ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಆಗಸ್ಟ್ 2027 › 4 ಆಗಸ್ಟ್
ಆರ್ಥೊಡಾಕ್ಸ್ ಪಂಚಾಂಗ · ಜುಲೈ 22 (ಹಳೆಯ ಪದ್ಧತಿ)
ಆರ್ಥೊಡಾಕ್ಸ್ ದೈನಂದಿನ ವಾಚನಗಳು — 4 ಆಗಸ್ಟ್ 2027
ಬುಧವಾರ · ಪಂಚಾಶತ್ತಮದ ನಂತರದ ಏಳನೆಯ ವಾರ · ಸ್ವರ 5
ಹಬ್ಬಗಳು ಮತ್ತು ಸಂತರು
Holy Myrrhbearer and Equal-to-the-Apostles Mary Magdalene (1st C)
ಉಪವಾಸದ ದಿನ
ಉಪವಾಸ: ಎಣ್ಣೆಯೊಂದಿಗೆ
ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.
ದಿನದ ವಾಚನಗಳು
ಪತ್ರಿಕೆ
12ಮಿಕ್ಕಾದವರ ವಿಷಯದಲ್ಲಿ ಕರ್ತನ ಮಾತಲ್ಲ ಆದರೆ ನಾನು ಹೇಳುವುದೇನಂದರೆ, ಒಬ್ಬ ಸಹೋದರನಿಗೆ ಕ್ರಿಸ್ತ ನಂಬಿಕೆಯಿಲ್ಲದ ಹೆಂಡತಿಯಿರಲಾಗಿ ಆಕೆ ಅವನೊಂದಿಗೆ ಸಂಸಾರ ಮಾಡುವುದಕ್ಕೆ ಸಮ್ಮತಿಸಿದರೆ ಅವನು ಆಕೆಯನ್ನು ಬಿಡಬಾರದು. 13ಹಾಗೆಯೇ ಒಬ್ಬ ಸ್ತ್ರೀಗೆ ಕ್ರಿಸ್ತ ನಂಬಿಕೆಯಿಲ್ಲದ ಗಂಡನಿರಲಾಗಿ ಅವನು ಆಕೆಯೊಂದಿಗೆ ಸಂಸಾರ ಮಾಡುವುದಕ್ಕೆ ಸಮ್ಮತಿಸಿದರೆ ಆಕೆಯು ಅವನನ್ನು ಬಿಡಬಾರದು. 14ಯಾಕೆಂದರೆ ಕ್ರಿಸ್ತ ನಂಬಿಕೆಯಿಲ್ಲದ ಗಂಡನು ತನ್ನ ಹೆಂಡತಿಯ ನಿಮಿತ್ತ ಪವಿತ್ರನಾದನು ಮತ್ತು ಕ್ರಿಸ್ತ ನಂಬಿಕೆಯಿಲ್ಲದ ಹೆಂಡತಿಯು ತನ್ನ ಗಂಡನ ನಿಮಿತ್ತ ಪವಿತ್ರಳಾದಳು. ಹಾಗಲ್ಲದಿದ್ದರೆ ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು. ಈಗಲಾದರೋ ಅವರು ಪವಿತ್ರರೇ ಆಗಿದ್ದಾರೆ. 15ಆದರೆ ಕ್ರಿಸ್ತ ನಂಬಿಕೆಯಿಲ್ಲದ ಸಂಗಾತಿಯು ಅಗಲಬೇಕೆಂದಿದ್ದರೆ ಅಗಲಿಹೋಗಲಿ ಇಂಥಾ ಸಂದರ್ಭಗಳಲ್ಲಿ ಕ್ರೈಸ್ತ ಸಹೋದರನಾಗಲಿ ಅಥವಾ ಸಹೋದರಿಯಾಗಲಿ ಬದ್ಧರಲ್ಲ. ಸಮಾಧಾನದಲ್ಲಿರಬೇಕೆಂದು ದೇವರು ನಮ್ಮನ್ನು ಕರೆದಿದ್ದಾನೆ. 16ಸ್ತ್ರೀಯೇ, ನೀನು ನಿನ್ನ ಗಂಡನನ್ನು ರಕ್ಷಿಸುವಿಯೆಂದು ನಿನಗೆ ಹೇಗೆ ಗೊತ್ತು? ಪುರುಷನೇ, ನೀನು ನಿನ್ನ ಹೆಂಡತಿಯನ್ನು ರಕ್ಷಿಸುವಿಯೆಂದು ನಿನಗೆ ಹೇಗೆ ಗೊತ್ತು? 17ಆದರೆ ಕರ್ತನು ಪ್ರತಿಯೊಬ್ಬನಿಗೆ ನೇಮಿಸಿರುವ ಜವಾಬ್ದಾರಿಗೂ ಹಾಗೂ ದೇವರು ಅವರನ್ನು ಯಾವುದಕ್ಕೆ ಕರೆದನೋ ಅದಕ್ಕೂ ಸರಿಯಾಗಿ ಜೀವಿಸಲಿ. ಹೀಗೆ ಎಲ್ಲಾ ಸಭೆಗಳಲ್ಲಿಯೂ ಅನುಸರಿಸಿಬೇಕೆಂದು ನಾನು ಅಜ್ಞಾಪಿಸುತ್ತೇನೆ. 18ದೇವರು ಕರೆದ ಕಾಲದಲ್ಲಿ ಯಾವನಾದರೂ ಸುನ್ನತಿಯುಳ್ಳವನಾಗಿದ್ದನೋ ಅವನು ಸುನ್ನತಿಯಿಲ್ಲದವನಂತಾಗಬಾರದು. ದೇವರು ಕರೆದಾಗ ಯಾವನಾದರೂ ಸುನ್ನತಿಯಿಲ್ಲದವನಾಗಿದ್ದಾನೋ ಅವನು ಸುನ್ನತಿಮಾಡಿಸಿಕೊಳ್ಳಬಾರದು. 19ಸುನ್ನತಿ ಇರುವುದೋ ಸುನ್ನತಿ ಇಲ್ಲದಿರುವುದೋ ಪ್ರಾಮುಖ್ಯವಲ್ಲ. ದೇವರ ಆಜ್ಞೆಗಳನ್ನು ಅನುಸರಿಸಿ ನಡೆಯುವುದೇ ಮುಖ್ಯವಾಗಿದೆ. 20ದೇವರು ಕರೆದಾಗ ಪ್ರತಿಯೊಬ್ಬನು ಯಾವ ಸ್ಥಿತಿಯಲ್ಲಿದ್ದನೋ ಆ ಸ್ಥಿತಿಯಲ್ಲಿಯೇ ಇರಬೇಕು. 21ದೇವರು ಕರೆದಾಗ ನೀನು ಮತ್ತೊಬ್ಬನ ದಾಸನಾಗಿದ್ದೀಯೋ? ಅದರ ಕುರಿತು ಚಿಂತಿಸಬೇಡ ಆದರೆ ಬಿಡುಗಡೆ ಹೊಂದುವುದಕ್ಕೆ ಸಾಧ್ಯವಾಗುವುದಾದರೆ ನೀನು ಸ್ವತಂತ್ರನಾಗು. 22ಯಾವನಾದರೂ ದಾಸನಾಗಿದ್ದು ಕರ್ತನಿಂದ ಕರೆಯಲ್ಪಟ್ಟಿರುವನೋ ಅವನು ಕರ್ತನ ಮೂಲಕ ಬಿಡುಗಡೆ ಹೊಂದಿರುವ ಸ್ವತಂತ್ರನಾಗಿದ್ದಾನೆ. ಅದೇ ಪ್ರಕಾರ ಯಾವನು ಸ್ವತಂತ್ರನಾಗಿದ್ದಾಗ ಕರೆಯಲ್ಪಟ್ಟಿರುವನೋ ಅವನು ಕ್ರಿಸ್ತನಿಗೆ ದಾಸನು. 23ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು. ಮನುಷ್ಯರಿಗೆ ದಾಸರಾಗಬೇಡಿರಿ. 24ಸಹೋದರರೇ, ಪ್ರತಿಯೊಬ್ಬನು ಕರೆಯಲ್ಪಟ್ಟಾಗ ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ದೇವರ ಮುಂದೆ ನೆಲೆಗೊಂಡಿರಲಿ.
ಪತ್ರಿಕೆ (ಸಂತ ಮಗ್ದಲದ ಮರಿಯ)
2ಇತರರಿಗೆ ನಾನು ಅಪೊಸ್ತಲನಲ್ಲದಿದ್ದರೂ ನಿಮಗಾದರೋ ಅಪೊಸ್ತಲನಾಗಿದ್ದೇನೆ. ನಾನು ಕರ್ತನ ಅಪೊಸ್ತಲನಾಗಿದ್ದೇನೆಂಬುದಕ್ಕೆ ನೀವೇ ನನ್ನ ಮುದ್ರೆಯಾಗಿದ್ದಿರಿ. 3ನನ್ನನ್ನು ವಿಮರ್ಶಿಸುವವರಿಗೆ ನನ್ನ ಪ್ರತ್ಯುತ್ತರವೇನೆಂದರೆ, 4ಅನ್ನ, ಪಾನಗಳಿಗೆ ನಮಗೆ ಹಕ್ಕಿಲ್ಲವೇ? 5ಕ್ರೈಸ್ತವಿಶ್ವಾಸಿಯಾದ ಹೆಂಡತಿಯನ್ನು ಕರೆದುಕೊಂಡು ಸಂಚರಿಸುವುದಕ್ಕೆ ಮಿಕ್ಕಾದ ಅಪೊಸ್ತಲರಂತೆಯೂ, ಕರ್ತನ ಸಹೋದರರಂತೆಯ, ಮತ್ತು ಕೇಫನಂತೆಯೂ ನಮಗೆ ಹಕ್ಕಿಲ್ಲವೇ? 6ಅಥವಾ, ದುಡಿಯದೆ ಜೀವಿಸುವುದಕ್ಕೆ ನನಗೂ ಬಾರ್ನಬನಿಗೂ ಹಕ್ಕಿಲ್ಲವೇ? 7ಯಾವ ಸಿಪಾಯಿಯಾದರೂ ಸ್ವಂತ ಖರ್ಚಿನಿಂದ ಸೇವೆ ಮಾಡುವುದುಂಟೋ? ದ್ರಾಕ್ಷಾತೋಟವನ್ನು ಮಾಡಿದವನು ಅದರ ಫಲವನ್ನು ತಿನ್ನದೇ ಇರುವುದುಂಟೋ? ತನ್ನ ಹಿಂಡನ್ನು ಸಾಕುವವನು ಅವುಗಳ ಹಾಲನ್ನು ಕುಡಿಯದೆ ಜೀವಿಸುವುದುಂಟೋ? 8ನಾನು ಹೇಳಿದ್ದು ಬರೀ ಲೋಕವಾಡಿಕೆಯ ಮಾತೋ? ಧರ್ಮಶಾಸ್ತ್ರವೂ ಇದನ್ನು ಹೇಳುವುದಿಲ್ಲವೋ? 9“ಕಣತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದೆಂದು” ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿದೆ. ದೇವರು ಚಿಂತಿಸುವುದು ಎತ್ತುಗಳಿಗಾಗಿಯೋ? 10ಖಂಡಿತವಾಗಿ ನಮಗೋಸ್ಕರವಾಗಿಯೇ ಆತನು ಹೇಳುತ್ತಾನಲ್ಲವೇ? ಹೌದು, ನಮಗೋಸ್ಕರ ಬರೆಯಲ್ಪಟ್ಟಿದೆ. ಉಳುವವನು ಬೆಳೆಯಲ್ಲಿ ತನಗೆ ಪಾಲು ದೊರಕುವ ನಿರೀಕ್ಷೆಯಿಂದ ಉಳಬೇಕು, ಹಾಗೂ ಒಕ್ಕುವವನು ತನಗೆ ಸುಗ್ಗಿಯಲ್ಲಿ ಪಾಲು ದೊರಕುವುದೆಂದು ನಿರೀಕ್ಷೆಯಲ್ಲಿ ಒಕ್ಕಬೇಕು. 11ನಾವು ನಿಮ್ಮಲ್ಲಿ ಆತ್ಮೀಕವಾದ ಬೀಜವನ್ನು ಬಿತ್ತಿದ ಮೇಲೆ ನಿಮ್ಮಿಂದ ಭೌತಿಕವಾದ ಪೈರನ್ನು ಕೊಯ್ಯುವುದು ದೊಡ್ಡ ವಿಷಯವೋ? 12ಈ ಅಧಿಕಾರ ಇತರರಿಗೆ ನಿಮ್ಮ ಮೇಲೆ ಇದ್ದರೆ ನಮಗೆ ಎಷ್ಟೋ ಹೆಚ್ಚಾಗಿ ಇರಬೇಕಲ್ಲಾ? ಆದರೂ ನಾವು ಆ ಅಧಿಕಾರವನ್ನು ಚಲಾಯಿಸಲಿಲ್ಲ, ಕ್ರಿಸ್ತನ ಸುವಾರ್ತೆಗೆ ಅಡ್ಡಿಮಾಡಬಾರದೆಂದು ಎಲ್ಲವನ್ನು ಸಹಿಸಿಕೊಂಡೆವು.
ಸುವಾರ್ತೆ
35ಆ ಸ್ಥಳದ ಜನರು ಆತನ ಗುರುತನ್ನು ಹಿಡಿದು ಆ ಸುತ್ತಲಿನ ಸೀಮೆಗೆಲ್ಲಾ ಹೇಳಿ ಕಳುಹಿಸಿದರು ಮತ್ತು ಅವರು ಅಸ್ವಸ್ಥರಾದವರೆಲ್ಲರನ್ನು ಆತನ ಬಳಿಗೆ ಕರೆತಂದರು. 36ಅವರು ಆತನನ್ನು ನಿನ್ನ ಉಡುಪಿನ ಅಂಚನ್ನಾದರೂ ಮುಟ್ಟಗೊಡಿಸಬೇಕೆಂದು ಬೇಡಿಕೊಂಡರು, ಮತ್ತು ಮುಟ್ಟಿದವರೆಲ್ಲರು ಸ್ವಸ್ಥರಾದರು. 15:1ತರುವಾಯ ಯೆರೂಸಲೇಮಿನಿಂದ ಫರಿಸಾಯರೂ, ಶಾಸ್ತ್ರಿಗಳೂ ಯೇಸುವಿನ ಬಳಿಗೆ ಬಂದು, 2“ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯವನ್ನು ಏಕೆ ಉಲ್ಲಂಘಿಸುತ್ತಾರೆ? ಅವರು ತಿನ್ನುವಾಗ ತಮ್ಮ ಕೈ ತೊಳೆದುಕೊಳ್ಳುವುದಿಲ್ಲ” ಎಂದು ಕೇಳಿದರು. 3ಅದಕ್ಕೆ ಆತನು ಅವರಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನೆಂದರೆ, “ನೀವು ಸಹ ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ದೇವರ ಆಜ್ಞೆಯನ್ನು ಏಕೆ ಉಲ್ಲಂಘಿಸುತ್ತೀರಿ? 4ಹೇಗೆಂದರೆ ‘ತಂದೆತಾಯಿಗಳನ್ನು ಸನ್ಮಾನಿಸಬೇಕೆಂತಲೂ ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನು ಸಾಯಲೇಬೇಕೆಂತಲೂ’ ದೇವರು ಹೇಳಿದ್ದಾನೆ. 5ನೀವೋ, ‘ಯಾವನಾದರೂ ತನ್ನ ತಂದೆಯನಾಗಲಿ, ತಾಯಿಯನ್ನಾಗಲಿ, ನೋಡಿ ನಾನು ನಿಮ್ಮ ಸಂರಕ್ಷಣೆಗಾಗಿ ಕೊಡತಕ್ಕದ್ದನ್ನು ದೇವರಿಗೆ ಮುಡಿಪುಮಾಡಿದ್ದೇನೆ’ ಎಂದು ಹೇಳಿದರೆ, 6ಅವನು ‘ತನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕಾಗಿಲ್ಲ’ ಅನ್ನುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ಸಲುವಾಗಿ ದೇವರ ವಾಕ್ಯವನ್ನು ನಿರರ್ಥಕ ಮಾಡಿದ್ದೀರಿ. 7ಕಪಟಿಗಳೇ, ನಿಮ್ಮ ಕುರಿತು ಯೆಶಾಯನು ಸರಿಯಾಗಿ ಪ್ರವಾದಿಸಿ, ಅವನು ಹೇಳಿರುವುದೇನೆಂದರೆ, 8“ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ. 9ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರು ಉಪದೇಶವಾಗಿ ಬೋಧಿಸುತ್ತಿರುವುದರಿಂದ ನನ್ನನ್ನು ವ್ಯರ್ಥವಾಗಿ ಆರಾಧಿಸುವರು” ಎಂಬುದೇ. 10ಆ ಮೇಲೆ ಯೇಸು ಜನರ ಗುಂಪನ್ನು ಹತ್ತಿರಕ್ಕೆ ಕರೆದು ಅವರಿಗೆ, “ಕೇಳಿ ತಿಳಿದುಕೊಳ್ಳಿರಿ, 11ಬಾಯೊಳಕ್ಕೆ ಹೋಗುವಂಥದ್ದು ಮನುಷ್ಯನನ್ನು ಅಶುದ್ಧಿಗೊಳಿಸುವುದಿಲ್ಲ. ಬಾಯೊಳಗಿಂದ ಹೊರಗೆ ಬರುವಂಥ ಮಾತು ಮನುಷ್ಯನನ್ನು ಅಶುದ್ಧಗೊಳಿಸುವುದು” ಎಂದು ಹೇಳಿದನು.
ಸುವಾರ್ತೆ (ಸಂತ ಮಗ್ದಲದ ಮರಿಯ)
1ತರುವಾಯ ಯೇಸು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಊರುಗಳಲ್ಲಿಯೂ ಗ್ರಾಮಗಳಲ್ಲಿಯೂ ಸಂಚರಿಸಿದನು. ಆತನ ಸಂಗಡ ಹನ್ನೆರಡು ಮಂದಿ ಶಿಷ್ಯರೂ, 2ದೆವ್ವಗಳ ಕಾಟದಿಂದಲೂ ರೋಗಗಳಿಂದಲೂ ಗುಣಹೊಂದಿದ ಕೆಲವು ಮಂದಿ ಹೆಂಗಸರು ಸಹ ಇದ್ದರು. ಈ ಹೆಂಗಸರು ಯಾರಾರೆಂದರೆ, ಏಳು ದುರಾತ್ಮಗಳಿಂದ ಬಿಡುಗಡೆ ಹೊಂದಿದ್ದ ಮಗ್ದಲದ ಮರಿಯಳು, 3ಹೆರೋದನ ಮನೆಯ ಮೇಲ್ವಿಚಾರಕನಾಗಿದ್ದ ಕೂಜನ ಹೆಂಡತಿ ಯೋಹಾನಳು, ಸುಸನ್ನಳು, ಇನ್ನು ಬೇರೆ ಅನೇಕರು. ಇವರು ತಮ್ಮ ಸ್ವಂತ ಆಸ್ತಿಯಿಂದ ಅವರಿಗೆ ಉಪಚಾರಮಾಡುತ್ತಿದ್ದರು.
ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 22 ಜುಲೈ ಎಂದರೆ ನಾಗರಿಕ ಪಂಚಾಂಗದ 4 ಆಗಸ್ಟ್. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು