ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಆಗಸ್ಟ್ 2027 › 8 ಆಗಸ್ಟ್
ಆರ್ಥೊಡಾಕ್ಸ್ ಪಂಚಾಂಗ · ಜುಲೈ 26 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 8 ಆಗಸ್ಟ್ 2027
ಭಾನುವಾರ · ಸ್ವರ 6
ಹಬ್ಬಗಳು ಮತ್ತು ಸಂತರು
ಪಂಚಾಶತ್ತಮದ ನಂತರದ ಏಳನೆಯ ಭಾನುವಾರ
ಉಪವಾಸ
ಉಪವಾಸವಿಲ್ಲ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಉದಯಕಾಲದ ಏಳನೆಯ ಸುವಾರ್ತೆ
1ವಾರದ ಮೊದಲನೆಯ ದಿನದಲ್ಲಿ ಮಗ್ದಲದ ಮರಿಯಳು ಬೆಳಿಗ್ಗೆ ಇನ್ನೂ ಕತ್ತಲೆ ಇರುವಾಗಲೇ ಸಮಾಧಿಯ ಬಳಿಗೆ ಬಂದು ಸಮಾಧಿಯ ಕಲ್ಲು ಅಲ್ಲಿಂದ ಉರುಳಿ ಹೋಗಿರುವುದನ್ನು ಕಂಡಳು. 2ಆಗ ಆಕೆಯು ಸೀಮೋನ್ ಪೇತ್ರನ ಬಳಿಗೂ ಮತ್ತು ಯೇಸುವಿಗೆ ಪ್ರಿಯನಾಗಿದ್ದ ಇನ್ನೊಬ್ಬ ಶಿಷ್ಯನ ಬಳಿಗೂ ಓಡಿಬಂದು ಅವರಿಗೆ, “ಕರ್ತನನ್ನು ಅವರು ಸಮಾಧಿಯೊಳಗಿಂದ ತೆಗೆದುಕೊಂಡು ಹೋಗಿದ್ದಾರೆ; ಅವರು ಆತನನ್ನು ಎಲ್ಲಿಟ್ಟಿದ್ದಾರೋ ನಮಗೆ ಗೊತ್ತಿಲ್ಲವೆಂದು” ಹೇಳಿದಳು 3ಆಗ ಪೇತ್ರನೂ ಮತ್ತು ಇನ್ನೊಬ್ಬ ಶಿಷ್ಯನೂ ಹೊರಟು ಸಮಾಧಿಯ ಕಡೆಗೆ ಹೋದರು. 4ಅವರಿಬ್ಬರೂ ಜೊತೆಯಾಗಿ ಓಡಿದರು. ಆ ಇನ್ನೊಬ್ಬ ಶಿಷ್ಯನು ಪೇತ್ರನಿಗಿಂತ ವೇಗವಾಗಿ ಓಡಿ ಮೊದಲೇ ಸಮಾಧಿಗೆ ಬಂದನು. 5ಅವನು ಬಗ್ಗಿ ನೋಡಿದಾಗ ನಾರುಬಟ್ಟೆಗಳು ಬಿದ್ದಿರುವುದನ್ನು ಕಂಡನು. ಆದರೂ ಅವನು ಒಳಗೆ ಹೋಗಲಿಲ್ಲ. 6ಸೀಮೋನ್ ಪೇತ್ರನು ಅವನ ಹಿಂದೆ ಬಂದು ಸಮಾಧಿಯೊಳಕ್ಕೆ ಹೋಗಿ, ಆ ನಾರುಬಟ್ಟೆಗಳು ಬಿದ್ದಿರುವುದನ್ನೂ 7ಆತನ ತಲೆಯ ಮೇಲಿದ್ದ ಕೈವಸ್ತ್ರವು, ಆ ನಾರು ಬಟ್ಟೆಗಳೊಂದಿಗೆ ಇರದೇ, ಸುತ್ತಿ ಒಂದು ಕಡೆಯಲ್ಲಿ ಪ್ರತ್ಯೇಕವಾಗಿ ಇಟ್ಟಿರುವುದನ್ನು ನೋಡಿದನು. 8ಆಗ ಸಮಾಧಿಯ ಬಳಿಗೆ ಮೊದಲು ಬಂದಿದ್ದ ಆ ಮತ್ತೊಬ್ಬ ಶಿಷ್ಯನು ಸಹ ಒಳಗೆ ಹೋಗಿ ಬಗ್ಗಿ ನೋಡಿ ನಂಬಿದನು. 9ಆತನು ಸತ್ತ ಮೇಲೆ ಜೀವದಿಂದೆದ್ದು ಬರಬೇಕೆಂಬುದಾಗಿ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ಅವರಿಗೆ ಇನ್ನೂ ತಿಳಿದಿರಲಿಲ್ಲ. 10ತರುವಾಯ ಆ ಶಿಷ್ಯರು ಪುನಃ ತಮ್ಮ ಮನೆಗೆ ಹೋದರು.
ಪತ್ರಿಕೆ
1ದೃಢವಾದ ನಂಬಿಕೆಯುಳ್ಳವರಾದ ನಾವು ಬಲಹೀನರಾದವರ ಭಾರಗಳನ್ನು ಹೊರುವುದಲ್ಲದೆ ಅದರಲ್ಲಿ ನಮ್ಮನ್ನು ನಾವೇ ಹೊಗಳಿಕೊಳ್ಳಬಾರದು. 2ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹಿತವನ್ನೂ, ಭಕ್ತಿವೃದ್ಧಿಯನ್ನೂ ಅಪೇಕ್ಷಿಸುವವನಾಗಿ ಅವನನ್ನು ಮೆಚ್ಚಿಸಬೇಕು. 3ಯಾಕೆಂದರೆ ಕ್ರಿಸ್ತನು ಸಹ ತನ್ನ ಹಿತಕ್ಕಾಗಿ ಚಿಂತಿಸಲಿಲ್ಲ. “ದೇವರೇ ನಿನ್ನನ್ನು ದೂಷಿಸಿದವರ ದೂಷಣೆಗಳು ನನ್ನ ಮೇಲೂ ಬಂದವು” ಎಂದು ಬರೆದಿದೆಯಲ್ಲಾ. 4ಈ ಮೊದಲು ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವುದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ, ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಶಾಸ್ತ್ರಗಳು ಬರೆಯಲ್ಪಟ್ಟವು. 5ಆ ಸ್ಥಿರಚಿತ್ತವನ್ನೂ, ಆದರಣೆಯನ್ನೂ ಕೊಡುವ ದೇವರು ನೀವು ಕ್ರಿಸ್ತ ಯೇಸುವನ್ನು ಅನುಸರಿಸಿ ಒಂದೇ ಮನಸ್ಸುಳ್ಳವರಾಗಿರುವಂತೆ ನಿಮ್ಮನ್ನು ಆಶೀರ್ವದಿಸಲಿ. 6ಹೀಗೆ ನೀವು ಏಕಮನಸ್ಸಿನಿಂದ ಒಕ್ಕೊರಳಿನಿಂದ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾದ ದೇವರನ್ನು ಕೊಂಡಾಡುವಿರಿ. 7ಆದ್ದರಿಂದ ಕ್ರಿಸ್ತನು ನಿಮ್ಮನ್ನು ಸೇರಿಸಿಕೊಂಡಂತೆ ನೀವು ಸಹ ಒಬ್ಬರನ್ನೊಬ್ಬರು ಸೇರಿಸಿಕೊಂಡು ದೇವರನ್ನು ಮಹಿಮೆಪಡಿಸಿರಿ.
ಸುವಾರ್ತೆ
27ಯೇಸು ಅಲ್ಲಿಂದ ಹಾದುಹೋಗುತ್ತಿರುವಾಗ ಇಬ್ಬರು ಕುರುಡರು, “ದಾವೀದ ಕುಮಾರನೇ, ನಮ್ಮನ್ನು ಕರುಣಿಸು” ಎಂದು ಕೂಗುತ್ತಾ ಆತನನ್ನು ಹಿಂಬಾಲಿಸಿದರು. 28ಯೇಸು ಮನೆಗೆ ಬಂದಾಗ ಆ ಕುರುಡರು ಆತನ ಬಳಿಗೆ ಬಂದರು. ಯೇಸು ಅವರನ್ನು, “ನಾನು ಇದನ್ನು ಮಾಡಬಲ್ಲೆನೆಂಬುದನ್ನು ನೀವು ನಂಬುತ್ತೀರೋ” ಎಂದು ಕೇಳಿದ್ದಕ್ಕೆ, ಅವರು “ಹೌದು, ಕರ್ತನೇ, ನಂಬುತ್ತೇವೆ” ಅಂದರು. 29ಆಗ ಆತನು ಅವರ ಕಣ್ಣುಗಳನ್ನು ಮುಟ್ಟಿ, “ನಿಮ್ಮ ನಂಬಿಕೆಯಂತೆ ನಿಮಗೆ ಆಗಲಿ” ಅಂದನು. ಆಗ ಅವರ ಕಣ್ಣುಗಳು ತೆರೆಯಲ್ಪಟ್ಟವು. 30ನಂತರ ಯೇಸು ಅವರಿಗೆ, “ಇದು ಯಾರಿಗೂ ತಿಳಿಯದಂತೆ ನೋಡಿಕೊಳ್ಳಿರಿ” ಎಂದು ಕಟ್ಟುನಿಟ್ಟಾಗಿ ಆದೇಶಿಸಿದನು. 31ಆದರೆ ಅವರು ಹೊರಟುಹೋಗಿ ಆ ದೇಶದೊಳಗೆಲ್ಲಾ ಆತನ ಸುದ್ದಿಯನ್ನು ಹಬ್ಬಿಸಿದರು. 32ಅವರು ಹೊರಟುಹೋಗುತ್ತಿರುವಾಗ ದೆವ್ವಹಿಡಿದ ಒಬ್ಬ ಮೂಕನನ್ನು ಯೇಸುವಿನ ಬಳಿಗೆ ಕರೆತಂದರು. 33ದೆವ್ವ ಬಿಡಿಸಿದ ಮೇಲೆ ಮೂಕನಾಗಿದ್ದ ಅವನು ಮಾತನಾಡುವವನಾದನು. ಅದಕ್ಕೆ ಜನರು, “ಇಸ್ರಾಯೇಲಿನಲ್ಲಿ ಇಂಥ ಕಾರ್ಯವನ್ನು ಇದುವರೆಗೂ ಯಾರೂ ನೋಡಲಿಲ್ಲವೆಂದು” ಆಶ್ಚರ್ಯಚಕಿತರಾದರು. 34ಆದರೆ ಫರಿಸಾಯರು, “ಇವನು ದೆವ್ವಗಳ ಒಡೆಯನ ಸಹಾಯದಿಂದಲೇ ದೆವ್ವಗಳನ್ನು ಬಿಡಿಸುತ್ತಾನೆ” ಎಂದು ಹೇಳಿದರು. 35ತರುವಾಯ ಯೇಸು ಎಲ್ಲಾ ಪಟ್ಟಣಗಳಲ್ಲೂ ಹಳ್ಳಿಗಳಲ್ಲೂ ಸಂಚರಿಸುತ್ತಾ ಅವರ ಸಭಾಮಂದಿರಗಳಲ್ಲಿ ಉಪದೇಶಮಾಡುತ್ತಾ ರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 26 ಜುಲೈ ಎಂದರೆ ನಾಗರಿಕ ಪಂಚಾಂಗದ 8 ಆಗಸ್ಟ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು