ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮೇ 2027 › 30 ಮೇ
ಕ್ಯಾಥೊಲಿಕ್ ಪಂಚಾಂಗ
ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 30 ಮೇ 2027
ಭಾನುವಾರ · ಸಾಮಾನ್ಯ ಕಾಲದ 9ನೇ ವಾರ
ಹಬ್ಬಗಳು ಮತ್ತು ಸಂತರು
ಸಾಮಾನ್ಯ ಕಾಲದ 9ನೇ ಭಾನುವಾರ
ಭಾನುವಾರ · ಆರಾಧನಾ ಬಣ್ಣ: ಹಸಿರು
ದಿನದ ವಾಚನಗಳು
ಮೊದಲನೆಯ ವಾಚನ
12“ನಿನ್ನ ದೇವರಾದ ಯೆಹೋವನು ಆಜ್ಞಾಪಿಸಿದಂತೆ ನೀನು ಸಬ್ಬತ್ ದಿನವನ್ನು ದೇವರ ದಿನವೆಂದು ಆಚರಿಸಬೇಕು. 13ಆರು ದಿನಗಳಲ್ಲಿ ನೀನು ದುಡಿದು ನಿನ್ನ ಕೆಲಸವನ್ನೆಲ್ಲಾ ಮಾಡಬೇಕು. 14ಏಳನೆಯ ದಿನ ನಿನ್ನ ದೇವರಾದ ಯೆಹೋವನಿಗೆ ಮೀಸಲಾದ ವಿಶ್ರಾಂತಿ ದಿನವಾಗಿದೆ. ಅದರಲ್ಲಿ ನೀನು ಯಾವ ಕೆಲಸವನ್ನೂ ಮಾಡಬಾರದು. ನಿನ್ನ ಗಂಡುಮಕ್ಕಳು, ಹೆಣ್ಣುಮಕ್ಕಳು, ಗಂಡಾಳು, ಹೆಣ್ಣಾಳು, ಎತ್ತು, ಕತ್ತೆ, ಪಶುಗಳು ಮತ್ತು ನಿನ್ನ ಊರಲ್ಲಿರುವ ಅನ್ಯದೇಶದವರು ಯಾವ ಕೆಲಸವನ್ನೂ ಮಾಡಬಾರದು. ನಿನ್ನಂತೆಯೇ ನಿನ್ನ ಗಂಡಾಳು ಹೆಣ್ಣಾಳುಗಳಿಗೂ ವಿಶ್ರಾಂತಿ ದೊರೆಯಬೇಕು. 15ಐಗುಪ್ತ ದೇಶದಲ್ಲಿ ನೀವು ದಾಸತ್ವದಲ್ಲಿದ್ದುದ್ದನ್ನೂ, ನಿಮ್ಮ ದೇವರಾದ ಯೆಹೋವನು ಭುಜಪರಾಕ್ರಮದಿಂದಲೂ ಮತ್ತು ಶಿಕ್ಷಾಹಸ್ತದಿಂದಲೂ ನಿಮ್ಮನ್ನು ಬಿಡುಗಡೆಮಾಡಿದ್ದನ್ನೂ ಜ್ಞಾಪಕಮಾಡಿಕೊಳ್ಳಿರಿ. ನೀವು ಸಬ್ಬತ್ ದಿನವನ್ನು ಆಚರಿಸಬೇಕೆಂದು ನಿಮ್ಮ ದೇವರಾದ ಯೆಹೋವನು ಇದಕ್ಕಾಗಿಯೇ ಆಜ್ಞಾಪಿಸಿದ್ದಾನೆ.
ಪ್ರತಿವಚನ ಕೀರ್ತನೆ
2ರಾಗವನ್ನು ಎತ್ತಿರಿ; ದಮ್ಮಡಿಯನ್ನು ಬಡಿಯಿರಿ; ಇಂಪಾದ ಕಿನ್ನರಿಯನ್ನೂ, ಸ್ವರಮಂಡಲವನ್ನೂ ಬಾರಿಸಿರಿ. 3ಅಮಾವಾಸ್ಯೆಯಲ್ಲಿಯೂ, ನಮ್ಮ ಉತ್ಸವದಿನವಾಗಿರುವ ಹುಣ್ಣಿಮೆಯಲ್ಲಿಯೂ ಕೊಂಬನ್ನು ಊದಿರಿ. 4ಇದು ಇಸ್ರಾಯೇಲರಲ್ಲಿ ಒಂದು ಕಟ್ಟಳೆ; ಇದು ಯಾಕೋಬ್ಯರ ದೇವರು ವಿಧಿಸಿದ್ದು. 5ಆತನು ಐಗುಪ್ತ ದೇಶವನ್ನು ಬಾಧಿಸಲಿಕ್ಕೆ ಹೊರಟಾಗ, ನೆನಪಿಗಾಗಿ ಯೋಸೇಫ್ಯರಲ್ಲಿ ಈ ಕಟ್ಟಳೆಯನ್ನು ನೇಮಿಸಿದನು. ಪರಿಚಯವಿಲ್ಲದವನ ಮಾತು ನನಗೆ ಕೇಳಿಸುತ್ತದೆ; ಏನೆಂದರೆ, 6“ಅವನ ಹೆಗಲನ್ನು ಹೊರೆಗೆ ತಪ್ಪಿಸಿದೆನು; ಅವನ ಕೈಗಳನ್ನು ಪುಟ್ಟಿಯಿಂದ ಬಿಡಿಸಿದೆನು. 7ಕಷ್ಟದಲ್ಲಿ ಮೊರೆಯಿಟ್ಟ ನಿನ್ನನ್ನು ವಿಮೋಚಿಸಿದೆನು; ಗುಡುಗುವ ಮೋಡದಲ್ಲಿದ್ದು ನಿನಗೆ ಉತ್ತರವನ್ನು ಕೊಟ್ಟೆನು; ಮೆರೀಬಾ ಪ್ರವಾಹಗಳ ಬಳಿಯಲ್ಲಿ ನಿನ್ನನ್ನು ಪರೀಕ್ಷಿಸಿದೆನು. ಸೆಲಾ. 9ನಿಮ್ಮಲ್ಲಿ ಅನ್ಯದೇವತೆಗಳು ಇರಬಾರದು; ಪರರ ದೇವತೆಗಳನ್ನು ಪೂಜಿಸಬಾರದು; 10ನಿಮ್ಮನ್ನು ಐಗುಪ್ತದಿಂದ ಕರೆತಂದ ಯೆಹೋವನೆಂಬ ನಾನೇ ನಿಮ್ಮ ದೇವರು; ಅಗಲವಾಗಿ ಬಾಯಿತೆರೆಯಿರಿ; ಅದನ್ನು ತುಂಬಿಸುವೆನು ಅಂದೆನು.
ಎರಡನೆಯ ವಾಚನ
6ಯಾಕೆಂದರೆ “ಕತ್ತಲೆಯೊಳಗಿನಿಂದ ಬೆಳಕು ಪ್ರಕಾಶಿಸಲಿ” ಎಂದು ಹೇಳಿದ ದೇವರು ತಾನೇ ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಮಹಿಮೆಯ ಜ್ಞಾನವೆಂಬ ಪ್ರಕಾಶವು ಅನೇಕರಿಗೆ ಉಂಟಾಗುವುದಕ್ಕಾಗಿ ನಮ್ಮ ಹೃದಯಗಳಲ್ಲಿ ಪ್ರಕಾಶಿಸಿದನು. 7ಮಣ್ಣಿನ ಮಡಿಕೆಯಂತಿರುವ ನಮ್ಮಲ್ಲಿ ಈ ನಿಕ್ಷೇಪವನ್ನು ಇಡಲ್ಪಟ್ಟಿರುವುದರಿಂದ ಇಂತಹ ಮಹಾಶಕ್ತಿಯು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂಬುದು ಸ್ಪಷ್ಟವಾಗಿದೆ. 8ಎಲ್ಲಾದರಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಸಂಕಟಪಡುವವರಲ್ಲ. ನಾವು ಗೊಂದಲಕ್ಕೀಡಾಗಿದ್ದರೂ ಹತಾಶರಾಗುವವರಲ್ಲ. 9ಹಿಂಸೆಪಡುವವರಾಗಿದ್ದರೂ ಕೈಬಿಡಲ್ಪಟ್ಟವರಲ್ಲ. ಕೆಡವಲ್ಪಟ್ಟವರಾಗಿದ್ದರೂ ನಶಿಸಿಹೊಗುವವರಲ್ಲ. 10ಯೇಸುವಿನ ಜೀವವು ನಮ್ಮ ದೇಹದಲ್ಲಿ ಉಂಟೆಂದು ಪ್ರಕಟಪಡಿಸುವುದಕ್ಕಾಗಿ ಯೇಸುವಿನ ಮರಣಾವಸ್ಥೆಯನ್ನು ನಾವು ಯಾವಾಗಲೂ ದೇಹದಲ್ಲಿ ಅನುಭವಿಸುವವರಾಗಿದ್ದೇವೆ. 11ಯೇಸುವಿನ ಜೀವವು ನಮ್ಮ ಮರ್ತ್ಯ ಶರೀರದಲ್ಲಿ ಉಂಟೆಂದು ತೋರಿಬರುವುದಕ್ಕಾಗಿ ಬದುಕಿರುವ ನಾವು ಯೇಸುವಿನ ನಿಮಿತ್ತ ಯಾವಾಗಲೂ ಮರಣಕ್ಕೆ ಒಪ್ಪಿಸಲ್ಪಡುತ್ತಾ ಇದ್ದೇವೆ.
ಸುವಾರ್ತೆ
23ಯೇಸು ಸಬ್ಬತ್ ದಿನದಲ್ಲಿ ಪೈರಿನ ಹೊಲಗಳನ್ನು ಹಾದುಹೋಗುತ್ತಿರುವಾಗ, ಆತನ ಶಿಷ್ಯರು ತೆನೆಗಳನ್ನು ಮುರಿದು ತಿಂದರು. 24ಫರಿಸಾಯರು ಆತನನ್ನು, “ನೋಡು, ಇವರು ಸಬ್ಬತ್ ದಿನದಲ್ಲಿ ಧರ್ಮಸಮ್ಮತವಲ್ಲದ್ದನ್ನು ಏಕೆ ಮಾಡುತ್ತಾರೆ?” ಎಂದು ಕೇಳಿದರು. 25ಆಗ ಯೇಸು ಅವರಿಗೆ, “ದಾವೀದನು ತಾನೂ ತನ್ನ ಸಂಗಡ ಇದ್ದವರೂ ಆಹಾರವಿಲ್ಲದೆ ಹಸಿದಾಗ ಏನು ಮಾಡಿದನೆಂಬುದನ್ನು ನೀವು ಎಂದಾದರೂ ಓದಲಿಲ್ಲವೋ? 26ಅವನು ಮಹಾಯಾಜಕನಾದ ಅಬಿಯಾತರನ ಕಾಲದಲ್ಲಿ ದೇವಮಂದಿರದೊಳಕ್ಕೆ ಹೋಗಿ ಯಾಜಕರು ಹೊರತು ಮತ್ತಾರೂ ತಿನ್ನಬಾರದ ನೈವೇದ್ಯದ ರೊಟ್ಟಿಗಳನ್ನು ತಾನು ತಿಂದು ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲಾ?” ಎಂದು ನುಡಿಯುತ್ತಾ, 27“ಸಬ್ಬತ್ ದಿನವು ಮನುಷ್ಯರಿಗೋಸ್ಕರ ಮಾಡಲಾಯಿತೇ ಹೊರತು ಮನುಷ್ಯರನ್ನು ಸಬ್ಬತ್ ದಿನಕ್ಕಾಗಿ ಮಾಡಲಿಲ್ಲ. 28ಹೀಗಿರಲಾಗಿ ಮನುಷ್ಯಕುಮಾರನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದಾನೆ” ಎಂದು ಯೇಸು ಹೇಳಿದನು. 3:1ಇನ್ನೊಂದು ಸಾರಿ ಯೇಸು ಸಭಾಮಂದಿರಕ್ಕೆ ಹೋದಾಗ ಅಲ್ಲಿ ಕೈ ಬತ್ತಿಹೋದ ಮನುಷ್ಯನೊಬ್ಬನಿದ್ದನು. 2ಕೆಲವರು ಯೇಸುವಿನ ಮೇಲೆ ತಪ್ಪುಹೊರಿಸುವುದಕ್ಕೆ, ಸಬ್ಬತ್ ದಿನದಲ್ಲಿ ಅವನನ್ನು ಸ್ವಸ್ಥಮಾಡುವನೋ ಏನೋ ಎಂದು ಆತನನ್ನು ಹೊಂಚುಹಾಕಿ ನೋಡುತ್ತಾ ಇದ್ದರು. 3ಆತನು ಕೈಬತ್ತಿದ್ದವನಿಗೆ, “ಎದ್ದು ನಡುವೆ ನಿಂತುಕೋ” ಎಂದು ಹೇಳಿದನು. 4ಆಗ ಅವರಿಗೆ, “ಸಬ್ಬತ್ ದಿನದಲ್ಲಿ ಧರ್ಮಸಮ್ಮತವಾದದು ಯಾವುದು? ಮೇಲನ್ನು ಮಾಡುವುದೋ, ಕೇಡನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ, ತೆಗೆಯುವುದೋ?” ಎಂದು ಹೇಳಲು ಅವರು ಸುಮ್ಮನಿದ್ದರು. 5ಆಗ ಯೇಸು ಅವರ ಹೃದಯ ಕಾಠಿಣ್ಯಕ್ಕಾಗಿ ದುಃಖಪಟ್ಟು, ಕೋಪದಿಂದ ಸುತ್ತಲೂ ಅವರನ್ನು ದೃಷ್ಟಿಸಿ ನೋಡಿ ಆ ಮನುಷ್ಯನಿಗೆ, “ನಿನ್ನ ಕೈ ಚಾಚು” ಎಂದು ಹೇಳಲು ಅವನು ಕೈ ಚಾಚಿದನು; ಅವನ ಕೈ ವಾಸಿಯಾಯಿತು. 6ತಕ್ಷಣ ಫರಿಸಾಯರು ಹೊರಕ್ಕೆ ಹೋಗಿ ಹೆರೋದ್ಯರನ್ನು ಕೂಡಿಕೊಂಡು ಯಾವ ಉಪಾಯದಿಂದ ಯೇಸುವನ್ನು ಕೊಲ್ಲಬಹುದು ಎಂದು ಆತನಿಗೆ ವಿರೋಧವಾಗಿ ಒಳಸಂಚುಮಾಡಿದರು.
ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು