Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮೇ 2027 › 30 ಮೇ

ಆರ್ಥೊಡಾಕ್ಸ್ ಪಂಚಾಂಗ · ಮೇ 17 (ಹಳೆಯ ಪದ್ಧತಿ)

ಆರ್ಥೊಡಾಕ್ಸ್ ದೈನಂದಿನ ವಾಚನಗಳು — 30 ಮೇ 2027

ಭಾನುವಾರ · ಸ್ವರ 4

ಹಬ್ಬಗಳು ಮತ್ತು ಸಂತರು

ಪಾಸ್ಕದ ಐದನೆಯ ಭಾನುವಾರ

ಸಮಾರ್ಯದ ಸ್ತ್ರೀಯ ಭಾನುವಾರ

ಉಪವಾಸ

ಉಪವಾಸವಿಲ್ಲ

ಇದು ಮಠದ ನಿಯಮವನ್ನು ಅನುಸರಿಸುತ್ತದೆ. ಸಭೆಯಲ್ಲಿ ಉಪವಾಸದ ಪ್ರಮಾಣವನ್ನು ಆರೋಗ್ಯ, ವಯಸ್ಸು ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪಾಪನಿವೇದನೆಯ ಗುರುವಿನೊಂದಿಗೆ ಸೇರಿ ನಿರ್ಧರಿಸಲಾಗುತ್ತದೆ.

ದಿನದ ವಾಚನಗಳು

ಉದಯಕಾಲದ ಏಳನೆಯ ಸುವಾರ್ತೆ

ಯೋಹಾ 20:1–10

1ವಾರದ ಮೊದಲನೆಯ ದಿನದಲ್ಲಿ ಮಗ್ದಲದ ಮರಿಯಳು ಬೆಳಿಗ್ಗೆ ಇನ್ನೂ ಕತ್ತಲೆ ಇರುವಾಗಲೇ ಸಮಾಧಿಯ ಬಳಿಗೆ ಬಂದು ಸಮಾಧಿಯ ಕಲ್ಲು ಅಲ್ಲಿಂದ ಉರುಳಿ ಹೋಗಿರುವುದನ್ನು ಕಂಡಳು. 2ಆಗ ಆಕೆಯು ಸೀಮೋನ್ ಪೇತ್ರನ ಬಳಿಗೂ ಮತ್ತು ಯೇಸುವಿಗೆ ಪ್ರಿಯನಾಗಿದ್ದ ಇನ್ನೊಬ್ಬ ಶಿಷ್ಯನ ಬಳಿಗೂ ಓಡಿಬಂದು ಅವರಿಗೆ, “ಕರ್ತನನ್ನು ಅವರು ಸಮಾಧಿಯೊಳಗಿಂದ ತೆಗೆದುಕೊಂಡು ಹೋಗಿದ್ದಾರೆ; ಅವರು ಆತನನ್ನು ಎಲ್ಲಿಟ್ಟಿದ್ದಾರೋ ನಮಗೆ ಗೊತ್ತಿಲ್ಲವೆಂದು” ಹೇಳಿದಳು 3ಆಗ ಪೇತ್ರನೂ ಮತ್ತು ಇನ್ನೊಬ್ಬ ಶಿಷ್ಯನೂ ಹೊರಟು ಸಮಾಧಿಯ ಕಡೆಗೆ ಹೋದರು. 4ಅವರಿಬ್ಬರೂ ಜೊತೆಯಾಗಿ ಓಡಿದರು. ಆ ಇನ್ನೊಬ್ಬ ಶಿಷ್ಯನು ಪೇತ್ರನಿಗಿಂತ ವೇಗವಾಗಿ ಓಡಿ ಮೊದಲೇ ಸಮಾಧಿಗೆ ಬಂದನು. 5ಅವನು ಬಗ್ಗಿ ನೋಡಿದಾಗ ನಾರುಬಟ್ಟೆಗಳು ಬಿದ್ದಿರುವುದನ್ನು ಕಂಡನು. ಆದರೂ ಅವನು ಒಳಗೆ ಹೋಗಲಿಲ್ಲ. 6ಸೀಮೋನ್ ಪೇತ್ರನು ಅವನ ಹಿಂದೆ ಬಂದು ಸಮಾಧಿಯೊಳಕ್ಕೆ ಹೋಗಿ, ಆ ನಾರುಬಟ್ಟೆಗಳು ಬಿದ್ದಿರುವುದನ್ನೂ 7ಆತನ ತಲೆಯ ಮೇಲಿದ್ದ ಕೈವಸ್ತ್ರವು, ಆ ನಾರು ಬಟ್ಟೆಗಳೊಂದಿಗೆ ಇರದೇ, ಸುತ್ತಿ ಒಂದು ಕಡೆಯಲ್ಲಿ ಪ್ರತ್ಯೇಕವಾಗಿ ಇಟ್ಟಿರುವುದನ್ನು ನೋಡಿದನು. 8ಆಗ ಸಮಾಧಿಯ ಬಳಿಗೆ ಮೊದಲು ಬಂದಿದ್ದ ಆ ಮತ್ತೊಬ್ಬ ಶಿಷ್ಯನು ಸಹ ಒಳಗೆ ಹೋಗಿ ಬಗ್ಗಿ ನೋಡಿ ನಂಬಿದನು. 9ಆತನು ಸತ್ತ ಮೇಲೆ ಜೀವದಿಂದೆದ್ದು ಬರಬೇಕೆಂಬುದಾಗಿ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ಅವರಿಗೆ ಇನ್ನೂ ತಿಳಿದಿರಲಿಲ್ಲ. 10ತರುವಾಯ ಆ ಶಿಷ್ಯರು ಪುನಃ ತಮ್ಮ ಮನೆಗೆ ಹೋದರು.

ಪತ್ರಿಕೆ

ಅ. ಕೃ 11:19–26, 29–30

19ಸ್ತೆಫನನ ವಿಷಯದಲ್ಲಿ ಉಂಟಾದ ಹಿಂಸೆಯಿಂದ ಚದರಿಹೋದವರು ಯೆಹೂದ್ಯರಿಗಲ್ಲದೇ ಮತ್ತಾರಿಗೂ ದೇವರ ವಾಕ್ಯವನ್ನು ಹೇಳದೆ ಫೊಯಿನಿಕೆ, ಕುಪ್ರ ಹಾಗೂ ಅಂತಿಯೋಕ್ಯ ಪ್ರಾಂತ್ಯಗಳವರೆಗೂ ಸಂಚರಿಸಿದರು. 20ಅವರಲ್ಲಿ ಕುಪ್ರದ್ವೀಪದವರು ಕೆಲವರೂ, ಕುರೇನ್ಯದವರು ಕೆಲವರೂ, ಅಂತಿಯೋಕ್ಯಕ್ಕೆ ಬಂದು, ಗ್ರೀಕರೊಂದಿಗೆ ಮಾತನಾಡಿ ಕರ್ತನಾದ ಯೇಸುವಿನ ವಿಷಯವಾದ ಸುವಾರ್ತೆಯನ್ನು ಸಾರಿದರು. 21ಕರ್ತನ ಹಸ್ತವು ಅವರೊಂದಿಗಿದ್ದ ಕಾರಣ ಬಹು ಜನರು ನಂಬಿ ಕರ್ತನ ಕಡೆಗೆ ತಿರುಗಿಕೊಂಡರು. 22ಇವರ ವಿಷಯವಾದ ವರ್ತಮಾನವು ಯೆರೂಸಲೇಮಿನಲ್ಲಿದ್ದ ಸಭೆಯವರ ಕಿವಿಗೆ ಬಿದ್ದಾಗ, ಅವರು ಬಾರ್ನಬನನ್ನು ಅಂತಿಯೋಕ್ಯಕ್ಕೆ ಕಳುಹಿಸಿದರು. 23ಅವನು ಒಳ್ಳೆಯವನೂ, ಪವಿತ್ರಾತ್ಮ ಭರಿತನೂ, ನಂಬಿಕೆಯಿಂದ ತುಂಬಿದವನೂ ಆಗಿದ್ದನು. 24ಆದಕಾರಣ ಅಲ್ಲಿಗೆ ಬಂದು ದೇವರ ಕೃಪಾಕಾರ್ಯವನ್ನು ನೋಡಿದಾಗ ಸಂತೋಷಪಟ್ಟು, ನೀವು ಪೂರ್ಣಮನಸ್ಸಿನಿಂದ ಕರ್ತನಲ್ಲಿ ನೆಲೆಗೊಂಡಿರಿ ಎಂದು ಅವರಿಗೆ ಬುದ್ಧಿಹೇಳಿದನು. ಆಗ ಬಹುಮಂದಿ ಕರ್ತನೊಂದಿಗೆ ಸೇರಿಕೊಂಡರು. 25ತರುವಾಯ ಬಾರ್ನಬನು ಸೌಲನನ್ನು ಹುಡುಕುವುದಕ್ಕಾಗಿ ತಾರ್ಸಕ್ಕೆ ಹೋಗಿ ಅವನನ್ನು ಕಂಡು ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. 26ಆಮೇಲೆ ಅವರು ಒಂದು ವರ್ಷ ಪೂರ್ತಿಯಾಗಿ ಸಭೆಯವರೊಂದಿಗಿದ್ದುಕೊಂಡು ಬಹು ಜನರಿಗೆ ಉಪದೇಶಮಾಡಿದರು. ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಪ್ರಥಮಬಾರಿಗೆ ‘ಕ್ರೈಸ್ತರು’ ಎಂಬ ಹೆಸರು ಬಂದದ್ದು. 29ಆಗ ಆ ಶಿಷ್ಯರಲ್ಲಿ ಪ್ರತಿಯೊಬ್ಬರೂ ಯೂದಾಯ ಸೀಮೆಯಲ್ಲಿ ವಾಸವಾಗಿದ್ದ ಸಹೋದರರಿಗೆ ತಮ್ಮತಮ್ಮ ಶಕ್ತ್ಯಾನುಸಾರ ಧನಸಹಾಯ ಮಾಡಬೇಕೆಂದು ತೀರ್ಮಾನಿಸಿಕೊಂಡರು. 30ಹಾಗೆಯೇ ಮಾಡಿ, ಅದನ್ನು ಬಾರ್ನಬನ ಮತ್ತು ಸೌಲರ ಕೈಯಿಂದ ಸಭೆಯ ಹಿರಿಯರಿಗೆ ಕಳುಹಿಸಿಕೊಟ್ಟರು.

ಸುವಾರ್ತೆ

ಯೋಹಾ 4:5–42

5ಹೋಗುವಾಗ ಸಮಾರ್ಯ ಸೀಮೆಗೆ ಸೇರಿದ ಸುಖರೆಂಬ ಊರಿಗೆ ಬಂದನು. ಅದು ಯಾಕೋಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟ ಭೂಮಿಯ ಹತ್ತಿರದಲ್ಲಿತ್ತು. 6ಅಲ್ಲಿ ಯಾಕೋಬನು ತೆಗೆಸಿದ ಬಾವಿಯಿತ್ತು. ಯೇಸು ಪ್ರಯಾಣಮಾಡಿದ್ದರಿಂದ ಆಯಾಸಗೊಂಡು ಆ ಬಾವಿಯ ಬಳಿಯಲ್ಲಿ ಹಾಗೆ ಕುಳಿತುಕೊಂಡನು. ಆಗ ಹೆಚ್ಚು ಕಡಿಮೆ ಮಧ್ಯಾಹ್ನವಾಗಿತ್ತು. 7ಸಮಾರ್ಯದವಳಾದ ಒಬ್ಬ ಸ್ತ್ರೀ ನೀರು ಸೇದುವುದಕ್ಕೆ ಬಂದಳು. ಯೇಸು ಆಕೆಯನ್ನು “ನನಗೆ ಕುಡಿಯುವುದಕ್ಕೆ ನೀರನ್ನು ಕೊಡು,” ಎಂದು ಕೇಳಿದನು. 8ಅಷ್ಟರಲ್ಲಿ ಆತನ ಶಿಷ್ಯರು ಊಟಕ್ಕೆ ಬೇಕಾದದ್ದನ್ನು ಕೊಂಡುಕೊಳ್ಳುವುದಕ್ಕಾಗಿ ಪಟ್ಟಣದೊಳಕ್ಕೆ ಹೋಗಿದ್ದರು. 9ಆ ಸಮಾರ್ಯದ ಸ್ತ್ರೀಯು ಆತನಿಗೆ, “ಯೆಹೂದ್ಯನಾದ ನೀನು ಸಮಾರ್ಯದವಳಾದ ನನ್ನನ್ನು ಕುಡಿಯುವುದಕ್ಕೆ ನೀರು ಕೊಡು ಎಂದು ಕೇಳುವುದಾದರೂ ಹೇಗೆ?” ಎಂದು ಹೇಳಿದಳು. ಏಕೆಂದರೆ ಯೆಹೂದ್ಯರಿಗೂ ಸಮಾರ್ಯದವರಿಗೂ ಹೊಕ್ಕುಬಳಕೆ ಇರಲಿಲ್ಲ. 10ಅದಕ್ಕೆ ಯೇಸು “ದೇವರ ವರವೇನೆಂಬುದೂ ಮತ್ತು ನನಗೆ ಕುಡಿಯುವುದಕ್ಕೆ ನೀರು ಕೊಡು ಎಂದು ಕೇಳುವಾತನು ಯಾರೆಂಬುದೂ ನಿನಗೆ ತಿಳಿದಿದ್ದರೆ ನೀನೇ ಅವನನ್ನು ಕೇಳುತ್ತಿದ್ದೆ. ಆತನು ನಿನಗೆ ಜೀವಕರವಾದ ನೀರನ್ನು ಕೊಡುತ್ತಿದ್ದನು” ಅಂದನು. 11ಆ ಸ್ತ್ರೀ ಆತನಿಗೆ, “ಅಯ್ಯಾ, ಸೇದುವುದಕ್ಕೆ ನಿನ್ನಲ್ಲಿ ಏನೂ ಇಲ್ಲ ಮತ್ತು ಬಾವಿ ಆಳವಾಗಿದೆ, ಹೀಗಿರುವಾಗ, ಆ ಜೀವಕರವಾದ ನೀರು ನಿನಗೆ ಎಲ್ಲಿಂದ ಬಂದಿತು? 12ನಮ್ಮ ಹಿರಿಯವನಾದ ಯಾಕೋಬನಿಗಿಂತ ನೀನು ದೊಡ್ಡವನೋ? ಅವನೇ ಈ ಬಾವಿಯನ್ನು ನಮಗೆ ಕೊಟ್ಟವನು. ಅವನೂ ಅವನ ಮಕ್ಕಳೂ ಅವನ ಜಾನುವಾರುಗಳೂ ಸಹಿತವಾಗಿ ಇದೇ ಬಾವಿಯ ನೀರು ಕುಡಿದಿದ್ದರು” ಅನ್ನಲು, 13ಯೇಸು ಆಕೆಗೆ, “ಈ ನೀರನ್ನು ಕುಡಿಯುವವರೆಲ್ಲರಿಗೆ ಪುನಃ ನೀರಡಿಕೆಯಾಗುವುದು, 14ಆದರೆ, ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ನೀರಡಿಕೆಯಾಗುವುದಿಲ್ಲ. ನಾನು ಅವನಿಗೆ ಕೊಡುವ ನೀರು ಅವನಲ್ಲಿ ಉಕ್ಕುವ ನೀರಿನ ಬುಗ್ಗೆಗಳಾಗಿದ್ದು ನಿತ್ಯ ಜೀವವನ್ನು ಉಂಟುಮಾಡುವುದು” ಎಂದು ಹೇಳಿದನು. 15ಆ ಸ್ತ್ರೀಯು, “ಅಯ್ಯಾ, ನನಗೆ ಆ ನೀರನ್ನು ಕೊಡು, ಕೊಟ್ಟರೆ ಇನ್ನು ಮೇಲೆ ನನಗೆ ನೀರಡಿಕೆಯಾಗುವುದಿಲ್ಲ. ನೀರು ಸೇದುವುದಕ್ಕೆ ಇಷ್ಟು ದೂರ ಬರಬೇಕಾಗಿರುವುದಿಲ್ಲ” ಅನ್ನಲು, 16ಯೇಸು ಆಕೆಗೆ “ಹೋಗಿ ನಿನ್ನ ಗಂಡನನ್ನು ಇಲ್ಲಿಗೆ ಕರೆದುಕೊಂಡು ಬಾ” ಎಂದು ಹೇಳಿದನು. 17ಅದಕ್ಕೆ ಆ ಸ್ತ್ರೀಯು “ನನಗೆ ಗಂಡನಿಲ್ಲ” ಎಂದಳು. ಯೇಸು ಆಕೆಗೆ, “ನನಗೆ ಗಂಡನಿಲ್ಲವೆಂದು ನೀನು ಹೇಳಿದ್ದು ಸರಿಯೇ. 18ನಿನಗೆ ಐದು ಮಂದಿ ಗಂಡಂದಿರಿದ್ದರು. ಈಗ ನಿನಗಿರುವವನು ನಿನ್ನ ಗಂಡನಲ್ಲ; ನೀನು ಹೇಳಿದ್ದು ನಿಜವಾದ ಸಂಗತಿ” ಎಂದನು. 19ಆ ಸ್ತ್ರೀ ಆತನಿಗೆ, “ಅಯ್ಯಾ, ನೀನು ಒಬ್ಬ ಪ್ರವಾದಿ ಎಂದು ನನಗೆ ಕಾಣುತ್ತದೆ. 20ನಮ್ಮ ಹಿರಿಯರು ಈ ಬೆಟ್ಟದಲ್ಲಿ ದೇವಾರಾಧನೆ ಮಾಡುತ್ತಿದ್ದರು, ಆದರೆ ಯೆಹೂದ್ಯರಾದ ನೀವು ಆರಾಧನೆ ಮಾಡತಕ್ಕ ಸ್ಥಳವು ಯೆರೂಸಲೇಮಿನಲ್ಲಿಯೇ ಎಂದು ನೀವು ಹೇಳುತ್ತೀರಲ್ಲಾ” ಎಂದಳು. 21ಯೇಸು ಆಕೆಗೆ “ಅಮ್ಮಾ, ನನ್ನ ಮಾತನ್ನು ನಂಬು, ಒಂದು ಕಾಲ ಬರುತ್ತದೆ. ಆ ಕಾಲದಲ್ಲಿ ನೀವು ತಂದೆಯನ್ನು ಆರಾಧಿಸಬೇಕಾದರೆ, ಯೆರೂಸಲೇಮಿಗಾಗಲಿ ಅಥವಾ ಈ ಬೆಟ್ಟಕ್ಕಾಗಲಿ ಹೋಗುವುದಿಲ್ಲ. 22ಸಮಾರ್ಯದವರಾದ ನೀವು ಅರಿಯದೇ ಇರುವಂಥದನ್ನು ಆರಾಧಿಸುತ್ತೀರಿ, ಆದರೆ ನಾವು ಅರಿತಿರುವುದನ್ನೇ ಆರಾಧಿಸುವವರಾಗಿದ್ದೇವೆ. ಏಕೆಂದರೆ, ಬರಬೇಕಾದ ರಕ್ಷಣೆಯು ಯೆಹೂದ್ಯರೊಳಗಿಂದ ಬರುತ್ತದಷ್ಟೆ. 23ಅದಕ್ಕಿಂತ ಹೆಚ್ಚಾಗಿ, ನಿಜವಾದ ಆರಾಧಕರು ತಂದೆಯನ್ನು ಆತ್ಮನಿಂದಲೂ ಮತ್ತು ಸತ್ಯದಿಂದಲೂ ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ, ಅದುದರಿಂದ, ತಂದೆಯು ನಿಜವಾಗಿಯೂ ಈ ರೀತಿ ಆರಾಧಿಸುವವರನ್ನೇ ಹುಡುಕುತ್ತಾನೆ. 24ದೇವರು ಆತ್ಮನಾಗಿದ್ದಾನೆ, ಮತ್ತು ಆತನನ್ನು ಆರಾಧಿಸುವವರು ಆತ್ಮನಿಂದಲೂ ಮತ್ತು ಸತ್ಯದಿಂದಲೂ ಆರಾಧಿಸಬೇಕಾಗಿದೆ” ಎಂದನು. 25ಆ ಹೆಂಗಸು ಆತನಿಗೆ “ಮೆಸ್ಸೀಯನು (ಎಂದರೆ ಕ್ರಿಸ್ತನು) ಬರುತ್ತಾನೆಂದು ನಾನು ಬಲ್ಲೆನು. ಆತನು ಬಂದಾಗ ನಮಗೆ ಎಲ್ಲವನ್ನು ತಿಳಿಸಿಕೊಡುವನು” ಎಂದು ಹೇಳಲು, 26ಯೇಸು ಆಕೆಗೆ “ನಿನ್ನ ಸಂಗಡ ಮಾತನಾಡುತ್ತಿರುವ ನಾನೇ ಆತನು” ಎಂದು ಹೇಳಿದನು. 27ಅಷ್ಟರೊಳಗೆ ಆತನ ಶಿಷ್ಯರು ಬಂದು ಆತನು ಆ ಸ್ತ್ರೀಯೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಆಶ್ಚರ್ಯಪಟ್ಟರು. ಆದರೂ, “ನಿನಗೆ ಏನು ಬೇಕು? ಆಕೆಯ ಸಂಗಡ ಯಾಕೆ ಮಾತನಾಡುತ್ತಿರುವೆ?” ಎಂದು ಒಬ್ಬರೂ ಆತನನ್ನು ಕೇಳಲಿಲ್ಲ. 28ಆಗ ಆ ಸ್ತ್ರೀ ತನ್ನ ನೀರಿನ ಕೊಡವನ್ನು ಅಲ್ಲೇ ಬಿಟ್ಟು ಊರೊಳಕ್ಕೆ ಹೋಗಿ ಜನರಿಗೆ, 29“ಅಲ್ಲಿ ಒಬ್ಬನಿದ್ದಾನೆ, ನಾನು ಇದುವರೆಗೆ ಮಾಡಿದ್ದನ್ನೆಲ್ಲಾ ನನಗೆ ತಿಳಿಸಿದನು. ಬಂದು ಅವನನ್ನು ನೋಡಿರಿ. ಬರತಕ್ಕ ಕ್ರಿಸ್ತನು ಅವನೇ ಇರಬಹುದೋ?” ಎಂದು ಹೇಳಿದಳು. 30ಆಗ ಅವರೆಲ್ಲರು ಊರನ್ನು ಬಿಟ್ಟು ಆತನ ಬಳಿಗೆ ಬಂದರು. 31ಅಷ್ಟರೊಳಗೆ ಶಿಷ್ಯರು “ಗುರುವೇ, ಊಟಮಾಡು” ಎಂದು ಆತನನ್ನು ಕೇಳಿಕೊಂಡರು. 32ಆದರೆ ಆತನು ಅವರಿಗೆ “ನಿಮಗೆ ತಿಳಿಯದಿರುವ ಆಹಾರವು ನನ್ನ ಬಳಿಯಲ್ಲಿ ಉಂಟು” ಎಂದು ಹೇಳಲು 33ಶಿಷ್ಯರು, “ಆತನಿಗೆ ಯಾರಾದರೂ ಊಟಕ್ಕೆ ತಂದು ಕೊಟ್ಟರೇನೊ?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. 34ಯೇಸು ಅವರಿಗೆ “ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಿ ಆತನ ಕೆಲಸವನ್ನು ಪೂರೈಸುವುದೇ ನನ್ನ ಆಹಾರ. 35‘ಇನ್ನೂ ನಾಲ್ಕು ತಿಂಗಳುಗಳಾದ ಮೇಲೆ ಸುಗ್ಗಿಯು ಬರುವುದೆಂದು ನೀವು ಹೇಳುವುದುಂಟಷ್ಟೆ’? ಇಗೋ, ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ಹೊಲಗಳನ್ನು ನೋಡಿರಿ. ಅವು ಬಲಿತು ಬೆಳ್ಳಗಾಗಿ ಕೊಯ್ಲಿಗೆ ಸಿದ್ಧವಾಗಿದೆಯೆಂದು ನಿಮಗೆ ಹೇಳುತ್ತೇನೆ. 36ಕೊಯ್ಯುವವನಿಗೆ ಈಗಲೇ ಕೂಲಿ ದೊರೆಯುತ್ತದೆ. ಅವನು ನಿತ್ಯಜೀವಕ್ಕೆ ಫಲವನ್ನು ಕೂಡಿಸಿಡುತ್ತಾನೆ. ಹೀಗೆ ಬಿತ್ತುವವನಿಗೂ ಮತ್ತು ಕೊಯ್ಯುವವನಿಗೂ ಒಟ್ಟಿಗೆ ಸಂತೋಷವಾಗುವುದು. 37‘ಬಿತ್ತುವವನೊಬ್ಬನು, ಕೊಯ್ಯುವವನು ಬೇರೊಬ್ಬನು’ ಎಂದು ಹೇಳುವ ಮಾತು ಇದರಲ್ಲಿ ಸತ್ಯವಾಗಿದೆ. 38ನೀವು ಪ್ರಯಾಸ ಪಡದಂಥ ಬೆಳೆಯನ್ನು ಕೊಯ್ಯುವುದಕ್ಕೆ ನಾನು ನಿಮ್ಮನ್ನು ಕಳುಹಿಸಿದೆನು, ಬೇರೊಬ್ಬರು ಪ್ರಯಾಸಪಟ್ಟರು, ನೀವು ಅವರ ಕಷ್ಟದಲ್ಲಿ ಸೇರಿದ್ದೀರಿ” ಎಂದು ಹೇಳಿದನು. 39“ನಾನು ಮಾಡಿದ್ದನ್ನೆಲ್ಲಾ ಆತನು ನನಗೆ ಹೇಳಿದನು” ಎಂಬುದಾಗಿ ಸಾಕ್ಷಿಕೊಡುತ್ತಿರುವ ಆ ಸ್ತ್ರೀಯ ಮಾತಿನಿಂದ, ಆ ಊರಿನ ಸಮಾರ್ಯರಲ್ಲಿ ಅನೇಕರು ಆತನನ್ನು ನಂಬುವವರಾದರು. 40ಆದುದರಿಂದ ಆ ಸಮಾರ್ಯದವರು ಆತನ ಬಳಿಗೆ ಬಂದು; ನೀನು ನಮ್ಮಲ್ಲಿ ಇರಬೇಕೆಂದು ಆತನನ್ನು ಬೇಡಿಕೊಳ್ಳಲು, ಆತನು ಎರಡು ದಿನ ಅಲ್ಲಿಯೇ ತಂಗಿದನು. 41ಇನ್ನೂ ಹೆಚ್ಚು ಜನರು ಆತನ ವಾಕ್ಯವನ್ನು ಕೇಳಿ ನಂಬಿದರು, 42ಜನರು ಆ ಸ್ತ್ರೀಗೆ, “ನಾವು ಆತನನ್ನು ನಂಬಿರುವುದು ಇನ್ನು ನಿನ್ನ ಮಾತಿನ ಮೇಲೆ ಅಲ್ಲ. ನಾವು ಸ್ವತಃ ಕಿವಿಯಾರೆ ಕೇಳಿ ಈತನು ನಿಜವಾಗಿಯೂ ಲೋಕರಕ್ಷಕನೇ ಎಂದು ತಿಳಿದುಕೊಂಡಿದ್ದೇವೆ” ಎಂದರು.

ದಿನಾಂಕಗಳು ರಷ್ಯನ್ ಸಭೆಯ ಜೂಲಿಯನ್ ಪಂಚಾಂಗದ ಪ್ರಕಾರ ಇವೆ (ಸರ್ಬಿಯನ್ ಮತ್ತು ಜಾರ್ಜಿಯನ್ ಸಭೆಗಳು ಮತ್ತು ಅಥೋಸ್ ಪರ್ವತದಂತೆ): ಸಭೆಯ ಪಂಚಾಂಗದ 17 ಮೇ ಎಂದರೆ ನಾಗರಿಕ ಪಂಚಾಂಗದ 30 ಮೇ. ಹೊಸ ಪಂಚಾಂಗದ ಸಭೆಗಳು (ಗ್ರೀಸ್, ರೊಮೇನಿಯಾ, ಬಲ್ಗೇರಿಯಾ, ಉಕ್ರೇನ್…) ನಿಗದಿತ ದಿನಾಂಕದ ಹಬ್ಬಗಳನ್ನೂ ಸಂತರನ್ನೂ ಅದೇ ನಾಗರಿಕ ದಿನಾಂಕದಂದು, 13 ದಿನಗಳ ಮುಂಚೆ, ಆಚರಿಸುತ್ತವೆ, ಮತ್ತು ಅವುಗಳ ಕೆಲವು ವಾಚನಗಳು ಬೇರೆಯಾಗಿವೆ; ಈಸ್ಟರ್ ಮತ್ತು ಅದನ್ನು ಅವಲಂಬಿಸಿರುವ ದಿನಗಳು ಒಂದೇ ಆಗಿವೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು