ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 23 ಜುಲೈ
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 23 ಜುಲೈ 2027
ಶುಕ್ರವಾರ · ಸಾಮಾನ್ಯ ಕಾಲದ 16ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 16ನೇ ವಾರದ ಶುಕ್ರವಾರ
ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಹಸಿರು
ಸಂತ ಬ್ರಿಜಿಟ್, ಸನ್ಯಾಸಿನಿ · ಐಚ್ಛಿಕ ಸ್ಮರಣೆ
ಉಪವಾಸ ಮತ್ತು ಪ್ರಾಯಶ್ಚಿತ್ತ
ಪ್ರಾಯಶ್ಚಿತ್ತದ ದಿನ
ಪ್ರತಿ ಶುಕ್ರವಾರವೂ ಪ್ರಾಯಶ್ಚಿತ್ತದ ದಿನ; ಅದನ್ನು ಹೇಗೆ ಆಚರಿಸಬೇಕು ಎಂಬುದನ್ನು ಪ್ರತಿಯೊಂದು ಬಿಷಪರ ಸಮ್ಮೇಳನ ನಿರ್ಧರಿಸುತ್ತದೆ: ಮಾಂಸ ವರ್ಜನೆ ಅಥವಾ ಬೇರೊಂದು ಪ್ರಾಯಶ್ಚಿತ್ತ ಕಾರ್ಯ. ಉಪವಾಸ 18 ರಿಂದ 59 ವರ್ಷದವರಿಗೆ, ಮಾಂಸ ವರ್ಜನೆ 14 ವರ್ಷದಿಂದ ಕಡ್ಡಾಯ.
ದಿನದ ವಾಚನಗಳು
ಮೊದಲನೆಯ ವಾಚನ
1ದೇವರು ಈ ಎಲ್ಲಾ ಆಜ್ಞಾವಿಧಿಗಳನ್ನು ಅವರಿಗೆ ಕೊಟ್ಟನು: 2“ನೀನು ಗುಲಾಮತನದಲ್ಲಿದ್ದ ಐಗುಪ್ತ ದೇಶದೊಳಗಿಂದ ನಿನ್ನನ್ನು ಬಿಡುಗಡೆಮಾಡಿದ ಯೆಹೋವನು ಎಂಬ ‘ನಾನೇ ನಿನ್ನ ದೇವರು’ 3ನಾನಲ್ಲದೆ ನಿಮಗೆ ಬೇರೆ ದೇವರುಗಳು ಇರಬಾರದು. 4“ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ, ಭೂಮಿಯಲ್ಲಾಗಲಿ, ಭೂಮಿಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವುದರ ರೂಪವನ್ನೂ ಮಾಡಿಕೊಳ್ಳಬಾರದು. 5ಅವುಗಳಿಗೆ ಅಡ್ಡ ಬೀಳಬಾರದು, ಪೂಜೆ ಮಾಡಬಾರದು. ನಿನ್ನ ದೇವರಾದ ಯೆಹೋವನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಬಿಟ್ಟುಕೊಡುವುದಿಲ್ಲ. ಆದುದರಿಂದ ನನ್ನನ್ನು ದ್ವೇಷಿಸುವವರ ವಿಷಯದಲ್ಲಿ ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ, ಮೂರು ನಾಲ್ಕು ತಲೆಗಳವರೆಗೆ ಬರಮಾಡುವೆನು. 6ನನ್ನನ್ನು ಪ್ರೀತಿಸಿ ನನ್ನ ಆಜ್ಞೆಗಳನ್ನು ಕೈಗೊಳ್ಳುವವರಿಗಾದರೋ ಸಾವಿರ ತಲೆಗಳವರೆಗೆ ದಯೆತೋರಿಸುವೆನು. 7ನಿನ್ನ ದೇವರಾದ ಯೆಹೋವನ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ ಎತ್ತಬಾರದು. ಯೆಹೋವನು ತನ್ನ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ ಎತ್ತುವವನನ್ನು ಶಿಕ್ಷಿಸದೆ ಬಿಡುವುದಿಲ್ಲ. 8“ಸಬ್ಬತ್ ದಿನವನ್ನು ದೇವರ ದಿನವೆಂದು ಆಚರಣೆಗೆ ತರುವುದಕ್ಕೆ ನೆನಪಿನಲ್ಲಿಟ್ಟುಕೊಳ್ಳಬೇಕು. 9ಆರು ದಿನಗಳು ನೀನು ದುಡಿದು ನಿನ್ನ ಕೆಲಸವನ್ನೆಲ್ಲಾ ಮಾಡಿಕೊಳ್ಳಬೇಕು. 10ಆದರೆ ಏಳನೆಯ ದಿನವು ನಿನ್ನ ದೇವರಾದ ಯೆಹೋವನಿಗೆ ಮೀಸಲಾದ ವಿಶ್ರಾಂತಿಯ ಸಬ್ಬತ್ ದಿನವಾಗಿದೆ. ಆ ದಿನದಲ್ಲಿ ನೀನು ಯಾವ ಕೆಲಸವನ್ನು ಮಾಡಬಾರದು. ನಿನ್ನ ಗಂಡುಮಕ್ಕಳು, ಹೆಣ್ಣುಮಕ್ಕಳು, ಗಂಡಾಳು, ಹೆಣ್ಣಾಳು, ಪಶುಪ್ರಾಣಿಗಳು ನಿನ್ನ ಊರಿನಲ್ಲಿರುವ ಅನ್ಯದೇಶದವನು ಸಹ ಯಾವ ಕೆಲಸವನ್ನೂ ಮಾಡಬಾರದು. 11ಆರು ದಿನಗಳಲ್ಲಿ ಯೆಹೋವನು ಭೂಮ್ಯಾಕಾಶಗಳನ್ನೂ, ಸಮುದ್ರವನ್ನೂ, ಅವುಗಳಲ್ಲಿರುವ ಸಮಸ್ತವನ್ನೂ ನಿರ್ಮಾಣ ಮಾಡಿ, ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ಆದುದರಿಂದ ಯೆಹೋವನು ಸಬ್ಬತ್ ದಿನವನ್ನು ತನ್ನ ಪರಿಶುದ್ಧ ದಿನವಾಗಿರಲಿ ಎಂದು ಆಶೀರ್ವದಿಸಿದನು. 12“ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು, ಸನ್ಮಾನಿಸಿದರೆ ನಿನ್ನ ದೇವರಾದ ಯೆಹೋವನು ನಿನಗೆ ಅನುಗ್ರಹಿಸುವ ದೇಶದಲ್ಲಿ ನೀನು ಬಹುಕಾಲ ಬದುಕುವಿ. 13“ಕೊಲೆ ಮಾಡಬಾರದು. 14“ವ್ಯಭಿಚಾರಮಾಡಬಾರದು. 15“ಕದಿಯಬಾರದು. 16“ಮತ್ತೊಬ್ಬನ ಮೇಲೆ ಸುಳ್ಳುಸಾಕ್ಷಿ ಹೇಳಬಾರದು. 17“ಮತ್ತೊಬ್ಬನ ಮನೆಯನ್ನು ನೋಡಿ ಆಶೆಪಡಬಾರದು. ಮತ್ತೊಬ್ಬನ ಹೆಂಡತಿ, ಗಂಡಾಳು, ಹೆಣ್ಣಾಳು, ಎತ್ತು, ಕತ್ತೆ ಮುಂತಾದ ಯಾವುದನ್ನೂ ಬಯಸಬಾರದು.”
ಪ್ರತಿವಚನ ಕೀರ್ತನೆ
8ಯೆಹೋವನ ಆಜ್ಞೆಗಳು ನೀತಿಯುಳ್ಳವುಗಳಾಗಿವೆ; ಮನಸ್ಸನ್ನು ಹರ್ಷಪಡಿಸುತ್ತವೆ. ಯೆಹೋವನ ಆಜ್ಞೆ ಪವಿತ್ರವಾದದ್ದು; ಕಣ್ಣುಗಳನ್ನು ಕಳೆಗೊಳಿಸುತ್ತದೆ. 9ಯೆಹೋವನ ಭಯ ಪರಿಶುದ್ಧವಾಗಿದೆ; ಅದು ಶಾಶ್ವತವಾದದ್ದೇ. ಯೆಹೋವನ ಕಟ್ಟಳೆಗಳು ಯಥಾರ್ಥವಾದವುಗಳು; ಅವು ಕೇವಲ ನ್ಯಾಯವಾಗಿವೆ. 10ಅವು ಬಂಗಾರಕ್ಕಿಂತಲೂ, ಅಪರಂಜಿರಾಶಿಗಿಂತಲೂ ಅಪೇಕ್ಷಿಸತಕ್ಕವುಗಳು. ಅವು ಜೇನಿಗಿಂತಲೂ, ಶೋಧಿಸಿದ ಜೇನುತುಪ್ಪಕ್ಕಿಂತಲೂ ಸಿಹಿಯಾಗಿವೆ. 11ಅವುಗಳ ಮೂಲಕ ನಿನ್ನ ದಾಸನಿಗೆ ವಿವೇಚನೆ ಉಂಟಾಗುತ್ತದೆ; ಅವುಗಳನ್ನು ಕೈಕೊಳ್ಳುವುದರಿಂದ ಬಹಳ ಫಲ ದೊರೆಯುತ್ತದೆ.
ಸುವಾರ್ತೆ
18“ಬಿತ್ತುವವನ ವಿಷಯವಾದ ಸಾಮ್ಯದ ಅರ್ಥವನ್ನು ಕೇಳಿರಿ. 19ಯಾವನಾದರೂ ಪರಲೋಕ ರಾಜ್ಯದ ವಾಕ್ಯವನ್ನು ಕೇಳಿ ತಿಳಿದುಕೊಳ್ಳದೆ ಇದ್ದರೆ ದುಷ್ಟನು ಬಂದು ಆತನ ಹೃದಯದಲ್ಲಿ ಬಿತ್ತಿದ್ದನ್ನು ತೆಗೆದು ಹಾಕುತ್ತಾನೆ. ಇವನೇ ಬೀಜ ಬಿದ್ದ ದಾರಿಯ ಮಗ್ಗುಲಾಗಿರುವನು. 20ಬಂಡೆಯ ನೆಲದಲ್ಲಿ ಬಿತ್ತಲ್ಪಟ್ಟವನು ಯಾರೆಂದರೆ, ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸಿದರೂ, 21ತನಗೆ ಬೇರಿಲ್ಲದ ಕಾರಣ ಇವನು ಸ್ವಲ್ಪ ಕಾಲ ಮಾತ್ರವೇ ಇದ್ದು ಆ ವಾಕ್ಯದ ನಿಮಿತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಕೂಡಲೆ ಎಡವಿ ಬೀಳುತ್ತಾನೆ. 22ಮುಳ್ಳುಗಿಡಗಳ ನೆಲದಲ್ಲಿ ಬಿತ್ತಲ್ಪಟ್ಟಂಥವನು ಯಾರೆಂದರೆ, ವಾಕ್ಯವನ್ನು ಕೇಳಿದಾಗ್ಯೂ ಪ್ರಪಂಚದ ಚಿಂತೆಯೂ, ಐಶ್ವರ್ಯದ ಮೋಸತನವೂ ಆ ವಾಕ್ಯವನ್ನು ಅಡಗಿಸಿಬಿಡುವುದರಿಂದ ಫಲವನ್ನು ಕೊಡದೇ ಇರುತ್ತಾನೆ. 23ಒಳ್ಳೆಯ ಮಣ್ಣಿನಲ್ಲಿ ಬಿತ್ತಲ್ಪಟ್ಟಂಥವನು ಯಾರೆಂದರೆ, ವಾಕ್ಯವನ್ನು ಕೇಳಿ ತಿಳಿದುಕೊಂಡು ಫಲವಂತನಾಗಿ ನೂರರಷ್ಟಾಗಲಿ, ಅರವತ್ತರಷ್ಟಾಗಲಿ, ಮೂವತ್ತರಷ್ಟಾಗಲಿ ಫಲವನ್ನು ಕೊಡುವವನೇ” ಎಂದು ಹೇಳಿದನು.
ಇಂದಿನ ಸಂತರು
- ಸಂತ ಬ್ರಿಜಿಟ್, ಸನ್ಯಾಸಿನಿ
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು