Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 31 ಜುಲೈ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 31 ಜುಲೈ 2027

ಶನಿವಾರ · ಸಾಮಾನ್ಯ ಕಾಲದ 17ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 17ನೇ ವಾರದ ಶನಿವಾರ

ಸ್ಮರಣೆ · ಆರಾಧನಾ ಬಣ್ಣ: ಬಿಳಿ

ಲೊಯೊಲಾದ ಸಂತ ಇಗ್ನೇಷಿಯಸ್, ಧರ್ಮಗುರು · ಸ್ಮರಣೆ

ದಿನದ ವಾಚನಗಳು

ಮೊದಲನೆಯ ವಾಚನ

ಯಾಜ 25:1, 8–17

1ಯೆಹೋವನು ಸೀನಾಯಿಬೆಟ್ಟದಲ್ಲಿ ಮೋಶೆಗೆ ಹೇಳಿದ್ದೇನೆಂದರೆ, 8“‘ಅದಲ್ಲದೆ ಏಳು ವರ್ಷಕ್ಕೊಂದರಂತೆ ಏಳು ಸಬ್ಬತ್ ವರ್ಷಗಳನ್ನು ಲೆಕ್ಕಿಸಬೇಕು. ಆ ಏಳು ಸಬ್ಬತ್ ಸಂವತ್ಸರಗಳ ಕಾಲವು ಅಂದರೆ ನಲ್ವತ್ತೊಂಭತ್ತು ವರ್ಷಗಳು ಕಳೆಯಬೇಕು. 9ಆಮೇಲೆ ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ನಿಮ್ಮ ದೇಶದಲ್ಲೆಲ್ಲಾ ಗಟ್ಟಿಯಾಗಿ ಕೊಂಬನ್ನು ಊದಿಸಬೇಕು. ಸಕಲ ದೋಷಪರಿಹಾರಕವಾದ ಆ ದಿನದಲ್ಲೇ ನಿಮ್ಮ ದೇಶದಲ್ಲೆಲ್ಲಾ ಆ ಕೊಂಬನ್ನು ಊದಿಸಬೇಕು. 10ನೀವು ಐವತ್ತನೆಯ ವರ್ಷವನ್ನು ದೇವರಿಗೆ ಮೀಸಲಾದ ವರ್ಷವೆಂದು ಭಾವಿಸಿ, ಅದರಲ್ಲಿ ದೇಶದ ನಿವಾಸಿಗಳೆಲ್ಲರಿಗೂ ಬಿಡುಗಡೆಯಾಯಿತು ಎಂಬುದಾಗಿ ಸಾರಬೇಕು. ಅದು ಜೂಬಿಲಿ ಸಂವತ್ಸರವಾದುದರಿಂದ ನೀವೆಲ್ಲರು ನಿಮ್ಮ ನಿಮ್ಮ ಸ್ವಂತ ಭೂಮಿಗಳಿಗೂ ಮತ್ತು ಸ್ವಜನರ ಬಳಿಗೂ ಹೋಗಿ ಇರಬಹುದು. 11ಆ ಐವತ್ತನೆಯ ವರ್ಷದಲ್ಲಿ ಅಂದರೆ ಜೂಬಿಲಿ ಸಂವತ್ಸರದಲ್ಲಿ ನೀವು ಬೀಜವನ್ನು ಬಿತ್ತಬಾರದು, ತಾನಾಗಿ ಬೆಳೆದ ಪೈರನ್ನು ಕೂಡಿಸಿಟ್ಟುಕೊಳ್ಳಬಾರದು; ನೀವು ನೋಡಿಕೊಳ್ಳದೆ ಬಿಟ್ಟ ದ್ರಾಕ್ಷಾಲತೆಗಳಲ್ಲಿ ಬೆಳದ ಹಣ್ಣನ್ನು ಸಂಗ್ರಹಿಸಬಾರದು. 12ಅದು ಜೂಬಿಲಿ ವರ್ಷವಾದುದರಿಂದ ನೀವು ಅದನ್ನು ಮೀಸಲಾದದ್ದೆಂದು ಭಾವಿಸಬೇಕು. ಹೊಲದಲ್ಲಿ ತಾನಾಗಿ ಬೆಳೆದದ್ದನ್ನು ಊಟಮಾಡಬೇಕು. 13“‘ಜೂಬಿಲಿ ವರ್ಷದಲ್ಲಿ ನಿಮ್ಮ ನಿಮ್ಮ ಸ್ವಂತ ಭೂಮಿಗಳು ತಿರುಗಿ ನಿಮ್ಮ ವಶಕ್ಕೆ ಬರುವವು. 14ನೀವು ಸ್ಥಿರಸೊತ್ತನ್ನು ಸ್ವದೇಶದವರೊಡನೆ ಕ್ರಯ ಮತ್ತು ವಿಕ್ರಯ ಮಾಡುವಾಗ ಇದರ ವಿಷಯದಲ್ಲಿ ಅನ್ಯಾಯಮಾಡಬಾರದು. 15ಹಿಂದಿನ ಜೂಬಿಲಿ ಸಂವತ್ಸರದಿಂದ ಎಷ್ಟು ವರ್ಷವಾಯಿತೆಂದು ಲೆಕ್ಕಿಸಿ, ಸ್ವದೇಶದವನಿಂದ ಕ್ರಯಕ್ಕೆ ತೆಗೆದುಕೊಳ್ಳಬೇಕು; ಅದರಂತೆ ಮಾರುವವನು ಎಷ್ಟು ವರ್ಷಗಳ ಬೆಳೆಯಾಯಿತೆಂದು ಲೆಕ್ಕಿಸಿ ಕ್ರಯಕ್ಕೆ ಕೊಡಬೇಕು. 16ಮುಂದಣ ಜೂಬಿಲಿ ಸಂವತ್ಸರದ ತನಕ ಹೆಚ್ಚು ವರ್ಷಗಳಾದರೆ ಭೂಮಿಯ ಕ್ರಯವನ್ನು ಹೆಚ್ಚಿಸಬೇಕು, ಕಡಿಮೆಯಾದರೆ ಕಡಿಮೆ ಮಾಡಬೇಕು; ಏಕೆಂದರೆ ಅವನು ಮಾರುವುದು ಭೂಮಿಯನ್ನಲ್ಲ, ಲೆಕ್ಕದ ಪ್ರಕಾರ ಬೆಳೆಗಳನ್ನೇ ಮಾರುತ್ತಾನಲ್ಲಾ. 17ಆದುದರಿಂದ ನೀವು ಒಬ್ಬರಿಗೊಬ್ಬರು ಅನ್ಯಾಯಮಾಡಬಾರದು; ನಿಮ್ಮ ದೇವರಿಗೆ ಭಯಪಡುವವರಾಗಿರಬೇಕು; ನಾನು ನಿಮ್ಮ ದೇವರಾದ ಯೆಹೋವನು.

ಪ್ರತಿವಚನ ಕೀರ್ತನೆ

ಕೀರ್ತ 67:1–2, 4, 6–7

1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು ತಂತಿವಾದ್ಯದೊಡನೆ ಹಾಡತಕ್ಕದ್ದು; ಕೀರ್ತನೆ; ಹಾಡು. ದೇವರು ನಮ್ಮನ್ನು ಕಟಾಕ್ಷಿಸಿ ಆಶೀರ್ವದಿಸಲಿ; ಪ್ರಸನ್ನ ಮುಖದಿಂದ ನಮ್ಮನ್ನು ನೋಡಲಿ. ಸೆಲಾ 2ಇದರಿಂದ ಭೂಲೋಕದಲ್ಲಿ ನಿನ್ನ ಪರಿಪಾಲನ ಮಾರ್ಗವೂ, ಎಲ್ಲಾ ಜನಾಂಗಗಳಲ್ಲಿ ನಿನ್ನ ರಕ್ಷಣೆಯೂ ಪ್ರಸಿದ್ಧವಾಗುವವು. 4ನೀನು ಸಮಸ್ತ ದೇಶಗಳವರನ್ನು ನೀತಿಯಿಂದ ಪಾಲಿಸಿ, ಭೂಪ್ರಜೆಗಳನ್ನೆಲ್ಲಾ ನಡೆಸುವಾತನಾಗಿರುವುದರಿಂದ ಜನಾಂಗಗಳು ಹರ್ಷಿಸಿ ಆನಂದಘೋಷ ಮಾಡಲಿ. ಸೆಲಾ 6ಭೂಮಿಯು ಒಳ್ಳೆಯ ಬೆಳೆಯನ್ನು ಕೊಟ್ಟಿರುತ್ತದೆ. ದೇವರೇ, ನಮ್ಮ ದೇವರೇ ನಮ್ಮನ್ನು ಆಶೀರ್ವದಿಸಿದ್ದಾನೆ; 7ಆತನು ನಮ್ಮನ್ನು ಆಶೀರ್ವದಿಸುವವನಾಗಿದ್ದಾನೆ. ಭೂಮಂಡಲದವರೆಲ್ಲರೂ ಆತನಲ್ಲಿ ಭಯಭಕ್ತಿಯುಳ್ಳವರಾಗಿರುವರು.

ಸುವಾರ್ತೆ

ಮತ್ತಾ 14:1–12

1ಆ ಕಾಲದಲ್ಲಿ ಉಪರಾಜನಾದ ಹೆರೋದನು ಯೇಸುವಿನ ಸುದ್ದಿಯನ್ನು ಕೇಳಿ, 2ತನ್ನ ಸೇವಕರಿಗೆ, “ಇವನು ಸ್ನಾನಿಕ ಯೋಹಾನನೇ; ಸತ್ತವರೊಳಗಿಂದ ಎದ್ದು ಬಂದಿದ್ದಾನೆ. ಆದಕಾರಣ ಮಹತ್ಕಾರ್ಯಗಳನ್ನು ನಡಿಸುವ ಶಕ್ತಿಗಳು ಅವನಲ್ಲಿ ಇದೆ” ಎಂದು ಹೇಳಿದನು. 3ಹೆರೋದನು ತನ್ನ ಅಣ್ಣನಾದ ಫಿಲಿಪ್ಪನ ಹೆಂಡತಿಯಾದ ಹೆರೋದ್ಯಳ ನಿಮಿತ್ತ ಯೋಹಾನನನ್ನು ಹಿಡಿದು ಕಟ್ಟಿಸಿ ಸೆರೆಮನೆಯಲ್ಲಿ ಹಾಕಿಸಿದ್ದನು. 4ಯೋಹಾನನು ಹೆರೋದನಿಗೆ “ನೀನು ಇವಳನ್ನು ಹೆಂಡತಿಯಾಗಿ ಇಟ್ಟುಕೊಂಡಿರುವುದು ನ್ಯಾಯವಲ್ಲವೆಂದು” ಹೇಳುತ್ತಿದ್ದನು. 5ಹೆರೋದನು ಅವನನ್ನು ಕೊಲ್ಲಿಸಬೇಕೆಂದಿದ್ದರೂ ಜನರಿಗೆ ಭಯಪಟ್ಟನು, ಏಕೆಂದರೆ ಅವರು ಅವನನ್ನು ಪ್ರವಾದಿಯೆಂದು ಎಣಿಸಿದ್ದರು. 6ಆದರೆ ಹೆರೋದನ ಹುಟ್ಟಿದ ದಿನದ ಹಬ್ಬವು ನಡೆಯುವಾಗ ಹೆರೋದ್ಯಳ ಮಗಳು ಬಂದಿದ್ದ ಅತಿಥಿಗಳ ಮುಂದೆ ನೃತ್ಯಮಾಡಿ ಹೆರೋದನನ್ನು ಮೆಚ್ಚಿಸಿದಳು. 7ಅವನು ಅವಳಿಗೆ, ನೀನು ಏನು ಕೇಳಿಕೊಂಡರೂ ಕೊಡುತ್ತೇನೆಂದು ಆಣೆಯಿಟ್ಟು ವಾಗ್ದಾನ ಮಾಡಿದನು. 8ಅವಳು ತನ್ನ ತಾಯಿಯ ಪ್ರೇರೇಪಣೆಗೆ ಒಳಗಾಗಿ, “ಸ್ನಾನಿಕ ಯೋಹಾನನ ತಲೆಯನ್ನು ಹರಿವಾಣದಲ್ಲಿ ನನಗೆ ತರಿಸಿಕೊಡು” ಅಂದಳು. 9ಆಕೆಯ ಕೋರಿಕೆಯಿಂದ ಅರಸನು ದುಃಖಪಟ್ಟರೂ ತಾನು ಮಾಡಿದ ಆಣೆಯ ನಿಮಿತ್ತವಾಗಿಯೂ, ತನ್ನ ಸಂಗಡ ಊಟಕ್ಕೆ ಕುಳಿತಿದ್ದವರ ನಿಮಿತ್ತವಾಗಿಯೂ ಅದನ್ನು ತಂದುಕೊಡುವುದಕ್ಕೆ ಅಪ್ಪಣೆ ಕೊಟ್ಟನು. 10ಅವನು ಆಳುಗಳನ್ನು ಕಳುಹಿಸಿ ಸೆರೆಮನೆಯಲ್ಲಿ ಯೋಹಾನನ ಶಿರಚ್ಛೇದನಮಾಡಿ, 11ಅವರು ಅವನ ತಲೆಯನ್ನು ಹರಿವಾಣದಲ್ಲಿ ತಂದು ಆ ಹುಡುಗಿಗೆ ಕೊಟ್ಟರು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತೆಗೆದುಕೊಂಡು ಹೋದಳು. 12ಯೋಹಾನನ ಶಿಷ್ಯರು ಬಂದು ಅವನ ದೇಹವನ್ನು ಹೊತ್ತುಕೊಂಡು ಹೋಗಿ ಹೂಣಿಟ್ಟರು. ಅನಂತರ ಯೇಸುವಿನ ಬಳಿಗೆ ಬಂದು ತಿಳಿಸಿದರು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು