Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 6 ಜುಲೈ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 6 ಜುಲೈ 2027

ಮಂಗಳವಾರ · ಸಾಮಾನ್ಯ ಕಾಲದ 14ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 14ನೇ ವಾರದ ಮಂಗಳವಾರ

ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಹಸಿರು

ಸಂತ ಮರಿಯಾ ಗೊರೆಟ್ಟಿ, ಕನ್ಯೆ ಮತ್ತು ಹುತಾತ್ಮ · ಐಚ್ಛಿಕ ಸ್ಮರಣೆ

ದಿನದ ವಾಚನಗಳು

ಮೊದಲನೆಯ ವಾಚನ

ಆದಿ 32:22–32

22ಆ ರಾತ್ರಿ ಅವನು ತನ್ನ ಇಬ್ಬರು ಹೆಂಡತಿಯರನ್ನು, ಇಬ್ಬರು ದಾಸಿಯರನ್ನು ಹಾಗೂ ಹನ್ನೊಂದು ಮಂದಿ ಮಕ್ಕಳನ್ನು ಕರೆದುಕೊಂಡು ಯಬ್ಬೋಕ್ ಹೊಳೆಯನ್ನು ದಾಟಿದನು. 23ಅವರನ್ನೂ, ತನ್ನ ಆಸ್ತಿಯೆಲ್ಲವನ್ನೂ ದಾಟಿಸಿದ ಮೇಲೆ 24ಯಾಕೋಬನು ಒಂಟಿಯಾಗಿ ಹಿಂದೆ ನಿಂತಿರಲು ಯಾರೋ ಒಬ್ಬ ಪುರುಷನು ಬೆಳಗಾಗುವ ತನಕ ಅವನ ಸಂಗಡ ಹೋರಾಡಿದನು. 25ಆ ಪುರುಷನು ತಾನು ಗೆಲ್ಲದೆ ಇರುವುದನ್ನು ಕಂಡು ಯಾಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಯಾಕೋಬನು ಅವನ ಸಂಗಡ ಹೋರಾಡುತ್ತಿರುವಾಗಲೇ ಅವನ ತೊಡೆಯ ಕೀಲು ತಪ್ಪಿತು. 26ಆ ಪುರುಷನು, “ನನ್ನನ್ನು ಬಿಡು, ಬೆಳಗಾಗುತ್ತಿದೆ” ಎನ್ನಲು, ಯಾಕೋಬನು, “ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನ್ನು ಬಿಡುವುದಿಲ್ಲ” ಎಂದನು. 27ಆ ಪುರುಷನು, “ನಿನ್ನ ಹೆಸರೇನು?” ಎಂದು ಕೇಳಿದ್ದಕ್ಕೆ ಅವನು, “ಯಾಕೋಬನು” ಎಂದಾಗ, 28ಅವನು ಯಾಕೋಬನಿಗೆ, “ಇನ್ನು ಮೇಲೆ ನೀನು ಯಾಕೋಬನೆಂದು ಕರೆಯಲ್ಪಡುವುದಿಲ್ಲ; ನೀನು ದೇವರ ಸಂಗಡಲೂ, ಮನುಷ್ಯರ ಸಂಗಡಲೂ ಹೋರಾಡಿ ಗೆದ್ದವನಾದುದರಿಂದ ನಿನಗೆ ‘ಇಸ್ರಾಯೇಲ್’ ಎಂದು ಹೆಸರಾಗುವುದು” ಎಂದು ಹೇಳಿದನು. 29ಯಾಕೋಬನು, “ನೀನು ನಿನ್ನ ಹೆಸರನ್ನು ನನಗೆ ತಿಳಿಸಬೇಕು” ಎಂದು ಅವನನ್ನು ಕೇಳಿಕೊಂಡಾಗ ಆತನು, “ನನ್ನ ಹೆಸರನ್ನು ವಿಚಾರಿಸುವುದೇಕೆ?” ಎಂದು ಹೇಳಿ ಅಲ್ಲಿ ಅವನನ್ನು ಆಶೀರ್ವದಿಸಿದನು. 30ಆಗ ಯಾಕೋಬನು, “ನಾನು ದೇವರನ್ನು ಪ್ರತ್ಯಕ್ಷವಾಗಿ ನೋಡಿದೆನಲ್ಲಾ; ಆದರೂ ನನ್ನ ಪ್ರಾಣ ಉಳಿದಿದೆ” ಎಂದು ಹೇಳಿ ಆ ಸ್ಥಳಕ್ಕೆ ಪೆನೀಯೇಲ್ ಎಂದು ಹೆಸರಿಟ್ಟನು, 31ಅವನು, ಪೆನೂವೇಲನ್ನು ದಾಟುತ್ತಿರುವಾಗ ಸೂರ್ಯೋದಯವಾಯಿತು. ಆದರೆ ಯಾಕೋಬನು ತೊಡೆಯ ನೋವಿನ ನಿಮಿತ್ತ ಕುಂಟುತ್ತಾ ನಡೆದನು. 32ಆ ಪುರುಷನು ಯಾಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಇಸ್ರಾಯೇಲ್ಯರು ಇಂದಿನ ವರೆಗೂ ತೊಡೆಯ ಕೀಲಿನ ಮೇಲಿರುವ ಸೊಂಟದ ಮಾಂಸವನ್ನು ತಿನ್ನುವುದಿಲ್ಲ.

ಪ್ರತಿವಚನ ಕೀರ್ತನೆ

ಕೀರ್ತ 17:1–3, 6–8, 15

1ದಾವೀದನ ಪ್ರಾರ್ಥನೆ. ಯೆಹೋವನೇ, ನ್ಯಾಯವಾದುದನ್ನು ಆಲೈಸು; ನನ್ನ ಮೊರೆಗೆ ಲಕ್ಷ್ಯವಿಡು. ನನ್ನ ಪ್ರಾರ್ಥನೆಗೆ ಕಿವಿಗೊಡು; ಅದು ಕಪಟವಾದ ಬಾಯಿಂದ ಬಂದದ್ದಲ್ಲ. 2ನಿನ್ನಿಂದ ನನಗೆ ನ್ಯಾಯವಾದ ತೀರ್ಪು ಉಂಟಾಗಲಿ; ನೀನು ನೀತಿಗನುಸಾರವಾಗಿ ನೋಡುವವನಲ್ಲವೇ. 3ನೀನು ನನ್ನ ಹೃದಯವನ್ನು ಪರೀಕ್ಷಿಸಿದರೂ, ರಾತ್ರಿಯ ವೇಳೆ ವಿಚಾರಿಸಿದರೂ, ನನ್ನನ್ನು ಪುಟಕ್ಕೆ ಹಾಕಿ ಶೋಧಿಸಿದರೂ, ಯಾವ ದುರಾಲೋಚನೆಯಾದರೂ ನನ್ನಲ್ಲಿ ದೊರೆಯುವುದಿಲ್ಲ; ನನ್ನ ಬಾಯಿ ಮಾತುಗಳಲ್ಲಿ ತಪ್ಪುವುದಿಲ್ಲ ಎಂದು ತೀರ್ಮಾನಿಸಿದ್ದೇನೆ. 6ದೇವರೇ, ನನಗೆ ಸದುತ್ತರವನ್ನು ದಯಪಾಲಿಸುವಿಯೆಂದು ಮೊರೆಯಿಡುತ್ತೇನೆ, ಕಿವಿಗೊಟ್ಟು ಕೇಳು. 7ಭುಜಬಲವನ್ನು ಪ್ರಯೋಗಿಸಿ, ಶರಣಾಗತರನ್ನು ವಿರೋಧಿಗಳಿಂದ ರಕ್ಷಿಸುವಾತನೇ, ನಿನ್ನ ಪ್ರೀತಿಯನ್ನು ವಿಶೇಷವಾಗಿ ತೋರಿಸು. 8ನನ್ನನ್ನು ಸುತ್ತಿಕೊಂಡು ಬಾಧಿಸುತ್ತಿರುವ ದುಷ್ಟರಿಂದಲೂ, ಪ್ರಾಣವೈರಿಗಳಿಂದಲೂ ತಪ್ಪಿಸಿದ್ದಿ. 15ನಾನಾದರೋ ನಿರಪರಾಧಿಯು; ನಿನ್ನ ಸಾನ್ನಿಧ್ಯವನ್ನು ಸೇರುವೆನು. ನಾನು ಎಚ್ಚತ್ತಾಗ ನಿನ್ನ ನೀತಿಸ್ವರೂಪ ದರ್ಶನದಿಂದ ತೃಪ್ತನಾಗಿರುವೆನು.

ಸುವಾರ್ತೆ

ಮತ್ತಾ 9:32–38

32ಅವರು ಹೊರಟುಹೋಗುತ್ತಿರುವಾಗ ದೆವ್ವಹಿಡಿದ ಒಬ್ಬ ಮೂಕನನ್ನು ಯೇಸುವಿನ ಬಳಿಗೆ ಕರೆತಂದರು. 33ದೆವ್ವ ಬಿಡಿಸಿದ ಮೇಲೆ ಮೂಕನಾಗಿದ್ದ ಅವನು ಮಾತನಾಡುವವನಾದನು. ಅದಕ್ಕೆ ಜನರು, “ಇಸ್ರಾಯೇಲಿನಲ್ಲಿ ಇಂಥ ಕಾರ್ಯವನ್ನು ಇದುವರೆಗೂ ಯಾರೂ ನೋಡಲಿಲ್ಲವೆಂದು” ಆಶ್ಚರ್ಯಚಕಿತರಾದರು. 34ಆದರೆ ಫರಿಸಾಯರು, “ಇವನು ದೆವ್ವಗಳ ಒಡೆಯನ ಸಹಾಯದಿಂದಲೇ ದೆವ್ವಗಳನ್ನು ಬಿಡಿಸುತ್ತಾನೆ” ಎಂದು ಹೇಳಿದರು. 35ತರುವಾಯ ಯೇಸು ಎಲ್ಲಾ ಪಟ್ಟಣಗಳಲ್ಲೂ ಹಳ್ಳಿಗಳಲ್ಲೂ ಸಂಚರಿಸುತ್ತಾ ಅವರ ಸಭಾಮಂದಿರಗಳಲ್ಲಿ ಉಪದೇಶಮಾಡುತ್ತಾ ರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು. 36ಯೇಸು ಜನರ ಗುಂಪುಗಳನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ಚದುರಿರುವುದನ್ನು ಕಂಡು ಅವರ ಮೇಲೆ ಕನಿಕರಪಟ್ಟನು. 37ಆತನು ತನ್ನ ಶಿಷ್ಯರಿಗೆ, “ಬೆಳೆಯು ಬಹಳ ಇದೆ, ಆದರೆ ಕೆಲಸದವರು ಸ್ವಲ್ಪ. 38ಆದುದರಿಂದ ಬೆಳೆಯ ಯಜಮಾನನನ್ನು, ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಿಕೊಡಬೇಕೆಂದು ಬೇಡಿಕೊಳ್ಳಿರಿ” ಎಂದು ಹೇಳಿದನು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು