಿ, ಎಲ್ಲಾ ವಿಷಯಗಳಲ್ಲಿ ದೇವರ ಸೇವಕರೆಂದು ನಮ್ಮ ಸೇವೆಯನ್ನು ಸಮ್ಮತ ಮಾಡಿಕೊಂಡು, ನಾವು ಸಂಕಟದಲ್ಲಿಯೂ, ಕೊರತೆಗಳಲ್ಲಿಯೂ, ಇಕ್ಕಟ್ಟುಗಳಲ್ಲಿಯೂ, ಪೆಟ್ಟುಗಳಲ್ಲಿಯೂ, 5ದೊಂಬಿ, ಕಲಹ, ಸೆರೆಮನೆ, ಶಿಕ್ಷೆ ಇವುಗಳನ್ನು ಅನುಭವಿಸಿದ್ದೇವೆ. ಮೈಮುರಿದು ಕೆಲಸ ಮಾಡಿದ್ದೇವೆ. ನಿದ್ದೆಗೆಟ್ಟು ಬಳಲಿದ್ದೇವೆ; ಹಸಿವಿನಲ್ಲಿ ಸೊರಗಿದ್ದೇವೆ; ಈ ಎಲ್ಲಾ ವಿಷಯಗಳಲ್ಲಿ ಬಹು ಸಮಾಧಾನವನ್ನು ತೋರಿಸಿದ್ದೇವೆ. 6ಶುದ್ಧಮನಸ್ಸು, ಜ್ಞಾನ, ದೀರ್ಘಶಾಂತಿ, ದಯೆ, ಪವಿತ್ರಾತ್ಮ, ನಿಷ್ಕಪಟವಾದ ಪ್ರೀತಿ, 7ಸತ್ಯವಾಕ್ಯ, ದೇವರ ಮಹತ್ವ ಇವುಗಳಿಂದ ಕೂಡಿದವರಾಗಿ, ಎಡಬಲಗೈಗಳಲ್ಲಿ ನೀತಿಯೆಂಬ ಆಯುಧಗಳನ್ನು ಧರಿಸಿಕೊಂಡಿದ್ದೇವೆ. 8ನಾವು ಮಾನ ಮತ್ತು ಅವಮಾನ, ಕೀರ್ತಿ ಮತ್ತು ಅಪಕೀರ್ತಿಗಳಲ್ಲಿಯೂ ಸೇವೆಮಾಡಿದ್ದೇವೆ. ಸತ್ಯವಂತರಾದರೂ ಮೋಸಗಾರರೆನಿಸಿಕೊಂಡಿದ್ದೇವೆ. 9ನಾವು ಪ್ರಸಿದ್ಧರಾಗಿದ್ದರೂ ಅಪರಿಚಿತರೆನ್ನಿಸಿಕೊಂಡು ಸೇವೆ ಮಾಡಿದ್ದೇವೆ. ಸಾಯುವವರಾಗಿ ತೋರಿದರೂ, ಬದುಕಿದ್ದೇವೆ! ನೋಡಿ, ಶಿಕ್ಷೆಗೆ ಗುರಿಯಾದರೂ ಕೊಲ್ಲಲ್ಪಡದವರಾಗಿದ್ದೇವೆ, 10ದುಃಖಪಡುವವರಾಗಿದ್ದರೂ ಸೇವೆಯಲ್ಲಿ ಯಾವಾಗಲೂ ಸಂತೋಷಪಡುತ್ತೇವೆ, ಬಡವರಾಗಿದ್ದರೂ ಅನೇಕರನ್ನು ಐಶ್ವರ್ಯವಂತರಾಗಿ ಮಾಡಿದ್ದೇವೆ; ಏನೂ ಇಲ್ಲದವರಾಗಿದ್ದರೂ ಎಲ್ಲಾ ಹೊಂದಿದವರಾಗಿದ್ದೇವೆ.
ಸುವಾರ್ತೆ
7ತಾನು ಆಯ್ಕೆಮಾಡಿಕೊಂಡ ಹನ್ನೆರಡು ಮಂದಿ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದನು. ಕಳುಹಿಸುವಾಗ ಆತನು ಅವರಿಗೆ ದೆವ್ವಗಳ ಮೇಲೆ ಅಧಿಕಾರ ಕೊಟ್ಟು, 8“ಕೋಲು ಹೊರತು ಪ್ರಯಾಣಕ್ಕೆ ಏನೂ ತೆಗೆದುಕೊಂಡು ಹೋಗಬೇಡಿರಿ; ಬುತ್ತಿ, ಚೀಲ, ಸೊಂಟಪಟ್ಟಿಯಲ್ಲಿ ಹಣ ಬೇಡ. 9ಚಪ್ಪಲಿಗಳನ್ನು ಹಾಕಿಕೊಳ್ಳಬಹುದು, ಆದರೆ ಎರಡು ಅಂಗಿಗಳನ್ನು ಧರಿಸಬೇಡಿರಿ” ಎಂದು ಅಪ್ಪಣೆಕೊಟ್ಟನು. 10ಇದಲ್ಲದೆ ಆತನು ಅವರಿಗೆ, “ನೀವು ಎಲ್ಲಿಯಾದರೂ ಒಂದು ಮನೆಗೆ ಹೋದಾಗ ಆ ಸ್ಥಳದಿಂದ ಹೊರಡುವವರೆಗೂ ಅಲ್ಲೇ ಉಳಿದುಕೊಳ್ಳಿರಿ. 11ಮತ್ತು ಯಾವ ಸ್ಥಳದವರಾದರೂ ನಿಮ್ಮನ್ನು ಸೇರಿಸಿಕೊಳ್ಳದೆಯೂ ನೀವು ಹೇಳುವುದನ್ನು ಕೇಳದೆಯೂ ಹೋದರೆ ಆ ಸ್ಥಳದಿಂದ ಹೊರಡುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ; ಅದು ಅವರ ವಿರುದ್ಧ ಸಾಕ್ಷಿಯಾಗಿರಲಿ” ಎಂದು ಹೇಳಿದನು. 12ಅವರು ಹೊರಟು ಹೋಗಿ ಜನರಿಗೆ, “ನೀವು ನಿಮ್ಮ ಪಾಪಗಳನ್ನು ಬಿಟ್ಟು ಮಾನಸಾಂತರ ಹೊಂದಬೇಕು” ಎಂದು ಸಾರಿ ಹೇಳಿದರು. 13ಅನೇಕ ದೆವ್ವಗಳನ್ನು ಬಿಡಿಸಿ ಅನೇಕ ರೋಗಿಗಳಿಗೆ ಎಣ್ಣೆ ಹಚ್ಚಿ ಗುಣಪಡಿಸಿದರು.
ಸುವಾರ್ತೆ (ಸಂತ ಯೂಫೇಮಿಯಾ)
36ಫರಿಸಾಯರಲ್ಲಿ ಒಬ್ಬನು ಆತನನ್ನು ತನ್ನ ಜೊತೆಯಲ್ಲಿ ಊಟಮಾಡಬೇಕೆಂದು ಬೇಡಿಕೊಂಡಾಗ ಆತನು ಆ ಫರಿಸಾಯನ ಮನೆಗೆ ಹೋಗಿ ಆತನ ಸಂಗಡ ಊಟಕ್ಕೆ ಕುಳಿತುಕೊಂಡನು. 37ಆಗ ಆ ಊರಿನಲ್ಲಿದ್ದ ದುರಾಚಾರಿಯಾದ ಒಬ್ಬ ಹೆಂಗಸು ಫರಿಸಾಯನ ಮನೆಯಲ್ಲಿ ಆತನು ಊಟಕ್ಕೆ ಬಂದಿದ್ದಾನೆಂದು ತಿಳಿದು ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಬಂದು, 38ಯೇಸುವಿನ ಹಿಂದೆ ಪಾದಗಳ ಬಳಿಯಲ್ಲಿ ನಿಂತುಕೊಂಡು ಅಳುತ್ತಾ ತನ್ನ ಕಣ್ಣೀರಿನಿಂದ ಆತನ ಪಾದಗಳನ್ನು ನೆನಸುತ್ತಾ ತನ್ನ ತಲೆ ಕೂದಲಿನಿಂದ ಒರಸಿ, ಪಾದಗಳಿಗೆ ಮುದ್ದಿಟ್ಟು ಆ ತೈಲವನ್ನು ಹಚ್ಚಿದಳು. 39ಆದರೆ ಆತನನ್ನು ಊಟಕ್ಕೆ ಕರೆದ ಫರಿಸಾಯನು ಇದನ್ನು ಕಂಡು, “ಇವಳು ದುರಾಚಾರಿ; ಈತನು ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟಿದ ಈ ಹೆಂಗಸು ಇಂಥವಳೆಂದು ತಿಳಿದುಕೊಳ್ಳುತ್ತಿದ್ದನು” ಎಂದು ತನ್ನೊಳಗೇ ಅಂದುಕೊಂಡನು. 40ಅದಕ್ಕೆ ಯೇಸು, “ಸೀಮೋನನೇ, ನಾನು ನಿನಗೆ ಹೇಳಬೇಕಾದ ಒಂದು ಮಾತದೆ” ಅಂದಾಗ ಸೀಮೋನನು, “ಬೋಧಕನೇ, ಹೇಳು” ಅಂದನು. 41ಆಗ ಯೇಸು, “ಒಬ್ಬ ಸಾಹುಕಾರನಿಗೆ ಇಬ್ಬರು ಸಾಲಗಾರರಿದ್ದರು. ಒಬ್ಬನು ಐನೂರು ಬೆಳ್ಳಿ ನಾಣ್ಯಗಳನ್ನು ಕೊಡಬೇಕಾಗಿತ್ತು. ಮತ್ತೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ಕೊಡಬೇಕಾಗಿತ್ತು. 42ತೀರಿಸುವುದಕ್ಕೆ ಅವರಿಗೆ ಗತಿಯಿಲ್ಲದ್ದರಿಂದ ಆ ಇಬ್ಬರಿಗೂ ಸಾಲವನ್ನು ಮನ್ನಾಮಾಡಿ ಬಿಟ್ಟನು. ಹಾಗಾದರೆ ಅವರಿಬ್ಬರಲ್ಲಿ ಯಾವನು ಆ ಸಾಹುಕಾರನನ್ನು ಹೆಚ್ಚಾಗಿ ಪ್ರೀತಿಸುವನು?” ಎಂದು ಕೇಳಿದ್ದಕ್ಕೆ, 43ಸೀಮೋನನು, “ಯಾವನಿಗೆ ಹೆಚ್ಚಾಗಿ ಬಿಟ್ಟನೋ ಅವನೇ ಎಂದು ಭಾವಿಸುತ್ತೇನೆ” ಅಂದನು. ಯೇಸು ಅವನಿಗೆ, “ನೀನು ಸರಿಯಾಗಿ ತೀರ್ಪುಮಾಡಿದಿ” ಎಂದು ಹೇಳಿ, 44ಆ ಹೆಂಗಸಿನ ಕಡೆಗೆ ತಿರುಗಿಕೊಂಡು ಸೀಮೋನನಿಗೆ ಹೇಳಿದ್ದೇನಂದರೆ, “ಈ ಹೆಂಗಸನ್ನು ನೋಡಿದ್ದಿಯಾ? ನಾನು ನಿನ್ನ ಮನೆಗೆ ಬಂದಾಗ ನೀನು ನನ್ನ ಕಾಲಿಗೆ ನೀರು ಕೊಡಲಿಲ್ಲ; ಇವಳಾದರೋ ನನ್ನ ಕಾಲುಗಳನ್ನು ಕಣ್ಣೀರಿನಿಂದ ನೆನಸಿ ತನ್ನ ತಲೆಯಕೂದಲಿನಿಂದ ಒರಸಿದಳು. 45ನೀನು ನನಗೆ ಮುದ್ದಿಡಲಿಲ್ಲ; ಇವಳಾದರೋ ನಾನು ಒಳಗೆ ಬಂದಾಗಿನಿಂದ ನನ್ನ ಕಾಲಿಗೆ ಮುದ್ದಿಡುವುದನ್ನು ಬಿಟ್ಟಿಲ್ಲ. 46ನೀನು ನನ್ನ ತಲೆಗೆ ಎಣ್ಣೆ ಹಚ್ಚಲಿಲ್ಲ; ಇವಳಾದರೋ ಸುಗಂಧ ತೈಲವನ್ನು ಕಾಲಿಗೆ ಹಚ್ಚಿದಳು. 47ಹೀಗಿರಲು ನಾನು ಹೇಳುವ ಮಾತೇನಂದರೆ, ಇವಳ ಪಾಪಗಳು ಬಹಳವಾಗಿದ್ದರೂ ಅವೆಲ್ಲಾವು ಕ್ಷಮಿಸಲ್ಪಟ್ಟಿವೆ. ಇದಕ್ಕೆ ಪ್ರಮಾಣವೇನಂದರೆ ಇವಳು ತೋರಿಸಿದ ಪ್ರೀತಿ ಬಹಳ. ಆದರೆ ಯಾವನಿಗೆ ಸ್ವಲ್ಪ ಮಾತ್ರ ಕ್ಷಮಿಸಲ್ಪಟ್ಟಿದೆಯೋ ಅವನು ತೋರಿಸುವ ಪ್ರೀತಿಯು ಸ್ವಲ್ಪವೇ” ಅಂದನು. 48ಆ ಮೇಲೆ ಆತನು ಅವಳಿಗೆ, “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು. 49ಆತನ ಸಂಗಡ ಊಟಕ್ಕೆ ಕುಳಿತಿದ್ದವರೆಲ್ಲರೂ, “ಪಾಪಗಳನ್ನು ಸಹ ಕ್ಷಮಿಸಲು ಇವನಾರು?” ಎಂದು ತಮ್ಮತಮ್ಮೊಳಗೆ ಅಂದುಕೊಂಡರು. 50ಆದರೆ ಆತನು ಆ ಹೆಂಗಸಿಗೆ, “ನಿನ್ನ ನಂಬಿಕೆಯೇ ನಿನ್ನನ್ನು ರಕ್ಷಿಸಿದೆ, ಸಮಾಧಾನದಿಂದ ಹೋಗು” ಎಂದು ಹೇಳಿದನು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 16 ಸೆಪ್ಟೆಂಬರ್ ಎಂದರೆ ನಾಗರಿಕ ಪಂಚಾಂಗದ 29 ಸೆಪ್ಟೆಂಬರ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು