Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಮಾರ್ಚ್ 2027 › 1 ಮಾರ್ಚ್

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 1 ಮಾರ್ಚ್ 2027

ಸೋಮವಾರ · ತಪಸ್ಸು ಕಾಲದ ಮೂರನೆಯ ವಾರ

ಹಬ್ಬಗಳು ಮತ್ತು ಸಂತರು

ತಪಸ್ಸು ಕಾಲದ ಮೂರನೆಯ ವಾರದ ಸೋಮವಾರ

ವಾರದ ದಿನ · ಆರಾಧನಾ ಬಣ್ಣ: ನೇರಳೆ

ದಿನದ ವಾಚನಗಳು

ಮೊದಲನೆಯ ವಾಚನ

2 ಅರಸು 5:1–15

1ಅರಾಮ್ಯರ ಅರಸನಿಗೆ ನಾಮಾನನೆಂಬ ಒಬ್ಬ ಸೇನಾಧಿಪತಿಯಿದ್ದನು. ಯೆಹೋವನು ಇವನ ಮುಖಾಂತರವಾಗಿ ಅರಾಮ್ಯರಿಗೆ ಜಯವನ್ನು ಅನುಗ್ರಹಿಸಿದ್ದದರಿಂದ ಅರಸನು ಇವನನ್ನು ಮಹಾ ಪುರುಷನೆಂದೂ ಸನ್ಮಾನಯೋಗ್ಯನೆಂದೂ ಗೌರವಿಸುತ್ತಿದ್ದನು. ಆದರೆ ಪರಾಕ್ರಮಶಾಲಿಯಾದ ಇವನು ಕುಷ್ಠರೋಗಿಯಾಗಿದ್ದನು. 2ಅರಾಮ್ಯರು ಒಂದು ಸಾರಿ ಸುಲಿಗೆ ಮಾಡುವುದಕ್ಕೋಸ್ಕರ ಇಸ್ರಾಯೇಲರ ಪ್ರಾಂತ್ಯಕ್ಕೆ ಹೋಗಿ ಬರುವಾಗ ಅಲ್ಲಿನ ಒಬ್ಬ ಹುಡುಗಿಯನ್ನು ಹಿಡಿದುಕೊಂಡು ಬಂದಿದ್ದರು. ಆಕೆಯು ನಾಮಾನನ ಹೆಂಡತಿಗೆ ಸೇವಕಿಯಾದಳು. 3ಆಕೆಯು ಒಂದು ದಿನ ತನ್ನ ಯಜಮಾನಿಯ ಬಳಿ, “ನಮ್ಮ ದಣಿಯು ಸಮಾರ್ಯದಲ್ಲಿರುವ ಪ್ರವಾದಿಯ ಹತ್ತಿರ ಇದ್ದಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು. ಅವನು ನನ್ನ ಯಜಮಾನನನ್ನು ಕುಷ್ಠರೋಗದಿಂದ ವಾಸಿಮಾಡುತ್ತಿದ್ದನು” ಎಂದು ಹೇಳಿದಳು. 4ನಾಮಾನನು ಅರಸನ ಸನ್ನಿಧಿಗೆ ಹೋಗಿ ಇಸ್ರಾಯೇಲ್ ದೇಶದ ಹುಡುಗಿಯು ಹೇಳಿದ್ದನ್ನು ತಿಳಿಸಿದನು. 5ಅರಾಮ್ಯರ ಅರಸನು ಅವನಿಗೆ, “ನೀನು ಅಲ್ಲಿಗೆ ಹೋಗಿ ಬಾ. ನಾನು ನಿನ್ನ ಕೈಯಲ್ಲಿ ಇಸ್ರಾಯೇಲರ ಅರಸನಿಗೆ ಒಂದು ಪತ್ರವನ್ನು ಕೊಡುತ್ತೇನೆ” ಎಂದನು. ನಾಮಾನನು ಹತ್ತು ತಲಾಂತು ಬೆಳ್ಳಿ, (ಮೂವತ್ತು ಸಾವಿರ) ಆರು ಸಾವಿರ ತೊಲೆ ಬಂಗಾರ, ಹತ್ತು ಜೊತೆ ಬಟ್ಟೆಗಳು ಇವುಗಳನ್ನು ತೆಗೆದುಕೊಂಡು ಸಮಾರ್ಯಕ್ಕೆ ಹೋಗಿ, 6ಪತ್ರವನ್ನು ಇಸ್ರಾಯೇಲರ ಅರಸನಿಗೆ ಕೊಟ್ಟನು. ಅದರಲ್ಲಿ, “ನನ್ನ ಸೇವಕನಾದ ನಾಮಾನನನ್ನು ನಿನ್ನ ಬಳಿಗೆ ಕಳುಹಿಸಿದ್ದೇನೆ, ನೀನು ಅವನ ಕುಷ್ಠರೋಗವನ್ನು ವಾಸಿಮಾಡತಕ್ಕದ್ದೆಂದು ಈ ಪತ್ರದಿಂದ ತಿಳಿದುಕೋ” ಎಂಬುದಾಗಿ ಬರೆದಿತ್ತು. 7ಇಸ್ರಾಯೇಲರ ಅರಸನು ಪತ್ರವನ್ನು ಓದಿದ ಕೂಡಲೆ ಬಟ್ಟೆಗಳನ್ನು ಹರಿದುಕೊಂಡು, ತನ್ನ ಪರಿವಾರದವರಿಗೆ, “ಅವನು ಕಳುಹಿಸಿದ ಮನುಷ್ಯನನ್ನು ಕುಷ್ಠರೋಗದಿಂದ ವಾಸಿಮಾಡಬೇಕಂತೆ. ಇದು ಎಂಥ ಅಪ್ಪಣೆ! ನಾನೇನು ದೇವರೋ? ಜೀವದಾನಮಾಡುವುದಕ್ಕಾಗಲಿ, ಸಾಯಿಸುವುದಕ್ಕಾಗಲಿ ನನಗೆ ಸಾಮರ್ಥ್ಯ ಉಂಟೋ? ಇವನು ನನ್ನೊಡನೆ ಜಗಳವಾಡುವುದಕ್ಕೆ ಕಾರಣ ಹುಡುಕುತ್ತಿದ್ದಾನಲ್ಲವೇ ನೀವೇ ಆಲೋಚಿಸಿ ನೋಡಿರಿ” ಎಂದು ಹೇಳಿದನು. 8ಇಸ್ರಾಯೇಲರ ಅರಸನು ತನ್ನ ಬಟ್ಟೆಗಳನ್ನು ಹರಿದುಕೊಂಡನೆಂಬುದನ್ನು ದೇವರ ಮನುಷ್ಯನಾದ ಎಲೀಷನು ಕೇಳಿ ದೂತರ ಮುಖಾಂತರವಾಗಿ ಅವನಿಗೆ, “ನೀನು, ನಿನ್ನ ಬಟ್ಟೆಗಳನ್ನು ಹರಿದುಕೊಂಡದ್ದೇಕೆ? ಅವನನ್ನು ನನ್ನ ಬಳಿಗೆ ಕಳುಹಿಸು, ಇಸ್ರಾಯೇಲರಲ್ಲಿ ಒಬ್ಬ ಪ್ರವಾದಿಯಿದ್ದಾನೆಂಬುದು ಅವನಿಗೆ ಗೊತ್ತಾಗಲಿ” ಎಂದು ಹೇಳಿ ಕಳುಹಿಸಿದನು. 9ನಾಮಾನನು ರಥಾಶ್ವಗಳೊಡನೆ ಎಲೀಷನ ಮನೆಗೆ ಹೋಗಿ ಬಾಗಿಲಿನ ಮುಂದೆ ನಿಂತನು. 10ಎಲೀಷನು ಅವನಿಗೆ, “ಹೋಗಿ ಯೊರ್ದನ್ ನದಿಯಲ್ಲಿ ಏಳು ಸಾರಿ ಮುಳುಗಿ ಬಾ, ಆಗ ನಿನ್ನ ದೇಹವು ಮೊದಲಿನಂತಾಗುವುದು; ನೀನು ಶುದ್ಧನಾಗುವಿ” ಎಂದು ಹೇಳಿ ಕಳುಹಿಸಿದನು. 11ನಾಮಾನನು ಇದನ್ನು ಕೇಳಿ ಕೋಪಗೊಂಡು, “ಇದೇನು? ಅವನು ಹೊರಗೆ ಬಂದು ತನ್ನ ದೇವರಾದ ಯೆಹೋವನ ಹೆಸರನ್ನು ಹೇಳಿ ನನ್ನ ಕುಷ್ಠದ ಮೇಲೆ ಕೈಯಾಡಿಸಿ ವಾಸಿಮಾಡುವನೆಂದು ನೆನಸಿದೆನು. 12ದಮಸ್ಕದ ಅಬಾನಾ ಮತ್ತು ಪರ್ಪರ್ ಎಂಬ ನದಿಗಳು ಇಸ್ರಾಯೇಲರ ಎಲ್ಲಾ ನದಿ ಹೊಳೆಹಳ್ಳಗಳಿಗಿಂತ ಉತ್ತಮವಾಗಿವೆಯಲ್ಲವೋ? ಸ್ನಾನದಿಂದ ಶುದ್ಧನಾಗುವ ಹಾಗಿದ್ದರೆ ನಾನು ಅವುಗಳಲ್ಲಿಯೇ ಸ್ನಾನಮಾಡಬಹುದಲ್ಲವೇ?” ಎಂದು ಹೇಳಿ, ಬಲು ಸಿಟ್ಟಿನಿಂದ ಹೊರಟುಹೋದನು. 13ಆಗ ಅವನ ಸೇವಕರು ಹತ್ತಿರ ಬಂದು ಅವನಿಗೆ, “ಸ್ವಾಮೀ, ಪ್ರವಾದಿಯು ಒಂದು ಕಠಿಣವಾದ ಕೆಲಸ ಹೇಳಿದ್ದರೆ, ಅದನ್ನು ನೀವು ಮಾಡುತ್ತಿದ್ದಿರಲ್ಲವೇ? ಹಾಗಾದರೆ ‘ಸ್ನಾನಮಾಡಿ ಶುದ್ಧನಾಗು’ ಎಂದು ಹೇಳಿದರೆ ಯಾಕೆ ಅದರಂತೆ ಮಾಡಬಾರದು” ಎಂದು ಹೇಳಿದರು. 14ಅವನು ಯೊರ್ದನ್ ನದಿಗೆ ಹೋಗಿ ಏಳು ಸಾರಿ ಅದರಲ್ಲಿ ಮುಳುಗಿ ಎದ್ದನು. ಕೂಡಲೆ ದೇವರ ಮನುಷ್ಯನ ಮಾತಿಗನುಸಾರವಾಗಿ ಅವನ ದೇಹವು ಕೂಸಿನ ದೇಹದಂತೆ ಶುದ್ಧವಾಯಿತು. 15ಅನಂತರ, ನಾಮಾನನು ತನ್ನ ಪರಿವಾರದವರೊಡನೆ, ಹಿಂದಿರುಗಿ ದೇವರ ಮನುಷ್ಯನ ಹತ್ತಿರ ಹೋಗಿ, ಅವನ ಮುಂದೆ ನಿಂತು, “ಇಸ್ರಾಯೇಲ್ ದೇಶದಲ್ಲಿರುವ ದೇವರ ಹೊರತಾಗಿ ಲೋಕದಲ್ಲಿ ಬೇರೆ ದೇವರು ಇರುವುದೇ ಇಲ್ಲವೆಂಬುದು ಈಗ ನನಗೆ ಗೊತ್ತಾಯಿತು. ನೀನು ದಯವಿಟ್ಟು ಕಾಣಿಕೆಯನ್ನು ಅಂಗೀಕರಿಸಬೇಕು” ಎಂದು ಹೇಳಿದನು.

ಪ್ರತಿವಚನ ಕೀರ್ತನೆ

ಕೀರ್ತ 42:1–2; 43:3–4

1ದೇಶಾಂತರದಲ್ಲಿರುವ ಭಕ್ತನು ದೇವದರ್ಶನಕ್ಕಾಗಿ ಹಂಬಲಿಸುವುದು. ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಪದ್ಯ. ದೇವರೇ, ಬಾಯಾರಿದ ಜಿಂಕೆಯು ನೀರಿನ ತೊರೆಗಳನ್ನು ಹೇಗೋ, ಹಾಗೆಯೇ ನನ್ನ ಮನಸ್ಸು ನಿನ್ನನ್ನು ಬಯಸುತ್ತದೆ. 2ನನ್ನ ಮನಸ್ಸು ದೇವರಿಗಾಗಿ, ಚೈತನ್ಯಸ್ವರೂಪನಾದ ದೇವರಿಗಾಗಿ ಹಾರೈಸುತ್ತದೆ; ನಾನು ಯಾವಾಗ ಹೋಗಿ ದೇವರ ಸನ್ನಿಧಿಯಲ್ಲಿ ಸೇರುವೆನೋ? 43:3ನಿನ್ನ ಬೆಳಕನ್ನು, ನಿನ್ನ ಸತ್ಯಪ್ರಸನ್ನತೆಗಳನ್ನು ಕಳುಹಿಸು; ಅವು ನಿನ್ನ ಪರಿಶುದ್ಧಪರ್ವತಕ್ಕೆ ನನ್ನನ್ನು ಕರೆದುಕೊಂಡು ಹೋಗಿ ನಿನ್ನ ನಿವಾಸಕ್ಕೆ ಬರಮಾಡಲಿ. 4ದೇವರೇ, ನನ್ನ ದೇವರೇ, ಆಗ ನಾನು ನಿನ್ನ ಯಜ್ಞವೇದಿಯ ಬಳಿಗೆ, ನನ್ನ ಆನಂದನಿಧಿಯಾಗಿರುವ ನಿನ್ನ ಹತ್ತಿರಕ್ಕೆ ಸೇರಿ, ಕಿನ್ನರಿಯನ್ನು ನುಡಿಸುತ್ತಾ ನಿನ್ನನ್ನು ಕೊಂಡಾಡುವೆನು.

ಸುವಾರ್ತೆ

ಲೂಕ 4:24–30

24ಯಾವ ಪ್ರವಾದಿಯೂ ತನ್ನ ಸ್ವದೇಶದಲ್ಲಿ ಅಂಗೀಕರಿಸಲ್ಪಡುವುದಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 25ಕೇಳಿರಿ, ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಮಳೆಬಾರದೆ ದೇಶದಲ್ಲೆಲ್ಲಾ ದೊಡ್ಡ ಬರಗಾಲ ಉಂಟಾದಾಗ, ಇಸ್ರಾಯೇಲಿನಲ್ಲೇ ಅನೇಕ ವಿಧವೆಯರು ಇದ್ದದ್ದು ನಿಜ; 26ಆದರೆ ಅವರಾರ ಬಳಿಗೂ ದೇವರು ಎಲೀಯನನ್ನು ಕಳುಹಿಸದೆ, ಸೀದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನಲ್ಲಿದ್ದ ಒಬ್ಬ ವಿಧವೆಯ ಬಳಿಗೆ ಮಾತ್ರ ಅವನನ್ನು ಕಳುಹಿಸಿದನು. 27ಮತ್ತು ಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಾಯೇಲ್ ಜನರೊಳಗೆ ಅನೇಕ ಕುಷ್ಠರೋಗಿಗಳು ಇದ್ದಾಗ್ಯೂ, ಅವರಲ್ಲಿ ಒಬ್ಬನಾದರೂ ಶುದ್ಧನಾಗದೆ ಸಿರಿಯ ದೇಶದವನಾದ ನಾಮಾನನು ಮಾತ್ರ ಶುದ್ಧನಾದನು” ಎಂದು ಹೇಳಿದನು. 28ಸಭಾಮಂದಿರದಲ್ಲಿದ್ದ ಎಲ್ಲರೂ ಈ ಮಾತುಗಳನ್ನು ಕೇಳಿ ಬಹಳವಾಗಿ ಸಿಟ್ಟುಗೊಂಡು, 29ಎದ್ದು ಆತನನ್ನು ಊರಹೊರಕ್ಕೆ ಎಳೆದುಕೊಂಡು, ತಮ್ಮ ಊರು ಕಟ್ಟಲ್ಪಟ್ಟಿದ್ದ ಗುಡ್ಡದ ಅಂಚಿಗೆ ನಡಿಸಿಕೊಂಡು ಹೋಗಿ ಅಲ್ಲಿಂದ ಕೆಳಕ್ಕೆ ದೊಬ್ಬಿಬಿಡಬೇಕೆಂದಿದ್ದರು. 30ಆದರೆ ಆತನು ಅವರ ಮಧ್ಯದಿಂದ ನಡೆದು ತನ್ನ ಪಾಡಿಗೆ ತಾನು ಹೊರಟು ಹೋದನು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು