Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮೇ 2027 › 4 ಮೇ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 4 ಮೇ 2027

ಮಂಗಳವಾರ · ಪಾಸ್ಕ ಕಾಲದ ಆರನೆಯ ವಾರ

ಹಬ್ಬಗಳು ಮತ್ತು ಸಂತರು

ಪಾಸ್ಕ ಕಾಲದ ಆರನೆಯ ವಾರದ ಮಂಗಳವಾರ

ವಾರದ ದಿನ · ಆರಾಧನಾ ಬಣ್ಣ: ಬಿಳಿ

ದಿನದ ವಾಚನಗಳು

ಮೊದಲನೆಯ ವಾಚನ

ಅ. ಕೃ 16:22–34

22ಆಗ ಜನರು ಗುಂಪಾಗಿ ಕೂಡಿ, ಅವರಿಗೆ ವಿರೋಧವಾಗಿ ಒಟ್ಟಾಗಿ ಎದ್ದರು. ಮತ್ತು ಅಧಿಕಾರಿಗಳು; ಇವರ ವಸ್ತ್ರಗಳನ್ನು ಹರಿದು, ತೆಗೆದು, ಛಡಿಗಳಿಂದ ಹೊಡೆಸಬೇಕೆಂದು ಅಪ್ಪಣೆಕೊಟ್ಟರು. 23ಅವರಿಗೆ ಬಹಳ ಹೊಡೆತಗಳನ್ನು ಹೊಡಿಸಿದ ಮೇಲೆ ಸೆರೆಮನೆಯೊಳಗೆ ಹಾಕಿಸಿ, ಇವರನ್ನು ಭದ್ರವಾಗಿ ಕಾಯಬೇಕೆಂದು ಸೆರೆಯ ಯಜಮಾನನಿಗೆ ಆಜ್ಞಾಪಿಸಿದರು. 24ಅವನು ಇಂಥಾ ಅಪ್ಪಣೆಯನ್ನು ಹೊಂದಿ ಅವರನ್ನು ಸೆರೆಮನೆಯ ಒಳಕೋಣೆಯಲ್ಲಿ ಹಾಕಿ ಅವರ ಕಾಲುಗಳಿಗೆ ಕೋಳವನ್ನು ಹಾಕಿ ಬಿಗಿಸಿದನು. 25ಮಧ್ಯರಾತ್ರಿಯಲ್ಲಿ ಪೌಲನೂ ಮತ್ತು ಸೀಲನೂ ಪ್ರಾರ್ಥನೆಮಾಡುತ್ತಾ ದೇವರಿಗೆ ಸ್ತುತಿಗೀತೆಗಳನ್ನು ಹಾಡುತ್ತಿದ್ದರು; ಸೆರೆಯಲ್ಲಿದ್ದವರು ಲಕ್ಷ್ಯವಿಟ್ಟು ಕೇಳುತ್ತಿದ್ದರು. 26ಆಕಸ್ಮಾತ್ತಾಗಿ ಮಹಾಭೂಕಂಪವುಂಟಾಯಿತು; ಸೆರೆಮನೆಯ ಅಸ್ತಿವಾರಗಳು ಕದಲಿದವು. ಅದೇ ಕ್ಷಣದಲ್ಲಿ ಕದಗಳೆಲ್ಲಾ ತೆರೆದವು, ಎಲ್ಲರ ಬೇಡಿಗಳು ಕಳಚಿಬಿದ್ದವು. 27ಸೆರೆಯ ಯಜಮಾನನು ನಿದ್ದೆಯಿಂದ ಎಚ್ಚೆತ್ತು ಸೆರೆಮನೆಯ ಕದಗಳು ತೆರೆದಿರುವುದನ್ನು ಕಂಡು ಸೆರೆಯಲ್ಲಿದ್ದವರು ಓಡಿಹೋದರೆಂದು ಭಾವಿಸಿ ಕತ್ತಿಯನ್ನು ಹಿರಿದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದನು. 28ಆದರೆ ಪೌಲನು ಮಹಾ ಶಬ್ದದಿಂದ ಕೂಗಿ ಅವನಿಗೆ; “ನೀನೇನೂ ಕೇಡುಮಾಡಿಕೊಳ್ಳಬೇಡ, ನಾವೆಲ್ಲರೂ ಇಲ್ಲೇ ಇದ್ದೇವೆ” ಎಂದು ಹೇಳಿದನು. 29ಆಗ ಅವನು; ದೀಪ ತರಬೇಕೆಂದು ಕೂಗಿ ಒಳಕ್ಕೆ ಹಾರಿ ಭಯದಿಂದ ನಡುಗುತ್ತಾ ಪೌಲ ಮತ್ತು ಸೀಲರ ಮುಂದೆ ಆಡ್ಡಬಿದ್ದನು. 30ಮತ್ತು ಅವರನ್ನು ಹೊರಗೆ ಕರೆದುಕೊಂಡು ಬಂದು; “ಸ್ವಾಮಿಗಳೇ, ನಾನು ರಕ್ಷಣೆಹೊಂದುವುದಕ್ಕೆ ಏನು ಮಾಡಬೇಕೆಂದು?” ಕೇಳಲು, 31ಅವರು; “ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆ ಹೊಂದುವಿ, ನಿನ್ನ ಮನೆಯವರೂ ರಕ್ಷಣೆಹೊಂದುವರು” ಎಂದು ಹೇಳಿ, 32ಅವನಿಗೂ, ಅವನ ಮನೆಯಲ್ಲಿದ್ದವರೆಲ್ಲರಿಗೂ ದೇವರ ವಾಕ್ಯವನ್ನು ತಿಳಿಸಿದರು. 33ಆ ಮೇಲೆ ಅವನು ರಾತ್ರಿಯ ಅದೇ ಗಳಿಗೆಯಲ್ಲಿ ಅವರನ್ನು ಕರೆದುಕೊಂಡು ಹೋಗಿ ಅವರ ಗಾಯಗಳನ್ನು ತೊಳೆದು ಕೂಡಲೆ ತಾನೂ ತನ್ನವರೆಲ್ಲರ ಸಹಿತವಾಗಿ ದೀಕ್ಷಾಸ್ನಾನ ಮಾಡಿಸಿಕೊಂಡನು. 34ತರುವಾಯ ಅವರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಊಟಮಾಡಿಸಿದನು. ಅವನು ತನ್ನ ಮನೆಯವರೆಲ್ಲರ ಸಂಗಡ ದೇವರನ್ನು ನಂಬಿ ಸಂತೋಷಪಟ್ಟರು.

ಪ್ರತಿವಚನ ಕೀರ್ತನೆ

ಕೀರ್ತ 138:1–3, 7–8

1ದಾವೀದನ ಕೀರ್ತನೆ. ಯೆಹೋವನೇ, ಪೂರ್ಣಮನಸ್ಸಿನಿಂದ ನಿನ್ನನ್ನು ಕೊಂಡಾಡುವೆನು; ದೇವರುಗಳ ಎದುರಿನಲ್ಲಿ ನಿನ್ನನ್ನು ಕೀರ್ತಿಸುವೆನು. 2ನಿನ್ನ ಪರಿಶುದ್ಧ ಆಲಯದ ಕಡೆಗೆ ಅಡ್ಡಬೀಳುತ್ತೇನೆ; ನಿನ್ನ ಕೃಪೆ, ಸತ್ಯತೆ ಇವುಗಳಿಗೋಸ್ಕರ ನಿನ್ನ ನಾಮವನ್ನು ಕೊಂಡಾಡುತ್ತೇನೆ. ನಿನ್ನ ನಾಮದ ಮತ್ತು ಆಜ್ಞೆಯ ಘನಪಡಿಸಿ ತೋರಿಸಿದ್ದೀ. 3ನಾನು ಮೊರೆಯಿಟ್ಟಾಗ ಸದುತ್ತರವನ್ನು ದಯಪಾಲಿಸಿದಿ; ನನ್ನ ಆತ್ಮಕ್ಕೆ ಬಲಕೊಟ್ಟು ನನ್ನನ್ನು ಧೈರ್ಯಪಡಿಸಿದ್ದೀ. 7ನಾನು ಇಕ್ಕಟ್ಟಿನ ದಾರಿಯಲ್ಲಿ ನಡೆಯುವಾಗ, ನನ್ನನ್ನು ಚೈತನ್ಯಗೊಳ್ಳಿಸುವಿ, ನನ್ನ ಶತ್ರುಗಳ ಕೋಪಕ್ಕೆ ವಿರುದ್ಧವಾಗಿ ನಿನ್ನ ಕೈ ಚಾಚುವಿ, ನಿನ್ನ ಬಲಗೈ ನನ್ನನ್ನು ರಕ್ಷಿಸುವುದು. 8ಯೆಹೋವನು ನನ್ನ ಕಾರ್ಯವನ್ನು ಸಿದ್ಧಿಗೆ ತರುವನು. ಯೆಹೋವನೇ, ನಿನ್ನ ಪ್ರೀತಿಯು ಶಾಶ್ವತವಾದದ್ದು, ನೀನು ಕೈಹಾಕಿದ ಕೆಲಸವನ್ನು ನೆರವೇರಿಸದೆ ಬಿಡಬೇಡ.

ಸುವಾರ್ತೆ

ಯೋಹಾ 16:5–11

5“ಆದರೆ ಈಗ ನಾನು ನನ್ನನ್ನು ಕಳುಹಿಸಿಕೊಟ್ಟಾತನ ಬಳಿಗೆ ಹೋಗುತ್ತೇನೆ. ‘ನೀನು ಎಲ್ಲಿಗೆ ಹೋಗುತ್ತಿ?’ ಎಂದು ನಿಮ್ಮಲ್ಲಿ ಒಬ್ಬನಾದರೂ ನನ್ನನ್ನು ಕೇಳುವುದಿಲ್ಲ. 6ನಾನು ಈ ಮಾತುಗಳನ್ನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯವು ದುಃಖಭರಿತವಾಗಿದೆ. 7ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ನಾನು ಹೋಗುವುದು ನಿಮಗೆ ಒಳ್ಳೆಯದು, ಹೇಗೆಂದರೆ ನಾನು ಹೋಗದಿದ್ದರೆ ಆ ಸಹಾಯಕನು ನಿಮ್ಮ ಬಳಿಗೆ ಬರುವುದಿಲ್ಲ. ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸಿಕೊಡುತ್ತೇನೆ. 8ಆತನು ಬಂದಾಗ ಪಾಪ, ನೀತಿ ಮತ್ತು ನ್ಯಾಯತೀರ್ಪಿನ ಕುರಿತು ಲೋಕಕ್ಕೆ ಮನವರಿಕೆಯನ್ನು ಉಂಟುಮಾಡುವನು. 9ಅವರು ನನ್ನನ್ನು ನಂಬದೇ ಇರುವುದರಿಂದ ಪಾಪದ ಕುರಿತಾಗಿಯೂ 10ನಾನು ನನ್ನ ತಂದೆಯ ಬಳಿಗೆ ಹೋಗಿ, ಇನ್ನು ಮೇಲೆ ನಿಮಗೆ ಕಾಣಿಸದೆ ಇರುವುದರಿಂದ ನೀತಿಯ ಕುರಿತಾಗಿಯೂ, 11ಇಹಲೋಕಾಧಿಪತಿಗೆ ನ್ಯಾಯತೀರ್ಪಾಗಿರುವುದರಿಂದ ನ್ಯಾಯತೀರ್ಪಿನ ಕುರಿತಾಗಿಯೂ, ಲೋಕಕ್ಕೆ ಮನವರಿಕೆಯನ್ನು ಉಂಟುಮಾಡುವನು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು