Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಜೂನ್ 2027 › 25 ಜೂನ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 25 ಜೂನ್ 2027

ಶುಕ್ರವಾರ · ಸಾಮಾನ್ಯ ಕಾಲದ 12ನೇ ವಾರ

ಹಬ್ಬಗಳು ಮತ್ತು ಸಂತರು

ಸಾಮಾನ್ಯ ಕಾಲದ 12ನೇ ವಾರದ ಶುಕ್ರವಾರ

ವಾರದ ದಿನ · ಆರಾಧನಾ ಬಣ್ಣ: ಹಸಿರು

ಉಪವಾಸ ಮತ್ತು ಪ್ರಾಯಶ್ಚಿತ್ತ

ಪ್ರಾಯಶ್ಚಿತ್ತದ ದಿನ

ಪ್ರತಿ ಶುಕ್ರವಾರವೂ ಪ್ರಾಯಶ್ಚಿತ್ತದ ದಿನ; ಅದನ್ನು ಹೇಗೆ ಆಚರಿಸಬೇಕು ಎಂಬುದನ್ನು ಪ್ರತಿಯೊಂದು ಬಿಷಪರ ಸಮ್ಮೇಳನ ನಿರ್ಧರಿಸುತ್ತದೆ: ಮಾಂಸ ವರ್ಜನೆ ಅಥವಾ ಬೇರೊಂದು ಪ್ರಾಯಶ್ಚಿತ್ತ ಕಾರ್ಯ. ಉಪವಾಸ 18 ರಿಂದ 59 ವರ್ಷದವರಿಗೆ, ಮಾಂಸ ವರ್ಜನೆ 14 ವರ್ಷದಿಂದ ಕಡ್ಡಾಯ.

ದಿನದ ವಾಚನಗಳು

ಮೊದಲನೆಯ ವಾಚನ

ಆದಿ 17:1, 9–10, 15–22

1ಅಬ್ರಾಮನು ತೊಂಭತೊಂಭತ್ತು ವರ್ಷದವನಾದಾಗ ಯೆಹೋವನು ಅವನಿಗೆ ದರ್ಶನದಲ್ಲಿ, “ನಾನು ಸರ್ವಶಕ್ತನಾದ ದೇವರು; ನನ್ನೆದುರಿನಲ್ಲಿ ದೋಷ ಇಲ್ಲದವನಾಗಿ ನಡೆದುಕೊ. 9ಇದಲ್ಲದೆ ದೇವರು ಅಬ್ರಹಾಮನಿಗೆ, “ನೀನಂತೂ ನನ್ನ ಒಡಂಬಡಿಕೆಯನ್ನು ಕೈಕೊಂಡು ನಡೆಯಬೇಕು. ನೀನು ಮಾತ್ರವಲ್ಲದೆ ನಿನ್ನ ಸಂತತಿಯವರು ತಲತಲಾಂತರಗಳಲ್ಲಿ ಅದನ್ನು ಕೈಕೊಂಡು ನಡೆಯಬೇಕು. 10ನೀನೂ ನಿನ್ನ ಸಂತತಿಯುವರೂ ಕೈಕೊಳ್ಳಬೇಕಾದ ನನ್ನ ಒಡಂಬಡಿಕೆ ಯಾವುದೆಂದರೆ, ನಿಮ್ಮಲ್ಲಿರುವ ಗಂಡಸರೆಲ್ಲರಿಗೂ ಸುನ್ನತಿಯಾಗಬೇಕು ಎಂಬುದೇ. 15ಇದಲ್ಲದೆ ದೇವರು ಅಬ್ರಹಾಮನಿಗೆ, “ನೀನು ಇನ್ನು ಮುಂದೆ ನಿನ್ನ ಹೆಂಡತಿಯನ್ನು ಸಾರಯಳೆಂದು ಕರೆಯದೆ ‘ಸಾರಾ’ (ರಾಣಿ) ಎಂದು ಕರೆಯಬೇಕು. 16ನಾನು ಆಕೆಯನ್ನು ಆಶೀರ್ವದಿಸಿ, ಆಕೆಯಿಂದ ನಿನಗೆ ಒಬ್ಬ ಮಗನನ್ನು ಕೊಡುವೆನು. ನಾನು ಆಕೆಯನ್ನು ಆಶೀರ್ವದಿಸಿದ್ದರಿಂದ ಆಕೆಯಿಂದ ಅನೇಕ ಜನಾಂಗಗಳೂ ಅರಸರೂ ಉತ್ಪತ್ತಿಯಾಗುವರು” ಎಂದು ಹೇಳಿದನು. 17ಅಬ್ರಹಾಮನು ಅಡ್ಡ ಬಿದ್ದು ನಕ್ಕು, “ನೂರು ವರ್ಷದವನಿಗೆ ಮಗ ಹುಟ್ಟುವುದುಂಟೇ? ತೊಂಭತ್ತು ವರ್ಷದವಳಾದ ಸಾರಳು ಹೆರಲು ಸಾಧ್ಯವೇ?” ಎಂದು ಮನಸ್ಸಿನಲ್ಲಿ ಅಂದುಕೊಂಡನು. 18ಅಬ್ರಹಾಮನು ದೇವರಿಗೆ, “ಇಷ್ಮಾಯೇಲ್ ಇದ್ದಾನಲ್ಲಾ, ಅವನೇ ನಿನ್ನ ದಯೆ ಹೊಂದಿ ಬಾಳಲಿ” ಎನ್ನಲು. 19ದೇವರು, “ಹಾಗಲ್ಲ ನಿನ್ನ ಹೆಂಡತಿಯಾದ ಸಾರಳಲ್ಲಿಯೇ ನಿನಗೆ ಮಗನು ಹುಟ್ಟುವನು. ಅವನಿಗೆ ‘ಇಸಾಕ’ ಎಂದು ಹೆಸರಿಡಬೇಕು. ಅವನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸಿಕೊಳ್ಳುವೆನು; ಅದು ಅವನ ಸಂತತಿಯವರಲ್ಲಿಯೂ ಶಾಶ್ವತವಾಗಿರುವುದು. 20ಇಷ್ಮಾಯೇಲನ ವಿಷಯದಲ್ಲಿ ನೀನು ಮಾಡಿದ ಬಿನ್ನಹವನ್ನು ಕಿವಿಗೊಟ್ಟು ಕೇಳಿದ್ದೇನೆ. ಅವನನ್ನೂ ಆಶೀರ್ವದಿಸಿದ್ದೇನೆ; ಅವನನ್ನು ಅಭಿವೃದ್ಧಿಮಾಡಿ ಅವನಿಗೆ ಅತ್ಯಧಿಕವಾದ ಸಂತಾನವನ್ನು ಕೊಡುವೆನು. ಅವನು ಹನ್ನೆರಡು ಮಂದಿ ಅರಸರನ್ನು ಪಡೆಯುವನು, ಅವನಿಂದ ಮಹಾ ಜನಾಂಗವಾಗುವಂತೆ ಮಾಡುವೆನು. 21ಆದರೆ ಆ ನನ್ನ ಒಡಂಬಡಿಕೆಯನ್ನು ಇಸಾಕನೊಂದಿಗೆ ಸ್ಥಾಪಿಸಿಕೊಳ್ಳುತ್ತೇನೆ; ಬರುವ ವರ್ಷ ಇದೇ ವೇಳೆಗೆ ಸಾರಳು ಅವನನ್ನು ಹೆರುವಳು” ಅಂದನು. 22ಆ ನಂತರ ದೇವರು ಅಬ್ರಹಾಮನ ಸಂಗಡ ಮಾತನಾಡುವುದನ್ನು ಮುಗಿಸಿ ಅವನ ಬಳಿಯಿಂದ ಮೇಲಕ್ಕೆ ಏರಿ ಹೋದನು.

ಪ್ರತಿವಚನ ಕೀರ್ತನೆ

ಕೀರ್ತ 128:1–5

1ಯಾತ್ರಾಗೀತೆ. ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ, ಆತನ ಮಾರ್ಗಗಳಲ್ಲಿ ನಡೆಯುವವನು ಧನ್ಯನು. 2ನಿನ್ನ ಕಷ್ಟಾರ್ಜಿತವನ್ನು ನೀನೇ ಅನುಭವಿಸುವಿ, ನೀನು ಧನ್ಯನು, ನಿನಗೆ ಶುಭವಿರುವುದು. 3ಅಂತಃಪುರದಲ್ಲಿರುವ ನಿನ್ನ ಹೆಂಡತಿಯು, ಫಲಭರಿತವಾದ ದ್ರಾಕ್ಷಾಲತೆಯಂತೆ ಇರುವಳು; ನಿನ್ನ ಸಂಗಡ ಊಟದ ಮಣೆಯ ಸುತ್ತಲೂ ಕುಳಿತುಕೊಳ್ಳುವ ನಿನ್ನ ಮಕ್ಕಳು, ಎಣ್ಣೇಮರದ ಸಸಿಗಳ ಹಾಗೆ ಇರುವರು. 4ಇಗೋ, ಯೆಹೋವನಲ್ಲಿ ಭಯಭಕ್ತಿಯುಳ್ಳ ಪುರುಷನು, ಈ ರೀತಿಯಾಗಿ ಆಶೀರ್ವಾದ ಹೊಂದುವನು. 5ಚೀಯೋನಿನಲ್ಲಿರುವ ಯೆಹೋವನು ನಿನ್ನನ್ನು ಆಶೀರ್ವದಿಸಲಿ; ಜೀವಮಾನವೆಲ್ಲಾ ಯೆರೂಸಲೇಮಿನ ಸೌಭಾಗ್ಯವನ್ನು ನೋಡುವವನಾಗು.

ಸುವಾರ್ತೆ

ಮತ್ತಾ 8:1–4

1“ಯೇಸು ಬೆಟ್ಟದಿಂದ ಕೆಳಗೆ ಇಳಿದು ಬರುವಾಗ ಜನರು ದೊಡ್ಡಗುಂಪು ಆತನ ಹಿಂದೆ ಹೋದರು. 2ಆಗ ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಆತನಿಗೆ ಅಡ್ಡಬಿದ್ದು, “ಕರ್ತನೇ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಅಂದನು. 3ಆತನು ಕೈಚಾಚಿ ಆತನನ್ನು ಮುಟ್ಟಿ, “ನನಗೆ ಮನಸ್ಸುಂಟು; ಶುದ್ಧನಾಗು” ಅಂದನು. ಕೂಡಲೆ ಅವನು ಕುಷ್ಠದಿಂದ ಶುದ್ಧನಾದನು. 4ಆಗ ಯೇಸು ಅವನಿಗೆ; “ನೋಡು, ಯಾರಿಗೂ ಹೇಳಬೇಡ; ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆ ನೇಮಿಸಿದ ಕಾಣಿಕೆಯನ್ನು ಕೊಡು;” ಅದು ಅವರಿಗೆ ಸಾಕ್ಷಿಯಾಗಲಿ ಎಂದು ಹೇಳಿದನು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು