ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಆಗಸ್ಟ್ 2027 › 3 ಆಗಸ್ಟ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 3 ಆಗಸ್ಟ್ 2027
ಮಂಗಳವಾರ · ಸಾಮಾನ್ಯ ಕಾಲದ 18ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 18ನೇ ವಾರದ ಮಂಗಳವಾರ
ವಾರದ ದಿನ · ಆರಾಧನಾ ಬಣ್ಣ: ಹಸಿರು
ದಿನದ ವಾಚನಗಳು
ಮೊದಲನೆಯ ವಾಚನ
1ಮೋಶೆ ಕೂಷ್ ದೇಶದ ಸ್ತ್ರೀಯನ್ನು ಮದುವೆ ಮಾಡಿಕೊಂಡಿದ್ದನು. ಆ ಕಾರಣಕ್ಕಾಗಿ ಮಿರ್ಯಾಮಳೂ ಹಾಗೂ ಆರೋನನೂ ಅವನಿಗೆ ವಿರುದ್ಧವಾಗಿ ಮಾತನಾಡಿದರು. 2ಅವರು, “ಯೆಹೋವನು ಮೋಶೆಯ ಮೂಲಕವಾಗಿ ಮಾತ್ರವೇ ಮಾತನಾಡುತ್ತಾನೋ? ನಮ್ಮ ಮೂಲಕ ಆತನು ಮಾತನಾಡುವುದಿಲ್ಲವೇ?” ಎಂದು ಹೇಳಿಕೊಂಡರು. ಅವರು ಆಡಿದ ಮಾತು ಯೆಹೋವನಿಗೆ ಕೇಳಿಸಿತು. 3ಮೋಶೆಯು ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹು ಸಾತ್ವಿಕನು. 4ಹೀಗಿರಲಾಗಿ ಅವರು ಆಡಿದ ಮಾತನ್ನು ಯೆಹೋವನು ಕೇಳಿ ಫಕ್ಕನೆ ಮೋಶೆ, ಆರೋನ್ ಮತ್ತು ಮಿರ್ಯಾಮರಿಗೆ, “ನೀವು ಮೂರು ಮಂದಿಯೂ ದೇವದರ್ಶನದ ಗುಡಾರಕ್ಕೆ ಬರಬೇಕು” ಎಂದು ಆಜ್ಞಾಪಿಸಿದನು. ಆಗ ಆ ಮೂವರು ಹೊರಗೆ ಬಂದರು. 5ಯೆಹೋವನು ಮೇಘಸ್ತಂಭದೊಳಗೆ ಇಳಿದು ಬಂದು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ನಿಂತು ಆರೋನನ್ನು ಮತ್ತು ಮಿರ್ಯಾಮಳನ್ನು ಹತ್ತಿರಕ್ಕೆ ಕರೆದನು. ಅವರು ಮುಂದೆ ಬಂದರು. 6ಯೆಹೋವನು ಅವರಿಗೆ, “ನನ್ನ ಮಾತನ್ನು ಕೇಳಿರಿ. ನಿಮ್ಮಲ್ಲಿ ಪ್ರವಾದಿಯಿದ್ದರೆ ನಾನು ಅವನಿಗೆ ಜ್ಞಾನದೃಷ್ಟಿಯಲ್ಲಿ ಪ್ರಕಟಿಸುವೆನು, ಮತ್ತು ಕನಸಿನಲ್ಲಿ ಅವನ ಸಂಗಡ ಮಾತನಾಡುವೆನು. 7ನನ್ನ ಸೇವಕನಾದ ಮೋಶೆಯು ಅಂಥವನಲ್ಲ. ಅವನು ನನ್ನ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದಾನೆ. 8ನಾನು ಅವನ ಸಂಗಡ ಗುಪ್ತವಾಗಿ ಅಲ್ಲ, ಮುಖಾಮುಖಿಯಾಗಿ ಅಂದರೆ ಪ್ರತ್ಯಕ್ಷವಾಗಿ ಅವನ ಸಂಗಡ ಮಾತನಾಡುತ್ತೇನೆ. ಅವನು ಯೆಹೋವನ ಸ್ವರೂಪವನ್ನೇ ದೃಷ್ಟಿಸುವನು. ಹೀಗಿರಲು ನೀವು ನನ್ನ ಸೇವಕನಾದ ಮೋಶೆಗೆ ವಿರುದ್ಧವಾಗಿ ಮಾತನಾಡುವುದಕ್ಕೆ ಏಕೆ ಭಯಪಡಲಿಲ್ಲ?” ಎಂದನು. 9ನಂತರ ಯೆಹೋವನು ಅವರ ಮೇಲೆ ಕೋಪಗೊಂಡು ಹೊರಟುಹೋದನು. 10ಆ ಮೇಘವು ದೇವದರ್ಶನದ ಗುಡಾರದ ಮೇಲಿನಿಂದ ಬಿಟ್ಟುಹೋಯಿತು. ಪಕ್ಕನೆ ಮಿರ್ಯಾಮಳಿಗೆ ತೊನ್ನು ಹತ್ತಿದ್ದರಿಂದ ಆಕೆಯ ಚರ್ಮ ಹಿಮದಂತೆ ಬೆಳ್ಳಗಾಗಿ ಹೋಯಿತು. ಆರೋನನು ಮಿರ್ಯಾಮಳನ್ನು ನೋಡಿದಾಗ ಆಕೆಗೆ ತೊನ್ನು ಹಿಡಿದಿದೆ ಎಂದು ತಿಳಿದುಕೊಂಡನು. 11ಆಗ ಆರೋನನು ಮೋಶೆಗೆ, “ನನ್ನ ಒಡೆಯನೇ, ನಾವು ವಿವೇಕವಿಲ್ಲದೆ ನಡೆದು ದೋಷಿಗಳಾದೆವು. ಈ ದೋಷದ ಫಲವನ್ನು ನಾವು ಅನುಭವಿಸುವಂತೆ ಮಾಡಬೇಡ ಎಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. 12ಅರ್ಧ ಮಾಂಸ ಕೊಳೆತುಹೋಗಿ ಹುಟ್ಟಿದ ಶಿಶುವಿನಂತೆ ಈಕೆ ಆಗಬಾರದು” ಎಂದು ಬೇಡಿದನು. 13ಆಗ ಮೋಶೆ ಯೆಹೋವನಿಗೆ, “ದೇವಾ, ಆಕೆಯನ್ನು ವಾಸಿಮಾಡಬೇಕೆಂದು ಬೇಡುತ್ತೇನೆ” ಎಂದು ಮೊರೆಯಿಟ್ಟನು.
ಪ್ರತಿವಚನ ಕೀರ್ತನೆ
1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನು ಬತ್ಷೆಬಳ ಬಳಿಗೆ ಹೋದ ಮೇಲೆ ಪ್ರವಾದಿಯಾದ ನಾತಾನನು ಎಚ್ಚರಿಸಿದಾಗ ರಚಿಸಿದ ಕೀರ್ತನೆ. ಪ್ರೀತಿಸ್ವರೂಪನಾದ ದೇವರೇ, ನನ್ನನ್ನು ಕರುಣಿಸು; ಕರುಣಾನಿಧಿಯೇ, ನನ್ನ ದ್ರೋಹವನ್ನೆಲ್ಲಾ ಅಳಿಸಿಬಿಡು. 2ನನ್ನ ಪಾಪವನ್ನು ಸಂಪೂರ್ಣವಾಗಿ ತೊಳೆದುಬಿಡು; ನನ್ನ ದೋಷವನ್ನು ಪರಿಹರಿಸಿ, ನನ್ನನ್ನು ಶುದ್ಧಿಗೊಳಿಸು. 3ನಾನು ದ್ರೋಹಿ ಎಂದು ನಾನೇ ಒಪ್ಪಿಕೊಂಡಿದ್ದೇನೆ; ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ. 4ನಿನಗೇ, ಕೇವಲ ನಿನಗೇ ತಪ್ಪುಮಾಡಿದ್ದೇನೆ; ನಿನ್ನ ದೃಷ್ಟಿಗೆ ಕೆಟ್ಟದ್ದಾಗಿರುವುದನ್ನೇ ಮಾಡಿದ್ದೇನೆ. ನಿನ್ನ ನಿರ್ಣಯ ನ್ಯಾಯವಾಗಿಯೂ, ನಿನ್ನ ತೀರ್ಪು ನಿಷ್ಕಳಂಕವಾಗಿಯೂ ಇರುತ್ತದೆ. 10ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನಪಡಿಸು. 11ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಬೇಡ; ನಿನ್ನ ಪರಿಶುದ್ಧಾತ್ಮವನ್ನು ನನ್ನಿಂದ ತೆಗೆಯಬೇಡ.
ಸುವಾರ್ತೆ
22ಇದಾದ ಕೂಡಲೆ ಆತನು ತನ್ನ ಶಿಷ್ಯರಿಗೆ ನಾನು ಈ ಜನರ ಗುಂಪುಗಳನ್ನು ಕಳುಹಿಸಿಬಿಡುವಷ್ಟರೊಳಗೆ ನೀವು ದೋಣಿಯನ್ನು ಹತ್ತಿ ನನಗೆ ಮುಂದಾಗಿ ಆಚೇದಡಕ್ಕೆ ಹೋಗಿರಿ ಎಂದು ಒತ್ತಾಯ ಮಾಡಿದನು. 23ಆತನು ಜನರ ಗುಂಪುಗಳನ್ನು ಕಳುಹಿಸಿಬಿಟ್ಟ ಮೇಲೆ ಪ್ರಾರ್ಥನೆ ಮಾಡುವುದಕ್ಕಾಗಿ ಏಕಾಂಗಿಯಾಗಿ ಬೆಟ್ಟವನ್ನು ಹತ್ತಿದನು. ಮತ್ತು ಸಂಜೆಯಾದಾಗ ಆತನೊಬ್ಬನೇ ಅಲ್ಲಿ ಇದ್ದನು. 24ಆದರೆ ದೋಣಿಯು ಸಮುದ್ರದ ನಡುವೆಯಿತ್ತು, ಎದುರು ಗಾಳಿ ಬೀಸುತ್ತಿದ್ದುದರಿಂದ ಅಲೆಗಳ ಬಡಿತಕ್ಕೆ ಸಿಕ್ಕಿ ಹೊಯ್ದಾಡುತ್ತಿತ್ತು. 25ರಾತ್ರಿಯ ನಾಲ್ಕನೆಯ ಜಾವದಲ್ಲಿ ಯೇಸು ಸಮುದ್ರದ ಮೇಲೆ ನಡೆಯುತ್ತಾ ಅವರ ಕಡೆಗೆ ಬಂದನು. 26ಸಮುದ್ರದ ಮೇಲೆ ನಡೆಯುವ ಆತನನ್ನು ನೋಡಿದ ಶಿಷ್ಯರು “ಭೂತವೆಂದು” ದಿಗಿಲುಬಿದ್ದು ಭಯದಿಂದ ಕೂಗಿದರು. 27ಕೂಡಲೆ ಯೇಸು ಮಾತನಾಡಿ ಅವರಿಗೆ, “ಧೈರ್ಯವಾಗಿರಿ ನಾನೇ ಭಯಪಡಬೇಡಿರಿ” ಎಂದು ಹೇಳಿದನು. 28ಅದಕ್ಕೆ ಪೇತ್ರನು, “ಕರ್ತನೇ ನೀನೇ ಆದರೆ ನಾನು ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರುವುದಕ್ಕೆ ಅಪ್ಪಣೆ ಕೊಡು” ಅನ್ನಲು, 29ಆತನು, “ಬಾ” ಅಂದನು. ಆಗ ಪೇತ್ರನು ಯೇಸುವಿನ ಬಳಿಗೆ ಹೋಗುವುದಕ್ಕೆ ದೋಣಿಯಿಂದ ಇಳಿದು ನೀರಿನ ಮೇಲೆ ನಡೆದನು. 30ಆದರೆ ಅವನು ಗಾಳಿಯನ್ನು ನೋಡಿದಾಗ ಭಯಪಟ್ಟು ಮುಳುಗಲಾರಂಭಿಸಿದಾಗ, “ಕರ್ತನೇ, ನನ್ನನ್ನು ಕಾಪಾಡು” ಎಂದು ಕೂಗಿಕೊಂಡನು. 31ತಕ್ಷಣವೇ ಯೇಸು ಕೈಚಾಚಿ ಅವನನ್ನು ಹಿಡಿದು, “ಅಲ್ಪ ವಿಶ್ವಾಸಿಯೇ ಏಕೆ ಸಂದೇಹ ಪಟ್ಟೆ” ಎಂದು ಹೇಳಿದನು. 32ತರುವಾಯ ಅವರು ದೋಣಿಯನ್ನು ಹತ್ತಿದ ಮೇಲೆ ಗಾಳಿ ನಿಂತು ಹೋಯಿತು. 33ಆಗ ದೋಣಿಯಲ್ಲಿದ್ದ ಶಿಷ್ಯರು “ನಿಜವಾಗಿ ನೀನು ದೇವಕುಮಾರನು” ಎಂದು ಹೇಳಿ ಆತನನ್ನು ಆರಾಧಿಸಿದರು. 34ಅವರು ಸಮುದ್ರವನ್ನು ದಾಟಿ ಗೆನೆಜರೇತ್ ಪಟ್ಟಣದ ದಡಕ್ಕೆ ಬಂದರು. 35ಆ ಸ್ಥಳದ ಜನರು ಆತನ ಗುರುತನ್ನು ಹಿಡಿದು ಆ ಸುತ್ತಲಿನ ಸೀಮೆಗೆಲ್ಲಾ ಹೇಳಿ ಕಳುಹಿಸಿದರು ಮತ್ತು ಅವರು ಅಸ್ವಸ್ಥರಾದವರೆಲ್ಲರನ್ನು ಆತನ ಬಳಿಗೆ ಕರೆತಂದರು. 36ಅವರು ಆತನನ್ನು ನಿನ್ನ ಉಡುಪಿನ ಅಂಚನ್ನಾದರೂ ಮುಟ್ಟಗೊಡಿಸಬೇಕೆಂದು ಬೇಡಿಕೊಂಡರು, ಮತ್ತು ಮುಟ್ಟಿದವರೆಲ್ಲರು ಸ್ವಸ್ಥರಾದರು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು