Bible Explorer ಆ್ಯಪ್ ಪಡೆಯಿರಿ

ಮುಖಪುಟ › ದೈನಂದಿನ ಬೈಬಲ್ ವಾಚನಗಳು › ಫೆಬ್ರವರಿ 2027 › 15 ಫೆಬ್ರವರಿ

ಕ್ಯಾಥೊಲಿಕ್ ಪಂಚಾಂಗ

ದೈನಂದಿನ ಬೈಬಲ್ ವಾಚನಗಳು (ಕಥೋಲಿಕ) — 15 ಫೆಬ್ರವರಿ 2027

ಸೋಮವಾರ · ತಪಸ್ಸು ಕಾಲದ ಮೊದಲನೆಯ ವಾರ

ಹಬ್ಬಗಳು ಮತ್ತು ಸಂತರು

ತಪಸ್ಸು ಕಾಲದ ಮೊದಲನೆಯ ವಾರದ ಸೋಮವಾರ

ವಾರದ ದಿನ · ಆರಾಧನಾ ಬಣ್ಣ: ನೇರಳೆ

ದಿನದ ವಾಚನಗಳು

ಮೊದಲನೆಯ ವಾಚನ

ಯಾಜ 19:1–2, 11–18

1ಯೆಹೋವನು ಮೋಶೆಯೊಂದಿಗೆ ಮಾತನಾಡಿ, 2“ನೀನು ಇಸ್ರಾಯೇಲರ ಸಮೂಹದವರಿಗೆ ಹೀಗೆ ಆಜ್ಞಾಪಿಸಬೇಕು, ‘ನಿಮ್ಮ ದೇವರಾದ ಯೆಹೋವನೆಂಬ ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು. 11“‘ಕದಿಯಬಾರದು, “‘ಮೋಸಮಾಡಬಾರದು, “‘ಒಬ್ಬರಿಗೊಬ್ಬರು ಸುಳ್ಳು ಹೇಳಬಾರದು. 12“‘ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಟ್ಟು ನಿಮ್ಮ ದೇವರ ನಾಮವನ್ನು ಅಪಕೀರ್ತಿಗೆ ಒಳಪಡಿಸಬಾರದು. ನಾನು ಯೆಹೋವನು. 13“‘ಮತ್ತೊಬ್ಬನನ್ನು ಬಲಾತ್ಕರಿಸಬಾರದು ಅಥವಾ ಅವನ ಸೊತ್ತನ್ನು ಅಪಹರಿಸಬಾರದು. ಅವನ ಕೂಲಿಯನ್ನು ಮರುದಿನದ ವರೆಗೆ ನಿಮ್ಮ ಬಳಿಯಲ್ಲಿ ಇಟ್ಟುಕೊಳ್ಳಬಾರದು. 14ಕಿವುಡರನ್ನು ದೂಷಿಸಬಾರದು; ಕುರುಡರು ನಡೆಯುವ ದಾರಿಯಲ್ಲಿ ಅವರ ಕಾಲು ಎಡವುವಂತೆ ಕಲ್ಲನ್ನು ಇಡಬಾರದು; ನಿಮ್ಮ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕು. ನಾನು ಯೆಹೋವನು. 15“‘ವ್ಯಾಜ್ಯವನ್ನು ವಿಚಾರಿಸುವಾಗ ಅನ್ಯಾಯವಾದ ತೀರ್ಪನ್ನು ಮಾಡಬಾರದು. ಬಡವನ ಬಡತನವನ್ನಾಗಲಿ ಅಥವಾ ದೊಡ್ಡ ಮನುಷ್ಯನ ಘನತೆಯನ್ನಾಗಲಿ ಲಕ್ಷ್ಯಮಾಡದೆ, ಪಕ್ಷಪಾತವಿಲ್ಲದೆ ತೀರ್ಪನ್ನು ಕೊಡಬೇಕು. 16“‘ಪರಿಚಯವುಳ್ಳವರಲ್ಲಿ ಒಬ್ಬರ ಮೇಲೊಬ್ಬರು ಚಾಡಿಹೇಳಬಾರದು. ನೆರೆಯವನಿಗೆ ಮರಣ ಶಿಕ್ಷೆಯಾಗಲೇಬೇಕು ಎಂದು ಹಠ ಹಿಡಿಯಬಾರದು. ನಾನು ಯೆಹೋವನು. 17“‘ಸಹೋದರನ ವಿಷಯವಾಗಿ ಮನಸ್ಸಿನಲ್ಲಿ ದ್ವೇಷವನ್ನು ಇಟ್ಟುಕೊಳ್ಳಬಾರದು. ನೆರೆಯವನ ದೋಷಕ್ಕೆ ನೀವು ಒಳಗಾಗದಂತೆ ಅವನ ತಪ್ಪನ್ನು ಅವನಿಗೆ ತಿಳಿಸಲೇಬೇಕು. 18“‘ನಿಮ್ಮ ಸ್ವಜನರಲ್ಲಿ ಯಾರಿಗೂ ಕೇಡಿಗೆ ಕೇಡನ್ನು ಮಾಡದೆ, ಮನಸ್ಸಿನಲ್ಲಿ ಮತ್ಸರವನ್ನು ಇಟ್ಟುಕೊಳ್ಳದೆ, ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು. ನಾನು ಯೆಹೋವನು.

ಪ್ರತಿವಚನ ಕೀರ್ತನೆ

ಕೀರ್ತ 19:7–9, 14

7ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು. ಯೆಹೋವನ ಕಟ್ಟಳೆಗಳು ನಂಬಿಕೆಗೆ ಯೋಗ್ಯವಾದದ್ದು; ಅವು ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ. 8ಯೆಹೋವನ ಆಜ್ಞೆಗಳು ನೀತಿಯುಳ್ಳವುಗಳಾಗಿವೆ; ಮನಸ್ಸನ್ನು ಹರ್ಷಪಡಿಸುತ್ತವೆ. ಯೆಹೋವನ ಆಜ್ಞೆ ಪವಿತ್ರವಾದದ್ದು; ಕಣ್ಣುಗಳನ್ನು ಕಳೆಗೊಳಿಸುತ್ತದೆ. 9ಯೆಹೋವನ ಭಯ ಪರಿಶುದ್ಧವಾಗಿದೆ; ಅದು ಶಾಶ್ವತವಾದದ್ದೇ. ಯೆಹೋವನ ಕಟ್ಟಳೆಗಳು ಯಥಾರ್ಥವಾದವುಗಳು; ಅವು ಕೇವಲ ನ್ಯಾಯವಾಗಿವೆ. 14ಯೆಹೋವನೇ ನನ್ನ ಶರಣನೇ, ನನ್ನ ವಿಮೋಚಕನೇ, ನನ್ನ ಮಾತುಗಳೂ ಮತ್ತು ನನ್ನ ಹೃದಯದ ಧ್ಯಾನವೂ ನಿನಗೆ ಸಮರ್ಪಕವಾಗಿರಲಿ.

ಸುವಾರ್ತೆ

ಮತ್ತಾ 25:31–46

31“ಇದಲ್ಲದೆ ಮನುಷ್ಯಕುಮಾರನು ತನ್ನ ಮಹಿಮೆಯಿಂದ ಸಮಸ್ತ ದೇವದೂತರೊಂದಿಗೆ ಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಳ್ಳುವನು; 32ಆಗ ಎಲ್ಲಾ ದೇಶಗಳ ಜನರನ್ನೂ ಆತನ ಸಮ್ಮುಖದಲ್ಲಿ ತಂದು ಸೇರಿಸುವರು. ಕುರುಬನು ಕುರಿಗಳನ್ನೂ, ಆಡುಗಳನ್ನೂ ಬೇರ್ಪಡಿಸುವ ಪ್ರಕಾರ ಆತನು ಅವರನ್ನು ಬೇರ್ಪಡಿಸುವನು. 33ಕುರಿಗಳನ್ನು ತನ್ನ ಬಲಗಡೆಯಲ್ಲಿ ಮತ್ತು ಆಡುಗಳನ್ನು ಎಡಗಡೆಯಲ್ಲಿ ನಿಲ್ಲಿಸುವನು. 34ಆಗ ಅರಸನು ತನ್ನ ಬಲಗಡೆಯಲ್ಲಿರುವವರಿಗೆ, ‘ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವತ್ತಾಗಿ ಪಡೆದುಕೊಳ್ಳಿರಿ. 35ನಾನು ಹಸಿದಿದ್ದೆನು, ನನಗೆ ಊಟ ಕೊಟ್ಟಿರಿ; ನಾನು ಬಾಯಾರಿದ್ದೆನು, ನನಗೆ ಕುಡಿಯುವುದಕ್ಕೆ ಕೊಟ್ಟಿರಿ; ಪರದೇಶಿಯಾಗಿದ್ದೆನು, ನನಗೆ ಆಶ್ರಯ ಕೊಟ್ಟಿರಿ; 36ಬಟ್ಟೆಯಿಲ್ಲದವನಾಗಿದ್ದೆನು, ನನಗೆ ಉಡುವುದಕ್ಕೆ ಕೊಟ್ಟಿರಿ; ಅಸ್ವಸ್ಥನಾಗಿದ್ದಾಗ, ನನ್ನನ್ನು ಆರೈಕೆ ಮಾಡಿದಿರಿ; ಸೆರೆಮನೆಯಲ್ಲಿದ್ದೆನು, ನನ್ನನ್ನು ನೋಡುವುದಕ್ಕೆ ಬಂದಿರಿ’ ಎಂದು ಹೇಳುವನು. 37ಅದಕ್ಕೆ ಉತ್ತರವಾಗಿ ನೀತಿವಂತರು, ‘ಕರ್ತನೇ, ಯಾವಾಗ ನೀನು ಹಸಿದಿದ್ದನ್ನು ಕಂಡು ನಿನಗೆ ಊಟ ಕೊಟ್ಟೆವು? ಇಲ್ಲವೆ ನೀನು ಬಾಯಾರಿದ್ದನ್ನು ಕಂಡು ಕುಡಿಯುವುದಕ್ಕೆ ಕೊಟ್ಟೆವು? 38ಯಾವಾಗ ನೀನು ಪರದೇಶಿಯಾಗಿರುವುದನ್ನು ಕಂಡು ಆಶ್ರಯ ನೀಡಿದೆವು? ಇಲ್ಲವೆ ನಿನಗೆ ಬಟ್ಟೆಯಿಲ್ಲದ್ದನ್ನು ಕಂಡು ಉಡುವುದಕ್ಕೆ ಕೊಟ್ಟೆವು? 39ಯಾವಾಗ ನೀನು ಅಸ್ವಸ್ಥನಾಗಿದ್ದಾಗ ಅಥವಾ ಸೆರೆಮನೆಯಲ್ಲಿ ಇದ್ದುದನ್ನು ಕಂಡು ನಿನ್ನನ್ನು ನೋಡುವುದಕ್ಕೆ ಬಂದೆವು’ ಎಂದು ಕೇಳುವರು. 40ಅದಕ್ಕೆ ಉತ್ತರವಾಗಿ ಅರಸನು, ‘ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಅನ್ನುವನು. 41ಆ ಮೇಲೆ ಆತನು ಎಡಗಡೆಯಲ್ಲಿರುವವರಿಗೆ, ‘ಶಾಪಗ್ರಸ್ತರೇ, ನನ್ನನ್ನು ಬಿಟ್ಟು ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ. 42ನಾನು ಹಸಿದಿದ್ದೆನು, ನೀವು ನನಗೆ ಊಟ ಕೊಡಲಿಲ್ಲ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಡಲಿಲ್ಲ. 43ಪರದೇಶಿಯಾಗಿದ್ದೆನು, ನೀವು ನನಗೆ ಆಶ್ರಯ ಕೊಡಲಿಲ್ಲ; ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡುವುದಕ್ಕೆ ಕೊಡಲಿಲ್ಲ; ಅಸ್ವಸ್ಥನಾಗಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಆರೈಕೆಮಾಡುವುದಕ್ಕೆ ಬರಲಿಲ್ಲವೆಂದು’ ಹೇಳುವನು. 44ಅದಕ್ಕೆ ಉತ್ತರವಾಗಿ ಅವರೂ ಸಹ, ‘ಕರ್ತನೇ, ಯಾವಾಗ ನೀನು ಹಸಿದಿದ್ದನ್ನೂ, ನೀನು ಬಾಯಾರಿದ್ದನ್ನೂ, ನೀನು ಪರದೇಶಿಯಾಗಿದ್ದನ್ನೂ, ಬಟ್ಟೆಯಿಲ್ಲದವನಾಗಿದ್ದನ್ನೂ, ಅಸ್ವಸ್ಥನಾಗಿದ್ದುದನ್ನೂ, ಸೆರೆಮನೆಯಲ್ಲಿದ್ದುದನ್ನೂ ಕಂಡು ನಿನಗೆ ಉಪಚಾರಮಾಡದೆ ಹೋದೆವು?’ ಅನ್ನುವರು. 45ಆಗ ಆತನು ಉತ್ತರವಾಗಿ ಅವರಿಗೆ, ‘ನೀವು ಈ ಕೇವಲ ಅಲ್ಪರಾದವರಲ್ಲಿ ಒಬ್ಬನಿಗೆ ಏನನ್ನು ಮಾಡದೆ ಹೋದಿರೋ ಅದನ್ನು ನನಗೂ ಮಾಡದೆ ಹೋದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಅನ್ನುವನು. 46ಮತ್ತು ಅನೀತಿವಂತರಾದ ಇವರು ನಿತ್ಯದಂಡನೆಗೆ ಹೋಗುವರು ಆದರೆ ನೀತಿವಂತರು ನಿತ್ಯಜೀವಕ್ಕೆ ಹೋಗುವರು” ಎಂದು ಹೇಳಿದನು.

ಸಾಮಾನ್ಯ ರೋಮನ್ ಪಂಚಾಂಗ; ಬಿಷಪರ ಸಮ್ಮೇಳನವು ಕೆಲವು ಹಬ್ಬಗಳನ್ನು (ಪ್ರಭುವಿನ ಪ್ರಕಟನೆ, ಸ್ವರ್ಗಾರೋಹಣ, ಕ್ರಿಸ್ತನ ದೇಹ ಮತ್ತು ರಕ್ತ) ಭಾನುವಾರಕ್ಕೆ ಸರಿಸಬಹುದು ಅಥವಾ ತನ್ನದೇ ಹಬ್ಬಗಳನ್ನು ಸೇರಿಸಬಹುದು. ವಾಚನ ಸಂಗ್ರಹ: ಭಾನುವಾರದ ಚಕ್ರ B, ವಾರದ ದಿನಗಳ ವರ್ಷ I.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು