ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜುಲೈ 2027 › 2 ಜುಲೈ
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 2 ಜುಲೈ 2027
ಶುಕ್ರವಾರ · ಸಾಮಾನ್ಯ ಕಾಲದ 13ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 13ನೇ ವಾರದ ಶುಕ್ರವಾರ
ವಾರದ ದಿನ · ಆರಾಧನಾ ಬಣ್ಣ: ಹಸಿರು
ಉಪವಾಸ ಮತ್ತು ಪ್ರಾಯಶ್ಚಿತ್ತ
ಪ್ರಾಯಶ್ಚಿತ್ತದ ದಿನ
ಪ್ರತಿ ಶುಕ್ರವಾರವೂ ಪ್ರಾಯಶ್ಚಿತ್ತದ ದಿನ; ಅದನ್ನು ಹೇಗೆ ಆಚರಿಸಬೇಕು ಎಂಬುದನ್ನು ಪ್ರತಿಯೊಂದು ಬಿಷಪರ ಸಮ್ಮೇಳನ ನಿರ್ಧರಿಸುತ್ತದೆ: ಮಾಂಸ ವರ್ಜನೆ ಅಥವಾ ಬೇರೊಂದು ಪ್ರಾಯಶ್ಚಿತ್ತ ಕಾರ್ಯ. ಉಪವಾಸ 18 ರಿಂದ 59 ವರ್ಷದವರಿಗೆ, ಮಾಂಸ ವರ್ಜನೆ 14 ವರ್ಷದಿಂದ ಕಡ್ಡಾಯ.
ದಿನದ ವಾಚನಗಳು
ಮೊದಲನೆಯ ವಾಚನ
1ಸಾರಳು ನೂರಿಪ್ಪತ್ತೇಳು ವರ್ಷ ಬದುಕಿದಳು. ಇದು ಅವಳ ಒಟ್ಟು ಜೀವಮಾನ ಕಾಲದ ವರ್ಷಗಳು. 2ಸಾರಳು ಕಾನಾನ್ ದೇಶದಲ್ಲಿರುವ ಹೆಬ್ರೋನೆಂಬ ಕಿರ್ಯತರ್ಬದಲ್ಲಿ ಸತ್ತಳು. ಅಬ್ರಹಾಮನು ಬಂದು ಆಕೆಗಾಗಿ ಗೋಳಾಡಿ ಕಣ್ಣೀರು ಸುರಿಸಿದನು. 3ಆಮೇಲೆ ಆಕೆಯ ಶವದ ಬಳಿಯಿಂದ ಅಬ್ರಹಾಮನು ಎದ್ದು ಹಿತ್ತಿಯರ ಬಳಿಗೆ ಹೋಗಿ ಅವರಿಗೆ, 4“ನಾನು ನಿಮ್ಮಲ್ಲಿ ಪರದೇಶದವನೂ, ಪ್ರವಾಸಿಯೂ ಆಗಿದ್ದೇನೆ. ಈಗ ಮರಣಹೊಂದಿರುವ ನನ್ನ ಪತ್ನಿಯ ಸಮಾಧಿಗೋಸ್ಕರ ಸ್ವಲ್ಪ ಭೂಮಿಯನ್ನು ನನ್ನ ಸ್ವಂತಕ್ಕೆ ಕೊಡಿ” ಎಂದು ಕೇಳಿಕೊಂಡನು. 19ಇದಾದ ಮೇಲೆ ಅಬ್ರಹಾಮನು ತನ್ನ ಹೆಂಡತಿಯಾದ ಸಾರಳ ಶವವನ್ನು ಕಾನಾನ್ ದೇಶದಲ್ಲಿ ಹೆಬ್ರೋನೆಂಬ ಮಮ್ರೆಗೆ ಎದುರಾಗಿರುವ ಮಕ್ಪೇಲದ ಭೂಮಿಯಲ್ಲಿರುವ ಗವಿಯೊಳಗೆ ಹೂಣಿಟ್ಟನು. 24:1ಅಬ್ರಹಾಮನು ದಿನ ತುಂಬಿದ ವೃದ್ಧನಾಗಿದ್ದನು. ಯೆಹೋವನು ಅವನನ್ನು ಸಕಲ ವಿಷಯಗಳಲ್ಲಿ ಅಭಿವೃದ್ಧಿಪಡಿಸಿದ್ದನು. 2ಹೀಗಿರಲು ಅವನು ತನಗಿದ್ದ ಆಸ್ತಿಯ ಮೇಲೆ ಆಡಳಿತ ಮಾಡುತ್ತಿದ್ದ ಹಿರಿಯ ಸೇವಕನಿಗೆ ಅಬ್ರಹಾಮನು, “ನೀನು ನನ್ನ ತೊಡೆಯ ಕೆಳಗೆ ಕೈಯಿಡು ಅಂದನು. 3ಅನಂತರ ಯೆಹೋವನ ಆಣೆ ನಾನು ವಾಸವಾಗಿರುವ ಈ ಕಾನಾನ್ಯರ ಪುತ್ರಿಯರೊಳಗಿಂದ ನನ್ನ ಮಗನಾದ ಇಸಾಕನಿಗೆ ಹೆಣ್ಣನ್ನು ತಂದು ಮದುವೆ ಮಾಡದೆ, 4ನನ್ನ ದೇಶದ, ನನ್ನ ಸಂಬಂಧಿಕರೊಳಗಿಂದ ಇಸಾಕನಿಗೆ ಹೆಣ್ಣನ್ನು ತಂದು ಮದುವೆ ಮಾಡುತ್ತೇನೆ ಎಂದು ಪರಲೋಕದ ಮತ್ತು ಭೂಲೋಕದ ತಂದೆಯಾಗಿರುವ ಯೆಹೋವನ ಮೇಲೆ ಪ್ರಮಾಣ ಮಾಡಬೇಕು” ಎಂದು ಹೇಳಿದನು. 5ಅದಕ್ಕೆ ಆ ಸೇವಕನು, “ಒಂದು ವೇಳೆ ನನ್ನೊಡನೆ ಈ ದೇಶಕ್ಕೆ ಬರುವುದಕ್ಕೆ ಆ ಸ್ತ್ರೀಗೆ ಮನಸ್ಸಿಲ್ಲದೆ ಹೋದರೆ, ನೀನು ಬಿಟ್ಟು ಬಂದ ಆ ದೇಶಕ್ಕೆ ನಾನು ನಿನ್ನ ಮಗನನ್ನು ತಿರುಗಿ ಕರೆದುಕೊಂಡು ಹೋಗಬೇಕೋ?” ಎಂದು ಕೇಳಿದನು. 6ಅಬ್ರಹಾಮನು ಅವನಿಗೆ, “ಅಲ್ಲಿಗೆ ನನ್ನ ಮಗನನ್ನು ಎಂದಿಗೂ ಕರೆದುಕೊಂಡು ಹೋಗಲೇ ಬಾರದು. 7ನನ್ನ ತಂದೆಯ ಮನೆಯಿಂದಲೂ ನಾನು ಹುಟ್ಟಿದ ದೇಶದಿಂದಲೂ ನನ್ನನ್ನು ಕರತಂದು, ‘ನಿನ್ನ ಸಂತತಿಗೆ ಈ ದೇಶವನ್ನು ಕೊಡುವೆನು’ ಎಂದು ಪ್ರಮಾಣಮಾಡಿ ಹೇಳಿದ ಪರಲೋಕದ ದೇವರಾದ ಯೆಹೋವನು ನಿನ್ನ ಮುಂದೆ ತನ್ನ ದೂತನನ್ನು ಕಳುಹಿಸಿ, ನೀನು ಅಲ್ಲಿಂದ ನನ್ನ ಮಗನಿಗೋಸ್ಕರ ಹೆಣ್ಣನ್ನು ತೆಗೆದುಕೊಂಡು ಬರುವಂತೆ ಅನುಕೂಲಮಾಡುವನು. 8ನಿನ್ನನ್ನು ಹಿಂಬಾಲಿಸಿ ಬರುವುದಕ್ಕೆ ಆ ಸ್ತ್ರೀಗೆ ಮನಸ್ಸಿಲ್ಲದೆ ಹೋದರೆ ನಾನು ಮಾಡಿಸಿದ ಪ್ರಮಾಣದಿಂದ ನೀನು ಬಿಡುಗಡೆಯಾಗಿರುವಿ. ಆದರೆ ನನ್ನ ಮಗನನ್ನು ತಿರುಗಿ ಅಲ್ಲಿಗೆ ಕರೆದುಕೊಂಡು ಹೋಗಬಾರದು” ಎಂದು ಹೇಳಿದನು. 62ಅಷ್ಟರಲ್ಲಿ ಇಸಾಕನು ಬೆರ್ ಲಹೈರೋಯಿ ಬಾವಿಗೆ ಹೋಗಿ ಬಂದಿದ್ದನು; ಅವನು ಕಾನಾನ್ ದೇಶದ ದಕ್ಷಿಣ ಸೀಮೆಯಲ್ಲಿ ವಾಸವಾಗಿದ್ದನು. 63ಇಸಾಕನು ಸಂಜೆ ವೇಳೆಯಲ್ಲಿ ಧ್ಯಾನ ಮಾಡುವುದಕ್ಕಾಗಿ ಬಯಲು ಪ್ರದೇಶಕ್ಕೆ ಹೋಗಿದ್ದನು. ಅಲ್ಲಿ ಕಣ್ಣೆತ್ತಿ ನೋಡಲಾಗಿ ಒಂಟೆಗಳು ಬರುವುದನ್ನು ಕಂಡನು. 64ರೆಬೆಕ್ಕಳು ಕಣ್ಣೆತ್ತಿ ಇಸಾಕನನ್ನು ನೋಡಿ ಒಂಟೆಯಿಂದ ಕೆಳಗೆ ಇಳಿದಳು. 65ಆಕೆಯು ಆ ಸೇವಕನಿಗೆ, “ನಮ್ಮನ್ನು ಎದುರುಗೊಳ್ಳುವುದಕ್ಕೆ ಅಡವಿಯಲ್ಲಿ ನಡೆದು ಬರುವ ಆ ಮನುಷ್ಯನು ಯಾರು?” ಎಂದು ಕೇಳಿದಳು. ಅವನೇ ನನ್ನ ದಣಿಯೆಂದು ಅವನು ಹೇಳಿದಾಗ ಆಕೆ ಮುಸುಕು ಹಾಕಿಕೊಂಡಳು. 66ಆ ಸೇವಕನು ತಾನು ಮಾಡಿದ ಕಾರ್ಯಗಳನ್ನೆಲ್ಲಾ ಇಸಾಕನಿಗೆ ತಿಳಿಸಿದ ನಂತರ ಇಸಾಕನು ಆಕೆಯನ್ನು ತನ್ನ ತಾಯಿಯಾದ ಸಾರಳ ಗುಡಾರಕ್ಕೆ ಕರೆದುಕೊಂಡು ಹೋದನು. 67ಈ ರೀತಿಯಾಗಿ ಇಸಾಕನು ರೆಬೆಕ್ಕಳನ್ನು ವರಿಸಿದನು, ಆಕೆ ಅವನ ಹೆಂಡತಿಯಾದಳು. ಅವನು ಆಕೆಯನ್ನು ಪ್ರೀತಿಸಿ ತನ್ನ ತಾಯಿ ಸಾರಳು ಸತ್ತ ದುಃಖವನ್ನು ಶಮನ ಮಾಡಿಕೊಂಡನು.
ಪ್ರತಿವಚನ ಕೀರ್ತನೆ
1ಯೆಹೋವನಿಗೆ ಸ್ತೋತ್ರ! ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ. ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾಗಿರುವುದು. 2ಯೆಹೋವನ ಮಹತ್ಕಾರ್ಯಗಳನ್ನು ಯಾರು ವರ್ಣಿಸಬಲ್ಲರು? ಆತನನ್ನು ತಕ್ಕಂತೆ ಕೀರ್ತಿಸುವುದು ಯಾರಿಂದಾದೀತು? 3ಯಾವಾಗಲೂ ನ್ಯಾಯವನ್ನು ಕಾಪಾಡುವವರೂ, ನೀತಿಯನ್ನು ಪಾಲಿಸುವವರೂ ಧನ್ಯರು. 4ಯೆಹೋವನೇ, ನನ್ನನ್ನು ನೆನಪುಮಾಡಿಕೊಂಡು, ನಿನ್ನ ಪ್ರಜೆಗೆ ತೋರಿಸುವ ದಯೆಯನ್ನು ನನಗೂ ತೋರಿಸು. ನನ್ನನ್ನು ರಕ್ಷಿಸಲಿಕ್ಕೆ ಬಾ, 5ಆಗ ನೀನು ಆರಿಸಿಕೊಂಡ ಪ್ರಜೆಯ ಏಳಿಗೆಯನ್ನು ನೋಡಿ, ನಾನೂ ಅವರೊಂದಿಗೆ ಸಂತೋಷಿಸುವೆನು; ನಿನ್ನ ಸ್ವಕೀಯರೊಂದಿಗೆ ನಾನೂ ಹಿಗ್ಗುವೆನು.
ಸುವಾರ್ತೆ
9ಯೇಸು ಅಲ್ಲಿಂದ ಹಾದು ಹೋಗುತ್ತಿರುವಾಗ, ಸುಂಕ ಸಂಗ್ರಹಣೆ ಕಟ್ಟೆಯಲ್ಲಿ ಕುಳಿತಿದ್ದ ಮತ್ತಾಯನೆಂಬ ಒಬ್ಬ ಮನುಷ್ಯನನ್ನು ನೋಡಿ, “ನನ್ನನ್ನು ಹಿಂಬಾಲಿಸು” ಎಂದು ಅವನನ್ನು ಕರೆಯಲು ಅವನು ಎದ್ದು ಆತನನ್ನು ಹಿಂಬಾಲಿಸಿದನು. 10ಅನಂತರ ಯೇಸು ಅವನ ಮನೆಯಲ್ಲಿ ಊಟಕ್ಕೆ ಕುಳಿತಿರುವಾಗ ಬಹು ಮಂದಿ ಸುಂಕದವರೂ ಪಾಪಿಗಳೂ ಬಂದು ಯೇಸುವಿನ ಮತ್ತು ಆತನ ಶಿಷ್ಯರ ಪಂಕ್ತಿಯಲ್ಲೇ ಕುಳಿತುಕೊಂಡರು. 11ಅದನ್ನು ನೋಡಿದ ಫರಿಸಾಯರು ಆತನ ಶಿಷ್ಯರನ್ನು, “ನಿಮ್ಮ ಗುರುವು ಸುಂಕದವರು ಮತ್ತು ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?” ಎಂದು ಕೇಳಿದರು. 12ಯೇಸು ಅದನ್ನು ಕೇಳಿ, “ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು. 13ನೀವು ಹೋಗಿ, ‘ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ’ ಎಂಬ ಮಾತಿನ ಅರ್ಥವನ್ನು ಕಲಿತುಕೊಳ್ಳಿರಿ. ನಾನು ನೀತಿವಂತರನ್ನು ಕರೆಯುವುದಕ್ಕೆ ಬಂದವನಲ್ಲ, ಆದರೆ ಪಾಪಿಗಳನ್ನು ಕರೆಯುವುದಕ್ಕೆ ಬಂದವನು” ಅಂದನು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು