Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 22 ಜುಲೈ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 22 ಜುಲೈ 2027

ಗುರುವಾರ · ಸಾಮಾನ್ಯ ಕಾಲದ 16ನೇ ವಾರ

ಹಬ್ಬಗಳು ಮತ್ತು ಸಂತರು

ಸಂತ ಮಗ್ದಲದ ಮರಿಯ

ಹಬ್ಬ · ಆರಾಧನಾ ಬಣ್ಣ: ಬಿಳಿ

ದಿನದ ವಾಚನಗಳು

ಮೊದಲನೆಯ ವಾಚನ

ಪ.ಗೀ 3:1–4

ಅಥವಾ: 2 ಕೊರಿ 5:14–17

1ರಾತ್ರಿಯಲ್ಲಿ ಹಾಸಿಗೆಯ ಮೇಲೆ ನನ್ನ ಪ್ರಾಣಪ್ರಿಯನನ್ನು ಹುಡುಕಿದೆನು, ಎಷ್ಟು ಹುಡುಕಿದರೂ ಸಿಕ್ಕಲಿಲ್ಲ. 2ನಾನು, “ಎದ್ದು ಊರಿನಲ್ಲಿ ತಿರುಗುವೆನು, ಬೀದಿಗಳಲ್ಲಿಯೂ, ಚೌಕಗಳಲ್ಲಿಯೂ ನನ್ನ ಪ್ರಾಣಪ್ರಿಯನನ್ನು ಹುಡುಕುವೆನು” ಅಂದುಕೊಂಡೆನು, ಎಷ್ಟು ಹುಡುಕಿದರೂ ಸಿಕ್ಕಲಿಲ್ಲ. 3ಊರಿನಲ್ಲಿ ತಿರುಗುವ ಕಾವಲುಗಾರರ ಕೈಗೆ ಸಿಕ್ಕಿದೆನು, “ನನ್ನ ಪ್ರಾಣಪ್ರಿಯನನ್ನು ಕಂಡಿರಾ?” ಎಂದು ಅವರನ್ನು ವಿಚಾರಿಸಿದೆನು. 4ಅವರನ್ನು ಬಿಟ್ಟ ತುಸು ಹೊತ್ತಿನೊಳಗೆ ನನ್ನ ಪ್ರಾಣಪ್ರಿಯನನ್ನು ಕಂಡುಕೊಂಡು ತಾಯಿಯ ಮನೆಗೆ, ನನ್ನನ್ನು ಹೆತ್ತವಳ ಕೋಣೆಗೆ ಸೇರುವ ತನಕ, ಬಿಡದೆ ಹಿಡಿದುಕೊಂಡೇ ಹೋದೆನು.

ಪ್ರತಿವಚನ ಕೀರ್ತನೆ

ಕೀರ್ತ 63:1–5, 7–8

1ದಾವೀದನು ಯೆಹೂದ ಸೀಮೆಯ ಅರಣ್ಯದಲ್ಲಿದ್ದಾಗ ರಚಿಸಿದ ಕೀರ್ತನೆ. ದೇವರೇ, ನೀನೇ ನನ್ನ ದೇವರು; ನಾನು ನಿನ್ನ ದರ್ಶನವನ್ನು ಕುತೂಹಲದಿಂದ ಎದುರುನೋಡುತ್ತೇನೆ. ನನ್ನ ಆತ್ಮವೂ ನಿನಗಾಗಿ ಹಂಬಲಿಸುತ್ತದೆ; ನೀರಿಲ್ಲದೆ ಒಣಗಿದ ಭೂಮಿಯಲ್ಲಿದ್ದವನು ನೀರಿಗಾಗಿಯೋ ಎಂಬಂತೆ, ನನ್ನ ಶರೀರವು ನಿನಗಾಗಿ ದಾಹಗೊಳ್ಳುತ್ತದೆ. 2ನಿನ್ನ ಮಂದಿರದಲ್ಲಿ ನಾನು ನಿನ್ನ ಮಹತ್ತನ್ನೂ, ಪ್ರಭಾವವನ್ನೂ ಕಂಡ ಪ್ರಕಾರ, ಈಗಲೂ ಕಾಣಬೇಕೆಂದು ಅಪೇಕ್ಷಿಸುತ್ತೇನೆ. 3ನಿನ್ನ ಪ್ರೇಮಾನುಭವವು ಜೀವಕ್ಕಿಂತಲೂ ಶ್ರೇಷ್ಠ; ನನ್ನ ಬಾಯಿ ನಿನ್ನನ್ನು ಕೀರ್ತಿಸುವುದು. 4ನನ್ನ ಜೀವಮಾನದಲ್ಲೆಲ್ಲಾ ಹೀಗೆಯೇ ನಿನ್ನನ್ನು ಹಾಡಿ ಹರಸುತ್ತಾ, ನಿನ್ನ ಹೆಸರೆತ್ತಿ ಕೈಮುಗಿಯುವೆನು. 5ಮೃಷ್ಟಭೋಜನದಿಂದಲೋ ಎಂಬಂತೆ, ನನ್ನ ಮನಸ್ಸು ಸಂತುಷ್ಟವಾಗಿರುವುದು; ನನ್ನ ಬಾಯಿ ಉತ್ಸಾಹಧ್ವನಿ ಮಾಡುತ್ತಾ ನಿನ್ನನ್ನು ಕೊಂಡಾಡುವುದು. 7ನೀನು ನನಗೆ ಸಹಾಯಕನಾಗಿರುವೆಯಲ್ಲಾ; ನಿನ್ನ ರೆಕ್ಕೆಗಳ ಮರೆಯಲ್ಲಿ ಸುರಕ್ಷಿತನಾಗಿದ್ದುಕೊಂಡು, ಆನಂದಘೋಷ ಮಾಡುತ್ತಿರುವೆನು. 8ನನ್ನ ಆತ್ಮವು ನಿನ್ನನ್ನು ಅಂಟಿಕೊಂಡು ಹಿಂಬಾಲಿಸುವುದು; ನಿನ್ನ ಬಲಗೈ ನನಗೆ ಆಧಾರವಾಗಿರುವುದು.

ಸುವಾರ್ತೆ

ಯೋಹಾ 20:1, 11–18

1ವಾರದ ಮೊದಲನೆಯ ದಿನದಲ್ಲಿ ಮಗ್ದಲದ ಮರಿಯಳು ಬೆಳಿಗ್ಗೆ ಇನ್ನೂ ಕತ್ತಲೆ ಇರುವಾಗಲೇ ಸಮಾಧಿಯ ಬಳಿಗೆ ಬಂದು ಸಮಾಧಿಯ ಕಲ್ಲು ಅಲ್ಲಿಂದ ಉರುಳಿ ಹೋಗಿರುವುದನ್ನು ಕಂಡಳು. 11ಆದರೆ ಮರಿಯಳು ಹೊರಗೆ ಸಮಾಧಿಯ ಬಳಿಯಲ್ಲಿ ಅಳುತ್ತಾ ನಿಂತಿದ್ದಳು. ಹೀಗೆ ಆಕೆ ಅಳುತ್ತಿರುವಾಗ ಸಮಾಧಿಯೊಳಗೆ ಬಗ್ಗಿ ನೋಡಲು, 12ಯೇಸುವಿನ ದೇಹವು ಇಟ್ಟಿದ್ದ ಸ್ಥಳದಲ್ಲಿ ಬಿಳಿವಸ್ತ್ರಗಳನ್ನು ಧರಿಸಿದ್ದ ಇಬ್ಬರು ದೇವದೂತರನ್ನು ಕಂಡಳು, ಅವರಲ್ಲಿ ಒಬ್ಬನು ಯೇಸುವಿನ ತಲೆಯ ಕಡೆಯಲ್ಲಿ ಮತ್ತೊಬ್ಬನು ಆತನು ಪಾದಗಳಿದ್ದ ಕಡೆಯಲ್ಲಿ ಕುಳಿತಿದ್ದರು. 13ಅವರು ಆಕೆಗೆ, “ಅಮ್ಮಾ, ನೀನು ಯಾಕೆ ಅಳುತ್ತಿರುವೆ?” ಎಂದು ಕೇಳಲು, ಆಕೆಯು, “ನನ್ನ ಕರ್ತನನ್ನು ಅವರು ತೆಗೆದುಕೊಂಡು ಹೋಗಿದ್ದಾರೆ. ಆತನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ” ಎಂದಳು. 14ಆಕೆಯು ಹೀಗೆ ಹೇಳಿ ಹಿಂದಕ್ಕೆ ತಿರುಗಿದಾಗ ಯೇಸು ನಿಂತಿರುವುದನ್ನು ಕಂಡಳು, ಆದರೆ ಆತನು ಯೇಸುವೇ ಎಂದು ಆಕೆಗೆ ತಿಳಿಯಲಿಲ್ಲ. 15ಯೇಸು ಆಕೆಗೆ, “ಅಮ್ಮಾ, ನೀನು ಯಾಕೆ ಅಳುತ್ತೀ? ಯಾರನ್ನು ಹುಡುಕುತ್ತೀ?” ಎಂದು ಕೇಳಲು, ಆಕೆ ಆತನನ್ನು ತೋಟಗಾರನೆಂದು ನೆನಸಿ ಆತನಿಗೆ, “ಅಯ್ಯಾ, ನೀನು ಆತನನ್ನು ತೆಗೆದುಕೊಂಡು ಹೋಗಿದ್ದರೆ ಎಲ್ಲಿ ಇಟ್ಟಿದ್ದೀ ಎಂದು ನನಗೆ ಹೇಳು, ನಾನು ಆತನನ್ನು ತೆಗೆದುಕೊಂಡು ಹೋಗುತ್ತೇನೆ” ಎಂದು ಹೇಳಿದಳು. 16ಯೇಸು ಆಕೆಗೆ, “ಮರಿಯಳೇ,” ಎಂದು ಹೇಳಲು, ಆಕೆಯು ಅವನ ಕಡೆಗೆ ತಿರುಗಿ ಇಬ್ರಿಯ ಭಾಷೆಯಲ್ಲಿ ಆತನಿಗೆ, “ರಬ್ಬೂನಿ” ಎಂದಳು. ಹಾಗೆಂದರೆ ಗುರುವೇ ಎಂದರ್ಥ. 17ಯೇಸು ಆಕೆಗೆ, “ನನ್ನನ್ನು ಮುಟ್ಟಬೇಡ, ಏಕೆಂದರೆ ನಾನು ಇನ್ನೂ ತಂದೆಯ ಬಳಿಗೆ ಏರಿಹೋದವನಲ್ಲ. ಆದರೆ ನೀನು ನನ್ನ ಸಹೋದರರ ಬಳಿಗೆ ಹೋಗಿ ಅವರಿಗೆ, ನನ್ನ ತಂದೆಯೂ, ನಿಮ್ಮ ತಂದೆಯೂ, ನನ್ನ ದೇವರೂ, ನಿಮ್ಮ ದೇವರೂ ಆಗಿರುವಾತನ ಬಳಿಗೆ ನಾನು ಏರಿಹೋಗುತ್ತೇನೆ ಎಂದು ತಿಳಿಸು” ಎಂದನು. 18ಮಗ್ದಲದ ಮರಿಯಳು ಹೋಗಿ “ನಾನು ಕರ್ತನನ್ನು ನೋಡಿದ್ದೇನೆ,” ಆತನು ಇಂಥಿಂಥದನ್ನು ನನಗೆ ಹೇಳಿದನು ಎಂದು ಶಿಷ್ಯರಿಗೆ ತಿಳಿಸಿದಳು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು