ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಆಗಸ್ಟ್ 2027 › 30 ಆಗಸ್ಟ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 30 ಆಗಸ್ಟ್ 2027
ಸೋಮವಾರ · ಸಾಮಾನ್ಯ ಕಾಲದ 22ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 22ನೇ ವಾರದ ಸೋಮವಾರ
ವಾರದ ದಿನ · ಆರಾಧನಾ ಬಣ್ಣ: ಹಸಿರು
ದಿನದ ವಾಚನಗಳು
ಮೊದಲನೆಯ ವಾಚನ
13ಸಹೋದರರೇ, ನಿದ್ರೆಹೋಗುವವರ ಗತಿ ಏನೆಂದು ನೀವು ತಿಳಿಯದೆ ಇದ್ದು, ನಿರೀಕ್ಷೆಯಿಲ್ಲದವರಾಗಿರುವ ಇತರರಂತೆ ದುಃಖಿಸಬಾರದು ಎಂಬುದೇ ನಮ್ಮ ಬಯಕೆ. 14ಯೇಸು ಸತ್ತು ಜೀವಿತನಾಗಿ ಎದ್ದನೆಂದು ನಾವು ನಂಬುತ್ತೇವೆ ಹಾಗೆಯೇ ಯೇಸುವಿನಲ್ಲಿದ್ದು ನಿದ್ರೆಹೋದವರನ್ನು ಸಹ ದೇವರು ಆತನೊಡನೆ ಎಬ್ಬಿಸಿ ಕರೆದುಕೊಂಡು ಬರುವನೆಂದು ನಂಬಬೇಕಲ್ಲವೇ. 15ನಾವು ಕರ್ತನ ಮಾತಿನ ಆಧಾರದ ಮೇಲೆ ನಿಮಗೆ ಹೇಳುವುದೇನಂದರೆ, ಕರ್ತನು ಪುನರಾಗಮಿಸುವವರೆಗೆ ಜೀವದಿಂದುಳಿದಿರುವ ನಾವು ಮರಣ ಹೊಂದಿದವರಿಗಿಂತ ಮುಂದಾಗುವುದಿಲ್ಲ. 16ಯಾಕೆಂದರೆ ಕರ್ತನು ತಾನೇ ಆಜ್ಞಾಘೋಷದೊಡನೆಯೂ, ಪ್ರಧಾನದೂತನ ಶಬ್ದದೊಡನೆಯೂ, ದೇವರ ತುತ್ತೂರಿ ಧ್ವನಿಯೊಡನೆಯೂ ಆಕಾಶದಿಂದ ಇಳಿದುಬರುವನು. ಆಗ ಕ್ರಿಸ್ತನಲ್ಲಿ ಸತ್ತವರು ಮೊದಲು ಎದ್ದು ಬರುವರು. 17ಆ ಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವುದಕ್ಕಾಗಿ ಅವರೊಂದಿಗೆ ಮೇಘಗಳಲ್ಲಿ ಫಕ್ಕನೆ ಒಯ್ಯಲ್ಪಡುವೆವು. ಹೀಗಾಗಿ ನಾವು ಸದಾಕಾಲವೂ ಕರ್ತನ ಜೊತೆಯಲ್ಲಿರುವೆವು.
ಪ್ರತಿವಚನ ಕೀರ್ತನೆ
1ಯೆಹೋವನಿಗೆ ಹೊಸ ಕೀರ್ತನೆಯನ್ನು ಹಾಡಿರಿ; ಎಲ್ಲಾ ಭೂನಿವಾಸಿಗಳೇ, ಯೆಹೋವನಿಗೆ ಹಾಡಿರಿ. 3ಜನಾಂಗಗಳಲ್ಲಿ ಆತನ ಘನತೆಯನ್ನೂ, ಎಲ್ಲಾ ಜನರಲ್ಲಿ ಆತನ ಅದ್ಭುತಕೃತ್ಯಗಳನ್ನೂ ಪ್ರಸಿದ್ಧಪಡಿಸಿರಿ. 4ಯೆಹೋವನು ದೊಡ್ಡವನೂ, ಬಹು ಸ್ತುತ್ಯನೂ ಆಗಿದ್ದಾನೆ; ಎಲ್ಲಾ ದೇವರುಗಳಲ್ಲಿ ಆತನೇ ಮಹಾದೇವರು. 5ಜನಾಂಗಗಳ ದೇವತೆಗಳೆಲ್ಲಾ ಬೊಂಬೆಗಳೇ; ಯೆಹೋವನಾದರೋ ಗಗನಮಂಡಲವನ್ನು ನಿರ್ಮಿಸಿದನು. 11ಯೆಹೋವನ ಮುಂದೆ ಗಗನಮಂಡಲವು ಹರ್ಷಿಸಲಿ; ಭೂಲೋಕವು ಸಂತೋಷಿಸಲಿ; ಸಮುದ್ರವೂ, ಅದರಲ್ಲಿರುವುದೆಲ್ಲವೂ ಘೋಷಿಸಲಿ. 12ಹೊಲಗಳೂ, ಅವುಗಳ ಪೈರುಗಳೂ ಉಲ್ಲಾಸಿಸಲಿ; ವನದ ಎಲ್ಲಾ ಮರಗಳು ಉತ್ಸಾಹಧ್ವನಿ ಮಾಡಲಿ. 13ಆತನು ಬರುತ್ತಾನೆ; ಭೂನಿವಾಸಿಗಳಿಗೆ ನ್ಯಾಯತೀರಿಸಲಿಕ್ಕೆ ಬರುತ್ತಾನೆ. ಆತನು ಲೋಕಕ್ಕೆ ನೀತಿಗನುಸಾರವಾಗಿಯೂ, ಜನಾಂಗಗಳಿಗೆ ಸತ್ಯತೆಯಿಂದಲೂ ನ್ಯಾಯತೀರಿಸುವನು.
ಸುವಾರ್ತೆ
16ಹೀಗಿರಲಾಗಿ ಆತನು ತಾನು ಬೆಳೆದುಬಂದ ಊರಾದ ನಜರೇತಿಗೆ ಬಂದು, ತನ್ನ ವಾಡಿಕೆಯ ಪ್ರಕಾರ ಸಬ್ಬತ್ ದಿನದಲ್ಲಿ ಸಭಾಮಂದಿರದೊಳಗೆ ಹೋಗಿ ಪವಿತ್ರಗ್ರಂಥವನ್ನು ಓದುವುದಕ್ಕಾಗಿ ಎದ್ದು ನಿಂತನು. 17ಆಗ ಯೆಶಾಯನೆಂಬ ಪ್ರವಾದಿಯು ಬರೆದ ಗ್ರಂಥದ ಸುರುಳಿಯನ್ನು ಆತನ ಕೈಗೆ ಕೊಡಲಾಗಿ ಆತನು ಆ ಸುರುಳಿಯನ್ನು ಬಿಚ್ಚಿದಾಗ ಬರೆದಿರುವ ಈ ಭಾಗವನ್ನು ಕಂಡು ಓದಿದನು; ಅಲ್ಲಿ ಹೀಗೆ ಬರೆದಿತ್ತು, 18“ಕರ್ತನ ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭವಾರ್ತೆಯನ್ನು ಸಾರುವುದಕ್ಕಾಗಿ ಅಭಿಷೇಕಿಸಿರುವನು. ಸೆರೆಯಲ್ಲಿರುವವರನ್ನು ಬಿಡುಗಡೆಮಾಡುವುದಕ್ಕೂ, ಮತ್ತು ಕುರುಡರಿಗೆ ಕಣ್ಣು ಬರುವುದಕ್ಕೂ ಹಿಂಸಿಸಲ್ಪಟ್ಟವರನ್ನು ಬಿಡಿಸಿ ಕಳುಹಿಸುವುದಕ್ಕೂ 19ಕರ್ತನು ನೇಮಿಸಿರುವ ಶುಭವರ್ಷವನ್ನು ಪ್ರಚಾರಪಡಿಸುವುದಕ್ಕೂ ಆತನು ನನ್ನನ್ನು ಕಳುಹಿಸಿದ್ದಾನೆ.” 20ಅದನ್ನು ಓದಿದ ಮೇಲೆ ಆತನು ಆ ಸುರುಳಿಯನ್ನು ಸುತ್ತಿ ಸಭಾಮಂದಿರದ ಸೇವಕನ ಕೈಗೆ ಕೊಟ್ಟು ಕುಳಿತುಕೊಂಡನು. ಅಲ್ಲಿ ನೆರೆದ್ದಿದವರೆಲ್ಲರ ಕಣ್ಣುಗಳೂ ಆತನ ಮೇಲಿರಲಾಗಿ, 21ಆತನು ಅವರಿಗೆ, “ಈ ಹೊತ್ತು ನೀವು ನನ್ನ ಮಾತನ್ನು ಕೇಳುವಲ್ಲಿ ಈ ವೇದೋಕ್ತಿ ನೆರವೇರಿದೆ” ಎಂದು ಹೇಳುತ್ತಿರುವಾಗ, 22ಎಲ್ಲರು ಆತನನ್ನು ಹೊಗಳಿ ಆತನ ಬಾಯಿಂದ ಹೊರಡುವ ಇಂಪಾದ ಮಾತುಗಳಿಗೆ ಆಶ್ಚರ್ಯಪಟ್ಟು, “ಇವನು ಯೋಸೇಫನ ಮಗನಲ್ಲವೇ?” ಎಂದು ಮಾತನಾಡಿಕೊಂಡರು. 23ಅದಕ್ಕೆ ಯೇಸು ಅವರಿಗೆ, “‘ವೈದ್ಯನೇ, ನಿನ್ನನ್ನು ನೀನೇ ವಾಸಿಮಾಡಿಕೋ’ ಎಂಬ ಗಾದೆಯನ್ನು ನನಗೆ ನಿಸ್ಸಂದೇಹವಾಗಿ ಹೇಳಿ; ಕಪೆರ್ನೌಮಿನಲ್ಲಿ ನೀನು ಮಾಡಿದ ಕಾರ್ಯಗಳನ್ನು ನಾವು ಕೇಳಿದ್ದೇವೆ, ಅಂಥವುಗಳನ್ನು ಈ ನಿನ್ನ ಸ್ವಂತ ಸ್ಥಳದಲ್ಲಿಯೂ ಮಾಡು ಎಂದು ಹೇಳುವಿರಿ. 24ಯಾವ ಪ್ರವಾದಿಯೂ ತನ್ನ ಸ್ವದೇಶದಲ್ಲಿ ಅಂಗೀಕರಿಸಲ್ಪಡುವುದಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 25ಕೇಳಿರಿ, ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಮಳೆಬಾರದೆ ದೇಶದಲ್ಲೆಲ್ಲಾ ದೊಡ್ಡ ಬರಗಾಲ ಉಂಟಾದಾಗ, ಇಸ್ರಾಯೇಲಿನಲ್ಲೇ ಅನೇಕ ವಿಧವೆಯರು ಇದ್ದದ್ದು ನಿಜ; 26ಆದರೆ ಅವರಾರ ಬಳಿಗೂ ದೇವರು ಎಲೀಯನನ್ನು ಕಳುಹಿಸದೆ, ಸೀದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನಲ್ಲಿದ್ದ ಒಬ್ಬ ವಿಧವೆಯ ಬಳಿಗೆ ಮಾತ್ರ ಅವನನ್ನು ಕಳುಹಿಸಿದನು. 27ಮತ್ತು ಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಾಯೇಲ್ ಜನರೊಳಗೆ ಅನೇಕ ಕುಷ್ಠರೋಗಿಗಳು ಇದ್ದಾಗ್ಯೂ, ಅವರಲ್ಲಿ ಒಬ್ಬನಾದರೂ ಶುದ್ಧನಾಗದೆ ಸಿರಿಯ ದೇಶದವನಾದ ನಾಮಾನನು ಮಾತ್ರ ಶುದ್ಧನಾದನು” ಎಂದು ಹೇಳಿದನು. 28ಸಭಾಮಂದಿರದಲ್ಲಿದ್ದ ಎಲ್ಲರೂ ಈ ಮಾತುಗಳನ್ನು ಕೇಳಿ ಬಹಳವಾಗಿ ಸಿಟ್ಟುಗೊಂಡು, 29ಎದ್ದು ಆತನನ್ನು ಊರಹೊರಕ್ಕೆ ಎಳೆದುಕೊಂಡು, ತಮ್ಮ ಊರು ಕಟ್ಟಲ್ಪಟ್ಟಿದ್ದ ಗುಡ್ಡದ ಅಂಚಿಗೆ ನಡಿಸಿಕೊಂಡು ಹೋಗಿ ಅಲ್ಲಿಂದ ಕೆಳಕ್ಕೆ ದೊಬ್ಬಿಬಿಡಬೇಕೆಂದಿದ್ದರು. 30ಆದರೆ ಆತನು ಅವರ ಮಧ್ಯದಿಂದ ನಡೆದು ತನ್ನ ಪಾಡಿಗೆ ತಾನು ಹೊರಟು ಹೋದನು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು