Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಏಪ್ರಿಲ್ 2027 › 30 ಏಪ್ರಿಲ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 30 ಏಪ್ರಿಲ್ 2027

ಶುಕ್ರವಾರ · ಪಾಸ್ಕ ಕಾಲದ ಐದನೆಯ ವಾರ

ಹಬ್ಬಗಳು ಮತ್ತು ಸಂತರು

ಪಾಸ್ಕ ಕಾಲದ ಐದನೆಯ ವಾರದ ಶುಕ್ರವಾರ

ಐಚ್ಛಿಕ ಸ್ಮರಣೆ · ಆರಾಧನಾ ಬಣ್ಣ: ಬಿಳಿ

ಸಂತ ಪಯಸ್ V, ಪೋಪ್ · ಐಚ್ಛಿಕ ಸ್ಮರಣೆ

ಉಪವಾಸ ಮತ್ತು ಪ್ರಾಯಶ್ಚಿತ್ತ

ಪ್ರಾಯಶ್ಚಿತ್ತದ ದಿನ

ಪ್ರತಿ ಶುಕ್ರವಾರವೂ ಪ್ರಾಯಶ್ಚಿತ್ತದ ದಿನ; ಅದನ್ನು ಹೇಗೆ ಆಚರಿಸಬೇಕು ಎಂಬುದನ್ನು ಪ್ರತಿಯೊಂದು ಬಿಷಪರ ಸಮ್ಮೇಳನ ನಿರ್ಧರಿಸುತ್ತದೆ: ಮಾಂಸ ವರ್ಜನೆ ಅಥವಾ ಬೇರೊಂದು ಪ್ರಾಯಶ್ಚಿತ್ತ ಕಾರ್ಯ. ಉಪವಾಸ 18 ರಿಂದ 59 ವರ್ಷದವರಿಗೆ, ಮಾಂಸ ವರ್ಜನೆ 14 ವರ್ಷದಿಂದ ಕಡ್ಡಾಯ.

ದಿನದ ವಾಚನಗಳು

ಮೊದಲನೆಯ ವಾಚನ

ಅ. ಕೃ 15:22–31

22ಆಗ ಅಪೊಸ್ತಲರೂ, ಸಭೆಯ ಹಿರಿಯರೂ ಸರ್ವಸಭೆಯ ಅನುಮತಿಯಿಂದ ತಮ್ಮಲ್ಲಿ ಕೆಲವರನ್ನು ಆರಿಸಿಕೊಂಡು ಪೌಲ ಮತ್ತು ಬಾರ್ನಬರ ಜೊತೆಯಲ್ಲಿ ಅಂತಿಯೋಕ್ಯಕ್ಕೆ ಕಳುಹಿಸುವುದು ಯುಕ್ತವೆಂದು ತೀರ್ಮಾನಿಸಿದರು. ಆದಕಾರಣ ಸಹೋದರರಲ್ಲಿ ಮುಖ್ಯರಾಗಿದ್ದ ಬಾರ್ಸಬ್ಬನೆನಿಸಿಕೊಳ್ಳುವ ಯೂದನನ್ನೂ, ಸೀಲನನ್ನೂ ಆರಿಸಿಕೊಂಡು, 23ಅವರ ಕೈಯಲ್ಲಿ ಬರೆದುಕೊಟ್ಟದ್ದೇನಂದರೆ; “ಸಹೋದರರೂ, ಅಪೊಸ್ತಲರೂ ಮತ್ತು ಹಿರಿಯರೂ, ಅಂತಿಯೋಕ್ಯ, ಸಿರಿಯ, ಕಿಲಿಕ್ಯ ಸೀಮೆಗಳಲ್ಲಿ ವಾಸಿಸುವ ಅನ್ಯಜನರೊಳಗಿಂದ ಸಹೋದರರಾದವರಿಗೂ ಮಾಡುವ ವಂದನೆ; 24“ನಮ್ಮೊಳಗಿಂದ ಹೊರಟು ಕೆಲವರು ನಮ್ಮಿಂದ ಯಾವ ಅಪ್ಪಣೆಯನ್ನು ಹೊಂದದೆ ತಮ್ಮ ಮಾತುಗಳಿಂದ ನಿಮ್ಮಲ್ಲಿ ಅಸಮಾಧಾನವನ್ನು ಹುಟ್ಟಿಸಿ ನಿಮ್ಮ ಮನಸ್ಸುಗಳನ್ನು ಕಳವಳಗೊಳಿಸಿದ್ದಾರೆಂಬುದನ್ನು ಕೇಳಿದ್ದರಿಂದ, 25ನಾವು ಕೆಲವರನ್ನು ಆರಿಸಿಕೊಂಡು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನ ನಿಮಿತ್ತ ಜೀವದ ಹಂಗನ್ನು ತೊರೆದವರಾದ, 26ನಮ್ಮ ಪ್ರಿಯ ಬಾರ್ನಬ ಪೌಲರ ಜೊತೆಯಲ್ಲಿ ನಿಮ್ಮ ಬಳಿಗೆ ಕಳುಹಿಸಿ ಕೊಡುವುದು ಯುಕ್ತವೆಂದು ನಾವೆಲ್ಲರೂ ಒಮ್ಮನಸ್ಸಿನಿಂದ ತೀರ್ಮಾನಿಸಿದೆವು. 27ಆದುದರಿಂದ ಯೂದನನ್ನೂ, ಸೀಲನನ್ನೂ ಕಳುಹಿಸಿಕೊಡುತ್ತಿದ್ದೇವೆ. ಅವರು ನಾವು ಬರೆದಿರುವ ಈ ಸಂಗತಿಗಳನ್ನು ಬಾಯಿಮಾತಿನಿಂದಲೂ ನಿಮಗೆ ತಿಳಿಸುವರು. 28ಅವು ಯಾವುವೆಂದರೆ, ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ, ರಕ್ತವನ್ನೂ, ಕುತ್ತಿಗೆ ಹಿಸುಕಿ ಕೊಂದದ್ದನ್ನೂ, ಅನೈತಿಕತೆಯನ್ನೂ ವಿಸರ್ಜಿಸುವುದು ಅಗತ್ಯವಾಗಿದೆ. 29ಇದಕ್ಕಿಂತ ಹೆಚ್ಚಿನ ಹೊರೆಯನ್ನು ನಿಮ್ಮ ಮೇಲೆ ಹೊರಿಸಬಾರದೆಂದು ಪವಿತ್ರಾತ್ಮನಿಗೂ ನಮಗೂ ಹಿತವಾಗಿ ತೋರಿತು; ನೀವು ಎಚ್ಚರವಾಗಿದ್ದು ಇವುಗಳ ಗೊಡವೆಗೆ ಹೋಗದಿದ್ದರೆ ನಿಮಗೆ ಒಳ್ಳೆಯದಾಗುವುದು. ಶುಭವಾಗಲಿ.” 30ಹೀಗೆ ಅವರು ಅಪ್ಪಣೆ ತೆಗೆದುಕೊಂಡು ಅಂತಿಯೋಕ್ಯಕ್ಕೆ ಬಂದು ಸಭೆಯನ್ನು ಸೇರಿಸಿ ಆ ಪತ್ರವನ್ನು ಅವರಿಗೆ ಒಪ್ಪಿಸಿದರು. 31ಅವರು ಓದಿ ಅದರಿಂದ ಧೈರ್ಯ ತಂದುಕೊಂಡು ಸಂತೋಷಪಟ್ಟರು.

ಪ್ರತಿವಚನ ಕೀರ್ತನೆ

ಕೀರ್ತ 57:7–11

7ದೇವರೇ, ನನ್ನ ಹೃದಯವು ಸ್ಥಿರವಾಗಿದೆ, ಸ್ಥಿರವಾಗಿದೆ. ನಾನು ವಾದ್ಯಗಳನ್ನು ನುಡಿಸುತ್ತಾ ಹಾಡುವೆನು. 8ನನ್ನ ಮನವೇ, ಚುರುಕಾಗು; ಸ್ವರಮಂಡಲವೇ, ಕಿನ್ನರಿಯೇ, ಎಚ್ಚರವಾಗಿರಿ. ಸಂಕೀರ್ತನೆಯಿಂದ ಉದಯವನ್ನು ಎದುರುಗೊಳ್ಳುವೆನು. 9ಕರ್ತನೇ, ಜನಾಂಗಗಳಲ್ಲಿ ನಿನ್ನನ್ನು ಸ್ತುತಿಸುವೆನು; ಸರ್ವದೇಶದವರೊಳಗೆ ನಿನ್ನನ್ನು ಕೊಂಡಾಡುವೆನು. 10ಏಕೆಂದರೆ ನಿನ್ನ ಕೃಪೆಯು ಆಕಾಶವನ್ನೂ, ನಿನ್ನ ಸತ್ಯತೆಯು ಮುಗಿಲನ್ನೂ ಮುಟ್ಟುವಷ್ಟು ದೊಡ್ಡವಾಗಿವೆ. 11ದೇವರೇ, ಮೇಲಣ ಲೋಕಗಳಲ್ಲಿ ನಿನ್ನ ಪ್ರಭಾವವು ಮೆರೆಯಲಿ; ಭೂಮಂಡಲದ ಮೇಲೆಲ್ಲಾ ನಿನ್ನ ಮಹತ್ವವು ಹಬ್ಬಲಿ.

ಸುವಾರ್ತೆ

ಯೋಹಾ 15:12–17

12ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನನ್ನ ಆಜ್ಞೆಯಾಗಿದೆ. 13ತನ್ನ ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವುದೂ ಇಲ್ಲ. 14ನಾನು ನಿಮಗೆ ಕೊಟ್ಟ ಆಜ್ಞೆಗಳ ಪ್ರಕಾರ ನೀವು ನಡೆದರೆ, ನೀವು ನನ್ನ ಸ್ನೇಹಿತರು. 15ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳೆಂದು ಕರೆಯುವುದಿಲ್ಲ, ಏಕೆಂದರೆ, ಯಜಮಾನನು ಮಾಡುವಂಥದ್ದು ಆಳಿಗೆ ತಿಳಿಯುವುದಿಲ್ಲ. ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ, ಏಕೆಂದರೆ ತಂದೆಯ ಕಡೆಯಿಂದ ನಾನು ಕೇಳಿದ್ದನ್ನೆಲ್ಲಾ ನಾನು ನಿಮಗೆ ತಿಳಿಸಿದ್ದೇನೆ. 16ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನು ನಿಮ್ಮನ್ನು ಆರಿಸಿಕೊಂಡಿದ್ದೇನೆ, ನೀವು ಹೊರಟು ಹೋಗಿ ಫಲಕೊಡಬೇಕೆಂತಲೂ, ಹಾಗೂ ನೀವು ಕೊಡುವ ಫಲವು ಸದಾಕಾಲ ನಿಲ್ಲುವಂಥದ್ದಾಗಬೇಕಂತಲೂ ನಾನು ನಿಮ್ಮನ್ನು ನೇಮಿಸಿದ್ದೇನೆ. ಹೀಗಿರಲಾಗಿ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನೇನು ಬೇಡಿಕೊಳ್ಳುವಿರೋ, ಅದನ್ನು ಆತನು ನಿಮಗೆ ಕೊಡುವನು. 17ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂತಲೇ ಇವುಗಳನ್ನು ನಾನು ನಿಮಗೆ ಆಜ್ಞಾಪಿಸುತ್ತಿದ್ದೇನೆ.

ಇಂದಿನ ಸಂತರು

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು