ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಆಗಸ್ಟ್ 2027 › 29 ಆಗಸ್ಟ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 29 ಆಗಸ್ಟ್ 2027
ಭಾನುವಾರ · ಸಾಮಾನ್ಯ ಕಾಲದ 22ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 22ನೇ ಭಾನುವಾರ
ಭಾನುವಾರ · ಆರಾಧನಾ ಬಣ್ಣ: ಹಸಿರು
ದಿನದ ವಾಚನಗಳು
ಮೊದಲನೆಯ ವಾಚನ
1ಇಸ್ರಾಯೇಲರೇ ಕೇಳಿರಿ, ನೀವು ಜೀವದಿಂದ ಉಳಿದು ನಿಮ್ಮ ಪೂರ್ವಿಕರ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ಸೇರಿ, ಸ್ವಾಧೀನಮಾಡಿಕೊಳ್ಳುವಂತೆ ಸಾಧ್ಯವಾಗಲು ನಾನು ಈಗ ಬೋಧಿಸುವ ಆಜ್ಞಾವಿಧಿಗಳನ್ನು ಗಮನಿಸಿ ಅನುಸರಿಸಬೇಕು. 2ನಿಮ್ಮ ದೇವರಾದ ಯೆಹೋವನು ಕೊಟ್ಟ ಆಜ್ಞೆಗಳನ್ನೇ ನಾನು ನಿಮಗೆ ತಿಳಿಸುತ್ತಾ ಇದ್ದೇನೆ. ಈ ಮಾತುಗಳನ್ನು ನೀವು ಕೈಕೊಳ್ಳಬೇಕೇ ಹೊರತು ಅವುಗಳಿಗೆ ಯಾವುದನ್ನೂ ಕೂಡಿಸಬಾರದು, ಅವುಗಳಿಂದ ಯಾವುದನ್ನೂ ತೆಗೆಯಬಾರದು. 6ಇವುಗಳನ್ನು ಕೈಕೊಂಡು ಅನುಸರಿಸಿರಿ. ನೀವು ಅನುಸರಿಸಿ ನಡೆದರೆ ಅನ್ಯಜನಗಳು ನಿಮ್ಮನ್ನು ಜ್ಞಾನಿಗಳೂ, ವಿವೇಕಿಗಳೂ ಎಂದು ತಿಳಿಯುವರು. ಅವರು ಈ ಆಜ್ಞೆಗಳ ವಿಷಯದಲ್ಲಿ ವರ್ತಮಾನವನ್ನು ಕೇಳಿ, “ಈ ದೊಡ್ಡ ಜನಾಂಗವು ಜ್ಞಾನವಿವೇಕವುಳ್ಳ ಜನಾಂಗ” ಎಂದು ಹೇಳುವರು. 7ನಾವು ನಮ್ಮ ದೇವರಾದ ಯೆಹೋವನಿಗೆ ಮೊರೆಯಿಡುವಾಗೆಲ್ಲಾ ಆತನು ಸಮೀಪವಾಗಿಯೇ ಇದ್ದಾನಲ್ಲಾ; ಬೇರೆ ಎಷ್ಟು ದೊಡ್ಡ ಜನಾಂಗಕ್ಕಾದರೂ ಯಾವ ದೇವರು ಹೀಗೆ ಸಮೀಪವಾಗಿರುವನು? 8ನಾನು ಈ ಹೊತ್ತು ನಿಮ್ಮ ಮುಂದೆ ಇಡುವ ಇಂಥ ನ್ಯಾಯವಾದ ಆಜ್ಞಾವಿಧಿಗಳುಳ್ಳ ಈ ಧರ್ಮಶಾಸ್ತ್ರಕ್ಕೆ ಸಮಾನವಾದದ್ದು ಬೇರೆ ಯಾವ ಜನಾಂಗಕ್ಕೆ ಉಂಟು?
ಪ್ರತಿವಚನ ಕೀರ್ತನೆ
2ಅವನು ಸಜ್ಜನನೂ, ನೀತಿವಂತನೂ, ಮನಃಪೂರ್ವಕವಾಗಿ ಸತ್ಯದ ಮಾತುಗಳನ್ನಾಡುವವನೂ ಆಗಿರಬೇಕು. 3ಅವನು ಚಾಡಿಯನ್ನು ಹೇಳದವನೂ, ಮತ್ತೊಬ್ಬರಿಗೆ ಅನ್ಯಾಯ ಮಾಡದವನೂ, ಯಾರನ್ನೂ ನಿಂದಿಸದವನೂ ಆಗಿರಬೇಕು. 4ಅವನು ಭ್ರಷ್ಟರನ್ನು ಬಿಟ್ಟುಬಿಟ್ಟವನೂ, ಯೆಹೋವನಲ್ಲಿ ಭಯಭಕ್ತಿಯುಳ್ಳವರನ್ನು ಸನ್ಮಾನಿಸುವವನೂ, ನಷ್ಟವಾದರೂ ಪ್ರಮಾಣತಪ್ಪದವನೂ ಆಗಿರಬೇಕು. 5ಅವನು ಸಾಲಕ್ಕೆ ಬಡ್ಡಿ ಕೇಳದವನೂ, ನಿರಪರಾಧಿಯ ಕೇಡಿಗಾಗಿ ಲಂಚವನ್ನು ತೆಗೆದುಕೊಳ್ಳದವನೂ ಆಗಿರಬೇಕು. ಇಂಥವನು ಎಂದಿಗೂ ಕದಲುವುದಿಲ್ಲ.
ಎರಡನೆಯ ವಾಚನ
17ಎಲ್ಲಾ ಒಳ್ಳೆಯ ವರಗಳು ಮತ್ತು ಪರಿಪೂರ್ಣವಾದ ವರಗಳು ಮೇಲಿನಿಂದ ಬಂದವುಗಳೇ, ಅವು ಸಕಲ ವಿಧವಾದ ಬೆಳಕಿಗೆ ಮೂಲಕರ್ತನಾದ ದೇವರಿಂದ ಇಳಿದು ಬರುತ್ತವೆ; ಆತನು ನೆರಳಿನಂತೆ ಬದಲಾಗುವವನಲ್ಲ, ಚಂಚಲಚಿತ್ತನೂ ಅಲ್ಲ. 18ದೇವರು ತನ್ನ ಸುಚಿತ್ತದ ಪ್ರಕಾರ ಸತ್ಯವಾಕ್ಯದ ಮೂಲಕ ಜೀವಕೊಟ್ಟಿವುದರಿಂದ ನಾವು ಆತನ ಸರ್ವ ಸೃಷ್ಟಿಯಲ್ಲಿ ಪ್ರಥಮ ಫಲವಾದೆವು. 21ಆದಕಾರಣ ಎಲ್ಲಾ ನೀಚತನವನ್ನೂ, ಎಲ್ಲಾ ದುಷ್ಟತನವನ್ನೂ ತೆಗೆದುಹಾಕಿ ಮನಸ್ಸಿನೊಳಗೆ ಬೇರೂರಿರುವ ದೇವರ ವಾಕ್ಯವನ್ನು ನಮ್ರತೆಯಿಂದ ಸ್ವೀಕರಿಸಿರಿ. ಅದು ನಿಮ್ಮ ಆತ್ಮಗಳನ್ನು ರಕ್ಷಿಸುವುದಕ್ಕೆ ಸಾಮರ್ಥ್ಯವುಳ್ಳದ್ದಾಗಿರುತ್ತದೆ. 22ದೇವರ ವಾಕ್ಯದ ಪ್ರಕಾರ ನಡೆಯುವವರಾಗಿರಿ, ಅದನ್ನು ಕೇವಲ ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳಬೇಡಿರಿ. 27ಸಂಕಟದಲ್ಲಿ ಬಿದ್ದಿರುವ ದಿಕ್ಕಿಲ್ಲದವರನ್ನೂ, ವಿಧವೆಯರನ್ನೂ ಪರಾಂಬರಿಸಿ ತನಗೆ ಇಹಲೋಕದ ದೋಷವು ಹತ್ತದಂತೆ ತನ್ನನ್ನು ತಾನು ಕಾಪಾಡಿಕೊಳ್ಳುವುದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ, ನಿರ್ಮಲವೂ ಆಗಿರುವ ಭಕ್ತಿ.
ಸುವಾರ್ತೆ
1ತರುವಾಯ ಯೆರೂಸಲೇಮಿನಿಂದ ಬಂದಿದ್ದ ಫರಿಸಾಯರೂ ಶಾಸ್ತ್ರಿಗಳಲ್ಲಿ ಕೆಲವರೂ ಯೇಸುವಿನ ಬಳಿಗೆ ಕೂಡಿ ಬಂದರು. 2ಆಗ ಯೇಸುವಿನ ಶಿಷ್ಯರಲ್ಲಿ ಕೆಲವರು ಅಶುದ್ಧ ಕೈಗಳಿಂದ ಅಂದರೆ ಕೈತೊಳೆದುಕೊಳ್ಳದೆ ಊಟಮಾಡುವುದನ್ನು ಕಂಡರು. 3ಫರಿಸಾಯರೂ ಯೆಹೂದ್ಯರೆಲ್ಲರೂ ಹಿರಿಯರಿಂದ ಬಂದ ಪದ್ಧತಿಯಂತೆ ತಮ್ಮ ಕೈಗಳನ್ನು ವಿಧಿಬದ್ಧವಾಗಿ ತೊಳೆಯದೆ ಆಹಾರ ತೆಗೆದುಕೊಳ್ಳುತ್ತಿರಲಿಲ್ಲ. 4ಮತ್ತು ಸಂತೆಗೆ ಹೋಗಿ ಬಂದರೆ ನೀರನ್ನು ಪ್ರೋಕ್ಷಿಸಿಕೊಳ್ಳದೆ ಇರುತ್ತಿರಲಿಲ್ಲ. ಬಹು ಸ್ವಚ್ಛವಾಗಿ ಸ್ನಾನಮಾಡಿಯೇ ಊಟಮಾಡುವುದು; ತಂಬಿಗೆ, ಚೆಂಬು, ತಪ್ಪಲೆಗಳನ್ನು ತೊಳೆಯುವುದು; ಇವೇ ಮೊದಲಾದ ಅನೇಕ ಆಚಾರಗಳು ಅವರಲ್ಲಿ ರೂಢಿಯಲ್ಲಿದ್ದುವು. 5ಆದುದರಿಂದ ಫರಿಸಾಯರೂ ಶಾಸ್ತ್ರಿಗಳೂ ಯೇಸುವನ್ನು, “ನಿನ್ನ ಶಿಷ್ಯರು ಹಿರಿಯರ ಆಚಾರಗಳನ್ನೇಕೆ ಅನುಸರಿಸುವುದಿಲ್ಲ? ಅಶುದ್ಧವಾದ ಕೈಗಳಿಂದಲೇ ಅವರು ಊಟಮಾಡುತ್ತಿದ್ದಾರಲ್ಲಾ?” ಎಂದು ಕೇಳಿದರು. 6ಅದಕ್ಕೆ ಆತನು, “ಕಪಟಿಗಳಾದ ನಿಮ್ಮ ವಿಷಯದಲ್ಲಿ ಯೆಶಾಯನು ಸರಿಯಾಗಿ ಪ್ರವಾದಿಸಿದ್ದಾನೆ; ಅವನು ಬರೆದಿರುವಂತೆ: “‘ಈ ಜನರು ಮಾತಿನಿಂದ ನನ್ನನ್ನು ಗೌರವಿಸುತ್ತಾರೆ, ಆದರೆ ಅವರ ಹೃದಯ ನನ್ನಿಂದ ದೂರವಾಗಿದೆ. 7ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಉಪದೇಶವನ್ನಾಗಿ ಅವರು ಬೋಧಿಸುವುದರಿಂದ ನನಗೆ ಆರಾಧನೆ ಮಾಡುವುದು ವ್ಯರ್ಥ’ ಎಂಬುದೇ. 8ನೀವು ದೇವರ ಆಜ್ಞೆಯನ್ನು ಬಿಟ್ಟು ಮನುಷ್ಯರು ನೇಮಿಸಿದ ಸಂಪ್ರದಾಯಗಳನ್ನು ಬಿಡದೆ ಹಿಡಿದುಕೊಂಡಿದ್ದೀರಿ” ಎಂದು ಹೇಳಿದನು. 14ಆ ಮೇಲೆ ಯೇಸು ಜನರ ಗುಂಪನ್ನು ಪುನಃ ಹತ್ತಿರಕ್ಕೆ ಕರೆದು, “ಎಲ್ಲರೂ ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ ಮತ್ತು ಅರ್ಥ ಮಾಡಿಕೊಳ್ಳಿರಿ. 15ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದು ಅವನನ್ನು ಮೈಲಿಗೆ ಮಾಡುವುದಿಲ್ಲ; ಆದರೆ ಮನುಷ್ಯನೊಳಗಿನಿಂದ ಹೊರಗೆ ಬರುವಂಥದು ಮನುಷ್ಯನನ್ನು ಮೈಲಿಗೆ ಮಾಡುವಂಥವುಗಳಾಗಿವೆ” ಎಂದು ಹೇಳಿದನು. 21ಒಳಗಿನಿಂದ ಅಂದರೆ ಮನುಷ್ಯರ ಹೃದಯದೊಳಗಿನಿಂದ ಬರುವ ದುರಾಲೋಚನೆಗಳು, ಹಾದರ, ಕಳ್ಳತನ, ಕೊಲೆ, 22ವ್ಯಭಿಚಾರ, ದುರಾಶೆ, ಕೆಡುಕುತನ, ಮೋಸ, ಕಾಮಾಭಿಲಾಷೆ, ಹೊಟ್ಟೆಕಿಚ್ಚು, ಅಪನಿಂದೆ, ಗರ್ವ, ಬುದ್ಧಿಗೇಡಿತನ ಇವೇ ಮೊದಲಾದವುಗಳು ಹೊರಡುತ್ತವೆ. 23ಈ ಎಲ್ಲಾ ಕೆಡುಕುಗಳು ಮಾನವನ ಅಂತರಂಗದಿಂದಲೇ ಉದ್ಭವಿಸಿ ಅವನನ್ನು ಅಶುದ್ಧ ಮಾಡುತ್ತವೆ.”
ಇಂದಿನ ಸಂತರು
- ಸ್ನಾನಿಕನಾದ ಸಂತ ಯೋಹಾನನ ಹುತಾತ್ಮತೆ
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು