ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಆಗಸ್ಟ್ 2027 › 9 ಆಗಸ್ಟ್
ಆರ್ಥೊಡಾಕ್ಸ್ ಪಂಚಾಂಗ · ಜುಲೈ 27 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 9 ಆಗಸ್ಟ್ 2027
ಸೋಮವಾರ · ಪಂಚಾಶತ್ತಮದ ನಂತರದ ಎಂಟನೆಯ ವಾರ · ಸ್ವರ 6
ಹಬ್ಬಗಳು ಮತ್ತು ಸಂತರು
Holy Great Martyr and Healer Panteleimon († 305)
ಉಪವಾಸ
ಉಪವಾಸವಿಲ್ಲ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಪತ್ರಿಕೆ
13ದೇವಾಲಯದಲ್ಲಿ ಸೇವೆ ಸಲ್ಲಿಸುವವರು ದೇವಾಲಯದಿಂದ ತಮ್ಮ ಬದುಕನ್ನು ಸಾಗಿಸಬೇಕೆಂದೂ ಮತ್ತು ಯಜ್ಞವೇದಿಯ ಬಳಿ ಸೇವೆಮಾಡುವವರು ಆ ವೇದಿಗೆ ಬರುವ ಪದಾರ್ಥಗಳಲ್ಲಿ ಪಾಲುಹೊಂದುತ್ತಾರೆಂಬುದೂ ನಿಮಗೆ ತಿಳಿಯದೋ? 14ಅದೇ ರೀತಿಯಾಗಿ ಕರ್ತನು ಸಹ ಸುವಾರ್ತೆಯನ್ನು ಸಾರುವವರು ಸುವಾರ್ತೆಯಿಂದಲೇ ತಮ್ಮ ಜೀವನಮಾಡಬೇಕೆಂದು ಆಜ್ಞಾಪಿಸಿದ್ದಾನೆ. 15ನಾನಂತೂ ಇವುಗಳಲ್ಲಿ ಒಂದನ್ನೂ ಪಾಲಿಸಲಿಲ್ಲ. ನನಗೆ ಏನಾದರೂ ಸಿಕ್ಕಬೇಕೆಂಬ ಉದ್ದೇಶದಿಂದ ನಾನು ಇದನ್ನು ಬರೆಯುತ್ತಿಲ್ಲ. ಯಾರಾದರೂ ಈ ಹೊಗಳಿಕೆಯನ್ನು ವ್ಯರ್ಥಮಾಡುವುದಕ್ಕಿಂತ ಸಾಯುವುದೇ ನನಗೆ ಲೇಸು. 16ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಕೊಳ್ಳುವುದಕ್ಕೆ ನನಗೇನೂ ಆಸ್ಪದವಿಲ್ಲ; ಸಾರಲೇ ಬೇಕೆಂಬ ನಿರ್ಬಂಧ ನನ್ನ ಮೇಲಿದೆ, ನಾನು ಸುವಾರ್ತೆಯನ್ನು ಸಾರದಿದ್ದರೆ ನನ್ನ ಗತಿಯನ್ನು ಏನೆಂದು ಹೇಳಲಿ! 17ನಾನು ಸ್ವಂತ ಇಷ್ಟದಿಂದ ಈ ಕೆಲಸವನ್ನು ಮಾಡಿದರೆ ನನಗೆ ಪ್ರತಿಫಲ ದೊರೆಯುವುದು; ಇಲ್ಲದಿದ್ದರೂ ಈ ಕರ್ತವ್ಯ ನನ್ನ ವಶಕ್ಕೆ ಒಪ್ಪಿಸಿಕೊಡಲ್ಪಟ್ಟಿದೆ. 18ಹಾಗಾದರೆ ನನಗೆ ಸಿಗುವ ಬಹುಮಾನವೇನು? ನಾನು ಸುವಾರ್ತೆಯನ್ನು ಸಾರುವಾಗ ಅದರಿಂದ ದೊರೆಯುವ ಪ್ರತಿಫಲವನ್ನು ಪಡೆಯದೇ ಅದನ್ನು ಉಚಿತವಾಗಿ ಸಾರುವುದೇ ನನಗೆ ದೊರೆಯುವ ಪ್ರತಿಫಲವಾಗಿದೆ.
ಪತ್ರಿಕೆ (ಸಂತ ಪಂತೆಲೆಯೆಮೊನ್)
1ನನ್ನ ಮಗನೇ, ನೀನು ಕ್ರಿಸ್ತ ಯೇಸುವಿನಲ್ಲಿರುವ ಕೃಪೆಯಿಂದ ಬಲಹೊಂದಿದವನಾಗು. 2ನೀನು ಅನೇಕ ಸಾಕ್ಷಿಗಳ ಮುಂದೆ ನನ್ನಿಂದ ಕೇಳಿದ ಉಪದೇಶವನ್ನು ಇತರರಿಗೆ ಬೋಧಿಸಲು ಶಕ್ತರಾದ, ನಂಬಿಗಸ್ತರಾದ ಜನರಿಗೆ ಅದನ್ನು ಒಪ್ಪಿಸಿಕೊಡು. 3ಕ್ರಿಸ್ತ ಯೇಸುವಿನ ಒಳ್ಳೆಯ ಸೈನಿಕನಂತೆ ನನ್ನೊಂದಿಗೆ ಕಷ್ಟವನ್ನನುಭವಿಸು. 4ಯುದ್ಧಕ್ಕೆ ಹೋಗುವ ಸೈನಿಕನು ಲೋಕವ್ಯವಹಾರದಲ್ಲಿ ಸಿಕ್ಕಿಕೊಳ್ಳದೆ, ತನ್ನನ್ನು ಸೈನ್ಯದಲ್ಲಿ ಸೇರಿಸಿಕೊಂಡವನನ್ನು ಮೆಚ್ಚಿಸುವುದಕ್ಕಾಗಿ ಪ್ರಯಾಸ ಪಡುತ್ತಿರುವನಲ್ಲವೇ. 5ಇದಲ್ಲದೆ ಯಾವನಾದರೂ ಸ್ಪರ್ಧೆಯಲ್ಲಿ ಎದುರಾಳಿಯೊಡನೆ ಹೋರಾಡುವಾಗ ನಿಯಮದ ಪ್ರಕಾರ ಹೋರಾಡದಿದ್ದರೆ ಅವನಿಗೆ ಜಯಮಾಲೆಯು ದೊರಕುವುದಿಲ್ಲ. 6ವ್ಯವಸಾಯದ ಹುಟ್ಟುವಳಿಯಲ್ಲಿ ಮೊದಲನೆಯ ಪಾಲು ಕಷ್ಟಪಟ್ಟ ಕೃಷಿಕನಿಗೆ ದೊರೆಯುತ್ತದೆ. 7ನಾನು ಹೇಳುವುದನ್ನು ಯೋಚಿಸು. ಕರ್ತನು ಎಲ್ಲಾದರಲ್ಲಿಯೂ ನಿನಗೆ ವಿವೇಕವನ್ನು ದಯಪಾಲಿಸುವನು. 8ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೂ ದಾವೀದನ ವಂಶದವನೂ ಆಗಿರುವ ಯೇಸು ಕ್ರಿಸ್ತನನ್ನು ಜ್ಞಾಪಕಮಾಡಿಕೋ, ಇದೇ ನಾನು ಸಾರುವ ಸುವಾರ್ತೆ. 9ಇದರಲ್ಲಿ ನಾನು ಕಷ್ಟವನ್ನನುಭವಿಸಿ ದುಷ್ಕರ್ಮಿಯಂತೆ ಸಂಕೋಲೆಯಿಂದ ಬಂಧಿಸಲ್ಪಟ್ಟವನಾಗಿದ್ದೇನೆ. ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ. 10ಆದಕಾರಣ ದೇವರು ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ನಿತ್ಯ ಮಹಿಮೆಯ ಸಹಿತವಾಗಿ ಹೊಂದಬೇಕೆಂದು ನಾನು ಅವರಿಗೋಸ್ಕರ ಎಲ್ಲವನ್ನು ತಾಳಿಕೊಳ್ಳುತ್ತೇನೆ.
ಸುವಾರ್ತೆ
1ತರುವಾಯ ಫರಿಸಾಯರು ಸದ್ದುಕಾಯರು ಬಂದು ಯೇಸುವನ್ನು ಪರೀಕ್ಷಿಸುವುದಕ್ಕಾಗಿ, ನೀನು ಪರಲೋಕದಿಂದ ಒಂದು ಸೂಚಕಕಾರ್ಯವನ್ನು ನಮಗೆ ತೋರಿಸಿಕೊಡಬೇಕೆಂದು ಕೇಳಿದರು. 2ಆತನು ಅವರಿಗೆ, “‘ನೀವು ಸಂಜೆಯಾದಾಗ ಆಕಾಶವು ಕೆಂಪಾಗಿದ್ದರೆ ಹಿತಕರವಾದ ವಾತಾವರಣವಿರುತ್ತದೆ’ ಅನ್ನುತ್ತೀರಿ. 3ಬೆಳಗ್ಗೆ, ‘ಆಕಾಶವು ಮೋಡ ಕವಿದುಕೊಂಡು ಕೆಂಪಾಗಿದ್ದರೆ ಈಹೊತ್ತು ಗಾಳಿ ಮಳೆ ಬರುತ್ತದೆ’ ಅನ್ನುತ್ತೀರಿ. ಆಕಾಶದಲ್ಲಿ ಕಾಣುವ ಸೂಚನೆಗಳನ್ನು ತಿಳಿದುಕೊಳ್ಳಬಲ್ಲವರಾಗಿದ್ದೀರಿ, ಆದರೆ ಈ ಕಾಲದ ಸೂಚನೆಗಳನ್ನು ತಿಳಿದುಕೊಳ್ಳಲು ನಿಮಗೆ ಸಾಧ್ಯವಿಲ್ಲವೋ? 4ವ್ಯಭಿಚಾರಿಣಿಯಂತಿರುವ ಈ ದುಷ್ಟ ಸಂತತಿಯು ಸೂಚಕಕಾರ್ಯವನ್ನು ನೋಡಬೇಕೆಂದು ಹುಡುಕುತ್ತದೆ. ಆದರೆ ಯೋನನ ಸೂಚಕಕಾರ್ಯವೇ ಹೊರತು ಬೇರೆ ಯಾವುದೂ ಇದಕ್ಕೆ ಸಿಕ್ಕುವುದಿಲ್ಲ” ಎಂದು ಉತ್ತರ ಕೊಟ್ಟನು. ತರುವಾಯ ಆತನು ಅವರನ್ನು ಬಿಟ್ಟು ಹೊರಟು ಹೋದನು. 5ಶಿಷ್ಯರು ರೊಟ್ಟಿ ಬುತ್ತಿ ತೆಗೆದುಕೊಳ್ಳುವುದನ್ನು ಮರೆತು ಆಚೇ ದಡಕ್ಕೆ ಬಂದಿದ್ದರು. 6ಯೇಸು ಅವರಿಗೆ “ಎಚ್ಚರಿಕೆ! ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ” ಎಂದು ಹೇಳಿದನು.
ಸುವಾರ್ತೆ (ಸಂತ ಪಂತೆಲೆಯೆಮೊನ್)
17ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂತಲೇ ಇವುಗಳನ್ನು ನಾನು ನಿಮಗೆ ಆಜ್ಞಾಪಿಸುತ್ತಿದ್ದೇನೆ. 18“ಲೋಕವು ನಿಮ್ಮನ್ನು ದ್ವೇಷ ಮಾಡುವುದಾದರೆ ಅದು ಮೊದಲು ನನ್ನನ್ನು ದ್ವೇಷ ಮಾಡಿತ್ತೆಂದು ನೀವು ತಿಳಿದುಕೊಳ್ಳಿರಿ. 19ನೀವು ಲೋಕದವರಾಗಿದ್ದರೆ ಲೋಕವು ನಿಮ್ಮನ್ನು ತನ್ನವರೆಂದು ಪ್ರೀತಿಸುತ್ತಿತ್ತು. ನೀವಾದರೋ ಲೋಕದ ಕಡೆಯವರಲ್ಲ, ನಾನು ನಿಮ್ಮನ್ನು ಆರಿಸಿಕೊಂಡಿದ್ದರಿಂದಲೇ ಲೋಕವು ನಿಮ್ಮನ್ನು ದ್ವೇಷ ಮಾಡುತ್ತದೆ. 20ದಣಿಗಿಂತ ಆಳು ದೊಡ್ಡವನಲ್ಲವೆಂಬುದಾಗಿ ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಕ ಮಾಡಿಕೊಳ್ಳಿರಿ. ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು. ಅವರು ನನ್ನ ಮಾತನ್ನು ಕೈಗೊಂಡಿದ್ದರೆ ನಿಮ್ಮ ಮಾತನ್ನು ಸಹ ಕೈಗೊಳ್ಳುತ್ತಿದ್ದರು. 21ಆದರೆ ಅವರು ನನ್ನನ್ನು ಕಳುಹಿಸಿಕೊಟ್ಟಾತನನ್ನು ತಿಳಿಯದವರಾದ್ದರಿಂದ ಇದನ್ನೆಲ್ಲಾ ನನ್ನ ಹೆಸರಿನ ನಿಮಿತ್ತ ನಿಮಗೆ ಮಾಡುವರು. 22ನಾನು ಬಾರದೆ ಮತ್ತು ಅವರ ಸಂಗಡ ಮಾತನಾಡದೆ ಹೋಗಿದ್ದಾರೆ ಅವರಿಗೆ ಪಾಪವು ಇರುತ್ತಿರಲಿಲ್ಲ. ಆದರೆ ಅವರ ಪಾಪಕ್ಕಾಗಿ ಈಗ ಯಾವ ನೆಪವೂ ಇಲ್ಲ. 23ನನ್ನನ್ನು ದ್ವೇಷಿಸುವವನು ನನ್ನ ತಂದೆಯನ್ನು ಸಹ ದ್ವೇಷಿಸುತ್ತಾನೆ. 24ಬೇರೆ ಯಾರೂ ಮಾಡದಿರುವ ಕ್ರಿಯೆಗಳನ್ನು ನಾನು ಅವರ ನಡುವೆ ಮಾಡದೆಹೋಗಿದ್ದರೆ ಅವರಿಗೆ ಪಾಪವು ಇರುತ್ತಿರಲಿಲ್ಲ. ಆದರೆ ಈಗ ಅವರು ನನ್ನ ಅದ್ಭುತಕಾರ್ಯಗಳನ್ನು ನೋಡಿದ್ದಾರೆ, ಆದರೂ ನನ್ನನ್ನೂ ನನ್ನ ತಂದೆಯನ್ನೂ ದ್ವೇಷಿಸಿದ್ದಾರೆ 25‘ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಿಸಿದರು’ ಎಂದು ಅವರ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ನೆರವೇರುವಂತೆ ಹೀಗಾಯಿತು. 26ಆದರೆ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಸಹಾಯಕನು, ಎಂದರೆ, ತಂದೆಯ ಬಳಿಯಿಂದ ಹೊರಡುವ ಸತ್ಯದ ಆತ್ಮನು ಬಂದಾಗ, ಆತನೇ ನನ್ನ ವಿಷಯವಾಗಿ ಸಾಕ್ಷಿ ಕೊಡುವನು. 27ನೀವು ಮೊದಲಿನಿಂದ ನನ್ನ ಸಂಗಡ ಇದ್ದುದರಿಂದ ನೀವೂ ಸಹ ನನಗೆ ಸಾಕ್ಷಿಗಳಾಗಿದ್ದೀರಿ. 16:1“ನೀವು ನಂಬಿಕೆಯಿಂದ ಎಡವಿ ಬಿದ್ದು ಹೋಗಬಾರದೆಂದು ನಾನು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. 2ಅವರು ನಿಮ್ಮನ್ನು ಸಭಾಮಂದಿರದಿಂದ ಹೊರಗೆ ಹಾಕುವರು; ಅದಲ್ಲದೆ ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಬಲಿಕೊಟ್ಟೆನೆಂದು ಭಾವಿಸುವ ಕಾಲವು ಬರಲಿದೆ.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 27 ಜುಲೈ ಎಂದರೆ ನಾಗರಿಕ ಪಂಚಾಂಗದ 9 ಆಗಸ್ಟ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು