Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜೂನ್ 2027 › 24 ಜೂನ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 24 ಜೂನ್ 2027

ಗುರುವಾರ · ಸಾಮಾನ್ಯ ಕಾಲದ 12ನೇ ವಾರ

ಹಬ್ಬಗಳು ಮತ್ತು ಸಂತರು

ಸ್ನಾನಿಕನಾದ ಸಂತ ಯೋಹಾನನ ಜನನ

ಮಹೋತ್ಸವ · ಆರಾಧನಾ ಬಣ್ಣ: ಬಿಳಿ

ದಿನದ ವಾಚನಗಳು

ಮೊದಲನೆಯ ವಾಚನ

ಯೆಶಾ 49:1–6

1ದ್ವೀಪನಿವಾಸಿಗಳೇ, ನನ್ನ ಕಡೆಗೆ ಕಿವಿಗೊಡಿರಿ, ದೂರದ ಜನಾಂಗಗಳೇ, ಆಲಿಸಿರಿ! ನಾನು ಗರ್ಭದಲ್ಲಿದ್ದಾಗಲೇ ಯೆಹೋವನು ನನ್ನನ್ನು ಕರೆದನು, ತಾಯಿಯ ಉದರದಲ್ಲಿದ್ದಂದಿನಿಂದಲೂ ನನ್ನ ಹೆಸರನ್ನು ಹೇಳುತ್ತಿದ್ದಾನೆ. 2ನನ್ನ ಬಾಯಿಯನ್ನು ಹದವಾದ ಖಡ್ಗವನ್ನಾಗಿ ಮಾಡಿ, ತನ್ನ ಕೈಯ ನೆರಳಿನಲ್ಲಿ ನನ್ನನ್ನು ಹುದುಗಿಸಿದ್ದಾನೆ. ನನ್ನನ್ನು ಚೂಪಾದ ಬಾಣವನ್ನಾಗಿ ರೂಪಿಸಿ, ತನ್ನ ಬತ್ತಳಿಕೆಯಲ್ಲಿ ಮುಚ್ಚಿಟ್ಟಿದ್ದಾನೆ. 3ಆತನು ನನಗೆ, “ನೀನು ನನ್ನ ಸೇವಕನೂ, ನಾನು ಪ್ರಭಾವಹೊಂದಬೇಕಾದ ಇಸ್ರಾಯೇಲೂ ಆಗಿದ್ದೀ” ಎಂದು ಹೇಳಿದನು. 4ಅದಕ್ಕೆ ನಾನು, “ನಾನು ಪಡುವ ಪ್ರಯಾಸವು ವ್ಯರ್ಥ, ನನ್ನ ಶಕ್ತಿಯನ್ನೆಲ್ಲಾ ಉಪಯೋಗಮಾಡಿದ್ದು ಹಾಳೇ, ಬರಿ ಗಾಳಿಯೇ. ಆದರೂ ನನ್ನ ನ್ಯಾಯವು ಯೆಹೋವನಲ್ಲಿದೆ. ನನಗೆ ಲಾಭವು ನನ್ನ ದೇವರಿಂದಲೇ ಆಗುವುದು” ಎಂದು ಅಂದುಕೊಂಡೆನು. 5ಆಹಾ, ನಾನು ಯೆಹೋವನ ದೃಷ್ಟಿಯಲ್ಲಿ ಮಾನ್ಯನು, ನನ್ನ ದೇವರೇ ನನಗೆ ಬಲವು. ಯಾಕೋಬ್ಯರನ್ನು ತನ್ನ ಕಡೆಗೆ ಸೇರಿಸಿಕೊಳ್ಳಬೇಕೆಂತಲೂ, ಇಸ್ರಾಯೇಲ್ ತನ್ನ ಕಡೆಗೆ ಕೂಡಿಬರಬೇಕೆಂತಲೂ ಆತನು ಗರ್ಭದಲ್ಲಿಯೇ ನನ್ನನ್ನು ತನ್ನ ಸೇವಕನನ್ನಾಗಿ ರೂಪಿಸಿದನಲ್ಲವೆ. 6ಆತನು ಹೀಗೆನ್ನುತ್ತಾನೆ, “ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬಿನ ಕುಲಗಳನ್ನು ಉನ್ನತಪಡಿಸುವುದೂ, ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರುಗಿ ಬರಮಾಡುವುದೂ ಅಲ್ಪ ಕಾರ್ಯವೇ ಸರಿ. ನನ್ನ ರಕ್ಷಣೆಯು ಲೋಕದ ಕಟ್ಟಕಡೆಯವರೆಗೆ ವ್ಯಾಪಿಸುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ದಯಪಾಲಿಸುವೆನು.”

ಪ್ರತಿವಚನ ಕೀರ್ತನೆ

ಕೀರ್ತ 139:1–3, 13–15

1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ. ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ತಿಳಿದುಕೊಂಡಿದ್ದೀ; 2ನಾನು ಕುಳಿತುಕೊಳ್ಳುವುದು, ಏಳುವುದು ನಿನಗೆ ಗೊತ್ತಿದೆ, ದೂರದಿಂದಲೇ ನನ್ನ ಆಲೋಚನೆಗಳನ್ನು ಬಲ್ಲವನಾಗಿರುತ್ತಿ. 3ನಾನು ನಡೆಯುವುದನ್ನು, ಮಲಗುವುದನ್ನು ಶೋಧಿಸಿ ಗ್ರಹಿಸಿಕೊಳ್ಳುತ್ತಿ, ನನ್ನ ನಡತೆಯೆಲ್ಲಾ ನಿನಗೆ ಗೋಚರವಾಗಿದೆ. 13ನನ್ನ ಅಂತರಿಂದ್ರಿಯಗಳನ್ನು ಉಂಟುಮಾಡಿದವನೂ, ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನಲ್ಲವೋ? 14ನೀನು ನನ್ನನ್ನು ಅದ್ಭುತವಾಗಿಯೂ, ವಿಚಿತ್ರವಾಗಿಯೂ ರಚಿಸಿದ್ದರಿಂದ, ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು, ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ. 15ನಾನು ಗುಪ್ತಸ್ಥಳದಲ್ಲಿ ಏರ್ಪಡುತ್ತಾ, ಭೂಗರ್ಭದಲ್ಲಿ ರಚಿಸಲ್ಪಡುತ್ತಾ ಇದ್ದಾಗ, ನನ್ನ ಅಸ್ಥಿಪಂಜರವು ನಿನಗೆ ಮರೆಯಾಗಿದ್ದಿಲ್ಲ.

ಎರಡನೆಯ ವಾಚನ

ಅ. ಕೃ 13:22–26

22ಆ ಮೇಲೆ ದೇವರು ಅವನನ್ನು ತೆಗೆದುಹಾಕಿ ದಾವೀದನನ್ನು ಅವರ ಮೇಲೆ ಅರಸನನ್ನಾಗಿ ನೇಮಕಮಾಡಿ; ‘ಇಷಯನ ಮಗನಾದ ದಾವೀದನು ನನಗೆ ಸಿಕ್ಕಿದನು, ಅವನು ನನ್ನ ಹೃದಯಕ್ಕೆ ಒಪ್ಪುವ ಮನುಷ್ಯನು, ಅವನು ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವನು’ ಎಂಬುದಾಗಿ ಅವನ ವಿಷಯವಾಗಿ ಸಾಕ್ಷಿಹೇಳಿದನು. 23“ಅವನ ಸಂತಾನದಿಂದ ದೇವರು ತನ್ನ ವಾಗ್ದಾನದ ಪ್ರಕಾರ ಇಸ್ರಾಯೇಲರಿಗೆ ಒಬ್ಬ ರಕ್ಷಕನನ್ನು ಹುಟ್ಟಿಸಿದ್ದಾನೆ. 24ಆ ರಕ್ಷಕನೇ ಯೇಸು, ಆತನ ಆಗಮನಕ್ಕೆ ಮೊದಲು ಯೋಹಾನನು ಇಸ್ರಾಯೇಲ್ ಜನರೆಲ್ಲರಿಗೆ, ನೀವು ದೇವರ ಕಡೆಗೆ ತಿರುಗಿಕೊಂಡು ಪಶ್ಚಾತ್ತಾಪದ ದೀಕ್ಷಾಸ್ನಾನಮಾಡಿಸಿಕೊಳ್ಳಬೇಕೆಂದು ಸಾರಿದನು. 25ಯೋಹಾನನು ತನ್ನ ಸೇವೆಯನ್ನು ಪೂರೈಸುತ್ತಿರುವಾಗ ಜನರಿಗೆ; ‘ನನ್ನನ್ನು ಯಾರೆಂದು ಯೋಚಿಸುತ್ತೀರಿ? ನಾನು ಆತನಲ್ಲ, ಆದರೆ ನನ್ನ ಹಿಂದೆ ಒಬ್ಬನು ಬರುತ್ತಾನೆ, ಆತನ ಪಾದರಕ್ಷೆಯನ್ನು ಬಿಚ್ಚುವುದಕ್ಕೆ ನಾನು ಯೋಗ್ಯನಲ್ಲ’ ಎಂದು ಹೇಳಿದನು. 26“ಸಹೋದರರೇ, ಅಬ್ರಹಾಮನ ವಂಶಸ್ಥರೇ, ಮತ್ತು ನಿಮ್ಮೊಂದಿಗಿರುವ ಯೆಹೂದ್ಯಮತಾವಲಂಬಿಗಳೇ, ನಮಗೆ ಈ ರಕ್ಷಣೆಯ ವಾಕ್ಯವು ಕಳುಹಿಸಲ್ಪಟ್ಟಿದೆ.

ಸುವಾರ್ತೆ

ಲೂಕ 1:57–66, 80

57ಹೆರಿಗೆಕಾಲ ಬಂದಾಗ ಎಲಿಸಬೇತಳು ಗಂಡು ಮಗುವನ್ನು ಹೆತ್ತಳು. 58ಆಕೆಯ ನೆರೆಹೊರೆಯವರೂ ಬಂಧುಬಾಂಧವರೂ ಆಕೆಯ ಮೇಲೆ ಕರ್ತನು ತನ್ನ ವಿಶೇಷ ದಯೆಯನ್ನು ತೋರಿಸಿದ್ದಾನೆಂಬುದನ್ನು ಕೇಳಿ ಆಕೆಯ ಸಂಗಡ ಸಂತೋಷಪಟ್ಟರು. 59ಎಂಟನೆಯ ದಿನದಲ್ಲಿ ಅವರು ಆ ಮಗುವಿಗೆ ಸುನ್ನತಿಮಾಡುವುದಕ್ಕಾಗಿ ಬಂದು ಅದಕ್ಕೆ ಜಕರೀಯನೆಂದು ತಂದೆಯ ಹೆಸರನ್ನು ಇಡಬೇಕೆಂದಿದ್ದರು. 60ಈ ವಿಷಯದಲ್ಲಿ ಎಲಿಸಬೇತಳು “ಅದು ಬೇಡ, ಯೋಹಾನನೆಂದು ಹೆಸರಿಡಬೇಕು” ಅನ್ನಲು, 61ಅವರು, “ನಿನ್ನ ಬಂಧುಬಾಂಧವರಲ್ಲಿ ಈ ಹೆಸರಿನವರು ಒಬ್ಬರಾದರೂ ಇಲ್ಲವಲ್ಲಾ” ಎಂದು ಆಕೆಗೆ ಹೇಳಿದರು. 62ಇದಕ್ಕೆ ಏನು ಹೆಸರಿಡಬೇಕೆಂದಿರುತ್ತೀ ಎಂಬುದಾಗಿ ಜಕರೀಯನಿಗೆ ಸನ್ನೆಮಾಡಿ ಕೇಳಿದರು. 63ಅವನು ಒಂದು ಹಲಗೆಯನ್ನು ತರಿಸಿಕೊಂಡು, “ಆತನ ಹೆಸರು ಯೋಹಾನನು” ಎಂದು ಬರೆದನು. ಅದಕ್ಕೆ ಎಲ್ಲರೂ ಆಶ್ಚರ್ಯಪಟ್ಟರು. 64ಕೂಡಲೆ ಅವನ ಬಾಯಿ ತೆರೆಯಲ್ಪಟ್ಟು, ನಾಲಿಗೆ ಸಡಿಲವಾಯಿತು, ಅವನು ಮಾತನಾಡುವವನಾಗಿ ದೇವರನ್ನು ಕೊಂಡಾಡಿದನು. 65ಇದನ್ನು ಕೇಳಿದ ನೆರೆಹೊರೆಯವರಿಗೆಲ್ಲಾ ಹೆದರಿಕೆಯುಂಟಾಯಿತು ಮತ್ತು ಈ ಎಲ್ಲಾ ಸಂಗತಿಗಳನ್ನು ಕುರಿತು ಯೂದಾಯದ ಮಲೆನಾಡಿನಲ್ಲೆಲ್ಲಾ ಮಾತನಾಡಿಕೊಳ್ಳುತ್ತಿದ್ದರು. 66ಈ ಸಂಗತಿಗಳನ್ನು ಕೇಳಿದವರೆಲ್ಲರೂ, “ಆಹಾ, ಈ ಕೂಸು ಎಂಥವನಾಗುವನೋ?” ಅಂದುಕೊಂಡರು, ಆದರೆ ಕರ್ತನ ಅಭಯ ಹಸ್ತವು ಅವನ ಮೇಲೆ ಇತ್ತು. 80ಆ ಬಾಲಕನು ಬೆಳೆದು ಆತ್ಮದಲ್ಲಿ ಬಲವುಳ್ಳವನಾದನು. ಮತ್ತು ಇಸ್ರಾಯೇಲ್ ಜನರಿಗೆ ತನ್ನನ್ನು ತೋರ್ಪಡಿಸಿಕೊಳ್ಳುವ ದಿನದವರೆಗೂ ಮರುಭೂಮಿಯ ಪ್ರದೇಶಗಳಲ್ಲಿ ಇದ್ದನು.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು