ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜೂನ್ 2027 › 29 ಜೂನ್
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 29 ಜೂನ್ 2027
ಮಂಗಳವಾರ · ಸಾಮಾನ್ಯ ಕಾಲದ 13ನೇ ವಾರ
ಹಬ್ಬಗಳು ಮತ್ತು ಸಂತರು
ಸಂತರಾದ ಪೇತ್ರ ಮತ್ತು ಪೌಲ, ಅಪೊಸ್ತಲರು
ಮಹೋತ್ಸವ · ಆರಾಧನಾ ಬಣ್ಣ: ಕೆಂಪು
ದಿನದ ವಾಚನಗಳು
ಮೊದಲನೆಯ ವಾಚನ
1ಆ ಸಮಯದಲ್ಲೇ ಅರಸನಾದ ಹೆರೋದನು ಸಭೆಯವರಲ್ಲಿ ಕೆಲವರನ್ನು ಹಿಂಸೆಪಡಿಸುವುದಕ್ಕೆ ಕೈಹಾಕಿದನು. 2ಯೋಹಾನನ ಅಣ್ಣನಾದ ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು. 3ಇದು ಯೆಹೂದ್ಯರಿಗೆ ಮೆಚ್ಚಿಕೆಯಾಗಿದೆ ಎಂದು ತಿಳಿದು, ಅಷ್ಟಕ್ಕೆ ನಿಲ್ಲದೆ ಪೇತ್ರನನ್ನೂ ಬಂಧಿಸಿದನು. ಆ ಕಾಲದಲ್ಲಿ ಪಸ್ಕಹಬ್ಬ ಅಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬ ನಡೆಯುತ್ತಿತ್ತು. 4ಅವನನ್ನು ಪಸ್ಕ ಹಬ್ಬವಾದ ಮೇಲೆ ಜನರ ಮುಂದೆ ತರಿಸಬೇಕೆಂಬ ಯೋಚನೆಯಿಂದ ಸೆರೆಯಲ್ಲಿ ಹಾಕಿಸಿ ಅವನನ್ನು ಕಾಯಲಿಕ್ಕೆ ನಾಲ್ಕು ನಾಲ್ಕು ಸಿಪಾಯಿಗಳಿದ್ದ ನಾಲ್ಕು ಗುಂಪುಗಳ ವಶಕ್ಕೆ ಕೊಟ್ಟನು. 5ಪೇತ್ರನು ಸೆರೆಮನೆಯೊಳಗೆ ಕಾವಲಲ್ಲಿದ್ದಾಗ, ಸಭೆಯವರು ಅವನಿಗೋಸ್ಕರ ಆಸಕ್ತಿಯಿಂದ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದರು. 6ಹೆರೋದನು ಅವನನ್ನು ಜನರ ಮುಂದೆ ತರಿಸಬೇಕೆಂದಿದ್ದ ದಿನದ ಹಿಂದಿನ ರಾತ್ರಿಯಲ್ಲಿ, ಪೇತ್ರನು ಎರಡು ಸರಪಣಿಗಳಿಂದ ಕಟ್ಟಲ್ಪಟ್ಟವನಾಗಿ, ಇಬ್ಬರು ಸಿಪಾಯಿಗಳ ನಡುವೆ ನಿದ್ದೆಮಾಡುತ್ತಿದ್ದನು. ಕಾವಲುಗಾರರು ಬಾಗಿಲ ಮುಂದೆ ನಿಂತು ಸೆರೆಮನೆಯನ್ನು ಕಾಯುತ್ತಿದ್ದರು. 7ಫಕ್ಕನೆ ಕರ್ತನ ದೂತನು ಪೇತ್ರನೆದುರಿಗೆ ನಿಂತನು; ಅವನಿದ್ದ ಕೋಣೆಯಲ್ಲಿ ಬೆಳಕು ಹೊಳೆಯಿತು. ಅವನು ಪೇತ್ರನ ಪಕ್ಕೆಯನ್ನು ತಟ್ಟಿ ಎಬ್ಬಿಸಿ; “ತಟ್ಟನೆ ಏಳು” ಅಂದನು. ಆಗಲೇ ಅವನ ಕೈಗಳಿಗೆ ಹಾಕಿದ್ದ ಸರಪಣಿಗಳು ಕಳಚಿಬಿದ್ದವು. 8ಆ ದೂತನು ಅವನಿಗೆ; “ನಡುಕಟ್ಟಿಕೊಂಡು, ನಿನ್ನ ಕೆರಗಳನ್ನು ಮೆಟ್ಟಿಕೋ” ಎಂದು ಹೇಳಲು, ಅವನು ಹಾಗೆಯೇ ಮಾಡಿದನು. “ನಿನ್ನ ಮೇಲಂಗಿಯನ್ನು ಹಾಕಿಕೊಂಡು ನನ್ನ ಹಿಂದೆ ಬಾ” ಅಂದನು. 9ಅವನು ಹೊರಗೆ ಬಂದು ಆ ದೂತನ ಹಿಂದೆಯೇ ಹೋಗುತ್ತಾ, ದೂತನ ಮೂಲಕವಾಗಿ ನಡೆದ ಸಂಗತಿ ನಿಜವಾದದ್ದೆಂದು ತಿಳಿಯದೆ ತಾನು ನೋಡಿದ್ದು ಕನಸು ಎಂದು ತಿಳಿದನು. 10ಅವರು ಮೊದಲನೆಯ ಮತ್ತು ಎರಡನೆಯ ಕಾವಲುಗಳನ್ನು ದಾಟಿ, ಪಟ್ಟಣಕ್ಕೆ ಹೋಗುವ ಕಬ್ಬಿಣದ ಬಾಗಿಲಿಗೆ ಬಂದಾಗ ಅದು ತನ್ನಷ್ಟಕ್ಕೆ ತಾನೇ ಅವರಿಗೆ ತೆರೆಯಿತು; ಅವರು ಹೊರಗೆ ಬಂದು ಒಂದು ಬೀದಿಯನ್ನು ದಾಟಿದರು; ಕೂಡಲೇ ಆ ದೂತನು ಅವನನ್ನು ಬಿಟ್ಟು ಹೋದನು. 11ಆಗ ಪೇತ್ರನು ಎಚ್ಚರಗೊಂಡು; “ಕರ್ತನು ತನ್ನ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ, ಯೆಹೂದ್ಯಜನರು ನನಗೆ ಮಾಡಬೇಕೆಂದಿದ್ದ ಕೇಡಿನಿಂದಲೂ, ನನ್ನನ್ನು ಬಿಡಿಸಿದನೆಂದು ನನಗೀಗ ನಿಜವಾಗಿ ತಿಳಿಯಿತು” ಎಂದು ಅಂದುಕೊಂಡನು.
ಪ್ರತಿವಚನ ಕೀರ್ತನೆ
1ದಾವೀದನು ಅಬೀಮೆಲೆಕನ ಎದುರಿನಲ್ಲಿ ಹುಚ್ಚನಂತೆ ತೋರ್ಪಡಿಸಿಕೊಂಡು ಅವನ ಬಳಿಯಿಂದ ಹೊರಟಾಗ ರಚಿಸಿದ ಕೀರ್ತನೆ. ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು; ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವುದು. 2ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವುದು; ಇದನ್ನು ದೀನರು ಕೇಳಿ ಸಂತೋಷಿಸುವರು. 3ನನ್ನೊಡನೆ ಯೆಹೋವನನ್ನು ಕೊಂಡಾಡಿರಿ; ನಾವು ಒಟ್ಟಾಗಿ ಆತನ ಹೆಸರನ್ನು ಘನಪಡಿಸೋಣ. 4ನಾನು ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳಲು, ಆತನು ಸದುತ್ತರವನ್ನು ಕೊಟ್ಟು ಎಲ್ಲಾ ಭೀತಿಯಿಂದ ನನ್ನನ್ನು ತಪ್ಪಿಸಿದನು. 5ಆತನನ್ನೇ ದೃಷ್ಟಿಸಿದವರು ಪ್ರಕಾಶವನ್ನು ಹೊಂದಿದರು; ಅವರ ಮುಖವು ಅವಮಾನಕ್ಕೆ ಈಡಾಗುವುದೇ ಇಲ್ಲ. 6ಕಷ್ಟದಲ್ಲಿದ್ದ ಈ ಮನುಷ್ಯನು ಮೊರೆಯಿಡಲು, ಯೆಹೋವನು ಕೇಳಿ ಎಲ್ಲಾ ಬಾಧೆಗಳಿಂದ ಬಿಡಿಸಿದನು. 7ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು, ಆತನ ದೂತನು ದಂಡಿಳಿಸಿ, ಕಾವಲಾಗಿದ್ದು ಕಾಪಾಡುತ್ತಾನೆ. 8ಯೆಹೋವನು ಸರ್ವೋತ್ತಮನೆಂದು ಅನುಭವದಿಂದ ತಿಳಿದುಕೊಳ್ಳಿರಿ; ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಧನ್ಯರು.
ಎರಡನೆಯ ವಾಚನ
6ಯಾಕೆಂದರೆ ನಾನಂತೂ ಈಗಲೇ ಪಾನದ್ರವ್ಯವಾಗಿ ಅರ್ಪಿತನಾಗುತ್ತಾ ಇದ್ದೇನೆ. ನನ್ನ ನಿರ್ಗಮನದ ಸಮಯವು ಸಮೀಪವಾಗುತ್ತಾ ಬಂದಿದೆ. 7ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಓಡಿಮುಗಿಸಿದ್ದೇನೆ, ಕ್ರಿಸ್ತ ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ. 8ನೀತಿವಂತರಿಗೆ ದೊರಕುವ ಜಯಮಾಲೆಯು ಮುಂದೆ ನನಗಾಗಿ ಸಿದ್ಧವಾಗಿದೆ, ಅದನ್ನು ನೀತಿವಂತನಾದ ನ್ಯಾಯಾಧಿಪತಿಯಾಗಿರುವ ಕರ್ತನು ಆ ದಿನದಲ್ಲಿ ನನಗೆ ಕೊಡುವನು, ನನಗೆ ಮಾತ್ರವಲ್ಲದೆ ತನ್ನ ಪ್ರತ್ಯಕ್ಷತೆಯನ್ನು ಪ್ರೀತಿಸುವವರೆಲ್ಲರಿಗೂ ಕೊಡುವನು. 17ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸುವಾರ್ತೆಯು ಸಂಪೂರ್ಣವಾಗಿ ಸಾರಲ್ಪಡುವಂತೆಯೂ, ಅನ್ಯ ಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು. ಇದಲ್ಲದೆ ಆತನು ನನ್ನನ್ನು ಸಿಂಹದ ಬಾಯೊಳಗಿಂದ ತಪ್ಪಿಸಿದನು. 18ಪ್ರತಿಯೊಂದು ದುಷ್ಕೃತ್ಯದಿಂದ ಕರ್ತನು ನನ್ನನ್ನು ಕಾಪಾಡಿ ತನ್ನೊಂದಿಗೆ ಪರಲೋಕ ರಾಜ್ಯಕ್ಕೆ ಸೇರಿಸುವನು. ಯುಗಯುಗಾಂತರಗಳಲ್ಲಿಯೂ ಆತನಿಗೆ ಸ್ತೋತ್ರ. ಆಮೆನ್.
ಸುವಾರ್ತೆ
13ಯೇಸು ಫಿಲಿಪ್ಪನ ಕೈಸರೈಯ ಎಂಬ ಪಟ್ಟಣದ ಪ್ರಾಂತ್ಯಕ್ಕೆ ಬಂದಾಗ, “ಜನರು ಮನುಷ್ಯಕುಮಾರನಾದ ನನ್ನನ್ನು ಯಾರೆಂದು ಹೇಳುತ್ತಾರೆ” ಎಂದು ತನ್ನ ಶಿಷ್ಯರನ್ನು ಕೇಳಿದನು. 14ಅವರು, “ನಿನ್ನನ್ನು ಕೆಲವರು ಸ್ನಾನಿಕನಾದ ಯೋಹಾನನು ಅನ್ನುತ್ತಾರೆ, ಕೆಲವರು ಎಲೀಯನು ಅನ್ನುತ್ತಾರೆ ಮತ್ತು ಬೇರೆಯವರು ಯೆರಮೀಯನು, ಇಲ್ಲವೆ ಪ್ರವಾದಿಗಳಲ್ಲಿ ಒಬ್ಬನು” ಅನ್ನುತ್ತಾರೆ ಎಂದು ಹೇಳಿದರು. 15ಆತನು ಅವರನ್ನು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ ಎಂದು ಕೇಳಿದನು?” 16ಆಗ ಸೀಮೋನ ಪೇತ್ರನು, “ನೀನು ಜೀವವುಳ್ಳ ದೇವರ ಕುಮಾರನಾದ ಕ್ರಿಸ್ತನು” ಎಂದು ಉತ್ತರ ಕೊಟ್ಟನು. 17ಅದಕ್ಕೆ ಯೇಸು, “ಯೋನನ ಮಗನಾದ ಸೀಮೋನನೇ, ನೀನು ಧನ್ಯನು. ಏಕೆಂದರೆ ಇದು ಮನುಷ್ಯನಿಂದ ನಿನಗೆ ಪ್ರಕಟವಾಗಿಲ್ಲ, ಪರಲೋಕದಲ್ಲಿರುವ ನನ್ನ ತಂದೆಯೇ ಇದನ್ನೂ ನಿನಗೆ ಪ್ರಕಟಪಡಿಸಿರುವನು” ಎಂದು ಹೇಳಿದನು. 18ನಾನು ಇದನ್ನು ಸಹ ನಿನಗೆ ಹೇಳುತ್ತೇನೆ, “ನೀನು ಪೇತ್ರನು, ಈ ಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು. ಪಾತಾಳದ ಶಕ್ತಿಗಳು ಅದನ್ನು ಸೋಲಿಸಲಾರವು. 19ಪರಲೋಕ ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಭೂಲೋಕದಲ್ಲಿ ನೀನು ಯಾವುದನ್ನು ಕಟ್ಟುತ್ತೀಯೋ ಅದು ಪರಲೋಕದಲ್ಲಿಯೂ ಕಟ್ಟಲ್ಪಟ್ಟಿರುವುದು. ಮತ್ತು ಭೂಲೋಕದಲ್ಲಿ ನೀನು ಯಾವುದನ್ನು ಬಿಚ್ಚುತ್ತೀಯೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪಟ್ಟಿರುವುದು” ಅಂದನು.
ಇಂದಿನ ಸಂತರು
- ಸಂತರಾದ ಪೇತ್ರ ಮತ್ತು ಪೌಲ, ಅಪೊಸ್ತಲರು
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು