Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಏಪ್ರಿಲ್ 2027 › 12 ಏಪ್ರಿಲ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 12 ಏಪ್ರಿಲ್ 2027

ಸೋಮವಾರ · ಪಾಸ್ಕ ಕಾಲದ ಮೂರನೆಯ ವಾರ

ಹಬ್ಬಗಳು ಮತ್ತು ಸಂತರು

ಪಾಸ್ಕ ಕಾಲದ ಮೂರನೆಯ ವಾರದ ಸೋಮವಾರ

ವಾರದ ದಿನ · ಆರಾಧನಾ ಬಣ್ಣ: ಬಿಳಿ

ದಿನದ ವಾಚನಗಳು

ಮೊದಲನೆಯ ವಾಚನ

ಅ. ಕೃ 6:8–15

8ಸ್ತೆಫನನು ದೇವರ ಕೃಪೆಯಿಂದಲೂ, ಬಲದಿಂದಲೂ ತುಂಬಿದವನಾಗಿ ಜನರಲ್ಲಿ ಮಹಾ ಅದ್ಭುತ ಕಾರ್ಯಗಳನ್ನೂ, ಸೂಚಕಕಾರ್ಯಗಳನ್ನೂ ಮಾಡುತ್ತಾ ಇದ್ದನು. 9ಆದರೆ ಲಿಬೆರ್ತೀನರೆಂಬವರ ಸಮಾಜಕ್ಕೆ ಸೇರಿದ ಕುರೇನ್ಯದವರು ಮತ್ತು ಅಲೆಕ್ಸಾಂದ್ರಿಯದವರು, ಕಿಲಿಕ್ಯ ಮತ್ತು ಆಸ್ಯ ಸೀಮೆಗಳಿಂದ ಬಂದವರಲ್ಲಿ ಕೆಲವರು ಎದ್ದು ಸ್ತೆಫನನ ಸಂಗಡ ತರ್ಕಮಾಡುತ್ತಾ ಇದ್ದರು. 10ಅವನ ಮಾತಿನಲ್ಲಿ ಕಂಡುಬರುತ್ತಿದ್ದ ಜ್ಞಾನವನ್ನೂ, ಪವಿತ್ರಾತ್ಮ ಶಕ್ತಿಯನ್ನೂ ಎದುರಿಸಲಾರದೆ ಹೋದರು. 11ಆಗ ಅವರು ಕೆಲವು ಜನರಿಗೆ, “ಇವನು ಮೋಶೆಗೆ ವಿರೋಧವಾಗಿಯೂ, ದೇವರಿಗೆ ವಿರೋಧವಾಗಿಯೂ ದೂಷಣೆಯ ಮಾತುಗಳನ್ನಾಡುವುದನ್ನು ಕೇಳಿದೆವೆಂದು” ಹೇಳಿರಿ ಎಂದು ಕೆಲವರನ್ನು ಮನವೊಲಿಸಿದರು. 12ಅವರು ಜನರನ್ನೂ, ಹಿರಿಯರನ್ನೂ, ಶಾಸ್ತ್ರಿಗಳನ್ನೂ ಪ್ರಚೋದಿಸಿದರು ಮತ್ತು ಅವನನ್ನು ಹಿಡಿದು, ಎಳೆದುಕೊಂಡು, ಹಿರೀಸಭೆಗೆ ತೆಗೆದುಕೊಂಡು ಹೋಗಿ ಅವನಿಗೆ ವಿರುದ್ಧವಾಗಿ ಸುಳ್ಳುಸಾಕ್ಷಿಗಳನ್ನು ಕರತಂದು ನಿಲ್ಲಿಸಿದರು. 13ಆ ಸಾಕ್ಷಿಗಳು, “ಈ ಮನುಷ್ಯನು ಈ ಪರಿಶುದ್ಧವಾದ ಸ್ಥಳಕ್ಕೆ ವಿರೋಧವಾಗಿಯೂ, ಧರ್ಮಶಾಸ್ತ್ರಕ್ಕೆ ವಿರೋಧವಾಗಿಯೂ ಮಾತನಾಡುವುದನ್ನು ನಿಲ್ಲಿಸುತ್ತಿಲ್ಲ ಎಂದು ಹೇಳಿದರು. 14ಆ ನಜರೇತಿನ ಯೇಸು ಈ ಸ್ಥಳವನ್ನು ನಾಶಮಾಡಿ, ಮೋಶೆ ನಮಗೆ ನೇಮಿಸಿರುವ ಆಚಾರಗಳನ್ನು ಬೇರೆ ಮಾಡುವನೆಂಬುದಾಗಿ ಇವನು ಹೇಳುವುದನ್ನು ನಾವು ಕೇಳಿದ್ದೇವೆ” ಅಂದರು. 15ಆಗ ಹಿರೀಸಭೆಯಲ್ಲಿ ಕುಳಿತಿದ್ದವರೆಲ್ಲರೂ ಅವನನ್ನು ದೃಷ್ಟಿಸಿ ನೋಡಲು ಅವನ ಮುಖವು ದೇವದೂತನ ಮುಖದಂತೆ ಇರುವುದನ್ನು ಕಂಡರು.

ಪ್ರತಿವಚನ ಕೀರ್ತನೆ

ಕೀರ್ತ 119:23–24, 26–27, 29–30

23ಪ್ರಭುಗಳು ಕುಳಿತುಕೊಂಡು, ನನಗೆ ವಿರುದ್ಧವಾಗಿ ಒಳಸಂಚು ಮಾಡಿದರೂ, ನಿನ್ನ ಸೇವಕನು ನಿನ್ನ ನಿಬಂಧನೆಗಳನ್ನೇ ಧ್ಯಾನಿಸುತ್ತಿರುವನು. 24ನಿನ್ನ ಕಟ್ಟಳೆಗಳು ನನ್ನ ಪರಮಾನಂದ, ಅವೇ ನನ್ನ ಮಾರ್ಗದರ್ಶನ. 26ನನ್ನ ಯಾತ್ರಾನುಭವವನ್ನು ನಿನಗೆ ಹೇಳಿಕೊಂಡಾಗ, ನನಗೆ ಸದುತ್ತರವನ್ನು ದಯಪಾಲಿಸಿದಿ, ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು. 27ನಿನ್ನ ನಿಯಮಗಳ ದಾರಿಯನ್ನು ತಿಳಿಯಪಡಿಸು, ಆಗ ನಿನ್ನ ಬೋಧನೆಗಳನ್ನು ಧ್ಯಾನಿಸುವೆನು. 29ತಪ್ಪಾದ ಮಾರ್ಗವನ್ನು ನನ್ನಿಂದ ದೂರಮಾಡು, ನಿನ್ನ ಧರ್ಮಶಾಸ್ತ್ರವನ್ನು ನನಗೆ ಅನುಗ್ರಹಿಸು. 30ಭಕ್ತಿಮಾರ್ಗವನ್ನು ಆರಿಸಿಕೊಂಡಿದ್ದೇನೆ, ನಿನ್ನ ವಿಧಿಗಳನ್ನು ನನ್ನ ಮುಂದೆಯೇ ಇಟ್ಟುಕೊಂಡಿದ್ದೇನೆ.

ಸುವಾರ್ತೆ

ಯೋಹಾ 6:22–29

22ಮರುದಿನ ಸಮುದ್ರದ ಆಚೇಕಡೆಯಲ್ಲಿ ನಿಂತಿದ್ದ ಜನರು ಅಲ್ಲಿ ಒಂದೇ ದೋಣಿ ಲಭ್ಯವಿದೆ ಇದೆ, ಮತ್ತು ಯೇಸು ತನ್ನ ಶಿಷ್ಯರ ಸಂಗಡ ಆ ದೋಣಿಯಲ್ಲಿ ಹತ್ತಲಿಲ್ಲವೆಂದೂ ಅವರಿಗೆ ಅರಿವಾಯಿತು. ಏಕೆಂದರೆ, ಶಿಷ್ಯರು ಮಾತ್ರ ಆ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. 23ಅಷ್ಟರೊಳಗೆ ತಿಬೇರಿಯಾದಿಂದ ಬೇರೆ ದೋಣಿಗಳು ಹೊರಟು, ಕರ್ತನು ದೇವರಿಗೆ ಕೃತಜ್ಞತೆ ಸಲ್ಲಿಸಿ, ಜನರಿಗೆ ರೊಟ್ಟಿಯನ್ನು ಊಟಮಾಡಿಸಿದ ಸ್ಥಳದ ಸಮೀಪಕ್ಕೆ ಬಂದವು. 24ಹೀಗಿರಲಾಗಿ ಯೇಸು ಮತ್ತು ಆತನ ಶಿಷ್ಯರು ಅಲ್ಲಿ ಇಲ್ಲದಿರುವುದನ್ನು ಜನರು ಅರಿತು ತಾವೇ ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಪೆರ್ನೌಮಿಗೆ ಬಂದರು. 25ಮತ್ತು ಸಮುದ್ರದ ಆಚೆಕಡೆಯಲ್ಲಿ ಆತನನ್ನು ಕಂಡು “ಗುರುವೇ, ಯಾವಾಗ ಇಲ್ಲಿಗೆ ಬಂದಿ?” ಎಂದು ಕೇಳಿದರು. 26ಯೇಸು ಅವರಿಗೆ “ನಿಮಗೆ ಸತ್ಯವಾಗಿ ಹೇಳುತ್ತೇನೆ. ನೀವು ನನ್ನನ್ನು ಹುಡುಕುವುದು ಸೂಚಕಕಾರ್ಯಗಳನ್ನು ನೋಡಿದ್ದರಿಂದಲ್ಲ, ಆ ರೊಟ್ಟಿ ತಿಂದು ಹೊಟ್ಟೆ ತುಂಬಿಸಿಕೊಂಡಿದ್ದರಿಂದಲೇ. 27ನಾಶವಾಗುವ ಆಹಾರಕ್ಕಾಗಿ ದುಡಿಯಬೇಡಿರಿ. ನಿತ್ಯಜೀವಕ್ಕಾಗಿ ಉಳಿಯುವ ಆಹಾರಕ್ಕಾಗಿ ದುಡಿಯಿರಿ, ಇಂಥಾ ಆಹಾರವನ್ನು ಮನುಷ್ಯಕುಮಾರನು ನಿಮಗೆ ಕೊಡುವನು. ಇದಕ್ಕಾಗಿ ತಂದೆಯಾದ ದೇವರು ಆತನ ಮೇಲೆ ಮುದ್ರೆ ಹಾಕಿ ನೇಮಿಸಿದ್ದಾನೆ” ಎಂದನು. 28ಅವರು ಆತನಿಗೆ “ದೇವರ ಕ್ರಿಯೆಗಳನ್ನು ನಾವು ಮಾಡಬೇಕಾದರೆ ಏನು ಮಾಡಬೇಕೆಂದು” ಕೇಳಿದ್ದಕ್ಕೆ, 29ಯೇಸುವು, “ದೇವರ ಕ್ರಿಯೆ ಯಾವುದೆಂದರೆ, ಆತನು ಕಳುಹಿಸಿಕೊಟ್ಟಾತನನ್ನು ನೀವು ನಂಬುವುದೇ” ಎಂದನು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು